ಇದು ಬರೇ ಭಾವಗಾನಯಲ್ಲ, ಯಕ್ಷ-ಭಾವಗಾನ!

ಯಕ್ಷಗಾನವು ಸಾಹಿತ್ಯದ ಮುಖ್ಯವಾಹಿನಿಯಲ್ಲಿ ಉಪೇಕ್ಷೆಗೊಳಪಟ್ಟಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಎಲ್ಲ ಕಲಾಪ್ರಕಾರಗಳನ್ನೂ ತನ್ನೊಳಗೆ ಆವಾಹಿಸಿಕೊಳ್ಳಬಹುದಾದ ಸ್ಥಿತಿಸ್ಥಾಪಕತ್ವ ಗುಣವಿರುವ ಯಕ್ಷಗಾನವು ಎಲ್ಲ ರೀತಿಯ ಪದ್ಯಸಾಹಿತ್ಯವನ್ನೂ ತನ್ನೊಳಗೆ ಬೆಸೆದುಕೊಳ್ಳುವಷ್ಟು ಸಶಕ್ತವಾಗಿದೆ. ಹಾಡುಗಳಲ್ಲಿ ಸಿನಿಮಾ, ಜಾನಪದ ಶೈಲಿಗಳ ಅನುಕರಣೆಯಿಂದ ಯಕ್ಷಗಾನಕ್ಕೆ ಚ್ಯುತಿ ಬಂದಿದೆ ಎಂಬ ಕೂಗಿನ ನಡುವೆಯೇ, ಇಲ್ಲೊಂದು ವಿಶಿಷ್ಟ ಪ್ರಯೋಗ ಗಮನ ಸೆಳೆದಿದೆ. ಯಕ್ಷಗಾನೇತರ ಸಾಹಿತ್ಯವನ್ನು ಯಕ್ಷಗಾನೀಯವಾಗಿಸುವ ಈ ಪ್ರಯತ್ನದಲ್ಲಿ ಯಕ್ಷಗಾನದ ವ್ಯಾಪ್ತಿಯೂ ವಿಸ್ತಾರವಾದಂತೆ, ಹೊಸ ಪ್ರೇಕ್ಷಕ ವರ್ಗವನ್ನೂ ಸೃಷ್ಟಿಸಿದಂತೆ. ಈ ಅನೂಹ್ಯ ಪ್ರಯೋಗವೊಂದು ಪ್ರಜಾವಾಣಿಯ ಫೇಸ್‌ಬುಕ್/ಯೂಟ್ಯೂಬ್ ಚಾನೆಲ್‌ಗಳಲ್ಲಿ ಸೆ.26ರಂದು ಬಿತ್ತರವಾಗಿ ಜನಮಾನಸವನ್ನು ಗೆದ್ದಿದೆ.

ಇಲ್ಲಿ ಬರೇ ಚೆಂಡೆ-ಮದ್ದಳೆಗಳ ಬಳಕೆಯ ಮೂಲಕ ಯಕ್ಷಗಾನಕ್ಕೆ ಹೊರಗಿನದಾದ ಈ ಗಾಯನ ಪ್ರಸ್ತುತಗೊಂಡಿಲ್ಲ. ಪ್ರಸಿದ್ಧ ಕನ್ನಡ ಕವಿಗಳ ಭಾವಗೀತೆಗಳೇ ಯಕ್ಷಗಾನೀಯವಾಗಿ ಮೂಡಿಬಂದಿವೆ. ಹೀಗಾಗಿ ಯಕ್ಷಗಾನಕ್ಕಿಲ್ಲಿ ಚ್ಯುತಿಯಾಗಿಲ್ಲ, ಬದಲಾಗಿ ಯಕ್ಷಗಾನಕ್ಕೆ ಹೊಸ ಪ್ರೇಕ್ಷಕರು ಸಿಗುವಲ್ಲಿ ಇದು ಪ್ರಧಾನ ಪಾತ್ರ ವಹಿಸಿದೆ.

ಯಕ್ಷಗಾನ ಸಾಹಿತ್ಯವು ಕನ್ನಡದ ಪ್ರಧಾನ ಸಾಹಿತ್ಯ ಲೋಕಕ್ಕೆ ಕೊಟ್ಟ ಕೊಡುಗೆ ಅನನ್ಯ. ಇಲ್ಲಿ ಕಂದ ಪದ್ಯವಿದೆ, ವೃತ್ತಗಳಿವೆ, ಭಾಮಿನಿ ಇದೆ, ತಾಳಬದ್ಧ ರಾಗಗಳಿಗೆ ಒಗ್ಗುವ ಮಟ್ಟುಗಳಿವೆ. ತ್ರಿಪದಿ, ಚೌಪದಿ, ಷಟ್ಪದಿಗಳನ್ನೂ ಹಾಡಲಾಗುತ್ತಿದೆ. ಮತ್ತು ಇದು ಕರಾವಳಿಗೆ ಮಾತ್ರ ಸೀಮಿತವಾಗಿಲ್ಲ. ಅಚ್ಚಗನ್ನಡದ ಕಲೆಯಾಗಿ, ಜಗದಗಲ ವ್ಯಾಪಿಸುತ್ತಿರುವುದೂ ಸತ್ಯ.

ಈ ವಿನೂತನ, ವಿಶಿಷ್ಟ ಪ್ರಯೋಗದಲ್ಲಿ, ಸಾಹಿತ್ಯದ ಮುನ್ನೋಟ ವಿವರಿಸಿರುವ ಯಕ್ಷಗಾನ ವಿದ್ವಾಂಸ, ಸಂಶೋಧಕ ಜಿ.ಎಲ್.ಹೆಗಡೆಯವರ ಮಾತು ಇಲ್ಲಿ ಉಲ್ಲೇಖಾರ್ಹ. ಕನ್ನಡ ಸಾಹಿತ್ಯಕ್ಕೂ, ಯಕ್ಷಗಾನಕ್ಕೂ ಅವಿನಾಭಾವ ಸಂಬಂಧ. ಒಂದರಿಂದಾಗಿ ಮತ್ತೊಂದರ ಮೇಲ್ಮೆ. ಯಕ್ಷಗಾನ ಇರುವವರೆಗೂ ಕನ್ನಡಕ್ಕೆ ಶ್ರೀರಕ್ಷೆ. ಯಾಕೆಂದರೆ, ಯಕ್ಷಗಾನದಲ್ಲಿ ಒಂದೇ ಒಂದು ಇಂಗ್ಲಿಷ್ ಪದ ಬಳಕೆಯಾಗಬಾರದೆಂಬ ಅಲಿಖಿತ ನಿಯಮವನ್ನು ಎಲ್ಲ ಕಲಾವಿದರೂ ಪಾಲಿಸುತ್ತಾರೆ ಎಂಬುದು ಅವರ ಮನದ ಮಾತು. ಕಲೆಯೊಂದು ಕನ್ನಡದ ರಕ್ಷಣೆಯನ್ನು ಸದ್ದಿಲ್ಲದೇ ಮಾಡುತ್ತಿರುವುದು ಹೀಗೆ.

ಇಲ್ಲಿ ನೋಡಬಹುದು:

ಯಕ್ಷಗಾನದ ಪಾರಂಪರಿಕತೆಗೆ ಧಕ್ಕೆಯಾಗುತ್ತಿದೆ ಎಂಬ ವಾದಕ್ಕೆ ಅಪವಾದ ಇಲ್ಲಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿದ ಪ್ರಸಿದ್ಧ ಕವಿಗಳ ಕವನಗಳನ್ನು ಯಕ್ಷಗಾನಕ್ಕೆ ಅಳವಡಿಸುವ ಮೂಲಕ ಕಲೆಯು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಜನರು ಗುನುಗುನಿಸುವ ಈ ಗೀತೆಗಳು ಯಕ್ಷಗಾನದ್ದೇ ರಾಗ-ತಾಳ-ಮಟ್ಟುಗಳಲ್ಲಿವೆ. ಅಂದರೆ ಯಕ್ಷಗಾನವಿಲ್ಲಿ ಜಾನಪದ, ಭಾವಗೀತೆಗಳನ್ನು ಅನುಸರಿಸಿಲ್ಲ. ಯಕ್ಷಗಾನವು ಯಕ್ಷಗಾನವಾಗಿಯೇ ಉಳಿದುಕೊಂಡು, ಭಾವಗೀತೆಯನ್ನು ತನ್ನೊಳಗಾನಿಸಿಕೊಂಡಿದೆ. ಕೇಳಲು ಹಿತಕರ, ಮನಸ್ಸಿಗೆ ಮುದ.

ಸಿನಿಮಾ, ಶಾಸ್ತ್ರೀಯ ಸಂಗೀತ, ಭಕ್ತಿಗೀತೆ ಅಥವಾ ಜಾನಪದ ಹಾಡುಗಳನ್ನು ಯಕ್ಷಗಾನಕ್ಕೆ ಅದೇ ಧಾಟಿಯಲ್ಲಿ ಅಳವಡಿಸುವ ಪ್ರಯತ್ನಗಳು ನಡೆದಿವೆ, ನಡೆಯುತ್ತಲೇ ಇವೆ. ಆದರೆ ಇಲ್ಲಿ ಹಾಗಲ್ಲ, ಭಾವಗೀತೆಗಳನ್ನು ಯಕ್ಷಗಾನದ ಶೈಲಿಯಲ್ಲೇ, ಅದರ ಮಟ್ಟುವಿನಲ್ಲೇ ಹಾಡಿ, ಎಲ್ಲೂ ಯಕ್ಷಗಾನಕ್ಕೆ ಅಪಚಾರವಾಗದಂತೆ ಕಲೆಯ ವಿಸ್ತಾರವನ್ನು ನಮ್ಮ ಮುಂದಿಟ್ಟಿದ್ದಾರೆ ಬಡಗು ತಿಟ್ಟಿನ ಜನಪ್ರಿಯ ಭಾಗವತರಾದ ಕೇಶವ ಹೆಗಡೆ ಕೊಳಗಿ. ಶಂಕರ ಭಾಗವತ್, ಯಲ್ಲಾಪುರ ಅವರ ಸುಮಧುರ ಮದ್ದಳೆಯ ನಿನಾದ, ವಿಘ್ನೇಶ್ವರ ಗೌಡ, ಕೆಸರಕೊಪ್ಪ ಚೆಂಡೆಯ ಯಥೋಚಿತವಾದ ಸಹಯೋಗವು ಈ ವಿಶಿಷ್ಟ ಪ್ರಯೋಗದ ಮೇಲ್ಮೆಯನ್ನು ಹೆಚ್ಚಿಸಿದೆ.

ಈ ಯಕ್ಷಭಾವ ಗಾನಕ್ಕೆ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿದ್ದ ದಿ.ಎಂ.ಎ.ಹೆಗಡೆ ದಂಟ್ಕಲ್ ಅವರು ಹಾಡುಗಳನ್ನು ಸಂಯೋಜಿಸಿದ್ದು, ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಅವರ ಪರಿಕಲ್ಪನೆ ಹಾಗೂ ನಿರ್ದೇಶನದಲ್ಲಿ ಇಂಥದ್ದೊಂದು ಅಮೂಲ್ಯ ಸಂಯೋಜನೆ ಮೂಡಿಬಂದಿದೆ. ಕೆಲವು ಹಾಡುಗಳಿಗೆ ವಿನಾಯಕ ಹೆಗಡೆ ಕಲಗದ್ದೆ ಹಾಗೂ ಕು.ತುಳಸಿ ಹೆಗಡೆ, ಶಿರಸಿ ಇವರ ನೃತ್ಯಾಭಿನಯವೂ ಪೂರಕವಾಗಿದ್ದು, ಈ ಭಾವಾಭಿವ್ಯಕ್ತಿಯ ಸೊಗಸು ಇಮ್ಮಡಿಯಾಗಿಸಿದೆ. ಈ ಉಭಯ ಕಲಾವಿದರು ಹಾಡನ್ನು ಕಲಿತು, ಅನುಭವಿಸಿ ಅಭಿನಯಿಸಿ, ಯಕ್ಷಗಾನೀಯತೆಗೆ ಮೆರುಗು ತಂದಿದ್ದಾರೆ.

ಯಕ್ಷಗಾನದಲ್ಲಿ ಬಳಕೆಯಾಗುವ ಸ್ತುತಿಪದ್ಯದಿಂದಲೇ ಆರಂಭವಾಗಿ, ಕನ್ನಡದ ಪ್ರಸಿದ್ಧ ಕವಿಗಳ ಭಾವಗೀತೆಗೆಳೆಲ್ಲವೂ ಇಲ್ಲಿ ಯಕ್ಷಗಾನೀಯವಾಗಿ ಮೇಳೈಸಿವೆ. ‘ವಾರಣ ವದನ, ತ್ರೈಲೋಕ್ಯ ಸುಮೋಹನ’ ಸ್ತುತಿ ಪದ್ಯವು ಯಕ್ಷಗಾನದ್ದೇ ಹಾಡು ಎಂಬಂತಾಗಿದೆಯಲ್ಲ? ಆದರೆ ಇದನ್ನು ಬರೆದವರು ಯಕ್ಷಗಾನದವರಲ್ಲ. ಒಂದು ಮಾಹಿತಿಯ ಪ್ರಕಾರ ಇದನ್ನು ಬರೆದವರು ಮೈಸೂರಿನವರಾದ ತುಪಾಕಿ ವೆಂಕಟರಮಣ. ಮತ್ತೊಂದು ಮಾಹಿತಿಯ ಅನುಸಾರ, ಇದನ್ನು ರಚಿಸಿದವರು ಹರಿದಾಸರಾದ ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ. ಗೀತೆ ರಚನೆ ಯಾರದ್ದೇ ಆದರೂ, ಇದು ಭಕ್ತಿಗೀತೆ ಅಥವಾ ಕೀರ್ತನೆ. ಇದನ್ನು ಯಕ್ಷಗಾನಕ್ಕೆ ತುಂಬ ಸುಂದರವಾಗಿ ಅಳವಡಿಸಿಕೊಂಡ ಪರಿಣಾಮ, ಅದೀಗ ಯಕ್ಷಗಾನದ್ದೇ ಹಾಡು ಎಂಬಷ್ಟು ಆಪ್ತವಾಗಿದೆ. ಇದರ ವಿಭಿನ್ನ ಚರಣಗಳು ಯಕ್ಷಗಾನದಲ್ಲಿ ಎಲ್ಲೆಡೆ ಬೇರೆ ಬೇರೆ ಸಂದರ್ಭಗಳಲ್ಲಿ ಬಳಕೆಯಾಗುತ್ತಿವೆ. ಇದೇ ಮಾದರಿಯಲ್ಲಿ ಭಾವಗೀತೆಗಳು ಯಕ್ಷಗಾನೀಯತೆಯ ರೂಪು ಪಡೆದುಕೊಂಡು ಇಲ್ಲಿ ರಂಜಿಸಿವೆ.

ಈ ಪ್ರೀಮಿಯರ್ ಶೋದಲ್ಲಿ ಕಂಡುಬಂದಂತೆ, ನವೋದಯದ ಕವಿ ಕೆ.ಎಸ್.ನರಸಿಂಹ ಸ್ವಾಮಿ ಅವರ ಜನಪ್ರಿಯ ‘ಪಡುವಣ ಕಡಲಿನ ನೀಲಿಯ ಬಣ್ಣ’ ಹಾಡು ಯಕ್ಷಗಾನೀಯವಾಗಿ ಆನಂದದಾಯಕವಾಗಿದೆ. ವರಕವಿ ಬೇಂದ್ರೆಯವರ ‘ಪಾತರಗಿತ್ತಿ ಪಕ್ಕ’ ಹಾಡು ಶಶಿಪ್ರಭಾ ಪರಿಣಯದ ‘ಬೇಡಮ್ಮ ನಾರಿ, ಈ ಕಾಡು ನೌಕರಿ’ ಎಂಬ ಹಾಡಿನ ಮಟ್ಟಿನಲ್ಲಿ ಅರಳಿದೆ. ಅದೇ ರೀತಿ, ರಾಷ್ಟ್ರಕವಿ ಎಂ.ಗೋವಿಂದ ಪೈಗಳ ಬಹುವಿಖ್ಯಾತ ‘ತಾಯೆ ಬಾರಾ ಮೊಗವ ತೋರಾ ಕನ್ನಡಿಗರ ಮಾತೆಯೇ’ ಎಂಬ ಹಾಡು ‘ಬಾರನಮ್ಮ ಯಾಕೆ ಮನೆಗೆ’ ಧಾಟಿಯಲ್ಲಿ ರೂಪಕ ತಾಳದಲ್ಲಿ ಸುಮಧುರವಾಗಿ ಮೂಡಿಬಂದಿದೆ.

ಇನ್ನು, ಕರಾವಳಿಯವರೇ ಆದ ಗೋಪಾಲಕೃಷ್ಣ ಅಡಿಗರು, ಮೂಲತಃ ಯಕ್ಷಗಾನ ಬಲ್ಲವರೇ. ಅವರೇ ರಚಿಸಿದ ‘ಒಡೆದು ಬಿದ್ದ ಕೊಳಲು ನಾನು ನಾದ ಬರದು ನನ್ನಲಿ’ ಭಾವಗೀತೆಯು ಯಕ್ಷಗಾನದ ಶೈಲಿಯಲ್ಲಿ ಕೇಳಿಯೇ ಆನಂದಿಸಬೇಕು. ಅದೇ ರೀತಿ, ಡಾ.ಸಿದ್ಧಲಿಂಗಯ್ಯ ಅವರ ‘ಸಾವಿರಾರು ನದಿಗಳು’ ಕವನ ಸಂಕಲನದ ಬಹು ಪ್ರಖ್ಯಾತ ‘ಯಾರಿಗೆ ಬಂತು, ಎಲ್ಲಿಗೆ ಬಂತು ಸ್ವಾತಂತ್ರ್ಯ’ ಎಂಬ ಜನಪ್ರಿಯ ಗೀತೆಯು ಯಕ್ಷಗಾನದಲ್ಲಿ ಮೈನವಿರೇಳಿಸುವ ಏರುಪದವಾಗಿ ಇಲ್ಲಿ ಹೊಸದೊಂದು ಶಿಖರಕ್ಕೆ ನಮ್ಮನ್ನು ಒಯ್ಯುತ್ತದೆ.

ಕವಿ ಡಿವಿಜಿ ಅವರ ಮಂಕುತಿಮ್ಮನ ಕಗ್ಗದ ಪ್ರಸಿದ್ಧ ಗೀತೆ ‘ಬದುಕು ಜಟಕಾ ಬಂಡಿ, ವಿಧಿಯದರ ಸಾಹೇಬ’ ಈ ಹಾಡು ನಿಧಾನ ಝಂಪೆಯಿಂದ ತ್ವರಿತಕ್ಕೆ ಸಾಗುವಾಗ ಅದು ನೀಡುವ ಆನಂದವೇ ಬೇರೆ. ‘ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು…’ ಭಾಮಿನಿ ರೂಪದಲ್ಲಿ (ತಾಳವಿಲ್ಲದ) ಮೂಡಿಬಂದ ಹಾಡು ಯಕ್ಷಗಾನದ್ದಲ್ಲವೆಂದು ಹೇಳುವಂತೆಯೇ ಇಲ್ಲ – ಅಷ್ಟು ಖಚಿತವಾಗಿ ಮೂಡಿಬಂದಿದೆ.

ಇನ್ನು ಇವುಗಳಲ್ಲೆಲ್ಲ ಹೈಲೈಟ್ ಎಂದರೆ, ಕೊಡಗಿನ ಹುತ್ತರಿ ಹಾಡು. ಯಕ್ಷಗಾನದ ಒಡ್ಡೋಲಗದ ಧಾಟಿಯಲ್ಲಿ ಮಧ್ಯಮಾವತಿ ತ್ರಿವುಡೆಯಲ್ಲಿ ‘ವೀರ ದಶರಥ ನೃಪತಿ ಇನಕುಲ ವಾರಿಧಿಗೆ ಪ್ರತಿ ಚಂದ್ರನು’ ಈ ಶೈಲಿಯಲ್ಲಿ ‘ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳು…’ ನೋಡಲೇಬೇಕಾದ, ಕೇಳಲೇಬೇಕಾದ ಹಾಡು. ಕಲಗದ್ದೆಯವರ ಭಾವಭರಿತ ಅಭಿನಯ ನೋಡುವಾಗ, ಕೆರೆಮನೆ ಶಂಭು ಹೆಗಡೆಯವರ ನೆನಪಾಗುತ್ತದೆ. ಈ ಹಾಡು 15 ನಿಮಿಷ. ಅಂದರೆ ಗೀತೆಯೇ ಸಾಕಷ್ಟು ಚರಣಗಳನ್ನು ಹೊಂದಿರುವುದರಿಂದ, ಇಲ್ಲೆಲ್ಲೂ ಪುನರುಕ್ತಿ ಇಲ್ಲ, ವ್ಯರ್ಥ ಆಲಾಪನೆಗಳಿಲ್ಲ, ಅನಗತ್ಯ ಚಾಲು ಕುಣಿತಗಳು, ಪದ ವಿಸ್ತಾರವೂ ಇಲ್ಲ. ಯಕ್ಷಗಾನೀಯವಾಗಿ ಮೂಡಿಬಂದ ಈ ಹಾಡು ಸುಶ್ರಾವ್ಯವೂ ಸು-ದೃಶ್ಯವೂ ಆಗಿದೆ.

ಜನಜನಿತವಾದ ಭಾವ ಗೀತೆಗಳನ್ನು ಯಕ್ಷಗಾನೀಯವಾಗಿಯೇ ಹಾಡಿ, ಯಕ್ಷಗಾನದ ಪರಿಧಿಯನ್ನು ವಿಸ್ತರಿಸುವ ಈ ಹೊಸ ಪ್ರಯೋಗವು ಹೊಸ ಸಾಧ್ಯತೆಗೆ ನಾಂದಿ ಹಾಡಿದೆ.

ಕನ್ನಡದ ಪ್ರಸಿದ್ಧ ಕವಿಗಳ ಕಾವ್ಯಕ್ಕೆ ಯಕ್ಷ’ಗಾನ’ದ ಸ್ಪರ್ಶ ನೀಡಿದ ತಂಡ
ಹಾಡುಗಳ ಸಂಯೋಜನೆ:
ದಿ.ಎಂ.ಎ.ಹೆಗಡೆ ದಂಟ್ಕಲ್ (ಹಿಂದಿನ ಯಕ್ಷಗಾನ ಅಕಾಡೆಮಿ ಅಧ್ಯಕ್ಷರು)
ಪರಿಕಲ್ಪನೆ, ನಿರ್ದೇಶನ: ರವೀಂದ್ರ ಭಟ್, ಕಾರ್ಯನಿರ್ವಾಹಕ ಸಂಪಾದಕರು, ಪ್ರಜಾವಾಣಿ
ಸಾಹಿತ್ಯ ಮುನ್ನೋಟ: ಡಾ.ಜಿ.ಎಲ್.ಹೆಗಡೆ, ಕುಮಟಾ, ಯಕ್ಷಗಾನ ಸಂಶೋಧಕರು, ವಿದ್ವಾಂಸರು
ಗಾನ ನಿರ್ದೇಶನ: ಕೇಶವ ಹೆಗಡೆ ಕೊಳಗಿ, ಪ್ರಸಿದ್ಧ ಭಾಗವತರು
ನೃತ್ಯ ನಿರ್ದೇಶನ: ವಿನಾಯಕ ಹೆಗಡೆ ಕಲಗದ್ದೆ, ಯಕ್ಷಗಾನ ಕಲಾವಿದರು
ಭಾಗವತಿಕೆ: ಕೇಶವ ಹೆಗಡೆ, ಕೊಳಗಿ
ಮದ್ದಳೆ: ಶಂಕರ ಭಾಗವತ್, ಯಲ್ಲಾಪುರ
ಚೆಂಡೆ: ವಿಘ್ನೇಶ್ವರ ಗೌಡ, ಕೆಸರಕೊಪ್ಪ
ನೃತ್ಯಾಭಿನಯ: ವಿನಾಯಕ ಹೆಗಡೆ ಕಲಗದ್ದೆ ಹಾಗೂ ಕು.ತುಳಸಿ ಹೆಗಡೆ, ಶಿರಸಿ
ಪರಿಕರ: ವೆಂಕಟೇಶ ಹೆಗಡೆ, ಬೊಗ್ರಿಮಕ್ಕಿ
ವಿಡಿಯೊ: ಸ್ವಸ್ತಿಕ್ ಮೀಡಿಯಾ, ಶಿರಸಿ
ಉದಯ್ ಸೌಂಡ್ಸ್, ಶಿರಸಿ
ವಿಶ್ವಶಾಂತಿ ಸೇವಾ ಟ್ರಸ್ಟ್, ಕಲಗದ್ದೆ ನಾಟ್ಯ ವಿನಾಯಕ ದೇವಸ್ಥಾನ
ಶ್ರೀ ಅನಂತ ಯಕ್ಷ ಕಲಾ ಪ್ರತಿಷ್ಠಾನ, ಸಿದ್ದಾಪುರ (ಉ.ಕ.)

My article published in Prajavani on 27 Sept 2021

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

iPhone 16e: Best Features and Specs: ಹೊಸ ಐಫೋನ್ 16ಇ ಬಿಡುಗಡೆ

iPhone 16e joins the iPhone 16 lineup, featuring the fast performance of the A18 chip,…

4 days ago

ಚಳಿಯಲ್ಲಿ ಬಣ್ಣ ಬದಲಾಯಿಸುವ Realme 14 Pro ಸರಣಿ ಫೋನ್ ಬಿಡುಗಡೆ

ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…

1 month ago

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

3 months ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

5 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

5 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

6 months ago