ಸೆಲ್ ಫೋನ್‌ಗಳು ಮಾರುಕಟ್ಟೆಗೆ ಬಂದಾಗ 1991ರಿಂದೀಚೆಗೆ ಸಬ್‌ಸ್ಕ್ರೈಬರ್ ಐಡೆಂಟಿಫಿಕೇಶನ್ ಮಾಡ್ಯೂಲ್ (ಸಿಮ್) ಕಾರ್ಡ್ ಎಂಬುದು ನಮಗೆ ಪರಿಚಯವಾಗಿತ್ತು. ತಂತ್ರಜ್ಞಾನ ಬೆಳೆಯುತ್ತಾ ಬಂದಂತೆ ಸಿಮ್ ಕಾರ್ಡ್ ಎಂಬ ಈ ಮೆಮೊರಿ ಚಿಪ್‌ನ ಗಾತ್ರವೂ ಕಿರಿದಾಗತೊಡಗಿ, ಪುಟ್ಟದಾದ ಮೈಕ್ರೋ ಸಿಮ್ ಬಂತು. ಆ ಬಳಿಕ ಹಗುರ ತೂಕದ, ತೆಳುವಾದ ಗಾತ್ರದ ಸ್ಮಾರ್ಟ್ ಫೋನ್‌ಗಳು ಬರತೊಡಗಿದಂತೆ, ಅದಕ್ಕೆ ಪೂರಕವಾಗಿ 2012ರಿಂದೀಚೆಗೆ ನ್ಯಾನೋ ಸಿಮ್ ಎಂಬ ತೀರಾ ಕಿರಿದಾದ ಗಾತ್ರದ ಸಿಮ್ ಕಾರ್ಡ್‌ಗಳು (ಬಹುತೇಕ ಸಾಧನಗಳಲ್ಲಿ) ಚಲಾವಣೆಯಲ್ಲಿವೆ. ಆದರೆ, ಎರಡು ವರ್ಷಗಳಿಂದೀಚೆಗೆ ಹೊಸ ಶಬ್ದ ಕೇಳುತ್ತಿದ್ದೇವೆ. ಅದುವೇ e-SIM ಅಥವಾ ಎಂಬೆಡೆಡ್ ಸಿಮ್. ಎಲೆಕ್ಟ್ರಾನಿಕ್ ಸಿಮ್ ಅಂತಲೂ ಕರೆಯಲಾಗುತ್ತದೆ. ಇದರ ಗಾತ್ರ ಎಷ್ಟರ ಮಟ್ಟಿಗೆ ಕಿರಿದಾಯಿತೆಂದರೆ, ಈ ತಂತ್ರಜ್ಞಾನವಿರುವ ಫೋನ್‌ಗಳಿಗೆ ಪ್ರತ್ಯೇಕವಾಗಿ ಸಿಮ್ ಕಾರ್ಡ್ ಹಾಕಲೇಬೇಕಾಗಿಲ್ಲ. ಇದು ಆಧುನಿಕ ಸ್ಮಾರ್ಟ್ ಫೋನ್‌ಗಳ ವಿನ್ಯಾಸದಲ್ಲಿಯೂ ಅತ್ಯಂತ ಮಹತ್ವದ ಪಾತ್ರ ವಹಿಸಿವೆ ಮತ್ತು ಸ್ಮಾರ್ಟ್ ವಾಚುಗಳ ಮೂಲಕವೇ ಫೋನ್ ಮಾಡುವುದಕ್ಕೆ ನೆರವು ನೀಡಿವೆ ಎಂಬುದು ಸುಳ್ಳಲ್ಲ.
ಏನಿದು ಇ-ಸಿಮ್?
ಎಂಬೆಡೆಡ್ ಸಿಮ್ ಎಂಬುದು ಪ್ರತ್ಯೇಕವಾದ ಕಾರ್ಡ್ ಅಲ್ಲ, ಬದಲಾಗಿ, ಸ್ಮಾರ್ಟ್ ಫೋನ್‌ನ ಒಳಗಿನ ತಂತುವ್ಯೂಹಗಳ (ಸರ್ಕಿಟ್ರಿ) ನಡುವೆ ಸೋಲ್ಡರ್ ಮಾಡಲಾದ ಒಂದು ಮೈಕ್ರೋಚಿಪ್. ಈ ಸಿಮ್‌ನಲ್ಲಿ ಕರೆ ಮಾಡುವ ನಂಬರನ್ನು ತಂತ್ರಾಂಶದ ಮೂಲಕ ಊಡಿಸಲಾಗುತ್ತದೆ. ಫೋನ್ ನಂಬರನ್ನು ಬದಲಿಸುವುದು ಅಥವಾ ಫೋನ್ ಸೇವೆ ನೀಡುವ ಕ್ಯಾರಿಯರ್ (ನೆಟ್‌ವರ್ಕ್ ಸೇವಾದಾತರನ್ನು) ಬದಲಿಸುವುದು ಕೂಡ ಈ ಸಾಫ್ಟ್‌ವೇರ್ ಮೂಲಕವೇ – ಒಂದು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಸಾಕಾಗುತ್ತದೆ. ಇದಕ್ಕೆ ಪ್ರತ್ಯೇಕ ಸ್ಲಾಟ್‌ನ ಚಿಂತೆ ಇಲ್ಲ. ಸುಲಭವಾಗಿ ಹೇಳುವುದಾದರೆ, ಒಂದು ಮೆಮೊರಿ ಕಾರ್ಡ್‌ನ ಹಳೆಯ ಮಾಹಿತಿಯನ್ನು ಅಳಿಸಿ ಹೊಸ ಫೈಲ್‌ಗಳನ್ನು ಸೇವ್ ಮಾಡಿದಷ್ಟೇ ಸುಲಭವಾಗಿ ನೀವು ಮೊಬೈಲ್ ನಂಬರ್ ಮತ್ತು ಮೊಬೈಲ್ ಸೇವಾದಾತರನ್ನು ಬದಲಾಯಿಸಬಹುದು. ಆದರೆ ಈ ಸಿಮ್ ಅನ್ನು ಹೊರಗೆ ತೆಗೆಯುವಂತಿಲ್ಲ, ಹೀಗಾಗಿ ಪದೇ ಪದೇ ಫೋನ್ ಬದಲಾಯಿಸುತ್ತಿರುವವರಿಗೆ ಈ ಸೌಕರ್ಯ ಕೊಂಚ ಸಮಸ್ಯೆಯಾದೀತು.
ಯಾರು ಬಳಸಬಹುದು?
ನಮ್ಮ ದೇಶದಲ್ಲಿ ಪ್ರಸ್ತುತ ಇ-ಸಿಮ್ ಬೆಂಬಲ ಇರುವುದು ಆ್ಯಪಲ್‌ನ ಇತ್ತೀಚಿನ ಐಫೋನ್‌ಗಳು, ಗೂಗಲ್‌ನ ಪಿಕ್ಸೆಲ್ 2, ಸ್ಯಾಮ್ಸಂಗ್‌ನ ಕೆಲವು ಮೊಬೈಲ್ ಸಾಧನಗಳು ಹಾಗೂ ಮೋಟೋರೋಲಾ ರೇಝರ್ – ಈ ಆಂಡ್ರಾಯ್ಡ್ ಫೋನ್‌ಗಳಲ್ಲಿ ಮಾತ್ರ. ಅದೇ ರೀತಿ, ಪ್ರಸ್ತುತ ಭಾರತದಲ್ಲಿ ಇ-ಸಿಮ್ ಸೌಕರ್ಯಕ್ಕೆ ಪೂರಕವಾದ ತಂತ್ರಜ್ಞಾನವನ್ನು ಅಳವಡಿಸಿ ಸೇವೆ ನೀಡುತ್ತಿರುವುದು ಏರ್‌ಟೆಲ್ ಹಾಗೂ ರಿಲಯನ್ಸ್ ಜಿಯೋ ಮಾತ್ರ ಮತ್ತು ಅವು ಸದ್ಯಕ್ಕೆ ಆ್ಯಪಲ್ ಸಾಧನಗಳಿಗೆ ಸೀಮಿತ. ಈಗ ಹೆಚ್ಚಿನವರಲ್ಲಿ ಎರಡೆರಡು ಫೋನ್ ನಂಬರ್‌ಗಳು (ಸಿಮ್) ಇರುವುದರಿಂದ, ಒಂದು ಇ-ಸಿಮ್ ಬಳಸಿ, ಮತ್ತೊಂದು ನ್ಯಾನೋ ಸಿಮ್ ಅಳವಡಿಸಬಹುದು. ಇ-ಸಿಮ್ ಕಾರಣದಿಂದಾಗಿಯೇ ಆ್ಯಪಲ್ ಐಫೋನ್ ಬಳಕೆದಾರರಿಗೆ ಡ್ಯುಯಲ್ ಸಿಮ್ ಕನಸೊಂದು ಈಡೇರಿದಂತಾಗಿದೆ. ಆಧುನಿಕ ಸ್ಮಾರ್ಟ್ ವಾಚ್‌ಗಳಲ್ಲಿ ಕೂಡ ಇ-ಸಿಮ್ ಬೆಂಬಲ ಇರುವುದರಿಂದ, ವಾಚ್ ಮೂಲಕವೇ ಕರೆ ಮಾಡುವ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ. ಅದೇ ರೀತಿ, ಎರಡು ಸಿಮ್ ಸ್ಲಾಟ್, ಮತ್ತೊಂದು ಮೆಮೊರಿ ಕಾರ್ಡ್ ಸ್ಲಾಟ್ ಎಂಬ ರಗಳೆ ಇರುವುದಿಲ್ಲ. ಇ-ಸಿಮ್ ಇರುವುದರಿಂದ ಡ್ಯುಯಲ್ ಸಿಮ್ ಫೋನ್‌ಗಳಲ್ಲಿ ಒಂದೇ ಒಂದು ನ್ಯಾನೋ ಸಿಮ್ ಸ್ಲಾಟ್ ಸಾಕು. ಫೋನ್ ಸ್ಲಿಮ್ ಆಗಿಸಲು ಈ ಸೌಕರ್ಯ ಪೂರಕ.
ಯಾವೆಲ್ಲ ಮಾಡೆಲ್‌ಗಳಲ್ಲಿ ಲಭ್ಯ?
ಆ್ಯಪಲ್‌ನ ಐಫೋನ್ XS, XS ಮ್ಯಾಕ್ಸ್ ಹಾಗೂ XR ಹಾಗೂ ಇತ್ತೀಚೆಗೆ ಬಿಡುಗಡೆಯಾದ XE ಮಾದರಿಯ ಫೋನ್‌ಗಳಲ್ಲಿ, ಹೊಸ 11-ಇಂಚು ಹಾಗೂ 12.9-ಇಂಚಿನ ಐಪ್ಯಾಡ್ ಪ್ರೋ ಟ್ಯಾಬ್ಲೆಟ್‌ಗಳಲ್ಲಿ, 3 ಹಾಗೂ 4ನೇ ಸರಣಿಯ ಆ್ಯಪಲ್ ವಾಚ್‌ಗಳಲ್ಲಿ, ಸ್ಯಾಮ್‌ಸಂಗ್‌ನ ಗೇರ್ ಎಸ್2 ಹಾಗೂ ಗೇರ್ ಎಸ್3 ವಾಚ್‌ಗಳಲ್ಲಿ ಹಾಗೂ ಗೂಗಲ್ ಪಿಕ್ಸೆಲ್ 2 ಮತ್ತು 2 ಎಕ್ಸ್ಎಲ್ ಸಾಧನಗಳಲ್ಲಿ ಇ-ಸಿಮ್ ಬೆಂಬಲ ಇದೆ.
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.