ವಿಜಯ ಕರ್ನಾಟಕದಲ್ಲಿ ಮಾಹಿತಿ@ ತಂತ್ರಜ್ಞಾನ: ಜನವರಿ 13, 2014
ಆಕಸ್ಮಿಕವಾಗಿ ಇಲ್ಲವೇ ಯಾವುದೇ ವೈರಸ್‌ನಿಂದ ನಿಮ್ಮದೊಂದು ಅಮೂಲ್ಯ ಡಾಕ್ಯುಮೆಂಟ್ ಅಥವಾ ಫೈಲ್ ಕಂಪ್ಯೂಟರಿನಿಂದ ಡಿಲೀಟ್ ಆಗಬಹುದು. ಹೀಗಾದಾಗ ಇಷ್ಟು ಕಾಲ ಮಾಡಿದ್ದೆಲ್ಲವೂ ವ್ಯರ್ಥವಾಯಿತು, ಮತ್ತೆ ಮೊದಲಿಂದ ಆರಂಭಿಸಬೇಕಲ್ಲಾ ಎಂದು ಬೇಸರಿಸಿಕೊಳ್ಳುವವರೇ ಹೆಚ್ಚು. ಇದರ ಬಗ್ಗೆ ಮಾಹಿತಿ ಕೊರತೆಯಿರುವವರು ಕೊರಗುವುದು ಹೆಚ್ಚು.
ಆದರೆ ಫೈಲ್ ಡಿಲೀಟ್ ಆದರೆ ಆಕಾಶವೇ ಕಳಚಿಬಿದ್ದಂತೆ ಕೂರಬೇಕಾಗಿಲ್ಲ. ಡಿಲೀಟ್ ಆದ ಫೈಲುಗಳನ್ನು ವಾಪಸ್ ಪಡೆಯಬಹುದು ಮತ್ತು ವೈರಸ್ ದಾಳಿಯಿಂದ ಕರಪ್ಟ್ (Corrupt) ಆದ ಫೈಲ್‌ಗಳನ್ನು ಕೂಡ ಬಹುತೇಕ ರೀಕವರ್ ಮಾಡಿಕೊಳ್ಳಬಹುದು.
ವಿಂಡೋಸ್ ಕಂಪ್ಯೂಟರ್‌ನಲ್ಲಿ ಡಿಲೀಟ್ ಬಟನ್ ಅದುಮಿದ ಬಳಿಕ ಆ ಫೈಲ್ ಮೊದಲು ಹೋಗುವುದು ರೀಸೈಕಲ್ ಬಿನ್ ಎಂಬ ಸ್ಥಳಕ್ಕೆ. ಡೆಸ್ಕ್ ಟಾಪ್ ಮೇಲೆಯೇ ಇರುವ ರೀಸೈಕಲ್ ಬಿನ್ ಐಕಾನ್ ಕ್ಲಿಕ್ ಮಾಡಿದರೆ, ಡಿಲೀಟ್ ಆಗಿರುವ ಎಲ್ಲ ಫೈಲ್‌ಗಳನ್ನು ಅಲ್ಲಿ ಕಾಣಬಹುದು. ಈ ರೀಸೈಕಲ್ ಬಿನ್ ಎಂಬ ಜಾಗವು ಕಂಪ್ಯೂಟರಿನ ಕಾರ್ಯಾಚರಣಾ ವ್ಯವಸ್ಥೆಯೂ ಇರುವ ‘ಸಿ’ ಡ್ರೈವ್‌ನಲ್ಲಿಯೇ ಇರುವುದರಿಂದ, ಆಗಾಗ್ಗೆ ರೀಸೈಕಲ್ ಬಿನ್ ಅನ್ನು ಕೂಡ ಖಾಲಿ ಮಾಡುತ್ತಿರಬೇಕು. ಇದರಿಂದ ಸಿಸ್ಟಂ ಸ್ಲೋ ಆಗುವುದೂ ತಗ್ಗುತ್ತದೆ.
ಡಿಲೀಟ್ ಮಾಡುವ ಮತ್ತೊಂದು ವಿಧಾನವೆಂದರೆ, ಶಿಫ್ಟ್ ಬಟನ್ ಒತ್ತಿ ಹಿಡಿದು, ಡಿಲೀಟ್ ಬಟನ್ ಒತ್ತುವುದು. ಇದರಿಂದ ಫೈಲ್ ರೀಸೈಕಲ್ ಬಿನ್‌ಗೂ ಹೋಗದೆ, ಕಂಪ್ಯೂಟರಿನಲ್ಲಿ ಎಲ್ಲೂ ಕಾಣದಂತೆ ಮರೆಯಾಗುತ್ತದೆ. ಮರೆಯಾಗುತ್ತದೆ ಎಂದು ಹೇಳಿದ್ದೇಕೆಂದರೆ, ನೀವು ಅಳಿಸಿದ ಯಾವುದೇ ಫೈಲ್, ವಾಸ್ತವವಾಗಿ ಕಂಪ್ಯೂಟರ್‌ನಿಂದ ಹೊರಗೆ ಹೋಗುವುದಿಲ್ಲ. ಅದರಲ್ಲೇ, ಯಾರ ಕಣ್ಣಿಗೂ ಬೀಳದಂತೆ, ಸರ್ಚ್ ಮಾಡಿದರೂ ಸಿಗದಂತೆ ಅಡಗಿ ಕುಳಿತಿರುತ್ತದೆ. ಡಿಲೀಟ್ ಮಾಡುವುದು ಎಂದರೆ ಆ ಫೈಲ್‌ನ ಜಾಡು ತಿಳಿಯದಂತೆ ಕಂಪ್ಯೂಟರ್ ಅದನ್ನು ಬೇರೆಲ್ಲೋ ಅಡಗಿಸುವುದಷ್ಟೆ. ಕಣ್ಣಿಗೆ ಕಾಣುವುದಿಲ್ಲವಾದ್ದರಿಂದ ಅದು ಶಾಶ್ವತವಾಗಿ ಅಳಿಸಿ ಹೋಗಿದೆ ಎಂದು ನಾವು ಅಂದುಕೊಳ್ಳುತ್ತೇವೆ. ಒಟ್ಟಿನಲ್ಲಿ, ಫೈಲ್ ಡಿಲೀಟ್ ಮಾಡುವುದೆಂದರೆ, ಆ ಫೈಲ್ ಇರುವ ಸ್ಥಳದಲ್ಲಿ ಬೇರೆ ಫೈಲ್‌ಗಳು ಬಂದು ಕೂರಲು ಸ್ಥಳಾವಕಾಶವೊಂದು ಸೃಷ್ಟಿಯಾಗುತ್ತದೆ ಎಂದಷ್ಟೇ ಅರ್ಥ.
ತಾಂತ್ರಿಕವಾಗಿ ಆ ಫೈಲ್ ಕಂಪ್ಯೂಟರಿನ ಹಾರ್ಡ್ ಡ್ರೈವ್‌ನಲ್ಲೇ ಇರುವುದರಿಂದ, ಡೇಟಾ ರಿಕವರಿ ಸಾಫ್ಟ್‌ವೇರ್ ಮೂಲಕ ಅಳಿಸಿಹೋದ ಫೈಲನ್ನು ಪುನಃ ಪಡೆಯುವುದು ಸಾಧ್ಯವಾಗುತ್ತದೆ. ಈ ತಂತ್ರಾಂಶಗಳು, ಅಗೋಚರವಾದ ಫೈಲ್‌ಗಳನ್ನು ಕಂಪ್ಯೂಟರ್‌ಗೆ ಮತ್ತೆ ಕಾಣಿಸುವಂತೆ ಮಾಡುತ್ತವೆ. ಆದರೆ, ಅದರ ಜಾಗವನ್ನು ಬೇರೆ ಫೈಲ್ ಅತಿಕ್ರಮಣ ಮಾಡಿದ್ದರೆ (ಅಂದರೆ, ಅದರ ಸ್ಥಳದಲ್ಲಿ ಬೇರೆ ಫೈಲ್ ಏನಾದರೂ ಸೇವ್ ಆಗಿದ್ದರೆ) ಅಥವಾ ಹಾರ್ಡ್ ಡ್ರೈವ್ ಅನ್ನು ಫಾರ್ಮ್ಯಾಟ್ ಮಾಡಿದ್ದರೆ, ರಿಕವರ್ ಮಾಡುವುದು ಕಷ್ಟ.
ಇದು ಹೇಗೆ?: ಹಾರ್ಡ್ ಡ್ರೈವ್‌ನಲ್ಲಿ ಡೇಟಾ ಸೇವ್ ಮಾಡುವಾಗ, ಆ ಡ್ರೈವ್ ನಿಮ್ಮ ಮಾಹಿತಿಯನ್ನು ಮೆಮೊರಿ ಸ್ಥಳದಲ್ಲಿ ಇರಿಸುತ್ತದೆ. ದೊಡ್ಡ ಫೈಲುಗಳನ್ನು ಸಣ್ಣ ಸಣ್ಣ ವಿಭಾಗಗಳಾಗಿ ವಿಂಗಡಿಸಿ, ಹಲವು ಮೆಮೊರಿ ಸ್ಥಳಗಳಲ್ಲಿ ಸ್ಟೋರ್ ಮಾಡಲಾಗುತ್ತದೆ. ಬಳಿಕ ಹಾರ್ಡ್ ಡ್ರೈವ್, ಈ ಸ್ಥಳಗಳಿಗೆ ಪಥವನ್ನು (ಪಾಯಿಂಟರ್) ರಚಿಸುತ್ತದೆ. ಯಾರಾದರೂ ಫೈಲ್ ಓಪನ್ ಮಾಡಿದರೆ, ಹಾರ್ಡ್ ಡ್ರೈವ್ ಆ ಮಾಹಿತಿಯನ್ನು ತಂದು ತೋರಿಸಲು ಈ ಪಾಯಿಂಟರ್‌ಗಳನ್ನೇ ಬಳಸುತ್ತದೆ. ಫೈಲನ್ನು ಡಿಲೀಟ್ ಮಾಡಿದಾಗ, ಈ ಪಥವು ಡಿಲೀಟ್ ಆಗುತ್ತದೆಯಾದರೂ ಡೇಟವು ಮೆಮೊರಿ ಸ್ಥಳಗಳಲ್ಲೇ ಇರುತ್ತದೆ. ರಿಕವರಿ ಮಾಡುವುದು ಎಂದರೆ, ತಪ್ಪಿ ಹೋದ ಮಾರ್ಗವನ್ನು ಮತ್ತೆ ಜೋಡಿಸುವುದಷ್ಟೆ. ಆದರೆ ಮೊದಲೇ ಇರುವ ಡೇಟದ (ದತ್ತಾಂಶ) ಮೇಲೆ ಬೇರೆ ಫೈಲ್‌ಗಳು ಓವರ್‌ರೈಟ್ (ಒಂದು ಡೇಟದ ಮೇಲೆ ಬೇರೆ ಡೇಟ ಬಂದು ಕೂರುತ್ತದೆ) ಆಗಬಹುದು. ಈ ರೀತಿ ಆದರೆ, ಫೈಲ್ ರಿಕವರಿ ಮಾಡುವುದು ಅಸಾಧ್ಯ.
ಆಕಸ್ಮಿಕವಾಗಿಯೋ, ಬೇರೆ ಪ್ರೋಗ್ರಾಂನಿಂದಾಗಿಯೋ ಫೈಲ್ ಡಿಲೀಟ್ ಆದರೆ, ಅವುಗಳನ್ನು ಮತ್ತೆ ಯಥಾಸ್ಥಿತಿಗೆ ಮರಳಿಸಲು (ಅಂದರೆ ನಿಮಗೆ ಗೋಚರಿಸುವಂತೆ ಮಾಡಲು) ಸಾಕಷ್ಟು ಉಚಿತ ತಂತ್ರಾಂಶಗಳು ಅಂತರ್ಜಾಲದಲ್ಲಿ ಲಭ್ಯ ಇವೆ. ಅವುಗಳಲ್ಲಿ ಪ್ರಮುಖವಾದವು Recuva, Restoration, Undelete Plus, FreeUndelete, Photorec ಮುಂತಾದವು. ಯಾವುದಾದರೂ ಒಂದನ್ನು ಇನ್‌ಸ್ಟಾಲ್ ಮಾಡಿಕೊಂಡು, ಅದು ನೀಡುವ ಸೂಚನೆಗಳನ್ನು ಅನುಸರಿಸುತ್ತಾ ಹೋದಲ್ಲಿ, ಡಿಲೀಟ್ ಆಗಿದೆ ಎಂದು ನೀವು-ನಾವು ಅಂದುಕೊಂಡಿರುವ ಫೈಲ್‌ಗಳನ್ನು ವಾಪಸ್ ಪಡೆದುಕೊಳ್ಳಬಹುದು. ಆಕಸ್ಮಿಕವಾಗಿ ಫೈಲ್ ಡಿಲೀಟ್ ಆದರೆ ಇನ್ನು ಮುಂದೆ ಹೆಚ್ಚು ಧೃತಿಗೆಡಬೇಕಿಲ್ಲ, ಆಶಾವಾದ ಇರಿಸಿಕೊಳ್ಳಬಹುದು.
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು