Categories: myworld

ಗಾಯನದ ‘ಅಶ್ವತ್ಥ’ ವೃಕ್ಷ: ಹಾಡುವ ಯೋಗಿಗೆ ಅಕ್ಷರಾಂಜಲಿ

ಅಶ್ವತ್ಥ್ ಇನ್ನಿಲ್ಲ: ಕಾಣದ ಕಡಲಿಗೆ ಹಂಬಲಿಸಿತೇ ಮನ?

ಜಾನಪದ ಗೀತೆಗಳನ್ನು ಕೋಟ್ಯಂತರ ಕನ್ನಡಿಗರ ಕಿವಿಗೆ ಮುಟ್ಟಿಸಿದ- ಮನಸ್ಸಿಗೆ ತಟ್ಟಿಸಿದ ‘ಗಾಯನ ಗಾರುಡಿಗ’ ಸಿ.ಅಶ್ವತ್ಥ್ ಆರದಿರಲಿ ಬದುಕು ಎನ್ನುತ್ತಲೇ ಭೌತಿಕ ಬದುಕಿನಲ್ಲಿ ತುಂಬಲಾರದ ಶೂನ್ಯವೊಂದನ್ನು ಸೃಷ್ಟಿಸಿ ಹೋಗಿದ್ದಾರೆ. ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ ತಾರಕ ಸ್ಥಾಯಿಯ ಸ್ವರದಿಂದ ನಿತ್ಯವೂ ಅವತರಿಪ ಸತ್ಯಾವತಾರವೊಂದು ಚಿರಸ್ಥಾಯಿಯಾಗಿದೆ. ‘ಮೈಕನು ಹಿಡಿದು ನಲಿಯುತ ಕುಣಿಯುತ | ಹಾಡುವ ಯೋಗಿಯಾ ನೋಡಲ್ಲೀ…’ ಎಂದು ನೆನಪಿಸಿದ ಅಶ್ವತ್ಥ್ (ಜನನ ಡಿ.29, 1939-ಮರಣ: ಡಿ.29, 2009) ಇನ್ನು ಅಶರೀರ ವಾಣಿಯಾಗಿ ನಮ್ಮೊಳಗೆ ಸಂಭವಿಸುತ್ತಿರುತ್ತಾರೆ.

ಎಂಥಾ ದುರಂತವಿದು ಕನ್ನಡ ಸ್ವರ ಲೋಕಕ್ಕೆ! 70ರ ಹರೆಯದಲ್ಲಿಯೂ ಹಾಡಿ ಕುಣಿಯುತ್ತಿದ್ದ, ಕನ್ನಡ ಜನಪದ ಮತ್ತು ಭಾವಗೀತೆ ಸೇರಿದಂತೆ ಸುಗಮ ಸಂಗೀತ ಜಗತ್ತಿನ ಅಶ್ವತ್ಥ ವೃಕ್ಷವು ಹುಟ್ಟಿದ ದಿನದಂದೇ ಧರಾಶಾಯಿಯಾಗಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಹುಟ್ಟು ಹಬ್ಬದ ಸಂಭ್ರಮಕ್ಕೆ, ಸಡಗರಕ್ಕೆ ಸಿದ್ಧತೆ ಮಾಡಿ ಅಶ್ವತ್ಥ್ ಅವರ ಗಾಯನಗಂಗೆಯಲ್ಲಿ ಮೀಯಲು ಸಜ್ಜಾಗಿದ್ದ ಅವರ ಅಭಿಮಾನಿಗಳು ಕಣ್ಣೀರಗಂಗೆಯಲ್ಲಿ ತೋಯ್ದು ಹೋಗಿದ್ದಾರೆ.

ಶರೀರಕ್ಕೆ ತಕ್ಕ ಶಾರೀರ, ಅದಕ್ಕೊಪ್ಪುವ ಭಾವಾಭಿವ್ಯಕ್ತಿ, ಹಾಡುತ್ತಲೇ ನರ್ತಿಸುವ; ಮುಗುಮ್ಮಾಗಿ ಹಾಡು ಕೇಳಲು ಕೂತವರನ್ನೂ ಬಡಿದೆಬ್ಬಿಸಿ ಕುಣಿಯುವಂತೆ ಮಾಡಬಲ್ಲ ತಾಕತ್ತು, ಶಕ್ತಿ ಅವರ ಕಂಠಸಿರಿಯಲ್ಲಿತ್ತು ಎಂಬುದನ್ನು ಮರೆಯಲಾದೀತೇ? ಕವನ, ಕಾವ್ಯವೆಂದರೆ ಮೂಗು ಮುರಿಯುತ್ತಿದ್ದ ಮಂದಿಯನ್ನೂ, ಕವನದೊಳಗೆ ಇಂಥದ್ದೊಂದು ಸಂದೇಶವಿದೆ ಎಂದು ತಿಳಿಸಿಕೊಟ್ಟು, ನೀವು ಅವನ್ನೂ ಓದಬಹುದು ಎಂಬ ಪ್ರೇರಣೆ ನೀಡುವಂತೆ, ಅದರ ಸವಿಯನ್ನು ಸವಿಯುವಂತೆ ಮಾಡಿದ್ದಲ್ಲವೇ ನಮ್ಮ ಅಶ್ವತ್ಥಜ್ಜ?

ಭಾವಗೀತೆ ಮತ್ತು ಜನಪದ ಗೀತೆ ಪ್ರಪಂಚಕ್ಕೆ ತಾರಾ ಪಟ್ಟ ತಂದುಕೊಟ್ಟವರಲ್ಲಿ ಅಶ್ವತ್ಥ್ ಅಗ್ರಗಣ್ಯರು. ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನ್ನುವ ಮಾಧುರ್ಯವಿತ್ತು ಅವರ ನುಡಿಗಳಲ್ಲಿ. ಸಿನಿಮಾ ಸಂಗೀತ ಹೊರತುಪಡಿಸಿದರೆ, ಸುಗಮ ಸಂಗೀತ ಕಾರ್ಯಕ್ರಮವೊಂದಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರನ್ನು ಸೆಳೆಯಬಲ್ಲ ಅಗ್ಗಳಿಕೆ ಅವರದು.

ಒಂದೇ ವರ್ಷ ಅಗಲಿದ ತ್ರಿಮೂರ್ತಿಗಳು
ಪಿ.ಕಾಳಿಂಗ ರಾವ್, ಮೈಸೂರು ಅನಂತಸ್ವಾಮಿ, ಜಿ.ವಿ.ಅತ್ರಿ ಮುಂತಾದವರನ್ನು ಈಗಾಗಲೇ ಕಳೆದುಕೊಂಡ ಕನ್ನಡ ಸಂಗೀತ ಲೋಕಕ್ಕೆ ಖಂಡಿತಾ 2009 ತೀರಾ ಕೆಟ್ಟದು. ಈ ವರ್ಷದಾರಂಭದಲ್ಲಿ ರಾಜು ಅನಂತ ಸ್ವಾಮಿ (ಜನವರಿ 17), ಮಧ್ಯಭಾಗದಲ್ಲಿ ಗಾಯನ ಗಂಗೆ ಗಂಗೂಬಾಯಿ ಹಾನಗಲ್ (ಜುಲೈ 21) ಹಾಗೂ ವರ್ಷದ ಕೊನೆಯಲ್ಲಿ ಅಶ್ವತ್ಥ್.

ಭಾವ ಗೀತೆ, ಭಕ್ತಿ ಗೀತೆ, ಜನಪದ ಗೀತೆ, ಚಿತ್ರ ಗೀತೆಯೇ ಇರಲಿ. ಎಲ್ಲವನ್ನೂ ತಮ್ಮ ತಾಳ-ಮೇಳಕ್ಕೆ ತಕ್ಕಂತೆ ಕುಣಿಸಿ, ಈ ಕವನಗಳ ಸಂದೇಶವನ್ನು ಜನರ ಕಿವಿಯೊಳಗೆ, ಮನಸ್ಸಿನೊಳಗೆ ತೂರಿಸಿ ಬಿಡುವ ಛಾತಿಯುಳ್ಳವರು ಅಶ್ವತ್ಥ್. ಅಂಥಾ ರಾಗ -ಸಂಗೀತ ಸಂಯೋಜನೆಯ ಕೌಶಲ್ಯ, ಭಾವನೆಗಳನ್ನು ತುಂಬಿಸಿ ಹಾಡುವ ಚಾಕಚಕ್ಯತೆ ಅವರಿಗಿತ್ತು. ಹಾರ್ಮೋನಿಯಂ ಹಿಡಿದು ಕುಳಿತರೆಂದರೆ, ಕೇಳುಗರ ಮೈಯೆಲ್ಲ ಕಿವಿಯಾಗುತ್ತಿತ್ತು. ಸ್ವರವನ್ನು ಉಚ್ಚ ಸ್ಥಾಯಿಗೆ ಏರಿಸುವ ಅವರ ಕೌಶಲವಿದೆಯಲ್ಲ, ಅದುವೇ ಅಶ್ವತ್ಥ್ ಹೆಸರನ್ನು ನಮ್ಮ ಮನದ ಮೂಸೆಯಲ್ಲಿ ಹಿಡಿದಿಡುವುದು! ಭಾವ ತುಂಬಿ, ಮನಸ್ಸು ತುಂಬಿ, ಅನುಭವಿಸಿ ಹಾಡುವ ಕಲೆ… ಅಬ್ಬಬ್ಬಾ… ಅದಕ್ಕೆ ಅನ್ಯತ್ರ ಹೋಲಿಕೆಯಿಲ್ಲ. ಹಾಡುತ್ತಾ ಹಾಡುತ್ತಾ, ನರ್ತಿಸುತ್ತಾ, ಏರು ದನಿಯೊಂದಿಗೆ ವಾತಾವರಣವನ್ನಿಡೀ ಸಂಗೀತಮಯವಾಗಿಸುತ್ತಿದ್ದ ಈ ಕಲೆ ಅದ್ಭುತ ಅತ್ಯದ್ಭುತ. ಅವರು ಬಿಟ್ಟು ಹೋದ ಶೂನ್ಯವನ್ನು ತುಂಬುವುದು ಯಾರಿಂದಲೂ ಅಸಾಧ್ಯ. ಕಾಣದ ಕಡಲಿಗೆ ಇಷ್ಟು ಬೇಗನೇ ಹಂಬಲಿಸಿತೇ ಅವರ ಮನ? ಅಶ್ವತ್ಥ್ ಸ್ಥಾನ ತುಂಬುವವರಾದರೂ ಇನ್ಯಾರು ಎಂಬ ಪ್ರಶ್ನೆಯನ್ನು ಪ್ರಶ್ನೆಯಾಗಿಯೇ ಉಳಿಸಿ ಹೋದರಲ್ಲ!

ಸುಗಮ ಸಂಗೀತ ಲೋಕ ಸಮರ್ಪಣಾ ಭಾವದಿಂದ ತಮ್ಮನ್ನು ಬದ್ಧರಾಗಿಸಿಕೊಂಡು ದಂತಕಥೆಯೇ ಆದವರು ಅಶ್ವತ್ಥ್. ಸಿಡಿಮಿಡಿ ವ್ಯಕ್ತಿತ್ವ, ನೇರ ನಡೆ ನುಡಿಗಾಗಿ ಅವರು ಹಲವರಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದರೂ, ಅವರ ತಮೋಗುಣಕ್ಕೆ ಅಲ್ಲೊಂದು ಅರ್ಹ ಕಾರಣವಿರುತ್ತಿತ್ತು.

ಪ್ರಾಸವಿಲ್ಲದ ಪದ್ಯ ಪದ್ಯವೇ ಅಲ್ಲ ಎನ್ನುತ್ತಿದ್ದರು ಅಶ್ವತ್ಥ್. ಹಿರಿಯ ಕವಿ ರಾಮಚಂದ್ರ ಶರ್ಮ ಅವರು ಒಪ್ಪಿಸಿದ ಕವನವೊಂದನ್ನು ಹೇಗಿದೆ ಇದು ಅಂತ ಕೇಳಿದಾಗ, ಇದೂ ಒಂದು ಪದ್ಯಾನಾ, ಏನಿದೆ ಇದ್ರಲ್ಲಿ ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದರು. ಮೊದಲ ಓದಿಗೇ ಅರ್ಥವಾಗಿಬಿಡುವುದೇ ಒಳ್ಳೆಯ ಕವಿತೆ ಅಂತ ನೇರವಾಗಿಯೇ ಹೇಳಿದ ಅವರ ಮಾತಿನಲ್ಲಿ ಯಥಾರ್ಥವಿದೆ, ಜನ ಸಾಮಾನ್ಯರಿಗೂ ಕವಿತೆಯ ಮೂಲಕ ಒಳ್ಳೆಯ ಸಂದೇಶ ತಲುಪಿಸಬೇಕೆಂಬ ತುಡಿತವಿತ್ತು ಎಂಬುದನ್ನು ಅಲ್ಲಗಳೆಯುವುದು ಸಾಧ್ಯವೇ?

ಕೆ.ಎಸ್.ನರಸಿಂಹಸ್ವಾಮಿ ಅವರ ಮೈಸೂರು ಮಲ್ಲಿಗೆಯ ಪರಿಮಳವನ್ನು ತಮ್ಮ ಕಂಠಸಿರಿಯ ಮೂಲಕ ದೇಶ ವಿದೇಶದಲ್ಲಿ ಪಸರಿಸಿದ್ದು, ‘ಚಿನ್ನಾರಿ ಮುತ್ತ’ ಚಿತ್ರದ ‘ಎಷ್ಟೊಂದ್ ಜನ ಇಲ್ಲಿ ಯಾರು ನನ್ನೋರು’ ಸಂಗೀತ ಸಂಯೋಜಿಸಿದ್ದು, ‘ಹೂವು ಹಣ್ಣು’ ಚಿತ್ರದ ‘ನಿಂಗಿ ನಿಂಗೀ ನಿಂಗಿ ನಿಂಗಿ, ನಿದ್ದಿ ಕದ್ದೀಯಲ್ಲೇ ನಿಂಗಿ’ ಹಾಡು ಸಂಯೋಜಿಸಿ ಹಾಡಿದ್ದು, ಬಂಗಾರ ತೀರ ಕಡಲಾಚೆಗೀಚೆಗಿದು ನೀಲ ನೀಲ ತೀರ, ಆನಂದಮಯ ಈ ಜಗ ಹೃದಯ, ಜಯ ಭಾರತ ಜನನಿಯ ತನುಜಾತೆ, ಹಚ್ಚೇವು ಕನ್ನಡದ ದೀಪ ಮುಂತಾದ ಹಾಡುಗಳಿಗೆ ಸಂಗೀತ ಸಂಯೋಜಿಸಿ ಅವುಗಳನ್ನು ಅಜರಾಮರವಾಗಿಸಿದ್ದು ಇವೆಲ್ಲವೂ ಅಚ್ಚಳಿಯದ ನೆನಪುಗಳು. ಅವರು ‘ಮುಕ್ತಾ’ ಧಾರಾವಾಹಿಗೆ ಅವರೇ ರಾಗ ಸಂಯೋಜಿಸಿ ಹಾಡಿದ್ದ “ಕಾರುಮೋಡ ಮಳೆಯಾಗಿ ಸುರಿದಾಗ ಕಣ್ಣ ಹನಿಗೆ ಮುಕ್ತಿ | ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ ಅದರ ಗರಿಗೆ ಮುಕ್ತಿ | ಎದೆಯ ನೋವು ಹಾಡಾಗಿ ಹೊಮ್ಮಿದರೆ ಭಾವಕ್ಕೆ ಬಂಧ ಮುಕ್ತಿ | ಎಂದು ಆದೇವು ನಾವು? ಮುಕ್ತ ಮುಕ್ತ ಮುಕ್ತ? |” ಅನ್ನೋ ಗೀತೆಗಾಗಿಯೇ ಟೀವಿ ಹಚ್ಚಿ ಕುಳಿತವರೆಷ್ಟು ಮಂದಿಯನ್ನು ನಾವು ನೋಡಿಲ್ಲ!

ಸಂತ ಶಿಶುನಾಳ ಶರೀಫರ ಮಾನವೀಯ ಸಂದೇಶ ಸಾರುವ ಗೀತೆಗಳನ್ನು ಜನರ ಬಳಿಗೆ ತಲುಪಿಸಿದ್ದೇ ಸಿ.ಅಶ್ವತ್ಥ್. ಅನುಕರಣೆಯಿಲ್ಲದೆಯೇ ಹಾಡುತ್ತಿದ್ದುದು, ಸ್ವರಶುದ್ಧಿ ಹಾಗೂ ಸಾಹಿತ್ಯಶುದ್ಧಿ – ಅವರ ವಿಶೇಷತೆಗಳು.

ಹಾಸನದ ಚೆನ್ನರಾಯಪಟ್ಟಣದಲ್ಲಿ ಜನನ. ಕಾಕನಕೋಟೆ ನಾಟಕಕ್ಕೆ ಸಂಗೀತ ಸಂಯೋಜಿಸುವ ಮೂಲಕ ವೃತ್ತಿ ಜೀವನ ಆರಂಭಿಸಿದ್ದ ವಿಜ್ಞಾನ ಪದವೀಧರ ಅಶ್ವತ್ಥ್, ಈಗಾಗಲೇ ನೂರಕ್ಕೂ ಹೆಚ್ಚು ಆಲ್ಬಂಗಳನ್ನು ಮಾಡಿದ್ದಾರೆ. ದೇವಗಿರಿ ಶಂಕರ ಜೋಷಿ ಅವರಲ್ಲಿ ಹಿಂದೂಸ್ತಾನಿ ಸಂಗೀತದ ಶಿಷ್ಯತ್ವ ಪಡೆದಿದ್ದ ಅವರು, ಬೇಂದ್ರೆ, ಕುವೆಂಪು, ಶಿವರುದ್ರಪ್ಪ, ಸಂತ ಶಿಶುನಾಳ ಶರೀಫ, ಕೆ.ಎಸ್.ನ., ಗೋಪಾಲಕೃಷ್ಣ ಅಡಿಗ, ಎಚ್.ಎಸ್.ವೆಂಕಟೇಶಮೂರ್ತಿ, ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಮುಂತಾದ ಕವಿಗಳು ಪೋಣಿಸಿದ ಶಬ್ದಮಾಲೆಗೆ ಜೀವ ತುಂಬಿದವರು.

27 ವರ್ಷಗಳ ಕಾಲ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್‌ನಲ್ಲಿ ಎಕ್ಸಿಕೂಟಿವ್ ಎಂಜಿನಿಯರ್ ಆಗಿ ದುಡಿದು 1992ರಲ್ಲಿ ನಿವೃತ್ತರಾದವರು. 35ಕ್ಕೂ ಹೆಚ್ಚು ಕನ್ನಡ ನಾಟಕಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಮೈಸೂರು ಮಲ್ಲಿಗೆ, ಭೂಲೋಕದಲ್ಲಿ ಯಮರಾಜ, ಆಲೆಮನೆ, ನಾಗಮಂಡಲ, ಸಂತ ಶಿಶುನಾಳ ಶರೀಫ, ಸ್ಪಂದನ, ಚಿನ್ನಾರಿ ಮುತ್ತ, ಮೀರಾ ಮಾಧವ ರಾಘವ, ಮಠ ಮುಂತಾದ 28 ಕನ್ನಡ ಚಿತ್ರಗಳಿಗೂ ಸಂಗೀತ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಅವರು ಹಾಡಿದ “ಕಾಮನ ಬಿಲ್ಲು” ಚಿತ್ರದ ಉಳುವಾ ಯೋಗಿಯ ನೋಡಲ್ಲಿ ಹಾಡು ರೈತ ಗೀತೆಯಾಗಿ ಅಂಗೀಕರಿಸಲ್ಪಟ್ಟಿದೆ. ‘ಮಠ’ ಚಿತ್ರದ ತಪ್ಪು ಮಾಡದವ್ರು ಯಾರವ್ರೆ ಕೂಡ ಜನರ ಬಾಯಲ್ಲಿ ನಲಿದಾಡುತ್ತಿದೆ. ಇವುಗಳಲ್ಲಿ ಕೆಲವು ಚಿತ್ರಗಳಂತೂ ಅಶ್ವತ್ಥ್ ಧ್ವನಿ ಮತ್ತು ಸಂಗೀತದಿಂದಾಗಿಯೇ ಜನಪ್ರಿಯವಾದವು ಎಂಬುದರಲ್ಲಿ ಅತಿಶಯೋಕ್ತಿಯಿರಲಿಲ್ಲ.

ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ, ಬಾರೇ ನನ್ನ ಶಾರದೆ, ಬಾ ಇಲ್ಲಿ ಸಂಭವಿಸು, ಶ್ರಾವಣ ಬಂತು, ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹನು, ಸೋರುತಿಹುದು ಮನೆಯ ಮಾಳಿಗೆ ಅಜ್ಞಾನದಿಂದ, ಗುಡಿಯ ನೋಡಿರಣ್ಣ, ಕೋಡಗನ ಕೋಳಿ ನುಂಗಿತ್ತಾ, ಕುರುಡು ಕಾಂಚಾಣ ಕುಣಿಯುತಲಿತ್ತು, ತರವಲ್ಲ ತಗಿ ನಿನ್ನ ತಂಬೂರಿ, ಒಂದಿರುಳು ಕನಸಿನಲಿ, ನೀ ಹೀಂಗ ನೋಡಬ್ಯಾಡ ನನ್ನ… ಓಹ್…! ಅಶ್ವತ್ಥ್ ಅವರನ್ನು ನೆನಪಿಸಿಕೊಳ್ಳಲು ಎಷ್ಟೊಂದು ಕಾರಣಗಳಿವೆ, ಎಷ್ಟೊಂದು ಸಾಲುಗಳಿವೆ ಮತ್ತು ಎಷ್ಟೊಂದು ಕವನಗಳಿದ್ದಾವೆ?

ಜತೆಗಿದ್ದವರನ್ನು ಹುರಿದುಂಬಿಸುವ, ವಾದ್ಯ ಮೇಳದವರತ್ತ ನಗೆ ಬೀರುತ್ತಾ, ಪ್ರಚೋದಿಸುತ್ತಿದ್ದ, ಪ್ರೋತ್ಸಾಹಿಸುತ್ತಿದ್ದ ರೀತಿ ಅನನ್ಯ. ಕನ್ನಡ ಸುಗಮ ಸಂಗೀತ ಲೋಕದಲ್ಲಿ ಧ್ರುವತಾರೆಯಂತೆ ಬೆಳಗಿ, ವಾಸ್ತವ ಜಗತ್ತಿನ ಜಂಜಾಟಗಳಿಂದ ನಮ್ಮೆಲ್ಲರಿಗೂ ತಮ್ಮ ಗಾಯನ ಸುಧೆಯ ಮೂಲಕ ಸಾಂತ್ವನ ನೀಡುತ್ತಿದ್ದ, ನೊಂದ ಮನಗಳಿಗೆ ಒಂದಷ್ಟು ಶಾಂತಿ ನೀಡುತ್ತಿದ್ದ ಈ ಗಾನ ಗಾರುಡಿಗನ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ.

ಅಶ್ವತ್ಥ್ ಅವರ ಶರೀರವಳಿದರೂ, ಶಾರೀರ ಅಜರ-ಅಮರ. ಬಾ ಇಲ್ಲಿ ಸಂಭವಿಸು ಎಂದು ನಾವವರನ್ನು ಹೃದಯ ತುಂಬಿ ಒಲುಮೆಯಿಂದ ಪ್ರಾರ್ಥಿಸುತ್ತಿರೋಣ. ಅವರ ಅಗಲಿಕೆಯ ನೋವು ಸಹಿಸಿಕೊಳ್ಳುವ ಶಕ್ತಿಯನ್ನು ಆ ದೇವರು ಅಭಿಮಾನಿ ವರ್ಗಕ್ಕೆ ನೀಡಲಿ.

|| ಕನ್ನಡವೇ ಸತ್ಯ, ಕನ್ನಡವೇ ನಿತ್ಯ||
[ವೆಬ್‌ದುನಿಯಾದಲ್ಲಿ ಇಲ್ಲಿ ಪ್ರಕಟವಾಗಿದೆ]

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Share
Published by
Avinash B

Recent Posts

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

3 weeks ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

3 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

3 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

4 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

5 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

10 months ago