ಈ ರೀತಿಯ ಮಾಲ್‌ವೇರ್‌ಗಳು (ಜನಸಾಮಾನ್ಯರ ಭಾಷೆಯಲ್ಲಿ ವೈರಸ್ ತಂತ್ರಾಂಶಗಳು) ಯಾವ ರೂಪದಲ್ಲಿ ಬರಬಹುದು ಎಂಬುದರ ಬಗ್ಗೆ ನಾವು ಎಚ್ಚರಿಕೆ ವಹಿಸಿದರೆ ಹೆಚ್ಚಿನ ಅಪಾಯ ತಡೆಗಟ್ಟಬಹುದು. ಇದಕ್ಕಾಗಿ ಕಂಪ್ಯೂಟರುಗಳು, ಸ್ಮಾರ್ಟ್‌ಫೋನ್ ಮುಂತಾದ ಎಲೆಕ್ಟ್ರಾನಿಕ್ ಸಾಧನಗಳಿಗೆ ಆ್ಯಂಟಿ-ವೈರಸ್ ತಂತ್ರಾಂಶಗಳನ್ನು ಅಳವಡಿಸಿಕೊಂಡಿದ್ದರೂ, ಅವುಗಳನ್ನು ಭೇದಿಸಿ ಆಗಾಗ್ಗೆ ಹ್ಯಾಕರ್‌ಗಳು ತಮ್ಮ ಕು-ತಂತ್ರಾಂಶಗಳನ್ನು ಜನರಿಗೆ ಕಳುಹಿಸುತ್ತಲೇ ಇರುತ್ತಾರೆ. ಹೀಗಾಗಿ ಜನ ಸಾಮಾನ್ಯರು ಏನು ಮಾಡಬಹುದು? ಮುಂದೆ ಓದಿ.
ಮೊದಲನೆಯದಾಗಿ ಕಂಪ್ಯೂಟರ್, ಅದರಲ್ಲಿರುವ ಬ್ರೌಸರ್ ಸಹಿತ ವಿಭಿನ್ನ ತಂತ್ರಾಂಶಗಳು, ಆ್ಯಪ್‌ಗಳಿಗೆ ಆಗಾಗ್ಗೆ ತಯಾರಕರು ಸೆಕ್ಯುರಿಟಿ ಪ್ಯಾಚ್ ಅಥವಾ ಅಪ್‌ಡೇಟ್ ಹೆಸರಿನಲ್ಲಿ ತಂತ್ರಾಂಶದ ಪರಿಷ್ಕೃತ ಆವೃತ್ತಿಗಳನ್ನು ಇಂಟರ್ನೆಟ್ ಸಂಪರ್ಕದ ಮೂಲಕ ಕಳುಹಿಸುತ್ತಿರುತ್ತಾರೆ. ಅವುಗಳನ್ನು ಅಳವಡಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಕಂಪ್ಯೂಟರ್‌ಗಳಲ್ಲಿ ವಿಂಡೋಸ್ ಸೆಟ್ಟಿಂಗ್‌ನಲ್ಲಿ ವಿಂಡೋಸ್ ಅಪ್‌ಡೇಟ್ ಎಂಬ ವ್ಯವಸ್ಥೆಯಿರುತ್ತದೆ. ಅದನ್ನು ಸ್ವಯಂಚಾಲಿತವಾಗಿ ಅಪ್‌ಡೇಟ್‌ಗಳಿಗಾಗಿ ಪರೀಕ್ಷಿಸುವಂತೆ ಹೊಂದಿಸಿಕೊಳ್ಳಬಹುದು. ಅಥವಾ ನಾವಾಗಿಯೇ ಪದೇ ಪದೇ ವಿಂಡೋಸ್ ಅಪ್‌ಡೇಟ್ ಕ್ಲಿಕ್ ಮಾಡುವ ಮೂಲಕ ಹೊಸದಾಗಿ ಏನಾದರೂ ತಂತ್ರಾಂಶ ಅಪ್‌ಡೇಟ್ಸ್ ಬಂದಿವೆಯೇ ಅಂತ ನೋಡಿಕೊಂಡು ಅಳವಡಿಸಿಕೊಳ್ಳಬಹುದು.
ಈ ಅಪ್‌ಡೇಟ್‌ಗಳಲ್ಲಿ ಆಯಾ ತಂತ್ರಾಂಶದ ಪರಿಷ್ಕೃತ ರೂಪಗಳಲ್ಲದೆ ಹೊಸದಾಗಿ ಕಾಣಿಸಿಕೊಂಡಿರುವ ಮಾಲ್‌ವೇರ್‌ಗಳಿಂದ (ವೈರಸ್‌ಗಳಿಂದ) ರಕ್ಷಣೆಯ ವ್ಯವಸ್ಥೆಯೂ ಇರಬಹುದು. ವಿಶೇಷವಾಗಿ ಬ್ರೌಸರ್‌ಗಳ ಮೂಲಕವೇ ಈ ಕು-ತಂತ್ರಾಂಶಗಳು ಹೆಚ್ಚಾಗಿ ಹರಡುವುದರಿಂದ ಬ್ರೌಸರ್ ಅಪ್‌ಡೇಟ್‌ಗಳೇ ಹೆಚ್ಚಿರುತ್ತವೆ. ಈ ಮೂಲಭೂತ ಕ್ರಮವನ್ನು ಅನುಸರಿಸಿದ ಬಳಿಕ, ಉಳಿದಂತೆ ನಮ್ಮ ವಿವೇಚನೆ ಬಳಸಬೇಕಾದ ವಿಚಾರಗಳು ಇಲ್ಲಿವೆ.
* ನಿಮಗೆ ಬಂದಿರುವ ಯಾವುದೇ ಇಮೇಲ್‌ನಲ್ಲಿರುವ ಅಟ್ಯಾಚ್‌ಮೆಂಟ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು, ಕ್ಲಿಕ್ ಮಾಡುವ ಮುನ್ನ ಯೋಚಿಸಿ. ಅದು ಪಿಡಿಎಫ್, ಫೋಟೋ, ಡಾಕ್ಯುಮೆಂಟ್ ಮುಂತಾದ ರೂಪಗಳಲ್ಲಿರಬಹುದು. ನಿಮಗೆ ತಿಳಿದವರು ಕಳುಹಿಸಿದ್ದರೂ ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕೇ ಎಂಬುದನ್ನು ಎರಡೆರಡು ಬಾರಿ ಯೋಚಿಸಿ. ಬೇಕಿದ್ದರೆ, ಕಳುಹಿಸಿದವರಿಗೆ ಫೋನ್ ಮಾಡಿ ಖಚಿತಪಡಿಸಿಕೊಂಡ ಬಳಿಕವಷ್ಟೇ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಎಚ್ಚರಿಕೆ ಯಾಕೆಂದರೆ, ಕು-ತಂತ್ರಾಂಶಗಳು ನೋಡಲು ಪಿಡಿಎಫ್ ಫೈಲ್‌ನಂತೆಯೋ ಅಥವಾ ವರ್ಡ್, ಎಕ್ಸೆಲ್, ಜೆಪಿಜಿ ಫೈಲ್‌ಗಳಂತೆಯೋ ಕಾಣಿಸಬಹುದು. ಕ್ಲಿಕ್ ಮಾಡಿದರೆ ಅದರಲ್ಲಿರಬಹುದಾದ ಎಕ್ಸಿಕ್ಯೂಟೆಬಲ್ (ಇಎಕ್ಸ್‌ಇ ರೂಪದ) ಫೈಲ್ ನಿಮ್ಮ ಕಂಪ್ಯೂಟರಿಗೆ ಅಥವಾ ಸ್ಮಾರ್ಟ್ ಸಾಧನಕ್ಕೆ ತಾನಾಗಿ ಅಳವಡಿಕೆಯಾಗಬಹುದು. ಮತ್ತು ನಿಮ್ಮ ಕಂಪ್ಯೂಟರ್/ಮೊಬೈಲ್‌ನಲ್ಲಿರುವ ಎಲ್ಲ ಖಾಸಗಿ ಮಾಹಿತಿಯನ್ನು ಅದನ್ನು ಕಳುಹಿಸಿದವರ ಸರ್ವರ್‌ಗೆ ರವಾನಿಸಬಹುದು. ಇದರಿಂದ ಬ್ಯಾಂಕ್ ಲಾಗಿನ್ ಮಾಹಿತಿಗಳು, ಕ್ರೆಡಿಟ್ ಕಾರ್ಡ್ ಮಾಹಿತಿ ಕೂಡ ರವಾನೆಯಾಗಿ, ಅವೆಲ್ಲವೂ ಹ್ಯಾಕರ್‌ಗಳ ಕೈಗೆ ಸಿಲುಕುವ ಸಾಧ್ಯತೆಯಿರುತ್ತದೆ.
* ಕೆಲವೊಂದು ಇಮೇಲ್‌ಗಳು ಕೂಡ ಕ್ಲಿಕ್ ಮಾಡುವಂತೆ ನಿಮ್ಮನ್ನು ಪ್ರೇರೇಪಿಸಬಹುದು. ಉದಾಹರಣೆಗೆ ಹೆಚ್ಚಿನ ವಿವರಗಳಿಗಾಗಿ ಅಟ್ಯಾಚ್‌ಮೆಂಟ್ ನೋಡಿ ಅಂತ ಬರೆದಿರಬಹುದು. ನಿಮಗೆ ಲಾಟರಿ ಬಂದಿದೆ, ವಿವರಗಳಿಗಾಗಿ ಅಟ್ಯಾಚ್‌ಮೆಂಟ್ ನೋಡಿ ಅಂತಲೂ ಹೇಳಬಹುದು.
* ವಂಚಕರು ಮತ್ತೊಂದು ಹೊಸ ವಿಧಾನ ಕಂಡುಕೊಂಡಿರುವುದು ಎಸ್ಸೆಮ್ಮೆಸ್ ಹಾಗೂ ವಾಟ್ಸಾಪ್ ಮತ್ತಿತರ ಸಾಮಾಜಿಕ ಜಾಲತಾಣಗಳ ಮೂಲಕ ಸಂದೇಶದ ಮೂಲಕ. ‘ಐನೂರು ರೂಪಾಯಿ ಟಾಕ್‌ಟೈಮ್ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ’ ಅಂತಲೋ, ‘ನಿಮ್ಮ ವ್ಯಾಲಿಡಿಟಿಯನ್ನು ಮೂರು ತಿಂಗಳ ಕಾಲ ಉಚಿತವಾಗಿ ವಿಸ್ತರಿಸಲು ಇದನ್ನು ಕ್ಲಿಕ್ ಮಾಡಿ’ ಅಂತಲೋ ಬರೆದಿರುತ್ತದೆ. ಅಲ್ಲಿರುವ ಲಿಂಕ್‌ಗಳನ್ನು ನೋಡಿದರೆ, ನಿಮ್ಮ ಟೆಲಿಕಾಂ ಆಪರೇಟರುಗಳೇ ಕಳುಹಿಸಿದಂತಿರುತ್ತದೆ. ಅದರಲ್ಲಿ ಬರೆದಿರುವುದನ್ನು ನೋಡಿದ ನಾವು, ಕ್ಲಿಕ್ ಮಾಡದೇ ಇರುವುದು ಸಾಧ್ಯವೇ ಇಲ್ಲ, ಹಾಗಿರುತ್ತದೆ ಅದರ ಒಕ್ಕಣೆ. ಅದರ ಜತೆಗೆ, ನಮ್ಮ ಸ್ನೇಹಿತರೇ ಇದನ್ನು ಫಾರ್ವರ್ಡ್ ಮಾಡಿದ್ದಲ್ಲವೇ, ನಿಜ ಇರಬಹುದು ಎಂಬ ಒಣ ಹೆಮ್ಮೆ ಬೇರೆ. ಇತ್ತೀಚೆಗೆ ಜಿಯೋ ಬಂದ ನಂತರವಂತೂ ವೈವಿಧ್ಯಮಯ ಆಫರ್‌ಗಳನ್ನು ಮುಂದಿಟ್ಟು ವಂಚಕರು ಖಾಸಗಿ ಮಾಹಿತಿ ಪಡೆಯಲು ಗಾಳ ಹಾಕಿದ್ದೇ ಹಾಕಿದ್ದು. ಅದನ್ನು ಒಂಚೂರೂ ಯೋಚನೆ ಮಾಡದೆ ನಾವೆಲ್ಲ ಗ್ರೂಪುಗಳಿಗೆ ಫಾರ್ವರ್ಡ್ ಮಾಡಿದ್ದೇ ಮಾಡಿದ್ದು. ನೆನಪಿಡಿ. ಯಾವುದೇ ಟೆಲಿಕಾಂ ಕಂಪನಿಗಳು ವಾಟ್ಸಾಪ್ ಮೂಲಕ ತಮ್ಮ ಕೊಡುಗೆಗಳನ್ನು ಪ್ರಚಾರ ಮಾಡುವುದಿಲ್ಲ. ಏನಿದ್ದರೂ ಆಯಾ ವೆಬ್‌ಸೈಟುಗಳಲ್ಲಿರುತ್ತವೆ.
* ಇನ್ನು ಕೆಲವು ಇಮೇಲ್‌ಗಳು, ನಿಮ್ಮದೇ ಬ್ಯಾಂಕಿನಿಂದ ಬಂದವುಗಳ ರೀತಿ ಕಾಣಿಸುತ್ತವೆ. ಅಥವಾ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ (ಆರ್‌ಬಿಐ) ಬಂದಿರುವ ಹಾಗಿರುತ್ತವೆ. ‘ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಕ್ಲಿಕ್ ಮಾಡಿ’ ಅಂತಲೋ ‘ನಿಮ್ಮ ಬ್ಯಾಂಕ್ ಖಾತೆ ಡೀಆ್ಯಕ್ಟಿವೇಟ್ ಆಗುವುದನ್ನು ತಡೆಯಲು ತಕ್ಷಣವೇ ನಿಮ್ಮ ಕುರಿತು ಇಲ್ಲಿ ಮಾಹಿತಿ ಕೊಡಿ’ ಅಂತಲೋ ಲಿಂಕ್ ಬಂದಿರುತ್ತವೆ. ನಿರ್ಲಕ್ಷಿಸಿ. ಬ್ಯಾಂಕುಗಳು ಯಾವತ್ತೂ ಈ ರೀತಿಯ ಮೇಲ್‌ಗಳನ್ನು ಕಳುಹಿಸುವುದಿಲ್ಲ.
* ಉಚಿತ ಟಾಕ್ ಟೈಮ್ ಅಥವಾ ಉಚಿತ ಮೊಬೈಲ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ಅಂತೆಲ್ಲ ಆಮಿಷವೊಡ್ಡುವ ಅದೆಷ್ಟೋ ಸಂದೇಶಗಳು ಫೇಸ್‌ಬುಕ್, ಟ್ವಿಟರಿನಲ್ಲಿಯೂ ಹರಿದಾಡುತ್ತಿರುತ್ತವೆ. ಕಂಪನಿಗಳು ಉಚಿತವಾಗಿ ಕೊಡಲು ಅವರಿಗೇನು ದುಡ್ಡು ಜಾಸ್ತಿಯಾಗಿರುತ್ತದೆಯೇ? ಅಂತ ಒಂದು ಕ್ಷಣ ಯೋಚಿಸಿ ನೋಡಿದರೆ, ನೀವದನ್ನು ಕ್ಲಿಕ್ ಮಾಡುವುದಿಲ್ಲ. ಅದೇ ರೀತಿ, ‘ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಮಾಹಿತಿಯನ್ನು ಸರಿಪಡಿಸದಿದ್ದರೆ ವಾಟ್ಸಾಪ್ ಖಾತೆ ಬ್ಲಾಕ್ ಆಗುತ್ತದೆ’ ಎಂಬಂಥ ಸಂದೇಶಗಳೂ ಬಂದಿರಬಹುದು. ನೆನಪಿಡಿ, ಇಂಥವನ್ನು ಫಾರ್ವರ್ಡ್ ಮಾಡುವುದಿಲ್ಲವೆಂದು ಪಣ ತೊಟ್ಟು, ಸ್ನೇಹಿತರನ್ನೂ ರಕ್ಷಿಸಿ, ನಿಮ್ಮನ್ನೂ ರಕ್ಷಿಸಿಕೊಳ್ಳಿ.
ಇದನ್ನು ಯಾಕೆ ಬರೆಯಬೇಕಾಯಿತೆಂದರೆ, ವನ್ನಾಕ್ರೈ ಎಂಬ ರ‍್ಯಾನ್ಸಮ್‌ವೇರ್ (ಸುಲಿಗೆ ತಂತ್ರಾಂಶ), ನಂತರ ಇತ್ತೀಚೆಗೆ ಲಾಕಿ ಹೆಸರಿನ ಕು-ತಂತ್ರಾಂಶದ ಹಾವಳಿ ಜಾಸ್ತಿಯಾಗಿದೆ. ನಿಮ್ಮ ಫೋನ್ ಅಥವಾ ಕಂಪ್ಯೂಟರನ್ನು ಲಾಕ್ ಮಾಡುವ ಕು-ತಂತ್ರಾಂಶವಿದು. ಅನ್‌ಲಾಕ್ ಮಾಡಬೇಕಿದ್ದರೆ ಹಣ ಕೊಡಬೇಕು ಎಂಬ ಸುಲಿಗೆ ತಂತ್ರಗಳಿವು. ಸಣ್ಣಪುಟ್ಟ ಆಮಿಷಗಳಿಗಾಗಿ ಕ್ಲಿಕ್ ಮಾಡಲು ಹೋಗಿ, ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವವರನ್ನು ಈಗಲೂ ಕಾಣುತ್ತೇವೆ. ಹೀಗಾಗಿ, ಏನೇ ಕ್ಲಿಕ್ ಮಾಡುವುದಿದ್ದರೂ ಈ ಲೇಖನ ನೆನಪಿಸಿಕೊಳ್ಳಿ.
ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಜಯ ಕರ್ನಾಟಕ ಅಂಕಣ, 11 ಸೆಪ್ಟೆಂಬರ್ 2017
vijaykarnataka.indiatimes.com/tech/technowalert-to-virus-attack-in-computers/articleshow/60444670.cms
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.