ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-25 (ಫೆಬ್ರವರಿ 25, 2013)
ಅಡೋಬಿ ಕಂಪನಿಯ ಫೋಟೋ ಶಾಪ್ ಎಂಬುದು ಯಾವುದೇ ಫೋಟೋಗಳನ್ನು ತಿದ್ದಲು, ವಕ್ರಗೊಳಿಸಲು, ವಿರೂಪಗೊಳಿಸಲು, ಸು-ರೂಪಗೊಳಿಸಲು ಉಪಯೋಗವಾಗುವ, ಬಹುತೇಕ ವೃತ್ತಿಪರ ಛಾಯಾಗ್ರಾಹಕರು ಬಳಸುತ್ತಿರುವ ತಂತ್ರಾಂಶ. ಅದನ್ನು ಬ್ಯಾನರ್ ರಚಿಸಲು, ಅಕ್ಷರಗಳನ್ನು ಸೇರಿಸಿ ಚಿತ್ರಗಳಿಗೆ ಅಡಿಬರಹ – ಶೀರ್ಷಿಕೆ ನೀಡಲು ಕೂಡ ಬಳಸಲಾಗುತ್ತದೆ. ಆದರೆ ಇದಕ್ಕೆ ಹಣ ತೆರಬೇಕಾಗುತ್ತದೆ.
ಹೀಗಾಗಿ ಉಚಿತವಾಗಿ ಲಭ್ಯವಿರುವ, ಹೆಚ್ಚು ಭಾರವಾಗಿಲ್ಲದ ಫೋಟೋಫಿಲ್ಟರ್ (Photofiltre) ಬಗ್ಗೆ ತಿಳಿಸಿದ್ದೆ. ಯುನಿಕೋಡ್ ಬೆಂಬಲ ಇಲ್ಲವೆಂಬ ಅಂಶವೊಂದು ಬಿಟ್ಟರೆ ಇದು ಉತ್ತಮ ತಂತ್ರಾಂಶ. ಈಗ, ಫೋಟೋಶಾಪ್ ಮಾಡಬಹುದಾದ ಎಲ್ಲ ಕೆಲಸಗಳನ್ನೂ ನಿಭಾಯಿಸಬಲ್ಲ ಹಾಗೂ ಇದರೊಂದಿಗೆ ಯುನಿಕೋಡ್ ಅಕ್ಷರಗಳನ್ನೂ ಬೆಂಬಲಿಸಬಲ್ಲ ಹೊಸದೊಂದು ಫೋಟೋ ಎಡಿಟರ್ ಬಗ್ಗೆ ತಿಳಿದುಕೊಳ್ಳೋಣ. ಇದರ ವಿಶೇಷತೆಯೆಂದರೆ, ಇದನ್ನು ಕಂಪ್ಯೂಟರಿನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬೇಕಿಲ್ಲ! ಆದರೆ ಸದಾ ಕಾಲ ಇಂಟರ್ನೆಟ್ ಸಂಪರ್ಕ ಬೇಕಿರುವ ಆನ್‌ಲೈನ್ ಟೂಲ್ ಇದು.
ನಿಮ್ಮ ಬ್ರೌಸರ್‌ನಲ್ಲಿ (ಗೂಗಲ್ ಕ್ರೋಮ್/ಇಂಟರ್ನೆಟ್ ಎಕ್ಸ್‌ಪ್ಲೋರರ್/ಮೊಝಿಲ್ಲಾ ಫೈರ್‌ಫಾಕ್ಸ್) pixlr.com/editor/ ಎಂಬ ಯುಆರ್‌ಎಲ್‌ಗೆ ಹೋದರೆ ನಿಮ್ಮ ಕಂಪ್ಯೂಟರಿನಲ್ಲಿ ಫೋಟೋಶಾಪ್ ತಂತ್ರಾಂಶವನ್ನೇ ಅಳವಡಿಸಲಾಗಿದೆಯೇ ಎಂಬಷ್ಟು ಅಚ್ಚರಿಯಾಗಿ ಇರುವ ಪುಟವೊಂದು ಕಾಣಿಸಿಕೊಳ್ಳುತ್ತದೆ. ಇದರ ಮೂಲಕ ನಿಮ್ಮ ಕಂಪ್ಯೂಟರಿನಲ್ಲಿರುವ ಯಾವುದೇ ಫೋಟೋ ಓಪನ್ ಮಾಡಿದರೆ, ನಿಮಗೆ ಬೇಕಾದಂತೆ ಅದನ್ನು ತಿದ್ದುಪಡಿ ಮಾಡಬಹುದು, ಚಿತ್ರ-ವಿಚಿತ್ರವಾದ ಮತ್ತು ಶಿಷ್ಟ-ವಿಶಿಷ್ಟವಾದ ಎಫೆಕ್ಟ್‌ಗಳನ್ನೂ ಚಿತ್ರಕ್ಕೆ ನೀಡಬಹುದು.
ಸ್ಮಾರ್ಟ್‌ಫೋನ್‌ಗಳಲ್ಲಿಯೂ ಇದನ್ನು ಬಳಸಬಹುದು. ಆಂಡ್ರಾಯ್ಡ್ ಅಥವಾ ಐಫೋನ್ ಬಳಸುತ್ತಿರುವವರಿಗೆ ಇದರ ಪರಿಚಯವಿರಬಹುದು. ಇಲ್ಲವೆಂದಾದರೆ, ಆಂಡ್ರಾಯ್ಡ್‌ನ ಗೂಗಲ್ ಪ್ಲೇ ಅಥವಾ ಐಫೋನ್‌ನ ಐಟ್ಯೂನ್ಸ್ ಎಂಬ ಅಪ್ಲಿಕೇಶನ್ ಸ್ಟೋರ್‌ಗೆ ಹೋಗಿ, pixlr ಅಂತ ಹುಡುಕಿದರೆ, ತಕ್ಷಣವೇ ಈ ಆಪ್ ಕಾಣಿಸಿಕೊಳ್ಳುತ್ತದೆ. ಅದನ್ನು ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಿಕೊಂಡುಬಿಡಿ. ಇನ್ನು ಫೋಟೋಗಳಿಗೆ ವಿಭಿನ್ನ ಎಫೆಕ್ಟ್‌ಗಳನ್ನು ನೀಡಬೇಕಿದ್ದರೆ, Pixlr-o-matic ಎಂಬುದನ್ನು ಹುಡುಕಿ ಇನ್‌ಸ್ಟಾಲ್ ಮಾಡಿಕೊಳ್ಳಿ.
ಹಾಗಾದರೆ, ಫೋಟೋ ತಿದ್ದುಪಡಿಯ ತಂತ್ರಾಂಶಗಳಿಂದ ನಮಗೆ ಯಾಕೆ ಬೇಕು ಅಂತ ಕೇಳುವವರಿಗಾಗಿ ಕೊಂಚ ಮಾಹಿತಿ ಇಲ್ಲಿದೆ:
* ನಿಮ್ಮಲ್ಲಿರುವ ಶುಭ ಸಮಾರಂಭದ ಫೋಟೋಗಳನ್ನು ಯಾರಿಗಾದರೂ ಕಳುಹಿಸಬೇಕಿದ್ದರೆ, ಚಿತ್ರವನ್ನು ಚಿಕ್ಕದಾಗಿಸಿ ಅದರ ಗಾತ್ರವನ್ನು ಕುಗ್ಗಿಸಿದರೆ, ಕಳುಹಿಸುವಾಗ ಇಂಟರ್ನೆಟ್ ವೆಚ್ಚದಲ್ಲಿ ಉಳಿತಾಯವಾಗುತ್ತದೆ. ಇಲ್ಲವಾದಲ್ಲಿ ಕೆಲವು ಫೋಟೋಗಳಂತೂ 5-6 ಎಂಬಿಯಷ್ಟು ತೂಕವಿರುತ್ತವೆ.
* ನಿಮ್ಮ ಡಿಜಿಟಲ್ ಕ್ಯಾಮರಾದಿಂದ ನೀವು ಫೋಟೋ ತೆಗೆದಾಗ, ಕೆಲವರ ಕಣ್ಣುಗಳು ಮಾತ್ರವೇ ಕೆಂಪಗೆ ಕಾಣುವುದನ್ನು ಗಮನಿಸಿರಬಹುದು. ಈ ಕೆಂಪು ಎಫೆಕ್ಟ್ ತೆಗೆಯಬೇಕಿದ್ದರೆ Red Eye Reduction ಅನ್ನೋ ಟೂಲ್ ಬಳಸಬಹುದು.
* ಒಳ್ಳೆಯ ಹೂವಿನ, ಸುಂದರ ಪ್ರಕೃತಿಯ, ಅತ್ಯುತ್ತಮ ದೃಶ್ಯವುಳ್ಳ ಚಿತ್ರ ತೆಗೆದಿದ್ದೀರಿ. ಇದನ್ನೇ ನೀವು ಶುಭಾಶಯ ಪತ್ರದ ರೂಪದಲ್ಲಿ ನಿಮ್ಮ ಗೆಳೆಯರಿಗೆ ಕಳುಹಿಸಲು ಇಚ್ಛಿಸಿದರೆ, ಅದರಲ್ಲೇ ಕನ್ನಡದಲ್ಲಿ/ಇಂಗ್ಲಿಷಿನಲ್ಲಿ ಶುಭಾಶಯ ಬರೆದು, ನಿಮ್ಮ ಹೆಸರು ಹಾಕಿ ಇಮೇಲ್ ಮಾಡಬಹುದು ಅಥವಾ ಅದರ ಕಲರ್ ಪ್ರಿಂಟೌಟ್ ತೆಗೆದು ಸಾಮಾನ್ಯ ಅಂಚೆಯ ಮೂಲಕ ಕಳುಹಿಸಬಹುದು. ಇದು ಯುನಿಕೋಡ್ ಅಕ್ಷರಗಳನ್ನು ಕೂಡ ಬೆಂಬಲಿಸುತ್ತದೆ.
* ಜೀವನದ ಸುಂದರ ಕ್ಷಣಗಳ ಫೋಟೋ ತೆಗೆದಿದ್ದರೆ, ಅದರ ದಿನಾಂಕ ಮತ್ತು ಇತರ ಬರಹಗಳನ್ನು ಬರೆದು, ನಿಮಗೆ ಬೇಕಾದ ಗಾತ್ರಕ್ಕೆ ಹಿಗ್ಗಿಸಿ ಪ್ರಿಂಟೌಟ್ ತೆಗೆದು, ಆಲ್ಬಂ ಮಾಡಿಸಿಟ್ಟುಕೊಳ್ಳಬಹುದು.
* ಯಾರದೇ ಮನಸ್ಸಿಗೆ ನೋಯದಂತೆ ಕೀಟಲೆ ಮಾಡಬೇಕಿದ್ದರೆ, ಅವರ ಅಥವಾ ನಿಮ್ಮದೇ ಫೋಟೋ ತೆಗೆದು, ಮುಖಕ್ಕೆ ಮೀಸೆಯನ್ನೋ, ದಾಡಿಯನ್ನೋ ಬಿಡಿಸಬಹುದು; ಮೂಗನ್ನು ವಕ್ರವಾಗಿಸಿಯೋ, ಮುಖವನ್ನೇ ಎಳೆದಾಡಿದಂತೆ ಉದ್ದವಾಗಿಸಿಯೋ ತಿದ್ದಿ, ಅವರೊಂದಿಗೆ ಹಂಚಿಕೊಂಡು ನಗು ಅರಳಿಸಬಹುದು.
* ಯಾರದ್ದೋ ದೇಹಕ್ಕೆ ಯಾರದ್ದೋ ತಲೆಯನ್ನು ಜೋಡಿಸಿ (ಮಾರ್ಫಿಂಗ್ ಮಾಡಿ) ಬ್ಲ್ಯಾಕ್‌ಮೇಲ್ ಮಾಡುವ ದುಷ್ಕೃತ್ಯಗಳಿಗೂ ಇದೇ ತಂತ್ರಾಂಶವನ್ನು ಬಳಸುವ ಅಪಾಯವೂ ಇರುವುದರಿಂದ ಈ ಬಗ್ಗೆ ಕಟ್ಟೆಚ್ಚರ ವಹಿಸಬೇಕಾಗುತ್ತದೆ. ಫೋಟೋ ಒರಿಜಿನಲ್ಲೋ ಅಥವಾ ಮಾರ್ಪಡಿಸಿದ್ದೋ ಅಂತ ಪೊಲೀಸರು ಕಂಡುಹಿಡಿಯಬಲ್ಲಷ್ಟು ತಂತ್ರಜ್ಞಾನ ಮುಂದುವರಿದಿದೆ ಎಂಬುದು ಗಮನದಲ್ಲಿರಲಿ.
iPhone 16e joins the iPhone 16 lineup, featuring the fast performance of the A18 chip,…
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…