ವಿಂಡೋಸ್ ಫೋನ್‌ನಲ್ಲಿ ಕನ್ನಡ ಟೈಪ್ ಮಾಡಲು ಟೂಲ್

ಮಾಹಿತಿ @ ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ ಮೇ 27, 2013

ಸ್ಮಾರ್ಟ್‌ಫೋನ್‌ಗಳ ಮೂಲಕ ಇಂಟರ್ನೆಟ್ ಬಳಕೆ ಹೆಚ್ಚಾಗುತ್ತಿದೆ. ಅಂತೆಯೇ ಬಹುತೇಕರಿಗೆ ತಮ್ಮ ಮಾತೃಭಾಷೆಯಲ್ಲೇ ಸಂವಹನ ನಡೆಸುವ ಉತ್ಸಾಹ ಹೆಚ್ಚಾಗುತ್ತಿರುವಂತೆಯೇ, ಪ್ರಾದೇಶಿಕ ಭಾಷೆಗಳಲ್ಲಿ ಓದಲು, ಬರೆಯಲು ಅನುಕೂಲ ಮಾಡಿಕೊಡುವುದರ ಬಗ್ಗೆ ಅಪ್ಲಿಕೇಶನ್ ಡೆವಲಪರ್‌ಗಳು ಉತ್ಸಾಹ ತೋರಿದ್ದಾರೆ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಕನ್ನಡ ಟೈಪ್ ಮಾಡಲು ಸಾಕಷ್ಟು ಉಚಿತ ಟೂಲ್‌ಗಳು ಲಭ್ಯವಿದ್ದರೂ, ಮೈಕ್ರೋಸಾಫ್ಟ್‌ನವರ ವಿಂಡೋಸ್ ಸಾಫ್ಟ್‌ವೇರ್ ಬಳಸುವ ಸ್ಮಾರ್ಟ್‌ಫೋನ್‌ಗಳಲ್ಲಿ ಕನ್ನಡ ಟೈಪಿಂಗ್ ಆಯ್ಕೆ ಇದುವರೆಗೆ ಇಲ್ಲದಿರುವುದು ಅಚ್ಚರಿಯ ಸಂಗತಿ.

ಆದರೆ, ಈಗ ವಿಂಡೋಸ್ ಸ್ಟೋರ್‌ನಲ್ಲಿಯೂ ಒಂದು ಟೂಲ್ ಕಾಣಿಸಿಕೊಂಡಿದೆ. ಅದುವೇ “ಟೈಪ್ ಕನ್ನಡ” ಎಂಬ ಅಪ್ಲಿಕೇಶನ್. ವಿಂಡೋಸ್ 7ನೇ ಆವೃತ್ತಿಯ ಫೋನ್‌ಗಳಲ್ಲಿ ಕನ್ನಡ ಯುನಿಕೋಡ್ ವೆಬ್‌ಸೈಟುಗಳೂ ಕಾಣಿಸುತ್ತಿರಲಿಲ್ಲ ಎಂಬುದು ತೀರಾ ನಿರಾಶೆಯ ಸಂಗತಿ. ಬರೇ ಚೌಕಾಕಾರದ ಬಾಕ್ಸ್‌ಗಳಾಗಿ ಕಾಣಿಸುತ್ತಿವೆ. ಆದರೆ ವಿಂಡೋಸ್ 8 ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಕನ್ನಡ ಸರಿಯಾಗಿ ಕಾಣಿಸುವುದು ಉತ್ತಮ ಬೆಳವಣಿಗೆ.

ಆಂಡ್ರಾಯ್ಡ್ ಸ್ಮಾರ್ಟ್ ಫೋನ್‌ಗಳಲ್ಲಾದರೆ ಈ ಹಿಂದೆ ತಿಳಿಸಿದ್ದ Multiling Keyboard ನಲ್ಲಿ, ಆಫ್‌ಲೈನ್‌ನಲ್ಲಿ (ಇಂಟರ್ನೆಟ್ ಸಂಪರ್ಕವಿಲ್ಲದೆಯೇ) ಟೈಪ್ ಮಾಡಬಹುದಾಗಿತ್ತು. ಮತ್ತು ಯಾವುದೇ ಹಂತದಲ್ಲಿಯೂ ಇದನ್ನು ಬಳಸಿಕೊಳ್ಳಬಹುದಿತ್ತು – ಅಂದರೆ ಪಠ್ಯ ಸಂದೇಶ ಕಳುಹಿಸಲು, ಫೇಸ್‌ಬುಕ್ ಅಥವಾ ಬ್ಲಾಗ್‌ಗೆ ಕಾಮೆಂಟ್ ಬರೆಯಲು, ಮೇಲ್ ಮಾಡಲು… ಹೀಗೆ ಎಲ್ಲ ಕಡೆ ಇದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿತ್ತು.

ಈಗ ವಿಂಡೋಸ್ ಫೋನ್‌ಗಳಿಗೆ ಲಭ್ಯವಿರುವ ‘ಟೈಪ್ ಕನ್ನಡ’ ಟೂಲ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನೋಡೋಣ. ವಿಂಡೋಸ್ ಅಪ್ಲಿಕೇಶನ್ ಸ್ಟೋರ್‌ನಲ್ಲಿ ಹೋಗಿ Type Kannada ಅಂತ ಸರ್ಚ್ ಮಾಡಿದಾಗ ಕಾಣಸಿಗುವ ಈ ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಿಕೊಂಡರಾಯಿತು.

ಆದರೆ ಈ ಅಪ್ಲಿಕೇಶನ್‌ಗೆ ಅದರದ್ದೇ ಆದ ಮಿತಿ ಇದೆ. ಅದರಲ್ಲಿ ಮುಖ್ಯವಾದುದೆಂದರೆ ಇದು ಇಂಟರ್ನೆಟ್‌ಗೆ ಸಂಪರ್ಕಿಸಿದ್ದರೆ ಮಾತ್ರ ಕನ್ನಡ ಟೈಪ್ ಮಾಡಬಹುದು. ಎರಡನೆಯದೆಂದರೆ, ಆಯಾ ತಾಣಗಳ ಕಾಮೆಂಟ್ ಬಾಕ್ಸ್‌ನಲ್ಲಿ ನೇರವಾಗಿ ಟೈಪ್ ಮಾಡುವ ಹಾಗಿಲ್ಲ. ಅಂದರೆ, ನಿಮ್ಮ ಫೋನ್‌ನ ಕೀಬೋರ್ಡ್‌ಗೆ ಇದು ಪರ್ಯಾಯ ಅಲ್ಲ. ಬದಲಾಗಿ, ಈ ಟೂಲ್ ಓಪನ್ ಮಾಡಿ, ಅಲ್ಲಿ ಟೈಪ್ ಮಾಡಿ, ಅಲ್ಲಿಂದ Copy – Paste ಮಾಡಬೇಕಾಗುತ್ತದೆ ಅಥವಾ ಟೈಪ್ ಮಾಡಿದ ತಕ್ಷಣ, ಅಲ್ಲಿಂದಲೇ ಫೇಸ್‌ಬುಕ್‌ಗೆ, ಟ್ವಿಟರ್‌ಗೆ ಪೋಸ್ಟ್ ಮಾಡಲು, ಎಸ್ಎಂಎಸ್ ಮತ್ತು ಇಮೇಲ್ ಕಳುಹಿಸಲು ಆಯ್ಕೆ ಇರುತ್ತದೆ.

ಯುನಿಕೋಡ್ ಪಠ್ಯವನ್ನು ಓದಲೂ ಅಸಾಧ್ಯವಾಗಿರುವ ವಿಂಡೋಸ್ 7 ಫೋನ್ ಇರುವವರಿಗೆ ಇದು ಸಹಕಾರಿ. ವಿಂಡೋಸ್ 7 ಫೋನ್‌ಗಳಲ್ಲಿ ಅಕ್ಷರಗಳು ಬರೇ ಬಾಕ್ಸ್‌ಗಳಾಗಿ ಕಾಣಿಸುತ್ತವೆ. ಯಾರಾದರೂ ಈ ರೀತಿಯ ಎಸ್ಸೆಮ್ಮೆಸ್ ಕಳುಹಿಸಿದ್ದರೆ, ಅದನ್ನು ಕಾಪಿ ಮಾಡಿಕೊಂಡು, ‘ಟೈಪ್ ಕನ್ನಡ’ ಟೂಲ್‌ನಲ್ಲಿ ಪೇಸ್ಟ್ ಮಾಡಿಕೊಂಡರೆ, ಕನ್ನಡವನ್ನು ಓದಬಹುದು. ಹೀಗೆ ಓದಲು ಇಂಟರ್ನೆಟ್ ಸಂಪರ್ಕ ಬೇಕಾಗಿಲ್ಲ. ಅದೇ ರೀತಿ, ಯಾವುದೇ ಕನ್ನಡ ವೆಬ್‌ಸೈಟ್ ಲಿಂಕ್ ತೆರೆದಾಗ, ಅದರಲ್ಲಿರುವ ಚೌಕಾಕಾರದ ಬಾಕ್ಸ್‌ಗಳನ್ನು ಕಾಪಿ ಮಾಡಿ, ಇಲ್ಲಿ ಪೇಸ್ಟ್ ಮಾಡಿದರೆ, ಕನ್ನಡದಲ್ಲಿ ಓದಬಹುದು!

ವಿಂಡೋಸ್ 8 ಕಾರ್ಯಾಚರಣೆ ವ್ಯವಸ್ಥೆ ಇರುವ ಫೋನ್‌ಗಳಲ್ಲಾದರೆ, ಕನ್ನಡ ಓದಲು ಯಾವುದೇ ಅಡ್ಡಿ ಇರುವುದಿಲ್ಲ. ಬರೆಯಲು ಮಾತ್ರ ‘ಟೈಪ್ ಕನ್ನಡ’ ಅತ್ಯಗತ್ಯ. ಬಿನು ಎಂಬವರು ಈ ಟೂಲ್ ನೀಡಿದ್ದು, ಭಾರತದ ಹಲವು ಭಾಷೆಗಳಲ್ಲಿ ಟೈಪ್ ಮಾಡುವುದಕ್ಕೂ ಅವರು ಅಪ್ಲಿಕೇಶನ್‌ಗಳನ್ನು ಒದಗಿಸಿಕೊಟ್ಟಿದ್ದಾರೆ.

ವಿಕ ಅಪ್ಲಿಕೇಶನ್
ವಿಂಡೋಸ್ ಸ್ಟೋರ್‌ನಲ್ಲಿ ಇನ್ನೂ ಒಂದು ವಿಶೇಷವಿದೆ. ನಿಮ್ಮ ನೆಚ್ಚಿನ ವಿಜಯ ಕರ್ನಾಟಕದ ಇ-ಪೇಪರ್ ಕೂಡ ಅಪ್ಲಿಕೇಶನ್ ಮುಖಾಂತರ ನೋಡಬಹುದು. Vijay Karnataka ಅಂತ ಸರ್ಚ್ ಮಾಡಿ, ಅಪ್ಲಿಕೇಶನ್ ಅಳವಡಿಸಿಕೊಳ್ಳಿ. ಆಯಾ ದಿನದ ಪತ್ರಿಕೆಯನ್ನು ಓದಬಹುದು ಮತ್ತು ಯಾವುದೇ ಸುದ್ದಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚುವ ಆಯ್ಕೆಯೂ ಇಲ್ಲಿ ಲಭ್ಯವಿದೆ. ಇದನ್ನು ರೂಪಿಸಿದವರು ಅಪ್ಲಿಕೇಶನ್ ಡೆವಲಪರ್, ಬೆಂಗಳೂರಿಗ ವೇದವ್ಯಾಸ ಎಂಬವರು.

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

View Comments

  • ಆದರೆ, ಈ application ನ directಆಗಿ windows keyboardಗೆ ಅಳವಡಿಸಿದರೆ ಒಳ್ಳೆದಲ್ಲವ?????

    ಪ್ರತೀ ಬಾರಿಯೂ application ಅಲ್ಲೇ type ಮಾಡಿ ವಾಪಸ್ message/email ಗೆ ಬರಬೇಕಾಗತ್ತೆ ಅಲ್ಲವ. ಅದು ತುಂಬಾನೆ ಕಷ್ಟ.

    • ಪರೀಕ್ಷಿತಾನಂದರೇ,
      ಹೌದು. ಇದೊಂದು ಸಮಸ್ಯೆಯಿದೆ. ಆದರೆ, ನೇರವಾಗಿ ಕನ್ನಡದಲ್ಲೇ ಟೈಪ್ ಮಾಡುವ ತಂತ್ರಾಂಶಗಳ ಬಗ್ಗೆ ಕನ್ನಡಿಗ ಟೆಕ್ಕಿಗಳು ಪ್ರಯತ್ನದಲ್ಲಿದ್ದಾರೆ ಅಂತ ಕೇಳಿದ್ದೇನೆ. ಸಿಗಬಹುದು ನೋಡೋಣ.

Recent Posts

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

3 weeks ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

3 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

3 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

4 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

5 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

10 months ago