ವಿಜಯ ಕರ್ನಾಟಕದಲ್ಲಿ ಮಾಹಿತಿ@ ತಂತ್ರಜ್ಞಾನ ಅಂಕಣ 87: ಆಗಸ್ಟ್ 4, 2014
ಕಂಪ್ಯೂಟರ್ ಸ್ಕ್ರೀನ್‌ಗಳಿಂದ ಹೊರಹೊಮ್ಮುವ ಬೆಳಕು ಕಣ್ಣಿಗೆ ಕಂಟಕ. ದೀರ್ಘಕಾಲ ಕಂಪ್ಯೂಟರ್ ಪರದೆಯನ್ನು ನೋಡುತ್ತಿದ್ದರೆ ಉಂಟಾಗುವ ಹಾನಿಕಾರಕ ಪರಿಣಾಮವನ್ನು ವೈದ್ಯಕೀಯ ಪರಿಭಾಷೆಯಲ್ಲಿ ‘ಡಿಜಿಟಲ್ ಐ ಸ್ಟ್ರೈನ್’ ಎಂದೇ ಕರೆಯುತ್ತಾರೆ. ಆ ಬೆಳಕಿನ ಕಿರಣಗಳು, ವಿಕಿರಣಗಳನ್ನು ತಡೆಯಲು ಕಂಪ್ಯೂಟರ್ ಪರದೆಯನ್ನು ನಿಮ್ಮ ಕಣ್ಣಿಗೆ ನೇರವಾಗಿ ಬೆಳಕು ಬೀರದಂತೆ ಹೊಂದಿಸಿಕೊಳ್ಳುವುದು ಹಾಗೂ ಆ್ಯಂಟಿ-ಗ್ಲೇರ್ ಕನ್ನಡಕಗಳನ್ನು ಧರಿಸುವುದು ಉತ್ತಮ ಅಭ್ಯಾಸ. ಈಗಾಗಲೇ ಕನ್ನಡಕ ಬಳಸುತ್ತಿದ್ದರೆ, ಆ್ಯಂಟಿ-ಗ್ಲೇರ್ ಕೋಟಿಂಗ್ ಇರುವಂಥವುಗಳನ್ನೇ ಬಳಸಿದರೆ ಉತ್ತಮ. ಅವುಗಳ ಹೊರತಾಗಿ ಕೆಲವೊಂದು ಮೂಲಭೂತ ಮತ್ತು ಖರ್ಚಿಲ್ಲದ ಕ್ರಮಗಳನ್ನು ಅನುಸರಿಸುವುದರಿಂದ ಸತತ ಕಂಪ್ಯೂಟರ್ ಬಳಕೆ ಮಾಡಿದರೂ ಕೂಡ ಆರೋಗ್ಯದ ಸಮಸ್ಯೆಗಳನ್ನು ತಪ್ಪಿಸಿಕೊಳ್ಳಬಹುದು. ಈ ಬಗ್ಗೆ ಮುಂದೆ ಓದಿ.
ಕಂಪ್ಯೂಟರೇ ಪ್ರಧಾನವಾಗಿರುವ ಉದ್ಯೋಗ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರನ್ನು ಟೆಕ್ಕಿಗಳೆನ್ನುತ್ತಾರೆ. ಅವರಿಗೆ ಕಂಪನಿಗಳಲ್ಲಿ ಮೊದಲು ಸೇರ್ಪಡೆಯಾದಾಗ 20-20-20-20 ಎಂಬ ಸೂತ್ರವೊಂದನ್ನು ಹೇಳಿಕೊಟ್ಟಿರುತ್ತಾರೆ. ಅಂದರೆ, ಕಂಪ್ಯೂಟರ್‌ನಲ್ಲಿ ಕೆಲಸ ಮಾಡುತ್ತಿರುವಾಗ ಪ್ರತೀ 20 ನಿಮಿಷಕ್ಕೊಮ್ಮೆ ಕಣ್ಣಿಗೆ 20 ಸೆಕೆಂಡ್ ವಿರಾಮ ನೀಡಬೇಕು. ಅಂದರೆ 20 ಅಡಿ ದೂರದಲ್ಲಿರುವ ಬಿಳಿ ಜಾಗವನ್ನು ಆ ಸಮಯದಲ್ಲಿ ನೋಡಬೇಕು. ಮತ್ತು ಯಾವಾಗಲೂ ಕಂಪ್ಯೂಟರ್ ಪರದೆಯು ನಿಮ್ಮ ಕಣ್ಣಿನಿಂದ ಕನಿಷ್ಠ 20 ಇಂಚು ದೂರದಲ್ಲಿರಬೇಕು. ಕಣ್ಣಿನ ಶ್ರಮವನ್ನು ಇದು ಸಾಕಷ್ಟು ದೂರ ಮಾಡುತ್ತದೆ ಮತ್ತು ಕಣ್ಣುಗಳ ತೇವಾಂಶವೂ ಉಳಿಯುತ್ತದೆ, ಕಣ್ಣುಗಳ ಆರೋಗ್ಯಕ್ಕೆ ಪೂರಕವಾಗುತ್ತದೆ.
ಆಫೀಸಲ್ಲಿ ಕೆಲಸ ಮಾಡುವಾಗ ಕಂಪ್ಯೂಟರ್ ಬಳಕೆಗೆ ಸೂಕ್ತವಾದ ಬೆಳಕಿನ ವ್ಯವಸ್ಥೆ ಇರುತ್ತದೆ. ಆದರೆ ಮನೆಯಲ್ಲಿ? ನೀವು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಮನೆಯಲ್ಲೂ ಸಂಜೆ ಹೆಚ್ಚು ಹೊತ್ತು ಕಂಪ್ಯೂಟರ್ ಕೆಲಸ ಮಾಡುತ್ತಿದ್ದರೆ, ಕತ್ತಲಲ್ಲಿ ಕುಳಿತು ಬರೇ ಕಂಪ್ಯೂಟರ್ ಸ್ಕ್ರೀನ್ ಬೆಳಕಲ್ಲಿ ಕೆಲಸ ಮಾಡಬಾರದು. ಹಿತವಾದ ಬೆಳಕು ಬಲ್ಬ್‌ನಿಂದಾಗಲೀ, ಕಿಟಕಿಯಿಂದಾಗಲೀ ಬರುತ್ತಿರಲಿ. ಆದರೆ, ಎದುರು ಭಾಗದಿಂದ ಅಥವಾ ಹಿಂಭಾಗದಿಂದ ಬೆಳಕು ಬಾರದಂತೆ ನೋಡಿಕೊಳ್ಳಿ. ಯಾಕೆಂದರೆ, ಸ್ಕ್ರೀನ್ ಮೇಲೆ ಬೀಳುವ ಬೆಳಕಿನಿಂದ ಅದರಲ್ಲಿ ಓದಲು, ನೋಡಲು ಕಷ್ಟವಾಗುತ್ತದೆ ಮತ್ತು ಎದುರಿನಿಂದ ಬೆಳಕಿದ್ದರೆ ಕಣ್ಣುಗಳಿಗೆ ತ್ರಾಸವಾಗುತ್ತದೆ. ಬಿಸಿಲಿನಲ್ಲಿ ಕಂಪ್ಯೂಟರ್ ಕೆಲಸ ಬೇಡ. ಮತ್ತೊಂದು ನೆನಪಿಡಬೇಕಾದ, ಹೆಚ್ಚಿನವರು ಕೆಲವೊಮ್ಮೆ ಮರೆತೇಬಿಡುವ ಸಂಗತಿಯೆಂದರೆ, ಕಂಪ್ಯೂಟರ್ ನೋಡುತ್ತಿರುವಾಗ ಆಗಾಗ್ಗೆ ಕಣ್ಣುರೆಪ್ಪೆಯನ್ನು ಮುಚ್ಚಿ-ತೆರೆಯುವುದು. ಈ ರೀತಿ ಮಾಡುವುದರಿಂದ ಕಣ್ಣುಗಳ ಪಸೆ ಆರುವುದನ್ನು, ಅದರಿಂದ ಕಿರಿಕಿರಿಯೆನ್ನಿಸಿ, ತಲೆಶೂಲೆ ಬರುವುದನ್ನು ಸ್ವಲ್ಪಮಟ್ಟಿಗೆ ತಡೆಯಬಹುದು.
ಹೆಚ್ಚಿನವರು ಮರೆತುಬಿಡುವ ಮತ್ತೊಂದು ಅಂಶವಿದೆ. ಅದೆಂದರೆ ಸ್ಕ್ರೀನನ್ನು ಸ್ವಚ್ಛವಾಗಿಟ್ಟಿರುವುದು. ಇತ್ತೀಚೆಗೆ ಟಚ್ ಸ್ಕ್ರೀನ್ ಕಂಪ್ಯೂಟರ್/ಲ್ಯಾಪ್‌ಟಾಪ್‌ಗಳು ಬಂದ ಮೇಲಂತೂ, ಸ್ಕ್ರೀನ್ ಮೇಲೆ ಬೆರಳಚ್ಚು, ಧೂಳು, ಕೊಳೆ ಇರುವುದು ಜಾಸ್ತಿಯಾಗಿಬಿಟ್ಟಿದೆ. ಅಕ್ಷರಗಳನ್ನು ಅಥವಾ ಚಿತ್ರವನ್ನು ನೋಡಲು ಈ ಧೂಳಿನಿಂದ ನಿಮಗರಿವಿಲ್ಲದಂತೆಯೇ ಅಡ್ಡಿಯಾಗಬಹುದು. ಒಂದು ಸಲ, ಧೂಳು, ಕೊಳೆ, ಬೆರಳಚ್ಚನ್ನೆಲ್ಲಾ ನಿರ್ಲಕ್ಷಿಸಿಬಿಟ್ಟರೆ, ಅದುವೇ ಅಭ್ಯಾಸವಾಗಬಹುದು. ಸ್ಕ್ರೀನ್ ತುಂಬಾ ಧೂಳು, ಕೊಳೆ ತುಂಬಿ, ಅಸ್ಪಷ್ಟವಾಗಬಹುದು. ಸರಿಯಾಗಿ ಕಾಣಿಸುವುದಿಲ್ಲವೆಂಬ ಕಾರಣಕ್ಕೆ ನಿಮ್ಮ ಕಣ್ಣುಗಳು ತನ್ನನ್ನು ತಾನೇ ಹೊಂದಿಸಿಕೊಳ್ಳುವಾಗ ಕಣ್ಣುಪಾಪೆಗಳಿಗೆ ಶ್ರಮ ಹೆಚ್ಚಾಗಬಹುದು. ಈ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ.
ಇನ್ನೊಂದಿಷ್ಟು ಉಪಯುಕ್ತ ಸಲಹೆಗಳೆಂದರೆ, ಕುಳಿತುಕೊಳ್ಳುವ ಭಂಗಿಯು ಕತ್ತು, ಸೊಂಟ, ಕಣ್ಣು, ಕೈ ಮುಂತಾಗಿ ದೇಹದ ಯಾವುದೇ ಭಾಗಕ್ಕೆ ತ್ರಾಸವಾಗದಂತೆ ಇರಲಿ. ಹೆಚ್ಚು ಓದುವುದಿದ್ದರೆ, ಸ್ಕ್ರೀನ್‌ನಲ್ಲಿ ಅಕ್ಷರಗಳ ಗಾತ್ರ ದೊಡ್ಡದಾಗಿಸಿಯೇ ಓದಿಕೊಳ್ಳಿ; ಡೆಸ್ಕ್‌ಟಾಪ್‌ಗಿಂತಲೂ ಲ್ಯಾಪ್‌ಟಾಪ್ ಕಣ್ಣುಗಳಿಗೆ ಕಡಿಮೆ ಶ್ರಮ ನೀಡುತ್ತದೆ; ಕಣ್ಣು ಒಣಗಿದಂತಿದ್ದರೆ, ವೈದ್ಯರಲ್ಲಿ ವಿಚಾರಿಸಿ ಸೂಕ್ತವಾದ ಐ ಡ್ರಾಪ್ಸ್ ಬಳಸಿ; ಹೆಚ್ಚು ಹಸಿರು ಸೊಪ್ಪು, ತರಕಾರಿ ಸೇವಿಸಿ.
ಈ ಮೇಲಿನ ಅಂಶಗಳಲ್ಲಿ ಕೆಲವಂತೂ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್‌ಗಳಿಗೂ ಅನ್ವಯವಾಗುತ್ತವೆ. ನೆನಪಿಡಿ, ನಮ್ಮ ಕಣ್ಣುಗಳು ನಮಗೆ ಅನುಕೂಲ ಮಾಡಿಕೊಟ್ಟರೆ ಮಾತ್ರವೇ ಗ್ಯಾಜೆಟ್‌ಗಳನ್ನು ನಾವು ಪರಿಪೂರ್ಣವಾಗಿ ಆನಂದಿಸಬಹುದು.
ಟೆಕ್-ಟಾನಿಕ್
ರೈಲ್ವೇ ಟಿಕೆಟ್ ಬುಕ್ ಮಾಡಲು
ಯಾವುದೇ ಊರಿಗೆ ಹೋಗಲು ಟಿಕೆಟ್‌ಗಳನ್ನು ಮುಂಗಡ ಕಾಯ್ದಿರಿಸಲು ಉದ್ದುದ್ದ ಸರತಿ ಸಾಲುಗಳಲ್ಲಿ ನಿಲ್ಲುವ ಬದಲು, ಕುಳಿತಲ್ಲೇ ಟಿಕೆಟ್ ಕಾಯ್ದಿರಿಸಬಹುದಾದ ವ್ಯವಸ್ಥೆಯನ್ನು ಭಾರತೀಯ ರೈಲ್ವೇ ಇಲಾಖೆ irctc.co.in ಮೂಲಕ ಒದಗಿಸಿದೆ. ಹಿಂದೆ ಈ ತಾಣವು ಸಿಕ್ಕಾಪಟ್ಟೆ ನಿಧಾನ ಅಂತೆಲ್ಲಾ ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಸರಕಾರವು ಈ ಬಗ್ಗೆ ಗಮನ ಹರಿಸಿದೆ. ತತ್ಪರಿಣಾಮವಾಗಿ ಈ ತಾಣವು ವೇಗವಾಗಿ ಬುಕಿಂಗ್ ಮಾಡಲು ಸಹಕರಿಸುತ್ತಿದೆ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ನೆಟ್‌ಬ್ಯಾಂಕಿಂಗ್ ಬಳಸಿ ನಾವೇ ಲಾಗಿನ್ ಆಗಿ ಟಿಕೆಟ್ ಬುಕ್ ಮಾಡಬಹುದು. ಪ್ರಯಾಣಿಕರ ಪಟ್ಟಿಯನ್ನು ಒಮ್ಮೆ ಸೇವ್ ಮಾಡಿಟ್ಟುಕೊಂಡರೆ, ಪದೇ ಪದೇ ಎಲ್ಲ ವಿವರ ದಾಖಲಿಸುವ ಶ್ರಮ ಇರುವುದಿಲ್ಲ. ಟಿಕೆಟ್ ರದ್ದುಪಡಿಸುವ ವ್ಯವಸ್ಥೆಯೂ ಇದೆ.
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು