ಬೆಳ್ತಂಗಡಿ: “ಗಣನಾಯಕಾಯ ಗಣದೈವತಾಯ”; “ನೀಡು ಶಿವ, ನೀಡದಿರು ಶಿವಾ”; “ನೀನೇ ರಾಮ, ನೀನೇ ಶ್ಯಾಮ” – ಈ ಭಕ್ತಿಭಾವ ಸ್ಫುರಿಸುವ ಹಾಡುಗಳನ್ನು 8ನೇ ತರಗತಿಯ ಪೋರ ಅರ್ಮಾನ್ ರಿಯಾಝ್ ಬಾಯಲ್ಲಿ ಕೇಳಿದ ಪ್ರೇಕ್ಷಕರು, ಆ ಧ್ವನಿಗೆ ಮಂತ್ರಮುಗ್ಧರಾಗಿ ತಲೆದೂಗುತ್ತಿದ್ದರು.
ತೀರ್ಥಹಳ್ಳಿಯ ಯಡೂರಿನಲ್ಲಿ ಇತ್ತೀಚೆಗೆ ನಡೆದ ಗಣೇಶೋತ್ಸವದ ಸನ್ನಿವೇಶವಿದು. ಅದೇ ರೀತಿ, ಇತ್ತೀಚೆಗೆ ಬೆಳ್ತಂಗಡಿಯಲ್ಲಿ ನಡೆದಿದ್ದ ಸರಕಾರಿ ಪ್ರೌಢಶಾಲಾ ಶಿಕ್ಷಕರ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಮಾವೇಶದಲ್ಲಿ ಜಯಂತ ಕಾಯ್ಕಿಣಿ ರಚನೆಯ “ಗುರುವೆ ನಿಮಗೆ ಶರಣು ನಾವು ಭಾವಪೂರ್ಣ ವಂದನೆ…” ಅಂತ ಅರ್ಮಾನ್ ಹಾಡುವಾಗ ವೇದಿಕೆಯಲ್ಲಿದ್ದವರೇ ತಲೆದೂಗುತ್ತಿದ್ದರು. ಅದೇ ರೀತಿ, ಗುರುವಾಯನಕೆರೆಯಲ್ಲಿ ನಡೆದ ಭಕ್ತಿಗೀತೆ ಸ್ಫರ್ಧೆಯಲ್ಲಿ, ‘ಮಾಮವತು ಶ್ರೀ ಸರಸ್ವತೀ…’ ಹಾಡಿಗೆ ಬಹುಮಾನ, ಕೃಷ್ಣ ಕಥಾ ಸ್ಫರ್ಧೆಯಲ್ಲಿ ಕೃಷ್ಣ-ಸುದಾಮರ ಗೆಳೆತನದ ಕತೆ ಹೇಳಿ ಬಹುಮಾನ ಗೆದ್ದಿದ್ದಾನೆ.
ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಸರಕಾರಿ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿ, 13 ವಯಸ್ಸಿನ ಅರ್ಮಾನ್ ರಿಯಾಝ್‌ನ ಗಾಯನ ಲೋಕವಿದು. ಈಗ ಬೆಳ್ತಂಗಡಿಯ ಕವಿತಾ ಕೋರ್ನಾಯ ಎಂಬವರಲ್ಲಿ ಕರ್ನಾಟಕೀ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದಾನೆ. ಸ್ಯಾಕ್ಸೊಫೋನ್, ಕೀಬೋರ್ಡ್, ಗಿಟಾರ್ – ಈ ವಾದ್ಯಗಳಲ್ಲೆಲ್ಲ ಅರ್ಮಾನ್ ರಿಯಾಝ್ ಹಾಡುಗಳನ್ನು ನುಡಿಸುತ್ತಿದ್ದಾನೆ ಎಂದರೆ ಅಚ್ಚರಿಯಾಗಲೇಬೇಕು. ಅದು ಒತ್ತಟ್ಟಿಗಿರಲಿ, ತರಗತಿಯಲ್ಲಿ ‘ಶಬ್ದ’ ವಿಷಯದಲ್ಲಿ ಅಧ್ಯಾಪಕರು ಮಾಡಿದ ಪಾಠ ಕೇಳಿ ಪ್ರೇರಿತನಾಗಿ, ಮನೆಗೆ ಬಂದು, ಜಲತರಂಗವನ್ನು ಹೋಲುವಂತೆ ಆರೇಳು ಲೋಟಗಳಿಗೆ ವಿಭಿನ್ನ ಪ್ರಮಾಣದ ನೀರು ಹಾಕಿ, ಚಮಚಾದಿಂದಲೇ ರಾಷ್ಟ್ರಗೀತೆ “ಜನಗಣಮನ ಅಧಿನಾಯಕ ಜಯಹೇ” ನುಡಿಸಿ, ತನ್ನೊಳಗಿದ್ದ ಕುತೂಹಲವನ್ನು ತಣಿಸಿಕೊಂಡಿದ್ದ. ವಲಯ, ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಗಝಲ್ ಹಾಡಿ ಬಹುಮಾನ ಗೆದ್ದುಕೊಂಡಿದ್ದ ಈತನ ಆಪ್ಯಾಯಮಾನ ಧ್ವನಿ, ಶಾಲೆಯ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವವೇ ಮುಂತಾದ ಆಚರಣೆಗಳಲ್ಲಿ ಸದಾ ಅನುರಣಿಸುತ್ತಲೇ ಇರುತ್ತದೆ.
ಈ ಹುಡುಗನ ಹೆತ್ತವರು ಶಿಕ್ಷಕ ದಂಪತಿ. ಇವರಿರುವ ತಾಣವೇ ಸೌಹಾರ್ದದ, ಭಾವೈಕ್ಯದ ನೆಲೆವೀಡು. ಹಬ್ಬ-ಹರಿದಿನ ಬಂದಾಗ ಸುತ್ತಮುತ್ತಲಿರುವ ಸುಮಾರು ಇಪ್ಪತ್ತು ಮನೆಗಳವರು ಜಾತಿ – ಧರ್ಮ ಭೇದವೆಣಿಸದೆ ಒಟ್ಟು ಸೇರುತ್ತಾರೆ, ಮನರಂಜನಾ ಕಾರ್ಯಕ್ರಮ ನಡೆಸುತ್ತಾರೆ, ಸಿಹಿ ಹಂಚಿಕೊಳ್ಳುತ್ತಾರೆ. ಹಳ್ಳಿಗಳ ಮನೆಯಲ್ಲಿ ಸಾಯಂಕಾಲವಾಗುವ ಹೊತ್ತಿಗೆ ಎಲ್ಲರೂ ಸೇರಿ ಒಂದರ್ಧ ಗಂಟೆ ಭಜನೆ ಮಾಡುವುದು ಸಾಮಾನ್ಯ. ಈಗ ಮಗ ಅರ್ಮಾನ್‌ನಿಂದಾಗಿ ಈ ಶಿಕ್ಷಕ ದಂಪತಿಯ ಮನೆಯಲ್ಲಿ ಪ್ರತಿದಿನವೂ ಗಾಯನ ಸುಧೆ ಹರಿಯುತ್ತದೆ.
ಜೋಜೋ ಶ್ರೀಕೃಷ್ಣ…
“ನನ್ನಮ್ಮ ನಮ್ಮನ್ನು ಮಲಗಿಸುತ್ತಿದ್ದುದು ‘ಜೋಜೋ ಶ್ರೀಕೃಷ್ಣ ಪರಮಾನಂದ’ ಎಂಬ ಹಾಡಿನಿಂದಲೇ. ನಾನೂ ಅರ್ಮಾನ್ ಚಿಕ್ಕವನಿರುವಾಗ ತೊಟ್ಟಿಲು ತೂಗುತ್ತಾ ಇದನ್ನೇ ಹೇಳಿ ಮಲಗಿಸುತ್ತಿದ್ದೆ. ಮಲಗಲು ಅವನಿಗೆ ಈ ಜೋಗುಳದ ಹಾಡೇ ಬೇಕು. ಹಾಡು ಕೇಳಿ ಅದಕ್ಕೆ ತಲೆದೂಗುತ್ತಾ, ತನ್ನ ಎಳೆಯ ಬೊಚ್ಚು ಬಾಯಲ್ಲಿ ಇದೇ ಹಾಡನ್ನು ಹೇಳಲು ಪ್ರಯತ್ನಿಸುತ್ತಿದ್ದ” ಎಂದು ನೆನಪಿಸಿಕೊಳ್ಳುತ್ತಾರೆ, ವಗ್ಗ ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿರುವ ಲೈಲಾ ಪರ್ವೀನ್. ಇವರು ‘ಪವಿನಾ ಬಸ್ರೂರು’ ಕಾವ್ಯನಾಮದಲ್ಲಿ ಕಥೆ, ಕವನಗಳನ್ನು ಬರೆದಿದ್ದು, ಕೆಲವು ಪತ್ರಿಕೆಗಳಲ್ಲಿ ಈಗಾಗಲೇ ಪ್ರಕಟವಾಗಿವೆ. ಸಂಗೀತ, ಸಾಹಿತ್ಯದ ಒಲವು ಜಾಸ್ತಿ. ಹೀಗಾಗಿ ಅವರೇ ಮಗನಲ್ಲಿ ಸಂಗೀತದ ಅಭಿರುಚಿಯನ್ನು ಬೆಳೆಸಿ ಪೋಷಿಸಿದರು.
ಅರ್ಮಾನ್‌ನ ತಂದೆ, ಮೂಲತಃ ತೀರ್ಥಹಳ್ಳಿಯವರಾದ ಮಹಮದ್ ರಿಯಾಝ್ ಕೊಕ್ರಾಡಿ. ಇವರು 18 ವರ್ಷಗಳಿಂದ ದಕ್ಷಿಣ ಕನ್ನಡದಲ್ಲಿದ್ದು, ಬೆಳ್ತಂಗಡಿ ತಾಲೂಕಿನ ಕೊಕ್ರಾಡಿ ಸರಕಾರಿ ಪ್ರೌಢಶಾಲೆಯಲ್ಲಿ ಸಾಮಾಜಿಕ ವಿಜ್ಞಾನ ಬೋಧಿಸುವ ಶಿಕ್ಷಕರು. ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾಗಿಯೂ, ಸಮಾಜ ಸೇವಕರಾಗಿ ಆ ಪರಿಸರದಲ್ಲೆಲ್ಲ ಜನಪ್ರಿಯತೆ ಗಳಿಸಿದವರು. ಅರ್ಮಾನ್‌ನ ಸಹೋದರ ಮಹಮದ್ ಆರ್ಝೂ 2ನೇ ತರಗತಿ ವಿದ್ಯಾರ್ಥಿ.
3ನೇ ತರಗತಿಯಲ್ಲಿರುವಾಗಲೇ ಕಂಠಪಾಠ ಸ್ಫರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ತೃತೀಯ ಬಹುಮಾನ ಪಡೆದಿದ್ದ ಅರ್ಮಾನ್, ತನ್ನ ಅಮ್ಮನಿಗೆ ಅವರ ತಮ್ಮ (ಬಾಲಕನ ಸೋದರಮಾವ) ಉಡುಗೊರೆಯಾಗಿ ನೀಡಿದ್ದ ಕೀಬೋರ್ಡ್ ಮೇಲೆ 1ನೇ ತರಗತಿಯಲ್ಲಿರುವಾಗಲೇ ಬೆರಳಾಡಿಸಲಾರಂಭಿಸಿದ್ದ. ಅದರಲ್ಲಿ ಸಪ್ತಸ್ವರ ನುಡಿಸುತ್ತಾ, ತಾನು ಕೇಳಿದ ಹಾಡುಗಳನ್ನು ಅನುಕರಿಸುತ್ತಾ ನುಡಿಸುತ್ತಿದ್ದ. ಅದು ಈತನೊಳಗಿದ್ದ ಸಂಗೀತ ಪ್ರತಿಭೆಯ ಕಲಾಯಾನಕ್ಕೆ ಬುನಾದಿಯಾಯಿತು.
ಪುಟಾಣಿ ಆರ್ಮಾನ್‌ಗೆ ಯಾವುದೇ ಹಾಡು ಕೇಳಿದಾಕ್ಷಣ ಕಿವಿಗಳು ಅರಳುತ್ತಿದ್ದವಂತೆ. ಇಷ್ಟವಾದ ಹಾಡಿನ ಧಾಟಿಯನ್ನು (ಟ್ಯೂನ್) ಮನಸ್ಸಿನಲ್ಲಿರಿಸಿ, ಸ್ಯಾಕ್ಸೋಫೋನ್ ಅಥವಾ ಕೀಬೋರ್ಡ್‌ನಲ್ಲಿ ಅದನ್ನು ಪ್ರಯತ್ನಿಸುತ್ತಾನೆ. ಈ ಅನುಕರಣಾ ಸಾಮರ್ಥ್ಯವೇ ಅವನಲ್ಲಿ ಸಂಗೀತ ಪ್ರತಿಭೆಯನ್ನು ಅರಳಿಸಿದೆ. ಮನೆಮಾತು ಉರ್ದು ಆಗಿದ್ದರೂ, ಸ್ಪಷ್ಟವಾದ ಕನ್ನಡದಲ್ಲಿ ಈತನ ಹಾಡುಗಳನ್ನು ಕೇಳುವುದೇ ಆನಂದ.
ಆರಂಭದಲ್ಲಿ ಅರ್ಮಾನ್ 6 ವರ್ಷದವನಿರುವಾಗ, ಬಾಬಣ್ಣ ಪುತ್ತೂರು ಅವರು ಬೆಳ್ತಂಗಡಿಯಲ್ಲಿ ಆರಂಭಿಸಿದ್ದ ನಿನಾದ ಕಲಾ ಕೇಂದ್ರದಲ್ಲಿ ಪ್ರತಿ ಭಾನುವಾರ ಕೀಬೋರ್ಡ್ ತರಗತಿಗೆ ಸೇರಿಕೊಂಡಿದ್ದ. ಹುಡುಗನ ಪ್ರತಿಭೆಯನ್ನು ನೋಡಿ ಬಾಬಣ್ಣ ಅವರ ಪುತ್ರಿ ಸವಿತಾ ಅವರೇ ಅರ್ಮಾನ್‌ಗೆ ಸುಗಮ ಸಂಗೀತ ಹಾಡುಗಾರಿಕೆಯನ್ನು ಹೇಳಿಕೊಡಲಾರಂಭಿಸಿದ್ದರು. ಆ ವೇಳೆಗೆ ಕೊರೊನಾ ವೈರಸ್ – ಲಾಕ್‌ಡೌನ್ ಕಾರಣದಿಂದಾಗಿ ತರಗತಿಗಳು ನಿಂತವು. ಅವನಾಗಲೇ, ಕೀಬೋರ್ಡ್, ಗಿಟಾರ್‌ಗಳಲ್ಲಿ ರೋಜಾ ಚಿತ್ರದ ಪ್ರಸಿದ್ಧ ‘ಭಾರತ್ ಹಮ್ ಕೋ ಜಾನ್ ಸೇ ಪ್ಯಾರಾ ಹೈ…’ ನುಡಿಸಲಾರಂಭಿಸಿದ್ದ.
2019ರ ಉತ್ತರಾರ್ಧದಲ್ಲಿ ಬೆಳ್ತಂಗಡಿಯಲ್ಲಿ ಕವಿತಾ ಕೋರ್ನಾಯ ಅವರಲ್ಲಿ ಕರ್ನಾಟಕೀ ಶಾಸ್ತ್ರೀಯ ಸಂಗೀತಾಭ್ಯಾಸಕ್ಕೆ ಈ ಹುಡುಗನನ್ನು ಸೇರಿಸಿದರು. ಬಳಿಕ ಕೋವಿಡ್ ಕಾಟದಿಂದಾಗಿ ಈ ತರಗತಿಯು ಆನ್‌ಲೈನ್‌ನಲ್ಲಿ ಮುಂದುವರಿಯಿತು. ವಾರಕ್ಕೆರಡು ದಿನ ತರಗತಿಗೆ ಹಾಜರಾಗಿ, ಸಂಗೀತದ ವರ್ಣಗಳ ಹಂತದವರೆಗೆ ಬಂದಿದೆ. ಜೂನಿಯರ್ ಪರೀಕ್ಷೆ ಕಟ್ಟುವಷ್ಟರ ಮಟ್ಟಿಗೆ ಬೇಗನೇ ಕಲಿತುಕೊಂಡಿದ್ದಾನೆ ಅರ್ಮಾನ್. ಈ ಗುರುಗಳಿಗೂ ಅರ್ಮಾನ್ ಪ್ರೀತಿಯ ವಿದ್ಯಾರ್ಥಿ. ಹೇಳಿದ್ದನ್ನು ಆಸಕ್ತಿ ವಹಿಸಿ ಬೇಗನೇ ಕಲಿತುಕೊಳ್ಳುತ್ತಾನೆಂಬ ಖುಷಿ. ಅವನ ಕಲಿಕೆಯ ಬೆಳವಣಿಗೆಗಳನ್ನು ಲೈಲಾರಿಗೆ ಸಂಗೀತ ಶಿಕ್ಷಕಿಯೇ ಖುಷಿಯಿಂದ ಫೋನ್ ಮೂಲಕ ತಿಳಿಸುತ್ತಿರುತ್ತಾರೆ.
ಸ್ಯಾಕ್ಸೊಫೋನ್ ಅಂತ ಹೆಸರು ಕೇಳಿದಾಗ ಪುತ್ತೂರಿನ ದೋಗ್ರ ಕುಟುಂಬ ಹೆಸರು ನೆನಪಿಗೆ ಬರುತ್ತದೆ. ಅದೇ ಕುಟುಂಬದ ಹರಿದಾಸ ದೋಗ್ರ ಅವರು ಬೆಳ್ತಂಗಡಿಯಲ್ಲಿ ಸ್ಯಾಕ್ಸೊಫೋನ್ ತರಗತಿ ಆರಂಭಿಸಿದಾಗ ಅರ್ಮಾನ್ ಕೂಡ ಅಲ್ಲಿ ಸೇರಿಕೊಂಡಿದ್ದಾನೆ. ಇಲ್ಲೂ ಗುರುಗಳಿಗೆ ಅರ್ಮಾನ್ ಎಂದರೆ ಅಚ್ಚುಮೆಚ್ಚಿನ ವಿದ್ಯಾರ್ಥಿ. ಅದೇ ರೀತಿ, ಬಂಟ್ವಾಳ ನೈನಾಡಿನ ಹಾಡುಗಾರ, ಪಾಣೆಮಂಗಳೂರು ಎಸ್ಎಲ್ಎನ್‌ಪಿ ಶಾಲೆಯ ಚಿತ್ರಕಲಾ ಶಿಕ್ಷಕ ಯಶು ಸ್ನೇಹಗಿರಿ (ಯಶವಂತ) ಅವರು ಈ ಬಾಲಕನ ಹಾಡುಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾ, ತಿದ್ದುತ್ತಿರುತ್ತಾರೆ.
ಭಾವೈಕ್ಯದ ಕುಟುಂಬ
ಲೈಲಾ ಮತ್ತು ರಿಯಾಝ್ ದಂಪತಿ ಹುಟ್ಟಿ ಬೆಳೆದ ವಾತಾವರಣವೇ ಹಾಗೆ. ಹಬ್ಬ ಹರಿದಿನಗಳಲ್ಲಿ ಜಾತಿ-ಧರ್ಮದ ಭೇದವಿಲ್ಲ. ಗಣೇಶನ ಹಬ್ಬ, ಕೃಷ್ಣಾಷ್ಟಮಿ, ನವರಾತ್ರಿ – ಇವೆಲ್ಲ ಬಂತೆಂದರೆ ತಮ್ಮದೇ ಹಬ್ಬ ಬಂತೆಂಬಂತೆ ಸಂಭ್ರಮಿಸುತ್ತಾರೆ. ಚೌತಿ ವೇಳೆಗೆ ಅಲ್ಲಲ್ಲಿ ನಡೆಯುವ ಗಣೇಶೋತ್ಸವದಲ್ಲಿ ಪ್ರತಿಷ್ಠಾಪಿತವಾದ ಮೂರ್ತಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬ ಎನ್ನುವ ಈ ದಂಪತಿ, ಇಸ್ಲಾಂ ಧರ್ಮದ ಹಬ್ಬಗಳನ್ನೂ ಶ್ರದ್ಧೆಯಿಂದ ಆಚರಿಸುತ್ತಾರೆ. ಹಬ್ಬ ಬಂದಾಗ ರಜೆಯಲ್ಲಿ ತೀರ್ಥಹಳ್ಳಿಗೆ ಹೋಗುವುದರ ಪ್ರಮುಖ ಕಾರಣ ಈ ಹಬ್ಬಗಳ ಆಕರ್ಷಣೆ. ತೀರ್ಥಹಳ್ಳಿಯ ಯಡೂರಿನಲ್ಲಿ ಸ್ವಾಮಿ ವಿವೇಕಾನಂದ ಯುವಕ ಮಂಡಲದ ಅಧ್ಯಕ್ಷರಾಗಿದ್ದ ಮಹಮದ್ ರಿಯಾಝ್, ಈ ಯುವಕ ಮಂಡಲದ ವತಿಯಿಂದ ಗಣೇಶೋತ್ಸವ ಆಚರಿಸುವಲ್ಲಿಯೂ ಸಕ್ರಿಯ ಪಾತ್ರ ವಹಿಸಿದ್ದರು. ಊರು ಬಿಟ್ಟು 18 ವರ್ಷಗಳೇ ಕಳೆದರೂ, ಯಡೂರಿನಲ್ಲಿ ಪ್ರತಿ ವರ್ಷ ನಡೆಯುವ ಗಣೇಶೋತ್ಸವಕ್ಕೆ ಅಲ್ಲಿನ ಸ್ನೇಹ ವಲಯದ ಪ್ರೀತಿಗೆ ಓಗೊಟ್ಟು ಹಾಜರಾಗುತ್ತಾರೆ. ಇದಕ್ಕೆ ಕಾರಣ, ಪಿಯುಸಿ ಅವಧಿಯಿಂದಲೇ ಅವರು ಈ ಯುವಕ ಮಂಡಲ ಸೇರಿ, ಅದರ ವತಿಯಿಂದ ನಡೆಯುತ್ತಿದ್ದ ಗ್ರಾಮೀಣ ಕ್ರೀಡಾಕೂಟ, ಸ್ವಚ್ಛತಾ ಕಾರ್ಯಕ್ರಮ, ಬಸ್ ನಿಲ್ದಾಣ ದುರಸ್ತಿ, ಆರೋಗ್ಯ ಶಿಬಿರ, ಯುವಜನ ಮೇಳ… ಇತ್ಯಾದಿಗಳಲ್ಲಿ ಸಕ್ರಿಯವಾಗಿದ್ದರು. ಮತ್ತು ಈಗ ಅವರು ವಾಸಿಸುವ ಬೆಳ್ತಂಗಡಿ ಪರಿಸರದ ಸ್ಥಳದಲ್ಲೂ ಇದೇ ರೀತಿಯ ಭಾವೈಕ್ಯ ಮತ್ತು ಸೌಹಾರ್ದದ ವಾತಾವರಣವಿದೆ.
ಬೇರೆ ಊರಿನಿಂದ ಪ್ರವಾಸಿಗಳಾಗಿ ಧರ್ಮಸ್ಥಳ, ಸುಬ್ರಹ್ಮಣ್ಯ, ಶೃಂಗೇರಿ, ಕೊಲ್ಲೂರು, ಹೊರನಾಡು ಇತ್ಯಾದಿ ದೇವಸ್ಥಾನಗಳಿಗೆ ಭೇಟಿ ನೀಡುವ ಶಿಕ್ಷಕರು ಅಲ್ಲಿ ವಸತಿ ವ್ಯವಸ್ಥೆ ಅಥವಾ ದರ್ಶನ ಇತ್ಯಾದಿಗೆ ಸಹಾಯ ಬೇಕಿದ್ದರೆ ರಿಯಾಝ್‌ಗೇ ಕರೆ ಮಾಡುತ್ತಾರೆ. ಜಾತಿ-ಮತ ನೋಡದೆ, ಸಂಕಷ್ಟದಲ್ಲಿರುವ ಬಗ್ಗೆ ಕರೆ ಬಂದ ತಕ್ಷಣ ಮಧ್ಯರಾತ್ರಿ ಕಾರು ಹಿಡಿದುಕೊಂಡು ಆಸ್ಪತ್ರೆಗೆ ಕರೆದೊಯ್ದ ಉದಾಹರಣೆಗಳೂ ಇವೆ. ಸಂಘಟನಾ ಚತುರರೂ ಆಗಿರುವ ಮಹಮದ್ ರಿಯಾಝ್ ಕುರಿತಾಗಿ ಇತ್ತೀಚೆಗೆ ನಡೆದ ಜಿಲ್ಲಾ ಶಿಕ್ಷಕರ ಸಮಾವೇಶದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ವೇದಿಕೆಯಲ್ಲೇ ಕೊಂಡಾಡಿರುವುದು ಅವರ ಕಾಯಕ ನಿಷ್ಠೆಗೆ ಸಾಕ್ಷಿ.
ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವೀಣ್ ನೆಟ್ಟಾರ್, ಮಹಮದ್ ಫಾಜಿಲ್ ಹತ್ಯೆಗಳ ವಿಚಾರದಲ್ಲಿ ಕೋಮು ಉದ್ವಿಗ್ನ ಸ್ಥಿತಿ ಏರ್ಪಟ್ಟಿದ್ದ ಸಮಯದಲ್ಲಿ, ಮಗನ ಸಂಗೀತ ಶಿಕ್ಷಕಿ ಹಾಗೂ ಹಲವು ಹಿಂದೂ ಬಾಂಧವರು ಫೋನ್ ಮಾಡಿ ‘ಹುಷಾರಾಗಿರಿ, ಏನೇ ತೊಂದರೆಯಾದರೂ ನಮ್ಮನ್ನು ಕರೆಯಿರಿ, ನಾವಿದ್ದೇವೆ ನಿಮ್ಮೊಂದಿಗೆ’ ಎಂದಾಗ, ಇಂಥ ಊರಲ್ಲಿ ನಾವಿದ್ದೇವಲ್ಲ ಎಂಬುದು ನಮಗೆ ಅತ್ಯಂತ ಖುಷಿ ಕೊಟ್ಟ ವಿಚಾರ ಎಂದು ಲೈಲಾ ಅವರು ಹೇಳುವಾಗ ಗದ್ಗದಿತರಾಗಿದ್ದರು, ಮತ್ತವರ ಧ್ವನಿಯಲ್ಲಿ ಸಾರ್ಥಕ್ಯಭಾವವಿತ್ತು.
ಈಗಾಗಲೇ ಝೀ ಕನ್ನಡದಿಂದ ನಡೆಯುವ ಹಾಡುವ ರಿಯಾಲಿಟಿ ಶೋ (ಸರಿಗಮಪ ಲಿಟ್ಲ್ ಚಾಂಪ್ಸ್) ಆಡಿಶನ್‌ಗೂ ಆಯ್ಕೆಯಾಗಿರುವ ಈ ಹುಡುಗ ತನ್ನ ಸಾಧನೆಯ ಪಥದಲ್ಲಿ ಇದೇ ರೀತಿ ಪರಿಶ್ರಮದೊಂದಿಗೆ ಮುಂದುವರಿದರೆ ಉಜ್ವಲ ಭವಿಷ್ಯವಿದೆ.
Article by Me (Avinash B) Published in Prajavani on 10 October 2022
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು