ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ, ಮಾರ್ಚ್ 24, 2014
ಕಳೆದ ತಿಂಗಳು ವಾಟ್ಸ್‌ಆ್ಯಪ್ ಎಂಬ ಮೆಸೆಂಜರ್ ಸೇವೆಯನ್ನು ಫೇಸ್‌ಬುಕ್ ‘ಲೈಕ್’ ಮಾಡಿತು ಮತ್ತು ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ತನ್ನದಾಗಿಸಿಕೊಂಡಿತು. ಈ ಸಂದೇಶ ಸೇವೆಯನ್ನು ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್‌ಬುಕ್ ಖರೀದಿ ಮಾಡಿರುವುದು ಆನ್‌ಲೈನ್ ಜಗತ್ತಿನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತು. ಆದರೆ, ಕೆಲವರಿಗೆ, ವಿಶೇಷವಾಗಿ ಗ್ರಾಮೀಣ ಭಾಗದಲ್ಲಿರುವವರಿಗೆ ಉಚಿತವಾಗಿ ಸಂದೇಶ ರವಾನಿಸಲು ಸಹಾಯ ಮಾಡುವ ವಾಟ್ಸ್‌ಆ್ಯಪ್ ಎಂಬ ಆ್ಯಪ್ ಬಗ್ಗೆ ತಿಳಿದಿಲ್ಲ. ಅವರಿಗಾಗಿ ಈ ಮಾಹಿತಿ.
ಸ್ಮಾರ್ಟ್‌ಫೋನ್‌ಗಳೆಂದರೆ, ಅದಕ್ಕೆ ಇಂಟರ್ನೆಟ್ ಸಂಪರ್ಕ ಅತ್ಯಗತ್ಯ. ಇಂಟರ್ನೆಟ್ ಇಲ್ಲದಿದ್ದರೆ (2ಜಿ ಅಥವಾ 3ಜಿ ಡೇಟಾ ಸಂಪರ್ಕ ಅಂತಲೂ ಕರೀತಾರೆ) ಸ್ಮಾರ್ಟ್‌ಫೋನ್‌ನ ಪೂರ್ಣ ಪ್ರಯೋಜನ ಪಡೆಯುವುದು ಸಾಧ್ಯವಿಲ್ಲ ಎಂಬುದು ಮೂಲಭೂತ ಸಂಗತಿ.
ಎಂಎಂಎಸ್ ಅಥವಾ ಮಲ್ಟಿಮೀಡಿಯಾ ಸಂದೇಶ ಸೇವೆ ಎಂಬುದು ಆಡಿಯೋ, ವೀಡಿಯೋ ಮತ್ತು ಪಠ್ಯ ಇರುವ ಸಮಗ್ರ ಸಂದೇಶ ಕಳುಹಿಸುವ ವ್ಯವಸ್ಥೆ. ಇಂತಹಾ ಒಂದು ಸಂದೇಶವನ್ನು ಪಡೆಯಲು ಅಥವಾ ಕಳುಹಿಸಲು ದುಬಾರಿ ಶುಲ್ಕ ತೆರಬೇಕಾಗುತ್ತಿತ್ತು. ಹೀಗಾಗಿ ಹೆಚ್ಚಿನವರು ಅದನ್ನು ಉಪಯೋಗಿಸುತ್ತಿರಲಿಲ್ಲ. ಮತ್ತೊಂದೆಡೆ, ಮೊಬೈಲ್ ಸೇವೆಗಳಲ್ಲಿನ ಪೈಪೋಟಿಯಿಂದಾಗಿ ಕಿರು ಸಂದೇಶ ಸೇವೆಯು (ಎಸ್ಎಂಎಸ್) ಸುಲಭವಾಗಿ ದೊರೆಯುವಂತಾಗಿದ್ದು, ಅಪರಿಮಿತ (ಅನ್‌ಲಿಮಿಟೆಡ್) ಸಂದೇಶಕ್ಕೆ ಶುಲ್ಕದ ಪ್ಯಾಕೇಜ್‌ಗಳೂ ದೊರೆಯತೊಡಗಿದವು. ಇಲ್ಲವಾದಲ್ಲಿ, ಒಂದೊಂದು ಎಸ್ಎಂಎಸ್‌ಗೆ ಕೂಡ ಹಣ ವ್ಯಯವಾಗುತ್ತಿತ್ತು.
ಈ ರೀತಿಯಾಗಿ ಎಂಎಂಎಸ್ ಹಾಗೂ ಎಸ್ಸೆಮ್ಮಸ್‌ಗಳಿಗೆ ಸೆಡ್ಡು ಹೊಡೆಯಲಾರಂಭಿಸಿದ್ದೇ ಮೊಬೈಲ್ ಸಂದೇಶ ಸೇವೆಗಳಾದ ವಾಟ್ಯ್ಆ್ಯಪ್, ವಿ-ಚಾಟ್, ಲೈನ್, ಬಿಬಿಎಂ, ಸ್ಕೈಪ್, ನಿಂಬಝ್, ಚಾಟ್ಆನ್, ವೈಬರ್ ಮುಂತಾದವುಗಳಿಂದ. ಇಂಟರ್ನೆಟ್ ಸಂಪರ್ಕ ಬಳಸಿ, ಇವುಗಳ ಮೂಲಕ ಉಚಿತವಾಗಿ ಸಂದೇಶಗಳನ್ನು, ವೀಡಿಯೋ ಮತ್ತು ಆಡಿಯೋಗಳನ್ನೂ ಕಳುಹಿಸಬಹುದು. ಚಿತ್ರಗಳನ್ನು ಹಂಚಿಕೊಳ್ಳಬಹುದು. ನಮ್ಮ ಮಾತನ್ನೇ ರೆಕಾರ್ಡ್ ಮಾಡಿ ಆ ರೆಕಾರ್ಡಿಂಗ್ ಫೈಲನ್ನು ಕಳುಹಿಸಬಹುದು. ಇದೆಲ್ಲಾ ಉಚಿತವಾಗಿ ಅಂತ ಹೇಳುತ್ತಾರೆ ಯಾಕೆಂದರೆ, ಮಾಮೂಲಿ ಎಸ್ಸೆಮ್ಮೆಸ್ ಅಥವಾ ಎಮ್ಮೆಮ್ಮೆಸ್‌ಗಳಿಗೆ ನಿರ್ದಿಷ್ಟ ಶುಲ್ಕ ಹೇರಲಾಗುತ್ತಿದ್ದರೆ, ಈ ಸಂದೇಶ ಸೇವೆಗಳ ಮೂಲಕ ಕಳುಹಿಸಿದರೆ, ಮೊಬೈಲ್ ಬ್ಯಾಲೆನ್ಸ್‌ನಲ್ಲಿ ಕಡಿತವಾಗುವುದಿಲ್ಲ ಎಂಬ ಭಾವನೆಯಿಂದ.
ಈಗ ಮೊಬೈಲ್ ಫೋನುಗಳಲ್ಲಿ ಇಂಟರ್ನೆಟ್ ಸಂಪರ್ಕವು ಅಗ್ಗವಾಗಿರುವುದರಿಂದ ಜನರು ಈ ರೀತಿಯ ಸಂದೇಶ ಸೇವೆಗಳಿಗೆ ಹೆಚ್ಚು ಮೊರೆ ಹೋಗುತ್ತಿದ್ದಾರೆ. WhatsApp, Line, Viber, Telegram, Skype, ChatOn, Nimbuzz, WeChat ಮುಂತಾದ ಸಂದೇಶ ಆ್ಯಪ್‌ಗಳಲ್ಲಿ ನಿಮ್ಮ ಸ್ನೇಹಿತ ವಲಯದಲ್ಲಿ ಯಾವುದು ಹೆಚ್ಚು ಜನಪ್ರಿಯವಾಗಿದೆಯೋ ಅದನ್ನು ಅಳವಡಿಸಿಕೊಳ್ಳಿ. ಒಂದಕ್ಕಿಂತ ಹೆಚ್ಚು ಕೂಡ ಅಳವಡಿಸಿಕೊಳ್ಳಬಹುದು.
ಆಂಡ್ರಾಯ್ಡ್, ಬ್ಲ್ಯಾಕ್‌ಬೆರಿ, ಐಫೋನ್ ಹಾಗೂ ವಿಂಡೋಸ್ ಫೋನ್‌ಗಳಿಗೆ ಲಭ್ಯವಿರುವ ಈ ಸಂದೇಶ ಸೇವೆಗಳಲ್ಲಿ, ಉದಾಹರಣೆಗೆ, ವಾಟ್ಯ್ಆ್ಯಪ್ ಅನ್ನು ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಿ. ಆ ಆ್ಯಪ್ ಕ್ಲಿಕ್ ಮಾಡಿದಾಗ, ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಲು ಅದು ಕೇಳುತ್ತದೆ ಮತ್ತು ದೃಢೀಕರಿಸಲು ಒಂದು ಕೋಡ್ ಸಂಖ್ಯೆಯನ್ನು ಎಸ್ಎಂಎಸ್ ರೂಪದಲ್ಲಿ ಕಳುಹಿಸುತ್ತದೆ. ಅದನ್ನು ನಮೂದಿಸಿದ ಬಳಿಕ, ನಿಮ್ಮ ಮೊಬೈಲ್ ಫೋನ್‌ನಲ್ಲಿ ಸ್ಟೋರ್ ಆಗಿರುವ ಸಂಪರ್ಕ ಸಂಖ್ಯೆಗಳನ್ನೆಲ್ಲಾ ಜಾಲಾಡಿ, ಯಾರೆಲ್ಲಾ ವಾಟ್ಸ್ಆ್ಯಪ್ ಬಳಸುತ್ತಿದ್ದಾರೆ ಎಂದು ಹುಡುಕಾಡಿ ನಿಮ್ಮ ಮಿತ್ರವರ್ಗಕ್ಕೆ ಸೇರಿಸಿಕೊಳ್ಳುತ್ತದೆ.
ವಾಟ್ಸ್ಆ್ಯಪ್ ಓಪನ್ ಮಾಡಿ, ಯಾರ ಹೆಸರನ್ನಾದರೂ ಕ್ಲಿಕ್ ಮಾಡಿದರೆ, ನೀವು ನಿಮ್ಮ ಕ್ಯಾಮರಾದಲ್ಲಿ ಚಿತ್ರ ಅಥವಾ ವೀಡಿಯೋ ತೆಗೆದು ಕಳುಹಿಸಬಹುದು, ನಿಮ್ಮ ಮೊಬೈಲ್ ಫೋನ್‌ನ ಗ್ಯಾಲರಿಯಲ್ಲಿರುವ ಫೈಲ್‌ಗಳನ್ನು ಕಳುಹಿಸಬಹುದು, ಅಥವಾ ಬೇರೊಬ್ಬರು ಕಳುಹಿಸಿದ್ದನ್ನು ಡೌನ್‌ಲೋಡ್ ಮಾಡಿಕೊಂಡು ವೀಕ್ಷಿಸಬಹುದು. ಇಂಟರ್ನೆಟ್ ಅಪ್‌ಲೋಡ್ ಹಾಗೂ ಡೌನ್‌ಲೋಡ್ ಶುಲ್ಕಗಳು ತಗುಲುತ್ತವೆ. ಅನ್‌ಲಿಮಿಟಿಡ್ ಅಥವಾ ನಿಮ್ಮ ಡೇಟಾ ಪ್ಯಾಕ್ (ಇಂಟರ್ನೆಟ್ ಪ್ಯಾಕೇಜ್) ಮಿತಿಯನ್ನು ಗಮನದಲ್ಲಿಟ್ಟುಕೊಂಡು ಬಳಸಿದರೆ ಎಲ್ಲವೂ ಸುಗಮ. ಎಸ್ಸೆಮ್ಮೆಸ್‌ನಂತೆಯೇ, ಬೇರೆಯವರಿಂದ ಬಂದಿರುವ ಸಂದೇಶಗಳನ್ನು (ವೀಡಿಯೋ, ಆಡಿಯೋ ಅಥವಾ ಪಠ್ಯ) ನೀವು ಫಾರ್ವರ್ಡ್ ಕೂಡ ಮಾಡಬಹುದು. ಆ ಸಂದೇಶವನ್ನು ಒತ್ತಿಹಿಡಿದರೆ, ಫಾರ್ವರ್ಡ್, ಡಿಲೀಟ್, ರಿಪ್ಲೈ ಮುಂತಾದ ಆಯ್ಕೆಗಳು ದೊರೆಯುತ್ತವೆ.
ಸದ್ಯ ಚಾಲ್ತಿಯಲ್ಲಿರುವ ಹೆಚ್ಚಿನ ಸಂದೇಶ ಸೇವೆಗಳು ವಾಯ್ಸ್ ಚಾಟಿಂಗ್ ಅಥವಾ ವೀಡಿಯೋ ಕಾಲಿಂಗ್ ಬೆಂಬಲಿಸುತ್ತಿಲ್ಲ. ಅಂಥವುಗಳಲ್ಲಿ, ನಿಮ್ಮ ಮಾತನ್ನು ರೆಕಾರ್ಡ್ ಮಾಡಿ, ಆಡಿಯೋ ರೂಪದಲ್ಲಿ ಸಂದೇಶವನ್ನು ರವಾನಿಸುವ ವ್ಯವಸ್ಥೆ ಇರುತ್ತವೆ. ಹೀಗಾಗಿ ಏಕಮುಖವಾಗಿ ನೀವು ಆಡಿಯೋ ಸಂಭಾಷಣೆ ನಡೆಸಬಹುದು. ವಾಟ್ಸ್ಆ್ಯಪ್ ಸಂದೇಶವಾಹಕವು ಮೊದಲನೇ ವರ್ಷ ಉಚಿತ ಬಳಸಿ, ನಂತರ ವಾರ್ಷಿಕವಾಗಿ ಒಂದು ಡಾಲರ್ (ಅಂದರೆ ಸುಮಾರು 60 ರೂ. ಆಸುಪಾಸು) ನೀಡಬೇಕಾಗುತ್ತದೆ ಎಂಬ ಸಂದೇಶ ತೋರಿಸುತ್ತಿದೆ. ಆದರೀಗ ಫೇಸ್‌ಬುಕ್ ಸಂಸ್ಥೆಯು ಅದನ್ನು ಖರೀದಿಸಿರುವುದರಿಂದ ಈ ಚಂದಾದಾರಿಕೆ ವ್ಯವಸ್ಥೆ ಮುಂದುವರಿಯುತ್ತದೆಯೇ ಕಾದುನೋಡಬೇಕಾಗಿದೆ.
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.