Tax Refund ಹೆಸರಲ್ಲಿ ಬರುವ SMS, ಲಿಂಕ್ ಬಗ್ಗೆ ಎಚ್ಚರ!

ಆನ್‌ಲೈನ್ ಜಗತ್ತಿನಲ್ಲಿ ವಂಚನೆಗೂ ಟ್ರೆಂಡ್ ಎಂಬುದಿದೆ. ಈಗಿನ ಟ್ರೆಂಡ್ ಎಂದರೆ, ಇನ್‌ಕಂ ಟ್ಯಾಕ್ಸ್ ಹೆಸರಲ್ಲಿ ವಂಚನೆ!

ಆದಾಯ ತೆರಿಗೆ ರಿಟರ್ನ್ಸ್ (ಕಳೆದ ಹಣಕಾಸು ವರ್ಷದಲ್ಲಿ ನಮ್ಮ ವೈಯಕ್ತಿಕ ಆದಾಯ, ಉಳಿತಾಯ ಮುಂತಾದವುಗಳ ಲೆಕ್ಕ ತೋರಿಸುವುದು) ಫೈಲ್ ಮಾಡಲು ಜು.31 ಇದ್ದ ಕೊನೆಯ ದಿನಾಂಕವನ್ನು ಒಂದು ತಿಂಗಳು ವಿಸ್ತರಿಸಲಾಗಿದೆ. ಹಿಂದಿನ ವರ್ಷದ ಆದಾಯಕ್ಕೆ ಸಂಬಂಧಿಸಿದಂತೆ ಮೂಲದಲ್ಲೇ ತೆರಿಗೆ (ಟಿಡಿಎಸ್) ಕಟ್ ಆಗಿದ್ದಿದ್ದರೆ, ಸೂಕ್ತ ಉಳಿತಾಯ ದಾಖಲೆಗಳನ್ನು ತೋರಿಸಿದ್ದರೆ, ಕಟ್ಟಿದ ತೆರಿಗೆಯು ನಿಮಗೆ ವಾಪಸು (ರೀಫಂಡ್) ಸಿಗುತ್ತದೆ. ಈ ರೀಫಂಡ್ ಕುರಿತ ಸಂದೇಶದ ಆಮಿಷದೊಂದಿಗೆ ವಂಚಕರು ಕಾದು ಕುಳಿತಿರುತ್ತಾರೆ.

ಇಲ್ಲಿ ವಂಚನೆ ಹೇಗಾಗುತ್ತದೆ? ನಿಮಗೊಂದು ಎಸ್ಎಂಎಸ್ ಸಂದೇಶ/ಇಮೇಲ್ ಬರುತ್ತದೆ. ಅದರಲ್ಲಿನ ಒಕ್ಕಣೆ ಹೇಗಿರುತ್ತದೆಯೆಂದರೆ, “ನಿಮಗೆ ಇಂತಿಷ್ಟು ರೂಪಾಯಿ ಆದಾಯ ತೆರಿಗೆ ರೀಫಂಡ್‌ಗೆ ಅನುಮೋದನೆ ದೊರೆತಿದೆ. ಅದನ್ನು ಶೀಘ್ರವೇ ನಿಮ್ಮ ಬ್ಯಾಂಕ್ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ. ಈ ಬ್ಯಾಂಕ್ ಖಾತೆ XXXXX4865 ತಪ್ಪಿದೆಯೆಂದಾದರೆ, ತಕ್ಷಣವೇ ಈ ಲಿಂಕ್ ಕ್ಲಿಕ್ ಮಾಡಿ, ನಿಮ್ಮ ಬ್ಯಾಂಕ್ ವಿವರಗಳನ್ನು ಸರಿಪಡಿಸಿಕೊಳ್ಳಿ”. ಹಣ ಬರುತ್ತದೆಯೆಂದಾದರೆ ಯಾರಿಗೆ ಬೇಡ? ಲಿಂಕ್ ಕ್ಲಿಕ್ ಮಾಡುತ್ತೇವೆ. ತೆರೆದುಕೊಳ್ಳುವ ಪುಟವು ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟಿನಂತೆಯೇ ಗೋಚರಿಸುತ್ತದೆ. ಹೀಗಾಗಿ ಅಲ್ಲಿರುವ ಫಾರ್ಮ್‌ನಲ್ಲಿ ಬ್ಯಾಂಕ್ ಖಾತೆಯ ಎಲ್ಲ ವಿವರಗಳನ್ನು ಭರ್ತಿ ಮಾಡುತ್ತೇವೆ. ಇದಕ್ಕಾಗಿಯೇ ಕಾದು ಕೂತಂತಿರುವವರು ನಿಮ್ಮ ಬ್ಯಾಂಕ್ ಖಾತೆಯಲ್ಲಿರಬಹುದಾದ ಹಣವನ್ನೆಲ್ಲ ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳಲು ಸಿದ್ಧರಾಗುತ್ತಾರೆ! ಹೀಗಾಗಿ ನಿಮಗಿದು ಎಚ್ಚರಿಕೆ ನೀಡುವ ಲೇಖನ.

ಈ ಎಸ್ಸೆಮ್ಮೆಸ್ ಅಥವಾ ಇಮೇಲ್‌ನಲ್ಲಿರುವ ಲಿಂಕ್ ಸರಿಯಾಗಿ ಗಮನಿಸಿ. ಸಂದೇಶದಲ್ಲಿರುವುದು ಶಾರ್ಟ್ ಯುಆರ್‌ಎಲ್. ಅದನ್ನು ಕ್ಲಿಕ್ ಮಾಡಿದರೆ, ಅದರ ನಿಜವಾದ ಗಮ್ಯ ಸ್ಥಾನಕ್ಕೆ ಹೋಗುತ್ತದೆ. ಅದು ಇನ್‌ಕಂ ಟ್ಯಾಕ್ಸ್ ಇಲಾಖೆಯದ್ದಲ್ಲ ಅಥವಾ ಭಾರತೀಯ ರಿಸರ್ವ್ ಬ್ಯಾಂಕಿನದೂ ಅಲ್ಲ. ಯಾವುದೋ ನಂಬರುಗಳಿದ್ದು, ಏನೇನೋ ಪದಗಳು ಕೂಡ ಇರಬಹುದು. ಆರ್‌ಬಿಐ ವೆಬ್ ತಾಣದ (https://rbi.org.in/) ಯುಆರ್‌ಎಲ್ ರೀತಿಯಲ್ಲೇ ಹೋಲುವ ಸೈಟುಗಳೂ ಇರುತ್ತವೆ ಎಂಬುದು ಗಮನದಲ್ಲಿರಲಿ. ಉದಾಹರಣೆಗೆ: www.indiareserveban.org, www.rbi.org, www.rbi.in, http://www.rbi-inonline.org/savings.html ಇತ್ಯಾದಿ. ಇವು ನಿಮ್ಮ ಯೂಸರ್‌ನೇಮ್, ಪಾಸ್‌ವರ್ಡ್, ಬ್ಯಾಂಕ್/ಕ್ರೆಡಿಟ್ ಕಾರ್ಡ್ ಮಾಹಿತಿ, ಮುಂತಾದವನ್ನು ಕದಿಯಬಲ್ಲ ಫಿಶ್ಶಿಂಗ್ (Phishing) ವೆಬ್ ತಾಣಗಳಾಗಿರಬಹುದು ಅಥವಾ ಕುತಂತ್ರಾಂಶಗಳನ್ನು (ಮಾಲೀಷಿಯಸ್ ಸಾಫ್ಟ್‌ವೇರ್ ಅಥವಾ ಮಾಲ್‌ವೇರ್) ನಿಮ್ಮ ಸಿಸ್ಟಂಗೆ ಅಳವಡಿಸಿ, ನಿಮ್ಮೆಲ್ಲ ಮಾಹಿತಿಯನ್ನು ಕದಿಯಬಲ್ಲ ತಾಣಗಳೂ ಆಗಿರಲೂಬಹುದು.

ಎಸ್ಎಂಎಸ್ ಮೂಲಕವೂ ಜನರು ಹಣ ಕಳೆದುಕೊಳ್ಳಬಹುದು ಎಂಬುದಕ್ಕಿದು ಸಾಕ್ಷಿ. ಮೋದಿ ನಿಮ್ಮ ಖಾತೆಗೆ 200 ರೂಪಾಯಿ ರೀಚಾರ್ಜ್ ಮಾಡುತ್ತಾರೆ, ಕ್ಲಿಕ್ ಮಾಡಿ ಎಂಬ ರೀತಿಯ ಸಂದೇಶವುಳ್ಳ ಲಿಂಕ್ ಕೂಡ ಬರಬಹುದು. ಕ್ಲಿಕ್ ಮಾಡಿದರೆ, ಅಲ್ಲಿ ನಿಮ್ಮೆಲ್ಲ ಗೌಪ್ಯ ಮಾಹಿತಿಯನ್ನು ದಾಖಲಿಸುವ ಪುಟ ತೆರೆದುಕೊಳ್ಳುತ್ತದೆ. ಇಂಥವೆಲ್ಲ ಫೇಕ್ ಸಂದೇಶಗಳೇ. ಎಸ್ಎಂಸ್‌ನಲ್ಲಿ, ವಾಟ್ಸ್ಆ್ಯಪ್ ಮೂಲಕ ಬರಬಹುದಾದ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮುನ್ನ ಈ ಅಂಕಣವನ್ನು ನೆನಪಿಸಿಕೊಳ್ಳಿ.

ಗಮನಿಸಿ: ನಿರ್ದಿಷ್ಟವಾದ ದಿನವೊಂದರಲ್ಲಿ ಯಾವುದಾದರೂ ಪದವೊಂದು ಹ್ಯಾಶ್‌ಟ್ಯಾಗ್ (ಆ ಪದದ ಹಿಂದೆ ಹ್ಯಾಶ್ ಮಾರ್ಕ್ ‘#’ ಕೂರಿಸುವುದು) ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡಿದರೆ, ಅದನ್ನು ಆ ದಿನದ ಟ್ರೆಂಡಿಂಗ್ ವಿಷಯ ಅಂತ ಆನ್‌ಲೈನ್ ಮಂದಿ ಕರೆಯುತ್ತಾರೆ (ಸಾಮಾಜಿಕ ಜಾಲತಾಣಗಳನ್ನು ಅಷ್ಟಾಗಿ ಬಳಸದವರಿಗಾಗಿ ಈ ಮಾಹಿತಿ).

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ., ಆಗಸ್ಟ್ 6, 2018 ಅಂಕಣ

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

3 weeks ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

3 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

3 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

4 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

5 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

10 months ago