ಮಾಹಿತಿ@ತಂತ್ರಜ್ಞಾನ ಅಂಕಣ – 96: ಅವಿನಾಶ್ ಬಿ. (ವಿಜಯ ಕರ್ನಾಟಕ, ಅಕ್ಟೋಬರ್ 06, 2014)
ಅಂತರ್ಜಾಲ ಈಗ ಬದುಕಿನ ಅವಿಭಾಜ್ಯ ಅಂಗವಾಗಿರುವ ಕಾರಣಕ್ಕೆ ಹೆಚ್ಚಾಗಿ ಮನೆಗಳಲ್ಲಿ, ಕಚೇರಿಗಳಲ್ಲಿ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸಂಪರ್ಕ ಇರುತ್ತದೆ. ಮನೆಯಲ್ಲಾದರೆ ಅದಕ್ಕೆ ವೈರ್‌ಗಳು, ಕೇಬಲ್‌ಗಳ ಕಿರಿಕಿರಿ. ಹೀಗಾಗಿಯೇ ಪುಟ್ಟದಾದ ಇಂಟರ್ನೆಟ್ ಡಾಂಗಲ್‌ಗಳು ಎಂದು ಕರೆಯಲಾಗುವ, ಎಲ್ಲಿ ಬೇಕಾದರೂ ಹೊತ್ತೊಯ್ಯಬಹುದಾದ ಯುಎಸ್‌ಬಿ ಡೇಟಾ ಕಾರ್ಡ್‌ಗಳು ಜನಪ್ರಿಯವಾಗಿವೆ. ಈ ನಿಟ್ಟಿನಲ್ಲಿ ಬಿಎಸ್ಸೆನ್ನೆಲ್, ಏರ್‌ಟೆಲ್, ವೊಡಾಫೋನ್, ಟಾಟಾ ಡೊಕೊಮೊ, ರಿಲಯನ್ಸ್, ಎಂಟಿಎಸ್, ಐಡಿಯಾ, ಏರ್‌ಸೆಲ್ ಮುಂತಾದ ಎಲ್ಲ ಮೊಬೈಲ್ ಆಪರೇಟರ್ ಕಂಪನಿಗಳೂ ತಮ್ಮದೇ ಡಾಂಗಲ್‌ಗಳನ್ನು ಮಾರುಕಟ್ಟೆಗಿಳಿಸಿವೆ. ಅವುಗಳಲ್ಲಿ ಹೊಸ ಟ್ರೆಂಡ್ ಎಂದರೆ ಪ್ಲಗ್-ಆ್ಯಂಡ್-ಪ್ಲೇ ವ್ಯವಸ್ಥೆಯ ವೈ-ಫೈ ಡಾಂಗಲ್‌ಗಳು ಕಮ್ ರೌಟರ್‌ಗಳು.
ಇಂತಹಾ ಉಪಯುಕ್ತ ವೈಫೈ ತಂತ್ರಜ್ಞಾನದ ಬಗ್ಗೆ ಅರಿವಿಲ್ಲದವರಿಗೆ, ವಿಶೇಷವಾಗಿ ಗ್ರಾಮೀಣ ಭಾಗದವರಿಗಾಗಿ ಈ ಸಲಹೆ.
ಮುಖ್ಯವಾಗಿ ನಾಲ್ಕು ವಿಧದ ವೈ-ಫೈ ಡಾಂಗಲ್‌ಗಳಿವೆ. 1. ಸಿಮ್ ಆಧಾರಿತ ವೈಫೈ ಡಾಂಗಲ್, 2. ಯುಎಸ್‌ಬಿ/ಡೇಟಾ ಕಾರ್ಡ್ ಆಧಾರಿತ ವೈಫೈ ಸಾಧನ, 3. ವೈಫೈ ಹಾಟ್‌ಸ್ಪಾಟ್ ಅವಕಾಶವಿರುವ ಯುಎಸ್‌ಬಿ ಡೇಟಾ ಕಾರ್ಡ್ ಮತ್ತು 4. ಯಾವುದೇ (ಯೂನಿವರ್ಸಲ್) ಸಿಮ್, ಬ್ಯಾಟರಿ, ಮೆಮೊರಿ ಕಾರ್ಡ್ ಸ್ಲಾಟ್ ಇರುವ ಪ್ಲಗ್-ಆ್ಯಂಡ್-ಪ್ಲೇ ಕೂಡ ಆಗಬಲ್ಲ ವೈಫೈ ಡಾಂಗಲ್.
ಇಂಟರ್ನೆಟ್ ಸಂಪರ್ಕಕ್ಕಾಗಿ ಮೋಡೆಮ್, ಕಂಪ್ಯೂಟರ್ ಆನ್ ಮಾಡುವುದು, ಆಫ್ ಮಾಡುವುದು ದೊಡ್ಡ ಕಿರಿಕಿರಿ. ಕರೆಂಟ್ ಹೋದಾಗಲಂತೂ ಮತ್ತಷ್ಟು ಸಮಸ್ಯೆ. ಬದಲಾಗಿ, ಪ್ಲಗ್‌ಗೆ ಒಂದು ಡಾಂಗಲ್ ಸಿಕ್ಕಿಸಿದರೆ, ಅದನ್ನೇ ವೈ-ಫೈ ಹಾಟ್‌ಸ್ಪಾಟ್ ಆಗಿಸಿ ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್ ಎಲ್ಲದಕ್ಕೂ ಸಂಪರ್ಕ ದೊರೆಯುವಂತಾದರೆ? ಒಂದು ಇಂಟರ್ನೆಟ್ ಸಂಪರ್ಕ ಪಡೆದುಕೊಂಡು ಅದನ್ನೇ ನೀವು ಹಾಗೂ ಮನೆಯವರಲ್ಲಿರುವ ಎಲ್ಲರ ಮೊಬೈಲ್/ಲ್ಯಾಪ್‌ಟಾಪ್/ಟ್ಯಾಬ್ಲೆಟ್ ಸಾಧನಗಳೂ ಬಳಸುವಂತಾದರೆ?
ಇದಕ್ಕೆ ನೆರವಿಗೆ ಬರುವುದೇ ಪ್ಲಗ್-ಆ್ಯಂಡ್-ಪ್ಲೇ ವೈಫೈ ಇಂಟರ್ನೆಟ್ ಡಾಂಗಲ್ ಅಥವಾ ಡೇಟಾ ಕಾರ್ಡ್. ಈ ಡಾಂಗಲ್ ಅನ್ನು ಅದರ ಜತೆಗೆ ಬರುವ ಅಡಾಪ್ಟರ್ ಮೂಲಕ ಕರೆಂಟ್ ಪ್ಲಗ್‌ಗೆ ಸಿಕ್ಕಿಸಿದರೆ ಸಾಕು, ಇಂಟರ್ನೆಟ್ ಸಂಪರ್ಕ ಆನ್ ಆಗುತ್ತದೆ ಮತ್ತು ವೈ-ಫೈ ಮೂಲಕ ಈ ಡಾಂಗಲ್‌ಗೆ ಕನಿಷ್ಠ ಐದು ಸಾಧನಗಳನ್ನು (ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಕಂಪ್ಯೂಟರ್ ಇತ್ಯಾದಿ) ಸಂಪರ್ಕಿಸಬಹುದು. ಇದಕ್ಕೆ ಪಾಸ್‌ವರ್ಡ್ ರಕ್ಷಣೆ ಇರುತ್ತದೆ. ಆದರೆ ಎಲ್ಲ ಸಾಧನಗಳಲ್ಲೂ ವೈ-ಫೈ ಸೌಲಭ್ಯ ಇರಬೇಕು. ಈ ಡೇಟಾ ಕಾರ್ಡ್‌ಗೆ ಅಪರಿಮಿತ ಡೇಟಾ (ಅನ್‌ಲಿಮಿಟೆಡ್ ಇಂಟರ್ನೆಟ್) ಸೌಕರ್ಯವಿರುವ ಒಂದು ಸಿಮ್ ಕಾರ್ಡ್ ಅಳವಡಿಸಿದರಾಯಿತು. ಕೆಲವು ಡಾಂಗಲ್‌ಗಳಲ್ಲಿ ರೀಚಾರ್ಜೆಬಲ್ ಬ್ಯಾಟರಿಯೂ ಇರುತ್ತದೆ. ಪವರ್ ಕಟ್ ಸಂದರ್ಭ ಸುಮಾರು ನಾಲ್ಕು ಗಂಟೆ ಇದು ಅನುಕೂಲ ಕಲ್ಪಿಸುತ್ತದೆ.
ಬಹುತೇಕ ಎಲ್ಲ ಮೊಬೈಲ್ ಆಪರೇಟರ್‌ಗಳೂ ಇಂತಹಾ ವೈ-ಫೈ ಡಾಂಗಲ್ ಮಾರುಕಟ್ಟೆಗೆ ಬಿಟ್ಟಿದ್ದಾರಾದರೂ, ನಿರ್ದಿಷ್ಟ ನೆಟ್‌ವರ್ಕ್‌ಗೆ ಸೀಮಿತವಾಗದೆ, ಹೆಚ್ಚುವರಿ ಅನುಕೂಲಗಳಿರುವ ಡಾಂಗಲ್ ನೀವು ಖರೀದಿಸಬೇಕೆಂದರೆ, ಅಂಗಡಿಯಾತನಲ್ಲಿ ನೀವು ಕೇಳಬೇಕಾದ ವಿಷಯಗಳು – ವೈ-ಫೈ ಹಾಟ್‌ಸ್ಪಾಟ್, ರೀಚಾರ್ಜೆಬಲ್ ಬ್ಯಾಟರಿ, ಮೆಮೊರಿ ಕಾರ್ಡ್ ಸ್ಲಾಟ್, ಯೂನಿವರ್ಸಲ್ ಡಾಂಗಲ್ (ಇದರಲ್ಲಿ ಯಾವುದೇ ಕಂಪನಿಯ ಸಿಮ್ ಕಾರ್ಡ್ ಹಾಕಬಹುದು). ಹ್ಯುವೈ (Huawei), ಬೀಟೆಲ್, ಇಂಟೆಕ್ಸ್, ಅಲ್ಕಾಟೆಲ್, ಡಿ-ಲಿಂಕ್ ಮುಂತಾದ ಕಂಪನಿಗಳ ಡೇಟಾ ಕಾರ್ಡ್‌ಗಳನ್ನು ಪರಿಗಣಿಸಬಹುದು. 3-4 ಸಾವಿರ ರೂ. ಆಸುಪಾಸಿನಲ್ಲಿ ಈ ಸೌಕರ್ಯಗಳಿರುವ ಡಾಂಗಲ್ ಸಿಗುತ್ತದೆ.
ಹಳೆಯ ಸ್ಮಾರ್ಟ್‌ಫೋನ್ ಇದೆಯೇ? ಅದೇ ಸಾಕು: ನಿಮ್ಮಲ್ಲಿ ಹಳೆಯ ಸ್ಮಾರ್ಟ್‌ಫೋನ್ ಇದ್ದರೆ ಅದನ್ನೂ ವೈಫೈ ಹಾಟ್‌ಸ್ಪಾಟ್ ಆಗಿ ಬಳಸಿ ಸದುಪಯೋಗ ಮಾಡಿಕೊಳ್ಳಬಹುದು. ಅದರಲ್ಲಿರುವ ಟಿದರಿಂಗ್ ಆ್ಯಂಡ್ ಹಾಟ್‌ಸ್ಪಾಟ್ ಎಂಬ ಸೌಕರ್ಯವನ್ನು ಉಪಯೋಗಿಸಿಕೊಳ್ಳಬೇಕು. ಆ ಮೊಬೈಲಿಗೊಂದು ಅನ್‌ಲಿಮಿಟೆಡ್ ಇಂಟರ್ನೆಟ್ ಪ್ಯಾಕ್ ಹಾಕಿಸಿಕೊಂಡರೆ ಸಾಕು. ಅದರ ಸಂಪರ್ಕವನ್ನೇ ವೈಫೈ ಮೂಲಕ ಬೇರೆ 4-5 ಸಾಧನಗಳಿಗೆ ಹಂಚಬಹುದು.
ಇನ್ನು, ಈಗಾಗಲೇ ಬ್ರಾಡ್‌ಬ್ಯಾಂಡ್ ಸಂಪರ್ಕ ಪಡೆದುಕೊಂಡವರು ಕೂಡ ವೈಫೈ ಮೂಲಕ ವಿವಿಧ ಸಾಧನಗಳನ್ನು ಸಂಪರ್ಕಿಸಿಕೊಳ್ಳಬಹುದು. ಇದಕ್ಕಾಗಿಯೇ ಮೋಡೆಮ್‌ಗೆ ಅಳವಡಿಸುವ ಮತ್ತು ಬೇರೆ ಡೇಟಾ ಕಾರ್ಡನ್ನೂ ಅಳವಡಿಸಬಹುದಾದ ವೈಫೈ ರೌಟರ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ.
ಟೆಕ್ ಟಾನಿಕ್
ಆನ್‌ಲೈನ್‌ನಲ್ಲಿರುವಾಗ ಬುದ್ಧಿಮತ್ತೆ ಹೆಚ್ಚಿಸಿಕೊಳ್ಳಿ: ಫೇಸ್‌ಬುಕ್, ಟ್ವಿಟರ್ ಮತ್ತು ಮೆಸೇಜಿಂಗ್ ಮುಂತಾದ ಇಂಟರ್ನೆಟ್ ಜಮಾನದಲ್ಲಿ ಹಾಗೂ ಎಲ್ಲದಕ್ಕೂ ಗೂಗಲ್ ಇದೆ ಎಂಬ ಭರವಸೆಯ ನಡುವೆ ನಮ್ಮ ಐಕ್ಯೂ ಅಂದರೆ ಬೌದ್ಧಿಕ ಕೌಶಲ್ಯ ಅಥವಾ ಜಾಣ್ಮೆ ತುಕ್ಕು ಹಿಡಿಯುತ್ತಿದೆ ಎಂಬ ಮಾತುಗಳನ್ನಿಂದು ಕೇಳುತ್ತಿದ್ದೇವೆ. ಮೆದುಳಿಗೆ ಕೆಲಸ ಕೊಟ್ಟರೆ ಮಾತ್ರ ಅದು ಹರಿತವಾಗಿರುತ್ತದೆ. ಹೀಗಾಗಿ ಇಂಟರ್ನೆಟ್‌ನಲ್ಲಿರುವಾಗ ಸಮಯ ಮಾಡಿಕೊಂಡು ಈ ತಾಣಕ್ಕೆ ಭೇಟಿ ನೀಡಿದರೆ, ಬುದ್ಧಿಮತ್ತೆಯನ್ನು ಒರೆಗೆ ಹಚ್ಚಬಹುದು. ಮಕ್ಕಳಿಗೆ ಅತ್ಯಂತ ಸೂಕ್ತ ತಾಣವಿದು. ದೊಡ್ಡವರಿಗೂ ಕೂಡ. https://memorado.com/
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು