ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್23 5ಜಿ ಸ್ಮಾರ್ಟ್‌ಫೋನ್ ಮಾ.8ರಂದು ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಪ್ರಜಾವಾಣಿಗೆ ರಿವ್ಯೂಗೆ ದೊರೆತ 4ಜಿಬಿ/128 ಜಿಬಿ ಮಾದರಿಯನ್ನು ಎರಡು ವಾರ ಬಳಸಿ ನೋಡಿದ ಬಳಿಕ, ಈ ಫೋನ್ ಹೇಗಿದೆ? ಮಾಹಿತಿ ಇಲ್ಲಿದೆ.
ಪ್ರಮುಖ ವೈಶಿಷ್ಟ್ಯಗಳು
ಸ್ನ್ಯಾಪ್‌ಡ್ರ್ಯಾಗನ್ 750ಜಿ ಚಿಪ್‌ಸೆಟ್, 6.7 ಇಂಚು FHD+ ಪೂರ್ಣ ಪರದೆ LCD ಪ್ಯಾನೆಲ್ ಇರುವ ಡಿಸ್‌ಪ್ಲೇ (ಸ್ಕ್ರೀನ್), ಜೊತೆಗೆ ಗೊರಿಲ್ಲಾ ಗ್ಲಾಸ್ 5.0 ರಕ್ಷಣೆ ಇದೆ. 5000mAh ಬ್ಯಾಟರಿ, 25W ವೇಗದ ಚಾರ್ಜಿಂಗ್ ಅನುಕೂಲ, ಆಂಡ್ರಾಯ್ಡ್ 12 ಆಧಾರಿತ ಒನ್ ಯುಐ 4.1 ಕಾರ್ಯಾಚರಣಾ ವ್ಯವಸ್ಥೆಯಿದೆ. ಕ್ಯಾಮೆರಾ ವಿಶೇಷ ಆಕರ್ಷಣೆಯಾಗಿದ್ದು, ಪ್ರಧಾನ ಕ್ಯಾಮೆರಾ 50MP, ತ್ರಿವಳಿ ಸೆನ್ಸರ್‌ಗಳಿವೆ. 8 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾ ಇದೆ.
ವಿನ್ಯಾಸ
ಇತ್ತೀಚಿನ ದಿನಗಳಲ್ಲಿ ವಿನ್ಯಾಸದ ಬಗ್ಗೆ ಹೆಚ್ಚು ಒತ್ತು ನೀಡಿರುವ ಸ್ಯಾಮ್‌ಸಂಗ್, ತನ್ನ ಗ್ಯಾಲಕ್ಸಿ ಎಫ್23 5ಜಿ ಫೋನ್‌ನ ಹಿಂಭಾಗದಲ್ಲಿರುವ ಮ್ಯಾಟ್ ಫಿನಿಶ್‌ನಿಂದಾಗಿ ಆಕರ್ಷಕವಾಗಿ ಕಾಣಿಸುತ್ತದೆ. ಜೊತೆಗೆ ತ್ರಿವಳಿ ಕ್ಯಾಮೆರಾ ಹಾಗೂ ಫ್ಲ್ಯಾಶ್ ಸಹಿತ, ಕೊಂಚ ಉಬ್ಬಿರುವ ಕ್ಯಾಮೆರಾ ಮಾಡ್ಯೂಲ್ ಹೊಂದಿದೆ. ಎಡಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇರುವ ಪವರ್ ಬಟನ್, ವಾಲ್ಯೂಮ್ ಕೀಲಿಗಳು, ಬಲ ಮೇಲ್ಭಾಗದಲ್ಲಿ 2 ಸಿಮ್ ಕಾರ್ಡ್ ಹಾಗೂ ಮೆಮೊರಿ ಕಾರ್ಡ್ ಇರಿಸುವ ಟ್ರೇ ಇದೆ. ಕೆಳಭಾಗದಲ್ಲಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್, ಮೈಕ್, ಸ್ಪೀಕರ್ ಗ್ರಿಲ್ ಹಾಗೂ 3.5 ಎಂಎಂ ಇಯರ್‌ಫೋನ್ ಜ್ಯಾಕ್ ಇದೆ. ಮುಂಭಾಗದಲ್ಲಿ ಯಾವುದೇ ಗೀರು ಕಲೆಗಳಿಂದ ರಕ್ಷಣೆ ನೀಡುವ ಗೊರಿಲ್ಲಾ ಗ್ಲಾಸ್ 5 ಆವೃತ್ತಿಯ ರಕ್ಷಣೆ ಇದೆ. ಬೀಗದ ಕೀಲಿಯಿಂದ ಉಜ್ಜಿ ನೋಡಿದಾಗ ಇದರಲ್ಲಿ ಯಾವುದೇ ಗೀರುಗಳಾಗಲಿಲ್ಲ. ಫಾರೆಸ್ಟ್ ಗ್ರೀನ್ ಬಣ್ಣದ ಹಿಂಭಾಗದ ಕವಚ ಆಕರ್ಷಕವಾಗಿದೆ. ಡಿಸ್‌ಪ್ಲೇ ನೋಡಿದರೆ, ಅದರ ಸುತ್ತ ಸ್ವಲ್ಪ ಮಟ್ಟಿಗೆ ಬೆಝೆಲ್ (ಖಾಲಿ ಅಂಚು) ಇದೆ. ಆಧುನಿಕ ಫೋನ್‌ಗಳಲ್ಲೆಲ್ಲ ಈ ಕಪ್ಪನೆಯ ಅಂಚು ಇಲ್ಲದೆ, ಪೂರ್ಣ ಡಿಸ್‌ಪ್ಲೇ ಜೊತೆಗೆ ಬರುತ್ತಿದ್ದರೆ, ಸ್ಯಾಮ್‌ಸಂಗ್ ಇಲ್ಲೇಕೆ ಇದನ್ನು ಉಳಿಸಿಕೊಂಡಿತು ಎಂಬುದು ಕಾಡಿದ ಪ್ರಶ್ನೆ.
ಈಗ ಸ್ಯಾಮ್‌ಸಂಗ್ ಕೂಡ ಆ್ಯಪಲ್ ಫೋನ್‌ಗಳಂತೆಯೇ ಚಾರ್ಜಿಂಗ್ ಅಡಾಪ್ಟರ್ ನೀಡುವುದನ್ನು ನಿಲ್ಲಿಸಿದೆ. ಕೇವಲ ಟೈಪ್-ಸಿ ಯುಎಸ್‌ಬಿ ಕೇಬಲ್ ಮಾತ್ರ ನೀಡುತ್ತಿದೆ. ಹೊಸದಾಗಿ ಈ ಫೋನ್ ಖರೀದಿಸಿದವರು ಪ್ರತ್ಯೇಕ ಚಾರ್ಜರ್ ಖರೀದಿಸಬೇಕಾಗುತ್ತದೆ.
ಇದು ಅಗ್ಗದ ದರದ 5ಜಿ ಫೋನ್ ಆಗಿರುವುದರಿಂದ ಸ್ಯಾಮ್‌ಸಂಗ್, ಸಾಕಷ್ಟು ಉಳಿತಾಯ ಮಾಡುವ ನಿಟ್ಟಿನಲ್ಲಿ ಫಿಂಗರ್ ಪ್ರಿಂಟ್ ಸೆನ್ಸರನ್ನು ಪವರ್ ಬಟನ್‌ನಲ್ಲಿಯೇ ಇರಿಸಿದೆ ಎಂದುಕೊಳ್ಳಬಹುದು. ನಾವು ಬೆರಳುಗಳನ್ನು ಇದಕ್ಕೆ ಸಂಯೋಜಿಸಿಬಿಟ್ಟರೆ, ಬೆರಳಚ್ಚಿನ ಮೂಲಕ ಅತಿ ಶೀಘ್ರವಾಗಿಯೇ ಫೋನ್ ಸ್ಕ್ರೀನ್ ಅನ್‌ಲಾಕ್ ಆಗುತ್ತದೆ. ಇದರ ಜೊತೆಗೆ, ಫೇಸ್ ಅನ್‌ಲಾಕ್ ವ್ಯವಸ್ಥೆಯೂ ಸುಲಲಿತವಾಗಿ, ವೇಗವಾಗಿ ಕೆಲಸ ಮಾಡುತ್ತದೆ.
ಡಿಸ್‌ಪ್ಲೇ, ಆಡಿಯೊ
ಈ ಬೆಲೆಯಲ್ಲಿ 120Hz ರಿಫ್ರೆಶ್ ರೇಟ್ ಇರುವ 6.7 ಇಂಚಿನ ಎಲ್‌ಸಿಡಿ ಪ್ಯಾನೆಲ್ ಇರುವ ಮತ್ತು ಫುಲ್ ಹೆಚ್‌ಡಿ ಪ್ಲಸ್ ರೆಸೊಲ್ಯುಶನ್ ಇರುವ ಡಿಸ್‌ಪ್ಲೇ ದೊರೆಯುವುದು ಹೆಚ್ಚುಗಾರಿಕೆಯೇ ಸರಿ. ವೀಡಿಯೊ ಹಾಗೂ ಗೇಮಿಂಗ್ ಅನುಭವದಲ್ಲಿ ಬಣ್ಣಗಳ, ಚಿತ್ರಗಳ ಹೆಚ್ಚು ನಿಖರತೆ ಗೋಚರವಾಗುತ್ತದೆ.
ಇಯರ್ ಫೋನ್ ಅಳವಡಿಸಲು 3.5 ಮಿಮೀ ಜ್ಯಾಕ್ ನೀಡಲಾಗಿದೆ. ಇಯರ್ ಫೋನ್ ಪ್ರತ್ಯೇಕವಾಗಿ ಖರೀದಿಸಬೇಕಾಗುತ್ತದೆ. ಅದರಿಂದ ಹಾಡು, ಶಬ್ದ ಸ್ಪಷ್ಟವಾಗಿ ಕೇಳುತ್ತದೆ. ಆದರೆ, ಕೆಳಗಿರುವ ಸ್ಪೀಕರ್ ಗ್ರಿಲ್ ಮೂಲಕ ಹೊರಬರುವ ಧ್ವನಿಯು ಒಳಾಂಗಣದಲ್ಲಿ ಸ್ಪಷ್ಟವಾಗಿ ಕೇಳಿಸುತ್ತದೆ.
ಕ್ಯಾಮೆರಾ
ಎಲ್ಲರ ಗಮನ ಇತ್ತೀಚೆಗೆ ಕ್ಯಾಮೆರಾ ಗುಣಮಟ್ಟದ ಮೇಲೆ. ಇದರಲ್ಲಿರುವ 50 ಮೆಗಾಪಿಕ್ಸೆಲ್ ಸಾಮರ್ಥ್ಯದ ಪ್ರಧಾನ ಕ್ಯಾಮೆರಾ ಸೆನ್ಸರ್, 123 ಡಿಗ್ರಿಯಷ್ಟು ನೋಟವನ್ನು ವ್ಯಾಪಿಸಬಲ್ಲ 8 ಮೆಗಾಪಿಕ್ಸೆಲ್‌ನ ಅಲ್ಟ್ರಾವೈಡ್ ಸೆನ್ಸರ್ ಹಾಗೂ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್‌ಗಳ ಕ್ಯಾಮೆರಾ ಮಾಡ್ಯೂಲ್‌ನಲ್ಲಿ ಫೊಟೋ ಹಾಗೂ ವಿಡಿಯೊಗಳು ಉತ್ತಮ ಬೆಳಕಿರುವಲ್ಲಿ ಚೆನ್ನಾಗಿ ಸೆರೆಯಾಗುತ್ತವೆ.
ಕ್ಯಾಮೆರಾ ಆ್ಯಪ್‌ನಲ್ಲಿರುವ ಫನ್ ಮೋಡ್ ಮೂಲಕ, ಸೆಲ್ಫಿಗೆ ವಿಶೇಷ ಎಫೆಕ್ಟ್‌ಗಳನ್ನು ನೀಡಬಹುದು. ಆದರೆ, ಇದಕ್ಕೆ ಇಂಟರ್ನೆಟ್ ಸಂಪರ್ಕ ಬೇಕಾಗುತ್ತದೆ. ಜೊತೆಗೆ, ಇದರಲ್ಲಿ ಪ್ರೋ, ಸಿಂಗಲ್ ಟೇಕ್, ನೈಟ್, ಫುಡ್, ಪನೋರಮ, ಮ್ಯಾಕ್ರೊ, ಸೂಪರ್ ಸ್ಲೋ-ಮೋ, ಸ್ಲೋ ಮೋ ಹಾಗೂ ಹೈಪರ್ ಲ್ಯಾಪ್ಸ್ ಎಂಬ ಮೋಡ್‌ಗಳೂ ಇವೆ. ಈಗಿನ ಜನರ ಶಾರ್ಟ್ ವಿಡಿಯೊ ಕ್ರೇಜ್‌ಗೆ ಪೂರಕವಾಗಿ ಸ್ಲೋ-ಮೋ ಹಾಗೂ ಸೂಪರ್ ಸ್ಲೋ-ಮೋ ಮೋಡ್‌ಗಳಿದ್ದು, ಇನ್‌ಸ್ಟಾಗ್ರಾಂ ಹಾಗೂ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಲು ಅನುಕೂಲವಾಗಿದೆ. ಐಎಸ್ಒ, ಶಟರ್ ಸ್ಪೀಡ್ ಮುಂತಾದವುಗಳನ್ನು ಹೊಂದಿಸಲು ತಿಳಿದಿದ್ದರೆ, ಪ್ರೋ ಮೋಡ್‌ನಲ್ಲಿ ಉತ್ತಮ ಫೊಟೋಗಳನ್ನು ಪಡೆಯಬಹುದು. ಅಲ್ಟ್ರಾ ವೈಡ್ ಸೆನ್ಸರ್ ಉತ್ತಮವಾಗಿ ಕೆಲಸ ಮಾಡುತ್ತದೆ, ಆದರೆ ಸಮೀಪದಿಂದ ಚಿತ್ರ ಸೆರೆಹಿಡಿಯಲು ಬಳಸಿದ ಮ್ಯಾಕ್ಸೋ ಲೆನ್ಸ್‌ನಿಂದ ಸಮಾಧಾನಕರವಾದ ಫಲಿತಾಂಶ ಸಿಕ್ಕಿಲ್ಲ. 2 ಮೆಗಾಪಿಕ್ಸೆಲ್ ಸೆನ್ಸರ್ ಇದಕ್ಕೆ ಕಾರಣವಿರಬಹುದು. ಪ್ರಧಾನ ಕ್ಯಾಮೆರಾ ಅಥವಾ ಸೆಲ್ಫೀ ಕ್ಯಾಮೆರಾದಲ್ಲಿರುವ ಪೋರ್ಟ್ರೇಟ್ ಮೋಡ್, ಹಿನ್ನೆಲೆಯನ್ನು ಮಸುಕಾಗಿಸಿ, ಸಬ್ಟೆಕ್ಟನ್ನು ಮಾತ್ರವೇ ಕೇಂದ್ರೀಕರಿಸಿ ಉತ್ತಮ ಚಿತ್ರಗಳನ್ನು ಒದಗಿಸುತ್ತದೆ ಎನ್ನಲಡ್ಡಿಯಿಲ್ಲ.
ಕಾರ್ಯಾಚರಣೆ
4 ಜಿಬಿ RAM ಜೊತೆಗೆ, 128 ಜಿಬಿ ಸ್ಟೋರೇಜ್ ವ್ಯವಸ್ಥೆ ಇದ್ದು, ಫ್ಲ್ಯಾಗ್ ಶಿಪ್ ಫೋನ್‌ಗಳಿಗೆ ಹೊರತಾಗಿ ಇತ್ತೀಚಿನ ಆಂಡ್ರಾಯ್ಡ್ 12 ಕಾರ್ಯಾಚರಣಾ ವ್ಯವಸ್ಥೆ ಆಧಾರದ ಒನ್ ಯುಐ 4.1 ಆವೃತ್ತಿ ಬಂದಿರುವುದು ಗ್ಯಾಲಕ್ಸಿ ಎಫ್ 23 5ಜಿ ವಿಶೇಷ. ಸ್ನ್ಯಾಪ್‌ಡ್ರ್ಯಾಗನ್ 750 ಜಿ ಪ್ರೊಸೆಸರ್ ವೇಗದ ಮತ್ತು ಸುಲಲಿತ ಕಾರ್ಯಾಚರಣೆಗೆ ಪೂರಕವಾಗಿದೆ. ಹೆಚ್ಚು ಆ್ಯಪ್‌ಗಳನ್ನು ತೆರೆದಿಟ್ಟು ಕೆಲಸ ಮಾಡುವಾಗ ಅಥವಾ ತೂಕದ ಗೇಮ್‌ಗಳನ್ನು ಆಡುವ ಸಂದರ್ಭ, ಯಾವುದೇ ವಿಳಂಬದ ಅನುಭವ ಆಗದಂತೆ ಒಂದು ವೈಶಿಷ್ಟ್ಯವಿದೆ. ಅದೇ RAM ಪ್ಲಸ್. ಅಂದರೆ, ಫೋನ್‌ನಲ್ಲಿ ಹೆಚ್ಚು ಕೆಲಸ ಮಾಡಬೇಕಾದ ಸಂದರ್ಭ, ಸ್ಲೋ ಆಗದಂತೆ ಇದು 12GB ವರೆಗೆ ಹೆಚ್ಚುವರಿ RAM ಒದಗಿಸುತ್ತದೆ. ಹೀಗಾಗಿ, ಗೇಮಿಂಗ್ ಆಗಲೀ, ಸಾಮಾನ್ಯ ಬ್ರೌಸಿಂಗ್ ಸಂದರ್ಭದಲ್ಲೇ ಆಗಲಿ, ಯಾವುದೇ ವಿಳಂಬ (ಲ್ಯಾಗಿಂಗ್) ಅಥವಾ ಸ್ಥಾಗಿತ್ಯ (ಹ್ಯಾಂಗ್) ಅನುಭವಕ್ಕೆ ಬಂದಿಲ್ಲ.
5000mAh ಬ್ಯಾಟರಿಯೂ ಸಾಮಾನ್ಯ ಬಳಕೆಗೆ ಎರಡು ದಿನ, ಒಂದಿಷ್ಟು ಹೆಚ್ಚು ಬ್ರೌಸಿಂಗ್, ಗೇಮಿಂಗ್ ಇದ್ದರೆ ಒಂದುವರೆ ದಿನಕ್ಕೆ ಅಡ್ಡಿಯಾಗಲಿಲ್ಲ. ಆದರೆ, ಚಾರ್ಜರ್ ನಾವೇ ಖರೀದಿಸಬೇಕಾಗಿರುವುದರಿಂದ, 25W ವೇಗದ ಚಾರ್ಜಿಂಗ್ ಬೆಂಬಲಿಸುವ ಚಾರ್ಜರುಗಳನ್ನೇ ಖರೀದಿಸಬೇಕಾಗುತ್ತದೆ.
ಗಮನ ಸೆಳೆದ ವೈಶಿಷ್ಟ್ಯಗಳು
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್23 5ಜಿ ಫೋನ್‌ನಲ್ಲಿ ಗಮನ ಸೆಳೆದ ವೈಶಿಷ್ಟ್ಯಗಳಲ್ಲೊಂದು ಎಂದರೆ ವಾಯ್ಸ್ ಫೋಕಸ್. ಇದು ಇರುವುದರಿಂದ, ಸದ್ದು ಗದ್ದಲದ ಪ್ರದೇಶದಲ್ಲಿಂದ ನಾವು ಫೋನ್‌ನಲ್ಲಿ ಮಾತನಾಡಿದರೆ, ಅತ್ತ ಕಡೆಯವರಿಗೆ ನಮ್ಮ ಧ್ವನಿಯು ಹೆಚ್ಚು ಸ್ಪಷ್ಟವಾಗಿ ಕೇಳಿಸುತ್ತದೆ ಮತ್ತು ಸುತ್ತಲಿನ ವಾತಾವರಣದ ಧ್ವನಿಯ ಪ್ರಮಾಣ ಕಡಿಮೆ ಇರುತ್ತದೆ. ಇನ್ನು ಪವರ್ ಕೂಲ್ ತಂತ್ರಜ್ಞಾನವು, ಫೋನ್ ಹೆಚ್ಚು ಕೆಲಸ ಮಾಡಿದಾಗ ಬಿಸಿ ಆಗುವುದನ್ನು ತಡೆಯುತ್ತದೆ. ಆಟೋ ಡೇಟಾ ಸ್ವಿಚಿಂಗ್ ವ್ಯವಸ್ಥೆಯ ವಿಶೇಷವೆಂದರೆ, ನಾವು ಎರಡು ಬೇರೆ ಬೇರೆ ಸೇವಾದಾತರ ಸಿಮ್ ಕಾರ್ಡ್‌ಗಳನ್ನು ಬಳಸುವಾಗ ಇಂಟರ್ನೆಟ್ ವೇಗ ಕಡಿಮೆ ಇದ್ದರೆ, ಡೇಟಾ ಆಯ್ಕೆಯು ಹೆಚ್ಚು ವೇಗ ಇರುವ ಸಿಮ್ ಕಾರ್ಡ್‌ಗೆ ತಾನಾಗಿ ಬದಲಾಗುತ್ತದೆ. ಇದರ ಜೊತೆಗೆ, ನಾಲ್ಕನೇ ವೈಶಿಷ್ಟ್ಯ ಈಗಾಗಲೇ ಮೇಲೆ ತಿಳಿಸಿದಂತೆ, ಹೆಚ್ಚು ವೇಗದ ಕಾರ್ಯಾಚರಣೆ ಅಗತ್ಯವಿದ್ದರೆ RAM ಪ್ಲಸ್ ವ್ಯವಸ್ಥೆ. ಇವುಗಳು ಈ ದರ ಶ್ರೇಣಿಯ ಫೋನ್‌ನಲ್ಲಿ ದೊರೆಯುವುದು ವಿಶೇಷ.
ಉಳಿದಂತೆ, ಸ್ಕ್ರೀನ್ ರೆಕಾರ್ಡರ್, ಡ್ಯುಯಲ್ ಮೆಸೆಂಜರ್, ಕ್ವಿಕ್ ಶೇರ್, ಡಾರ್ಕ್ ಮೋಡ್, ಸ್ಮಾರ್ಟ್ ವ್ಯೂ, ಕಣ್ಣುಗಳಿಗೆ ತ್ರಾಸ ಕಡಿಮೆ ಮಾಡುವ ಐ ಕಂಫರ್ಟ್ ಶೀಲ್ಡ್ – ಮುಂತಾದ ಆಧುನಿಕ ವೈಶಿಷ್ಟ್ಯಗಳು ಇದರಲ್ಲಿಯೂ ಇದೆ. 5ಜಿ ಇನ್ನೂ ಭಾರತಕ್ಕೆ ಬಂದಿಲ್ಲ. ಆದರೆ 12 ಬ್ಯಾಂಡ್‌ಗಳನ್ನು ಈ ಫೋನ್ ಬೆಂಬಲಿಸುತ್ತದೆ ಎಂದು ಸ್ಯಾಮ್‌ಸಂಗ್ ಹೇಳಿಕೊಂಡಿದೆ. 5ಜಿ ಬಂದ ಬಳಿಕವಷ್ಟೇ ಇದನ್ನು ಪರೀಕ್ಷಿಸಬಹುದು.
ಒಟ್ಟಿನಲ್ಲಿ, ಅತ್ಯಾಧುನಿಕ ಸೌಕರ್ಯದೊಂದಿಗೆ ಶೀಘ್ರವೇ ಬರಲಿರುವ 5ಜಿ ನೆಟ್‌ವರ್ಕ್ ತಂತ್ರಜ್ಞಾನಕ್ಕೆ ಸಜ್ಜಾಗಿರುವ ಮಧ್ಯಮ ಶ್ರೇಣಿಯ ಫೋನ್‌ಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್ 23 5ಜಿ ಗಮನ ಸೆಳೆಯುತ್ತದೆ. ಇದೊಂದು ಉತ್ತಮ ಗೇಮಿಂಗ್ ಫೋನ್ ಆಗಬಲ್ಲುದು. ಫಾರೆಸ್ಟ್ ಗ್ರೀನ್ (ಕಡು ಹಸಿರು) ಹಾಗೂ ಆಕ್ವಾ ಬ್ಲೂ (ತಿಳಿ ನೀಲಿ) ಬಣ್ಣಗಳಲ್ಲಿ ಲಭ್ಯವಿರುವ Galaxy F23 5G ಫೋನ್‌ನ ಬೆಲೆ 4GB+128GB ಮಾದರಿಗೆ ₹17499 ಹಾಗೂ 6GB+128 GB ಮಾದರಿಗೆ ₹18499.
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು