ಮಾಹಿತಿ@ತಂತ್ರಜ್ಞಾನ – 34 (ಮೇ 13, 2013ರ ವಿಜಯ ಕರ್ನಾಟಕ ಅಂಕಣ)
ಹೊಸದಾಗಿ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ಕಂಪ್ಯೂಟರ್ ಕೊಂಡಾಗ ಅದರಲ್ಲಿ ಸೀಮಿತ ಸಾಫ್ಟ್‌ವೇರ್‌ಗಳಷ್ಟೇ ಇರುತ್ತವೆ. ನಮಗೆ ಬೇಕಾದ ತಂತ್ರಾಂಶಗಳನ್ನು ನಾವೇ ಅಳವಡಿಸಿಕೊಳ್ಳಬೇಕಾಗುತ್ತದೆ. ಕೆಲವು ತಂತ್ರಾಂಶಗಳಿಗೆ ಹಣ ಪಾವತಿಸಬೇಕಾಗುತ್ತದೆಯಾದರೆ, ಹೆಚ್ಚಿನವು ಆನ್‌ಲೈನ್‌ನಲ್ಲಿ ಉಚಿತವಾಗಿಯೇ ದೊರೆಯುತ್ತವೆ. ಅಂಥವುಗಳಲ್ಲಿ, ಡಿಜಿಟಲ್ ಯುಗದಲ್ಲಿ ನಮ್ಮ ಎಲ್ಲ ದಾಖಲೆಗಳನ್ನು, ಬರಹಗಳನ್ನು ಅಚ್ಚುಕಟ್ಟಾಗಿ ಕಾಯ್ದಿಡಲು ಮತ್ತು ಎಲ್ಲಿಬೇಕೆಂದರಲ್ಲಿ ಅದನ್ನು ನೋಡಲು ಅನುಕೂಲ ಮಾಡಿಕೊಡುವ ಉಚಿತ ತಂತ್ರಾಂಶದ ಬಗ್ಗೆ ಇಲ್ಲಿದೆ ಮಾಹಿತಿ.
PDF (ಪೋರ್ಟೆಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್) ಎಂಬ ಪದವನ್ನು ಕೇಳಿದ್ದೀರಿ. ಅಂದರೆ ನಿಮ್ಮ ಡಾಕ್ಯುಮೆಂಟ್‌ಗಳನ್ನು ಪೋರ್ಟೆಬಲ್ (ಎಲ್ಲಿ ಬೇಕಾದಲ್ಲಿಗೆ ಒಯ್ಯಲು ಅನುಕೂಲವಾಗಿಸುವ) ರೂಪಕ್ಕೆ ಪರಿವರ್ತಿಸುವುದು. ಯಾವುದೇ ಲೇಖನವೋ, ಕೋಷ್ಟಕಗಳೋ, ಬೇಕಾದಾಗ ಪ್ರಿಂಟ್ ತೆಗೆದುಕೊಳ್ಳಲು ಅನುಕೂಲವಾಗುವಂತೆ ಸ್ಕ್ಯಾನ್ ಮಾಡಿಟ್ಟಿರುವ ನಿಮ್ಮ ಪ್ಯಾನ್ ಕಾರ್ಡ್, ಎಲೆಕ್ಷನ್ ಐಡಿ, ಡ್ರೈವಿಂಗ್ ಲೈಸೆನ್ಸ್ ಅಥವಾ ಚಿತ್ರಗಳನ್ನು ಪಿಡಿಎಫ್ ರೂಪಕ್ಕೆ ಪರಿವರ್ತಿಸಿಟ್ಟರೆ ಅದರ ಗುಣಮಟ್ಟವೂ ಚೆನ್ನಾಗಿರುತ್ತದೆ.
ಮೈಕ್ರೋಸಾಫ್ಟ್‌ನ ವರ್ಡ್, ಎಕ್ಸೆಲ್, ವರ್ಡ್‌ಪ್ಯಾಡ್, ಪವರ್‌ಪಾಯಿಂಟ್, ನೋಟ್‌ಪ್ಯಾಡ್ ಮುಂತಾದವುಗಳನ್ನು ಒಳಗೊಂಡ ‘ಮೈಕ್ರೋಸಾಫ್ಟ್ ಆಫೀಸ್’ ಎಂಬ ಪಠ್ಯ ಪರಿಷ್ಕರಣಾ ತಂತ್ರಾಂಶದಲ್ಲಿ ನೀವು ಲೇಖನವನ್ನೋ ಅಥವಾ ಯಾವುದೇ ಕೋಷ್ಟಕವನ್ನೋ ಸಿದ್ಧಪಡಿಸಿಟ್ಟುಕೊಳ್ಳುತ್ತೀರಿ ಇಲ್ಲವೇ ಇನ್ಯಾವುದೇ ದಾಖಲೆಯನ್ನು ಸಿದ್ಧಪಡಿಸಿರುತ್ತೀರಿ. ‘ಆಫೀಸ್’ ತಂತ್ರಾಂಶಕ್ಕೆ ಹಣ ಪಾವತಿಸಬೇಕಾಗುತ್ತದೆಯಾದುದರಿಂದ ಎಲ್ಲ ಕಂಪ್ಯೂಟರುಗಳಲ್ಲಿ ಇದು ಇರುವ ಬಗ್ಗೆ ಖಚಿತತೆ ಇರುವುದಿಲ್ಲ. ಅದು ಇಲ್ಲದಿರುವ ಕಂಪ್ಯೂಟರುಗಳಲ್ಲಿ ನಿಮ್ಮ ಡಾಕ್ಯುಮೆಂಟ್‌ಗಳನ್ನು ಓದಲು ನೆರವಿಗೆ ಬರುವುದು ಪಿಡಿಎಫ್. ಮಾತ್ರವಲ್ಲ, ಕಥೆ, ಕಾದಂಬರಿಗಳು, ಯಾವುದೇ ಸಾಹಿತ್ಯ ಪುಸ್ತಕಗಳು ಈಗ ಆನ್‌ಲೈನ್‌ನಲ್ಲಿ ಲಭ್ಯವಾಗುತ್ತಿರುವುದು ಕೂಡ ಈ ಪಿಡಿಎಫ್ ರೂಪದಲ್ಲಿಯೇ. ನೀವು ಪ್ರಯಾಣದಲ್ಲಿರುವಾಗ ಕಥೆ, ಕಾದಂಬರಿಗಳನ್ನು ಓದಲು ಪಿಡಿಎಫ್‌ನಿಂದ ಅನುಕೂಲ. ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಈ ಡಿಜಿಟಲೈಸ್ಡ್ ಪುಸ್ತಕವನ್ನು ಓದಿಕೊಳ್ಳಬಹುದು.
ನಮ್ಮ ಹಲವಾರು ಹಳೆಯ ಸಾಹಿತ್ಯ ರತ್ನಗಳೆಲ್ಲವೂ ಈಗ ಡಿಜಿಟಲೈಸ್ ಆಗಿಬಿಟ್ಟಿವೆ, ಅಂದರೆ ಪಿಡಿಎಫ್ ರೂಪದಲ್ಲಿ ಲಭ್ಯವಿವೆ. ಈಗಿನ ಯುನಿಕೋಡ್ ಅಕ್ಷರ ತಂತ್ರಾಂಶವು ಬೆಳಕಿಗೆ ಬರುವ ಮುನ್ನ ನಾವೆಲ್ಲರೂ ಬರಹ, ನುಡಿ, ಯುನಿಕೋಡ್, ಶ್ರೀಲಿಪಿಯೇ ಮೊದಲಾದ ಹಲವಾರು ಫಾಂಟ್ ವ್ಯವಸ್ಥೆಗಳನ್ನು ಬಳಸಿ ಲೇಖನಗಳನ್ನು ಸಿದ್ಧಪಡಿಸಿಟ್ಟುಕೊಳ್ಳುತ್ತಿದ್ದೆವು. ಪಿಡಿಎಫ್ ರೂಪಕ್ಕೆ ಪರಿವರ್ತಿಸಿಬಿಟ್ಟರೆ ಯಾವುದೇ ಕಂಪ್ಯೂಟರ್‌ನಲ್ಲಿ ಆಯಾ ಫಾಂಟ್‌ಗಳನ್ನು ಅಥವಾ ಫಾಂಟ್ ತಂತ್ರಾಂಶವನ್ನು ಇನ್‌ಸ್ಟಾಲ್ ಮಾಡಿಕೊಳ್ಳದೆಯೇ ಈ ಲೇಖನಗಳೆಲ್ಲವನ್ನೂ ಓದಬಹುದಾಗಿದೆ.
ಪಿಡಿಎಫ್‌ಗೆ ಸಂಬಂಧಿಸಿದಂತೆ ಅತ್ಯಂತ ಹೆಚ್ಚು ಪ್ರಸಿದ್ಧಿ ಪಡೆದಿರುವುದು ಅಡೋಬಿ (Adobe) ಕಂಪನಿಯ ತಂತ್ರಾಂಶಗಳು. ಮುಖ್ಯವಾಗಿ ಈ ತಂತ್ರಾಂಶದಲ್ಲಿ ಎರಡು ವಿಧ, ಒಂದನೆಯದು ಪಿಡಿಎಫ್ ರೀಡರ್ ಹಾಗೂ ಎರಡನೆಯದು ಪಿಡಿಎಫ್ ಎಡಿಟರ್/ರೈಟರ್. ಮೊದಲನೆಯದನ್ನು ಅಡೋಬಿ ಕಂಪನಿಯು ಉಚಿತವಾಗಿ ದೊರಕಿಸಿಕೊಟ್ಟಿದೆ. ಆದರೆ ಇದರಲ್ಲಿ ಪಿಡಿಎಫ್ ಮಾಡುವ ವ್ಯವಸ್ಥೆಯಿರುವುದಿಲ್ಲ. ಎರಡನೆಯದರಲ್ಲಿ, ಪಿಡಿಎಫ್ ಡಾಕ್ಯುಮೆಂಟನ್ನು ತಿದ್ದುಪಡಿ ಮಾಡುವ, ಅಡಿಗೆರೆ ಹಾಕುವ, ಬಣ್ಣ ಹಚ್ಚುವ, ಕಾಮೆಂಟ್ ಮಾಡುವ, ನಿರ್ದಿಷ್ಟ ಪದ ಅಥವಾ ಪ್ಯಾರಾ ಒಂದನ್ನು ಹೈಲೈಟ್ ಮಾಡುವ ಎಲ್ಲ ಅವಕಾಶಗಳೂ ಇರುತ್ತವೆ ಮತ್ತು ಯಾವುದೇ ಡಾಕ್ಯುಮೆಂಟನ್ನು ಪಿಡಿಎಫ್ ಆಗಿಯೂ ಪರಿವರ್ತಿಸಬಹುದಾಗಿರುವುದರಿಂದ ಇದಕ್ಕೆ ಹಣ ಪಾವತಿಸಬೇಕಾಗುತ್ತದೆ.
ನಮಗೆ ಬೇಕಾಗಿರುವುದು ಲೇಖನಗಳು, ಡಾಕ್ಯುಮೆಂಟ್‌ಗಳನ್ನು ಪಿಡಿಎಫ್ ರೂಪದಲ್ಲಿ ಪರಿವರ್ತಿಸಿ ಸೇಫಾಗಿ ಇರಿಸಿಕೊಳ್ಳಲು ಅನುಕೂಲ ಮಾಡಿಕೊಡುವ ಒಂದು ಉಚಿತ ತಂತ್ರಾಂಶ. ಸಾಕಷ್ಟು ತಂತ್ರಾಂಶಗಳು ಲಭ್ಯವಿದ್ದರೂ, ಹೆಚ್ಚು ಆಪ್ತವಾಗಿದ್ದು ಡೂಪಿಡಿಎಫ್ (dopdf.com). ಈ ತಂತ್ರಾಂಶವನ್ನು ಅದರ ವೆಬ್‌ಸೈಟಿನಿಂದ ಉಚಿತವಾಗಿ ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಿಕೊಳ್ಳಿ.
ಬಳಿಕ ನಿಮ್ಮ ಯಾವುದೇ ಲೇಖನ ಅಥವಾ ಚಿತ್ರವನ್ನು ಓಪನ್ ಮಾಡಿ, ಅದನ್ನು ಪ್ರಿಂಟ್ ಮಾಡಲು (Fle > Print… ಅಥವಾ Ctrl+P ಒತ್ತಿದರೆ ಸಾಕು) ಹೋದಾಗ, ಪ್ರಿಂಟರ್ ಆಯ್ಕೆ ಮಾಡುವ ವಿಂಡೋ ಕಾಣಿಸುತ್ತದೆ. ಅದರ ಡ್ರಾಪ್‌ಡೌನ್ ಮೆನುವಿನಲ್ಲಿ doPDF ಎಂಬುದನ್ನು ಆಯ್ದುಕೊಂಡು ಓಕೆ ಒತ್ತಿ. ಮತ್ತೊಂದು ವಿಂಡೋ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಪಿಡಿಎಫ್ ಡಾಕ್ಯುಮೆಂಟನ್ನು ಎಲ್ಲಿ ಸೇವ್ ಮಾಡಬೇಕೆಂದು ಕೇಳಲಾಗುತ್ತದೆ. ಸೂಕ್ತ ಸ್ಥಳವನ್ನು ಆಯ್ಕೆ ಮಾಡಿ ಓಕೆ ಒತ್ತಿಬಿಟ್ಟರೆ, ನಿಮಗೆ ಬೇಕಾದ ಪಿಡಿಎಫ್ ಡಾಕ್ಯುಮೆಂಟ್ ರೆಡಿ. ಯಾವುದೇ ಫೋಟೋಗಳನ್ನು ಕೂಡ ಪಿಡಿಎಫ್ ರೂಪದಲ್ಲಿ ಪರಿವರ್ತಿಸಿಟ್ಟುಕೊಳ್ಳಬಹುದು ಎಂಬುದನ್ನು ನೆನಪಿಡಿ.
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
View Comments
ಅವತ್ತು ವಿ.ಕ.ದಲ್ಲಿ ಓದಿ ಈ ತಂತ್ರಾಂಶ ಇಳಿಸಿಕೊಂಡು ಬಳಸಿನೋಡಿದೆ. ಚೆನ್ನಾಗಿ ಕೆಲಸ ಮಾಡ್ತಾ ಇದೆ. ಒಳ್ಳೇ ತಂತ್ರಾಂಶ ಇದು. ತಿಳಿಸಿದ್ದಕ್ಕೆ ನಿಮಗೆ ಧನ್ಯವಾದಗಳು.
ಧನ್ಯವಾದ ವಿಕಾಸ್..
-ಅವಿನಾಶ್