ಇಮೇಲ್, ಚಾಟ್‌ನಲ್ಲಿ ಬರುವ ಮಾಲ್‌ವೇರ್ ಬಗ್ಗೆ ಎಚ್ಚರಿಕೆ!

ಮಾಹಿತಿ@ತಂತ್ರಜ್ಞಾನ – ವಿಜಯ ಕರ್ನಾಟಕ ಅಂಕಣ –38, ಜೂನ್ 10, 2013
ಮೊಬೈಲ್ ಫೋನ್‌ನಲ್ಲಾಗಲೀ, ಟ್ಯಾಬ್ಲೆಟ್ ಆಗಲೀ, ಕಂಪ್ಯೂಟರೇ ಆಗಿರಲಿ, ಇಂಟರ್ನೆಟ್‌ಗೆ ಸಂಪರ್ಕಿಸುತ್ತೀರಿ ಎಂದಾದರೆ ಅತ್ಯಂತ ಎಚ್ಚರಿಕೆ ವಹಿಸಬೇಕಾಗಿರುವುದು ಅಗತ್ಯ. ಯಾವುದೇ ಸಾಧನದಲ್ಲಿರುವ ಗೌಪ್ಯ, ಖಾಸಗಿ ವಿಷಯವನ್ನೆಲ್ಲಾ ಕದಿಯುವ ನಿಟ್ಟಿನಲ್ಲಿ ಕಂಪ್ಯೂಟರ್ ವೈರಸ್‌ಗಳು, ಫೀಶಿಂಗ್ ತಂತ್ರಾಂಶಗಳನ್ನು ಹ್ಯಾಕರ್‌ಗಳು ರವಾನಿಸುತ್ತಲೇ ಇರುತ್ತಾರೆ. ಈ ಬಗ್ಗೆ ಎಚ್ಚರಿಕೆ ವಹಿಸಲು ಇಲ್ಲಿದೆ ಪ್ರಮುಖ ಮಾಹಿತಿ.

ಮುಖ್ಯವಾಗಿ, ಈ ಇಂಟರ್ನೆಟ್ ಪೋಕರಿಗಳು ಇ-ಮೇಲ್‌ಗಳ ಮೂಲಕ ಹ್ಯಾಕಿಂಗ್ ತಂತ್ರಾಂಶಗಳನ್ನು ಕಳುಹಿಸುತ್ತಿರುತ್ತಾರೆ. ಕೆಲವೊಮ್ಮೆ ನಿಮ್ಮ ಸ್ನೇಹಿತರ ಇ-ಮೇಲ್ ಅಡ್ರೆಸ್ ಮೂಲಕವೂ ಇಂತಹಾ ತಂತ್ರಾಂಶಗಳು ಬರಬಹುದು. ಈ ವೈರಸ್‌ಗಳು ಯಾವೆಲ್ಲಾ ರೂಪದಲ್ಲಿರಬಹುದು ಎಂಬುದನ್ನು ತಿಳಿದರೆ ನಿಮಗೇ ಅಚ್ಚರಿಯಾಗಬಹುದು. ಡಾಕ್ ಫೈಲ್ (ಮೈಕ್ರೋಸಾಫ್ಟ್ ವರ್ಡ್ ಫೈಲ್), ಎಕ್ಸೆಲ್ ಫೈಲ್, ಅಥವಾ ಚಿತ್ರದ ಫೈಲ್ (ಜೆಪಿಜಿ/ಜೆಪಿಇಜಿ) ಮುಂತಾದ ಅಟ್ಯಾಚ್‌ಮೆಂಟ್‌ಗಳು ನಿಮಗೆ ಮೇಲ್ ಮೂಲಕ ಬರಬಹುದಾಗಿದೆ.

ಮೇಲ್‌ಗಳನ್ನು ಸರಿಯಾಗಿ ಓದಿ ನೋಡದೆ, ನೀವು ಆ ಅಟ್ಯಾಚ್‌ಮೆಂಟ್‌ಗಳನ್ನು ಕ್ಲಿಕ್ ಮಾಡಿದಿರಿ ಎಂದಾದರೆ, ತನ್ನಿಂತಾನೇ ಈ ಮಾಲ್‌ವೇರ್‌ಗಳು ನಿಮ್ಮ ಕಂಪ್ಯೂಟರ್‌ನಲ್ಲಿ ಇನ್‌ಸ್ಟಾಲ್ ಆಗಿಬಿಡುತ್ತವೆ. ಮತ್ತು ನೀವು ಮಾಡುತ್ತಿರುವ ಸಂಗತಿಗಳೆಲ್ಲವನ್ನೂ, ನಿಮ್ಮ ಕಂಪ್ಯೂಟರಿನಲ್ಲಿ ನೀವು ಸೇವ್ ಮಾಡಿಟ್ಟಿರುವ ಪಾಸ್‌ವರ್ಡ್‌ಗಳನ್ನೂ ಸಂಗ್ರಹಿಸಿ, ಅದನ್ನು ಕಳುಹಿಸಿದವರಿಗೆ ರವಾನಿಸಿಬಿಡುತ್ತದೆ. ಮುಖ್ಯವಾಗಿ ಕಂಪ್ಯೂಟರಿನಲ್ಲಿ ನೀವು ಬ್ಯಾಂಕಿಂಗ್ ವ್ಯವಹಾರ ನಡೆಸಲು ಬಳಸುವ ಯೂಸರ್ ಐಡಿ ಹಾಗೂ ಪಾಸ್‌ವರ್ಡ್‌ಗಳು, ಕ್ರೆಡಿಟ್ ಕಾರ್ಡ್ ಪೇಮೆಂಟ್‌ಗೆ ಬಳಸುವ ಪಾಸ್‌ವರ್ಡ್ ಅಥವಾ ಸಂಖ್ಯೆಗಳು… ಇವುಗಳೆಲ್ಲವೂ ಹ್ಯಾಕರ್‌ಗಳ ಪಾಲಾಗುತ್ತವೆ.

ಮತ್ತೆ ಕೆಲವರು, ‘ಹಾಯ್ ಡಿಯರ್, ನನ್ನ ಚಿತ್ರ ನೋಡಿ’ ಅಂತಲೋ ‘ಇಂತಹಾ ಸೈಟ್ ನೋಡಿ’ ಅಂತಲೋ ನಿಮ್ಮನ್ನು ಮರುಳು ಮಾಡುವ ಮೇಲ್‌ನೊಂದಿಗೆ ಬರುವ ಅಟ್ಯಾಚ್‌ಮೆಂಟ್‌ಗಳನ್ನೋ ಅಥವಾ ಲಿಂಕ್‌ಗಳನ್ನೋ ಕ್ಲಿಕ್ ಮಾಡಿದರೆ, ಕೆಟ್ಟಿರೆಂದೇ ಅರ್ಥ!

ಇದಲ್ಲದೆ, ಸ್ನೇಹಿತರ ಇಮೇಲ್ ಖಾತೆಯನ್ನು ಹ್ಯಾಕ್ ಮಾಡಿ, ಅದರಲ್ಲಿರುವ ಎಲ್ಲ ವಿಳಾಸಗಳಿಗೆ ಈ ಮಾಲ್‌ವೇರ್ ಕಳುಹಿಸಬಹುದು ಮತ್ತು ನಿಮ್ಮ ಪರವಾಗಿ ಅಸಭ್ಯ ಮೇಲ್‌ಗಳನ್ನೂ ಅವರು ಕಳುಹಿಸಬಹುದಾಗಿದೆ. ಇಲ್ಲವೇ, “ನಾನು ಈ ದೇಶಕ್ಕೆ ಬಂದು ಅಪಾಯದಲ್ಲಿ ಸಿಲುಕಿದ್ದೇನೆ. ವಾಪಸ್ ಬರಲು ಹಣವಿಲ್ಲ. ದಯವಿಟ್ಟು ಒಂದಿಷ್ಟು ಹಣವನ್ನು ಇಂತಹಾ ಖಾತೆಗೆ ಜಮಾ ಮಾಡಿಬಿಡಿ” ಅಂತೆಲ್ಲಾ ಕೋರಿಕೆಗಳಿರುವ ಮೇಲ್‌ಗಳನ್ನು ನಿಮ್ಮ ಪರವಾಗಿ ನಿಮ್ಮ ಸ್ನೇಹಿತರಿಗೆಲ್ಲರಿಗೂ ಕಳುಹಿಸಲಾಗುತ್ತದೆ. ಸ್ನೇಹಿತ ಅಪಾಯದಲ್ಲಿದ್ದಾನೆ ಅಂತ ಕನಿಕರ ತೋರಿಸಿ ಹಣ ಕಳುಹಿಸಿದವರು ವಂಚನೆಗೀಡಾಗುವ ಸಾಧ್ಯತೆಗಳೂ ಇವೆ.

ಅಲ್ಲದೆ, “ಕೋಟ್ಯಂತರ ಡಾಲರ್ ಸಂಪತ್ತಿದೆ, ಅದನ್ನು ಹಂಚಿಕೊಳ್ಳಲು ನಿಮ್ಮ ಸಹಾಯ ಬೇಕು. ನಿಮಗೂ ಪಾಲು ನೀಡಲಾಗುತ್ತದೆ” ಅಂತೆಲ್ಲಾ ಹೇಳಿ ನಿಮ್ಮ ಬ್ಯಾಂಕ್ ಖಾತೆಯ ವಿವರವನ್ನೋ, ಅಥವಾ ಇಂತಿಷ್ಟು ಹಣ ಕಳುಹಿಸುವಂತೆಯೋ ಮರುಳು ಮಾಡುವ ಇಮೇಲ್‌ಗಳ ಕುರಿತಾಗಿಯೂ ಎಚ್ಚರಿಕೆ ವಹಿಸಿ.

ಇಷ್ಟು ಮಾತ್ರವೇ ಅಲ್ಲ. ನೀವು ಫೇಸ್‌ಬುಕ್‌ನಲ್ಲಿ, ಇಮೇಲ್‌ನಲ್ಲಿ ಚಾಟ್ ಮಾಡುತ್ತಿರುವಾಗ, ನಿಮ್ಮ ಸ್ನೇಹಿತರಿಂದಲೇ ಯಾವುದಾದರೂ ಲಿಂಕ್ ಅಥವಾ ಅಟ್ಯಾಚ್‌ಮೆಂಟ್ ದಿಢೀರನೇ ಬರಬಹುದು. ನೋಡಲು ಜೆಪಿಜಿ, ಡಾಕ್ ಫೈಲ್ ಇತ್ಯಾದಿಯಂತೆ ಕಂಡುಬಂದರೂ, ಅದನ್ನು ಕ್ಲಿಕ್ ಮಾಡಿದರೆ ಒಂದು ಎಕ್ಸಿಕ್ಯುಟೆಬಲ್ (.exe) ಫೈಲ್ ಡೌನ್‌ಲೋಡ್ ಆಗಿ, ತನ್ನಿಂತಾನೇ ಇನ್‌ಸ್ಟಾಲ್ ಆಗಬಹುದು. ಇ-ಮೇಲ್‌ಗಳಲ್ಲಿಯೂ ಇಂಥದ್ದೇ ಫೈಲ್‌ಗಳು ಬರುತ್ತವೆ.

ಇವೆಲ್ಲವೂ ಮಾಲ್‌ವೇರ್‌ಗಳಾಗಿರುವ ಸಾಧ್ಯತೆಯಿರುವುದರಿಂದ, ಯಾವುದೇ ಸ್ನೇಹಿತರಿಂದ, ಅಪರಿಚಿತರಿಂದ ಬರುವ ಮೇಲ್‌ಗಳಲ್ಲಿರುವ ಅಟ್ಯಾಚ್‌ಮೆಂಟ್‌ಗಳನ್ನು, ಲಿಂಕ್‌ಗಳನ್ನು ಹಿಂದೆ ಮುಂದೆ ಯೋಚಿಸದೆ ಕ್ಲಿಕ್ ಮಾಡಬೇಡಿ. ಅಪರಿಚಿತರ ಕುರಿತು ಸ್ವಲ್ಪವೇ ಶಂಕೆ ಬಂದರೂ ನಿರ್ಲಕ್ಷಿಸಿಬಿಟ್ಟರಾಯಿತು. ಆದರೆ ಸ್ನೇಹಿತರಿಂದ ಅಂಥವು ಬಂದರೆ, ಅವರಲ್ಲೇ ಮತ್ತೊಮ್ಮೆ ದೃಢಪಡಿಸಿಕೊಳ್ಳಿ, ನಿಮ್ಮ ಡೇಟಾ ಸುರಕ್ಷಿತವಾಗಿರಿಸಿಕೊಳ್ಳಿ.

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

View Comments

  • ನನ್ನ ಜಿಮೇಲ್ ಒಮ್ಮೆ ಹ್ಯಾಕ್ ಆಗಿತ್ತು, ಫ್ರಾನ್ಸ್ ನಲ್ಲಿ ಸಿಕ್ಕಿ ಬಿದ್ದಿದ್ದೇನೆ ದುಡ್ಡು ಕಳ್ಸಿ ಅಂತ ಸ್ನೇಹಿತರಿಗೆಲ್ಲ ಮೇಲ್ ಹೋಗಿತ್ತು. ಮತ್ತೆ ಪುಣ್ಯಕ್ಕೆ ಏನೆಲ್ಲ ಮಾಡಿ ಇದ್ದ ಬದ್ದ ಆಪ್ಶನ್ ಎಲ್ಲ ಕ್ಲಿಕ್ ಮಾಡಿ ಲಾಗಿನ್ ಆಗಿ ಪಾಸ್ ವರ್ಡ್ ಬದಲಾಯಿಸಿದೆ. ಈಗ ಲಾಗಿನ್ ಆಗ್ಬೇಕಾದ್ರೆ ಮೋಬೈಲಿಗೆ ಪಾಸ್ ವರ್ಡ್ ಬರುವ ಸೌಲಭ್ಯ ಬಳಸಿಕೊಳ್ಳುತ್ತಿದ್ದೇನೆ. ಇತ್ತೀಚೆಗೆ ಪೋಲೀಸರ ಬ್ಯಾಂಕ್ ಎಕೌಂಟ್ ಗಳು ಹ್ಯಾಕ್ ಆಗಿ ವಿದೇಶದಲ್ಲಿ ಎಟಿಎಂ ನಿಂದ ಹಣ ತೆಗೆದಿದ್ದಾರೆ ಅಂತ ಪೇಪರ್ ನಲ್ಲಿ ಓದಿದ್ದೆ.ಇಂಟರ್ನೆಟ್ ಉಪಯೋಗಿಸುವಾಗ ಭಾರೀ ಜಾಗ್ರತೆ ಮಾಡ್ಬೇಕು.

    • ಹೌದು... ಎಷ್ಟು ಹುಷಾರಾಗಿದ್ದರೂ ಸಾಕಾಗುವುದಿಲ್ಲ... :)

Recent Posts

ಒಂದೇ ಫೋನ್‌ನಲ್ಲಿ ಎರಡು WhatsApp ಖಾತೆ ಬಳಸುವುದು ಹೇಗೆ?

ಕಳೆದ ಅಕ್ಟೋಬರ್ 19ರಂದು ಮೆಟಾ ಒಡೆತನದ WhatsApp ಸಂಸ್ಥೆಯೇ ತನ್ನ ಆ್ಯಪ್‌ಗೆ ಹೊಸ ಅಪ್‌ಡೇಟ್ ನೀಡಿದ್ದು, ಎರಡು ವಾಟ್ಸ್ಆ್ಯಪ್ ಖಾತೆಗಳನ್ನು…

7 months ago

AI Images: Text ಬಳಸಿ ಚಿತ್ರ ತಯಾರಿಸುವುದು ಹೇಗೆ?

AI Images: ನಮ್ಮ ಕಲ್ಪನೆಯನ್ನು ಎಐ ಎಂಜಿನ್‌ಗೆ ಟೆಕ್ಸ್ಟ್ (ಪಠ್ಯ) ಮೂಲಕ ಊಡಿಸಿದರೆ ಸಾಕು, ಕ್ಷಣ ಮಾತ್ರದಲ್ಲಿ ನೀವಂದುಕೊಂಡ ಚಿತ್ರವೊಂದು…

7 months ago

ಬ್ರಾಡ್‌ಬ್ಯಾಂಡ್ ವೇಗ: ಎಂಬಿಪಿಎಸ್ ಎಂದರೆ ಏನು? ನೀವು ಯಾಮಾರುವುದು ಎಲ್ಲಿ?

ಹಾರ್ಡ್ ಡ್ರೈವ್ ಅಥವಾ ಸ್ಟೋರೇಜ್ ಡ್ರೈವ್‌ಗಳಲ್ಲಿರುವ ಫೈಲ್‌ಗಳ ವಿನಿಮಯದ ಸಂದರ್ಭದಲ್ಲಿ ಬಳಸುವುದು ಮೆಗಾಬೈಟ್ಸ್ ಎಂಬ ಪ್ರಮಾಣವನ್ನು. ಇಂಟರ್ನೆಟ್ ವೇಗವನ್ನು ಅಳೆಯುವುದು…

7 months ago

Apple iPhone 15 Plus Review: ಪ್ರೊ ಮಾದರಿಗಳ ವೈಶಿಷ್ಟ್ಯವಿರುವ ಐಫೋನ್ 15 ಪ್ಲಸ್

Apple iPhone 15 Plus Review: ಲೈಟ್ನಿಂಗ್ ಪೋರ್ಟ್ ಬದಲು ಟೈಪ್ ಸಿ ಚಾರ್ಜಿಂಗ್ ಪೋರ್ಟ್, ಡೈನಮಿಕ್ ಐಲೆಂಡ್, ಹೊಸ…

8 months ago

Type in Kannada: ಐಫೋನ್, ಆಂಡ್ರಾಯ್ಡ್ ಫೋನ್‌ಗಳಲ್ಲಿ ಕನ್ನಡ ಟೈಪಿಂಗ್ ಈಗ ಮತ್ತಷ್ಟು ಸುಲಭ

Type in Kannada: ಗೂಗಲ್‌ನ ಆಂಡ್ರಾಯ್ಡ್ ಹಾಗೂ ಆ್ಯಪಲ್‌ನ ಐಫೋನ್ ಸ್ಮಾರ್ಟ್‌ಫೋನ್‌ಗಳಲ್ಲಿ ಕನ್ನಡ ಟೈಪಿಂಗ್ ಸುಲಭವಾಗಿಸುವ ಸಾಕಷ್ಟು ಖಾಸಗಿ ಕೀಬೋರ್ಡ್…

8 months ago

iPhone 15 Pro Max Review: ಗೇಮರ್‌ಗಳಿಗೆ ಹಬ್ಬ – ಆ್ಯಪಲ್‌ನ ಶಕ್ತಿಶಾಲಿ, ಐಷಾರಾಮಿ ಸಾಧನ

iPhone 15 Pro Max Review: ವಿನೂತನವಾದ ಟೈಟಾನಿಯಂ ಚೌಕಟ್ಟು ಐಷಾರಾಮದ ಅನುಭವ. ಲೈಟ್ನಿಂಗ್ ಪೋರ್ಟ್ ಬದಲು ಯುಎಸ್‌ಬಿ ಸಿ…

9 months ago