[ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ]
ನಮ್ಮನ್ನಾಳುವ ಸರಕಾರಕ್ಕೆ ಏನಾಗಿದೆ? ಈಗಾಗಲೇ ಇರುವ ಸಮಸ್ಯೆಗಳನ್ನು ಪರಿಹರಿಸುವ ಬದಲು, ಬೆಲೆ ಏರಿಕೆಗೆ ಕಡಿವಾಣ ಹಾಕುವ ಬದ್ಧತೆ ತೋರುವ ಬದಲು, ಅನಗತ್ಯ ವಿವಾದಗಳನ್ನು ಎಳೆದುಕೊಳ್ಳುತ್ತಲೇ ಸಂಸತ್ತಿನ ಅಮೂಲ್ಯವಾದ ಕಾಲಹರಣ ಮಾಡುತ್ತಿದೆಯಲ್ಲಾ…!
ಮತ್ತಿನ್ನೇನು ಹೇಳಬೇಕು? ಚಿಲ್ಲರೆ ಮಾರಾಟ ವಲಯಕ್ಕೂ ವಿದೇಶೀ ಕಂಪನಿಗಳಿಗೆ ಭರ್ಜರಿ ಮಣೆ ಹಾಕುತ್ತೇವೆ ಎನ್ನುತ್ತಲೇ, ತೀವ್ರ ಪ್ರತಿಭಟನೆ ಎದುರಾದಾಗ ಆ ನಿರ್ಣಯವನ್ನು ವಾಪಸ್ ತೆಗೆದುಕೊಳ್ಳುವ ಯೋಚನೆ ಮಾಡುವ ಮೂಲಕ ಸಂಸತ್‌ನ ಅಮೂಲ್ಯ ಅವಧಿಯನ್ನು ವ್ಯರ್ಥಗೊಳಿಸಿತು. ಚಳಿಗಾಲದ ಅಧಿವೇಶನದಲ್ಲಿ ಮುಖ್ಯ ಚರ್ಚಾ ವಿಷಯವಾಗಬೇಕಿದ್ದ ಲೋಕಪಾಲ ಮಸೂದೆಯನ್ನು ಮೂಲೆಗುಂಪು ಮಾಡುವ ಪ್ರಯತ್ನಗಳಲ್ಲಿ ಇದೂ ಒಂದು ಅಂತ ವಿಶ್ಲೇಷಿಸಬಹುದು. ಇದರ ನಡುವೆಯೇ, ಇಲ್ಲದ ಉಸಾಬರಿಯೋ ಎಂಬಂತೆ ನಮ್ಮ ಘನ ಸರಕಾರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್ ಅವರು, ಈ ಹಿಂದೆ 2ಜಿ ಹಗರಣದಲ್ಲಿ ಸರಕಾರಕ್ಕೆ ಝೀರೋ ಲಾಸ್ (ನಷ್ಟ ಶೂನ್ಯ-ಅಂದರೆ ಈ ಹಗರಣದಲ್ಲಿ ಸರಕಾರಕ್ಕೆ ನಷ್ಟವೇ ಆಗಿಲ್ಲ) ಎಂಬ ಹೇಳಿಕೆ ಕೊಟ್ಟ ವೇಗದಲ್ಲಿಯೇ, ಫೇಸ್‌ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ತಾಣಗಳಲ್ಲಿನ ಅಭಿವ್ಯಕ್ತಿಗೆ ಕಡಿವಾಣ ಹಾಕಲು ಹೊರಟಿದ್ದಾರೆ. ಅಷ್ಟೇ ಅಲ್ಲದೆ, ಈ ಬಗ್ಗೆ ತೀವ್ರ ಟೀಕೆಗಳು ಎದುರಾದಾಗ ‘ಇದು ಸೆನ್ಸಾರ್ ಅಲ್ಲ’ ಅಂತ ಹೇಳುವ ಮೂಲಕ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ!
ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ಈ ಕುರಿತು ವರದಿ ಪ್ರಕಟಿಸಿದ ತಕ್ಷಣವೇ ಫೇಸ್‌ಬುಕ್, ಟ್ವಿಟರ್ ತಾಣಗಳಲ್ಲೆಲ್ಲಾ ಕಪಿಲ್ ಸಿಬಲ್ ಅವರು ಯಾವ ನಿಂದನಾತ್ಮಕ ಭಾಷೆಯನ್ನು ನಿಯಂತ್ರಿಸಲು ಹೊರಟಿದ್ದರೋ, ಅದೇ ನಿಂದನಾತ್ಮಕ ಟೀಕೆಗಳು ಸರಾಗವಾಗಿ ಪ್ರವಾಹದಂತೆ ಹರಿದುಬಿಟ್ಟವು. ನೀವೊಮ್ಮೆ ‘IdiotSibal’ ಅಂತ ಗೂಗಲ್ ಸರ್ಚ್ ಮಾಡಿದರೆ ಸಾಕು, ಆರೂವರೆ ಲಕ್ಷದಷ್ಟು ಲೇಖನಗಳು ನಿಮ್ಮ ಮುಂದೆ ಧುತ್ತನೆ ಬಂದು ನಿಲ್ಲುತ್ತವೆ.
ಸಾಮಾಜಿಕ ತಾಣಗಳಲ್ಲೇನೋ ಈಗ ಅಭಿವ್ಯಕ್ತಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಬೆಲೆ ಏರಿಕೆಯಿಂದಾಗಿ ಮತ್ತು ಈ ಬಗ್ಗೆ ಸರಕಾರ ಗಮನ ಹರಿಸದೆ ಬೇರೆಲ್ಲಾ ವಿಚಾರಗಳ ಬಗೆಗಷ್ಟೇ ಚಿಂತನೆ ನಡೆಸುತ್ತಿರುವುದು, ನಮ್ಮ ದೇಶದ ಪ್ರಧಾನ ಮಂತ್ರಿಗಳು ವೌನವೇ ಮೂರ್ತಿವೆತ್ತಂತೆ ಇರುವುದು, ಬೆಳೆ ಬೆಳೆದ ಕೃಷಿಕರ ಕೈಗೆ ಚಿಕ್ಕಾಸು ದಕ್ಕದಿದ್ದರೂ, ಜನ ಸಾಮಾನ್ಯರು ಮಾತ್ರ ಪ್ರತಿಯೊಂದಕ್ಕೂ ಭಾರಿ ಬೆಲೆ ತೆತ್ತು ಖರೀದಿಸುವಂತಾಗಿರುವುದು, ಇಳಿಯದ ಬೆಲೆಗಳು…. ಇತ್ಯಾದಿಗಳಿಂದಾಗಿ ಜನಸಾಮಾನ್ಯರು ರೋಸಿ ಹೋಗಿದ್ದಾರೆ. ಭ್ರಷ್ಟಾಚಾರ ತಾಂಡವವಾಡುತ್ತಿರುವುದಕ್ಕೆ ಜನಾಕ್ರೋಶವೆಷ್ಟರ ಮಟ್ಟ ತಲುಪಿದೆ ಎಂಬುದಕ್ಕೆ ಕೃಷಿ ಸಚಿವ ಶರದ್ ಪವಾರ್ ಅವರು ಏಟು ತಿಂದ ಅಪಾಯಕಾರಿ ಪ್ರಕರಣವೂ ನಮ್ಮ ಮುಂದೆ ನಡೆದಿದೆ. ದೇಶದಲ್ಲಿ ಪರಿಸ್ಥಿತಿ ಹೀಗಿರುವಾಗ, ‘ಈ ಸರಕಾರವಂತೂ ಏನೂ ಮಾಡುತ್ತಿಲ್ಲ. ನಮ್ಮ ಆಕ್ರೋಶವನ್ನು, ಸಿಟ್ಟು ಸೆಡವುಗಳನ್ನು ಫೇಸ್‌ಬುಕ್, ಟ್ವಿಟರ್‌ಗಳಲ್ಲಾದರೂ ಹರಿದುಬಿಟ್ಟು, ಕೊಂಚ ನೆಮ್ಮದಿಯಿಂದಿರೋಣ’ ಎಂದುಕೊಂಡಿದ್ದ ಜನರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಪ್ರಯತ್ನವೊಂದು ನಡೆದಾಗ ಜನರಿಗೆಷ್ಟು ನೆತ್ತರು ಕುದಿಯಲಿಕ್ಕಿಲ್ಲ? ಈ ರೀತಿಯ ಹೇಳಿಕೆಗಳನ್ನು ನೀಡಿ, ಟ್ವಿಟರ್-ಫೇಸ್‌ಬುಕ್‌ಗಳಲ್ಲಿ ನಿಂದನಾತ್ಮಕ ಪದಪ್ರಯೋಗದ ಪ್ರವಾಹವನ್ನು ಸಿಬಲ್ (ತಮ್ಮ ವಿರುದ್ಧವೇ!) ಹೆಚ್ಚಿಸಿದ್ದಾರೆ ಅಷ್ಟೇ.
ಈಗ ಸರಕಾರದ ಅಥವಾ ಒಟ್ಟಾರೆಯಾಗಿ ರಾಜಕಾರಣಿಗಳ ಹಗರಣಗಳ ಬಗ್ಗೆ ಅತ್ಯಂತ ಹೆಚ್ಚು ಚರ್ಚೆಯಾಗುತ್ತಿರುವುದು ಇಂಟರ್ನೆಟ್‌ನಲ್ಲಿಯೇ. ಈ ಅದ್ಭುತ ಮಾಹಿತಿ ಸಾಮ್ರಾಜ್ಯದಲ್ಲಿ ನಮ್ಮನ್ನಾಳುವವರು ಏನು ಹೇಳಿದ್ದಾರೆ, ಏನು ಮಾಡಿದ್ದಾರೆ, ಯಾವ ಪರಿ ತಿಪ್ಪರಲಾಗ ಹಾಕಿದ್ದಾರೆ, ಅವರ ಹಗರಣಗಳೇನು ಎಂಬುದೆಲ್ಲಾ ಕ್ಷಣಾರ್ಧದಲ್ಲಿ ನಿಮ್ಮ ಮುಂದಿರುತ್ತದೆ.
ಈ ಹಿಂದೆ ನಿಮಗೆ ನೆನಪಿರಬಹುದು. ಟ್ವಿಟರ್‌ನಲ್ಲಿ ಯುಪಿಎ ಸರಕಾರದ ವಿರುದ್ಧವೋ, ಜಾತ್ಯತೀತತೆ ಹೆಸರಿನಲ್ಲಿ ಓಟ್ ಬ್ಯಾಂಕ್ ರಾಜಕಾರಣ ಮಾಡುವುದನ್ನೋ ವಿರೋಧಿಸಿ ಬರೆದವರನ್ನು ‘ಇಂಟರ್ನೆಟ್ ಹಿಂದುಗಳು’ ಎಂಬ ಹಣೆಪಟ್ಟಿಯೊಂದನ್ನು ಕಟ್ಟಲಾಗಿತ್ತು. ಅಂದರೆ, ಬೆಲೆ ಏರಿಕೆ, ಮೂಲ ಸೌಕರ್ಯಗಳ ಕೊರತೆ, ಲಂಚ-ಭ್ರಷ್ಟಾಚಾರದ ವಿರುದ್ಧ ಮತ್ತು ಇದೆಲ್ಲಾ ನಡೆಯುತ್ತಿರುವ ಆಡಳಿತ ಯಂತ್ರದ ವಿರುದ್ಧ ಧ್ವನಿಯಾಗಲು ತಮಗೆ ಬೇರಾವುದೇ ಮಾಧ್ಯಮಗಳು ಇಲ್ಲದಾದಾಗ, ಜನ ಸಾಮಾನ್ಯರ ಒಡಲಿನ ನಿತ್ಯ ವೇದನೆಗೆ ಮಾಧ್ಯಮಗಳು ಧ್ವನಿ ನೀಡದೇ ಹೋದಾಗ, ಈ ತಥಾಕಥಿತ ‘ಇಂಟರ್ನೆಟ್ ಹಿಂದುಗಳು’ ಫೇಸ್‌ಬುಕ್, ಬ್ಲಾಗ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲ ತಾಣಗಳ ಮೊರೆ ಹೊಕ್ಕರು. ಸರಕಾರವನ್ನು ಯದ್ವಾತದ್ವಾ ತರಾಟೆಗೆ ತೆಗೆದುಕೊಳ್ಳಲಾರಂಭಿಸಿದರು. ಪ್ರಮುಖ ವಾಹಿನಿಗಳ ಪತ್ರಕರ್ತರ ಮೇಲೂ ಹರಿಹಾಯ್ದರು.
ಇಂಥದ್ದೊಂದು ಅಸಹನೆಗೆ ಕಾರಣವೂ ಇಲ್ಲದಿಲ್ಲ. ಜನರ ರಕ್ತಹೀರುವ ಭ್ರಷ್ಟಾಚಾರದಿಂದ ಮುಕ್ತಿ ದೊರಕಿಸಿಕೊಡಲು ಸಾಮಾಜಿಕ ಹೋರಾಟ ನಡೆಸುತ್ತಿರುವ, ಪ್ರಬಲವಾದ ಲೋಕಪಾಲ ಕಾಯಿದೆಗೆ ಆಗ್ರಹಿಸುತ್ತಿರುವವರ ಜೀವನ ಚರಿತ್ರೆ ಕೆದಕಿ, ತೇಜೋವಧೆ ಮಾಡಲಾಗುತ್ತಿದೆ. ಕಪ್ಪು ಹಣ ವಾಪಸ್ ತರಿಸಲು ಆಗ್ರಹಿಸಿದವರ ಮೇಲೆ ಲಾಠಿ ಬೀಸಿ, ಚಳವಳಿಯೊಂದನ್ನು ಹತ್ತಿಕ್ಕಲಾಗಿದೆ. ಲಾಠಿಯೇಟಿನಿಂದಲೇ ರಾಜ್ ಬಾಲಾ ಎಂಬ ಮಹಿಳೆಯೊಬ್ಬಾಕೆ ಸಾವನ್ನಪ್ಪಿದರೂ, ಲಾಠಿ ಪ್ರಯೋಗಿಸಲೇ ಇಲ್ಲ ಎಂದು ನ್ಯಾಯಾಲಯಕ್ಕೆ ಹೇಳಿಕೆ ನೀಡಲಾಗುತ್ತಿದೆ. 2ಜಿ ಹಗರಣದಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಸಿಕ್ಕಿಬಿದ್ದ ಭಾರೀ ಕುಳಗಳ ಜಾಮೀನು ಅರ್ಜಿಯನ್ನು ನಾವು ವಿರೋಧಿಸುವುದಿಲ್ಲ ಅಂತ ತನಿಖಾ ಮಂಡಳಿಗಳು ಹೇಳಿ ಕೈತೊಳೆದುಕೊಳ್ಳುತ್ತಾ ಅಚ್ಚರಿ ಹುಟ್ಟಿಸುತ್ತವೆ. ಸಿಬಿಐ ಸ್ವಾಯತ್ತ ತನಿಖಾ ಸಂಸ್ಥೆಯಾದರೂ, ಅದನ್ನು ಲೋಕಪಾಲದ ಪರಿಧಿಗೆ ಬಾರಗೊಡದೆ, ತಮಗಾಗದವರ ಮೇಲೆ ಛೂಬಿಟ್ಟು, ಅಗತ್ಯ ಬಿದ್ದಾಗ ಕೇಸು ವಾಪಸ್ ತೆಗೆದುಕೊಳ್ಳುವ ಅದೆಷ್ಟೋ ಪ್ರಕರಣಗಳು ನಮ್ಮ ಮುಂದಿವೆ. ಜನರ ಬವಣೆಗಳಿಗೆ ಧ್ವನಿಯಾಗಬೇಕಾದ ಪ್ರತಿಪಕ್ಷಗಳು ಕೂಡ ಆಳುವವರ ‘ವಿಷಯಾಂತರ’ ತಂತ್ರಕ್ಕೆ ಬಲಿಯಾಗಿಹೋಗಿವೆ. ಹೀಗಾದರೆ ಜನ ಸಾಮಾನ್ಯರ ಒಡಲ ಧ್ವನಿಗೆ ಧ್ವನಿವರ್ಧಕ ಆಗುವವರಾದರೂ ಯಾರು?
ಹಾಗಂತ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದಾಕ್ಷಣ ಬಾಯಿಗೆ ಬಂದಂತೆ ಬರೆದುಕೊಳ್ಳುವುದೋ, ವ್ಯಕ್ತಿನಿಂದನೆ, ತೇಜೋವಧೆ ಅಭಿಯಾನ, ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಕಾರ್ಯ… ಇದಕ್ಕೆಲ್ಲಾ ಸ್ವಯಂ ಕಡಿವಾಣ ಬೇಕಾಗುತ್ತದೆ ಎಂಬುದು ದಿಟವಾದರೂ, ಮಾಹಿತಿ ತಂತ್ರಜ್ಞಾನ ಸಚಿವರ ಈ ಸೂಚನೆಯು ಕಾರ್ಯತಃ ಅಸಾಧ್ಯವಾದ ಕೆಲಸ ಎಂಬುದು ಅವರಿಗೂ ಗೊತ್ತಾಗಲಿಲ್ಲವೇಕೆ? ಪ್ರತಿಯೊಂದು ಕಾಮೆಂಟು, ಹೇಳಿಕೆ, ಅಭಿಪ್ರಾಯಗಳನ್ನು ಪರಿಶೀಲನೆಗೊಳಪಡಿಸಿ ಪ್ರಕಟಿಸುವ ಹೊತ್ತಿಗೆ, ಸಮಯ ಮೀರುತ್ತದೆ ಎಂಬುದವರಿಗೆ ತಿಳಿಯಲಿಲ್ಲವೇ? ಹೀಗೆಲ್ಲಾ ನಿಯಂತ್ರಣ ಕಾರ್ಯಕ್ಕೆ ಮುಂದಾಗುವ ಬದಲು ಜಪ್ಪಯ್ಯ ಅಂದರೂ ಕೆಳಗಿಳಿಯಲಾರೆ ಎನ್ನುತ್ತಲೇ ಇರುವ ಆವಶ್ಯಕ ವಸ್ತುಗಳ ಬೆಲೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಂಡಿದ್ದಿದ್ದರೆ?
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು