ಕಾಫಿ ಟೇಬಲ್ ಬುಕ್‌ನಲ್ಲಿ ದೇವಿ ಮಹಾತ್ಮೆ ಯಕ್ಷಗಾನ

0
758

[ಭಾನುವಾರದ ವಿಜಯ ಕರ್ನಾಟಕದಲ್ಲಿ ಕೃತಿಯ ಬಗ್ಗೆ ಇಣುಕುನೋಟ]
ಕೃತಿ: ದೇವಿ ಮಹಾತ್ಮೆ, Coffee Table Book
ಲೇ: ಸದಾನಂದ ಹೆಗಡೆ ಹರಗಿ
ಪ್ರಕಾಶನ: ರವಿಶ್ರೀ ಆರ್ಟ್ ಪ್ರೊಮೋಶನ್ ಫೌಂಡೇಶನ್, ಕುಳಾಯಿ
ಪುಟಗಳು: 64
ಬೆಲೆ: ರೂ. 250/-

Coffe Table Book1ಯಕ್ಷಗಾನ ಎಂದರೆ ಅದೊಂದು ಕಲೆ ಮಾತ್ರವಲ್ಲ, ಬಣ್ಣದ ಲೋಕವೂ ಆಗಿರುವ ಜೀವನ ಶೈಲಿಯನ್ನು ರೂಪಿಸಬಲ್ಲ, ಬದುಕಿನಲ್ಲಿ ಶಿಸ್ತು ತರಿಸಬಲ್ಲ, ಸಮಾಜಕ್ಕೊಂದು ಒಳ್ಳೆಯ ಸಂದೇಶ ನೀಡಬಲ್ಲ ಮಾಧ್ಯಮವದು. ಕನ್ನಡ ಕರಾವಳಿಯ ಮಣ್ಣಿನ ಕಣ ಕಣದಲ್ಲಿಯೂ ಹಾಸುಹೊಕ್ಕಾಗಿರುವ ಯಕ್ಷಗಾನದ ಸೊಗಡು ಈಗ ರಾಜ್ಯವನ್ನು ಆವರಿಸಿಕೊಂಡು, ದೇಶ ವಿದೇಶದಲ್ಲಿಯೂ ಪ್ರಸಿದ್ಧಿ ಪಡೆಯುತ್ತಿರುವುದು ಉತ್ತಮ ಬೆಳವಣಿಗೆ. ಕರಾವಳಿಯಲ್ಲಿ ಇದನ್ನು ಒಂದು ಕಲೆ ಮಾತ್ರವಾಗಿ ಪರಿಗಣಿಸದೆ, ಆರಾಧನಾ ಕಲೆಯಾಗಿ ಜನರು ಒಪ್ಪಿಕೊಂಡಿದ್ದಾರೆ, ಅಪ್ಪಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಅಲ್ಲವೇ, ಕರಾವಳಿಯ ಪ್ರಸಿದ್ಧ ಪುಣ್ಯಕ್ಷೇತ್ರಗಳ ಮೂಲಕ ಪ್ರತಿವರ್ಷದ ಆರು ತಿಂಗಳು ತಿರುಗಾಟ ನಡೆಸುವ ಯಕ್ಷಗಾನ ಬಯಲಾಟ ಮೇಳಗಳು, ಇಂದಿಗೂ ರಾರಾಜಿಸುತ್ತಿರುವುದು? ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಹೆಸರಿನಲ್ಲಿ ಈಗ ಮೇಳಗಳ ಸಂಖ್ಯೆ ಆರು ಆಗಿದ್ದರೆ, ಮಂದಾರ್ತಿ ದುರ್ಗಾಪರಮೇಶ್ವರಿ ದೇವಳದ ಮೇಳಗಳ ಸಂಖ್ಯೆ ಐದು. ಈ ಎರಡೂ ಕ್ಷೇತ್ರಗಳ ಒಟ್ಟು 11 ಮೇಳಗಳಿಗೆ ಇಪ್ಪತ್ತೈದು ವರ್ಷಕ್ಕಾಗುವಷ್ಟು ಹರಕೆಯಾಟಗಳು ಈಗಾಗಲೇ ನಿಗದಿಯಾಗಿವೆ ಎಂದರೆ, ದೇವತಾರಾಧನೆಗೂ, ಯಕ್ಷಗಾನಕ್ಕೂ ಅದೆಂತಹಾ ಪ್ರಾಂಜಲ ನಂಟಿದೆ ಎಂಬುದು ತಿಳಿಯುತ್ತದೆ.

ಈ ಹಿನ್ನೆಲೆಯಿರುವ ಯಕ್ಷಗಾನದಲ್ಲಿ ಶ್ರೀದೇವಿ ಮಹಾತ್ಮೆ ಎಂದು ಕೇಳಿದಾಕ್ಷಣ ಮನಸ್ಸು ಭಕ್ತಿ ಮತ್ತು ಭಯದೊಂದಿಗೆ ಅರಳುತ್ತದೆ. ಎಷ್ಟು ಬಾರಿ ನೋಡಿದರೂ, ಮತ್ತಷ್ಟು ನೋಡಬೇಕೆಂಬಾಸೆ ಹುಟ್ಟಿಸುವ, ಪ್ರತಿ ಬಾರಿ ನೋಡಿದಾಗಲೂ ಹೊಸದರಂತೆ ಕಾಣಿಸುವ ಈ ಕಥಾನಕದ ವೈಭವವನ್ನು ಶಬ್ದ ಚಿತ್ರಗಳಲ್ಲಿ ತೆರೆದಿಡುವ ಅಪರೂಪದ ಪ್ರಯೋಗ, ದೇವಿ ಮಹಾತ್ಮೆ ಎಂಬ ಕಾಫಿ ಟೇಬಲ್ ಬುಕ್.

ಇರುಳಿಡೀ ಕುಳಿತಲ್ಲೇ ಅತೀಂದ್ರಿಯ ಅನುಭವವನ್ನು, ಭಕ್ತಿಯ ಅನುಭೂತಿಯೊಂದಿಗೆ ದುಷ್ಟ ಶಿಕ್ಷಣ, ಶಿಷ್ಟ ರಕ್ಷಣೆ ಸಂದೇಶದೊಂದಿಗೆ ಉಣಬಡಿಸುವ ಯಕ್ಷಗಾನವನ್ನು ಚಿತ್ರಗಳಲ್ಲಿ, ಸಂಬಂಧಿಸಿದ ವಿವರಣೆಗಳೊಂದಿಗೆ ನೋಡಿದಾಗ ಯಕ್ಷಲೋಕವೇ ಮೇಳೈಸಿದಂತಾಗುತ್ತದೆ. ಕರಾವಳಿಯಲ್ಲಿ ಯಕ್ಷಗಾನ ಮೇಳಗಳು ತಿರುಗಾಟ ಆರಂಭಿಸಿದ ಬಳಿಕ ಪ್ರತಿ ದಿನವೂ ಕನಿಷ್ಠ ಒಂದೆರಡು ಊರುಗಳಲ್ಲಿ ಆಡುವ ಪ್ರಸಂಗ ದೇವಿ ಮಹಾತ್ಮೆಯೇ ಆಗಿರುತ್ತದೆ. ಅಲ್ಲೆಲ್ಲಾ ತಿರುಗಾಡಿ ಲೇಖಕರು ಮತ್ತು ಛಾಯಾಗ್ರಾಹಕರು ಅದ್ಭುತ ಕೃತಿಯೊಂದನ್ನು ನಮ್ಮ ಮುಂದಿಟ್ಟಿದ್ದಾರೆ ಎನಿಸುತ್ತದೆ.

ಮೂರು ಹಂತಗಳಲ್ಲಿ ಕಥಾನಕವನ್ನೂ, ಬಳಿಕ ಅನುಭವಿಗಳ ಸಂದರ್ಶನವನ್ನೂ ಒಳಗೊಂಡ ಈ ಕೃತಿಯು, ಕೇವಲ ಯಕ್ಷಗಾನದ ಬಗೆಗಷ್ಟೇ ಅಲ್ಲದೆ, ದೇವಿ ಮಹಾತ್ಮೆಯ ಮೂಲಕವಾಗಿ ಸಮಕಾಲೀನ ಹಾಗೂ ಸಾರ್ವಕಾಲಿಕ ಸಂದೇಶವನ್ನೂ ಕಟ್ಟಿ ಕೊಡುತ್ತದೆ.

ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ, ಛಂದಸ್ಸು ವಿದ್ವಾಂಸ ಸೀಮಂತೂರು ನಾರಾಯಣ ಶೆಟ್ಟಿ ಅವರು ಮುನ್ನುಡಿಯಲ್ಲಿ, 70 ವರ್ಷಗಳ ಹಿಂದೆ ಐದು ದಿನಗಳ ಅಂದರೆ ಐದು ರಾತ್ರಿ ನಡೆದ ದೇವಿ ಮಹಾತ್ಮೆ ಪ್ರಸಂಗದ ಯಕ್ಷಗಾನದ ಕಥನವೊಂದನ್ನು ವಿವರಿಸಿದ್ದಾರೆ. ಹಗಲಿಡೀ ಸೊಪ್ಪು ತರುವ, ಹುಲ್ಲು ಕೊಯ್ಯುವ, ಅಕ್ಕಿ ಕುಟ್ಟುವ ಕೆಲಸ, ರಾತ್ರಿ ಕಣ್ಣರಳಿಸಿ ನೋಡುವ ಯಕ್ಷಗಾನ. ಕೃಷಿ ಬದುಕಿನೊಂದಿಗೆ ಯಕ್ಷಗಾನ ಹೇಗೆ ಮಿಳಿತವಾಗಿತ್ತು ಮತ್ತು ಅದು ಯಾವ ಪರಿ ಆಕರ್ಷಣೆ ಮೂಡಿಸಿತ್ತು ಎಂಬುದನ್ನು ಅವರ ಮುನ್ನುಡಿ ಮನದಟ್ಟು ಮಾಡಿಸುತ್ತದೆ. ಇಡೀ ಯಕ್ಷಗಾನ ಪ್ರಸಂಗದಲ್ಲಿ ಆವೇಶಭರಿತಳಾದ ದೇವಿಯು ರಾಕ್ಷಸರ ಪಾತ್ರಧಾರಿಗಳನ್ನು ಮುಗಿಸಿಯೇಬಿಡುತ್ತಾಳೋ ಎಂಬ ಆತಂಕದಿಂದ ಜನರು ಆ ಐದೂ ದಿನಗಳ ಕಾಲ, ಚೌಕಿ ಹಾಗೂ ವೇದಿಕೆಯ ಆಸುಪಾಸು ರಾಕ್ಷಸ ಪಾತ್ರಧಾರಿಗಳನ್ನು ಕಾವಲು ಕಾಯಲು ಜನರು ನಿಂತಿರುತ್ತಿದ್ದರು ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ.

ದೇವಿ ಮಹಾತ್ಮೆಯ ಪ್ರಸಂಗದಿಂದ ಸಂಪೂರ್ಣವಾಗಿ ಆಕರ್ಷಿತರಾಗಿರುವ ಲೇಖಕರೇ ಒಂದೆಡೆ ಹೇಳಿದ್ದಾರೆ, ”ಪ್ರತಿ ವರ್ಷ ಈಗಲೂ ಕೂಡ ಎರಡು ಸಾವಿರಕ್ಕೂ ಮಿಕ್ಕಿ ದೇವಿಮಹಾತ್ಮೆ ಪ್ರಸಂಗಗಳು ಪ್ರದರ್ಶನಗೊಳ್ಳುತ್ತಿರುವುದು ಅದರ ಜನಪ್ರಿಯತೆಗೆ ಸಾಕ್ಷಿ. ಸಾಮಾನ್ಯ ರಂಗಭೂಮಿ ಪ್ರಯೋಗಗಳು ಕೊಡುವ ರಂಜನೆಯ ಜತೆಗೆ ಲೌಕಿಕ ಹಾಗೂ ಅಲೌಕಿಕ ವಿಸ್ತರಣೆ, ವಿಪುಲವಾದ ಅನುಭವ – ಅನುಭಾವ ಇದರ ವಿಶೇಷ. ಸೃಷ್ಟಿಯ ಹಿಂದಿನ ರಹಸ್ಯ, ಆದಿ ಶಕ್ತಿಯ ಕಲ್ಪನೆಯಷ್ಟೇ ಅಲ್ಲ, ಅವರವರ ಭಾವಕ್ಕೆ ಅವರವರ ಭಕುತಿಗೆ ದಕ್ಕುವ ಅತೀಂದ್ರಿಯ ಅನುಭವ ಇಲ್ಲಿದೆ”.

ಈ ಒಂದು ಪ್ರಸಂಗದಿಂದಲೇ ಅದೆಷ್ಟು ಜನರ ಜೀವನ ನಡೆಯುತ್ತದೆ! ಕಲಾವಿದರು, ರಾಳ ತಯಾರಿಸುವವರು, ಬ್ಯಾಂಡು-ವಾದ್ಯ ಕಲಾವಿದರು, ಚರುಮುರಿ, ಕಡ್ಲೆಕಾಯಿ, ಆಮ್ಲೆಟ್ವ್ಯಾಪಾರಿಗಳು… ಒಟ್ಟಿನಲ್ಲಿ ಚಿಕ್ಕ ಮಕ್ಕಳನ್ನೂ, ಮುಗ್ಧ ಕೃಷಿಕರನ್ನೂ ಆಕರ್ಷಿಸುವ ಮತ್ತು ಭಯಾತಂಕದ ನಡುವೆಯೇ ಮೋಡಿ ಮಾಡುವ ಪಾತ್ರ ವೈಭವಗಳು ಇಲ್ಲಿವೆ; ನವರಸಗಳನ್ನು ಮೇಳವಿಸಬಲ್ಲ ಪಾತ್ರ ಮತ್ತು ಕಥಾಭಾಗಗಳು ಇಲ್ಲಿವೆ. ಇದಕ್ಕಾಗಿಯೇ ಲೇಖಕರು ಹೇಳಿದ್ದು – “ಇದೊಂದು ಪರಿಪೂರ್ಣ ಯಕ್ಷಗಾನ”.

ಮೈಸೂರು ಶ್ರೀ ರಾಮಕೃಷ್ಣಾಶ್ರಮದ ಸ್ವಾಮಿ ಹರ್ಷಾನಂದರು ಕಲ್ಪಾಂತರದ ಕಥೆಯನ್ನು ಪ್ರಸ್ತುತಪಡಿಸುತ್ತಾ, ಮಾರ್ಕಾಂಡೇಯ ಪುರಾಣದಲ್ಲಿ ಬರುವ ದೇವಿ ಮಹಾತ್ಮೆಯ ಕಥಾನಕವನ್ನು ಮಧುಕೈಟಭ ವಧೆ, ಮಹಿಷಾಸುರ ಮರ್ದನ ಹಾಗೂ ಶುಂಭ-ನಿಶುಂಭ ಸಂಹಾರ ಎಂಬ ಮೂರು ಭಾಗಗಳಾಗಿ ಪಟ್ಟಿ ಮಾಡಿ, ಸರ್ವಸ್ವವನ್ನೂ ಕಳೆದುಕೊಂಡ ಸುರಥನೆಂಬ ರಾಜ ಹಾಗೂ ಸಮಾಧಿಯೆಂಬ ವೈಶ್ಯ, ಸುಮೇಧ ಮಹರ್ಷಿಯಿಂದ ಈ ಕಥಾನಕವನ್ನು ಆಲಿಸಿ ಕಳೆದುಹೋಗಿದ್ದನ್ನು ಮರಳಿ ಪಡೆಯುತ್ತಾರೆಂಬ ಮಾಹಿತಿ ನೀಡಿದ್ದಾರೆ.

ಕೃತಿಯ ಮುಖ್ಯ ಭಾಗ ಪ್ರಸಂಗ ರೂಪ. ಪುರಾಣ ಪಂಡಿತರಾಗಿದ್ದ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು ಹೇಳಿದ ಕಥೆಗೆ ದಿ.ಅಗರಿ ಭಾಗವತರು ತಮ್ಮ ಅನುಭವ ಮತ್ತು ನಾಟಕೀಯತೆಯ ಸ್ಪರ್ಶ ನೀಡಿ, ದೇವಿದಾಸ ಕೃತಿ ಹಾಗೂ ಮಾಂಬಾಡಿ ಭಾಗವತರ ಕೃತಿಗಳಿಂದ ಪ್ರಭಾವಿತರಾಗಿ, ಪ್ರಸಂಗ ಪಠ್ಯವಾಗಿ ರಚಿಸಿರುವ ಮತ್ತು ಅದು ಬಾಯಿಯಿಂದ ಬಾಯಿಗೆ ಬದಲಾದಾಗ ಸಹಜವಾಗಿ ಒಂದಿಷ್ಟು ರೂಪಾಂತರಗೊಂಡಿರುವ ಸಾಧ್ಯತೆಗಳನ್ನು ವಿವರಿಸಲಾಗಿದೆ.

ಮಹಿಷಾಸುರನು ವಿದ್ಯುನ್ಮಾಲಿ-ಮಾಲಿನಿಯರ ಪುತ್ರನೆಂಬ ಉಲ್ಲೇಖ ಪುರಾಣಗಳಲ್ಲಿಲ್ಲ ಎಂಬುದನ್ನು ಅಗರಿಯವರು ಹೇಳಿದ್ದಾರೆ. ಆದರೆ ದೇವಿ ಮಹಾತ್ಮೆ ಆಟದ ಕತೆಯ ಎಳೆಗಳು ಅನ್ಯ ಪುರಾಣಗಳಲ್ಲಿದೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಲೋಕಾನುಭವಗಳು ಈ ಪ್ರಸಂಗ ಪಠ್ಯದಲ್ಲಿದೆ ಎನ್ನುತ್ತಾರೆ ಲೇಖಕರು. ಕಾಲಕಾಲಕ್ಕೆ ರೂಪಾಂತರವಾಗಿದೆ, ಉದಾಹರಣೆಗೆ, ಹಾಸ್ಯರಸ ಪ್ರಧಾನವಾದ ವಿದ್ಯುನ್ಮಾಲಿ ವಿವಾಹ ಪ್ರಸಂಗವು 50 ವರ್ಷಗಳ ಹಿಂದಿನ ಕಥಾನಕದಲ್ಲಿ ಇರಲಿಲ್ಲ ಎಂಬ ಅಧ್ಯಯನಪೂರ್ಣ ವಿವರಣೆಯಿದೆ.

ದೇವಿ ಮಹಾತ್ಮೆಯ ಸಾರ್ವತ್ರಿಕ ಆಕರ್ಷಣೆ ಮಹಿಷಾಸುರ ಎಂಬುದರಲ್ಲಿ ಎರಡು ಮಾತಿಲ್ಲ. ಪತಿ ವಿದ್ಯುನ್ಮಾಲಿ ಸ್ವರ್ಗದಲ್ಲಿ ಹತನಾದಾಗ, “ಅತ್ತು ಫಲವೇನಿನ್ನು ಸುಮ್ಮನೆ, ಸ್ವರ್ಗವನು ಅರ್ತಿಯಲಿ ವಶಗೈವೆನೆನುತಲಿ” ಮಾಲಿನಿಯು, “ಮಗನೇ ಬಾ” ಎಂದು ಕರೆದಾಗ, ಕರಾಳ ರಾತ್ರಿಯಲ್ಲಿ ದೊಂದಿ ಬೆಳಕಿನ ಮತ್ತು ಬೆಂಕಿಯ ನಡುವೆ ಸಭೆಯ ಕಡೆಯಿಂದ ಮಹಿಷಾಸುರನ ಆಗಮನ. ನಿದ್ದೆಯಲ್ಲಿದ್ದವರು ಎದ್ದು ಕೂರುತ್ತಾರೆ. ಬೈ ಹುಲ್ಲಿನ ಮೂಟೆಗೆ ಬೆಂಕಿ ಹಚ್ಚುವುದು, ದೊಂದಿ ಹಿಡಿದು, “ವಾಂಯ್” ಕೋಣನ ಧ್ವನಿಯಲ್ಲಿ ಕೂಗುತ್ತಾ ರಂಗಕ್ಕೆ ಧಾವಿಸುವ ಮಹಿಷನ ಪ್ರವೇಶವೊಂದು ರೋಮಾಂಚಕಾರಿ ಅನುಭವ. ಕೋಣನಾದರೂ ಜಾಣನಾಗಿದ್ದ ಮಹಿಷಾಖ್ಯ, ತಾಯಿಗೆ ವೈಧವ್ಯ ತಂದ ಸುರರನ್ನು ಪೀಡಿಸಿ, ಅಷ್ಟ ದಿಕ್ಪಾಲಕರ ಬೆಸಗೆಡಿಸಿದಾಗ, ದೇವತೆಗಳು, ಹರಿಹರಾದ್ಯರು ಸೇರಿ ಏಕೋಭಾವದಿಂದ ದೇವಿಯನ್ನು ಪ್ರಾರ್ಥಿಸಿದಾಗ ದೇವಿ ಅವತರಿಸುವ ಚಿತ್ರಗಳು ನಿರೂಪಣೆ ಸಹಿತವಾಗಿ ಗಮನ ಸೆಳೆಯುತ್ತವೆ. ಶ್ರೀದೇವಿಯನ್ನೇ ಕಾಮಿಸಿದ ಮಹಿಷನು ಪ್ರಸಂಗದ ಖಳ ನಾಯಕನಾದರೂ, ಸೇಡು ತೀರಿಸಿಕೊಳ್ಳುವ ಸಿನಿಮಾ ಹೀರೋಗಳ ಕ್ಯಾರೆಕ್ಟರ್ ಈ ಪಾತ್ರದಲ್ಲಿದೆ ಎಂದು ವರ್ಣಿಸುತ್ತಾರೆ ಲೇಖಕರು. ಅಷ್ಟು ಬಲಾಢ್ಯ ಮಹಿಷನನ್ನು ದೇವಿಯು ಸಿಂಹವಾಹಿನಿಯಾಗಿ ಸಂಹರಿಸುತ್ತಾಳೆಂದಾದರೆ, ಧರ್ಮಕ್ಕೆ ಜಯವಿದೆ ಎಂಬ ಸಂದೇಶವು ಜನರಲ್ಲಿ ಭಕ್ತಿ ಭಾವ ಮತ್ತು ಆಶಾಭಾವವನ್ನೂ ಮೂಡಿಸುತ್ತದೆ.

ಬಳಿಕದ ಆಕರ್ಷಣೆ, ಶುಂಭ ನಿಶುಂಭರ ಪ್ರವೇಶ, ತದನಂತರದಲ್ಲಿ ಇತ್ತಲಾ ಖಳ ಚಂಡ-ಮುಂಡರು ಪದ್ಯಕ್ಕೆ ಅಟ್ಟಹಾಸದ ಧಾವಂತ, ಕದಂಬವನದಲ್ಲಿ ದೇವಿಯೊಡನೆ ಸಂವಾದ… ಈ ವೇಳೆ, ಯಕ್ಷಗಾನದ ಮಾತಿನಲ್ಲೇ ಹೇಳುವುದಾದರೆ, “ರಂಗಸ್ಥಳ ಪುಡಿಯಾಗಿಸುವ” ಕುಣಿತ… ಇವೆಲ್ಲವೂ ಚಿತ್ರರೂಪದಲ್ಲಿ ಚೆನ್ನಾಗಿ ಮೂಡಿಬಂದಿದೆ. ಮೂಲ ದೇವಿ ಮಹಾತ್ಮೆಯಲ್ಲಿ ರಕ್ತಬೀಜ ಹುಂಬ, ಕ್ರೂರಿ ರಕ್ಕಸ ಎಂದಿದ್ದರೂ, ಶುಂಭನಿಗೆ “ತರುಣಿಯಲ್ಲವಳಾದಿಮಾಯೆ” ಎಂದು ಸಲಹೆ ನೀಡುವ ಸಂಕೀರ್ಣ ವ್ಯಕ್ತಿತ್ವವನ್ನು ಅಗರಿಯವರು ಪ್ರಸಂಗ ಪಠ್ಯದಲ್ಲಿ ಮಾರ್ಪಾಡು ಮಾಡಿರುವುದು ಹಿರಿಯರಾದ ಶೇಣಿ ಗೋಪಾಲಕೃಷ್ಣ ಭಟ್ಟರಿಗಾಗಿ ಎಂಬೊಂದು ಅಂಶವು ಇಲ್ಲಿ ಗಮನ ಸೆಳೆಯುತ್ತದೆ. ಪಾತ್ರದ ಮೇಲೆ ಪಾತ್ರಧಾರಿಯ ಪ್ರಭಾವದ ಪ್ರತೀಕವಿದು.

ಕೊನೆಯ ಭಾಗದಲ್ಲಿ, ಶುಂಭ ನಿಶುಂಭರ ವೈಭವವಿದೆ. ಕೆಲವೇ ಕ್ಷಣಗಳ ಅವರ ಅಟಾಟೋಪವಿದ್ದರೂ, ಮುಖವರ್ಣಿಕೆಗೆ ಎಷ್ಟು ಗಂಟೆಯ ಶ್ರಮವಿದೆ, ಕೇಸರಿ ತಟ್ಟೆ (ತಡ್ಪೆ ಕಿರೀಟ) ಮೂಲಕ ನಿದ್ರೆಯ ಮಂಪರಿನಲ್ಲಿರುವ ಪ್ರೇಕ್ಷಕರನ್ನು ಯಾವುದೋ ಲೋಕಕ್ಕೆ ಕೊಂಡುಹೋಗುತ್ತದೆ ಎಂಬ ಉಲ್ಲೇಖದೊಂದಿಗೆ, ದೇವಿ ಮಹಾತ್ಮೆಯ ರಸಾನುಭವಗಳು ಎಂಬ ಅಧ್ಯಾಯದಲ್ಲಿರುವ, ಶುಂಭ ಪಾತ್ರದ ಚುಕ್ಕಿ ಇಡುವ ಚಿತ್ರವು ಗಮನ ಸೆಳೆಯುತ್ತದೆ.

ಪ್ರೇಕ್ಷಕರು ರಕ್ಕಸರ ವಧೆಯನ್ನು ಸಾಮಾನ್ಯ ಕ್ಲೈಮ್ಯಾಕ್ಸ್ ಎಂದು ಭಾವಿಸದೆ, ಅದನ್ನು ಮೀರಿದ ಅನುಭವ ಹೊಂದಿರುತ್ತಾರೆ ಎಂದು ಲೇಖಕರು ಈ ಪ್ರಸಂಗದ ಒಟ್ಟಂದವನ್ನು ಕಟ್ಟಿಕೊಡುತ್ತಾರೆ. ಈ ಪ್ರಸಂಗದ ಪ್ರಭಾವಕ್ಕೆ ಮನಃಶಾಸ್ತ್ರೀಯ ರೂಪವನ್ನೂ ನೀಡಿರುವ ಲೇಖಕರು, “ಭಕ್ತಿಯ ಪರಿಭಾಷೆಯಲ್ಲಿ ಇದು ದರ್ಶನ, ಭಕ್ತನೊಬ್ಬ ತನ್ನೊಳಗಿನ ಅಹಂಕಾರವನ್ನು ಮೀರಿ ದೈವೀಕ ಜಗತ್ತಿನಲ್ಲಿ ಲೀನವಾಗುವ ಪರಿ ಮತ್ತು ಮನಸ್ಸಿನ ಅತ್ಯಂತ ಮೂಲೆಯಲ್ಲಿರುವ ಭಯಾತಂಕವೂ ನಿವಾರಣೆಯಾಗುತ್ತದೆ ಎಂಬ ಸಂದೇಶವಿಲ್ಲಿದೆ” ಎನ್ನುತ್ತಾರೆ. ನಂತರದ ಪುಟಗಳಲ್ಲಿ ಚೌಕಿಯ ದೃಶ್ಯಾವಳಿಗಳೊಂದಿಗೆ, ಯಕ್ಷಗಾನ ಪ್ರಿಯೆ ಕಟೀಲು ಶ್ರೀದೇವಿಯ ಉಲ್ಲೇಖ ಹಾಗೂ ಬಡಗು ತಿಟ್ಟಿನಲ್ಲಿ ಕೂಡ ಒಂದಿಷ್ಟು ಬದಲಾವಣೆಗಳೊಂದಿಗೆ ತೆಂಕಿನ ಪ್ರಸಂಗ ಪಠ್ಯವಿರುವುದನ್ನು ಲೇಖಕರು ತೋರಿಸಿದ್ದಾರೆ. ಕಟೀಲಿನ ಅರ್ಚಕ ಹರಿನಾರಾಯಣ ಆಸ್ರಣ್ಣರು ವ್ಯಕ್ತಪಡಿಸಿದ ಕಳಕಳಿಯೂ ಈ ಪುಸ್ತಕದ ಅಂತ್ಯ ಭಾಗದಲ್ಲಿದೆ. ವಾಹನದಲ್ಲಿ ಮಹಿಷಾಸುರನನ್ನು ತರುವುದು, ಯಕ್ಷಗಾನ ಪ್ರದರ್ಶನದ ಅಂದವನ್ನೇ ಮರೆಮಾಚುವಷ್ಟು ಪಟಾಕಿ ಸಿಡಿಸುವುದು… ಯಕ್ಷಗಾನಕ್ಕೆ ಹೊರತಾದ ಈ ಅಬ್ಬರಕ್ಕೆ ಅವರ ವಿರೋಧವಿಲ್ಲಿ ದಾಖಲಾಗಿದೆ. ಕಟೀಲು ಮೇಳಗಳ ಯಜಮಾನರಾದ ಕಲ್ಲಾಡಿ ದೇವಿಪ್ರಸಾದ ಶೆಟ್ಟರು ಸಂದರ್ಶನದಲ್ಲಿ, “ಆಟ (ಯಕ್ಷಗಾನ) ಆಡಿಸುತ್ತೇವೆಂದು ಮಾತ್ರವೇ ಅಲ್ಲದೆ, ನೋಡುತ್ತೇವೆಂದು ಹರಕೆ ಹೊತ್ತವರೂ ಪ್ರೇಕ್ಷಕರಾಗಿ ಬರುತ್ತಿದ್ದಾರೆ” ಎಂದು ಹೇಳಿರುವುದು, ಈ ಅರಾಧನಾ ಕಲೆಯ ಔನ್ನತ್ಯಕ್ಕೆ ಹಿಡಿದ ಕೈಗನ್ನಡಿ.

ಸಕಲ ಸಶಕ್ತಳಾಗಿರುವ ಸ್ತ್ರೀ ಅಬಲೆಯಲ್ಲ, ಆಕೆಯನ್ನು ಕೆಟ್ಟ ದೃಷ್ಟಿಯಿಂದ ನೋಡುವ ಕಣ್ಣುಗಳಿಗೆ ಈ ಕಥಾನಕದಲ್ಲಿ ಮಾರಣಾಂತಿಕ ಪಾಠವೊಂದಿದೆ ಎಂಬ ಸಮಕಾಲೀನ ಸಂದೇಶದೊಂದಿಗೆ ಪುಸ್ತಕವು ಕೊನೆಯ ಪುಟದವರೆಗೆ ಓದಿಸಿಕೊಂಡು ಹೋಗಿರುತ್ತದೆ.

ಲಕ್ಷಾಂತರ ಜನರಿಗೆ ದಿವ್ಯಾನುಭವ ನೀಡಿದ ದೇವಿ ಮಹಾತ್ಮೆಯ ಪೌರಾಣಿಕ, ಐತಿಹಾಸಿಕ, ಕಾರಣಿಕ ನೆಲೆಗಳನ್ನು ಒಳಗೊಂಡು ಮಸ್ತಕದಲ್ಲಿರುವ ಆಟದ ವೈಭವವನ್ನು ಪುಸ್ತಕಕ್ಕೆ ತಂದಿರುವ ಸದಾನಂದ ಹೆಗಡೆ ನಿಜಕ್ಕೂ ಈ ವಿನೂತನ ಪ್ರಯೋಗದಲ್ಲಿ ಗೆದ್ದಿದ್ದಾರೆ. ಕಾಫಿ ಟೇಬಲ್ ಬುಕ್ ಎಂಬ ಪರಿಕಲ್ಪನೆಯ ಮೂಲಕ, ದೇವಿ ಮಹಾತ್ಮೆ ಯಕ್ಷಗಾನ ನೋಡಿ ಆನಂದಿಸಿದವರ ಆನಂದವನ್ನು ಮತ್ತೆ ಮತ್ತೆ ಒರೆಗೆ ಹಚ್ಚುವಂತೆ ಮಾಡುವ, ಆ ಮೂಲಕ ಆ ಒಂದು ದಿವ್ಯಾನುಭೂತಿಯನ್ನು ಮತ್ತಷ್ಟು ಪ್ರಜ್ವಲಗೊಳಿಸುವ ಪ್ರಯತ್ನವಿದು.ಜನಮರುಳಿನ ಯಕ್ಷಗಾನ ಪ್ರದರ್ಶನದ ನಡುವೆಯೂ ದೇವಿ ಮಹಾತ್ಮೆ ಇಂದಿಗೂ ತನ್ನತನವನ್ನು ಉಳಿಸಿಕೊಂಡಿರುವುದೇಕೆಂಬುದು ಇದನ್ನೊಮ್ಮೆ ಓದಿದಾಗ ವೇದ್ಯವಾಗುತ್ತದೆ. ಅಗರಿಯವರು ರಚಿಸಿದ ಪ್ರಸಂಗದ ಪದಗಳನ್ನು, ದೃಶ್ಯಗಳಿಗನುಗುಣವಾಗಿ ಪುಟಗಳಲ್ಲಿ ಬಳಸಲಾಗಿದೆ. ಜಯಲಕ್ಷ್ಮೀ ಕಾರಂತ ಅವರ ನಿರ್ದೇಶನ, ಸುಧಾಕರ ಎರ್ಮಾಳ್, ಮಧುಸೂದನ ಅಲೆವೂರಾಯ ಅವರ ಛಾಯಾಗ್ರಹಣ, ಆ್ಯಂಟನಿ ರಾಜ್ ಅವರ ಪುಟ ವಿನ್ಯಾಸದಲ್ಲಿ ಕೃತಿಯು ಉತ್ತಮವಾಗಿ ಮೂಡಿಬಂದಿದೆ.

ಮಾಹಿತಿ ಕಲೆ ಹಾಕುವಲ್ಲಿ, ಚಿತ್ರಗಳನ್ನು ಸೆರೆಹಿಡಿಯುವಲ್ಲಿ ಪರಿಶ್ರಮ ಎದ್ದು ಕಾಣುತ್ತದೆ. ಚಿತ್ರಗಳೇ ಮೇಳೈಸಿರುವ ಈ ಕೃತಿ ಚಿಕ್ಕದಾದ ಮತ್ತು ಚೊಕ್ಕದಾದ ನಿರೂಪಣೆಯೊಂದಿಗೆ ಯಕ್ಷಗಾನ ಮತ್ತು ದೇವಿಮಹಾತ್ಮೆ ಆಖ್ಯಾನವನ್ನು ಕಾಫಿ ಹೀರುತ್ತಲೇ ಓದಿ, ನೋಡಿ ಆನಂದಿಸುವಂತೆ ಕಟ್ಟಿ ಕೊಟ್ಟಿದ್ದಾರೆ. ಕಣ್ಮನ ಸೆಳೆಯುವ ಕೃತಿಯಲ್ಲಿ, ಕೆಲವೆಡೆ ಅಕ್ಷರ ದೋಷಗಳನ್ನು ಬಿಟ್ಟರೆ, ಯಕ್ಷಗಾನಕ್ಕೆ ಸಂಬಂಧಿಸಿದಂತೆ ಇದೊಂದು ಅಧ್ಯಯನಕ್ಕೆ ಪೂರಕ ಕೃತಿಯಾಗಿಯೂ, ಸಾರ್ವಕಾಲಿಕವಾದ ಸಂದೇಶ ನೀಡಬಲ್ಲ ಕೃತಿಯಾಗಿಯೂ ನಿಲ್ಲಬಹುದು.

-ಅವಿನಾಶ್ ಬೈಪಾಡಿತ್ತಾಯ

LEAVE A REPLY

Please enter your comment!
Please enter your name here