ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಕ ಅಂಕಣ 50, 02 ಸೆಪ್ಟೆಂಬರ್ 2013
ಭಾರತೀಯ ಭಾಷೆಗಳನ್ನು ಬೆಂಬಲಿಸುವಲ್ಲಿ ಗೂಗಲ್ ಮುಂದಿದೆ. ಅದು ಸೇವೆ ಒದಗಿಸುತ್ತಿರುವ ಜಿಮೇಲ್‌ನಲ್ಲಿ ಕನ್ನಡ ಟೈಪಿಂಗ್‌ಗೆ ಕೂಡ ಅವಕಾಶವಿದೆ ಎನ್ನೋದು ಬಹುತೇಕರಿಗೆ ಗೊತ್ತಿಲ್ಲ ಎಂಬುದು ಅವರಿಂದ ಬರುವ ಇಮೇಲ್‌ಗಳಲ್ಲಿರುವ ಕಂಗ್ಲಿಷ್‌ನಿಂದಲೇ (ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಪದಗಳು) ತಿಳಿಯುತ್ತದೆ.
ಜಿಮೇಲ್ ಪೂರ್ತಿಯಾಗಿ ಕನ್ನಡದಲ್ಲೇ ನೋಡುವುದು ಮತ್ತು ಅದರಲ್ಲಿ ಕನ್ನಡ ಟೈಪಿಂಗ್ ಎನೇಬಲ್ ಮಾಡುವುದು ಹೇಗೆ ಅಂತ ತಿಳಿದುಕೊಳ್ಳೋಣ.
ನಿಮ್ಮ ಜಿಮೇಲ್‌ಗೆ ಸೈನ್ ಇನ್ ಆದ ಬಳಿಕ ಮೇಲ್ಭಾಗದ ಬಲ ತುದಿಯಲ್ಲಿ ಸೆಟ್ಟಿಂಗ್ಸ್‌ನ ಚಿಹ್ನೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದ ತಕ್ಷಣ, ಪಾಪ್-ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಕೆಳಗೆ ಸೆಟ್ಟಿಂಗ್ಸ್ ಎಂಬುದನ್ನು ಆಯ್ದುಕೊಳ್ಳಿ. ಹಲವಾರು ಟ್ಯಾಬ್‌ಗಳಿರುತ್ತವೆಯಾದರೂ, ಜನರಲ್ ಎಂಬ ಮೊದಲ ಟ್ಯಾಬ್ ತೆರೆದುಕೊಳ್ಳುತ್ತದೆ.
ಅದರಲ್ಲಿ ಮೊದಲು ಕಾಣಿಸಿಕೊಳ್ಳುವುದು Gmail display language ಎಂಬ ಆಯ್ಕೆ. ಅದರಲ್ಲಿ ನೀವು ಕನ್ನಡವನ್ನು ಆಯ್ದುಕೊಂಡರೆ, ಪೂರ್ತಿಯಾಗಿ ಜಿಮೇಲ್‌ನ ಪುಟದಲ್ಲಿರುವ ಎಲ್ಲವೂ ಕನ್ನಡದಲ್ಲಿಯೇ ಕಾಣಿಸುತ್ತದೆ. ಕೆಳಗೆ Save Changes ಅಂತ ಮಾಡಿದಾಗ, ಪುಟದಲ್ಲಿರುವ ಬಹುತೇಕ ಅಂದರೆ, ಮೂಲತಃ ಜಿಮೇಲ್‌ನಲ್ಲಿ ಅಡಕವಾಗಿರುವ ಪದಗಳು (ಇನ್‌ಬಾಕ್ಸೃ್, ದಿನಾಂಕ ಇತ್ಯಾದಿ) ಕನ್ನಡದಲ್ಲಿಯೇ ಕಾಣಿಸಿಕೊಳ್ಳುತ್ತವೆ. ಅದು ಬೇಡವೆಂದಾದರೆ ಮತ್ತೆ ಭಾಷೆ ಬದಲಾಯಿಸಿಕೊಳ್ಳಬಹುದು.
ಭಾಷೆ ಆಯ್ಕೆ ಮಾಡಿಕೊಂಡ ಸ್ಥಳದಲ್ಲೇ ಕೆಳಗಡೆ Show all language options ಅಂತ ಕ್ಲಿಕ್ ಮಾಡಿದಾಗ, Enable input tools ಎಂಬಲ್ಲಿ ಚೆಕ್ ಬಾಕ್ಸ್‌ನಲ್ಲಿ ರೈಟ್ ಮಾರ್ಕ್ ಹಾಕಿದರೆ, ಕನ್ನಡ ಸಹಿತವಾಗಿ ಎಲ್ಲ ಭಾಷೆಗಳಲ್ಲಿ ಟೈಪ್ ಮಾಡುವ ಟೂಲ್ ಎನೇಬಲ್ ಆಗುತ್ತದೆ. ಟ್ರಾನ್ಸ್‌ಲಿಟರೇಶನ್ (ಲಿಪ್ಯಂತರ) ಹಾಗೂ ಇನ್‌ಸ್ಕ್ರಿಪ್ಟ್ ಎಂಬ ಶೈಲಿಗಳಲ್ಲಿ ಟೈಪ್ ಮಾಡುವವರಿಗೆ ಇದು ಅನುಕೂಲ. ಲಿಪ್ಯಂತರ ಅಥವಾ ಟ್ರಾನ್ಸ್‌ಲಿಟರೇಶನ್ ಎಂದರೆ, ಓದಲು ಮತ್ತು ಅರ್ಥ ಮಾಡಿಕೊಳ್ಳಲು ತ್ರಾಸವಾಗುವ ಕಂಗ್ಲಿಷ್‌ನಲ್ಲಿ (ಕನ್ನಡ+ಇಂಗ್ಲಿಷ್ ಅಂದರೆ ಕನ್ನಡವನ್ನು kannada, ವಿಜಯ ಕರ್ನಾಟಕ ಎಂಬುದನ್ನು vijaya karnataka ಅಂತ) ಬರೆದಿರುವುದು ಕನ್ನಡಕ್ಕೆ ಪರಿವರ್ತನೆಗೊಳ್ಳುತ್ತದೆ.
ಇನ್‌ಸ್ಕ್ರಿಪ್ಟ್ ಕಲಿತುಕೊಳ್ಳಲು ಸ್ವಲ್ಪ ಕಷ್ಟ, ಆದರೆ ಕಲಿತ ಮೇಲೆ ಟೈಪಿಂಗ್ ವೇಗವಾಗುತ್ತದೆ. ಮೇಲ್ ಬರೆಯುವಾಗ ಮೇಲ್ಭಾಗದಲ್ಲಿ ಕೀಬೋರ್ಡ್ ಚಿಹ್ನೆ ಕಾಣಿಸಿಕೊಳ್ಳುತ್ತದೆ. ಅದನ್ನು ಕ್ಲಿಕ್ ಮಾಡಿದರೆ, ಯಾವ ಇಂಗ್ಲಿಷ್ ಅಕ್ಷರ ಟೈಪ್ ಮಾಡಿದರೆ ಯಾವ ಕನ್ನಡ ಅಕ್ಷರ ಮೂಡುತ್ತದೆಂದು ತಿಳಿಯುವ ಕಾರಣ, ಇನ್‌ಸ್ಕ್ರಿಪ್ಟ್ ಶೈಲಿಯನ್ನು ತಮ್ಮದಾಗಿಸಿಕೊಳ್ಳಬಹುದು.
ಹೀಗಾಗಿ, ಇಂಟರ್ನೆಟ್ ಸಂಪರ್ಕವಿದ್ದರೆ, ಇದೇ ಜಿಮೇಲ್‌ನಲ್ಲಿ ಲಭ್ಯವಿರುವ ಕನ್ನಡ ಅಥವಾ ದೇಶದ ಬೇರಾವುದೇ ಭಾಷೆಯ ಲಿಪಿಯಲ್ಲಿ ಬರೆಯುವ ಅವಕಾಶವನ್ನು ಉಪಯೋಗಿಸಿ, ಅಲ್ಲಿಂದ ಕಾಪಿ ಮಾಡಿಕೊಂಡರೆ, ಫೇಸ್‌ಬುಕ್ ಅಥವಾ ಬ್ಲಾಗಿನಲ್ಲಿ (ಜಿಮೇಲ್‌ನಲ್ಲಿರುವಂತೆಯೇ ಬ್ಲಾಗ್‌ಸ್ಪಾಟ್‌ನಲ್ಲಿಯೂ ಕನ್ನಡ ಬಳಸಬಹುದು) ಕಂಗ್ಲಿಷ್ ಬರೆಯುವುದನ್ನು ನಿಲ್ಲಿಸಬಹುದು.
ಜಿಮೇಲ್‌ನಲ್ಲಿ ಕನ್ನಡ ಡಿಕ್ಷನರಿ: ಜಿಮೇಲ್‌ನಲ್ಲಿ ನೀವು ಚಾಟ್ ಎನೇಬಲ್ ಮಾಡಿದ್ದರೆ ನಿಮಗೊಂದು ಅನುಕೂಲವಿದೆ. ಅಲ್ಲೇ ಕನ್ನಡ ಡಿಕ್ಷನರಿ ಇದೆ ಎಂಬುದು ಎಷ್ಟು ಮಂದಿಗೆ ಗೊತ್ತಿದೆ? Kn.dict.botjabber.org ಎಂಬುದನ್ನು ನಿಮ್ಮ ಚಾಟಿಂಗ್‌ಗೆ ಆಹ್ವಾನಿಸಿ ಫ್ರೆಂಡ್ ಮಾಡಿಕೊಳ್ಳಿ. ಆಹ್ವಾನ ಸ್ವೀಕಾರವಾದ ತಕ್ಷಣ, ಚಾಟಿಂಗ್ ಬಾಕ್ಸ್‌ನಲ್ಲಿ ಹಸಿರು ಬಟನ್ ಕಾಣಿಸುತ್ತಿದ್ದರೆ, ನಿಮಗೆ ಬೇಕಾದ ಇಂಗ್ಲಿಷ್ ಪದವನ್ನು ಚಾಟ್ ಸಂದೇಶವಾಗಿ ಕಳುಹಿಸಿ. ತಕ್ಷಣವೇ, ಅದರ ಕನ್ನಡ ಪದವು ಉತ್ತರ ರೂಪದಲ್ಲಿ ನಿಮಗೆ ಬರುತ್ತದೆ. ನೀವು ಕೇಳಿದ ಪದ ಇಲ್ಲದಿದ್ದರೆ, ಲಭ್ಯವಿಲ್ಲ ಎಂದೂ ತಿಳಿಸುತ್ತದೆ. ಒಂದು ವಾಕ್ಯವನ್ನೇ ಟೈಪ್ ಮಾಡಿದರೆ, ಒಂದು ಪದವನ್ನು ಮಾತ್ರ ಕಳುಹಿಸಿ ಅಂತ ಉತ್ತರಿಸುತ್ತದೆ. ಕನ್ನಡದ ಕೆಲವು ಶಬ್ದಗಳ ಪರ್ಯಾಯ ಪದಗಳೂ ಇಲ್ಲಿ ಲಭ್ಯವಿರುತ್ತದೆ.
ಕಳುಹಿಸಿದ ಮೇಲ್ ರದ್ದು ಮಾಡುವುದು: ಜಿಮೇಲ್‌ನಲ್ಲಿ ಇನ್ನೂ ಒಂದು ವಿಶಿಷ್ಟ ಅವಕಾಶವಿದೆ. ಅದೆಂದರೆ, ನೀವು ಮೇಲ್ ಕಳುಹಿಸಿದ ತಕ್ಷಣ, ‘ಛೆ, ಕಳುಹಿಸಬಾರದಿತ್ತು’ ಎಂದು ನೊಂದುಕೊಂಡರೆ, ನಿಮ್ಮ ತಪ್ಪು ಸರಿಪಡಿಸಿಕೊಳ್ಳಲು ಗೂಗಲ್ ಕೆಲವೇ ಕ್ಷಣಗಳ ಅವಕಾಶ ನೀಡುತ್ತದೆ. ಮೇಲ್ ಕಳುಹಿಸಿದ ತಕ್ಷಣ, ಪುಟದ ಮೇಲ್ಭಾಗದಲ್ಲಿ your message has been sent ಎಂಬ ಸಂದೇಶ ಕಾಣಿಸುತ್ತದೆ. ಪಕ್ಕದಲ್ಲೇ Undo ಎಂಬ ಬಟನ್ ಕ್ಲಿಕ್ ಮಾಡಿದರೆ ನೀವು ಕಳುಹಿಸಿದ ಮೇಲ್ ವಾಪಸ್ ಬರುತ್ತದೆ. ಅಂದರೆ, ಗೂಗಲ್ ಸರ್ವರ್‌ನಲ್ಲಿ ಕೆಲವೇ ಸೆಕೆಂಡುಗಳ ಕಾಲ ಇರುವ ಅದು, ಅಲ್ಲಿಂದ ವರ್ಗಾವಣೆಯಾಗುವ ಮೊದಲು ಎಚ್ಚೆತ್ತುಕೊಂಡು ನೀವು Undo ಒತ್ತಿಬಿಟ್ಟರೆ, ತಪ್ಪು ಸರಿಪಡಿಸಿಕೊಳ್ಳಬಹುದು! Sending has been undone ಎಂಬ ಸಂದೇಶದೊಂದಿಗೆ, ನಿಮ್ಮ ಮೇಲ್ ಪುನಃ ತೆರೆದುಕೊಳ್ಳುತ್ತದೆ. ಅಲ್ಲಿಯೇ ತಿದ್ದುಪಡಿ ಮಾಡಿ ನೀವು ಅದನ್ನು ಪುನಃ ಕಳುಹಿಸಬಹುದು.
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
View Comments
ಅಲ್ಲಾರೀ.. ಕನ್ನಡಕ್ಕೆ ಮಾಡಿಕೊಂಡಮೇಲೆ your message has been sent ಅಂತ ಹೇಗೆ ಕಾಣಿಸುತ್ತದೆ? "ನಿಮ್ಮ ಸಂದೇಶವನ್ನು ಕಳಿಸಲಾಯಿತು" ಅಂತ ತೋರಿಸಬೇಕಲ್ವೇ? :)
ವಿಕಾಸ್ ಅವರೇ,
ಹೌದು... ಆದ್ರೆ, ಎಲ್ರೂ ಅದನ್ನು ಕನ್ನಡಕ್ಕೆ ಮಾಡಿಕೊಂಡಿರುವುದಿಲ್ಲ. ಇದಕ್ಕೆ ಕಾರಣ, ಅದರ ಭಾಷಾಂತರವು ಬಳಕೆದಾರ-ಸ್ನೇಹಿಯಲ್ಲ... ಅಂಥದ್ದೊಂದು ಆಯ್ಕೆ ಇದೆ ಅಂತ ಹೇಳೋದು ನಾನು... :)