ಆಕರ್ಷಕ ಪ್ಯಾಕೇಜ್
ಟೆಕ್‌ನೋ ಸ್ಪಾರ್ಕ್ ಗೋ ಪ್ಲಸ್ ಫೋನ್ ಆಕರ್ಷಕವಾದ ಪ್ಯಾಕೇಜ್ ಜತೆಗಿದೆ. ಬಿಗ್‌ಬಿ ಹೆಸರಿನಲ್ಲಿ ಇಂಗ್ಲಿಷಿನ B ಆಕಾರದ ಗಮನ ಸೆಳೆಯುವ ಪೊಟ್ಟಣದಲ್ಲಿ, ಚಾರ್ಜಿಂಗ್ ಕೇಬಲ್, ಚಾರ್ಜಿಂಗ್ ಅಡಾಪ್ಟರ್ ಈ ಫೋನ್‌ನ ಜೊತೆಗಿದೆ. ಬಿಗ್ ಬಿ ಎಂದು ಕರೆಯಲು ಕಾರಣವೆಂದರೆ ದೊಡ್ಡ ಬ್ಯಾಟರಿ, ದೊಡ್ಡ ಸ್ಕ್ರೀನ್. ಇದೇ ಬಾಕ್ಸ್‌ನಲ್ಲಿ 799 ರೂ. ಮೌಲ್ಯದ ಬ್ಲೂಟೂತ್ ಇಯರ್‌ಪೀಸ್ ಉಚಿತವಾಗಿ ದೊರೆಯುತ್ತಿದೆ.
ವಿನ್ಯಾಸ
6.52 ಇಂಚಿನ ದೊಡ್ಡ HD+ ಡಿಸ್‌ಪ್ಲೇ, ಅದು ಕೂಡ ಇತ್ತೀಚಿನ ಟ್ರೆಂಡ್ ಆಗಿರುವ ಡಾಟ್ ನಾಚ್ ಜೊತೆಗೆ, ಮೊದಲ ನೋಟಕ್ಕೇ ಪ್ರೀಮಿಯಂ ಲುಕ್ ನೀಡುತ್ತದೆ. ಹಿಂಭಾಗದಲ್ಲಿ ಪ್ಲಾಸ್ಟಿಕ್ ಕವಚವಿದ್ದು, ಗ್ರೇಡಿಯೆಂಟ್ ಬಣ್ಣಗಳೊಂದಿಗೆ ಆಕರ್ಷಕವಾಗಿದೆ. ಪ್ಲಾಸ್ಟಿಕ್ ಇರುವ ಕಾರಣ ಈ ಮೊಬೈಲ್‌ನ ತೂಕವೂ ಕಡಿಮೆ. ಹಿಂಭಾಗ ಮತ್ತು ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸಾಮರ್ಥ್ಯದ ಒಂದೊಂದೇ ಲೆನ್ಸ್ ಇರುವ ಕ್ಯಾಮೆರಾ, ಇದರೊಂದಿಗೆ ಎರಡೂ ಬದಿಯಲ್ಲೂ ಫ್ಲ್ಯಾಶ್ ಇದೆ. 2 ಜಿಬಿ RAM, 32 GB ಆಂತರಿಕ ಮೆಮೊರಿ (128 GB ವರೆಗೂ ವಿಸ್ತರಿಸಬಹುದು), ಫೇಸ್ ಅನ್‌ಲಾಕ್ ವ್ಯವಸ್ಥೆಯಿದೆ. ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಪ್ಯಾನೆಲ್, ಕೆಳಗೆ ಸ್ಪೀಕರ್ ಇದ್ದರೆ, ಕೆಳಭಾಗದಲ್ಲಿ ಇಯರ್‌ಫೋನ್ ಅಳವಡಿಸಲು 3.5 ಮಿಮೀ ಜಾಕ್ ಮತ್ತು ಚಾರ್ಜಿಂಗ್/ಬೇರೆ ಸಾಧನಗಳಿಗೆ ಸಂಪರ್ಕಿಸಲು ಮೈಕ್ರೋ ಯುಎಸ್‌ಬಿ ಪೋರ್ಟ್, ಮೈಕ್ ಇದೆ. ಹಿಂಭಾಗದ ಕವರ್ ತೆರೆದ ಬಳಿಕವಷ್ಟೇ ಎರಡು ಸಿಮ್ ಕಾರ್ಡ್ ಅಳವಡಿಸಬಹುದು. ಏಂಬಿಯಂಟ್ ಲೈಟ್ ಸೆನ್ಸರ್ ಇದ್ದು, ರೀಡಿಂಗ್ ಮೋಡ್ ಕೂಡ ಲಭ್ಯವಿರುವುದರಿಂದ ಕಣ್ಣುಗಳಿಗೆ ಹೆಚ್ಚಿನ ರಕ್ಷಣೆಯಿದೆ.
ಸ್ಪೀಕರ್ ಹಿಂಭಾಗದಲ್ಲಿರುವುದು ಹಾಗೂ ಸಿಮ್ ಟ್ರೇ ಇಲ್ಲದಿರುವುದು ಹಳೆಯ ವಿನ್ಯಾಸ ಎಂದು ಮೇಲ್ನೋಟಕ್ಕೆ ಅನಿಸುತ್ತದೆ.
ಗಮನಿಸಬಹುದಾದ ವಿಶೇಷತೆಗಳು
ಇದರಲ್ಲಿರುವ ಸ್ಮಾರ್ಟ್ ಪ್ಯಾನೆಲ್ ಎಂಬ ವೈಶಿಷ್ಟ್ಯದ ಮೂಲಕ, ನಾವು ಹೆಚ್ಚಾಗಿ ಬಳಸುವ ಆ್ಯಪ್‌ಗಳನ್ನು ಒಂದೆಡೆ ಕೂರಿಸಿ, ಅದನ್ನು ಟ್ರೇ ಮಾದರಿಯಲ್ಲಿ ಸ್ವೈಪ್ ಮಾಡುವ ಮೂಲಕ ಶಾರ್ಟ್ ಕಟ್ ಬಳಸಬಹುದು. ಇದರ PHX ಬ್ರೌಸರ್‌ನಲ್ಲಿರುವ ಕೆಲವೊಂದು ಶಾರ್ಟ್ ಕಟ್‌ಗಳನ್ನು ವಿಶೇಷವಾಗಿ ಉಲ್ಲೇಖಿಸಲೇಬೇಕು. ವಾಟ್ಸ್ಆ್ಯಪ್ ಫೈಲ್ ಎಂಬ ಶಾರ್ಟ್ ಕಟ್ ಒತ್ತಿದರೆ, ವಾಟ್ಸ್ಆ್ಯಪ್ ಮೂಲಕ ಬಂದಿರುವ ಫೈಲುಗಳನ್ನು ಚಿತ್ರ, ವಿಡಿಯೊ, ಡಾಕ್ಯುಮೆಂಟ್ ಮತ್ತಿತರ ಪ್ರತ್ಯೇಕ ಫೋಲ್ಡರ್‌ಗಳನ್ನು ಸುಲಭವಾಗಿ ವೀಕ್ಷಿಸಬಹುದು. ಫೈಲ್ಸ್, ಫೈಲ್ ಕ್ಲೀನರ್ ಮುಂತಾದವುಗಳೊಂದಿಗೆ ಅಗತ್ಯ ಆ್ಯಪ್‌ಗಳಾದ ಫೇಸ್‌ಬುಕ್, ಟ್ವಿಟರ್, ಲಿಂಕ್ಡ್ಇನ್ ಮುಂತಾದವುಗಳ ಶಾರ್ಟ್‌ಕಟ್‌ಗಳನ್ನೂ ನಮಗೆ ಬೇಕಾದಂತೆ ಅಳವಡಿಸಬಹುದು, ಅಳಿಸಬಹುದು. ಜತೆಗೆ ಫೋನ್‌ನ ಬಳಕೆದಾರ ಇಂಟರ್ಫೇಸ್ ಅನ್ನು ನಮಗೆ ಇಷ್ಟವಾಗುವ ಫಾಂಟ್‌ಗಳಿಗೆ ಬದಲಾಯಿಸಿ ನೋಡುವ ಆಯ್ಕೆಯೂ ಇದೆ.
ಗೇಮ್ ಮೋಡ್ ಇದೆ, ಮೈಕ್ರೋ ಇಂಟೆಲಿಜೆನ್ಸ್ ವಿಭಾಗದಲ್ಲಿ ತಟ್ಟಿದರೆ ಸ್ಕ್ರೀನ್ ಆನ್ ಮಾಡುವ, ಮೂರು ಬೆರಳುಗಳಿಂದ ಸ್ಕ್ರೀನ್ ಶಾಟ್ ತೆಗೆಯಬಹುದಾದ ಆಯ್ಕೆಗಳಿವೆ. ಫ್ರೀಜರ್ ಎಂಬ ಆ್ಯಪ್ ಮೂಲಕ ಕೆಲವು ಆ್ಯಪ್‌ಗಳು ಹಿನ್ನೆಲೆಯಲ್ಲಿ ಚಲಾವಣೆಯಾಗದಂತೆ, ಈ ಮೂಲಕ ಬ್ಯಾಟರಿ ಮತ್ತು ಡೇಟಾ ಉಳಿತಾಯ ಮಾಡಬಹುದು. ಕಣ್ಣುಗಳ ರಕ್ಷಣೆಗೆ ಐ ಕೇರ್ ವೈಶಿಷ್ಟ್ಯ ಹಾಗೂ ಒಂದೇ ಕೈಯಲ್ಲಿ ಮೊಬೈಲ್ ನ್ಯಾವಿಗೇಟ್ ಮಾಡಬಹುದಾದ ವೈಶಿಷ್ಟ್ಯವೂ ಇದೆ. ಜೊತೆಗೆ, ರೋಲಿಂಗ್ ಎಂಬ ಆ್ಯಪ್ ಮೂಲಕ, ಹೋಂ ಸ್ಕ್ರೀನ್‌ನಲ್ಲಿರುವ ಆ್ಯಪ್‌ಗಳು ಕೆಳಗೆ ಮತ್ತು ಮೇಲೆ ಸರಿಯುವಂತೆ ಮಾಡುತ್ತಾ, ಸಮಯ ಕಳೆಯಬಹುದು!
ಕಾರ್ಯಕ್ಷಮತೆ, ಬ್ಯಾಟರಿ
ಫೇಸ್ ಅನ್‌ಲಾಕ್ ಕ್ಷಿಪ್ರವಾಗಿ ಆಗುತ್ತದೆ. ಕೆಲವೊಮ್ಮೆ ಸಮಸ್ಯೆಯಾಗಿದ್ದು ಬಿಟ್ಟರೆ, ಬೆಳಕು ಕಡಿಮೆ ಇರುವಲ್ಲಿಯೂ ಸ್ಕ್ರೀನ್‌ನ ಬ್ರೈಟ್‌ನೆಸ್ ಹೆಚ್ಚಿಸುವ ಮೂಲಕ ಮುಖಕ್ಕೆ ಬೆಳಕು ಬೀಳುವಂತೆ ಮಾಡಿ, ಗುರುತಿಸುವ ತಂತ್ರಜ್ಞಾನ ಈ ಬಜೆಟ್ ಫೋನ್‌ನಲ್ಲಿರುವುದು ಗಮನ ಸೆಳೆಯುತ್ತದೆ. ಎರಡೂ ಸಿಮ್ ಕಾರ್ಡ್‌ಗಳು 4G VoLTE ಬೆಂಬಲಿಸುತ್ತವೆ.
4000 mAh ಬ್ಯಾಟರಿ ಇರುವುದರಿಂದ ಹೆಚ್ಚಿನ ಕೆಲಸ ಕಾರ್ಯಗಳನ್ನು ಸುಲಭವಾಗಿ ಮಾಡಬಹುದು. ಗೇಮಿಂಗ್ ಮತ್ತು ಫೇಸ್‌ಬುಕ್ ಬ್ರೌಸಿಂಗ್‌ಗೆ ಹೆಚ್ಚು ಬ್ಯಾಟರಿಯ ಅಗತ್ಯ ಇರುವುದರಿಂದ ಗರಿಷ್ಠ ಬಳಕೆ ಮಾಡಿದರೆ ಇಪ್ಪತ್ತನಾಲ್ಕು ಗಂಟೆ ಬ್ಯಾಟರಿಗೆ ಸಮಸ್ಯೆಯಿಲ್ಲ. ಕೇವಲ ಕರೆ, ವಾಟ್ಸ್ಆ್ಯಪ್ ಮತ್ತೊಂದಿಷ್ಟು ಸೀಮಿತ ಬ್ರೌಸಿಂಗ್ ಮಾಡುವುದಿದ್ದರೆ, ಮೂರ್ನಾಲ್ಕು ದಿನಗಳ ಕಾಲವೂ ಬ್ಯಾಟರಿ ಚಾರ್ಜ್ ಉಳಿದಿದೆ. ಫಾಸ್ಟ್ ಚಾರ್ಜಿಂಗ್ ಇಲ್ಲ ಎಂಬುದು ಗಮನಿಸಬೇಕಾಗುತ್ತದೆ. ಈ ದರದಲ್ಲಿ ಅದನ್ನು ನಿರೀಕ್ಷಿಸುವುದೂ ತಪ್ಪು.
ಆಂಡ್ರಾಯ್ಡ್‌ನ ಪೈ ಕಾರ್ಯಾಚರಣಾ ವ್ಯವಸ್ಥೆಯ ಕಡಿಮೆ ತೂಕದ ‘ಗೋ’ ಆವೃತ್ತಿಯ ಆಧಾರದಲ್ಲಿ ಹಾಯ್ ಒಎಸ್ 5.5.2 ಮೂಲಕ ಈ ಫೋನ್ ಕೆಲಸ ಮಾಡುತ್ತದೆ. ಇದರಲ್ಲಿ ‘ಗೋ’ ಅಂದರೆ ಕಡಿಮೆ ತೂಕದ ಆ್ಯಪ್‌ಗಳು ಅಳವಡಿಕೆಯಾಗಿ ಬರುತ್ತವೆ. ಆದರೆ ಕೆಲವೊಂದು ಥರ್ಡ್ ಪಾರ್ಟ್ ಆ್ಯಪ್‌ಗಳು ಸಾಕಷ್ಟು ಜಾಹೀರಾತುಗಳನ್ನು ಪಾಪ್ ಅಪ್ ಮಾಡುವುದರಿಂದ ಒಂದಿಷ್ಟು ಕಿರಿಕಿರಿ ಎನ್ನಿಸುತ್ತವೆ. ಅಲ್ಲದೆ, ನಮಗೆ ಬೇಕಾಗಿರುವ ಆ್ಯಪ್‌ಗಳ ನೋಟಿಫಿಕೇಶನ್‌ಗಳ ನಡುವೆ, ಅನಗತ್ಯವಾದವೂ ಸೇರಿಕೊಳ್ಳುತ್ತವೆಯಾದುದದರಿಂದ, ಅವುಗಳನ್ನು ಫಿಲ್ಟರ್ ಮಾಡುವ ಆಯ್ಕೆಯಂತೂ ಹೆಚ್ಚು ಉಪಯೋಗಕ್ಕೆ ಬರುತ್ತದೆ.
ಕ್ಯಾಮೆರಾ
ಈಗ ಎರಡ್ಮೂರು ಲೆನ್ಸ್‌ಗಳಿರುವ ಕ್ಯಾಮೆರಾಗಳು ಬರುತ್ತಿವೆಯಾದರೂ, ಬಜೆಟ್ ಫೋನ್‌ನಲ್ಲಾದುದರಿಂದ ಒಂದೊಂದೇ ಲೆನ್ಸ್ ಇದೆ. ಅದು ಕೂಡ 8 ಮೆಗಾಪಿಕ್ಸೆಲ್ ಕ್ಯಾಮೆರಾ. ಹಿಂಭಾಗದ ಕ್ಯಾಮೆರಾ ಈ ಬಜೆಟ್‌ಗೆ ತಕ್ಕಂತೆ ಸರಾಸರಿಗಿಂತ ಸ್ವಲ್ಪ ಚೆನ್ನಾಗಿರುವ ಚಿತ್ರ/ವಿಡಿಯೊ ಒದಗಿಸುತ್ತದೆ. ಬೊಕೆ ಮೋಡ್ ಮೂಲಕ ಹಿನ್ನೆಲೆಯನ್ನು ಮಸುಕುಗೊಳಿಸಿ, ಸಬ್ಜೆಕ್ಟ್ ಮೇಲೆ ಮಾತ್ರ ಫೋಕಸ್ ಮಾಡಿದ ಚಿತ್ರ ಒದಗಿಸುತ್ತದೆ. ಸಾಮಾನ್ಯ ಚಿತ್ರಗಳು ಸಾಕೆಂದಾದರೆ, ಈ ಬಜೆಟ್ ಫೋನ್ ಉತ್ತಮ ಆಯ್ಕೆ. ಕಡಿಮೆ ಬೆಳಕಿನಲ್ಲಿ ಉತ್ತಮ ಪರಿಣಾಮಕಾರಿ ಚಿತ್ರ ಅಥವಾ ವಿಡಿಯೊ ದೊರೆಯುವಂತೆ ಫ್ಲ್ಯಾಶ್ ಬೆಂಬಲ ಒದಗಿಸುತ್ತದೆ. ಈ ಫೋನ್‌ನ ಬೆಲೆಗೆ ತಕ್ಕಂತೆ ಗುಣಮಟ್ಟ ಇರುತ್ತದೆ ಎಂಬುದು ನೆನಪಿನಲ್ಲಿಡಬೇಕು. ಹೊರಾಂಗಣದಲ್ಲಿ ತೆಗೆದ ಫೋಟೋಗಳು ಉತ್ತಮ ಗುಣಮಟ್ಟದಲ್ಲಿದ್ದವು. ಬೊಕೇ ಮೋಡ್ ಬಳಸಿ ತೆಗೆದ ನೈದಿಲೆಯ ಫೋಟೋ ಆಕರ್ಷಕವಾಗಿದೆ.
ಮೀಡಿಯಾಟೆಕ್ ಹಿಲಿಯೊ ಎ22 ಚಿಪ್‌ಸೆಟ್ ಬಳಸಲಾಗಿದೆ. ಫೋನ್ ಬೆಲೆ 6299 ರೂ. ಎಂಬುದನ್ನು ಪರಿಗಣಿಸಿ ಇದರ ಕಾರ್ಯಕ್ಷಮತೆಯನ್ನು ನೋಡಿದರೆ ಈ ಬೆಲೆಗೆ ಒಳ್ಳೆಯ ಫೋನ್ ಎನ್ನಬಹುದು.
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…