ಅಂಥದ್ದೊಂದು ಸುಂದರವಾದ ಪರಿಸರದಲ್ಲೇ ಹುಟ್ಟಿ ಬೆಳೆದವರು ಶ್ರೀಮತಿ ಲೀಲಾ ಬೈಪಾಡಿತ್ತಾಯರು. ತುಳುನಾಡು ಎಂದೇ ಕರೆಯಲಾಗುವ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳು, ಯಕ್ಷಗಾನದ ಬಡಗು ತಿಟ್ಟಿನ ವೈವಿಧ್ಯದ ಸೊಗಡುಳ್ಳ ಉತ್ತರ ಕನ್ನಡ ಜಿಲ್ಲೆ ಹಾಗೂ ಯಕ್ಷಗಾನ ತೆಂಕು ತಿಟ್ಟಿನ ತವರೂರು ಎಂದೇ ಬಣ್ಣಿಸಲಾಗುವ ಕಾಸರಗೋಡು ಜಿಲ್ಲೆಗಳಾದ್ಯಂತ ಸರಿ ಸುಮಾರು ನಾಲ್ಕು ದಶಕಗಳ ಕಾಲ ಮನೆಮಾತಾದವರು. ಈಗ ಅವರ ಕಲಾ ತಪಸ್ಸನ್ನು ರಾಜ್ಯ ಸರಕಾರ ಗುರುತಿಸಿದೆ. ಕರ್ನಾಟಕದ ಯಕ್ಷಗಾನ ಅಕಾಡೆಮಿಯ 2010ನೇ ಸಾಲಿನ ಪ್ರಶಸ್ತಿಯು ಅವರನ್ನು ಅರಸಿಕೊಂಡು ಬಂದಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಮಂದಾರ್ತಿ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಮೇ 1, 2011ರಂದು ನಡೆಯಲಿದೆ.
ಗಂಡು ಮೆಟ್ಟಿನ ಕಲೆಯಲ್ಲಿ ಮೆರೆದಾಕೆ…
ಕರಾವಳಿಯ ರಮ್ಯಾದ್ಭುತ ಕಲಾ ಪ್ರಕಾರವಾಗಿರುವ ಯಕ್ಷಗಾನದಲ್ಲೆ ಕಸುಬು ಮಾಡಬೇಕಿದ್ದರೆ ಧಮ್ ಬೇಕು ಎಂಬ ಮಾತಿದೆ. ಯಾಕೆಂದರೆ ಹೇಳಿ ಕೇಳಿ ಇದು ಗಂಡು ಮೆಟ್ಟಿನ ಕಲೆ. ಅಂಥದ್ದೊಂದು ವಾತಾವರಣದಲ್ಲಿ ಮೊತ್ತ ಮೊದಲ ಬಾರಿಗೆ ಕಂಚಿನ ಕಂಠ ಮೊಳಗಿಸಿದವರು ಲೀಲಾ ಬೈಪಾಡಿತ್ತಾಯರು.
ಕಾಸರಗೋಡಿನ ಮಧೂರು ಅವರ ಹುಟ್ಟೂರು. ಅಲ್ಲಿನ ಸುತ್ತಮುತ್ತಲಿನ ಪರಿಸರದಲ್ಲಿ ಇಂದಿಗೂ ಕೂಡ ಚೆಂಡೆ ಮದ್ದಳೆಗಳ ನಿನಾದ ಕೇಳಿ ಬರುತ್ತಿರುತ್ತದೆ. ಅಂಥದ್ದೊಂದು ಪರಿಸರದಲ್ಲೇ ಹುಟ್ಟಿ ಬೆಳೆದ ಲೀಲಾ ಅವರಿಗೆ, ಅದೇನು ಮನಸ್ಸು ಬಂತೋ… ಮಧೂರಿನ ಸರಳಾಯರ ಮನೆತನದಲ್ಲಿ ಸಂಗೀತಾಭ್ಯಾಸ ಪ್ರಾರಂಭಿಸಿದ್ದರು. ಬಡತನದ ಬೇಗೆಯ ನಡುವೆಯೇ ಸಂಗೀತಾಭ್ಯಾಸ ಮಾಡಿದ್ದು, ಇವರ ಜೀವನಕ್ಕೆ ಮುಂದೊಂದು ದಿನ ದಾರಿ ದೀಪವಾಗುತ್ತದೆ ಎಂದು ಯಾರೂ ಊಹಿಸಿರಲಿಕ್ಕಿಲ್ಲ. ಶಾಲೆಗೆ ಹೋಗದೆಯೇ, ಅಣ್ಣನಿಂದಲೋ, ಅಕ್ಕ ಪಕ್ಕದವರಿಂದಲೋ ಅಕ್ಷರಾಭ್ಯಾಸ ಮಾಡಿಸಿಕೊಂಡವರು ಅವರು ಎಂಬುದು ಇಲ್ಲಿ ಉಲ್ಲೇಖಿಸಲೇಬೇಕಾದ ಅಂಶ. ಅದರ ನಡುವೆಯೇ, ಮದ್ರಾಸ್ ಹಿಂದಿ ಪ್ರಚಾರ ಸಭಾದಿಂದ ಹಿಂದಿ ವಿಶಾರದ (ಸ್ನಾತಕ ಪದವಿಗೆ ಸಮ) ಪದವಿಯನ್ನೂ ಪಡೆದಿದ್ದರು ಎಂಬುದು ಅವರೊಳಗಿನ ಕಲಿಕೆಯ ತುಡಿತಕ್ಕೆ ಸಾಕ್ಷಿ. ಇದೆಲ್ಲವೂ ಶಾಲೆಗೆ ಹೋಗದೆ ಸಾಧಿಸಿದ್ದು.
ಬಹುಶಃ ಶಾರದೆ ಇದ್ದಲ್ಲಿ ಲಕ್ಷ್ಮಿ ಇರಲು ಹಿಂದೇಟು ಹಾಕುತ್ತಾಳೆ ಎಂಬುದು ಇದಕ್ಕೇ ಇರಬೇಕೇನೋ… ಕಿತ್ತು ತಿನ್ನುವ ಬಡತನ. ತಂದೆಯವರ ನಿಧನಾನಂತರ ಅವರು ಬೆಳೆದಿದ್ದು ಮಧೂರಿನ ಪಡುಕಕ್ಕೆಪ್ಪಾಡಿ ಎಂಬಲ್ಲಿನ ತಮ್ಮ ಸೋದರ ಮಾವನ ಮನೆಯಲ್ಲಿ. ಮಾವ ರಾಮಕೃಷ್ಣ ಭಟ್ ಅವರು ಮಧೂರು ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ದೇವ ನೃತ್ತ (ಉತ್ಸವ ಸಂದರ್ಭ ಉತ್ಸವ ಮೂರ್ತಿಯನ್ನು ಹೊತ್ತು ನರ್ತಿಸುವ ವಿಶಿಷ್ಟ ನೃತ್ಯ ಪ್ರಕಾರ)ದಲ್ಲಿ ಸುಪ್ರಸಿದ್ಧರು. ಇದೇ ಕಲೆಯಲ್ಲಿ ಅವರಿಗೆ ಕೂಡ ಕೇರಳ ರಾಜ್ಯ ಪ್ರಶಸ್ತಿಯೂ ಬಂದಿತ್ತೆಂಬುದು ಇಲ್ಲಿ ಉಲ್ಲೇಖಾರ್ಹ.
ಸಂಗೀತದಿಂದ ಯಕ್ಷಗಾನಕ್ಕೆ…
ಹೀಗೆ, ಕಲಾ ಪರಿಸರದಲ್ಲೇ ಬೆಳೆದಿದ್ದರಾದರೂ, ಯಕ್ಷಗಾನದಿಂದ ದೂರವೇ ಇದ್ದಿದ್ದ ಲೀಲಾ ಅವರಿಗೆ, ಅದು ಹೇಗೆ ಯಕ್ಷಗಾನದ ನಂಟು ಹತ್ತಿಕೊಂಡಿತೆಂದರೆ, ಮದುವೆಯಾಗುವ ಮೂಲಕ! ಈಗ ತೆಂಕುತಿಟ್ಟಿನ ಅಗ್ರಮಾನ್ಯ ಗುರುಗಳು ಎಂದೇ ಪರಿಗಣಿಸಲ್ಪಟ್ಟಿರುವ ಹರಿನಾರಾಯಣ ಬೈಪಾಡಿತ್ತಾಯರು, ಜೀವನ ರಥ ಸಾಗಿಸಲು ತಮ್ಮ ಪಥದಲ್ಲೇ ಕರೆದೊಯ್ದರು. ಅವರು ಮದುವೆಯಾಗಿ ಬಂದದ್ದು ಪತಿಯ ಊರಾದ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಕ್ಷೇತ್ರದ ಸಮೀಪದ ಕಡಬ ಎಂಬಲ್ಲಿಗೆ. ಅಲ್ಲಿನ ಹಳ್ಳಿ ಹಳ್ಳಿಗಳಲ್ಲೂ ಮನೆಯಲ್ಲಿ ಏನಾದರೂ ವಿಶೇಷ ಕಾರ್ಯಕ್ರಮವಿದೆ ಎಂದಾದರೆ, ಅಲ್ಲೊಂದು ತಾಳಮದ್ದಳೆ ಕೂಟ ಇದ್ದೇ ಇರುತ್ತಿದ್ದ ಕಾಲವದು. ಹೀಗಾಗಿ ಯಕ್ಷಗಾನದ ಕಾರ್ಯಕ್ರಮಗಳಿಗೇನೂ ಕೊರತೆಯಿರಲಿಲ್ಲ. ಅಲ್ಲಿನ ಪ್ರತಿ ಮನೆಯು ಕೂಡ ಯಕ್ಷಗಾನದ ಹಿಮ್ಮೇಳದ ಸದ್ದು ಮತ್ತು ಮುಮ್ಮೇಳದ ವಿದ್ವತ್‌ನಿಂದಲೇ ಬೆಳಗಿತ್ತು. ಮನೆ-ಮನಗಳು ಯಕ್ಷಗಾನದಿಂದಲೇ ಸಮೃದ್ಧವಾಗಿದ್ದವು. ಈಗಲೂ ಸುತ್ತಮುತ್ತ ತಾಳಮದ್ದಳೆಯ ಸದ್ದು ಆಗಾಗ್ಗೆ ಕೇಳಿಸುತ್ತಿರುತ್ತದೆ.
ಸಂಗೀತದ ರಾಗಗಳ ಪರಿಚಯವೆಲ್ಲವೂ ಚೆನ್ನಾಗಿ ಗೊತ್ತಿದ್ದ ಪತ್ನಿ ಲೀಲಾಗೆ ಯಕ್ಷಗಾನದ ಹಾಡುಗಾರಿಕೆ ಕಲಿಸಿದರೆ ಹೇಗೆ ಎಂಬ ಯೋಚನೆಗೆ ಬಿದ್ದವರೇ, ಹರಿನಾರಾಯಣ ಅವರು ಪತ್ನಿಯ ಕೈಗೆ ಜಾಗಟೆ-ಕೋಲು ಕೊಟ್ಟೇ ಬಿಟ್ಟರು. ಇದು ಸುಮಾರು ಮೂವತ್ತೈದು ವರ್ಷಗಳ ಹಿಂದಿನ ಮಾತು. ಬಳಿಕ ನಡೆದದ್ದೆಲ್ಲವೂ ಈಗ ಇತಿಹಾಸ. ಯಕ್ಷಗಾನ ನೋಡಿದರೆ ಏಳು ರಂಗ ಪೂಜೆ ನೋಡಬೇಕು ಅನ್ನುವ ಸಂಪ್ರದಾಯದ ಕಾಲವಾಗಿತ್ತದು. ಮೂಢ ನಂಬಿಕೆಗಳ ಕಟ್ಟಳೆಯನ್ನೆಲ್ಲಾ ಮೆಟ್ಟಿ ನಿಂತು, ತೆಂಕು ತಿಟ್ಟಿನ ಅಗ್ರಮಾನ್ಯ ಭಾಗವತರಾಗಿ ಮೆರೆದ ಲೀಲಾ ಬೈಪಾಡಿತ್ತಾಯ ಅವರು, ಏಕೈಕ ವೃತ್ತಿಪರ ಮಹಿಳಾ ಭಾಗವತರು ಎಂಬ ಪಟ್ಟ ಅಲಂಕರಿಸಿ ಬಿಟ್ಟರು. ಸುಬ್ರಹ್ಮಣ್ಯ ಮೇಳ, ಪುತ್ತೂರು ಮೇಳ, ಕದ್ರಿ ಮೇಳ, ಕರ್ನಾಟಕ ಮೇಳ, ಅರುವ (ಅಳದಂಗಡಿ) ಮೇಳ, ಬಪ್ಪನಾಡು ಮೇಳ, ಕುಂಬಳೆ, ತಲಕಳ ಮೇಳ ಮುಂತಾಗಿ ಸತತವಾಗಿ ಇಪ್ಪತ್ತು ವರ್ಷಗಳ ಕಾಲ ಡೇರೆ ಮೇಳಗಳಲ್ಲಿಯೂ, ಬಯಲಾಟದ ಮೇಳಗಳಲ್ಲಿಯೂ ಪತಿಯೊಂದಿಗೆ ವೃತ್ತಿಪರರಾಗಿ ಊರಿಂದೂರಿಗೆ ತಿರುಗಾಟ ಮಾಡಿದ ಲೀಲಾ, ಅದೆಷ್ಟೋ ಮಹಾನ್ ಕಲಾವಿದರನ್ನು ಕುಣಿಸಿದ್ದಾರೆ, ಭೇಷ್ ಅನ್ನಿಸಿಕೊಂಡಿದ್ದಾರೆ. ಅವರಿಗೆ ಯಕ್ಷಗಾನ ಬದುಕಿನಲ್ಲಿ ಸಿದ್ಧಿ, ಪ್ರಸಿದ್ಧಿ ದೊರೆತದ್ದು ಎಂಭತ್ತರ ದಶಕದಲ್ಲಿ. ಅರ್ವ ನಾರಾಯಣ ಶೆಟ್ಟರು ಕಟ್ಟಿದ ಅಳದಂಗಡಿ ಮೇಳದಲ್ಲಿ (ಟೆಂಟು ಮೇಳ) ಪ್ರಧಾನ ಭಾಗವತರಾಗಿ ಮೆರೆದರು. ಅಂದಿನ ಅತ್ಯಂತ ಸಮೃದ್ಧ ಸಾಹಿತ್ಯ ಹೊಂದಿದ್ದ ಸಾಮಾಜಿಕ ಕಥಾನಕ ‘ಪರಕೆದ ಪಿಂಗಾರ’ ಹಾಡುಗಳ ನೆನಪಂತೂ ಈಗಲೂ ಕಿವಿಯಲ್ಲಿ ಗುನುಗುತ್ತಿರುತ್ತದೆ.
ಅಗ್ರಮಾನ್ಯರ ಒಡನಾಟ…
ಯಕ್ಷಗಾನ ಲೋಕದಲ್ಲಿ ಬೆಳಗಿ ಕಲೆಯನ್ನೂ ಬೆಳೆಸಿದ ಕೀರ್ತಿವಂತರಾದ ಶೇಣಿ ಗೋಪಾಲಕೃಷ್ಣ ಭಟ್, ಬಣ್ಣದ ಮಾಲಿಂಗ, ಹೊಸಹಿತ್ಲು ಮಹಾಲಿಂಗ ಭಟ್, ಪಡ್ರೆ ಚಂದು, ಪುತ್ತೂರು ನಾರಾಯಣ ಹೆಗ್ಡೆ, ಅಳಿಕೆ ರಾಮಯ್ಯ ರೈ, ಕೆ.ಗೋವಿಂದ ಭಟ್, ಪುತ್ತೂರು ಕೃಷ್ಣ ಭಟ್, ಕೋಳ್ಯೂರು ರಾಮಚಂದ್ರ ರಾವ್, ಎಂಪೆಕಟ್ಟೆ ರಾಮಯ್ಯ ರೈ, ಕುಂಬಳೆ ಸುಂದರ ರಾವ್, ಶಂಕರನಾರಾಯಣ ಸಾಮಗರು, ರಾಮದಾಸ ಸಾಮಗರು, ಎಂ.ಎಲ್.ಸಾಮಗರು, ತೆಕ್ಕಟ್ಟೆ ಆನಂದ ಮಾಸ್ತರ್, ಪ್ರಭಾಕರ ಜೋಷಿ ಮುಂತಾದ ಯಕ್ಷಲೋಕದ ಘಟಾನುಘಟಿ ದಿಗ್ಗಜರನ್ನು ತಾಳಮದ್ದಳೆಯಲ್ಲಿ, ಯಕ್ಷಗಾನ ಪ್ರದರ್ಶನಗಳಲ್ಲಿ ಕುಣಿಸಿದ, ಮಾತನಾಡಿಸಿದ ಅನುಭವ ಪಡೆದುಕೊಂಡ ಲೀಲಾ ಅವರಿಗೆ, ಪ್ರತಿಯೊಂದು ಹೆಜ್ಜೆಯಲ್ಲಿಯೂ ಮಾರ್ಗದರ್ಶನ ಮಾಡಿ ಪ್ರೋತ್ಸಾಹಿಸುತ್ತಲೇ ಬಂದವರು ಪತಿ ಹರಿನಾರಾಯಣರು. ಬಲಿಪ ಭಾಗವತರು, ದಾಮೋದರ ಮಂಡೆಚ್ಚರು, ಕಡತೋಕ ಭಾಗವತರು, ನೆಡ್ಲೆ ನರಸಿಂಹ ಭಟ್, ಬಲ್ಲಾಳರು, ಭೀಮ ಭಟ್, ಅಡೂರು ಮದ್ಲೆಗಾರರು, ಗೋಪಾಲಕೃಷ್ಣ ಕುರುಪರು ಮುಂತಾದ ಅಗ್ರಗಣ್ಯ ಹಿಮ್ಮೇಳ ಕಲಾವಿದರ ಒಡನಾಟ ಕೂಡ ಅವರೊಳಗಿನ ಯಕ್ಷಗಾನ ಕಲೆಯನ್ನು ತಿದ್ದಿ ತೀಡಿತು.
ಏನವರ ಸಾಧನೆ…
ಅಗ್ರಮಾನ್ಯ ಭಾಗವತರಾಗಿ ಬೆಳೆದ ಲೀಲಾ ಅವರನ್ನು ಇಷ್ಟೊಂದು ಹೊಗಳುವುದೇಕೆ? ಅಂತ ಕೆಲವರಿಗೆ ಅನ್ನಿಸಬಹುದು. ಇದಕ್ಕೆ ಕಾರಣಗಳನ್ನು ಪಟ್ಟಿ ಮಾಡುತ್ತಾ ಹೋದರೆ, ಅದು ಅನಂತವಾದೀತು. ಅವುಗಳಲ್ಲಿ ಕೆಲವೊಂದನ್ನು ನೆನಪಿಸಿಕೊಂಡು ಹೇಳಬಹುದಾದರೆ, ಗಂಡಸರೇ ಇರುವ ಯಕ್ಷಗಾನ ಕ್ಷೇತ್ರದಲ್ಲಿ ಕಾಲಿಟ್ಟ ಮೊದಲ ಮಹಿಳೆ, ಗಂಡಸರಿಗೇ ಮೀಸಲಾಗಿದ್ದ ಭಾಗವತಿಕೆಯಲ್ಲಿ ಯಕ್ಷಗಾನಕ್ಕೆ ಹೆಣ್ಣು ಕಂಠವೂ ಹೊಂದುತ್ತದೆ ಎಂದು ಸಾಧಿಸಿ ತೋರಿಸಿದವರು, ರಾತ್ರಿಯಿಡೀ ನಿದ್ದೆಗೆಟ್ಟು ಊರಿಂದೂರಿಗೆ ಮೇಳವು ಹೋದಲ್ಲೆಲ್ಲಾ ತಿರುಗಾಟ ಮಾಡುವ, ಹಗಲಲ್ಲಿ ನಿದ್ರಿಸುವ, ರಾತ್ರಿಯಾದಂತೆ ಎದ್ದು ಕುಳಿತು ಕಲಾ ಪ್ರದರ್ಶನಕ್ಕೆ ಸಿದ್ಧವಾಗುವ ಛಾತಿ ತೋರಿಸಿದ್ದು. ಈ ಸಾಧನೆಗಳ ಪಟ್ಟಿಯಲ್ಲೆಲ್ಲ ಅಗ್ರಸ್ಥಾನಿಯಾಗಿ ಕಾಣುವುದು, ಸಹ-ಭಾಗವತರೇನಾದರೂ ಕೈಕೊಟ್ಟರೆ, ಇಡೀ ರಾತ್ರಿ ನಿದ್ದೆ ಬಿಟ್ಟು ಇಡೀ ಆಟವನ್ನು ಆಡಿಸಿದ ಕೀರ್ತಿಯೂ ಇದೆ. ಎರಡನೆಯದು, ಸಂಗೀತಾಭ್ಯಾಸ ಮಾಡಿದ್ದರೂ, ಯಕ್ಷಗಾನದ ಸೊಗಡಿಗೆ ಧಕ್ಕೆಯಾಗದಂತೆ, ಎಲ್ಲಿಯೂ ಯಕ್ಷಗಾನದ ಹಳಿ ತಪ್ಪದೆ ವೀರರಸಕ್ಕೂ ಸೈ ಅನ್ನಿಸಿ, ಯಕ್ಷಗಾನದ ಸಂಪ್ರದಾಯ ಕೆಡದಂತೆ ನೋಡಿಕೊಂಡದ್ದು. ಅವರ ಭಾಗವತಿಕೆ ಕೇಳಿದವರಿಗೆ ಅರ್ಥಗಾರಿಕೆ ಸುಲಲಿತ. ಯಾಕೆಂದರೆ ಲೋಪವಿಲ್ಲದಂತಹಾ ಸಾಹಿತ್ಯ ಶುದ್ಧಿ, ಭಾಷಾ ಶುದ್ಧಿ. ಕೇವಲ 7ನೇ ತರಗತಿ ಓದಿದ್ದರೂ, ಆಕೆಗೆ ಈ ಸಾಹಿತ್ಯ ಸರಸ್ವತಿಯು ಒಲಿದದ್ದು ವಿಶೇಷ.
ರಂಗಕ್ಕೇರುವ ಮುನ್ನ ಪೂರ್ವ ಸಿದ್ಧತೆ…
ಈಗ ಲೀಲಾ ಅವರಿಗೆ 64ರ ಹರೆಯ. (ಜನ್ಮದಿನಾಂಕ 23 ಮೇ 1947). ತೆಂಕು ತಿಟ್ಟು ಯಕ್ಷಗಾನ ಕಲಾ ಕ್ಷೇತ್ರದಲ್ಲಿ ಧ್ರುವ ನಕ್ಷತ್ರದಂತೆ ಮಿನುಗುತ್ತಿದ್ದ ಅವರ ಪ್ರಭಾವಳಿಯು ಸರಕಾರದ ಹೆಬ್ಬಾಗಿಲಿನವರೆಗೆ ಈಗ ತಲುಪಿದೆ. ಸದ್ಯಕ್ಕೆ ತಮ್ಮಂತೆ ಇತರ ಮಹಿಳೆಯರೂ ಯಕ್ಷಗಾನ ಕ್ಷೇತ್ರದಲ್ಲಿ ಮುಂದೆ ಬರಬೇಕೆಂದು ಪ್ರೋತ್ಸಾಹಿಸುತ್ತಾ, ಆಸಕ್ತಿಯಿಂದ ಬಂದವರಿಗೆ ಯಕ್ಷಗಾನದ ಪಾಠವನ್ನೂ, ಕರ್ನಾಟಕ ಶಾಸ್ತ್ರೀಯ ಸಂಗೀತದ ಪಾಠವನ್ನೂ ಮಾಡುತ್ತಿದ್ದಾರೆ. ಪತಿಯೊಂದಿಗೆ ಧರ್ಮಸ್ಥಳದ ಪ್ರಖ್ಯಾತ ಯಕ್ಷಗಾನ ತರಬೇತಿ ಕೇಂದ್ರದ ಗುರುಗಳಾಗಿಯೂ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪೌರಾಣಿಕ ಪ್ರಸಂಗಗಳಲ್ಲಿ ಅವರ ಜ್ಞಾನ ಅಪಾರ. ಹಿರಿಯರಲ್ಲಿ ಕೇಳಿ ತಿಳಿದುಕೊಂಡು ತಮ್ಮ ಜ್ಞಾನವನ್ನು ವರ್ಧಿಸಿಕೊಂಡರಲ್ಲದೆ, ಕಿರಿಯರಿಗೆ ಮಾರ್ಗದರ್ಶಕರಾದರು. ಯಾವುದೇ ಪ್ರಸಂಗ ಆಡಿಸುವ ಮೊದಲು, ಹಿರಿಯ ಮತ್ತು ಕಿರಿಯ ಕಲಾವಿದರೊಂದಿಗೆ ಚೌಕಿಯಲ್ಲಿ ಮೊದಲೇ ಚರ್ಚಿಸಿ, ಪ್ರದರ್ಶನವೊಂದು ಎಲ್ಲೂ ಲೋಪವಾಗಬಾರದು, ಯಕ್ಷಗಾನದ ಭಾಷೆಯಲ್ಲೇ ಹೇಳುವುದಾದರೆ, ‘ಮೇಲೆ ಬೀಳಬೇಕು’ ಎಂಬ ತುಡಿತದಿಂದ, ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದ ರೀತಿ ಇಂದಿನ ಕಲಾವಿದರಿಗೆ ಸ್ಫೂರ್ತಿಯಾಗಲೇಬೇಕು. ಇದನ್ನು ಇಲ್ಲಿ ಹೇಳಿದ್ದೇಕೆಂದರೆ, ವಿದ್ಯೆಗೆ ವಿನಯವೇ ಭೂಷಣ. ಕಲಿತವರು ವಿನಯಶೀಲರಾಗಿರುತ್ತಾರೆ ಎಂಬುದಕ್ಕೆ ಲೀಲಾ ಉದಾಹರಣೆ. ಸಮರ್ಪಕವಾಗಿ ಕಲಿಯದವರು ತಾವೇ ದೊಡ್ಡವರು, ತಮಗಿಂತ ಮಿಗಿಲಿಲ್ಲ ಎಂಬಂತಹಾ ವರ್ತನೆ ತೋರುತ್ತಾರೆ.
ಕಾಳಿಂಗ ನಾವಡರ ಜತೆಗೆ…
ಇನ್ನೂ ಒಂದು ಉಲ್ಲೇಖಿಸಲೇಬೇಕಾದ ವಿಷಯವೊಂದಿದೆ. ಬಡಗು ತಿಟ್ಟಿನ ಮಹಾನ್ ಕಲಾವಿದರಾಗಿ, ಇಂದಿನ ಯುವ ಭಾಗವತರಿಗೆಲ್ಲರಿಗೂ ಅನುಕರಣಯೋಗ್ಯವಾಗಿ ಅಕಾಲ ಮರಣವನ್ನಪ್ಪಿದ್ದ ದಿವಂಗತ ಕಾಳಿಂಗ ನಾವಡರ ಜತೆಗೂ ಅವರು ಕಾರ್ಯಕ್ರಮ ನೀಡಿದ್ದಾರೆ! ಹೌದು. ನನಗಾಗ ಬಹುಶಃ ಏಳೆಂಟು ವರ್ಷ ಇದ್ದಿರಬೇಕು. ಶೃಂಗೇರಿಯಲ್ಲಿ ನಡೆದ ಆ ಕಾರ್ಯಕ್ರಮದ ನೆನಪು ಬಾರದಿದ್ದರೂ, ನಾವಡರು ಅಂದು ಲೀಲಾರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಇಂದಿಗೂ ಕಣ್ಣಿಗೆ ಕಟ್ಟುತ್ತಿದೆ. ಆ ಹಾಲ್‌ನಲ್ಲಿ ಕಾಳಿಂಗ ನಾವಡರ ಹಾಡಿಗೆ ಎಷ್ಟು ಶಿಳ್ಳೆ, ಚಪ್ಪಾಳೆ ಬಿದ್ದಿತ್ತೋ, ಅಷ್ಟೇ ಬಲವಾದ ಮೆಚ್ಚುಗೆ ಲೀಲಾ ಹಾಡಿಗೂ ಬಂದಿತ್ತು ಎಂಬುದಕ್ಕೆ ನಾನು ಸಾಕ್ಷಿಯಾಗಿದ್ದೆ! ನಂತರವೂ ಮುಂಬೈಯಲ್ಲಿ ಕಾಳಿಂಗ ನಾವಡರು ಮತ್ತು ಲೀಲಾ ಒಂದೇ ವೇದಿಕೆಯಲ್ಲಿ ಹಾಡಿದ್ದರು.
ಇನ್ನು, ಈಗಿನ ಯಕ್ಷಗಾನ ಪ್ರಸಂಗಗಳು, ಯಕ್ಷಗಾನೀಯವಲ್ಲದ ನಾಟಕೀಯ ಮತ್ತು ಸಿನಿಮೀಯ ಶೈಲಿಗಳು ಲೀಲಾ ಅವರಿಗೆ ನೋವು ತಂದಿವೆ. ಅವರು ಇದನ್ನು ಹಲವಾರು ಬಾರಿ ಹೇಳಿಕೊಂಡಿದ್ದಾರೆ. ಯಕ್ಷಗಾನಕ್ಕೆ ಅದರದ್ದೇ ಆದ ಪರಂಪರೆ ಇದೆ. ಹಾಗೆಯೇ ನಾಟಕಕ್ಕೂ ಇದೆ, ಸಿನಿಮಾಕ್ಕೂ ಇದೆ. ಅವುಗಳು ಆಯಾ ಕ್ಷೇತ್ರಗಳಲ್ಲೇ ವರ್ಧನೆಯಾಗಲಿ, ಅದು ಬಿಟ್ಟು ಯಕ್ಷಗಾನ ಹೋಗಿ ನಾಟಕವಾದರೆ, ಅಥವಾ ಭಾಗವತರು ಸಿನಿಮಾದಂತೆ ಹಾಡುಗಳನ್ನು ಹಾಡಿದರೆ, ಯಕ್ಷಗಾನದ ಆ ಕರ್ಣಾನಂದಕರವಾದ ಇಂಪು, ಸೊಗಡು ಇನ್ನೆಲ್ಲಿ? ಟಿವಿ, ಸಿನಿಮಾಗಳು ಹಾಗೂ ಆಧುನಿಕತೆಯ ಋಣಾತ್ಮಕ ಪ್ರಭಾವದಿಂದಾಗಿ ಯಕ್ಷಗಾನ ಪ್ರದರ್ಶನದ ಇಂದಿನ ಅವಧಿಯು ಕೂಡ ಕಿರಿದಾಗಿದೆ. ಆದರೆ, ರಾತ್ರಿಯಿಡೀ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನದ ಸವಿಯನ್ನು ಬಲ್ಲವರೇ ಬಲ್ಲರು, ಅಲ್ಲವೇ?
ಸನ್ಮಾನಗಳ ಮಹಾಪೂರ…
ಲೀಲಾ ಅವರನ್ನು ಹೋದಲ್ಲೆಲ್ಲಾ ಅಭಿಮಾನಿಗಳು ಸುತ್ತುವರಿಯುತ್ತಾರೆ. ಯಕ್ಷಗಾನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರಶಸ್ತಿಗಳು, ಸನ್ಮಾನಗಳು ಸಂದಿವೆ. ವಿಶೇಷವಾಗಿ ಮುಂಬೈಯಲ್ಲಿ ಅಗರಿ ಭಾಗವತ ಪ್ರಶಸ್ತಿ, ಉಳ್ಳಾಲದ ರಾಣಿ ಅಬ್ಬಕ್ಕ ಪ್ರಶಸ್ತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಪ್ರಶಸ್ತಿಗಳು, ತಾಲೂಕು ಪ್ರಶಸ್ತಿಗಳು ಹಾಗೂ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಅವರ ಕಲಾನೈಪುಣ್ಯವನ್ನು. ಅವರ ಮನೆಗೊಮ್ಮೆ ಹೋಗಿ ನೋಡಿದರೆ, ಗೋಡೆಗಳನ್ನೆಲ್ಲಾ ಸನ್ಮಾನ ಪತ್ರಗಳು, ಸ್ಮರಣಿಕೆಗಳು ಮುಚ್ಚಿವೆ! ಮುಂಬಯಿಯಲ್ಲಿ, ದೆಹಲಿಯಲ್ಲಿ, ಬರೋಡದಲ್ಲಿ ದೊಡ್ಡ ಅಭಿಮಾನಿ ವರ್ಗವೇ ಇದೆ ಲೀಲಾ ಅವರಿಗೆ. ಮಂಗಳೂರು ಆಕಾಶವಾಣಿಯಲ್ಲಿ ಅವರ ಧ್ವನಿ ಎಂಬತ್ತರ ದಶಕದಲ್ಲೇ ಕೇಳಿಬರುತ್ತಿತ್ತು.
ಇನ್ನೊಂದು ನೋವಿನ ಸಂಗತಿ ಹೇಳಲೇಬೇಕು. ಅದು ಈ-ಟಿವಿ ಕನ್ನಡದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ. ಅದರಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ತೀರ್ಪು ನೀಡಲೆಂದು ಗಾಯನ ಲೋಕದ ದಿಗ್ಗಜರನ್ನು ಕರೆಸುತ್ತಾರಷ್ಟೇ? ಹಾಗೆ ಬಂದಿದ್ದ ಭಾಗವತರೊಬ್ಬರು, ಎಸ್‌ಪಿಬಿ ಅವರು ‘ಯಕ್ಷಗಾನ ಹಾಡುಗಾರಿಕೆಯಲ್ಲಿ ಮಹಿಳೆಯರು ಯಾರೂ ಇಲ್ಲವೇ’ ಎಂದು ಕೇಳಿದಾಗ ನಕಾರಾತ್ಮಕ ಉತ್ತರ ನೀಡಿದ್ದು! ಅಂತಹಾ ಅದೆಷ್ಟೋ ಸಂಗತಿಗಳನ್ನು, ಎಲ್ಲ ಕ್ಷೇತ್ರದಲ್ಲಿಯೂ ಇರುವಂತಹಾ ಮಾತ್ಸರ್ಯಗಳನ್ನು, ದಬ್ಬಾಳಿಕೆಗಳನ್ನು, ಉಡಾಫೆಯ ವರ್ತನೆಗಳನ್ನು, ಸಹಿಸಿಕೊಂಡು, ತಾನಾಯಿತು, ತನ್ನ ಯಕ್ಷಗಾನವಾಯಿತು ಎನ್ನುತ್ತಲೇ ನಿರ್ಲಕ್ಷಿಸಿ, ದಿಟ್ಟವಾಗಿ ಮೇಲೆ ಬಂದವರು ಲೀಲಾ.
ನಿವೃತ್ತಿ ಇಲ್ಲದ ಏಕೈಕ ವೃತ್ತಿಯೆಂದರೆ ಅದು ಕಲೆ. ಹೀಗಾಗಿ ಈ ಇಳಿ ಹರೆಯದಲ್ಲಿ ಅವರ ಭಾಗವತಿಕೆಯನ್ನು, ಸಾಂಪ್ರದಾಯಿಕ ಯಕ್ಷಗಾನದ ಸೊಗಡನ್ನು ಗುರುತಿಸಿದವರು ತಮ್ಮ ವಿಶೇಷ ಕಾರ್ಯಕ್ರಮಗಳಿಗೆ ಕರೆಯುತ್ತಿರುತ್ತಾರೆ. ಇತ್ತೀಚೆಗೆ ತೆಂಕು ಭಾಗದವರಂತೆಯೇ ಬಡಗು ಭಾಗದವರಿಗೂ ಅವರ ಹಾಡುಗಾರಿಕೆ ಬಹುವಾಗಿ ಇಷ್ಟವಾಗಿದೆ. ಬಡಗು ತಿಟ್ಟಿನ ಕಲಾವಿದರೇ ಹೇಳಿದ ಮಾತು – ನಮ್ಮಲ್ಲಿ ಇಂತಹವರು ಇಲ್ಲವಲ್ಲಾ ಅಂತ! ಹೀಗಾಗಿ ಆ ಕಡೆಯಿಂದ ಹೆಚ್ಚು ಹೆಚ್ಚು ಆಹ್ವಾನಗಳು, ಸನ್ಮಾನಗಳು ದೊರೆಯುತ್ತಿವೆ. ಬೆಂಗಳೂರಿನಲ್ಲಿಯೂ ಕೆಲವೊಂದು ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಈಗಲೂ ಪುಟ್ಟ ಮಕ್ಕಳಿಗೆ ಭಾಗವತಿಕೆ ಪಾಠ ಮಾಡುತ್ತಾರೆ, ಹೆಣ್ಣು ಮಕ್ಕಳ ಯಕ್ಷಗಾನ ತಂಡಕ್ಕೆ ಆಧಾರ ಸ್ತಂಭವೂ ಆಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಮಾನ ನಿಲ್ದಾಣವಿರುವ ಬಜ್ಪೆ ಬಳಿಯ ತಲಕಳ ಎಂಬ ಊರಲ್ಲಿ ಪತಿಯೊಂದಿಗೆ ವಾಸಿಸುತ್ತಿರುವ ಅವರ ಕಲಾ ಸೇವೆ ನಿರಂತರವಾಗಿದೆ. ಇವಿಷ್ಟು ಇಲ್ಲಿ ಹೇಳಲೇಬೇಕಾಯಿತೇಕೆ ಎಂದರೆ, ಲೀಲಾ ಬೈಪಾಡಿತ್ತಾಯರು ನನ್ನ ಹೆಮ್ಮೆಯ ಅಮ್ಮ!
[ವೆಬ್‌ದುನಿಯಾ]
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
View Comments
Hearty Congratulations to Mrs Leela Baipadittaya. I am one among her fans!
ತುಂಬಾ ಧನ್ಯವಾದ ಮುರಳಿ ಅವರೆ
ಇವರ ಭಾಗವತಿಗೆ ರೇಡಿಯೋದಲ್ಲಿ ಕೇಳಿದ್ದೇನೆ. ಬಹಳ ಖುಷಿ ಆಯಿತು. ನಿಮ್ಮ ಅಮ್ಮ ಅ೦ತ ಇವತ್ತು ಗೊತ್ತಾಯಿತು ನೋಡಿ :)
ಪ್ರಮೋದ್ ಅವರೇ, ಧನ್ಯವಾದಗಳು.
ಶ್ರೀಮತಿ ಲೀಲಾವತಿ ಬೈಪಡಿತ್ತಾಯರ ಹಾಡುಗಾರಿಕೆ ನನಗೆ ತುಂಬಾ ಇಷ್ಟ . ಅವರನ್ನು ನಮ್ಮ ಮನೆಗೆ ಕರೆಯಿಸಿ ಅವರ ಹಾಡುಗಳನ್ನು record ಮಾಡಿ ಇಡಬೇಕೆಂದು ಮಾರ್ಚ್ ೨೦ ೨೦೦೯ ರಲ್ಲಿ ಕರೆಯಿಸಿದ್ದೆ. ಬಿರು ಬೇಸಿಗೆಯ ದಿನ ಯಾವುದೇ ತೊಂದರೆ ಬರಲಿಕ್ಕಿಲ್ಲವೆಂದು ಆ ದಿನವನ್ನು ನಾವು ನಿಶ್ಚಯಿಸಿದ್ದೆವು. ಇವರೊಂದಿಗೆ ಶ್ರೀ ಸರಪಾಡಿ ಶಂಕರ ನಾರಾಯಣ ಕಾರಂತರ ಹಾಡುಗಳನ್ನು ದಾಖಲಿಸುವುದು ಎಂದೂ ನಿರ್ಧರಿಸಿದ್ದೆವು .ಆದರೆ ಆದಿನ ಯಾವುದೇ ಪೂರ್ವ ಸೂಚನೆಯಿಲ್ಲದೆ ಧಾರಾಕಾರವಾಗಿ ಮಳೆ ಸುರಿಯಲು ಆರಂಭವಾಗಿತ್ತು ! ಆ ದಿನ ಬೆಳಗ್ಗೂ ಶ್ರೀಮತಿ ಲೀಲಾವತಿಯವರು ದೂರವಾಣಿ ಮೂಲಕ ಇವತ್ತು recording ಉಂಟಲ್ಲ ? ಎಂದು ವಿಚಾರಿಸಿದ್ದರು
"ಧಾರುಣಿಯೇ ತಲೆ ಕೆಳಗಾಗಿ ಹೋದರು.... ..... ನಿರ್ಣಯಿಸಿದ ಕಾರ್ಯಕ್ರಮ ನಿಲ್ಲಿಸುವುದಿಲ್ಲ ಎಂದು ನಾನು ಹೇಳಿದಾಗ ಸುರಿಯುವ ಮಳೆಯಲ್ಲೂ ನಮ್ಮ ಮನೆಗೆ ಬಂದು ಸುಮಾರು ೨೧ ಹಾಡುಗಳನ್ನು ಹಾಡಿ ನಮ್ಮ ಯಕ್ಷಗಾನದ "ಹುಚ್ಚಿನ " ಪರಮಾವಧಿಗೆ ಬೆನ್ನು ತಟ್ಟಿದ ಅವರನ್ನು ನಾನು ಯಾವತ್ತೂ ಮರೆಯಲು ಸಾಧ್ಯವೇ ಇಲ್ಲ . ಅವರು ಹಾಡಿದ ವಾಮನ ಚರಿತ್ರೆ ಯ "ಮಣಿದಾತ ನುಡಿದ ಪಾವನನಾಡೆ ತವ ಪಾದ ....," ವಸ್ತ್ರಾಪಹಾರದ "ಆರಿಗೊರಲಿದರಿಲ್ಲಿ ದೂರ ಕೇಳುವರಿಲ್ಲ ...." ಹಾಡುಗಳು ಇಂದಿಗೂ ನನ್ನ ಕಿವಿಯಲ್ಲಿ ಮಾರ್ದನಿಸುತ್ತಿದೆ. ನಮ್ಮ ಕರಾವಳಿಯ ತೆಂಕು ತಿಟ್ಟಿನ ಹೆಮ್ಮೆ ಶ್ರೀಮತಿ ಲೀಲಾವತಿಯವರು ಎಂದು ಗರ್ವದಿಂದ ನಾವು ಹೇಳಲು ಸಂತಸ ಪಡುತ್ತೇವೆ .
ಲೀಲಮ್ಮ ಎಲ್ಲರನ್ನು ಮಕ್ಕಳಂತೆ ಪ್ರೀತಿಯಿಂದ ಮಾತನಾಡಿಸಿದವರು. ಹರಿನಾರಾಯಣ ಬೈಪದಿತ್ತಾಯರಂತೂ ಅದ್ಭುತ ಮದ್ದಲೆ ಕೈ .. ಆ ದಿನ ನಮ್ಮ ಮನೆಯಲ್ಲಿ ಇದ್ದದ್ದು ಕೇವಲ ೮ ಮಂದಿ ... ಅದರ ವೆದಿಒ ಮುದ್ರಿಕೆ ನೋಡುವಾಗಲೆಲ್ಲ ರೋಮಾಂಚನವಾಗುತ್ತದೆ. ಅವರಿಗೆ ಪ್ರಶಸ್ತಿ ಬಂದಿರುವುದು ಆ ಪ್ರಶಸ್ತಿಗೆ ಸಂದ ಗೌರವ . ಅವರಿಗೆ ಈ ಪ್ರಶಸ್ತಿ ನೀಡಿರುವುದರಿಂದ ಅದರ ಮೌಲ್ಯ ಹೆಚ್ಚಾಯಿತು...
ಮಾನ್ಯರೆ ಅವರು ನಿಮಗೊಬ್ಬರಿಗೆ ಅಮ್ಮ ಅಲ್ಲ ಯಕ್ಷಗಾನ ಪ್ರೇಮಿಗಳಿಗೆಲ್ಲ ಪ್ರೀತಿಯ "ಲೀಲಮ್ಮ "!
ಏನಂತೀರಿ ?
ಸುಬ್ರಹ್ಮಣ್ಯ ಭಟ್ರೇ,
ಕರೆಂಟಿಲ್ಲದ ಕಾರಣದಿಂದಾಗಿ ಮೈಕ್ ಇಲ್ಲದೆ ಅಮ್ಮ ಹಾಡಲು ತುಂಬಾ ಕಷ್ಟ ಪಟ್ಟಿದ್ದು, ನನಗೆ ಈಗಲೂ ನೆನಪಿದೆ.
ತುಂಬಾ ಥ್ಯಾಂಕ್ಸ್.
ಲೀಲಾವತಿ ಅವರ ಸಾಧನೆ ನಿಜಕ್ಕೂ ಅಭಿನಂದನಾರ್ಹ. ಪ್ರಶಸ್ತಿ ಈ ಮೊದಲೇ ದಕ್ಕಬೇಕಿತ್ತು. ತಡವಾಗಿಯಾದರೂ ಲಭಿಸಿದ್ದು ಸಂತಸ ತಂದಿದೆ. ಶುಭಾಶಯಗಳು..
ದಿನೇಶ್ ಅವರೇ, ಹಾರೈಕೆಗೆ ಧನ್ಯವಾದಗಳು..
namma thandeyavaru kadri meladalliddaga Leelavathi avara bhagavathikeyannu sakashtu savidu avara appata abhimaniyagi marpadugondavaralli nanoo obbalu. Nanna abhinandanegalannu avarige khanditha thilisi Avinash.....
ಖಂಡಿತವಾಗಿಯೂ ಪ್ರತಿಭಾ... ಬಾಬು ಕುಡ್ತಡ್ಕ ಅವರ ವೇಷದ ಅಭಿಮಾನಿ ನಾನು ಕೂಡ...
ಲೀಲಾ ಬೈಪಾಡಿತ್ತಾಯರ ಭಾಗವತಿಕೆ....... ತುಂಬಾ ಸೊಗಸಾಗಿದೆ. ನನ್ನ ಅಜ್ಜನ ಬಾಯಲ್ಲಿ ಯಾವಾಗ್ಲೂ ಇವರ ಹೆಸರು ಇರುತಿತ್ತು. ನನಗೂ ಒಮ್ಮೆ ಇವರ ಭಾಗವತಿಕೆ ಯಕ್ಷಗಾನ ನೋಡಲು ಅವಕಾಶ ಸಿಕ್ಕಿದ್ದೆ. ರೇಡಿಯೋ ದಲ್ಲಿ ಅನೇಕ ಬಾರಿ ಕೇಳಿದ್ದೇನೆ. ಆವರಿಗೆ ಪ್ರಶಸ್ತಿ ಬಂದದ್ದು ತುಂಬಾ ತುಂಬಾ ಸಂತೋಷ .
ಅಶೋಕ್ ಅವರೇ, ನಿಮ್ಮ ಕಾಮೆಂಟಿಗೆ ಕೃತಜ್ಞತೆಗಳು..
ಅವಿನಾಶ್, ನೀವು ಲೀಲಾಬೈಪಾಡಿತ್ತಾಯರ ಮಗನೆಂದು ಗೊತ್ತಿರಲಿಲ್ಲ.ಅವರ ಭಾಗವತಿಕೆಯನ್ನು ನಾನು ಕೇಳಿದ್ದೇನೆ. ಆ ಕಾಲದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಮಹಿಳೆಯೊಬ್ಬರನ್ನು ಕಂಡು ನನಗೆ ಅಚ್ಚರಿಯೊಂದಿಗೆ ಹೆಮ್ಮೆಯೂ ಉಂಟಾಗಿತ್ತು.
ಆ ಅಮ್ಮನಿಗೆ ಮಗನ ಮೂಲಕ ಅಭಿನಂದನೆಗಳು.
ಉಷಾ ಅವರೇ, ಖಂಡಿತಾ ತಿಳಿಸ್ತೀನಿ. ತುಂಬಾ ಥ್ಯಾಂಕ್ಸ್
ನಾನು ಕೇಳಿದ್ದು ಅವರ ಕೆಲವೇ ಕೆಲವು ಹಾಡುಗಾರಿಕೆಯನ್ನು. ನನ್ನ ಇಷ್ಟದ ಭಾಗವತರಲ್ಲಿ ಅವರೂ ಒಬ್ಬರು. ಅವರ ಭಾಗವತಿಕೆಯ ರೆಕಾರ್ಡ್ ಬೇಕೆಂದು ಕೇಳಿದ ನನಗೆ ನೀವಿನ್ನೂ ಕೊಟ್ಟಿಲ್ಲ. ಇರಲಿ ಬಿಡಿ, ನನ್ನ ಅಭಿನಂದನೆ ಸ್ವೀಕರಿಸಿ ಅವರಿಗೆ ತಲುಪಿಸಿ.
ಭುವನ್, ಕೊಡೋಣ ಅಂದ್ಕೊಂಡಿದ್ದೆ... ಅಷ್ಟರಲ್ಲಿ ನೀವೇ ಪರಾರಿಯಾದ್ರಿ... :))
ಥ್ಯಾಂಕ್ಸ್...
Abhinandanegalu Leela baipadittaya avarige :)
nanna magala huttida dinave nimma ammana huttuhabba..so nam kade yinda wishes tilisi.. ty :)