2-ಸ್ಟೆಪ್ ವೆರಿಫಿಕೇಶನ್: ನಿಮ್ಮ ಆನ್‌ಲೈನ್ ಖಾತೆಗಳಿಗೆ ಹೆಚ್ಚುವರಿ ಬೀಗ

ಫೇಸ್‌ಬುಕ್‌ನಲ್ಲಿ ಇತ್ತೀಚೆಗೆ ಪ್ರತಿದಿನ ಸಂವಹನ ನಡೆಸುವ ಸಹೋದ್ಯೋಗಿಯಿಂದಲೇ ಒಂದು ಲಿಂಕ್ ಬಂತು. ಎಂದಿನಂತೆ, ನಮ್ಮವರೇ ಕಳಿಸಿದ ಲಿಂಕ್ ಅಲ್ವಾ ಅಂತ ಕ್ಲಿಕ್ ಮಾಡಿಯೇ ಬಿಟ್ಟೆ. ತಕ್ಷಣ ಏನೋ ಡೌನ್‌ಲೋಡ್ ಆಗಲು ಶುರುವಾಯಿತು. ಸಿಕ್ಸ್ತ್ ಸೆನ್ಸ್ ಕೆಲಸ ಮಾಡಿತು. ಕೂಡಲೇ ಡೌನ್‌ಲೋಡ್ ಆಗುವುದನ್ನು ನಿಲ್ಲಿಸಿಬಿಟ್ಟೆ.

ಇಂಥದ್ದೇ ಅನುಭವ ನಿಮಗೂ ಆಗಿರಬಹುದು. ಫೇಸ್‌ಬುಕ್ ಮೆಸೆಂಜರ್ ಅಥವಾ ವಾಟ್ಸಾಪ್ ಇಲ್ಲವೇ ಇಮೇಲ್ ಮೂಲಕವೂ ಇಂತಹ ಲಿಂಕ್‌ಗಳು ಬರಬಹುದು. ಲಿಂಕ್ ಕ್ಲಿಕ್ ಮಾಡಿ, ಡೌನ್‌ಲೋಡ್ ಆದ ಫೈಲನ್ನೂ ಕ್ಲಿಕ್ ಮಾಡಿದರೆ (ಕೆಲವೊಮ್ಮೆ ಕ್ಲಿಕ್ ಮಾಡದಿದ್ದರೂ ಕೂಡ), ತಂತ್ರಜ್ಞಾನ ಭಾಷೆಯಲ್ಲಿ ಸಾಮಾನ್ಯವಾಗಿ ವೈರಸ್ ಎಂದೇ ಕರೆಯಲಾಗುವ ಮಾಲ್‌ವೇರ್ ಒಂದು ನಮ್ಮ ಕಂಪ್ಯೂಟರ್ ಅಥವಾ ಮೊಬೈಲ್‌ಗೆ ಇನ್‌ಸ್ಟಾಲ್ ಆಗಿಬಿಡುತ್ತದೆ. ಅಲ್ಲಿಂದ ನಮ್ಮೆಲ್ಲ ವೈಯಕ್ತಿಕ ಮಾಹಿತಿಗಳು ಈ ಮಾಲ್‌ವೇರ್ ಕಳುಹಿಸಿದವರಿಗೆ ತಲುಪುವಂತೆ ಈ ಕು-ತಂತ್ರಾಂಶವನ್ನು ರೂಪಿಸಲಾಗಿರುತ್ತದೆ. ಅಥವಾ, ನಿಮ್ಮ ಫೇಸ್‌ಬುಕ್ ಖಾತೆಯಿಂದಲೂ ನಿಮ್ಮೆಲ್ಲ ಸ್ನೇಹಿತ ವರ್ಗಕ್ಕೆ ಈ ಲಿಂಕ್ ಸ್ವಯಂಚಾಲಿತವಾಗಿ ಮೆಸೆಂಜರ್ ಮೂಲಕ ಪೋಸ್ಟ್ ಆಗಬಹುದು!

ಇತ್ತೀಚೆಗೆ ‘ನನ್ನ ಅಕೌಂಟ್ ಹ್ಯಾಕ್ ಆಗಿದೆ, ಕ್ಷಮಿಸಿ’ ಎಂಬ ಪೋಸ್ಟ್‌ಗಳು ಫೇಸ್‌ಬುಕ್‌ನಲ್ಲಿ ಬರುತ್ತಿರುವುದನ್ನು ನೀವೂ ಓದಿರಬಹುದು. ಫೇಸ್‌ಬುಕ್, ಇಮೇಲ್ ಖಾತೆಗಳು, ಬ್ಯಾಂಕಿಂಗ್ ಖಾತೆಗಳು ಹ್ಯಾಕ್ ಆಗುವ ಕುರಿತು ಸಾಕಷ್ಟು ಸುದ್ದಿಗಳೂ ಹೆಚ್ಚಾಗುತ್ತಿವೆ. ಕೈಗೆಟಕುವ ದರದಲ್ಲಿ ಇಂಟರ್ನೆಟ್ ವ್ಯವಸ್ಥೆ ಲಭ್ಯವಾಗಿದೆಯಾದರೂ, ಇಂಟರ್ನೆಟ್ ಜಾಲಾಡುವ ಹೊಸಬರು ವಿನೂತನ ಲೋಕಕ್ಕೆ ಕಾಲಿಟ್ಟ ಅನುಭವದಿಂದ ನಮ್ಮ ಸುರಕ್ಷತೆಯನ್ನೇ ಮರೆತುಬಿಟ್ಟಿರುವುದೇ ಇದಕ್ಕೆ ಪ್ರಧಾನ ಕಾರಣ. ಆನ್‌ಲೈನ್‌ನಲ್ಲಿ ಲಭ್ಯವಿರುವ ಅಥವಾ ವಾಟ್ಸಾಪ್, ಫೇಸ್‌ಬುಕ್ ಮುಂತಾದವುಗಳಲ್ಲಿ ನಮಗೆ ದೊರೆಯುವ ಎಲ್ಲ ಸಂದೇಶಗಳೂ ನಿಜವಾಗಿರುವುದಿಲ್ಲ ಎಂದು ಎಷ್ಟೇ ಬಾರಿ ಎಚ್ಚರಿಕೆ ಕೊಟ್ಟರೂ, ಇಂಟರ್ನೆಟ್ ಸಂಪರ್ಕ ಸಿಕ್ಕ ಧಾವಂತದಲ್ಲಿ ಆಗಾಗ್ಗೆ ಎಡವುತ್ತಾರೆ. ಅನಗತ್ಯ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು, ಎಲ್ಲ ಸಂದೇಶಗಳೂ ನಿಜವಾಗಿರುವುದಿಲ್ಲ ಎಂಬ ಸುರಕ್ಷತೆಯ ವಿಚಾರಗಳೊಂದಿಗೆ, ಸಂದೇಶಗಳನ್ನು ಬೇಕಾಬಿಟ್ಟಿಯಾಗಿ ಫಾರ್ವರ್ಡ್ ಮಾಡಬಾರದು, ಬೇರೊಬ್ಬರನ್ನು ನಿಂದಿಸುವ ಯಾವುದೇ ರೂಪಲ್ಲಿರಬಹುದಾದ ಪೋಸ್ಟ್‌ಗಳನ್ನು ಫಾರ್ವರ್ಡ್ ಮಾಡಬಾರದು ಎಂಬ ಕಾನೂನಾತ್ಮಕ ಅಂಶಗಳವರೆಗೆ… ನಾವು ಅಸಡ್ಡೆ ತೋರಿಸುತ್ತೇವೆ. ಕೈತಪ್ಪಿ ಏನೋ ಆಗಿಬಿಡುತ್ತದೆ. ಅಕೌಂಟ್‌ಗಳು ಹ್ಯಾಕ್ ಆಗುವುದಕ್ಕೆ ಮತ್ತು ಇತ್ತೀಚೆಗೆ ಹಲವಾರು ಮಂದಿ ಬಂಧಿತರಾಗಿರುವುದಕ್ಕೆ ಈ ರೀತಿಯ ನಿರ್ಲಕ್ಷ್ಯವೇ ಕಾರಣ. ನಾವು ಸುರಕ್ಷಿತವಾಗಿರೋಣ, ನಮಗೆ ಗೊತ್ತಿರುವವರಿಗೂ ಸುರಕ್ಷತೆಯ ವಿಚಾರಗಳನ್ನು ತಿಳಿಸಿಕೊಡೋಣ ಎಂಬ ಉದ್ದೇಶದೊಂದಿಗೆ ಈ ಬಾರಿಯ ಅಂಕಣ ನಿಮ್ಮ ಮುಂದಿದೆ.

ಆನ್‌ಲೈನ್ ಸುರಕ್ಷತೆ ಎಂದರೆ ಮುಖ್ಯವಾಗಿ ನಮ್ಮ ಸೋಷಿಯಲ್ ಮೀಡಿಯಾ ಖಾತೆಗಳು, ಬ್ಯಾಂಕಿಂಗ್ ಖಾತೆ, ಇ-ಮೇಲ್, ಪಾಸ್‌ವರ್ಡ್‌ಗಳನ್ನು ಸುರಕ್ಷಿತವಾಗಿಟ್ಟುಕೊಳ್ಳುವ ಮೂಲಕ, ಹಾಗೂ ಯಾವುದೇ ಸಂಶಯಾತ್ಮಕ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡದಿರುವ ಮೂಲಕ, ಕಾದು ಕುಳಿತಿರುವ ವಂಚಕರ ಬಲೆಗೆ ಬೀಳದಂತೆ ನಮ್ಮನ್ನು ರಕ್ಷಿಸಿಕೊಳ್ಳುವುದಾಗಿದೆ. ಈ ಬಾರಿ ನಾನು ಹೇಳಲು ಹೊರಟಿರುವುದು ಕೆಲವರಿಗಷ್ಟೇ ಗೊತ್ತಿರುವ ಒಂದು ವಿಚಾರದ ಬಗ್ಗೆ. ನಮ್ಮ ಅಮೂಲ್ಯ ಲಾಗಿನ್ ಕ್ರೆಡೆನ್ಶಿಯಲ್‌ಗಳಿಗೆ ಮತ್ತೊಂದು ಪದರದ ಸುರಕ್ಷತೆಯ ಲೇಪನ ನೀಡಲು ಸಾಕಷ್ಟು ಸೇವಾ ಕಂಪನಿಗಳು ಎರಡು ಹಂತದ ದೃಢೀಕರಣ (Two Step Verification) ಎಂಬ ಆಯ್ಕೆಯನ್ನು ಕೊಟ್ಟಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಿ.

ಉದಾಹರಣೆಗೆ, ನಿಮ್ಮ ಬ್ಯಾಂಕಿಂಗ್ ಖಾತೆಗೆ ಲಾಗಿನ್ ಆಗಬೇಕಿದ್ದರೆ, ಮೊದಲನೇ ಹಂತದ ದೃಢೀಕರಣ ಎಂದರೆ ನಿಮ್ಮ ಲಾಗಿನ್ ಐಡಿ ಮತ್ತು ಸಾಮಾನ್ಯ ಪಾಸ್‌ವರ್ಡ್. ಜತೆಗೆ ಕೆಲವು ಬ್ಯಾಂಕಿಂಗ್ ಖಾತೆಗಳು ಒಂದು ಚಿತ್ರವನ್ನೋ, ಒಂದು ವಾಕ್ಯವನ್ನೋ ಕೊಟ್ಟು ಕ್ಲಿಕ್ ಮಾಡಲು ಹೇಳುತ್ತವೆ. ಇದಲ್ಲದೆ, ನಮ್ಮ ಮೊಬೈಲ್‌ನಲ್ಲಿ ಚುಕ್ಕಿ ಜೋಡಿಸುವ ಪ್ಯಾಟರ್ನ್, ಫಿಂಗರ್‌ಪ್ರಿಂಟ್ ಹಾಗೂ ಮುಖ ಗುರುತಿಸುವ (ಫೇಸ್ ರೆಕಗ್ನಿಷನ್) ತಂತ್ರಜ್ಞಾನಗಳು ಕೂಡ ಹೆಚ್ಚುವರಿ ಸುರಕ್ಷತೆಯ ಲೇಪನ ನೀಡಲು ಸಹಕರಿಸುತ್ತವೆ.

ಇನ್ನು, ಕೆಲವು ಇಮೇಲ್, ಸೋಷಿಯಲ್ ಮೀಡಿಯಾ, ಬ್ಯಾಂಕಿಂಗ್ ಖಾತೆಗಳು ಏಕಕಾಲಿಕ ಪಾಸ್‌ವರ್ಡ್ (ಒನ್ ಟೈಮ್ ಪಾಸ್‌ವರ್ಡ್ – ಒಟಿಪಿ) ಮೂಲಕ ಎರಡನೇ ಹಂತದ ಸುರಕ್ಷತೆ ಹೊಂದಿರುತ್ತವೆ. ಅಂದರೆ, ಆಯಾ ಖಾತೆಗಳಿಗೆ ಜೋಡಿಸಿದ ಮೊಬೈಲ್ ಸಂಖ್ಯೆಗೆ ಒಟಿಪಿ ಸಂದೇಶ ಬರುತ್ತದೆ. ಅದನ್ನು ನಿರ್ದಿಷ್ಟ ಸಮಯದೊಳಗೆ ನಮೂದಿಸಿದರೆ ಮಾತ್ರ ಖಾತೆಗೆ ಪ್ರವೇಶ ಪಡೆಯಬಹುದು ಅಥವಾ ಲಾಗಿನ್ ಆಗಬಹುದು. ಇದು ತತ್ಕಾಲೀನ ಪಾಸ್‌ವರ್ಡ್, ಒಮ್ಮೆ ಮಾತ್ರ ಬಳಸಬಹುದು ಮತ್ತು ಇದು ಅಲ್ಪಾಯುಷಿ.

ಒಟಿಪಿ ಬರುವುದು ಮೊಬೈಲ್ ಸಿಮ್ ನಂಬರ್‌ಗೆ ಆಗಿರುವುದರಿಂದ ನಿಮ್ಮ ಮೊಬೈಲ್ ಮತ್ತು ಸಿಮ್ ಕಾರ್ಡನ್ನು ಭದ್ರವಾಗಿಟ್ಟುಕೊಳ್ಳುವುದು ಅತಿ ಮುಖ್ಯ. ನಿಮ್ಮ ನೆಟ್ ಬ್ಯಾಂಕಿಂಗ್ ಖಾತೆಗೂ ಇದು ಲಭ್ಯವಿದೆಯೇ ಎಂದು ನೋಡಿಕೊಂಡು ಎನೇಬಲ್ ಮಾಡಿಕೊಳ್ಳಿ. ಹೆಚ್ಚಿನ ಬ್ಯಾಂಕುಗಳು ಈ ವ್ಯವಸ್ಥೆ ಹೊಂದಿರುತ್ತವೆ. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಿಗೆ ಈ ವ್ಯವಸ್ಥೆ ಅತ್ಯಂತ ಅಗತ್ಯ.

ಹೆಚ್ಚಿನವರು ಗೂಗಲ್‌ನ ಇಮೇಲ್ ಖಾತೆಯಾಗಿರುವ ಜಿಮೇಲ್ ಬಳಸುತ್ತಿದ್ದಾರೆ. ಜಿಮೇಲ್‌ನಲ್ಲಿ ಕೂಡ 2 ಸ್ಟೆಪ್ ವೆರಿಫಿಕೇಶನ್ ಸೌಲಭ್ಯ ನೀಡಲಾಗಿದೆ. ವಿಶೇಷವಾಗಿ ಹೊರಗಿನ ಕಂಪ್ಯೂಟರುಗಳಲ್ಲಿ ಅಥವಾ ಸೈಬರ್ ಕೆಫೆಗಳಲ್ಲಿ ಜಿಮೇಲ್‌ಗೆ ಲಾಗಿನ್ ಆಗುತ್ತೀರೆಂದಾದರೆ, ಈ ವ್ಯವಸ್ಥೆ ಬಳಸುವುದು ಅಗತ್ಯ. ಇದನ್ನು ಎನೇಬಲ್ (ಸಕ್ರಿಯ) ಮಾಡುವುದು ಹೇಗೆಂದರೆ, ನಿಮ್ಮ ಖಾತೆಗೆ ಲಾಗಿನ್ ಆಗಿ. ಬಲ ಮೇಲ್ಭಾಗದಲ್ಲಿ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿದಾಗ, ‘ಮೈ ಅಕೌಂಟ್’ ಎಂಬುದನ್ನು ಕ್ಲಿಕ್ ಮಾಡಿ. ಅಲ್ಲಿ ‘ಸೈನ್ ಇನ್ ಆ್ಯಂಡ್ ಸೆಕ್ಯುರಿಟಿ’ ಎಂಬ ವಿಭಾಗದ ಮೇಲೆ ಕ್ಲಿಕ್ ಮಾಡಿದಾಗ, ತೆರೆದುಕೊಳ್ಳುವ ಪುಟದಲ್ಲಿ ಒಂದಿಷ್ಟು ಕೆಳಗೆ ಸ್ಕ್ರಾಲ್ ಮಾಡಿ. ‘ಪಾಸ್‌ವರ್ಡ್ ಆ್ಯಂಡ್ ಸೈನ್ ಇನ್ ಮೆಥಡ್’ ಎಂದು ಬರೆದಿರುವಲ್ಲಿ 2-ಸ್ಟೆಪ್ ವೆರಿಫಿಕೇಶನ್ ಆನ್ ಮಾಡಿಕೊಳ್ಳಿ. ನಿಮ್ಮ ಫೋನ್ ನಂಬರ್ ಅಲ್ಲಿ ನಮೂದಿಸಿದರೆ, ಯಾರೇ ಎಲ್ಲೇ ಆದರೂ ನಿಮ್ಮ ಪಾಸ್‌ವರ್ಡ್ ಮೂಲಕ ಲಾಗಿನ್ ಆಗಬೇಕಿದ್ದರೆ ನಿಮ್ಮದೇ ಮೊಬೈಲ್ ಫೋನ್‌ಗೆ ಎಸ್ಸೆಮ್ಮೆಸ್ ಸಂದೇಶದಲ್ಲಿ ಬರುವ ದೃಢೀಕರಣ ಕೋಡ್ ನಮೂದಿಸಬೇಕಾಗುತ್ತದೆ. ಇಲ್ಲದಿದ್ದರೆ ಲಾಗಿನ್ ಆಗುವುದಿಲ್ಲ.

ಇದರ ಮತ್ತೊಂದು ಲಾಭವೆಂದರೆ, ಯಾರಾದರೂ ನಿಮ್ಮ ಜಿಮೇಲ್ ಖಾತೆಗೆ ಲಾಗಿನ್ ಆಗಲು ಪ್ರಯತ್ನಿಸುತ್ತಿದ್ದಾರೆ ಎಂಬುದೂ ಗೊತ್ತಾಗುತ್ತದೆ. ಅಂದರೆ, ನಿಮ್ಮ ಪಾಸ್‌ವರ್ಡ್ ಅವರಿಗೆ ಗೊತ್ತಿದೆ ಎಂದರ್ಥ. ನಿಮಗೆ ಈ ರೀತಿ ಶಂಕಾಸ್ಪದವಾಗಿ ಲಾಗಿನ್ ವೆರಿಫಿಕೇಶನ್ ಕೋಡ್ ಬಂದದ್ದು ಗೊತ್ತಾದ ತಕ್ಷಣ ನಿಮ್ಮ ಪಾಸ್‌ವರ್ಡ್ ಬದಲಾಯಿಸಿಬಿಡಿ. ಸುರಕ್ಷಿತವಾಗಿರುತ್ತದೆ ನಿಮ್ಮ ಜಿಮೇಲ್ ಖಾತೆ.

ಗಮನಿಸಿ: ಕೆಲವು ಸಂದೇಶಗಳು ನಿಮ್ಮ ಸ್ನೇಹಿತರ ಖಾತೆಯಿಂದಲೇ ಬರಬಹುದು. ಈ ಲಿಂಕ್ ಕ್ಲಿಕ್ ಮಾಡಿ ಅಂತಲೋ, ಸುಮ್ಮನೇ ನಿಮ್ಮ ಹೆಸರನ್ನು ಹೋಲುವಂತೆ ತೋರುವ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮುನ್ನ ಯೋಚಿಸಿ, ಸ್ನೇಹಿತರನ್ನೇ ಕೇಳಿ, ನಂತರವಷ್ಟೇ ತೆರೆಯಿರಿ.

ಅಂಕಣ By ಅವಿನಾಶ್ ಬಿ. for 23 ಜನವರಿ 2018

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

View Comments

Recent Posts

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

2 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

2 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

3 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

4 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

9 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

9 months ago