ಜನಪ್ರಿಯ ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಂ ವಿಂಡೋಸ್‌ನ 10ನೇ ಆವೃತ್ತಿಯ ಬಿಡುಗಡೆಯನ್ನು ಈಗಾಗಲೇ ಮೈಕ್ರೋಸಾಫ್ಟ್ ಜು.29ಕ್ಕೆ ನಿಗದಿಪಡಿಸಿದೆ. ಇದು ಮೈಕ್ರೋಸಾಫ್ಟ್‌ನ ಕೊನೆಯ ಕಾರ್ಯಾಚರಣಾ ವ್ಯವಸ್ಥೆ ಅಂತ ಹೇಳಲಾಗುತ್ತಿದೆ ಮತ್ತು ಅದ್ಭುತವಾದ ವೈಶಿಷ್ಟ್ಯಗಳೂ ಇದರಲ್ಲಿರುತ್ತವೆ. ಈಗಾಗಲೇ ಅಧಿಕೃತ ವಿಂಡೋಸ್ 7 ಹಾಗೂ 8 ಅಥವಾ ವಿಂಡೋಸ್ 8.1 ಬಳಸುತ್ತಿರುವವರಿಗೆಲ್ಲರೂ ಜುಲೈ 29ರ ನಂತರ ಒಂದು ವರ್ಷದೊಳಗೆ ವಿಂಡೋಸ್ 10ಕ್ಕೆ ಉಚಿತವಾಗಿ ಅಪ್‌ಗ್ರೇಡ್ ಮಾಡಿಕೊಳ್ಳಬಹುದು.
ವಿಂಡೋಸ್ 8ರಲ್ಲಿ ಚಲಾವಣೆಯಾಗುತ್ತಿರುವ ಬಹುತೇಕ ಎಲ್ಲ ಸ್ಮಾರ್ಟ್ ಫೋನ್ ಹಾಗೂ ಟ್ಯಾಬ್ಲೆಟ್‌ಗಳು ವಿಂಡೋಸ್ 10 ಮೊಬೈಲ್ ಆವೃತ್ತಿಗೆ ಅಪ್‌ಗ್ರೇಡ್ ಆಗುತ್ತವೆ. ಆದರೆ ಕಂಪ್ಯೂಟರಿನಲ್ಲಿ ವಿಂಡೋಸ್ ಉಚಿತವಾಗಿ ಅಪ್‌ಗ್ರೇಡ್ ಮಾಡಿಕೊಳ್ಳುವುದಕ್ಕೂ ಕೆಲವೊಂದು ಇತಿಮಿತಿಗಳಿವೆ. ವಿಂಡೋಸ್ ಹೋಮ್ ಹಾಗೂ ವಿಂಡೋಸ್ ಪ್ರೋ ಎಂಬ ಎರಡೇ ಆವೃತ್ತಿಗಳು ಹೊಸದಾಗಿ ಬರುತ್ತವೆ. ವಿಂಡೋಸ್ 7 ಸ್ಟಾರ್ಟರ್, ಹೋಮ್ ಬೇಸಿಕ್, ಹೋಮ್ ಪ್ರೀಮಿಯಂ, ವಿಂಡೋಸ್ 8 ಅಥವಾ 8.1 ಉಳ್ಳವರೆಲ್ಲರೂ ಉಚಿತವಾಗಿ ವಿಂಡೋಸ್ 10 ಹೋಮ್ ಆವೃತ್ತಿಗೆ ಅಪ್‌ಗ್ರೇಡ್ ಆಗುತ್ತಾರೆ. ವಿಂಡೋಸ್ 7 ಪ್ರೊಫೆಶನಲ್, ಅಲ್ಟಿಮೇಟ್, ವಿಂಡೋಸ್ 8 ಪ್ರೋ ಮತ್ತು ವಿಂಡೋಸ್ 8.1 ಪ್ರೋ ಆವೃತ್ತಿ ಹೊಂದಿರುವವರು ವಿಂಡೋಸ್ 10 ಪ್ರೋ ಆವೃತ್ತಿಗೆ ಉಚಿತವಾಗಿ ಅಪ್‌ಗ್ರೇಡ್ ಪಡೆಯುತ್ತಾರೆ.
ವಿಂಡೋಸ್ 10 ಹೋಮ್ ಆವೃತ್ತಿಗೆ ಅಪ್‌ಗ್ರೇಡ್ ಆದವರಿಗೆ ಹೆಚ್ಚಿನ ವೈಶಿಷ್ಟ್ಯಗಳಿರುವ ವಿಂಡೋಸ್ 10 ಪ್ರೋ ಆವೃತ್ತಿ ಬೇಕೆಂದಾದರೆ, 99 ಡಾಲರ್ (ಸುಮಾರು ಆರುವರೆ ಸಾವಿರ ರೂ.) ಹೆಚ್ಚು ಕೊಟ್ಟು ಉನ್ನತೀಕರಿಸಿಕೊಳ್ಳಬಹುದು.
ಹೀಗೆ ಅಪ್‌ಗ್ರೇಡ್ ಮಾಡಿಕೊಳ್ಳುವ ಮುನ್ನ ನಿಮ್ಮ ಸಿಸ್ಟಂನ ಹಾರ್ಡ್‌ವೇರ್ (ಯಂತ್ರಾಂಶ) ಈ ಹೊಸ ತಂತ್ರಾಂಶವನ್ನು ಬೆಂಬಲಿಸುತ್ತದೆಯೇ ಎಂದು ನೋಡಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ವಿಂಡೋಸ್ 10ರ ವೈಶಿಷ್ಟ್ಯಗಳನ್ನು ಪರಿಪೂರ್ಣ ಪ್ರಯೋಜನ ಪಡೆಯುವುದು, ಆನಂದಿಸುವುದು ಸಾಧ್ಯವಾಗಲಾರದು.
ಹೇಗೆ ಮಾಡಿಕೊಳ್ಳುವುದು: ಅಧಿಕೃತ ಕಾರ್ಯಾಚರಣಾ ವ್ಯವಸ್ಥೆಯಿರುವ ಕಂಪ್ಯೂಟರಿನಲ್ಲಿ ವಿಂಡೋಸ್ ಅಪ್‌ಡೇಟ್ ಎಂಬುದನ್ನು ಎನೇಬಲ್ ಮಾಡಿರಬೇಕು. (ವಿಂಡೋಸ್ 7ರಲ್ಲಿ Start ಬಟನ್ ಒತ್ತಿ, All Programmes ಕ್ಲಿಕ್ ಮಾಡಿದಾಗ Windows Update ಅನ್ನೋದನ್ನು ಕ್ಲಿಕ್ ಮಾಡಿ ನೋಡಿದಾಗ ಕಾಣಿಸುತ್ತದೆ). ಅಪ್‌ಡೇಟ್ ಲಭ್ಯವಾದಾಗ ನಿಮಗೆ ಸೂಚನೆ ದೊರೆಯುತ್ತದೆ.
ಆದರೆ, ವಿಂಡೋಸ್ XP ಇರುವವರು ಅಥವಾ ಹೊಸದಾಗಿ ಕಂಪ್ಯೂಟರ್ ಕೊಳ್ಳುವವರು ವಿಂಡೋಸ್ 10ನ್ನು ಖರೀದಿ ಮಾಡಬೇಕಾಗುತ್ತದೆ. ಎರಡು ಆವೃತ್ತಿಗಳಿವೆ. ಸಾಧಾರಣ ಬಳಕೆಗೆ ವಿಂಡೋಸ್ 10 ಹೋಮ್ ಆವೃತ್ತಿಯ ಬೆಲೆ ಅಮೆರಿಕದಲ್ಲಿ 119 ಡಾಲರ್ (ಸುಮಾರು 7-8 ಸಾವಿರ ರೂ.) ಹಾಗೂ ವಿಂಡೋಸ್ 10 ಪ್ರೋ ಆವೃತ್ತಿಯ ಬೆಲೆ 199 ಡಾಲರ್ (ಅಂದಾಜು 12-13 ಸಾವಿರ ರೂ.) ಇದೆ. ಭಾರತದಲ್ಲಿ ಎಷ್ಟು ಬೆಲೆ ಎಂಬುದಿನ್ನೂ ಬಹಿರಂಗವಾಗಿಲ್ಲ. ವಿಭಿನ್ನ ಪ್ರದೇಶಕ್ಕೆ ವಿಭಿನ್ನ ಬೆಲೆ ಇದೆ ಎಂಬುದು ಗಮನದಲ್ಲಿರಲಿ. ಉಸಾಬರಿಯೇ ಬೇಡವೆಂದಾದರೆ, ಹೊಸದಾಗಿ ವಿಂಡೋಸ್ 10 ಇರುವ ಕಂಪ್ಯೂಟರನ್ನೇ ಕೊಳ್ಳುವುದು ಒಳಿತು.
ವಿಂಡೋಸ್ 10ರ ಪ್ರಮುಖ ವಿಶೇಷತೆಗಳೆಂದರೆ, ವಿಂಡೋಸ್ 8ರಲ್ಲಿ ಬಳಕೆದಾರರ ಆಕ್ರೋಶಕ್ಕೆ ಕಾರಣವಾಗಿರುವ ಎಲ್ಲ ಅಂಶಗಳನ್ನು ಸುಧಾರಿಸಲಾಗಿದೆ. ಅದೇ ರೀತಿ, ಕೋರ್ಟನಾ ಎಂಬ ಧ್ವನಿ ಆಧಾರಿತ ಆಪ್ತಸಹಾಯಕ ತಂತ್ರಾಂಶ, ವಿಂಡೋಸ್ ಹಲೋ ಎಂಬ ಮುಖ ಗುರುತಿಸುವ ತಂತ್ರಜ್ಞಾನ ಅಡಕವಾಗಿದೆ. ಇಂಟರ್ನೆಟ್ ಎಕ್ಸ್‌ಪ್ಲೋರರ್ ಬದಲಾಗಿ ಸ್ಪಾರ್ಟನ್ ಎಡ್ಜ್ ಎಂಬ ಬ್ರೌಸರ್ ಇರುತ್ತದೆ. ವಿಂಡೋಸ್ ಫೋನ್‌ನಂತೆಯೇ ಕಂಪ್ಯೂಟರಿನಲ್ಲಿಯೂ ವಿಂಡೋಸ್ ಸ್ಟೋರ್‌ನಿಂದ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದು, ಸ್ಕ್ರೀನ್ ಮೇಲೆ ನಾಲ್ಕು ಆ್ಯಪ್‌ಗಳನ್ನು ಏಕಕಾಲದಲ್ಲಿ ತೆರೆದು, ನಾಲ್ಕೂ ಮೂಲೆಗಳಲ್ಲಿ ಜೋಡಿಸಿಟ್ಟು ಕೆಲಸ ಮಾಡಬಹುದು. ಟಚ್ ಸ್ಕ್ರೀನ್ ಉಳ್ಳ ಕಂಪ್ಯೂಟರುಗಳಿಗಂತೂ ಅತ್ಯದ್ಭುತ ರೀತಿಯಲ್ಲಿ ಉಪಯುಕ್ತವಾಗಿರುತ್ತದೆ.
ವಿಜಯ ಕರ್ನಾಟಕದಲ್ಲಿ ಮಾಹಿತಿ@ತಂತ್ರಜ್ಞಾನ- 129: ಅವಿನಾಶ್ ಬಿ. (08 ಜೂನ್ 2015)
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು