ಮೊದಲನೆಯದಾಗಿ ಹೇಳುವುದಿದ್ದರೆ, ಆಂಡ್ರಾಯ್ಡ್ ಮತ್ತು ಐಫೋನ್ ಕಾರ್ಯಾಚರಣಾ ವ್ಯವಸ್ಥೆಗಳು ತೀರಾ ಅನ್ನುವಷ್ಟೇನೂ ಭಿನ್ನವಾಗಿಲ್ಲ. ಆದರೆ, ಪ್ರಮುಖ ವ್ಯತ್ಯಾಸ ಇರುವುದು ಅವುಗಳಲ್ಲಿ ಆ್ಯಪ್‌ಗಳ ಲಭ್ಯತೆಯಲ್ಲಿ. ಗೂಗಲ್‌ನ ಆಂಡ್ರಾಯ್ಡ್ ಫೋನ್‌ಗಳಲ್ಲಾದರೆ, ರಾಶಿ ರಾಶಿ ಆ್ಯಪ್‌ಗಳು, ನಮಗೆ ಬೇಕಾದ ರೀತಿಯಲ್ಲಿ ದೊರೆಯುತ್ತವೆ ಮತ್ತು ಅವುಗಳ ಫೈಲ್ ಗಾತ್ರವೂ ಕಡಿಮೆ ಇರುತ್ತವೆ. ಆದರೆ ಆ್ಯಪಲ್‌ನ ಐಫೋನ್‌ನಲ್ಲಿ ಯಾವುದೇ ಆ್ಯಪ್ ಅಪ್‌ಡೇಟ್ ಆಗಬೇಕಿದ್ದರೆ ಕೂಡ ಸಾಕಷ್ಟು ಡೇಟಾ ವ್ಯಯವಾಗುತ್ತದೆ. ಇಷ್ಟೇ ಅಲ್ಲದೆ, ಅವುಗಳ ಅಪ್‌ಡೇಟ್‌ಗೆ (ಪರಿಷ್ಕೃತ ಆವೃತ್ತಿ) ಕೂಡ ಕೆಲವೊಂದು ನಿರ್ಬಂಧವಿದೆ. ವಿಶೇಷವಾಗಿ 100 ಎಂಬಿಗಿಂತ ಹೆಚ್ಚು ಗಾತ್ರದ ಆ್ಯಪ್ ಅಪ್‌ಡೇಟ್ ಆಗಲು ವೈಫೈ ಬೇಕಾಗುತ್ತದೆ.
ಆ್ಯಪಲ್ ತನ್ನ ಸಾಧನಗಳ (ಐಫೋನ್, ಐಪ್ಯಾಡ್ ಹಾಗೂ ಐಪಾಡ್) ಬಳಕೆದಾರರ ಸುರಕ್ಷತೆಗೆ ಹೆಚ್ಚು ಗಮನ ಹರಿಸುವುದರಿಂದಾಗಿ, ಅದರಲ್ಲಿ ಆ್ಯಪ್ ಅಳವಡಿಕೆಗೆ ಡೆವಲಪರ್‌ಗಳಿಗೂ ಸಾಕಷ್ಟು ನೀತಿ ನಿಯಮಾವಳಿಗಳಿರುವುದರಿಂದಾಗಿ ಅದರಲ್ಲಿ ಆ್ಯಪ್‌ಗಳ ಸಂಖ್ಯೆ ಕಡಿಮೆ ಇವೆ. ಆದರೆ ಇರುವ ಆ್ಯಪ್‌ಗಳು ಹೆಚ್ಚು ಉತ್ತಮ ಗುಣಮಟ್ಟದ್ದಾಗಿರುತ್ತವೆ ಎಂಬುದರಲ್ಲಿ ಅನುಮಾನ ಇರುವುದಿಲ್ಲ. ಹೀಗಾಗಿಯೇ ಆ್ಯಪಲ್ ಫೋನ್‌ಗಳನ್ನು ಹ್ಯಾಕ್ ಮಾಡುವುದು ಅಷ್ಟು ಸುಲಭವಲ್ಲ ಹಾಗೂ ಇಲ್ಲಿ ಥರ್ಡ್ ಪಾರ್ಟಿ (ಅಂದರೆ ಅಧಿಕೃತ ಆ್ಯಪ್ ಸ್ಟೋರ್‌ನಿಂದ ಹೊರಗಿನ) ಆ್ಯಪ್‌ಗಳನ್ನು ಅಳವಡಿಸಿಕೊಳ್ಳುವುದೂ ಸಾಧ್ಯವಿಲ್ಲ.
ಡೇಟಾ (ಇಂಟರ್ನೆಟ್ ದತ್ತಾಂಶ) ಬಳಕೆಯ ಬಗೆಗೂ ಕೆಲವರು ನನ್ನಲ್ಲಿ ಕೇಳಿದ್ದಾರೆ. ಆಂಡ್ರಾಯ್ಡ್‌ನಲ್ಲಿ ಬೇಗನೇ ಇಂಟರ್ನೆಟ್ ಪ್ಯಾಕ್ ಮುಗಿದುಹೋಗುತ್ತೆ ಅಂದವರೂ, ಐಫೋನ್‌ನಲ್ಲಾದರೆ ಕಡಿಮೆ ಡೇಟಾ ವ್ಯಯವಾಗುತ್ತೆ ಅಂದವರೂ ಇದ್ದಾರೆ. ಆದರೆ, ವಿಷಯ ಏನೆಂದರೆ, ಆಂಡ್ರಾಯ್ಡ್‌ನಲ್ಲಿ ನಾವು ಹಲವಾರು ಆ್ಯಪ್‌ಗಳನ್ನು ಅಳವಡಿಸಿಕೊಳ್ಳುತ್ತೇವೆ, ಅವುಗಳು ಇನ್‌ಸ್ಟಾಲ್ ಆದ ಬಳಿಕ ಕೆಲವೊಂದು ಜಾಹೀರಾತುಗಳು ಧುತ್ತನೇ ಕಾಣಿಸಿಕೊಳ್ಳುವುದು, ಬ್ಯಾಕ್‌ಗ್ರೌಂಡ್‌ನಲ್ಲಿ ನಮಗೆ ಅರಿವಿಲ್ಲದಂತೆಯೇ ಆ್ಯಪ್‌ಗಳು ಚಾಲನೆಯಾಗುವುದು… ಇತ್ಯಾದಿಗಳಿಂದಾಗಿಯೂ ಮತ್ತು ಬೇರೊಬ್ಬರ ಮೊಬೈಲ್‌ನಲ್ಲಿ ನಮಗಿಷ್ಟವಾದ ಆ್ಯಪ್‌ಗಳನ್ನು ನಾವೂ ಅಳವಡಿಸಿಕೊಂಡು ನೋಡುವುದರಿಂದಲೂ ಡೇಟಾ ಬಳಕೆ ಹೆಚ್ಚು. ಐಫೋನ್‌ನಲ್ಲಿ? ಆ್ಯಪ್‌ಗಳೇ ಕಡಿಮೆ, ಅದರಲ್ಲಿಯೂ ಅಳವಡಿಸಿಕೊಳ್ಳುವ ಆ್ಯಪ್‌ಗಳ ಅಪ್‌ಡೇಟ್ 100 ಎಂಬಿಗಿಂತ ಜಾಸ್ತಿ ಫೈಲ್ ಗಾತ್ರ ಹೊಂದಿದ್ದರೆ, ಅವುಗಳನ್ನು ಅಪ್‌ಡೇಟ್ ಮಾಡಿಕೊಳ್ಳುವ ಗೋಜಿಗೆ ಹೋಗುವುದಿಲ್ಲ, ಅಥವಾ ಲಭ್ಯವಿರುವ ವೈಫೈ ಇಂಟರ್ನೆಟ್ ಸಂಪರ್ಕದ ಮೂಲಕ ಅಪ್‌ಡೇಟ್ ಮಾಡಿಕೊಳ್ಳುತ್ತೇವೆ.
ನಾನು ಆಂಡ್ರಾಯ್ಡ್ ಹಾಗೂ ಐಫೋನ್ ಎರಡೂ ಬಳಸಿರುವುದರಿಂದ ಸಾಮಾನ್ಯ ಬಳಕೆಯಲ್ಲಿ ನನಗೆ ಐಫೋನ್‌ನಲ್ಲಿ ಇಷ್ಟವಾದದ್ದು ಅದರ ಬ್ಯಾಟರಿ ಮತ್ತು ಫೋಟೋ-ವೀಡಿಯೋ ಗುಣಮಟ್ಟ ಹಾಗೂ ಧ್ವನಿಯ ಸ್ಪಷ್ಟತೆ. ಹಿಂದೆ ಇದರಲ್ಲಿ ಕನ್ನಡ ಕೀಬೋರ್ಡ್ ಇಲ್ಲ ಎಂಬುದೊಂದು ದೊಡ್ಡ ಡ್ರಾಬ್ಯಾಕ್ ಇತ್ತು. ಇದಕ್ಕಾಗಿ ಸಂಗಮ್ ಹಾಗೂ ಗೂಗಲ್‌ನ ಜಿಬೋರ್ಡ್ ಎಂಬ ಕೀಬೋರ್ಡ್‌ಗಳನ್ನು ಅಳವಡಿಸಿಕೊಳ್ಳಬೇಕಾಗಿತ್ತು. ಈಗ ಐಒಎಸ್ 11 ಬಂದ ಬಳಿಕ ಆ ಸಮಸ್ಯೆಯೂ ನಿವಾರಣೆಯಾಗಿದೆ.
ಆದರೆ, ಆಂಡ್ರಾಯ್ಡ್‌ನಲ್ಲಿ ಬೇಕಾದ ಆ್ಯಪ್‌ಗಳನ್ನು ಬೇಕಾದಾಗ ಅಳವಡಿಸಿಕೊಳ್ಳುವ ಅವಕಾಶ ಹಾಗೂ ಇಂಟರ್ನಲ್ ಮೆಮೊರಿಯಲ್ಲಿ ಸ್ಥಳ ಇಲ್ಲದಿದ್ದರೆ, ಫೋಟೋ/ವೀಡಿಯೋ/ಆ್ಯಪ್ ಮತ್ತಿತರ ಫೈಲುಗಳನ್ನು ಮೆಮೊರಿ ಕಾರ್ಡ್‌ಗೆ ವರ್ಗಾಯಿಸುವ ಅವಕಾಶ ಇದೆ. ಕನ್ನಡ ಕೀಬೋರ್ಡ್‌ಗಳಂತೂ ರಾಶಿ ರಾಶಿ ಇವೆ. ಅಷ್ಟಲ್ಲದೆ ಡ್ಯುಯಲ್ ಸಿಮ್ (ಮತ್ತೊಂದು ಫೋನ್ ನಂಬರ್) ಕೂಡ ಇದರಲ್ಲಿ ಬಳಸಬಹುದು. ಉಳಿದಂತೆ 4ಜಿ ವಿಒಎಲ್‌ಟಿಇ, ಫಿಂಗರ್ ಪ್ರಿಂಟ್ ಲಾಕ್ ಮುಂತಾದ ಎಲ್ಲ ಆಧುನಿಕ ತಂತ್ರಜ್ಞಾನಗಳು ಆಂಡ್ರಾಯ್ಡ್‌ನಲ್ಲಿ ಕಡಿಮೆ ಬೆಲೆಗೆ ಲಭ್ಯ. ಜತೆಗೆ, ಇದರಲ್ಲಿ ಒಪೆರಾ ಮಿನಿಯಂಥ ಬ್ರೌಸರ್ ಬಳಸಿದರೆ ಡೇಟಾ ಬಳಕೆಯನ್ನೂ ಕಡಿಮೆ ಮಾಡಿಕೊಳ್ಳುವ ಆಯ್ಕೆಯಿದೆ.
ಕೊನೆ ಮಾತು: ಐಫೋನ್ ಬಳಕೆಯ ಮತ್ತೊಂದು ಉಪಯೋಗವೆಂದರೆ, ಇಲ್ಲಿ ಕಡಿಮೆ ಆ್ಯಪ್ ಇರುವುದರಿಂದ ಹಾಗೂ ಆ್ಯಪ್ ಗಾತ್ರವೂ ತೀರಾ ಹೆಚ್ಚಿರುವುದರಿಂದ, ನಾವು ಕಡಿಮೆ ಆ್ಯಪ್ ಬಳಸುತ್ತೇವೆ. ಇದರಿಂದಾಗಿ ನಮಗೆ ಬೇಕುಬೇಕಾದ ಆ್ಯಪ್‌ಗಳನ್ನು ನಾವು ಅಳವಡಿಸಿಕೊಳ್ಳುವುದಿಲ್ಲ ಮತ್ತು ಇಂಥ ಗಮನ ಬೇರೆಡೆ ಸೆಳೆಯುವ ಆ್ಯಪ್‌ಗಳಿಲ್ಲದಿರುವುದರಿಂದ ಸ್ಮಾರ್ಟ್‌ಫೋನ್ ಜತೆಗೆ ಕಳೆಯುವ ಸಮಯವೂ ಕಡಿಮೆ ಆಗುತ್ತದೆ. ಆ ಸಮಯವನ್ನೇ ಬೇರೆ ಯಾವುದಾದರೂ ಅಗತ್ಯ ಕೆಲಸಗಳಿಗೆ ಬಳಸಬಹುದು! ಇಷ್ಟಲ್ಲದೆ, ಎರಡೆರಡು ಸಿಮ್‌ಗೆ ಕರೆ ಬರುವ ತೊಂದರೆಯೂ ಇಲ್ಲ, ಬೇಕಾದ-ಬೇಡವಾದ ಎಲ್ಲ ವೀಡಿಯೋ-ಆಡಿಯೋ ಫೈಲುಗಳನ್ನು ಸೇವ್ ಮಾಡಿಟ್ಟುಕೊಂಡು ಹುಡುಕಲು ತ್ರಾಸಪಡುತ್ತಲೇ ಸಮಯ ವ್ಯಯಿಸಲು ನೆರವಾಗುವ ರೀತಿಯಲ್ಲಿ ಹೆಚ್ಚುವರಿ ಮೆಮೊರಿ ಕಾರ್ಡ್ ಅಳವಡಿಸಿಕೊಳ್ಳುವ ಆಯ್ಕೆಯೂ ಇಲ್ಲ. ಆ್ಯಪ್‌ಗಳನ್ನು ಮೂವ್ ಮಾಡುವ ಪ್ರಶ್ನೆಯೇ ಇಲ್ಲ. ಇದು ತಮಾಷೆ ಎನಿಸಿದರೂ, ಈಗಿನ ಡಿಜಿಟಲ್ ಯುಗದ ಕಾರ್ಯಬಾಹುಳ್ಯದಲ್ಲಿ ಸ್ವನಿಯಂತ್ರಣಕ್ಕೆ ಸೂಕ್ತವೂ ಹೌದು.
ಇನ್ನು ಬ್ಯಾಟರಿ ಬಗೆಗೆ ಹೇಳುವುದಾದರೆ, ಐಫೋನ್ ಆಗಲೀ, ಆಂಡ್ರಾಯ್ಡ್ ಸ್ಮಾರ್ಟ್ ಸಾಧನವೇ ಆಗಲಿ; ವೈಫೈ ಜಾಸ್ತಿ ಬಳಸಿದರೆ ನಿಮ್ಮ ಬ್ಯಾಟರಿ ಖಂಡಿತಾ ಉಳಿತಾಯವಾಗುತ್ತದೆ. ಮೊಬೈಲ್ ಇಂಟರ್ನೆಟ್ ಬಳಸಿದರೆ ಬ್ಯಾಟರಿ ಬೇಗನೇ ಖಾಲಿಯಾಗುತ್ತದೆ.
ಕಾರ್ಯಾಚರಣೆಯ ಮಟ್ಟಿಗೆ ಹೇಳುವುದಾದರೆ, ಆ್ಯಪಲ್ ಐಫೋನ್‌ನಲ್ಲಿ ರ‍್ಯಾಮ್ (RAM) ಕಡಿಮೆ ಇದ್ದರೂ ಅತ್ಯಂತ ಸುಲಲಿತ ನ್ಯಾವಿಗೇಶನ್ ಸಾಧ್ಯವಾಗುತ್ತದೆ. ಆಂಡ್ರಾಯ್ಡ್‌ನಲ್ಲೀಗ ಆಗಾಗ್ಗೆ ಹ್ಯಾಂಗ್ ಆಗುತ್ತಿರುವ ಕಾರಣಕ್ಕಾಗಿ ಕನಿಷ್ಠ 2-3 ಜಿಬಿ ಸಾಮರ್ಥ್ಯದ RAM ಬೇಕಾಗುತ್ತದೆ.
ಈಗಲಂತೂ ಫಿಂಗರ್‌ಪ್ರಿಂಟ್ ಲಾಕ್, ಫೇಸ್‌ಲಾಕ್, ಅತ್ಯದ್ಭುತ ಕ್ಯಾಮೆರಾ, ವೇಗದ ಚಾರ್ಜಿಂಗ್, ಸ್ಟೈಲಿಶ್ ಫಿನಿಶಿಂಗ್… ಇವುಗಳೆಲ್ಲವೂ ಇರುವ ಆಂಡ್ರಾಯ್ಡ್ ಫೋನ್‌ಗಳೂ ಅಗ್ಗದ ದರದಲ್ಲಿ ಲಭ್ಯ ಇವೆ. ಆದರೆ, ಐಫೋನ್ ಒಂದಿಷ್ಟು ದುಬಾರಿ ಆದರೂ, ಗುಣಮಟ್ಟ, ಪ್ರತಿಷ್ಠೆ ಮತ್ತು ಸೆಕ್ಯುರಿಟಿಯ ವಿಷಯದಲ್ಲಿಯೂ ಮೇಲುಗೈ ಇದೆ. ಆಂಡ್ರಾಯ್ಡ್ ಅಭ್ಯಾಸವಿದ್ದವರಿಗೆ ಐಫೋನ್ ಕಾರ್ಯಾಚರಣೆಗೆ (ಯೂಸರ್ ಇಂಟರ್‌ಫೇಸ್) ಹೊಂದಿಕೊಳ್ಳಲು ಒಂದಿನಿತು ಕಷ್ಟವಾಗಬಹುದು. ಆದರೆ, ಐಫೋನ್ ಬಳಸಿದವರಿಗೆ ಆಂಡ್ರಾಯ್ಡ್ ಫೋನ್ ಕಾರ್ಯಾಚರಣೆ ತೀರಾ ಸುಲಭ.
ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. 09 ಅಕ್ಟೋಬರ್ 2017
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು