66ಎ ರದ್ದಾಗಿದ್ದಕ್ಕೆ ಬೀಗಬೇಕಿಲ್ಲ; ಬೇರೆ ಕಾಯಿದೆಯಡಿ ಬಂಧಿಸಬಹುದು!

ಸಾಮಾಜಿಕ ಜಾಲತಾಣಗಳಲ್ಲಿ, ಆನ್‌ಲೈನ್‌ನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಮಾ.24ರಂದು ಸರ್ವೋಚ್ಚ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿ, ಕಾಮೆಂಟ್‌ಗೂ, ಅದನ್ನು ಲೈಕ್ ಮಾಡಿದ್ದಕ್ಕೂ ಬಂಧಿಸಲು ಅನುವು ಮಾಡಿಕೊಟ್ಟಿದ್ದ ಮಾಹಿತಿ ತಂತ್ರಜ್ಞಾನ ಕಾಯಿದೆಯ 66ಎ ವಿಧಿಯನ್ನು ರದ್ದುಗೊಳಿಸಲು ಆದೇಶಿಸಿತು. ಆದರೆ, ‘ನಮಗೆ ಪೂರ್ಣ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ, ಇನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಏನು ಬೇಕಾದರೂ ಬರೆಯಬಹುದು, ಯಾವುದೇ ಕಾನೂನು ನಮ್ಮನ್ನೇನೂ ಮಾಡಲಾರದು’ ಅಂತ ಅಂದುಕೊಳ್ಳುವಂತಿಲ್ಲ. ಇದಕ್ಕೆ ಕಾರಣವಿದೆ, ಕಾಯಿದೆಯ ಈ ವಿಧಿಯಲ್ಲದಿದ್ದರೇನಂತೆ, ಅವಮಾನಕಾರಿ, ಸುಳ್ಳು, ಪ್ರತೀಕಾರಾತ್ಮಕ, ದ್ವೇಷದ ಬೀಜ ಬಿತ್ತುವ, ನಿಂದನಾತ್ಮಕ ಲೇಖನ ಅಥವಾ ಸಾಲುಗಳನ್ನು ಬರೆದವರ ಮೇಲೆ ಕ್ರಮ ಕೈಗೊಳ್ಳಲು ಸಂವಿಧಾನದಲ್ಲಿ ಬೇರೆ ಸಾಕಷ್ಟು ಪರಿಚ್ಛೇದಗಳು ಇವೆ ಎಂಬುದು ನೆನಪಿರಲಿ.

ಮುಂಬಯಿಯಲ್ಲಿ ಶಿವಸೇನೆ ಮುಖ್ಯಸ್ಥ ಬಾಳ ಠಾಕ್ರೆ ನಿಧನರಾದಾಗ, ಇಬ್ಬರು ಯುವತಿಯರ ಬಂಧನಕ್ಕೆ ಕಾರಣವಾದ ಫೇಸ್‌ಬುಕ್ ಪೋಸ್ಟ್ ಹೇಗಿತ್ತು ಎಂಬುದನ್ನು ನೋಡಿದರೆ, 66ಎ ಕಾಯಿದೆ ಎಷ್ಟು ಕಠಿಣವಾಗಿತ್ತು ಎಂಬುದರ ಮನವರಿಕೆಯಾಗುತ್ತದೆ. ‘ಪ್ರತಿ ದಿನವೂ ಸಾವಿರಾರು ಮಂದಿ ಸಾಯುತ್ತಾರೆ. ಆದರೂ ಪ್ರಪಂಚ ಎಂದಿನಂತೆಯೇ ಸಾಗುತ್ತದೆ. ಒಬ್ಬ ರಾಜಕಾರಣಿಯು ಸಹಜ ಸಾವನ್ನಪ್ಪಿದಾಗ, ಎಲ್ಲರೂ ಹುಚ್ಚಾಟ ಪ್ರದರ್ಶಿಸುತ್ತಾರೆ. ಬಲವಂತವಾಗಿ ಬಂದ್ ಮಾಡಿಸಲಾಗುತ್ತಿದೆ. ಯಾರಾದರೂ ಭಗತ್ ಸಿಂಗ್, ಆಜಾದ್, ಸುಖದೇವ್‌ಗೆ 2 ನಿಮಿಷ ಮೌನ ಅಥವಾ ಗೌರವ ನೀಡಿದ್ದು ಯಾವಾಗ? ಗೌರವವನ್ನು ಗಳಿಸಿಕೊಳ್ಳಬೇಕೇ ಹೊರತು, ಕಸಿದುಕೊಳ್ಳುವುದಲ್ಲ, ಬಲವಂತ ಮಾಡುವುದಲ್ಲ. ಇಂದು ಮುಂಬಯಿ ಪೂರ್ತಿ ಬಂದ್ ಆಗಿದೆ.’ ಎಂದು ಬರೆದಿದ್ದ ಶಹೀನ್ ಢಾಢಾ ಮತ್ತು ಇದನ್ನು ಲೈಕ್ ಮಾಡಿದ್ದಕ್ಕಾಗಿ ರಿನು ಶ್ರೀನಿವಾಸನ್ ಎಂಬವರನ್ನು ಬಂಧಿಸಲಾಗಿತ್ತು.

ಇನ್ನೂ ಒಂದು ವಿಚಾರ ತಿಳಿದುಕೊಳ್ಳಬೇಕು. 66ಎ ಎಂಬುದು ಜಾಮೀನು ಪಡೆಯಬಹುದಾದ ಕಾಯಿದೆ. ಆದರೆ, ಪೊಲೀಸರು ಇದರ ಜತೆಗೆ ಬೇರೆ ವಿಧಿಗಳ (ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಹಾಗೂ 505) ಅನುಸಾರ ಕೇಸು ದಾಖಲಿಸಿಕೊಂಡಿರುವುದದಿಂದ ಅವರ ಬಂಧನ ಮುಂದುವರಿಕೆಗೆ ಕಾರಣವಾಗಿತ್ತು.

ಯಾವ್ಯಾವುವು:? ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಮತ್ತು 153 ಎ ವಿಧಿಗಳ ಪ್ರಕಾರ, ಕೋಮು ದಂಗೆ, ಕೋಮು ಸಂಘರ್ಷಕ್ಕೆ ಪ್ರೇರೇಪಣೆ ನೀಡುವ ಮತ್ತು ಸಮುದಾಯಗಳ ನಡುವೆ ದ್ವೇಷ ಬಿತ್ತುವಂತಹಾ ಹೇಳಿಕೆಗಳನ್ನು ಮೌಖಿಕವಾಗಿ ಅಥವಾ ಬರವಣಿಗೆ ರೂಪದಲ್ಲಿ ಪ್ರಕಟಪಡಿಸಿದರೆ, ಅದು ಶಿಕ್ಷಾರ್ಹ. 6 ತಿಂಗಳಿಂದ 1 ವರ್ಷದವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು.

ಐಪಿಸಿ 500ನೇ ವಿಧಿ ಪ್ರಕಾರ, ವ್ಯಕ್ತಿಯೊಬ್ಬರ ನೈತಿಕ/ಬೌದ್ಧಿಕ ನಡತೆ, ಜಾತಿ ಅಥವಾ ವೃತ್ತಿಯನ್ನು ಮುಂದಿಟ್ಟುಕೊಂಡು ನಿಂದಿಸುವುದು ‘ಮಾನನಷ್ಟ’ ಎಂದಾಗುತ್ತದೆ ಮತ್ತು ಗರಿಷ್ಠ 2 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ. ಸೆಕ್ಷನ್ 505 ಪ್ರಕಾರ, ಸಾರ್ವಜನಿಕರಲ್ಲಿ ಭೀತಿ ಅಥವಾ ಆತಂಕಕ್ಕೆ ಕಾರಣವಾಗಬಲ್ಲ ವಿಷಯಗಳು/ಗಾಳಿ ಸುದ್ದಿ ಹಬ್ಬುವುದು, ಬೇರೆ ಸಮುದಾಯ/ವರ್ಗದವರನ್ನು ಪ್ರಚೋದಿಸುವುದು ಶಿಕ್ಷಾರ್ಹವಾಗಿದ್ದು, ಗರಿಷ್ಠ 3 ವರ್ಷ ಜೈಲು, ದಂಡ ವಿಧಿಸಬಹುದಾಗಿದೆ.

ಅದೇ ರೀತಿ, ಸೆಕ್ಷನ್ 506: ವ್ಯಕ್ತಿ/ಆಸ್ತಿ/ಪ್ರತಿಷ್ಠೆಗೆ ಹಾನಿಯೊಡ್ಡುವ ಬೆದರಿಕೆಗೆ 2 ವರ್ಷ ಜೈಲು, ದಂಡ, ಮಹಿಳೆಯ ಶೀಲದ ಬಗ್ಗೆ ನಿಂದಿಸಿದರೆ 7 ವರ್ಷ ಜೈಲು, ದಂಡ; ಸೆಕ್ಷನ್ 507ರ ಪ್ರಕಾರ, ಅನಾಮಿಕ/ನಕಲಿ ಹೆಸರಿನಲ್ಲಿ ಪೋಸ್ಟ್ ಮಾಡಿದರೆ 2 ವರ್ಷ ಜೈಲು; ಸೆಕ್ಷನ್ 509ರ ಅನುಸಾರ, ಮಹಿಳೆಯ ಶೀಲವನ್ನು ಅವಮಾನಿಸಿದರೆ ಮತ್ತು ಖಾಸಗಿತನಕ್ಕೆ ಧಕ್ಕೆ ಮಾಡಿದರೆ 1 ವರ್ಷ ಜೈಲು, ದಂಡ; ದೇಶದ ವಿರುದ್ಧ ಚಿತ್ರ, ಲೇಖನ ಬರೆದರೆ ಸೆಕ್ಷನ್ 124ಎ ಪ್ರಕಾರ ರಾಜದ್ರೋಹ ಆರೋಪದಡಿ ಆಜೀವ ಕಾರಾಗೃಹ, ಸೆಕ್ಷನ್ 295ಎ ಅಡಿಯಲ್ಲಿ, ಧರ್ಮನಿಂದನೆ, ಧಾರ್ಮಿಕ ನಂಬಿಕೆಗಳಿಗೆ ಅವಮಾನವೆಸಗುವ ಹೇಳಿಕೆಗಳಿಗೆ 2 ವರ್ಷದವರೆಗೆ ಜೈಲು. 291ನೇ ವಿಧಿಯ ಅನುಸಾರವೂ ಇದೇ ವಿಷಯದಲ್ಲಿ 1 ವರ್ಷ ಜೈಲು, ದಂಡ ಶಿಕ್ಷೆ ವಿಧಿಸಬಹುದಾಗಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಆಕ್ಷೇಪಾರ್ಹ ಹೇಳಿಕೆಗಳಿಗೂ ವ್ಯತ್ಯಾಸವನ್ನು ನಿಗದಿಪಡಿಸುವ ಅಧಿಕಾರ ಪೊಲೀಸರ ಕೈಯಲ್ಲೇ ಇರುತ್ತದೆ. ಹೀಗಾಗಿ ಸಾಮಾಜಿಕ ತಾಣಗಳಲ್ಲಿ ಬರೆಯುವಾಗ ಸಂಯಮವಿರಲಿ.
ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. [ವಿಜಯ ಕರ್ನಾಟಕ ಅಂಕಣ ಮಾರ್ಚ್ 30, 2015]

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

2 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

2 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

3 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

4 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

9 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

9 months ago