ಸೈಬರ್ ಕೆಫೆಗಳಲ್ಲಿ ಕಂಪ್ಯೂಟರ್ ಬಳಸುವ ಮುನ್ನ ಇದನ್ನು ಓದಿ

ತಂತ್ರಜ್ಞಾನದ ಪ್ರಗತಿಯ ಭರದಲ್ಲಿ ನಮ್ಮ ಪ್ರೈವೆಸಿಯ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳಲು ಬಹುಶಃ ನಮಗೆ ಸಮಯ ಸಾಲುತ್ತಿಲ್ಲ. ನಮ್ಮದೇ ಸ್ವಂತ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಇದ್ದರೆ ಅಷ್ಟೇನೂ ಸಮಸ್ಯೆಯಾಗಲಾರದು. ಆದರೆ, ಸೈಬರ್ ಕೆಫೆ/ಕಂಪ್ಯೂಟರ್ ಸೆಂಟರ್, ಆಫೀಸ್ ಅಥವಾ ಬೇರಾವುದೇ ಸಾರ್ವಜನಿಕ ಕಂಪ್ಯೂಟರ್‌ಗಳನ್ನು ಬಳಸುವಾಗ ನಮ್ಮ ವೆಬ್ ಜಾಲಾಟದ (ಬ್ರೌಸಿಂಗ್) ಕುರುಹುಗಳೆಲ್ಲವೂ ಆ ಕಂಪ್ಯೂಟರಿನಲ್ಲಿ ಉಳಿಯುತ್ತವೆ ಮತ್ತು ಅದನ್ನು ಮತ್ತೊಬ್ಬರು ಬಂದು ಪುನಃ ನೋಡಬಹುದು, ದುರ್ಬಳಕೆ ಮಾಡಬಹುದು ಎಂಬ ವಿಚಾರ ಜನ ಸಾಮಾನ್ಯರಲ್ಲಿ ಬಹುತೇಕರಿಗೆ ತಿಳಿದಿಲ್ಲ. ಕಂಪ್ಯೂಟರ್ ಸೆಂಟರಿಗೆ ಹೋಗುವುದು, ಲಾಗಿನ್ ಆಗುವುದು, ಬ್ರೌಸ್ ಮಾಡುವುದು, ಹಣ ಕೊಟ್ಟು ಹಾಗೆಯೇ ಮರಳುವುದು… ಅಷ್ಟೇ ಗೊತ್ತಿರುತ್ತದೆ. ಇದನ್ನು ನಾನೇ ಕಣ್ಣಾರೆ ನೋಡಿಯೂ ಇದ್ದೇನೆ. ಈ ಕಾಲದ ಮಕ್ಕಳಿಗೆ ಕಂಪ್ಯೂಟರ್ ಸೆಂಟರಿಗೆ ಹೋಗಿ, ಶಾಲೆಯ ಪ್ರಾಜೆಕ್ಟ್‌ಗೆ ಬೇಕಾದ ಮಾಹಿತಿ ಪಡೆಯುವುದು ಅನಿವಾರ್ಯವಾಗಿರುವುದರಿಂದ ಅವರಲ್ಲಿಯೂ ಈ ಬಗೆಗಿನ ಮಾಹಿತಿಯ ಕೊರತೆ ಇರಬಹುದು. ಅಂಥವರಲ್ಲಿ ಪ್ರೈವೆಸಿ ವಿಚಾರದ ಬಗ್ಗೆ ಜಾಗೃತಿ ಮೂಡಿಸಲು ಪೋಷಕರು ಈ ಲೇಖನ ಓದಲೇಬೇಕು, ತಮ್ಮ ಮಕ್ಕಳಿಗೂ ತಿಳಿಯಪಡಿಸಬೇಕು.

ಇಂಟರ್ನೆಟ್‌ನಲ್ಲಿ ಏನು ಮಾಡಿದರೆ ಏನೇನು ಆಗುತ್ತದೆ ಎಂಬುದರ ಅರಿವಿನ ಕೊರತೆ ಬಹುಶಃ ಇಂಟರ್ನೆಟ್ ಕ್ರಾಂತಿಯ ಈ ದಿನಗಳಲ್ಲಿ ನಾವಿಂದು ಕಾಣುತ್ತೇವೆ. ಕಂಪ್ಯೂಟರ್ ಮಾತ್ರವಲ್ಲದೆ, ಸ್ಮಾರ್ಟ್ ಫೋನ್‌ಗಳಲ್ಲಿಯೂ ನಾವು ಲಾಗಿನ್ ಆಗಿರುತ್ತೇವೆ. ಏನು ಮಾಡುತ್ತಿದ್ದೇವೆ, ಎಲ್ಲಿ ಹೋದೆವು ಎಂಬುದೆಲ್ಲವೂ ಟ್ರ್ಯಾಕ್ ಆಗುತ್ತಿರುತ್ತದೆ ಎಂಬ ವಿಷಯದ ಬಗೆಗೂ ಜನ ಜಾಗೃತಿ ಸಾಕಷ್ಟಿಲ್ಲ. ಇದು ನಮ್ಮ ಪ್ರೈವೆಸಿ ಅಂದರೆ ಖಾಸಗಿತನದ ವಿಚಾರ. ಇಲ್ಲಿ ಗೌಪ್ಯತೆ ಕಾಯ್ದುಕೊಳ್ಳುವುದು ಕೂಡ ಮುಖ್ಯ. ವಿಶೇಷವಾಗಿ ನಮ್ಮದಲ್ಲದ ಕಂಪ್ಯೂಟರಿನಲ್ಲಿ, ಅದರಲ್ಲಿಯೂ ಹೊರಗೆ ಸೈಬರ್ ಕೆಫೆಗಳಲ್ಲಿ ನಾವು ಅಂತರ್ಜಾಲವನ್ನು ಜಾಲಾಡುವಾಗ ನಮ್ಮ ಬ್ರೌಸಿಂಗ್ ಇತಿಹಾಸವನ್ನು, ಬ್ರೌಸರಿನಲ್ಲಿಯೇ ಸೇವ್ ಆಗಿರಬಹುದಾದ ಯೂಸರ್‌ನೇಮ್, ಪಾಸ್‌ವರ್ಡ್‌ಗಳನ್ನು ಅಳಿಸಿಹಾಕುವುದು ಮಾತ್ರವಲ್ಲದೆ, ಯಾವುದೇ ಇಮೇಲ್, ಫೇಸ್‌ಬುಕ್, ಬ್ಯಾಂಕಿಂಗ್ ಮತ್ತಿತರ ಖಾತೆಗಳಿಗೆ ಲಾಗಿನ್ ಆಗಿದ್ದರೆ, ಲಾಗೌಟ್ ಆದ ಬಳಿಕವಷ್ಟೇ ಅಲ್ಲಿಂದ ಹೊರ ನಡೆಯುವುದು ಅತ್ಯಂತ ಮುಖ್ಯ ವಿಷಯ. ಇದನ್ನು ಮಕ್ಕಳಿಗಂತೂ ಹೇಳಲೇಬೇಕು. ಇಲ್ಲವಾದರೆ, ನಂತರ ಅದೇ ಕಂಪ್ಯೂಟರಿನಲ್ಲಿ ಕೂರುವವರು ಕಂಪ್ಯೂಟರ್ ತಜ್ಞರಾಗಿದ್ದರೆ, ಹ್ಯಾಕರ್‌ಗಳಾಗಿದ್ದರೆ ನಿಮ್ಮ ಖಾತೆಗಳು ದುರ್ಬಳಕೆಯಾಗುವ ಸಾಧ್ಯತೆಗಳು ಹೆಚ್ಚು.

ಅದೇ ರೀತಿ, ಯಾವುದೇ ಬ್ರೌಸರ್‌ನಲ್ಲಿ ನಾವು ಯಾವ ಜಾಲ ತಾಣಗಳನ್ನು ಸಂದರ್ಶಿಸುತ್ತೇವೆ, ಯಾವ ವೀಡಿಯೋ ನೋಡುತ್ತೇವೆ, ಯಾವ ಸುದ್ದಿ ಪುಟವನ್ನು ನೋಡಿದೆವು, ಎಷ್ಟು ಹೊತ್ತು ನೋಡಿದೆವು ಎಂಬೆಲ್ಲ ಮಾಹಿತಿಯು ಸ್ವಯಂಚಾಲಿತವಾಗಿ ಶೇಖರಣೆಯಾಗುತ್ತದೆ. ಅಂದರೆ, ನಾವು ಜಿಮೇಲ್‌ಗೆ ಲಾಗಿನ್ ಆಗಿ ಇಂಟರ್ನೆಟ್‌ನಲ್ಲಿ ಏನೇನು ಮಾಡುತ್ತೇವೋ, ಅವು ನಮಗೆ ಗೊತ್ತಿಲ್ಲದಿದ್ದರೂ ಗೂಗಲ್‌ಗೆ ಗೊತ್ತಿರುತ್ತದೆ ಮತ್ತು ದಾಖಲಿಸುತ್ತಿರುತ್ತದೆ. ಇದು ನಮ್ಮ ಬ್ರೌಸಿಂಗ್ ಹಿಸ್ಟರಿ. ಲಾಗಿನ್ ಆಗದೆಯೇ ಬ್ರೌಸರಿನಲ್ಲಿ ಇದು ಶೇಖರವಾಗುತ್ತದೆ. ಗೂಗಲ್ ಕ್ರೋಮ್‌ನಲ್ಲಿ ಕಂಟ್ರೋಲ್ ಬಟನ್ ಹಾಗೂ ಹೆಚ್ (Ctrl + H) ಬಟನ್ ಒತ್ತಿದಾಗ, ನಾವು ನಿರ್ದಿಷ್ಟ ದಿನ ಯಾವ್ಯಾವ ವೆಬ್ ತಾಣಗಳನ್ನು ನೋಡಿದೆವು ಎಂಬ ಮಾಹಿತಿಯನ್ನು ಪಟ್ಟಿ ರೂಪದಲ್ಲಿ ನೋಡಬಹುದು. ಹೀಗಾಗಿ, ವಿಶೇಷವಾಗಿ ಸಾರ್ವಜನಿಕ ಕಂಪ್ಯೂಟರುಗಳನ್ನು (ಸೈಬರ್ ಕೆಫೆಗಳಲ್ಲಿಯೋ ಅಥವಾ ಬೇರೆ ಕಚೇರಿಗಳಲ್ಲೋ) ಬಳಸುವವರು, ಅವುಗಳನ್ನು ನಿವಾರಿಸಿಕೊಳ್ಳುವುದು ಅಂದರೆ ಡಿಲೀಟ್ ಮಾಡುವುದು ಅತ್ಯಗತ್ಯ.

ತಾತ್ಕಾಲಿಕ ಫೈಲುಗಳು: ಅದೇ ರೀತಿಯಾಗಿ, ಯಾವುದೇ ಅಂತರ್ಜಾಲದ ಪುಟವನ್ನು ಬ್ರೌಸ್ ಮಾಡುವಾಗ, ಆ ಪುಟದಲ್ಲಿರುವ ಫೋಟೋ, ವೀಡಿಯೋ, ಲೇಖನ ಇತ್ಯಾದಿಗಳು ನಮ್ಮ ಸಾಧನದಲ್ಲಿ (ಕಂಪ್ಯೂಟರ್ ಅಥವಾ ಮೊಬೈಲ್, ಟ್ಯಾಬ್ಲೆಟ್ ಇತ್ಯಾದಿ) ಕಾಣಿಸಬೇಕಿದ್ದರೆ, ಅವೆಲ್ಲ ಮೊದಲು ನಮ್ಮ ಸಾಧನದ ತಾತ್ಕಾಲಿಕ ಫೋಲ್ಡರ್ ಒಂದಕ್ಕೆ ಡೌನ್‌ಲೋಡ್ ಆಗುತ್ತವೆ. ಅವೆಲ್ಲ ‘ಟೆಂಪರರಿ ಇಂಟರ್ನೆಟ್ ಫೈಲ್ಸ್’, ಟೆಂಪ್, ಪ್ರಿಫೆಚ್ ಅಥವಾ ಐನೆಟ್‌ಕ್ಯಾಶ್ ಎಂಬ ಫೋಲ್ಡರ್‌ಗಳಲ್ಲಿ (ವಿಂಡೋಸ್ ಯಾವ ಆವೃತ್ತಿಯಿದೆಯೋ ಅದಕ್ಕೆ ಅನುಗುಣವಾಗಿ) ಶೇಖರಣೆಯಾಗುತ್ತಿರುತ್ತವೆ. ಈ ಫೈಲುಗಳು ಶೇಖರಣೆಯಾಗುತ್ತಲೇ ನಿಮ್ಮ ಡ್ರೈವ್‌ನ ಸ್ಥಳಾವಕಾಶವೂ ತುಂಬುತ್ತಾ ಹೋಗುತ್ತದೆ ಮತ್ತು ಇದರಿಂದಾಗಿ ನೆಟ್ ಬ್ರೌಸಿಂಗ್ ಅಥವಾ ಬೇರಾವುದೇ ಪ್ರೋಗ್ರಾಂಗಳ ಚಾಲನೆಯೂ ನಿಧಾನ ಆಗಬಹುದು. ಇದಕ್ಕಾಗಿ ನಾವು ಆಗಾಗ್ಗೆ ಇಂತಹಾ ತಾತ್ಕಾಲಿಕ ಫೈಲುಗಳನ್ನು ನಿವಾರಿಸಿಕೊಳ್ಳಬೇಕಾಗುತ್ತದೆ.

ಮತ್ತೊಂದು ಸಮಸ್ಯೆಯನ್ನು ಓದುಗರೊಬ್ಬರು ನನ್ನ ಮುಂದಿಟ್ಟಿದ್ದರು. ವಿಜಯ ಕರ್ನಾಟಕ ವೆಬ್ ಸೈಟ್ (Vijaykarnataka.com) ಅಥವಾ ಬೇರಾವುದೇ ಜಾಲತಾಣವನ್ನು ತೆರೆದಾಗ ಹಳೆಯ ಸುದ್ದಿಗಳೇ ಕಾಣಿಸುತ್ತವೆ ಎಂದಿದ್ದರು ಅವರು. ಇದಕ್ಕೆ ಕಾರಣವೇ ಈ ತಾತ್ಕಾಲಿಕ ಫೈಲುಗಳು ಅಥವಾ ಕುಕೀಗಳು. ಕೆಲವೊಮ್ಮೆ ನಿಧಾನಗತಿಯ ಇಂಟರ್ನೆಟ್ ಸಂಪರ್ಕವಿರುವಾಗಲೂ ಹೀಗಾಗುತ್ತದೆ. ಹೆಚ್ಚಾಗಿ ಈ ಕುಕೀಗಳನ್ನು/ಟೆಂಪರರಿ ಫೈಲುಗಳನ್ನು ಅಳಿಸಿದರೆ ಈ ಸಮಸ್ಯೆ ಪರಿಹಾರವಾಗುತ್ತದೆ ಮತ್ತು ತಾಜಾ ಸುದ್ದಿಗಳು ಗೋಚರಿಸುತ್ತವೆ. ಇದಕ್ಕೆ ತಕ್ಷಣದ ಪರಿಹಾರವೆಂದರೆ Ctrl + f5 ಬಟನ್ ಒತ್ತುವುದು. ಇದಕ್ಕೆ ಪುಟವನ್ನು ‘ಹಾರ್ಡ್ ರೀಫ್ರೆಶ್ ಮಾಡುವುದು’ ಎನ್ನುತ್ತಾರೆ. ಇದರಿಂದಲೂ ಸರಿಯಾಗದಿದ್ದರೆ ಈ ಕೆಳಗಿನ ವಿಧಾನ ಅನುಸರಿಸಿ.

ಕ್ಯಾಶ್ ಕ್ಲಿಯರ್ ಮಾಡಲು: ಗೂಗಲ್ ಕ್ರೋಮ್‌ನಲ್ಲಿ ಬ್ರೌಸಿಂಗ್ ಹಿಸ್ಟರಿ, ಟೆಂಪರರಿ ಫೈಲುಗಳು, ಸೇವ್ ಆಗಿರುವ ಯೂಸರ್‌ನೇಮ್, ಪಾಸ್‌ವರ್ಡ್‌ಗಳು, ಆಟೋ-ಫಿಲ್ ಫಾರ್ಮ್ ಡೇಟಾವನ್ನು, ಡೌನ್‌ಲೋಡ್ ಹಿಸ್ಟರಿಯನ್ನು ಹಾಗೂ ಕ್ಯಾಶ್ ರೂಪದಲ್ಲಿ ಶೇಖರಣೆಯಾಗಿರುವ ಫೋಟೋ ಮತ್ತಿತರ ಫೈಲುಗಳನ್ನು ಅಳಿಸಿ ಹಾಕಲು ಸುಲಭೋಪಾಯವಿದೆ. ಬೇರೆಲ್ಲ ಬ್ರೌಸರುಗಳನ್ನು ಕ್ಲೋಸ್ ಮಾಡಿ, ಒಂದನ್ನು ಮಾತ್ರ ತೆರೆದು, ಕೀಬೋರ್ಡ್‌ನಲ್ಲಿ Shift, Ctrl ಹಾಗೂ delete ಬಟನ್ ಒತ್ತಿಬಿಡಿ.

ಆಗ Clear Browsing Data ಎಂಬ ವಿಂಡೋ ಪಾಪ್-ಅಪ್ ಆಗುತ್ತದೆ. Clear the following items from ಅಂತ ಇರುವಲ್ಲಿ, the beginning of the time ಅಂತ ಡ್ರಾಪ್-ಡೌನ್ ಮೆನುವಿನಿಂದ ಆಯ್ಕೆ ಮಾಡಿಕೊಳ್ಳಿ. ನಿಮ್ಮ ಬ್ರೌಸಿಂಗ್‌ನ ಎಲ್ಲ ಟೆಂಪರರಿ ಫೈಲುಗಳು ಡಿಲೀಟ್ ಆಗುತ್ತವೆ. ಇದುವೇ ಕ್ಲಿಯರಿಂಗ್ ಬ್ರೌಸಿಂಗ್ ಡೇಟಾ ಅಥವಾ ಕ್ಯಾಶ್ ಕ್ಲಿಯರಿಂಗ್. ಇದರಲ್ಲಿ ಬ್ರೌಸಿಂಗ್ ಚರಿತ್ರೆಯೂ ಡಿಲೀಟ್ ಆಗುತ್ತದೆ, ನೀವು ಸೇವ್ ಮಾಡಿಟ್ಟಿರುವ ಲಾಗಿನ್ ಐಡಿಗಳು, ಪಾಸ್‌ವರ್ಡ್‌ಗಳು ಕೂಡ ಡಿಲೀಟ್ ಆಗುತ್ತವೆ.

ಸಾರ್ವಜನಿಕ ಸ್ಥಳಗಳ ಕಂಪ್ಯೂಟರ್ ಬಳಸಿದ ಬಳಿಕ ಈ ಮೇಲಿನ ಕ್ರಮವನ್ನು ಅನುಸರಿಸುವುದನ್ನು ಮರೆಯಲೇಬೇಡಿ.

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. (ವಿಜಯ ಕರ್ನಾಟಕ ಅಂಕಣ 07 ಆಗಸ್ಟ್ 2017)

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

2 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

2 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

3 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

4 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

9 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

9 months ago