Earbuds Noise Cancellation: ಇಯರ್‌ಫೋನ್, ಇಯರ್‌ಬಡ್ಸ್ ಆಯ್ಕೆ ಮಾಡಿಕೊಳ್ಳುವಾಗ ಗಮನಿಸಬೇಕಾದ ವೈಶಿಷ್ಟ್ಯಗಳು

Earbuds Noise Cancellation: ಕೋವಿಡ್ ದಾಳಿಯ ಬಳಿಕ ಬಹುತೇಕ ಕೆಲಸಗಳು ಸ್ಮಾರ್ಟ್ ಫೋನ್, ಲ್ಯಾಪ್‌ಟಾಪ್‌ಗಳಿಗೆ ವರ್ಗಾವಣೆಯಾದಾಗ ಸದ್ದಿಲ್ಲದೆ ಮಾರುಕಟ್ಟೆ ಬೆಳೆಸಿಕೊಂಡಿದ್ದು ಇಯರ್‌ಫೋನ್, ಹೆಡ್‌ಫೋನ್‌ಗಳು. ಸಂಗೀತ ಆಲಿಸುವುದಕ್ಕಾಗಿ ಅಥವಾ ವಾಹನ ಚಲಾಯಿಸುತ್ತಿರುವಾಗ ಫೋನ್‌ನಲ್ಲಿ ಮಾತುಕತೆ ನಡೆಸುವುದಕ್ಕೆ ಸೀಮಿತವಾಗಿದ್ದ ಇವುಗಳು, ನಾವು ಬಳಸುವ ಸ್ಮಾರ್ಟ್‌ಫೋನ್‌ಗೂ, ಲ್ಯಾಪ್‌ಟಾಪ್/ಕಂಪ್ಯೂಟರುಗಳಿಗೂ ಸೂಕ್ತವಾಗಬಲ್ಲ ಮಾದರಿಗಳೊಂದಿಗೆ ಆನ್‌ಲೈನ್ ಸಮಾವೇಶಗಳಿಗೆ ಹೆಚ್ಚು ಅನುಕೂಲವಾಗತೊಡಗಿದವು. ಮಾರುಕಟ್ಟೆಯನ್ನು ವೈರ್ ಇರುವ ಅಥವಾ ವೈರ್‌ಲೆಸ್ ಮಾದರಿಗಳು ಆವರಿಸತೊಡಗಿದವು. ಅದರ ಸುಧಾರಿತ ರೂಪವಾಗಿ ಪುಟ್ಟದಾದ ವೈರ್‌ಲೆಸ್ ಇಯರ್‌ಬಡ್ಸ್ ಬಂದಿತು. ವೈರ್ ಸಹಿತ, ವೈರ್‌ಲೆಸ್ ಇದ್ದರೂ ನೆಕ್ ಬ್ಯಾಂಡ್ ಇರುವಂಥವು ಅಥವಾ ಪೂರ್ಣವಾಗಿ ವೈರ್‌ಲೆಸ್ ಬೇಕೋ ಎಂಬುದು ನಮ್ಮ ಆಯ್ಕೆಗೆ ಬಿಟ್ಟ ವಿಚಾರ. ವೈರ್‌ಲೆಸ್ ಆಯ್ಕೆ ಮಾಡಿಕೊಂಡರೆ ಅವುಗಳಿಗೆ ಬ್ಯಾಟರಿ ಚಾರ್ಜ್ ಮಾಡಬೇಕಾಗುತ್ತದೆ ಎಂಬುದೊಂದು ಸಂಗತಿಯಾದರೆ, ವೈರ್‌ಲೆಸ್ ಮತ್ತು ವೈರ್ ಇರುವಂಥ ಹೈಬ್ರಿಡ್ ಮಾದರಿಗಳೂ ಮಾರುಕಟ್ಟೆಯಲ್ಲಿವೆ.

ಈಗಿನ ಟ್ರೆಂಡ್ ಎಂದರೆ ಟ್ರೂ ವೈರ್‌ಲೆಸ್ ಸ್ಟ್ರೀರಿಯೊ (TWS) ಸಾಧನಗಳು. ಆ್ಯಪಲ್ 2016ರಲ್ಲಿ ಏರ್‌ಪಾಡ್ ಹೆಸರಿನಲ್ಲಿ TWS ಸಾಧನಗಳನ್ನು ಹೊರತಂದ ಬಳಿಕ ಹಾಡು ಕೇಳುವ, ಮೊಬೈಲ್‌ನಲ್ಲಿ ಮಾತನಾಡುವ ವಲಯದಲ್ಲಿ ಸಾಕಷ್ಟು ಪ್ರಗತಿಗಳಾಗಿವೆ. ಹೆಚ್ಚು ಹೆಚ್ಚು ಆಯ್ಕೆಗಳು ಮಾರುಕಟ್ಟೆಗೆ ಬಂದವು. ಆಯಾ ಕಂಪನಿಗಳು ಅದಕ್ಕೆ ಸಂಬಂಧಿಸಿದ ಆ್ಯಪ್‌ಗಳನ್ನು ಕೂಡ ತಯಾರಿಸಿ (ಆಂಡ್ರಾಯ್ಡ್ ಅಥವಾ ಐಒಎಸ್) ನೀಡತೊಡಗಿದವು. ಇದು ಹಾಡುಗಳ ಆಲಿಸುವಿಕೆಯಲ್ಲಿ ಹೊಸ ಕ್ರಾಂತಿಯನ್ನೇ ಮೂಡಿಸಿತು ಎನ್ನಬಹುದು. ಯಾಕೆಂದರೆ, ಆ್ಯಪ್ ಮೂಲಕವಾಗಿ ಧ್ವನಿಯ ಈಕ್ವಲೈಸರ್, ಇಯರ್‌ಬಡ್ ಕಳೆದುಹೋದರೆ ಅದನ್ನು ಪತ್ತೆ ಮಾಡುವ ವ್ಯವಸ್ಥೆ, ಧ್ವನಿ ಮಟ್ಟ ವಿಪರೀತವಾದರೆ ಕಿವಿಗಳಿಗೆ ಹಾನಿಯಾಗದಂತೆ ತಡೆಯುವ ಸ್ವಯಂಚಾಲಿತ ವ್ಯವಸ್ಥೆ – ಮುಂತಾದ ಹಲವಾರು ವೈಶಿಷ್ಟ್ಯಗಳನ್ನು ನಿಭಾಯಿಸಬಹುದು. ಜೊತೆಗೆ, ಇಯರ್‌ಬಡ್ಸ್‌ನ ತಂತ್ರಾಂಶ ಅಪ್‌ಡೇಟ್ ಇದ್ದರೂ ಮಾಡಿಕೊಳ್ಳಬಹುದಾಗಿದೆ.

ಇದರೊಂದಿಗೆ, ಆಡಿಯೊ ಆಲಿಸುವಿಕೆಗೆ ಸಾಕಷ್ಟು ವೈವಿಧ್ಯಮಯ ಸಾಧನಗಳು ಮಾರುಕಟ್ಟೆಯಲ್ಲಿರುವಾಗ ಅವುಗಳ ಖರೀದಿ ವೇಳೆ ನಾವು ಗಮನಿಸಬೇಕಾದ ಅಂಶಗಳ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಸದ್ದು ರದ್ದು – ANC ಮತ್ತು ENC
ಕಿವಿಯೊಳಗೆ ಅಥವಾ ಕಿವಿಯ ಮೇಲೆ ಕೂರಬಹುದಾದ ಆಡಿಯೊ ಸಾಧನಗಳನ್ನು ಖರೀದಿಸುವಾಗ ನಾವು ಮುಖ್ಯವಾಗಿ ನೋಡಬೇಕಾದ ವಿಚಾರವೆಂದರೆ, ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ (ಎಎನ್‌ಸಿ) ಎಂಬ ವೈಶಿಷ್ಟ್ಯ. ಇದರ ಬಗ್ಗೆ ಹೆಚ್ಚು ಅರ್ಥವಾಗಬೇಕಿದ್ದರೆ, ಸೂರ್ಯನ ಬಿಸಿಲು ಅಥವಾ ವಾತಾವರಣದ ಬೆಳಕಿಗೆ ಅನುಗುಣವಾಗಿ ಮೊಬೈಲ್ ಫೋನ್ ಸ್ಕ್ರೀನ್‌ಗಳ ಪ್ರಖರತೆಯೂ ಬದಲಾಗಿ ಕಣ್ಣುಗಳಿಗೆ ಹಿತವಾಗುವ ಸ್ವಯಂಚಾಲಿತ ವೈಶಿಷ್ಟ್ಯದ ಬಗ್ಗೆ ಹೆಚ್ಚಿನವರಿಗೆ ಅರಿವಿರಬಹುದು. ಇದೇ ರೀತಿಯಾಗಿ, ಸುತ್ತಲಿನ ಸದ್ದುಗಳಿಗೆ ಅನುಗುಣವಾಗಿ ಸ್ಪಂದಿಸುವ ವ್ಯವಸ್ಥೆಯೇ ನಾಯ್ಸ್ ಕ್ಯಾನ್ಸಲಿಂಗ್. ಹೊರಗಿನ ಅನಗತ್ಯ ಧ್ವನಿಯನ್ನು ಇಯರ್‌ಬಡ್ಸ್‌ನಲ್ಲಿರುವ ಮೈಕ್ರೋಫೋನ್ ಆಲಿಸಿ (ಗ್ರಹಿಸಿ), ಅದಕ್ಕೆ ಪ್ರತಿಯಾಗಿ ಬೇರೆ ಧ್ವನಿಯನ್ನು ಹೊರಡಿಸಿ ಅವುಗಳು ಸ್ಮಾರ್ಟ್‌ಫೋನ್‌ನಿಂದ ಬರುವ ಹಾಡುಗಳಿಗೆ ತೊಂದರೆಯಾಗದಂತೆ ಮಾಡುವುದು ಇದರ ಕೆಲಸ. ಹಾಡಿನ ಸ್ಟೀರಿಯೊ ಧ್ವನಿ ಸ್ಪಷ್ಟವಾಗಿ, ಹಿತವಾಗಿ ಕೇಳಲು ಮತ್ತು ಸಂಗೀತದ ಬೇಸ್, ಟ್ರೆಬಲ್ ಧ್ವನಿಯನ್ನು ಅತ್ಯಂತ ನಿಖರವಾಗಿ ಕೇಳಿ ಆನಂದಿಸಲು ಇದು ನೆರವಾಗುತ್ತದೆ. ಜೊತೆಗೆ, ನಾವು ಕರೆಯಲ್ಲಿರುವಾಗ ಅತ್ತ ಕಡೆಯಿಂದ ನಮ್ಮ ಮಾತನ್ನು ಆಲಿಸುವವರಿಗೂ ಸರಿಯಾದ ಧ್ವನಿ ಕೇಳಿಸಲು ಉಪಯುಕ್ತವಾಗುವುದು ENC ಅಥವಾ ಎನ್‌ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲಿಂಗ್ ವ್ಯವಸ್ಥೆ. ಇದೂ ಇದೆಯೇ ಎಂದು ಕೇಳಿಕೊಳ್ಳಿ.

ಈ ಎಎನ್‌ಸಿ ವೈಶಿಷ್ಟ್ಯವನ್ನು ಆನ್ ಅಥವಾ ಆಫ್ ಮಾಡುವ ವ್ಯವಸ್ಥೆಯು ತತ್ಸಂಬಂಧಿತ ಮೊಬೈಲ್ ಆ್ಯಪ್‌ಗಳಲ್ಲಿ ಇರುತ್ತದೆ. ಈ ವ್ಯವಸ್ಥೆ ಯಾಕೆ ಎಂಬ ಪ್ರಶ್ನೆ ಮೂಡಬಹುದು. ಕಾರಣವೆಂದರೆ, ಈ ವೈಶಿಷ್ಟ್ಯ ಸದಾ ಕಾಲ ಆನ್ ಇದ್ದರೆ, ಅದಕ್ಕೆ ಹೆಚ್ಚು ಬ್ಯಾಟರಿಯೂ ಬೇಕಾಗುತ್ತದೆ. ಸುತ್ತಲಿನ ಪರಿಸರದಲ್ಲಿ ಸದ್ದು ಜಾಸ್ತಿ ಇದ್ದರೆ, ಅದನ್ನು ರದ್ದು ಮಾಡಲು ಹೆಚ್ಚು ಬ್ಯಾಟರಿಯೂ ಬೇಕಾಗುತ್ತದೆ. ಹೀಗಾಗಿ ಅಗತ್ಯವಿದ್ದಾಗ ಮಾತ್ರ ನಾಯ್ಸ್ ಕ್ಯಾನ್ಸಲಿಂಗ್ ವ್ಯವಸ್ಥೆಯನ್ನು ಆನ್ ಮಾಡಿ, ಉಳಿದ ಸಮಯ ಆಫ್ ಮಾಡಿಟ್ಟರೆ ಇಯರ್‌ಬಡ್ಸ್ ಬ್ಯಾಟರಿ ಚಾರ್ಜ್ ಹೆಚ್ಚು ಕಾಲ ಉಳಿಯುತ್ತದೆ.

ಬ್ಯಾಟರಿ ಚಾರ್ಜ್ ಅವಧಿ
ಇಯರ್‌ಬಡ್ಸ್ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುವುದು ಅದರಲ್ಲಿ ಎಷ್ಟು ಕಾಲ ಬ್ಯಾಟರಿ ಚಾರ್ಜ್ ಇರಬಲ್ಲುದು ಎಂಬ ಅಂಶ. ಒಮ್ಮೆ ಚಾರ್ಜ್ ಮಾಡಿದ ಬಳಿಕ 3ರಿಂದ 12 ಗಂಟೆವರೆಗೂ ಬರುವ ವೈವಿಧ್ಯಮಯ ಇಯರ್‌ಬಡ್ಸ್ ಈಗ ಸಿಗುತ್ತವೆ. ಇದರ ಜೊತೆಗೆ, ಬಡ್‌ಗಳನ್ನು ಇರಿಸಿ ಚಾರ್ಜ್ ಮಾಡಬಲ್ಲ ಪೋರ್ಟೆಬಲ್ ಚಾರ್ಜಿಂಗ್ ಕೇಸ್ ಬರುತ್ತದೆ. ಅದೂ ಸೇರಿದರೆ 48 ಗಂಟೆಗಳಿಗೂ ಹೆಚ್ಚು ಕಾಲ ಬ್ಯಾಟರಿ ಚಾರ್ಜ್ ಲಭ್ಯ. ಆದರೆ ANC ಸದಾ ಕಾಲ ಆನ್ ಇದ್ದರೆ ಬ್ಯಾಟರಿ ಚಾರ್ಜ್ ಬೇಗನೇ ಕಡಿಮೆಯಾಗುತ್ತದೆ ಎಂಬುದು ನೆನಪಿರಲಿ.

ಬ್ಲೂಟೂತ್ ಕೊಡೆಕ್
ವೈರ್‌ಲೆಸ್ ಇಯರ್‌ಬಡ್‌ಗಳನ್ನು ಬ್ಲೂಟೂತ್ ಮೂಲಕವೇ ಸಂಪರ್ಕಿಸಲಾಗುತ್ತದೆ. ಬ್ಲೂಟೂತ್ ಮೂಲಕ ಧ್ವನಿ ಪ್ರಸಾರವಾಗುವಾಗ ಅದರ ಗುಣಮಟ್ಟ ಕೊಂಚ ಮಟ್ಟಿಗೆ ಕುಸಿತ ಕಾಣುತ್ತದೆ. ಹೀಗಾಗಿ, ಹೆಚ್ಚು ಗುಣಮಟ್ಟದ ಹಾಡುಗಳನ್ನು ಆನಂದಿಸಬೇಕಿದ್ದರೆ, aptX, aptX HD ಅಥವಾ LDAC ಮುಂತಾದ ಮಾದರಿಯ ಕೊಡೆಕ್‌ಗಳನ್ನು ಇಯರ್‌ಬಡ್ಸ್ ಬೆಂಬಲಿಸುತ್ತದೆಯೇ ಎಂದು ಪರಿಶೀಲಿಸಿಕೊಂಡು ಖರೀದಿಸಬೇಕಾಗುತ್ತದೆ. ಅದರ ಜೊತೆಗೆ, ಸ್ಮಾರ್ಟ್ ಫೋನ್ ಕೂಡ ಈ ಕೊಡೆಕ್‌ಗಳಿಗೆ ಬೆಂಬಲ ಹೊಂದಿರಬೇಕಾಗುತ್ತದೆ ಎಂಬುದು ನೆನಪಿರಲಿ. ಕೊಡೆಕ್ ಎಂದರೆ ಡಿಜಿಟಲ್ ದತ್ತಾಂಶವನ್ನು ಎನ್‌ಕೋಡ್ ಮತ್ತು ಡೀಕೋಡ್ ಮಾಡಬಲ್ಲ ಒಂದು ಕಂಪ್ಯೂಟರ್ ಪ್ರೋಗ್ರಾಂ.

ಬ್ಲೂಟೂತ್ ಮಲ್ಟಿಪಾಯಿಂಟ್
ಇದು ತೀರಾ ಹೊಸದು. ಏಕಕಾಲದಲ್ಲಿ ಎರಡು ಬ್ಲೂಟೂತ್ ಮೂಲಗಳಿಗೆ, ಉದಾಹರಣೆಗೆ ಸ್ಮಾರ್ಟ್ ಫೋನ್ ಹಾಗೂ ಕಂಪ್ಯೂಟರ್‌ಗಳಿಗೆ ಸಂಪರ್ಕಿಸುವ ವೈಶಿಷ್ಟ್ಯವಿದು. ಪ್ರತೀ ಬಾರಿ ನೀವು ಒಂದೊಂದರಲ್ಲಿಯೂ ಇಯರ್‌ಬಡ್ಸ್ ಅನ್ನು ಪೇರ್ ಮಾಡಿ ಸಂಪರ್ಕಿಸಬೇಕಾದ ಅನಿವಾರ್ಯತೆಯಿರುವುದಿಲ್ಲ. ಒಮ್ಮೆ ಪೇರ್ ಮಾಡಿಟ್ಟುಕೊಂಡರೆ, ಕಂಪ್ಯೂಟರಲ್ಲಿ ಬೇಕಾದಾಗ ಫೋನ್‌ನ ಬ್ಲೂಟೂತ್ ಆಫ್ ಮಾಡಿದರಾಯಿತು. ಕೆಲವು ಅತ್ಯಾಧುನಿಕ ಸಾಧನಗಳಲ್ಲಿ ಮಾತ್ರವೇ ಈ ವ್ಯವಸ್ಥೆ ಇರುತ್ತದೆ.

ಚಾರ್ಜಿಂಗ್ ಪೋರ್ಟ್
ಚಾರ್ಜಿಂಗ್ ಕೇಸ್‌ಗಳನ್ನು ಜಾರ್ಜ್ ಮಾಡುವುದಕ್ಕೆ ಯಾವ ಮಾದರಿಯ ಪೋರ್ಟ್ ಬಳಸಲಾಗುತ್ತದೆ ಎಂಬುದೂ ಮುಖ್ಯವಾಗುತ್ತದೆ. ಈಗಿನ ಸಾಧನಗಳಲ್ಲಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಇದ್ದರೆ, ಕೆಲವು ಮೈಕ್ರೋ ಯುಎಸ್‌ಬಿ ಪೋರ್ಟ್ ಬಳಸುತ್ತವೆ, ಆ್ಯಪಲ್ ಸಾಧನಗಳಲ್ಲಿ ಲೈಟ್ನಿಂಗ್ ಪೋರ್ಟ್ ಇರುತ್ತದೆ. ಹೀಗಾಗಿ, ನಮಗೆ ಸೂಕ್ತವಾದುದನ್ನು ಆಯ್ಕೆ ಮಾಡಿಕೊಳ್ಳಬಹುದು.

ಇನ್ನುಳಿದಂತೆ, ನಮ್ಮಿಷ್ಟದ ಬಣ್ಣ ಆಯ್ಕೆ ಮಾಡಿಕೊಳ್ಳಬಹುದು. ಕ್ಲಾಸ್ 1 ಬ್ಲೂಟೂತ್ ಸಾಧನಗಳನ್ನು ಪರಿಗಣಿಸಿದರೆ, ಅವುಗಳ ವ್ಯಾಪ್ತಿ ಹೆಚ್ಚು ಇರುತ್ತದೆ. ಕರೆಯ ಗುಣಮಟ್ಟ ಹೇಗಿರುತ್ತದೆ ಎಂಬುದನ್ನು ಕೂಡ ಬಳಸಿದವರಲ್ಲಿ ವಿಚಾರಿಸಿ ತಿಳಿದುಕೊಳ್ಳುವುದು ಅತ್ಯಗತ್ಯ. ಇದರ ಜೊತೆಗೆ, ಕಿವಿಯ ಕುಹರಗಳ ಗಾತ್ರವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಇಂಥ ಸಂದರ್ಭಗಳಲ್ಲಿ ಇಯರ್‌ಬಡ್ಸ್ ಜೊತೆಗೆ ವಿಭಿನ್ನ ಗಾತ್ರದ ಇಯರ್‌ಟಿಪ್‌ಗಳನ್ನು ನೀಡಲಾಗುತ್ತದೆಯೇ ಎಂದೂ ತಿಳಿದುಕೊಳ್ಳಬೇಕು. ಇವುಗಳನ್ನು ನಾವೇ ಬದಲಾಯಿಸಿಕೊಳ್ಳಬಹುದು.

Article by me (Avinash B) published in Prajavani on 08/09 Nov 2022

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

3 days ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

2 weeks ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

2 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

7 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

7 months ago

ಒಂದೇ ಫೋನ್‌ನಲ್ಲಿ ಎರಡು WhatsApp ಖಾತೆ ಬಳಸುವುದು ಹೇಗೆ?

ಕಳೆದ ಅಕ್ಟೋಬರ್ 19ರಂದು ಮೆಟಾ ಒಡೆತನದ WhatsApp ಸಂಸ್ಥೆಯೇ ತನ್ನ ಆ್ಯಪ್‌ಗೆ ಹೊಸ ಅಪ್‌ಡೇಟ್ ನೀಡಿದ್ದು, ಎರಡು ವಾಟ್ಸ್ಆ್ಯಪ್ ಖಾತೆಗಳನ್ನು…

9 months ago