ಬ್ಲೂಟೂತ್ ಬಳಸೋಣ, ವೈರ್‌ಲೆಸ್ ಆಗೋಣ

ವೈರುಗಳಿಲ್ಲದ ಯುಗದಲ್ಲಿ ಬ್ಲೂಟೂತ್ ತಂತ್ರಜ್ಞಾನಕ್ಕೆ ವಿಶೇಷ ಆದ್ಯತೆ. ವಿಶೇಷವಾಗಿ ಸ್ಮಾರ್ಟ್ ಮೊಬೈಲ್ ಫೋನ್‌ಗಳು ಎಲ್ಲರ ಕೈಗೆಟಕುವ ಈ ಹಂತದಲ್ಲಿ, ಬ್ಲೂಟೂತ್ ಸಂವಹನವು ಇಂದಿನ ಅನಿವಾರ್ಯತೆಯಾಗಿ ಬೆಳೆಯುತ್ತಿದೆ.

ದತ್ತಾಂಶ ವಿನಿಮಯ ಮಾಡಿಕೊಳ್ಳಲು ಇರುವ ವೈ-ಫೈ ತಂತ್ರಜ್ಞಾನದ ಕಿರು ರೂಪ ಬ್ಲೂಟೂತ್ ಅಂತ ಹೇಳಬಹುದು. ವೈಫೈ ನೆಟ್‌ವರ್ಕ್‌ನ ವ್ಯಾಪ್ತಿ ಜಾಸ್ತಿ ಇದ್ದರೆ, ಬ್ಲೂಟೂತ್ ಸರಿಯಾಗಿ ಕೆಲಸ ಮಾಡುವುದು 10 ಮೀಟರ್ ಪರಿಧಿಯೊಳಗೆ ಮಾತ್ರ. ಜನಸಾಮಾನ್ಯರೂ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಬ್ಲೂಟೂತ್ ತಂತ್ರಜ್ಞಾನವನ್ನು ಯಾವೆಲ್ಲ ರೀತಿಯಲ್ಲಿ ಉಪಯೋಗಿಸಿಕೊಳ್ಳಬಹುದು? ಇಲ್ಲಿದೆ ಮಾಹಿತಿ.

ಹ್ಯಾಂಡ್ಸ್-ಫ್ರೀ: ಈ ಪದವೊಂದನ್ನು ಎಲ್ಲರೂ ಕೇಳಿದ್ದೀರಿ. ಫೋನನ್ನು ಕೈಗಳಿಂದ ಸ್ಪರ್ಶಿಸದೆಯೇ ನಾವು ಕರೆಗಳನ್ನು ಸ್ವೀಕರಿಸುವುದು, ಅದರಲ್ಲಿರುವ ಹಾಡುಗಳನ್ನು ಕೇಳುವ ವಿಧಾನವಿದು. ಸ್ಫರ್ಧಾತ್ಮಕತೆಯ ಈ ಕಾಲದಲ್ಲಿ ಮೊಬೈಲ್ ಫೋನ್‌ಗಳನ್ನು ಕೈಗೆಟಕುವ ದರದಲ್ಲಿ ದೊರಕಿಸುವಂತಾಗಲು ಬಹುತೇಕ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಗಳು ಇಯರ್‌ಫೋನ್‌ಗಳನ್ನು ಉಚಿತವಾಗಿ ಒದಗಿಸುತ್ತಿಲ್ಲ. ಇದಲ್ಲದೆ, ಇಯರ್‌ಫೋನ್‌ಗಳ ವೈರುಗಳು ಸಿಕ್ಕಾಗುವುದು, ಅದನ್ನು ಮೊಬೈಲ್ ಫೋನ್‌ಗೆ ಜೋಡಿಸುವುದು – ಈ ಸಮಸ್ಯೆಗಳಿಗೆ ಪರಿಹಾರವೇ ಬ್ಲೂಟೂತ್ ಇಯರ್‌ಫೋನ್‌ಗಳು.

ಸ್ಮಾರ್ಟ್ ಫೋನ್‌ಗಳು ನಮ್ಮ ಜೇಬು ಅಥವಾ ಬ್ಯಾಗ್‌ನೊಳಗೆ ಇರುತ್ತವೆ. ಪ್ರಯಾಣದ ಸಂದರ್ಭದಲ್ಲಿ, ವಿಶೇಷವಾಗಿ ಬೈಕ್ ಚಲಾಯಿಸುತ್ತಿರುವಾಗ ಮಾತನಾಡುತ್ತಾ ಅಥವಾ ಹಾಡುಗಳನ್ನು ಕೇಳುತ್ತಾ ಸಾಗಬೇಕೆಂದಾದರೆ, ಬ್ಲೂಟೂತ್ ಇಯರ್‌ಫೋನ್‌ಗಳು ಹೆಚ್ಚು ಅನುಕೂಲ. ಇಯರ್‌ಫೋನ್‌ಗಳಲ್ಲೂ ಸಾಕಷ್ಟು ಸುಧಾರಣೆಗಳಾಗಿದ್ದು, ಕತ್ತಿನ ಸುತ್ತ ನೇತುಹಾಕಿಕೊಳ್ಳುವ ನೆಕ್ ಬ್ಯಾಂಡ್, ಕಿವಿಗಳೊಳಗೆ ಇರಿಸಿಕೊಳ್ಳಬಹುದಾದ ಇಯರ್-ಪಾಡ್‌ಗಳು ಈಗಿನ ಟ್ರೆಂಡ್.

ಅದೇ ರೀತಿ, ಕಾರುಗಳಲ್ಲಿರುವ ಸ್ಪೀಕರ್‌ಗಳಿಗೆ ಮೊಬೈಲ್ ಫೋನನ್ನು ಬ್ಲೂಟೂತ್ ತಂತ್ರಜ್ಞಾನದ ಮೂಲಕ ಸಂಪರ್ಕಿಸಿದರೆ, ಸ್ಪೀಕರ್-ಮೈಕ್ ಮೂಲಕವೇ ಕೇಳುತ್ತಾ, ಮಾತನಾಡುತ್ತಾ ಕಾರು ಚಲಾಯಿಸಬಹುದು. ಹೊಸ ಕಾರುಗಳಲ್ಲಿ ಈ ಹ್ಯಾಂಡ್ಸ್-ಫ್ರೀ ತಂತ್ರಜ್ಞಾನ ಅಡಕವಾಗಿಯೇ ಬರುತ್ತದೆ. ಹಳೆಯ ಕಾರುಗಳಿಗಾದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬ್ಲೂಟೂತ್ ಅಡಾಪ್ಟರ್‌ಗಳನ್ನು ಅಳವಡಿಸಿಕೊಳ್ಳಬಹುದು.

ಹಲವು ಮಂದಿ ಸೇರಿದ ಕೂಟಗಳಲ್ಲಿ, ಪಾರ್ಟಿಗಳಲ್ಲಿ ಹಾಡುಗಳಿಗೆ ಹೆಜ್ಜೆ ಹಾಕಲು ಅಥವಾ ಎಲ್ಲರೂ ಹಾಡನ್ನು ಏಕಕಾಲದಲ್ಲಿ ಆನಂದಿಸುವಂತಾಗಲು ಈಗ ಬ್ಲೂಟೂತ್ ಸ್ಪೀಕರ್‌ಗಳು ಭಾರಿ ಜನಪ್ರಿಯತೆ ಗಳಿಸಿವೆ. ಇದೇ ಸ್ಪೀಕರ್‌ಗಳು ಥರಾವರಿ ವೈಶಿಷ್ಟ್ಯಗಳೊಂದಿಗೆ ಗಮನ ಸೆಳೆಯುತ್ತವೆ. ಉದಾಹರಣೆಗೆ, ಎಫ್ಎಂ ರೇಡಿಯೋ, ಯುಎಸ್‌ಬಿ ಪೋರ್ಟ್, ಕರೆಂಟ್ ಹೋದರೆ ಬೆಳಗಬಹುದಾದ ವಿದ್ಯುದ್ದೀಪ, ಅನಿವಾರ್ಯ ಸಂದರ್ಭಗಳಲ್ಲಿ ಮೊಬೈಲ್ ಫೋನ್‌ಗಳನ್ನು ಚಾರ್ಜ್ ಮಾಡಬಲ್ಲ ಬ್ಯಾಟರಿ ಬ್ಯಾಂಕ್ ಆಗಿಯೂ ಗಮನ ಸೆಳೆಯುವ ಈ ಬ್ಲೂಟೂತ್ ಸ್ಪೀಕರ್‌ಗಳಲ್ಲಿ ಹಾಡು-ಸಂಗೀತವನ್ನು ಸ್ಪಷ್ಟ ಧ್ವನಿಯಲ್ಲಿ ಆಲಿಸಬಹುದು.

ಇದೇ ಬ್ಲೂಟೂತ್ ತಂತ್ರಜ್ಞಾನ ಬಳಸಿ ಮೊಬೈಲ್ ಫೋನ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್ ಮತ್ತು ಡೆಸ್ಕ್‌ಟಾಪ್ ಕಂಪ್ಯೂಟರುಗಳಿಗೆ ಕೀಬೋರ್ಡ್ ಹಾಗೂ ಮೌಸ್‌ಗಳನ್ನು ಸುಲಭವಾಗಿ ಅಳವಡಿಸಿದರೆ ಟೈಪಿಂಗ್ ಅನುಕೂಲ. ಟಚ್ ಸ್ಕ್ರೀನ್‌ನಲ್ಲಿ ತ್ರಾಸದಾಯಕವಾಗಿರುವ ಟೈಪಿಂಗ್ ಅನ್ನು ಇದು ಸುಲಭವಾಗಿಸುತ್ತದೆ.

ಇದಲ್ಲದೆ, ಎಲೆಕ್ಟ್ರಾನಿಕ್ ಸಾಧನಗಳ ನಡುವೆ ಹಾಡು, ವಿಡಿಯೊ ಮತ್ತು ಇತರ ದತ್ತಾಂಶ ವಿನಿಮಯಕ್ಕೂ ಬ್ಲೂಟೂತ್ ಅನುಕೂಲ ಮಾಡುತ್ತದೆ. ವಿಶೇಷತಃ ಕಂಪ್ಯೂಟರ್ ಮತ್ತು ಮೊಬೈಲ್ ಫೋನ್‌ಗಳನ್ನು ಈ ರೀತಿ ಬೆಸೆದರೆ, ವೈರುಗಳಿಲ್ಲದೆಯೇ ಫೈಲುಗಳ ವರ್ಗಾವಣೆ ಸುಲಭ ಸಾಧ್ಯ.

ಈಗ ಹೆಚ್ಚು ಜನಪ್ರಿಯವಾಗುತ್ತಿರುವ ಫಿಟ್ನೆಸ್ ಬ್ಯಾಂಡುಗಳು, ಸ್ಮಾರ್ಟ್ ವಾಚ್‌ಗಳನ್ನು ಮೊಬೈಲ್ ಫೋನ್‌ಗೆ ಸಂಪರ್ಕಿಸಿ, ಮೊಬೈಲ್‌ನಲ್ಲಿ ಮಾಡಬಹುದಾದ ಹಲವು ಕೆಲಸಗಳನ್ನು ಸ್ಮಾರ್ಟ್ ವಾಚ್‌ನಿಂದಲೇ ನಿಭಾಯಿಸುವುದು ಸಾಧ್ಯ.

ಹಲವು ಗ್ಯಾಜೆಟ್‌ಗಳ ನಡುವೆ ಇಂಟರ್ನೆಟ್ ಸಂಪರ್ಕವನ್ನು ಹಂಚಿಕೊಳ್ಳಲು ಕೂಡ ನೆರವಾಗುತ್ತದೆ ಬ್ಲೂಟೂತ್. ಬ್ಲೂಟೂತ್ ಟಿದರಿಂಗ್ ಎಂಬ ವಿಧಾನ ಬಳಸಿದರೆ ಫೋನನ್ನು ಪೋರ್ಟೆಬಲ್ ವೈಫೈ ಹಾಟ್‌ಸ್ಪಾಟ್ ಆಗಿ ಸುಲಭವಾಗಿ ಪರಿವರ್ತಿಸಿ, ಹಲವು ಸಾಧನಗಳಲ್ಲಿ ಇಂಟರ್ನೆಟ್ ಸೌಕರ್ಯ ಆನಂದಿಸಬಹುದು.

ಈ ಎಲ್ಲ ಪ್ರಕ್ರಿಯೆಗಳಿಗೆ ಬ್ಲೂಟೂತ್ ತಂತ್ರಜ್ಞಾನವನ್ನು ಎರಡೂ ಸಾಧನಗಳಲ್ಲಿ ಸಕ್ರಿಯಗೊಳಿಸಬೇಕಾಗುತ್ತದೆ ಮತ್ತು ಪೇರಿಂಗ್ ಎಂಬ ವಿಧಾನ ಅನುಸರಿಸಬೇಕಾಗುತ್ತದೆ. ಇದು ಸುರಕ್ಷಿತ ವರ್ಗಾವಣೆ. ಎಲ್ಲರೂ ಅಂದುಕೊಂಡಂತೆ ಬ್ಲೂಟೂತ್ ಬಳಸುವುದು ಕಷ್ಟವೇನಲ್ಲ. ನೀವು ಬಳಸಲು ಪ್ರಯತ್ನಿಸಿ, ವೈರ್‌ಲೆಸ್ ಜಗತ್ತನ್ನು ಆನಂದಿಸಿ.

My Article published in Prajavani on 11 Oct 2020

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

2 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

2 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

3 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

4 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

9 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

9 months ago