ಪ್ರಮುಖ ವೈಶಿಷ್ಟ್ಯಗಳು
ಸದಾ ಆನ್ ಇರುವ ರೆಟಿನಾ LTPO OLED ಡಿಸ್‌ಪ್ಲೇ
41ಮಿಮೀ: 352×430 ಪಿಕ್ಸೆಲ್ಸ್, 45ಮಿಮೀ: 396×484 ಪಿಕ್ಸೆಲ್ಸ್
ಡ್ಯುಯಲ್ ಕೋರ್ ಪ್ರೊಸೆಸರ್,
32GB ಸ್ಟೋರೇಜ್
18 ಗಂಟೆಗಳವರೆಗೆ ಬ್ಯಾಟರಿ ಚಾರ್ಜ್
USB-C ಮ್ಯಾಗ್ನೆಟಿಕ್ ವೇಗದ ಚಾರ್ಜಿಂಗ್ ಕೇಬಲ್
ಬಿದ್ದರೆ ಪತ್ತೆ ಹಚ್ಚುವ ತಂತ್ರಜ್ಞಾನ
Apple Watch Series 8 Review: ಆ್ಯಪಲ್ ಪ್ರತಿ ವರ್ಷದಂತೆ ಹೊಸ ಸುಧಾರಿತ ಆ್ಯಪಲ್ ವಾಚ್ ಅನ್ನು ಮಾರುಕಟ್ಟೆಗೆ ಬಿಟ್ಟಿದೆ. ಈ ಬಾರಿ ಆ್ಯಪಲ್ ವಾಚ್ ಸೀರೀಸ್ 8 ಬಿಡುಗಡೆಯಾಗಿದ್ದು, ಇದರಲ್ಲಿ 41 ಮಿಮೀ ಹಾಗೂ 45 ಮಿಮೀ – ಹೀಗೆ ಎರಡು ಮಾದರಿಗಳಿವೆ. ಪ್ರಜಾವಾಣಿಗೆ ರಿವ್ಯೂಗೆ ದೊರೆತಿರುವುದು 45ಮಿಮೀ ವಾಚ್ ಕೇಸ್ ಇರುವ ಆ್ಯಪಲ್ ವಾಚ್ 8 ಆವೃತ್ತಿ. ಇದನ್ನು ಮೂರು ವಾರ ಬಳಸಿದಾಗ ಕಂಡ ಅನುಭವದ ಮಾಹಿತಿ ಇಲ್ಲಿದೆ.
ಮಾರುಕಟ್ಟೆಯಲ್ಲಿರುವ ಸ್ಮಾರ್ಟ್ ವಾಚ್‌ಗಳೆಲ್ಲವೂ ಸಮಯಕ್ಕಿಂತಲೂ ದೈಹಿಕ ಫಿಟ್ನೆಸ್ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರತ್ತ ಹೆಚ್ಚಿನ ಗಮನ ಹರಿಸಿವೆ. ಹೀಗಾಗಿ ಆರೋಗ್ಯ ಸಂಬಂಧಿತವಾಗಿ ನಡಿಗೆಯ ಹೆಜ್ಜೆಗಳ ಸಂಖ್ಯೆ, ವೇಗ, ಹೃದಯದ ಬಡಿತ, ನಿದ್ರೆಯ ಸ್ಥಿತಿ-ಗತಿ, ವ್ಯಾಯಾಮದ ಅವಧಿ, ಉಸಿರಾಟದ ನಿಯಂತ್ರಣ, ಧ್ಯಾನ – ಏಕಾಗ್ರತೆಗೆ ನೆರವು ನೀಡುವ ವೈಶಿಷ್ಟ್ಯ, ನೀರು ಕುಡಿಯಲು ನೆನಪಿಸುವುದು, ಗಂಟೆಗೊಮ್ಮೆ ಕುಳಿತಲ್ಲಿಂದ ಎದ್ದು ದೈಹಿಕ ಚಟುವಟಿಕೆ ನೆನಪಿಡುವುದು, ರಕ್ತದಲ್ಲಿನ ಆಮ್ಲಜನಕ ಪ್ರಮಾಣ, ಎಲೆಕ್ಟ್ರೋಕಾರ್ಡಿಯೋಗ್ರಾಂ (ಇಸಿಜಿ) – ಮುಂತಾದ ವೈಶಿಷ್ಟ್ಯಗಳೆಲ್ಲವೂ ಆ್ಯಪಲ್ ವಾಚ್ 8ರಲ್ಲೂ ಇವೆ. ಇದರ ಜೊತೆಗೆ, ಕಳೆದ ಬಾರಿಯ ಆ್ಯಪಲ್ ವಾಚ್ 7ನೇ ಸರಣಿಗೆ ಹೊಸ ಸೇರ್ಪಡೆಯೆಂದರೆ ಉಷ್ಣತೆ ಅಳೆಯುವ ಸೆನ್ಸರ್. ಅಂದರೆ ದೇಹದ ತಾಪಮಾನವನ್ನು ಕೂಡ ಅದು ಅಳೆದು ತೋರಿಸುತ್ತದೆ.
ದೇಹದ ತಾಪಮಾನ ಅಳೆಯುವುದಕ್ಕೆ ವಾಚ್ ಕೇಸ್‌ನಲ್ಲಿ ಹಿಂಭಾಗದಲ್ಲಿ ಎರಡು ಸೆನ್ಸರ್‌ಗಳಿವೆ. ಆದರೆ ಇದು ನಮಗೆ ಜ್ವರ ಇದೆಯೇ ಎಂದು ತಿಳಿಯುವುದಕ್ಕಲ್ಲ. ಮುಖ್ಯವಾಗಿ ಸ್ತ್ರೀಯರಲ್ಲಿ ಅಂಡಾಣು ಬಿಡುಗಡೆಯಾಗುವಾಗ ಕೊಂಚ ದೈಹಿಕ ತಾಪಮಾನ ಹೆಚ್ಚಿರುತ್ತದೆ. ಹೀಗಾಗಿ, ಋತುಚಕ್ರದ ಬಗ್ಗೆ ಟ್ರ್ಯಾಕ್ ಇರಿಸಿಕೊಳ್ಳುವುದಕ್ಕೆ ಸಂಬಂಧಿಸಿದ ಆ್ಯಪ್‌ಗೆ ಈ ತಾಪಮಾನದ ಮಾಹಿತಿಯು ಪೂರಕವಾಗುತ್ತದೆ. ಇದಲ್ಲದೆ, ಸರಾಸರಿ ದೇಹದ ತಾಪಮಾನ ಅರಿಯುವುದಕ್ಕೆ ಮತ್ತು ಆರೋಗ್ಯ ಸಂಬಂಧಿತ ಮಾಹಿತಿಯ ವಿಶ್ಲೇಷಣೆಗೆ ಈ ಉಷ್ಣತಾ ಮಾಪನವು ನೆರವಾಗುತ್ತದೆ. ಆದರೆ, ಇದನ್ನು ಸಂತಾನ ನಿಯಂತ್ರಣದ ಲೆಕ್ಕಾಚಾರಕ್ಕೆ ಬಳಸಬಾರದು ಎಂದು ಆ್ಯಪಲ್ ಎಚ್ಚರಿಕೆ ನೀಡಿದೆ. ಒಂದು ಅಂದಾಜು ಮಾಹಿತಿಗಾಗಿ ಮಾತ್ರ. ದೇಹದ ತಾಪಮಾನ ಅಳೆಯಲು ನಿದ್ರೆಯ ಟ್ರ್ಯಾಕಿಂಗ್ (ಸ್ಲೀಪ್ ಟ್ರ್ಯಾಕಿಂಗ್) ಆನ್ ಮಾಡಿಟ್ಟುಕೊಳ್ಳಬೇಕಾಗುತ್ತದೆ.
ಗಾತ್ರ, ವಿನ್ಯಾಸ
45ಮಿಮೀ ಸ್ಕ್ರೀನ್ ಗಾತ್ರದ ಆ್ಯಪಲ್ ವಾಚ್ 8, ಹಗುರವಾಗಿದ್ದು ಉತ್ತಮ ಗುಣಮಟ್ಟದ ವಾಚ್ ಬ್ಯಾಂಡ್ ಇರುವುದರಿಂದ ಕೈಗಳಲ್ಲಿ ಚೆನ್ನಾಗಿ ಕೂರುತ್ತದೆ ಮತ್ತು ಆಕರ್ಷಕವಾಗಿಯೂ ಇದೆ. ಸ್ಕ್ರೀನ್ ಸುತ್ತಲಿನ ಬೆಝೆಲ್ (ಖಾಲಿ ಜಾಗ) ತೀರಾ ಕಡಿಮೆ ಇರುವುದರಿಂದಾಗಿ ಡಿಸ್‌ಪ್ಲೇಯು ಇಡೀ ಸ್ಕ್ರೀನನ್ನು ಬಹುತೇಕ ಆವರಿಸುತ್ತದೆ. ಇದು ಮ್ಯಾಪ್, ಫೋಟೊ ನೋಡಲು, ಸಂದೇಶ ವೀಕ್ಷಿಸಲು ಹೆಚ್ಚಿನ ಸ್ಥಳಾವಕಾಶವನ್ನು ಕೊಡುತ್ತದೆ. ಅದೇ ರೀತಿ, ಕ್ವೆರ್ಟಿ ಕೀಬೋರ್ಡ್ ಕೂಡ ಅನುಕೂಲ ಇರುವುದರಿಂದಾಗಿ, ಅಗತ್ಯಬಿದ್ದಾಗ ಸಂದೇಶಗಳಿಗೆ ಉತ್ತರಿಸಲು ಟೈಪ್ ಮಾಡುವುದು ಸುಲಲಿತ.
ಕಾರ್ಯಾಚರಣೆ, ಬ್ಯಾಟರಿ
ಆ್ಯಪಲ್ ವಾಚ್ 8ರಲ್ಲಿ ನ್ಯಾವಿಗೇಶನ್ ವೇಗವೂ ಸುಲಲಿತವಾಗಿಯೂ ಆಗುತ್ತದೆ. ಜೊತೆಗೆ, ವಾಚ್‌ನಿಂದಲೇ ವಾಟ್ಸ್ಆ್ಯಪ್, ಎಸ್ಎಂಎಸ್‌ಗೆ ಉತ್ತರಿಸಬಹುದು, ಕರೆಗಳಿಗೆ ಉತ್ತರಿಸಬಹುದಾಗಿದೆ. ಈ ವರ್ಷ ಬಿಡುಗಡೆಯಾದ ಅತ್ಯಾಧುನಿಕ ವಾಚ್ ಒಎಸ್ 9 ಮೂಲಕ ಆ್ಯಪಲ್ ವಾಚ್ 8 ಕಾರ್ಯಾಚರಿಸುತ್ತಿದೆ. ಜೊತೆಗೆ, ಇತ್ತೀಚೆಗಷ್ಟೇ ತಂತ್ರಾಂಶ ಅಪ್‌ಡೇಟ್ ಆಗಿದ್ದು (ವಾಚ್ ಒಎಸ್ 9.1), ಕನಿಷ್ಠ ಎರಡು ದಿನಗಳ ಬ್ಯಾಟರಿ ಚಾರ್ಜ್‌ಗೆ ಯಾವುದೇ ಸಮಸ್ಯೆಯಿಲ್ಲ. ಅನಿವಾರ್ಯ ಸಂದರ್ಭಗಳಲ್ಲಿ ಕನಿಷ್ಠ ವಿದ್ಯುತ್ ಬಳಸುವ ‘ಲೋ ಪವರ್ ಮೋಡ್’ ಇರುವುದರಿಂದ ಬ್ಯಾಟರಿ ಚಾರ್ಜ್ ಅನ್ನು ಹೆಚ್ಚು ಕಾಲ ಇರುವಂತೆ ನೋಡಿಕೊಳ್ಳಬಹುದು. ಜಲ ನಿರೋಧಕತೆ, ಧೂಳು ನಿರೋಧಕತೆ ವೈಶಿಷ್ಟ್ಯಗಳೂ ಇವೆ. ಮಲಗಿರುವಾಗ ಕೈಗೆ ಕಟ್ಟಿಕೊಂಡರೆ ಸ್ಲೀಪ್ ಟ್ರ್ಯಾಕಿಂಗ್, ಉಷ್ಣತೆಯ ಮಾಪನ ಸಾಧ್ಯ.
ಆಯತಪ್ಪಿ ಬಿದ್ದರೆ ಅಪಾಯದ ಸಂದೇಶವನ್ನು ಮೊದಲೇ ನಿಗದಿಪಡಿಸಿದ ತುರ್ತು ಕರೆಯ ಸಂಖ್ಯೆಗಳಿಗೆ ಕಳುಹಿಸುವ ವ್ಯವಸ್ಥೆಯಿದೆ. ಅಂದರೆ, ದಿಢೀರ್ ಆಗಿ ಕುಸಿದು ಬಿದ್ದರೆ ಅಥವಾ ಆಯತಪ್ಪಿ ಬಿದ್ದರೆ (ಎತ್ತರದ ಸೆನ್ಸರ್ ಮೂಲಕ) ಬೀಳುವಿಕೆಯನ್ನು ಪತ್ತೆ ಮಾಡಿ ಎಚ್ಚರಿಕೆ ಸಂದೇಶ ಕಳುಹಿಸುತ್ತದೆ. ಇದನ್ನು ಸದಾಕಾಲ ಅಥವಾ ವ್ಯಾಯಾಮ ಮಾಡುವಾಗ ಮಾತ್ರವೇ ಆನ್ ಮಾಡಿಟ್ಟುಕೊಳ್ಳುವ ವ್ಯವಸ್ಥೆಯಿದೆ. ಅದೇ ರೀತಿ, ದೊಡ್ಡದಾದ ಸದ್ದು ಕೇಳಿಬಂದರೆ ಕಿವಿಗಳಿಗೆ ಅಪಾಯವಿದೆ ಎಂಬುದನ್ನೂ ಪತ್ತೆ ಹಚ್ಚಿ ಎಚ್ಚರಿಸುವ ವ್ಯವಸ್ಥೆಯು ಆ್ಯಪಲ್‌ನ ಹೆಲ್ತ್ ಆ್ಯಪ್‌ನಲ್ಲಿದೆ. ಕೋವಿಡ್ ಕಾಲದಲ್ಲಿ ನೆರವಿಗೆ ಬಂದಿರುವ, ಕೈಗಳನ್ನು 20 ಸೆಕೆಂಡ್ ತೊಳೆಯಲು ಪ್ರಚೋದಿಸುವ ವ್ಯವಸ್ಥೆ ಈ ವಾಚ್‌ನಲ್ಲೂ ಮುಂದುವರಿದಿದೆ.
ಹೊಸ ಎಂಟನೇ ಸರಣಿಯು ಮೂರು ಮಾದರಿಗಳಲ್ಲಿ ಲಭ್ಯವಿದೆ. ಆ್ಯಪಲ್ ವಾಚ್ ಸೀರೀಸ್ 8 ಬೆಲೆ ₹45900 (ಜಿಪಿಎಸ್ ಮಾದರಿ) ಹಾಗೂ ₹55900 (ಸೆಲ್ಯುಲಾರ್), ದೊಡ್ಡದಾದ ಮತ್ತು ಹೆಚ್ಚುವರಿ ವೈಶಿಷ್ಟ್ಯಗಳುಳ್ಳ ಆ್ಯಪಲ್ ವಾಚ್ ಅಲ್ಟ್ರಾ (ಬೆಲೆ ₹89,900ರಿಂದ ಆರಂಭ) ಹಾಗೂ ಕಡಿಮೆ ಬಜೆಟ್‌ನಲ್ಲಿ ಒಂದಿಷ್ಟು ವೈಶಿಷ್ಟ್ಯಗಳಿಲ್ಲದೆ ಲಭ್ಯವಾಗುವ ಆ್ಯಪಲ್ ವಾಚ್ ಎಸ್ಇ (ಬೆಲೆ ₹29900ರಿಂದ ಆರಂಭ, ಸೆಲ್ಯುಲಾರ್ ಮಾದರಿಗೆ 5 ಸಾವಿರ ಹೆಚ್ಚು) ಲಭ್ಯವಿದೆ.
ಆ್ಯಪಲ್ ವಾಚ್ 8, ಫಿಟ್ನೆಸ್ ಮತ್ತು ಆರೋಗ್ಯದ ಮಟ್ಟಿಗೆ ಸದ್ಯಕ್ಕೆ ಹೆಚ್ಚು ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಸಮಗ್ರ ವಾಚ್ ಎನ್ನಬಹುದು. ಋತುಚಕ್ರದ ಮೇಲೆ ಗಮನ ಇರಿಸಲು ಮಹಿಳೆಯರಿಗೆ ಇದು ಅನುಕೂಲಕರವಾಗಿದೆ. ನಮ್ಮ ದೈನಂದಿನ ಚಟುವಟಿಕೆಯ ಮೇಲೆ ನಿಗಾ ಇರಿಸಲು ನೆರವಾಗಿಸುವ ಆ್ಯಪಲ್ ರಿಂಗ್‌ಗಳನ್ನು ಪೂರ್ಣಗೊಳಿಸಿದರೆ, ಇದು ಖಂಡಿತವಾಗಿಯೂ ಆರೋಗ್ಯದ ಮೇಲೆ ಪೂರಕ ಪರಿಣಾಮ ಬೀರುತ್ತದೆ.
Article by me, Avinash, Published in Prajavani on 01/02 Nov 2022
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.