ಮಾಹಿತಿ @ ತಂತ್ರಜ್ಞಾನ – 7: ವಿಜಯ ಕರ್ನಾಟಕ ಅಂಕಣ 08-ಅಕ್ಟೋಬರ್-2012
ಪೈಪೋಟಿಯ ಈ ಯುಗದಲ್ಲಿ ಮೊಬೈಲ್, ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್‌ಗಳಿಗೆಲ್ಲ ಮೂಲಾಧಾರವಾಗಿರುವ ಆಪರೇಟಿಂಗ್ ಸಿಸ್ಟಂ (ಕಾರ್ಯಾಚರಣಾ ವ್ಯವಸ್ಥೆ) ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಬ್ಲ್ಯಾಕ್‌ಬೆರಿ, ವಿಂಡೋಸ್, ಆ್ಯಪಲ್, ಸಿಂಬಿಯಾನ್ ಮತ್ತು ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಗಳು ಈಗ ಹೆಚ್ಚು ಬಳಕೆಯಲ್ಲಿರುವಂಥವು.
ಬ್ಲ್ಯಾಕ್‌ಬೆರಿ ಹಾಗೂ ಐಓಎಸ್ ಕಾರ್ಯಾಚರಣಾ ವ್ಯವಸ್ಥೆಗಳು ಅವುಗಳ ಮೊಬೈಲ್ ಫೋನ್‌ಗಳಿಗೆ ಮಾತ್ರವೇ ಸೀಮಿತವಾಗಿದ್ದರೆ, ಕೆಲವು ಸಾಧನಗಳಲ್ಲಿ ಸಿಂಬಿಯಾನ್, ವಿಂಡೋಸ್ ಕಾರ್ಯಾಚರಣಾ ವ್ಯವಸ್ಥೆಗಳೂ ಇವೆ. ಆದರೆ ವಿಶ್ವದಲ್ಲಿ ಅತೀ ಹೆಚ್ಚು ಬಳಕೆಯಿರುವುದು ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆ.
ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯನ್ನು 2005ರಲ್ಲಿ ಗೂಗಲ್ ಖರೀದಿಸಿತ್ತು. ಈಗ 2012ರ ಮೊದಲರ್ಧ ಭಾಗದಲ್ಲಿ ಜಗತ್ತಿನ ಶೇ.60ರಷ್ಟು ಸ್ಮಾರ್ಟ್‌ಫೋನ್‌ಗಳನ್ನು ಆಂಡ್ರಾಯ್ಡ್ ಆವರಿಸಿಕೊಂಡಿದೆ ಎಂದರೆ ಅದರ ಜನಪ್ರಿಯತೆಯ ಗಾಢತೆ ಅರಿವಾಗುತ್ತದೆ. ಮುಕ್ತ ತಂತ್ರಾಂಶದಡಿ ಬರುವ ಇದರಲ್ಲಿ ಸಾಕಷ್ಟು ಅನುಕೂಲಗಳಿರುವುದರಿಂದ ಮತ್ತು ಜನಪ್ರಿಯ ಗೂಗಲ್ ಸೇವೆಗಳೆಲ್ಲವೂ (ಮ್ಯಾಪ್ಸ್, ಇಮೇಲ್, ಚಾಟ್, ಸರ್ಚ್ ಎಂಜಿನ್, ಗೂಗಲ್ ಡಾಕ್ಸ್) ಸುಲಭಗ್ರಾಹ್ಯವೂ ಆಗಿರುವುದರಿಂದ ಮೊಬೈಲ್ ಫೋನ್ ತಯಾರಿಕಾ ಕಂಪನಿಗಳೂ ಅದನ್ನೇ ನೆಚ್ಚಿಕೊಂಡಿವೆ.
ಏನಿದು ಸ್ಯಾಂಡ್‌ವಿಚ್, ಜೆಲ್ಲಿ ಬೀನ್?
ಆಂಡ್ರಾಯ್ಡ್ ಅಂದಾಕ್ಷಣ ಜೊತೆಯಲ್ಲಿಯೇ ಐಸ್‌ಕ್ರೀಮ್, ಸ್ಯಾಂಡ್‌ವಿಚ್, ಕಪ್ ಕೇಕ್, ಈಕ್ಲೇರ್, ಡೋನಟ್ ಮುಂತಾದ ಬಾಯಲ್ಲಿ ನೀರೂರಿಸುವ ತಿನಸುಗಳ ಹೆಸರನ್ನು ಕೇಳಿರುತ್ತೀರಿ. ಏನಿದು?
ಜಗತ್ತಿನಾದ್ಯಂತವಿರುವ ಆಂಡ್ರಾಯ್ಡ್ ಡೆವಲಪರ್‌ಗಳು ಈ ವ್ಯವಸ್ಥೆಗೆ ಹೊಸಹೊಸ ತಂತ್ರಗಳನ್ನು ಸೇರಿಸುತ್ತಾ, ಅಭಿವೃದ್ಧಿ ಮಾಡುತ್ತಲೇ ಇರುತ್ತಾರೆ. ಅಪ್‌ಡೇಟೆಡ್ ಆವೃತ್ತಿಗಳಿಗೆ ಸಂಖ್ಯೆಗಳನ್ನು ನೀಡಿ ಗೊಂದಲಕ್ಕೀಡುಮಾಡುವ ಬದಲು, ಅಮೆರಿಕನ್ನರಿಗೆ ಅತ್ಯಂತ ಹೆಚ್ಚು ಪ್ರಿಯವಾಗಿರುವ ತಿನಸುಗಳ ಹೆಸರನ್ನೇ ನೀಡಲಾಗಿದೆ. ಮೊದಲೆರಡು ಅಷ್ಟು ಪ್ರಚಲಿತವಲ್ಲದ ಆವೃತ್ತಿಗಳನ್ನು ಬಿಟ್ಟರೆ, ಉಳಿದೆಲ್ಲವೂ ತಿಂಡಿಗಳೇ. ಆಂಡ್ರಾಯ್ಡ್ ಆವೃತ್ತಿಗಳ ವಂಶವೃಕ್ಷ ಕೆಳಗಿನಂತಿದೆ:
1.0 Astro, 1.1 Bender, 1.5 Cupcake, 1.6 Donut, 2.0/2.1 Eclair, 2.2 Froyo, 2.3 Gingerbread, 3.x Honeycomb, 4.0 Ice Cream Sandwich, 4.1 Jelly Bean
ಜಿಂಜರ್‌ಬ್ರೆಡ್ ಮೇಲುಗೈ
ಇವುಗಳಲ್ಲಿ, ಫ್ರೋಯೋದಿಂದ ಈಚೆಗೆ ಎಲ್ಲವೂ ಒಂದಲ್ಲ ಒಂದು ಕಾರಣಕ್ಕೆ ಜನರಿಗೆ ಮೆಚ್ಚುಗೆಯಾಗಿವೆ ಮತ್ತು ಹೊಸ ಮೊಬೈಲ್ ಫೋನುಗಳು ಕೂಡ ಈ ಕಾರ್ಯಾಚರಣಾ ವ್ಯವಸ್ಥೆಯ ಜೊತೆಗೇ ಬರುತ್ತವೆ. ಅವುಗಳಲ್ಲಿ ಹೆಚ್ಚು ಜನಪ್ರಿಯವಾಗಿರುವುದು ಜಿಂಜರ್‌ಬ್ರೆಡ್ (ಆಂಡ್ರಾಯ್ಡ್ 2.3) -ಶೇ.56ರಷ್ಟು ಆಂಡ್ರಾಯ್ಡ್ ಸಾಧನಗಳಲ್ಲಿ ಇರುವುದು ಇದೇ. ಅದರ ಬಳಿಕ ಬಂದ ಐಸ್‌ಕ್ರೀಮ್ ಸ್ಯಾಂಡ್‌ವಿಚ್ (ಐಸಿಎಸ್- ಆಂಡ್ರಾಯ್ಡ್ 4.0) ಶೇ.24ರಷ್ಟು ಆಂಡ್ರಾಯ್ಡ್ ಸಾಧನಗಳಲ್ಲಿದ್ದರೆ, ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಜೆಲ್ಲಿಬೀನ್ (ಆಂಡ್ರಾಯ್ಡ್ 4.1) ಕೂಡ (ಶೇ.2ರಷ್ಟು) ತಳವೂರುತ್ತಿದೆ. ಇಂಟರ್ನೆಟ್ ಸಂಪರ್ಕವಿದ್ದರೆ ಕೆಲವು ಫೋನ್‌ಗಳಲ್ಲಿ ಅಪ್‌ಗ್ರೇಡ್ ಮಾಡಿಕೊಳ್ಳುವ ಅವಕಾಶವೂ ದೊರೆಯುತ್ತದೆ.
ಹಾಗಿದ್ದರೆ ಮುಂದಿನ ಆವೃತ್ತಿಗೆ ಭಾರತೀಯ ಹೆಸರೇ?
ಹೀಗೊಂದು ಪ್ರಯತ್ನ ಇಂಟರ್ನೆಟ್‌ನಲ್ಲಿ ಭರದಿಂದ ಸಾಗುತ್ತಿದೆ. ಆಂಡ್ರಾಯ್ಡ್ ಆವೃತ್ತಿಯ ನಾಮಕರಣ ವಿಧಾನವನ್ನು ಗಮನಿಸಿದರೆ, ಅದು A, B, C, D, E, F, G, H, I, J ಅನುಕ್ರಮಣಿಕೆಯಲ್ಲಿ ಆವೃತ್ತಿಗಳನ್ನು ಹೆಸರಿಸಿದೆ. ಇವೆಲ್ಲವೂ ಅಮೆರಿಕದ ತಿಂಡಿಗಳಾಗಿವೆ. ಮುಂದಿನದು K ಸರದಿ. ಅಮೆರಿಕ ಬಿಟ್ಟರೆ ಭಾರತದಲ್ಲಿ ಗೂಗಲ್ ಮತ್ತು ಆಂಡ್ರಾಯ್ಡ್ ಜನಪ್ರಿಯವಾಗಿರುವುದರಿಂದ ಮುಕ್ತ ತಂತ್ರಾಂಶ ಹಾಗೂ ಅಪ್ಲಿಕೇಶನ್‌ಗಳ ಅಭಿವೃದ್ಧಿಯಲ್ಲಿ ಭಾರತೀಯರ ಪಾಲೂ ಹೆಚ್ಚಿರುವುದರಿಂದ, ಗೋಡಂಬಿ (ಕಾಜು) ಮತ್ತು ತುಪ್ಪ-ಬೆಲ್ಲದ ನೆಚ್ಚಿನ ಸಿಹಿತಿಂಡಿಯಾಗಿರುವ ಕಾಜುಕಟ್ಲಿ (KajuKatli) ಹೆಸರಿಡಬೇಕೆಂಬ ಆಂದೋಲನವೊಂದು ಇಂಟರ್ನೆಟ್‌ನಲ್ಲಿ ನಡೆಯುತ್ತಿದೆ. ಹಲ್ವಾ ಮಿಸ್ ಆಯಿತು, ಜಿಲೇಬಿಯೂ ತಪ್ಪಿತು, ಕಾಜುಕಟ್ಲಿಯಾದರೂ ಹೆಸರಿಡಿ ಅನ್ನುತ್ತಿದ್ದಾರೆ ಅಂತರಜಾಲಿಗರು. ಈ ಆಂದೋಲನವು ಹಲವು ಟೆಕ್ಕಿಗಳಿಗೆ ಬಾಲ್ಯದ ನೆನಪು ಮಾಡಿಕೊಟ್ಟಿದೆ. ನೀವು ಕೂಡ ಭಾರತೀಯ ಹೆಸರಿಗಾಗಿ http://kajukatli.in ನಲ್ಲಿ ಹೋಗಿ ಸಹಿ ಹಾಕುವ ಮೂಲಕ ಬೆಂಬಲಿಸಬಹುದು.
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು