ಚುನಾವಣೆ ಬಂತೆಂದರೆ ಮತದಾರರಿಗೆ ಬಿಟ್ಟಿ ಮನರಂಜನೆ. ಅವರಿವರ ಹೇಳಿಕೆಗಳನ್ನು ಕೇಳಿಸಿಕೊಳ್ಳೋದು… ಮನತುಂಬಿ ನಗೋದು. ಹಹ್ಹ… ಏನ್ ನಗಿಸ್ತಾರಪ್ಪಾ ಈ ರಾಜಕಾರಣಿಗಳು! ಅಷ್ಟೇ ಅಲ್ಲ, ಗೋಳೋ ಅಂತ ಅಳಲೂ ಗೊತ್ತಿದೆ ಅವರಿಗೆ. ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಆಗಲಿಲ್ಲ ಅಂತ ಯಾರಾದರೂ ಅತ್ತದ್ದನ್ನು ಕೇಳಿದ್ದೀರಾ ಅಥವಾ ನೋಡಿದ್ದೀರಾ?
ಚುನಾವಣೆ ಘೋಷಣೆಯಾದಂದಿನಿಂದ ಇದುವರೆಗೆ… ರಾಜಕಾರಣಿಗಳ ಬಾಯಲ್ಲಿ ಎಂಥೆಂಥಾ ಮಂತ್ರಗಳನ್ನು ಕೇಳಿದ್ದೇವೆ ನೋಡಿ. ಶಾಸಕನಾಗಿ ಆಯ್ಕೆಯಾದ ಬಳಿಕ ಅಪ್ಪಿ ತಪ್ಪಿಯೂ ಮಾಡದ ಎಲ್ಲಾ ಕೆಲಸಗಳೂ ಚುನಾವಣೆ ಸಂದರ್ಭ ಈ ರಾಜಕಾರಣಿಗಳಿಗೆ ಬುದ್ಧನಿಗೆ ಜ್ಞಾನೋದಯವಾದಂತೆಯೋ, ಅಥವಾ ಆರ್ಕಿಮಿಡಿಸನಿಗೆ ಸಾಪೇಕ್ಷ ಸಾಂದ್ರತೆಯ ಸಿದ್ಧಾಂತ ಪಕ್ಕನೆ ಹೊಳೆದಂತೆಯೋ ಅರಿವಿಗೆ ಬರುತ್ತದೆ.
ಬಣ್ಣ ಬಣ್ಣದ ಬಲೂನುಗಳು ತುಂಬಿರುವ ಚುನಾವಣಾ ಪ್ರಣಾಳಿಕೆಗಳನ್ನು ನೋಡಿದ್ದೀರಲ್ಲ? ಅವುಗಳೀಗಾಗಲೇ ಕರುನಾಡಿನ ಚುನಾವಣಾ ಬಾನಂಗಳದಲ್ಲಿ ಒಂದಕ್ಕಿಂತ ಒಂದು ಮಿಗಿಲೋ ಎಂಬಂತೆ ಎತ್ತರೆತ್ತರಕ್ಕೆ ಹಾರಾಡುತ್ತಿವೆ. ಬಹುಶಃ ಚುನಾವಣೆಗಳು ಮುಗಿಯುವ ಹೊತ್ತಿಗೆ ಖಂಡಿತವಾಗಿಯೂ ಅವುಗಳು ಕರುನಾಡಿನ ಬಡ ಪ್ರಜೆಗಳ ಕಣ್ಣಿಗೂ ಕಾಣದಷ್ಟು ಬಾನೆತ್ತರಕ್ಕೆ ಹೋಗಿಬಿಟ್ಟಿರುತ್ತವೆ!
ಹೌದು… ಒಂದೊಂದು ಭರವಸೆಯ ಬುಟ್ಟಿಯನ್ನೂ ನೋಡಿರಂತೆ… 2 ರೂಪಾಯಿಗೆ ಕಿಲೋ ಅಕ್ಕಿಯೇನು, ವಿದ್ಯುತ್ ಕಂಪನಿಗಳಿಗೆ ಜನತೆ ಹಿಡಿಶಾಪ ಹಾಕುವ ಪ್ರಕ್ರಿಯೆ ಓಬೀರಾಯನ ಕಾಲದಿಂದಲೂ ಮುಂದುವರಿದಿದ್ದರೂ ಉಚಿತ ಮತ್ತು ನಿರಂತರ ವಿದ್ಯುತ್ತು, ಸಾಲ ಮನ್ನಾವೇನು (ಮಾಡಿಯಾರು.. ಯಾಕಂದ್ರೆ ಗಣಿ ಧಣಿಗಳು, ರಿಯಲ್ ಎಸ್ಟೇಟ್ ದೊರೆಗಳು, ಕ್ರಿಮಿನಲ್ ಹಿನ್ನೆಲೆಯವರೆಲ್ಲ ಕಣದಲ್ಲಿದ್ದಾರಲ್ಲ)… ಕಲರ್ ಟೀವಿ… ಇವೆಲ್ಲಕ್ಕೂ ಕಳಶವಿಟ್ಟಂತೆ ಸಾರಾಯಿ ಕುಡಿಸುತ್ತೇವೆ ಎಂಬ ಮೊಯಿಲಿ ಭರವಸೆ… ಅಬ್ಬಬ್ಬಬ್ಬಾ… ಇವೆಲ್ಲವೂ ಜಾರಿಗೆ ಬಂದರೆ ರಾಜ್ಯದ ಜನತೆಗೆ ಈ ಲೋಕದಲ್ಲಿರುವುದೇ ಭಾಸವಾಗದು. ಖಂಡಿತವಾಗಿಯೂ ಸ್ವರ್ಗಕ್ಕೆ ಲೆಕ್ಕ ಹಾಕಿದರೆ ಮೂರೇ ಮೂರು ಗೇಣು!
ಪ್ರಣಾಳಿಕೆಗಳನ್ನಂತೂ ಖಂಡಿತವಾಗಿಯೂ ಓದಿದ್ದೀರಿ. ಅವುಗಳಿಗೆ ಮೀಸಲಾದ ದೊಡ್ಡ ದೊಡ್ಡ ಹೊರಲಾರದ ಮಣಭಾರದ ಪುಸ್ತಕವೇ ಇದೆ. ಈಗ ಚುನಾವಣೆಯೆಂಬ ಕೆಸರಿನಂಗಳದಲ್ಲಿ ಪರಸ್ಪರರ ವಿರುದ್ಧ ಕೆಸರೆರಚಾಡುತ್ತಾ ಇರುವ ಪಕ್ಷಗಳ ಬಗ್ಗೆಯೂ ಒಂದಷ್ಟು ನೋಡಿ.
ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದು ನೆನಪಿದೆ ತಾನೇ? ಜೆಡಿಎಸ್ ಬೆಂಬಲವಿಲ್ಲದೆ ಅದು ಹೇಗೆ ಯಾರು ಸರಕಾರ ರಚಿಸ್ತಾರೋ ನೋಡ್ತೀನಿ ಅಂದಿದ್ದರವರು. ಬಹುಮತ ಪಡೆಯುವ ಬಗ್ಗೆ ಜೆಡಿಎಸ್‌ಗೇ ವಿಶ್ವಾಸವಿಲ್ಲ, ಅದರ ಪ್ರತೀಕವೇ ಈ ಹೇಳಿಕೆ ಅಂತ ಪ್ರತಿಪಕ್ಷಗಳ ಮುಖಂಡರು ಟೀಕಿಸಿದ್ದರು. ಅದಿರಲಿ.
ಮೊನ್ನೆ ಮೊನ್ನೆ ಆಡ್ವಾಣಿ ಕರ್ನಾಟಕಕ್ಕೆ ಬಂದರಲ್ಲ, ಅವರು ಹೇಳಿದ್ದೇನು? ಬೇಕಾದರೆ ಪ್ರತಿಪಕ್ಷ ಸ್ಥಾನದಲ್ಲೇ ಕೂರುತ್ತೇವೆ, ಆದರೆ ಜೆಡಿಎಸ್ ಜತೆಗೆ ಮತ್ತೆ ಚುನಾವಣೋತ್ತರ ಮೈತ್ರಿಯೇ ಇಲ್ಲ ಅಂತ ಖಡಾಖಂಡಿತವಾಗಿ ಹೇಳಿದರು. ಅಲ್ಲಿಗೆ ಬಿಜೆಪಿಗೂ ಬಹುಮತದ ಬಗೆಗೆ ವಿಶ್ವಾಸ ಹೊರಟು ಹೋದಂತಾಯಿತು ಎಂದು ಅದರ ಎದುರು ಪಕ್ಷಗಳು ಹೇಳಬಹುದು.
ಈಗ ಮುಖವುಳಿಸಿಕೊಳ್ಳಬೇಕಲ್ಲ, ಜೆಡಿಎಸ್ ಕೂಡ ಎಚ್ಚೆತ್ತುಕೊಂಡಿತು. ನಮ್ಮ ಮೈತ್ರಿ ಇಲ್ಲದೆ ಅದು ಹೇಗೆ ಬೇರೆಯವರು ಸರಕಾರ ರಚಿಸುತ್ತಾರೆ ನೋಡ್ತೀವಿ ಅಂತ ಹೇಳಿದವರೇ, ಚುನಾವಣೆ ಮುಗಿದ ಬಳಿಕ ಯಾವುದೇ ಪಕ್ಷದೊಂದಿಗೆ ನಾವು ಕೂಡ ಮೈತ್ರಿ ಮಾಡಿಕೊಳ್ಳುವುದಿಲ್ಲ ಅಂತ ಘೋಷಿಸಿದ್ದಾರೆ. ಇದಕ್ಕೆ ದೇವೇಗೌಡರು ನೀಡಿರುವ ಕಾರಣವೂ ಕೇಳಲು ತುಂಬಾ ಸಿಹಿಯಾಗಿದೆ: ‘ಧರಂ ಸರಕಾರಕ್ಕೆ ಬೆಂಬಲ ನೀಡಿ ಮತ್ತು ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೊಂಡು ಸಾಕಷ್ಟು ಅನುಭವಿಸಿದ್ದೇವೆ, ಅದು ಪುನರಾವರ್ತನೆಯಾಗಬಾರದು’ ಅಂತ. ಸಂದರ್ಭ: ಪಕ್ಷದ ಪ್ರಣಾಳಿಕೆ ಬಿಡುಗಡೆ ಸಂದರ್ಭ.
ಬಹುಶಃ ಕಾಂಗ್ರೆಸಿನಿಂದಲೂ ಇಂಥದ್ದೊಂದು ‘ಚುನಾವಣೆ ಬಳಿಕ ಯಾರೊಂದಿಗೂ ಮಿತ್ರತ್ವ ಇಲ್ಲ’ ಎಂಬೋ ಹೇಳಿಕೆ ಶೀಘ್ರದಲ್ಲೇ ಬರಬಹುದು. ಇದು ರಾಜಕೀಯ. ಪಕ್ಷ ನಿಷ್ಠೆ, ಜನಸೇವೆ, ತತ್ವ, ಸಿದ್ಧಾಂತ ಇತ್ಯಾದಿ ರಾಜಕೀಯವಾಗಿ ‘ಗೌಣ’ವಾಗಿರುವ ಪದಗಳೆಲ್ಲವೂ ಇಲ್ಲಿ ಟ್ವೆಂಟಿ-20 ಕ್ರಿಕೆಟಿನಲ್ಲಿ ಬೌಂಡರಿ, ಸಿಕ್ಸರ್ ಸಿಡಿದಂತೆ ಬೌಂಡರಿ ಗೆರೆಯಿಂದ ಸಿಡಿಯುತ್ತಲೇ ಇರುತ್ತವೆ.
ಮತದಾರ ಇಂಥ ಅದೆಷ್ಟೋ ಮಾತುಗಳನ್ನು ಕೇಳಿಸಿಕೊಂಡಿದ್ದಾನೆ. ಅಂತೂ ಚುನಾವಣೆ ಬಂತೆಂದರೆ ಮತದಾರರಿಗೆ ಬಿಟ್ಟಿ ಮನರಂಜನೆ. ಅವರಿವರ ಹೇಳಿಕೆಗಳನ್ನು ಕೇಳಿಸಿಕೊಳ್ಳೋದು… ಮನತುಂಬಿ ನಗೋದು. ಹಹ್ಹ… ಏನ್ ನಗಿಸ್ತಾರಪ್ಪಾ ಈ ರಾಜಕಾರಣಿಗಳು! ಅಷ್ಟೇ ಅಲ್ಲ, ಗೋಳೋ ಅಂತ ಅಳಲೂ ಗೊತ್ತಿದೆ ಅವರಿಗೆ. ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಆಗಲಿಲ್ಲ ಅಂತ ಯಾರಾದರೂ ಅತ್ತದ್ದನ್ನು ಕೇಳಿದ್ದೀರಾ ಅಥವಾ ನೋಡಿದ್ದೀರಾ? ಹಾಗಿದ್ರೆ ಇವರ ಅಳುವಿನ ಹಿಂದಿರುವ ಮರ್ಮವೇನೆಂಬುದು ಅರ್ಥವಾದೀತು.
ಚುನಾವಣಾ ಫಲಿತಾಂಶಗಳು ಮತ್ತೊಂದು ಅತಂತ್ರ ವಿಧಾನಸಭೆಯನ್ನು ಸೃಷ್ಟಿಸುವುದು ಹೆಚ್ಚಿನ ಸಮೀಕ್ಷೆಗಳಲ್ಲಿ ವ್ಯಕ್ತವಾಗಿದೆ. ಅದು ಹಾಗಾದರೆ, ಓಟಿಗಾಗಿ ಕೋಟಿ ಕೋಟಿ ಖರ್ಚು ಮಾಡಿ ಅಧಿಕಾರ ಸಿಗದವರು ಸುಮ್ಮನಿರುತ್ತಾರೆಯೇ? ಅಥವಾ ಹೇಗಾದರೂ ಮಾಡಿ ಸರಕಾರವೊಂದನ್ನು ಸ್ಥಾಪಿಸದಿರಲು ಅವರೇನು ಪೆದ್ದರೇ? ಖಂಡಿತಾ ಅಲ್ಲ. ಮತ್ತೆ ಮೈತ್ರಿಗೆ ಮುಂದಾಗುತ್ತಾರೆ. ‘ಜನತೆಯ ಮೇಲೆ ಚುನಾವಣೆ ಹೇರಲು ನಮಗೆ ಇಷ್ಟವಿಲ್ಲ, ಅದಕ್ಕೆ ಈ ಮೈತ್ರಿ ಅನಿವಾರ್ಯ’ ಎಂಬ ರಾಜಕೀಯ ಕ್ಷೇತ್ರದಲ್ಲಿ ಹಳಸಿಹೋದ ವಾಕ್ಯವೊಂದು ಪ್ರತಿಯೊಬ್ಬರ ಬಾಯಲ್ಲೂ ಕೇಳಿಬರುತ್ತದೆ. ಇದು ವ್ಯವಸ್ಥೆಯ ವ್ಯಂಗ್ಯ.
ಈಗಾಗಲೇ ಕರುನಾಡಿನಲ್ಲಿ ನಡೆದ ನಾಟಕಗಳನ್ನೆಲ್ಲಾ ಮತದಾರ ಗಮನವಿಟ್ಟು ನೋಡಿ ಮನರಂಜನೆ ಅನುಭವಿಸಿದ್ದಾನೆ. ಮತದಾರ ಎಚ್ಚೆತ್ತಿದ್ದಾನೆ. ಓಟು ಕೊಡಲು ಸಿದ್ಧನಾಗಿದ್ದಾನೆ. ಮತದಾರರೇ ಎರಡೆರಡು ಬಾರಿ ಯೋಚಿಸಿ ನಿಮ್ಮ ಹಕ್ಕು ಚಲಾಯಿಸಿ. ಅಸಮರ್ಥರನ್ನು ಆರಿಸಿದರೆ ನಿಮ್ಮ ಹಕ್ಕು ನಷ್ಟವಾದಂತೆಯೇ ಸರಿ.
ಅದು ಹೌದು, ಯೋಗ್ಯರನ್ನು ಆರಿಸಲು ಎಲ್ಲಿ ಹೋಗುವುದು ಎಂಬ ಬಗ್ಗೆ ಯೋಚಿಸುತ್ತಿದ್ದೀರಾ? ಇದ್ದುದರಲ್ಲೇ ತೃಪ್ತಿಪಟ್ಟುಕೊಳ್ಳಬೇಕಷ್ಟೇ. ಅಂದರೆ ಇದ್ದುದರಲ್ಲಿ ಯೋಗ್ಯರಿಗೆ ಮತ ಚಲಾಯಿಸಬೇಕಷ್ಟೆ. ಅದು ನಮ್ಮ ಹಣೆಬರಹವೂ ಹೌದು, ಯಾರು ಬೇಕಾದರೂ ಓಟಿಗೆ ನಿಲ್ಲಬಹುದು ಎಂಬ ಉದಾರತೆಯ ಪ್ರಜಾಪ್ರಭುತ್ವ ವ್ಯವಸ್ಥೆಯ ವ್ಯಂಗ್ಯವೂ ಹೌದು.
ಪ್ರಬುದ್ಧ ಮನಸ್ಸಿನ, ಅಭಿವೃದ್ಧಿ ಮಂತ್ರ ಜಪಿಸುವ, ಜನರ ಬಗ್ಗೆ ನೈಜ ಕಾಳಜಿ ಇರುವ ಸರಕಾರವೊಂದು ಬರಲಿ ಎಂಬುದು ನಮ್ಮೆಲ್ಲರ ಆಶಯ.
iPhone 16e joins the iPhone 16 lineup, featuring the fast performance of the A18 chip,…
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…