ಅವಿನಾಶ್ ಬಿ.
ಮೂಲತಃ ಸ್ಕ್ಯಾಂಡಿನೇವಿಯಾದ ಟ್ರೂಕಾಲರ್, ಜಗತ್ತಿನ ಅತಿದೊಡ್ಡ ಮೊಬೈಲ್ ಫೋನ್ ಸಮುದಾಯ ಅಂತ ಹೇಳಲಡ್ಡಿಯಿಲ್ಲ. ಆಂಡ್ರಾಯ್ಡ್, ಬ್ಲ್ಯಾಕ್‌ಬೆರಿ, ಆ್ಯಪಲ್, ಸಿಂಬಿಯಾನ್, ವಿಂಡೋಸ್… ಹೀಗೆ ಬಹುತೇಕ ಎಲ್ಲ ಸ್ಮಾರ್ಟ್ ಆಪರೇಟಿಂಗ್ ಸಿಸ್ಟಂಗಳಲ್ಲಿಯೂ ಈ ಆ್ಯಪ್ ಕೆಲಸ ಮಾಡುವುದರಿಂದ, ಇದರ ಜಾಗತಿಕ ಬಳಕೆದಾರರ ಸಂಖ್ಯೆ ಕೋಟ್ಯಂತರವಿದೆ.
“ನಿಮ್ಮ ಅತ್ಯಂತ ವ್ಯಕ್ತಿಗತವಾಗಿರುವ ಫೋನ್‌ಗೆ ಅಪರಿಚಿತರ ಕರೆ ಬರುವುದರಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ, ಅಪರಿಚಿತರಿಂದ ಬರುವ ಕರೆಗಳನ್ನು ಸ್ವೀಕರಿಸಬೇಡಿ” ಅಂತ ಟ್ರೂಕಾಲರ್ ಕಂಪನಿ ಹೇಳಿಕೊಳ್ಳುತ್ತಿದ್ದರೂ, ಅದು ನಿಜವಾಗಿಯೂ ಏನು ಮಾಡುತ್ತಿದೆ ಗೊತ್ತೇ? ಆ್ಯಪ್ ಇನ್‌ಸ್ಟಾಲ್ ಮಾಡಿದ ತಕ್ಷಣ, ಹಿಂದೆ, ಮುಂದೆ ನೋಡದೆ ನೀವು Accept ಅಂತನೋ, Yes ಅಂತನೋ ಬಟನ್ ಒತ್ತಿರುತ್ತೀರಿ. ಆವಾಗ ಅದು ನಮ್ಮ ಮೊಬೈಲ್‌ನಲ್ಲಿ ಸಂಗ್ರಹವಾಗಿರುವ ಸಂಪರ್ಕ ಸಂಖ್ಯೆಗಳ (ಕಾಂಟಾಕ್ಟ್ಸ್) ಪ್ರದೇಶಕ್ಕೆ ಒಳಪ್ರವೇಶಿಸಿಬಿಡುತ್ತದೆ ಮತ್ತು ಯಾವೆಲ್ಲಾ ಸಂಖ್ಯೆಗಳಿವೆಯೋ, ಅವನ್ನೆಲ್ಲಾ ಅನಾಮತ್ತಾಗಿ ಎತ್ತಿಕೊಂಡು, ತನ್ನ ಸರ್ವರ್‌ಗೆ, ತನ್ನ ಸಂಗ್ರಹಾಗಾರಕ್ಕೆ ಕಾಪಿ ಮಾಡಿಕೊಂಡುಬಿಟ್ಟಿರುತ್ತದೆ.
ಕೆಲವೊಮ್ಮೆ ನಮ್ಮ ಲ್ಯಾಂಡ್‌ಲೈನ್ ಫೋನ್ ನಂಬರುಗಳನ್ನು ಸ್ನೇಹಿತರು, ಕಚೇರಿ ಅಥವಾ ಬಂಧುಗಳ ಹೆಸರಿಗೆ ಬೇರೆಯವರು ಸೇವ್ ಮಾಡಿಕೊಂಡಿರುತ್ತಾರೆ. ಈ ರೀತಿ ಸೇವ್ ಆಗಿರುವ ಮೊಬೈಲ್‌ನಲ್ಲಿ ಟ್ರೂಕಾಲರ್ ಆ್ಯಪ್ ಅಳವಡಿಸಿದರೆ, ಎಲ್ಲ ಮಾಹಿತಿಯೂ ಅದರ ಸರ್ವರ್‌ಗೆ ಅಪ್‌ಡೇಟ್ ಆಗುತ್ತದೆ. ನಮ್ಮ ಸ್ನೇಹಿತರ, ಬಂಧುಗಳ ಸಂಖ್ಯೆಯನ್ನೆಲ್ಲಾ ಈ ಆ್ಯಪ್‌ಗೆ ನಾವೇ ಧಾರೆಯೆರೆದುಬಿಟ್ಟಿರುತ್ತೇವೆ.
ಪ್ರೈವೆಸಿಗೆ ಧಕ್ಕೆ ಎಂಬ ಕಾರಣಕ್ಕೆ ವರ್ಷಗಳ ಹಿಂದೆ ಅದನ್ನು ಯುನೈಟೆಡ್ ಕಿಂಗ್‌ಡಂನಲ್ಲಿ ನಿಷೇಧಿಸಲಾಗಿತ್ತು. ನಮ್ಮಲ್ಲೇ ಹೇಳುವುದಾದರೆ, ನೀವು ನಿಮ್ಮ ಕಚೇರಿ ಲ್ಯಾಂಡ್‌ಲೈನ್ ಫೋನ್‌ನಿಂದ ಯಾರಿಗೋ ಅಗತ್ಯ ಉದ್ದೇಶಕ್ಕಾಗಿ ಕರೆ ಮಾಡಿರುತ್ತೀರಿ. ಅವರು, ಆ ಸಂಖ್ಯೆಯನ್ನು ನಿಮ್ಮ ಹೆಸರಿಗೆ ಸೇವ್ ಮಾಡಿಕೊಂಡಿರುತ್ತಾರೆ. ಕಚೇರಿಯ ಈ ಸಂಖ್ಯೆಯಿಂದ ಯಾರೇ ಆದರೂ ಟ್ರೂಕಾಲರ್ ಅಳವಡಿಸಿಕೊಂಡಿರುವ ಯಾರಿಗೇ ಫೋನ್ ಮಾಡಿದರೂ, ನಿಮ್ಮ ಹೆಸರೇ ಕಾಣಿಸುತ್ತದೆ. ಬೇಕಿದ್ದರೆ www.truecaller.com ನಲ್ಲಿ ಚೆಕ್ ಮಾಡಿ ನೋಡಿ. ಕೆಲವೊಮ್ಮೆ ತಪ್ಪುಗಳಿರುವ ಸಾಧ್ಯತೆಗಳೂ ಇವೆ.
ನಿಮ್ಮ ಕಚೇರಿಯ ಅಥವಾ ಸ್ನೇಹಿತರ ಮನೆಯ ಫೋನ್ ಸಂಖ್ಯೆಗೆ ಅದು ನಿಮ್ಮ ಹೆಸರನ್ನು ತೋರಿಸುತ್ತದೆ ಎಂದಾದರೆ, ಅಥವಾ ನಮ್ಮ ಹೆಸರು ಅವರ ಡೇಟಾಬೇಸ್‌ನಲ್ಲಿ ಇರುವುದು ಬೇಡ ಅಂತಾದರೆ ನೀವದನ್ನು ತೆಗೆದುಹಾಕಬಹುದು. http://www.truecaller.com/unlist ಎಂಬಲ್ಲಿಗೆ ಹೋಗಿ, ಲಾಗಿನ್ ಆಗಿ (ಯಾವುದೇ ಕಾಂಟಾಕ್ಟ್ ವಿವರಗಳು ಸಿಂಕ್ ಆಗಿಲ್ಲದ, ಜಾಸ್ತಿ ಬಳಸದೇ ಇರುವ ಇಮೇಲ್ ಐಡಿಯಿಂದ ಆದರೆ ಉತ್ತಮ), ಫೋನ್ ಸಂಖ್ಯೆಯನ್ನು ದಾಖಲಿಸಿ. (+91 ಎಂಬ ಕೋಡ್ ಮೊದಲು ಹಾಕಿದ ನಂತರ, ನಿಮ್ಮ ಮೊಬೈಲ್ ನಂಬರ್ ದಾಖಲಿಸಿ. ಲ್ಯಾಂಡ್‌ಲೈನ್ ಆಗಿದ್ದರೆ, ದೇಶದ ಕೋಡ್ +91, ನಂತರ ನಿಮ್ಮ ಪ್ರದೇಶದ ಎಸ್‌ಟಿಡಿ ಕೋಡ್ ದಾಖಲಿಸಬೇಕಾಗುತ್ತದೆ. ಉದಾಹರಣೆಗೆ, ಬೆಂಗಳೂರಿನ ಕೋಡ್ 080 ಇದ್ದರೆ, +9180 ಅಂತ ದಾಖಲಿಸಿದ ನಂತರ ಲ್ಯಾಂಡ್‌ಲೈನ್ ಸಂಖ್ಯೆ ನಮೂದಿಸಬೇಕು). ಸೂಕ್ತ ಕಾರಣಗಳನ್ನು ಟಿಕ್ ಗುರುತು ಮಾಡಿ, ಅಲ್ಲೇ ಕಾಣಿಸುವ ವೆರಿಫಿಕೇಶನ್ ಕೋಡ್ ದಾಖಲಿಸಿ Submit ಬಟನ್ ಒತ್ತಿದರೆ, ಒಂದೆರಡು ದಿನದಲ್ಲಿ ನಿಮ್ಮ ಹೆಸರು ಮಾಯವಾಗುತ್ತದೆ.
ವಾಸ್ತವವಾಗಿ, ಈಗಿನ ಸ್ಮಾರ್ಟ್‌ಫೋನ್ ಯುಗದಲ್ಲಿ ನಾವು ನಿಮ್ಮ ಇಮೇಲ್ ಐಡಿ ಹಾಗೂ ಫೇಸ್‌ಬುಕ್ ಐಡಿ ಜತೆಗೆ ನಮ್ಮ ಸಂಪರ್ಕ ಸಂಖ್ಯೆಗಳನ್ನು ಅಪ್‌ಡೇಟ್ ಮಾಡಿಕೊಂಡಿರುತ್ತೇವೆ. ಅವುಗಳ ಪ್ರೊಫೈಲ್ ಚಿತ್ರಗಳು ಕೂಡ ಟ್ರೂಕಾಲರ್ ಸರ್ವರ್‌ಗೆ ಸಿಂಕ್ರನೈಸ್ ಆಗುತ್ತದೆ. ಇದು ಕೂಡ ಒಂದು ರೀತಿಯಲ್ಲಿ ಕ್ರೌಡ್ ಸೋರ್ಸಿಂಗ್ ಇದ್ದಂತೆ. ಆದರೆ ಈ ರೀತಿ ಪುನಃ ಯಾರಾದರೂ ನಮ್ಮ ಹೆಸರನ್ನು ಸೇರಿಸಿಕೊಳ್ಳದಂತೆ ಮಾಡುವುದು ನಮ್ಮ ಕೈಯಲ್ಲಿರುವುದಿಲ್ಲವಾದುದರಿಂದ, ಟ್ರೂಕಾಲರ್ ಬಳಸಬೇಡಿ ಅಂತ ತಿಳಿಹೇಳಬಹುದಷ್ಟೆ. ಯಾಕೆಂದರೆ, ನಿಮ್ಮ ಅನುಮತಿಯಿಲ್ಲದೆ ಯಾರು ಬೇಕಾದರೂ ಟ್ರೂಕಾಲರ್ ಡೇಟಾಬೇಸ್‌ಗೆ ನಿಮ್ಮ ಸಂಖ್ಯೆ, ಹೆಸರನ್ನು ಸೇರಿಸಬಹುದು ಅದೇ ರೀತಿ ತೆಗೆದುಹಾಕಲೂಬಹುದಾಗಿದೆ. ಎಲ್ಲಿದೆ ನಮ್ಮ ಪ್ರೈವೆಸಿ?
ಟೆಕ್ ಟಾನಿಕ್: ಕನ್ನಡಿಯಾಗಿ ಸ್ಮಾರ್ಟ್‌ಫೋನ್
ಸ್ಮಾರ್ಟ್ ಮೊಬೈಲ್ ಫೋನ್ ಇದ್ದರೆ ಟಾರ್ಚ್ ಆಗಿ, ರೇಡಿಯೋ ಆಗಿ, ಕ್ಯಾಮೆರಾ ಆಗಿಯೂ ಅದನ್ನು ಬಳಸಬಹುದು. ಆದರೆ, ವೀಡಿಯೋ ಚಾಟಿಂಗ್‌ಗೆ ಅವಕಾಶ ಮಾಡಿಕೊಡಲೆಂದು, ಮತ್ತು ಇತ್ತೀಚೆಗೆ ಸೆಲ್ಫೀಗಳಿಗಾಗಿ (ಸ್ವಯಂ ಫೋಟೋ ತೆಗೆದುಕೊಳ್ಳುವುದು) ಎರಡೆರಡು ಕ್ಯಾಮೆರಾಗಳು ಇರುವ ಸ್ಮಾರ್ಟ್‌ಫೋನ್‌ಗಳಿಂದ ಮತ್ತೊಂದು ಪ್ರಯೋಜನವೂ ಇದೆ. ಅದೆಂದರೆ, ಅಗತ್ಯಬಿದ್ದರೆ, ಎದುರುಭಾಗದ ಕ್ಯಾಮೆರಾವನ್ನು ಕನ್ನಡಿಗೆ ಪರ್ಯಾಯವಾಗಿಯೂ ಉಪಯೋಗಿಸಬಹುದು. ಮೊಬೈಲನ್ನು ಕನ್ನಡಿಯಂತೆ ಉಪಯೋಗಿಸಲು ಆಂಡ್ರಾಯ್ಡ್‌ನಲ್ಲಿ ಕೆಲವು ಆ್ಯಪ್‌ಗಳಿದ್ದರೂ (Mirror ಅಂತ ಗೂಗಲ್‌ಪ್ಲೇ ಸ್ಟೋರ್‌ನಲ್ಲಿ ಸರ್ಚ್ ಮಾಡಿ), ಅವುಗಳೂ ಉಪಯೋಗಿಸುವುದು ಫ್ರಂಟ್ ಕ್ಯಾಮೆರಾವನ್ನೇ. ಹೀಗಾಗಿ ನೀವಿದನ್ನು ಪ್ರಯೋಗಿಸಿನೋಡಬಹುದು.
ವಿಜಯ ಕರ್ನಾಟಕದಲ್ಲಿ ಅಂಕಣ ಮಾಹಿತಿ@ತಂತ್ರಜ್ಞಾನ ಅಂಕಣ: ನವೆಂಬರ್ 24, 2014
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು