ದೇಶದ ವಿವಿಧೆಡೆ ಆಗಾಗ್ಗೆ ಬಾಂಬ್ ಸ್ಫೋಟ ನಡೆಯುತ್ತಿದ್ದರೂ, ಕೇವಲ ಕೆಸರೆರಚಾಟ, ಎದುರಾಳಿ ಪಕ್ಷದವರನ್ನು ಮಟ್ಟ ಹಾಕುವ ಪ್ರಯತ್ನದಲ್ಲೇ ತೊಡಗಿ ಕರ್ತವ್ಯ ಮರೆತ ಸರಕಾರದ ಬಗ್ಗೆ ಹೇಸಿಗೆಯೆನಿಸುತ್ತಿದೆ. ದೇಶ ಎದುರಿಸುತ್ತಿರುವ ಈ ಆತಂಕಕಾರಿ ಪರಿಸ್ಥಿತಿಯಲ್ಲೂ ರಾಜಕೀಯ ಒಮ್ಮತ ತೋರದೆ, ದೂಷಣೆಯಲ್ಲೇ, ಭರವಸೆಗಳಲ್ಲೇ ಕಾಲ ಕಳೆಯುವವರನ್ನು ನೋಡಿದಾಗ ಛೀ ಥೂ ಅನ್ನಿಸಿಬಿಡುತ್ತದೆ.
ಮುಂಬಯಿಯ ಟ್ರೈಡೆಂಟ್ ಒಬೆರಾಯ್, ತಾಜ್ ಹೋಟೆಲ್ ಹಾಗೂ ನಾರಿಮನ್ ಹೌಸ್‌ಗಳಲ್ಲಿ ನುಸುಳಿದ ಉಗ್ರರನ್ನು ದಮನಿಸಲು ನಮ್ಮೆಲ್ಲಾ ಭದ್ರತಾ ಪಡೆಗಳು ಪ್ರಾಣದ ಹಂಗು ತೊರೆದು ಹೋರಾಡುತ್ತಿದ್ದರೆ, ಇತ್ತ ರಾಜಕಾರಣಿಗಳು ಮಾತಿನ ಹೇಸಿಗೆಯನ್ನು ಪರಸ್ಪರರ ಮೇಲೆ ಎಸೆದುಕೊಂಡು ತಮ್ಮ ಕರ್ತವ್ಯದಿಂದ ವಿಮುಖರಾಗಲು ಪ್ರಯತ್ನಿಸುತ್ತಿರುವುದು ತೀರಾ ಶೋಚನೀಯ.
ರಾಜಕಾರಣಕ್ಕೆ ಇಳಿಯುವವರೆಲ್ಲರೂ ಅಪ್ರಯೋಜಕರು, ಬರೇ ಓಟು ಬ್ಯಾಂಕು ರಾಜಕಾರಣವೊಂದೇ ಅವರಿಗೆ ಗೊತ್ತಿರುವುದು ಎಂಬುದು ಮತ್ತೆ ಸಾಬೀತಾಗಿದೆ. ಯೋಧರಿರುವುದೇ ದೇಶ ಕಾಯಲು, ಅವರು ಅವರ ಕರ್ತವ್ಯ ಮಾಡುತ್ತಾರೆ ಎಂದು ಸುಖಾಸುಮ್ಮನೆ ಕೈತೊಳೆದುಕೊಂಡು ಬೂಟು-ಸೂಟು ಹಾಕಿ ಮಾಧ್ಯಮಗಳಿಗೆ ಮುಖ ತೋರಿಸಿ, “ನಾವು ಈ ಕೃತ್ಯವನ್ನು ಖಂಡಿಸುತ್ತೇವೆ, ಉಗ್ರರ ವಿರುದ್ಧ ಅತ್ಯುಗ್ರ ಕ್ರಮ ಕೈಗೊಳ್ಳುತ್ತೇವೆ. ಭಯೋತ್ಪಾದನೆ ದಮನವೇ ನಮ್ಮ ಗುರಿ” ಎಂಬಿತ್ಯಾದಿಯಾಗಿ ಪುಂಖಾನುಪುಂಖವಾಗಿ ಬೊಗಳೆ ಬಿಡುವುದನ್ನು ಕೇಳಿ ಕೇಳಿ ದೇಶದ ಪ್ರಜೆಗಳಿಗೆ ಸಾಕಾಗಿ ಹೋಗಿದೆ.
ಭಯೋತ್ಪಾದಕ ಚಟುವಟಿಕೆಗಳಲ್ಲಿ ಪಾಕಿಸ್ತಾನೀ ಮೂಲದ ಉಗ್ರರ ಕೈವಾಡಗಳು ಹಲವು ಸಂದರ್ಭಗಳಲ್ಲಿ ಸಾಬೀತಾಗಿದ್ದರೂ, ನಮ್ಮ ಪ್ರಧಾನಿಗೆ ಈ ವಿಷಯವನ್ನು ಪಾಕಿಸ್ತಾನಿ ಆಡಳಿತದ ಮುಖ್ಯಸ್ಥರೊಂದಿಗೆ ಎತ್ತಲು ಹಿಂಜರಿಕೆ. ‘ಪಾಕಿಸ್ತಾನವೂ ಭಾರತದಷ್ಟೇ ಭಯೋತ್ಪಾದನೆ-ಪೀಡಿತ ರಾಷ್ಟ್ರ’ ಎಂದಷ್ಟೇ ಹೇಳಿ ಅವರು ಮರಳಿಬರುತ್ತಾರೆ.
2006ರಲ್ಲಿ 11/7 ಮುಂಬಯಿ ರೈಲಿನಲ್ಲಿ ಸರಣಿ ಸ್ಫೋಟ ಸಂಭವಿಸಿದ ಎರಡೇ ತಿಂಗಳಲ್ಲಿ, ಅಂದಿನ ಪಾಕ್ ಸರ್ವಾಧಿಕಾರಿ ಜನರಲ್ ಪರ್ವೇಜ್ ಮುಷರಫ್ ಜತೆಗಿನ ಭೇಟಿ ಸಂದರ್ಭ ಪ್ರಧಾನಿ ಮನಮೋಹನ್ ಸಿಂಗ್ ಮಾಡಿದ್ದೂ ಇದನ್ನೇ. ಬಳಿಕ ಕೆಲವೇ ತಿಂಗಳಲ್ಲಿ ‘ಪಾಕಿಸ್ತಾನದೊಂದಿಗಿನ ಶಾಂತಿ ಮಾತುಕತೆಯೇ ಅಲುಗಾಡುತ್ತಿದೆ’ ಎಂದು ಹಲುಬುತ್ತಾರೆ. ಮೊನ್ನೆ ನವೆಂಬರ್ 26ರ ಮುಂಬಯಿ ಘಟನೆ ಬಳಿಕವೂ ಅವರು ಹೇಳಿದ್ದಾರೆ ‘ಪಾಕಿಸ್ತಾನದೊಂದಿಗೆ ಕಟುವಾಗಿ ಇದನ್ನು ಪ್ರಸ್ತಾಪಿಸುವೆ. ಪಾಕ್ ನೆಲವನ್ನು ಭಯೋತ್ಪಾದಕರು ಭಾರತದಲ್ಲಿನ ವಿಧ್ವಂಸಕ ಕೃತ್ಯಗಳಿಗೆ ಬಳಸಿಕೊಳ್ಳದಂತೆ ಒತ್ತಡ ಹೇರುವೆ’.
ಇಂಥ ಮಾತುಗಳ ಮೇಲೆ ಜನರಿಗೆ ನಂಬಿಕೆ ಹೊರಟುಹೋಗಿದೆ. ಪಾಕ್ ಮೂಲದಿಂದ ಬರಬಹುದಾದ ಯಾವುದೇ ಭಯೋತ್ಪಾದಕ ಬೆದರಿಕೆಗಳನ್ನು ಮೂಲಬೇರು ಸಹಿತ ಕಿತ್ತು ಹಾಕುವ ಇಚ್ಛಾಶಕ್ತಿಯನ್ನು ಆಳುವವರು ತೋರುತ್ತಿಲ್ಲ. ಇನ್ನು ಕೇಂದ್ರ ಗೃಹ ಸಚಿವರ ಬಗ್ಗೆ ಹೇಳದಿರುವುದೇ ಲೇಸು.
ಶಿವಸೇನಾ ಮುಖವಾಣಿ ‘ಸಾಮ್ನಾ’ ಎತ್ತಿರುವ ಪ್ರಶ್ನೆಯೂ ಇಲ್ಲಿ ಉಲ್ಲೇಖಾರ್ಹ. ಚುನಾವಣೆ ಹತ್ತಿರವಾಗಿದೆ, ಪ್ರತಿಪಕ್ಷದವರನ್ನು ಹೇಗಾದರೂ ತುಳಿಯಬೇಕೆಂಬ ಏಕೈಕ ಉದ್ದೇಶದಿಂದ ಮಾಲೆಗಾಂವ್ ಸ್ಫೋಟ ಪ್ರಕರಣದ ಹಿಂದೆ ಬೀಳುತ್ತಾ, ಭದ್ರತಾ ಪಡೆಗಳನ್ನು ಕೂಡ ಅದರ ಹಿಂದೆ ಹೋಗುವಂತೆ ಮಾಡಿರುವ ದ್ವೇಷಸಾಧನೆ ರಾಜಕೀಯವಿದೆಯಲ್ಲ… ಅದನ್ನು ಮಾಡಿದರೆ ಏನಾಗುತ್ತದೆ ಎಂಬುದಕ್ಕೆ ತಕ್ಕ ಉದಾಹರಣೆಯಾಗಿ ನಿಂತಿದೆ ಮುಂಬಯಿಯ ಈ ಪ್ರಕರಣ. ಅದೇ ಉತ್ಸುಕತೆಯನ್ನು ಈ ಸರಕಾರ ಇತರೆಲ್ಲಾ ಭಯೋತ್ಪಾದಕ ಸ್ಫೋಟಗಳ ತನಿಖೆಯತ್ತ ತೋರಿದ್ದರೆ ಮುಂಬಯಿಯಲ್ಲಿ ಮತ್ತೊಮ್ಮೆ ಇಂಥ ಘಟನೆ ನಡೆಯುತ್ತಿರಲಿಲ್ಲವೇನೋ ಎಂಬ ಜನಸಾಮಾನ್ಯರ ನಂಬಿಕೆಯಲ್ಲಿ ನಿಜವಿಲ್ಲದಿಲ್ಲ. ಅದನ್ನೇ ಸಾಮ್ನಾ ಎತ್ತಿ ತೋರಿಸಿದ್ದು. ತನಿಖಾ ತಂಡಗಳನ್ನು ಮಾಲೆಗಾಂವ್ ಪ್ರಕರಣದ ಹಿಂದೆಯೇ ಬಿಟ್ಟ ಕಾರಣ, ಉಳಿದ ಕಡೆ ಏನೇನಾಗುತ್ತದೆ ಎಂಬುದನ್ನು ತಿಳಿಯಲು ಗುಪ್ತಚರ ವಿಭಾಗಕ್ಕೆ ಪುರುಸೊತ್ತಿರಲಿಲ್ಲ. ಇದನ್ನು ನಂಬದಿರುವುದಾದರೂ ಹೇಗೆ?
ನಾಲಿಗೆಗೆ ಎಲುಬಿಲ್ಲ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಕಟುವಾಗಿ ಖಂಡಿಸುತ್ತೇವೆ, ಉಗ್ರವಾದ ಮಟ್ಟ ಹಾಕುತ್ತೇವೆ ಎಂಬ ಮಾತುಗಳೆಲ್ಲವೂ ಹಳಸಲಾಗಿದೆ. ದೇಶವಾಳುವವರ ಬಾಯಲ್ಲಿ ಮಾತು ಪ್ರವಾಹದೋಪಾದಿಯಲ್ಲಿ ಹರಿಯುತ್ತದೆಯೇ ಹೊರತು ಅದು ಕೃತಿಗೆ ಇಳಿಯುತ್ತಿಲ್ಲ. ಯಾಕೆಂದರೆ, ನಮಗೆ ಓಟು ಬೇಕು. ದೇಶವನ್ನು ಕಾಡುತ್ತಿರುವ ಅತಿಮುಖ್ಯ ಸಮಸ್ಯೆ ಭಯೋತ್ಪಾದನೆ ಎಂಬ ವಿರೋಧ ಪಕ್ಷಗಳ ಬೊಬ್ಬೆಯನ್ನು ಅಡಗಿಸಬೇಕು, ಈ ಮೂಲಕ ನಮ್ಮ ವೈಫಲ್ಯ ಮುಚ್ಚಿಡಬೇಕು ಎಂಬುದು ನಮಗೆ ಮನದಟ್ಟಾಗಿ ಹೋಗಿದೆ. ಬೆಲೆ ಎಷ್ಟೇ ವಿಪರೀತಕ್ಕೇರಲಿ, ಜನರು ಹೇಗಾದರೂ ಬದುಕುತ್ತಾರೆ. ಇನ್ನು ಉಗ್ರಗಾಮಿಗಳು ಬಂದರೆ, ಸೇನಾಪಡೆಗಳಿವೆ, ಅವುಗಳ ಕರ್ತವ್ಯ ಮಾಡುತ್ತವೆ, ಮಾಡಬೇಕು ಎಂಬ ಉಡಾಫೆ ಭಾವನೆ ನಮ್ಮ ಮನಸ್ಸಿನಲ್ಲಿ ಹಾಸು ಹೊಕ್ಕಾಗಿದೆ.
ಇದೀಗ ಉಗ್ರರನ್ನು ಮಟ್ಟ ಹಾಕಲು ಹೋರಾಡಿ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಮೇಜರ್ ಸಂದೀಪ್ ಉನ್ನಿಕೃಷ್ಣನ್, ಎನ್ಎಸ್ಜಿ ಹವಾಲ್ದಾರ್ ಗಜೇಂದ್ರ ಸಿಂಗ್ ಹಾಗೂ ಇತರ ಪೊಲೀಸರು ವೀರ ಮರಣವನ್ನಪ್ಪಿದ್ದಾರೆ. ಈ ರಾಜಕಾರಣಿಗಳು ಇದಕ್ಕೆ ಮತ್ತು ಮಾಲೆಗಾಂವ್ ಸ್ಫೋಟ ಪ್ರಕರಣದ ಹಿಂದೆ ಎಟಿಎಸ್ ಬಿದ್ದದ್ದಕ್ಕೂ ಕೊಂಡಿ ಸೇರಿಸಿದರೂ ಆಶ್ಚರ್ಯಪಡಬೇಕಾಗಿಲ್ಲ. ಅಲ್ಲದೆ, ಇದು ನಕಲಿ ಎನ್‌ಕೌಂಟರ್ ಅಂತ ಬೊಬ್ಬಿಟ್ಟು, ಅಲ್ಪಸಂಖ್ಯಾತರಿಗೆ ನೋವಾಗಿದೆ, ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎನ್ನುವ ಬುದ್ಧಿಜೀವಿ ರಾಜಕಾರಣಿಗಳು ಕೂಡ ಸ್ವರ ಹೊರಡಿಸಬಹುದು. ಅಷ್ಟರ ಮಟ್ಟಿಗೆ ಕುಲಗೆಟ್ಟು ಹೋಗಿದೆ ನಮ್ಮ ರಾಜಕೀಯ ವ್ಯವಸ್ಥೆ. ವೀರಾವೇಶದಿಂದ ಹೋರಾಡಿದ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಎನ್‌ಕೌಂಟರ್ ಸ್ಪೆಶಲಿಸ್ಟ್ ವಿಜಯ ಸಾಲುಸ್ಕರ್ ಹಾಗೂ ಎನ್‌ಎಸ್‌ಜಿ ಮತ್ತಿತರ ಭದ್ರತಾ ಪಡೆಗಳ ವೀರ ಯೋಧರು ನಮ್ಮ ದೇಶಕ್ಕಾಗಿ, ದೇಶದ ಜನರ ಶಾಂತಿಗಾಗಿ ಪ್ರಾಣ ತೆತ್ತಿದ್ದಾರೆ. ರಾಶಿ ರಾಶಿ ಮುಗ್ಧರ ಹೆಣಗಳು ಬೀಳುವುದು ಮುಂದುವರಿಯುತ್ತಲೇ ಇದೆ. ಈ ವರ್ಷ ಅದೆಷ್ಟು ಉಗ್ರಗಾಮಿ ದಾಳಿಗಳು ನಡೆದವು? ಇವುಗಳಲ್ಲಿ ಮಡಿದ ಮುಗ್ಧರ ಸಂಖ್ಯೆ ಲೆಕ್ಕವಿಲ್ಲದಷ್ಟು. ಇದಕ್ಕಾಗಿ ಮೊಸಳೆ ಕಣ್ಣೀರು ಸುರಿಸುವರನ್ನು ಸಾಕಷ್ಟು ಕಂಡಾಗಿದೆ.
ಪ್ರಧಾನಿಯಾಗಲಿ, ಗೃಹ ಸಚಿವರಾಗಲಿ ಇದುವರೆಗೆ ಆಗಿರುವ ತಪ್ಪುಗಳಿಂದ ಪಾಠ ಕಲಿತಂತಿಲ್ಲ. ಬೆಂಗಳೂರು, ಜೈಪುರ, ಅಹಮದಾಬಾದ್, ದೆಹಲಿ ಸರಣಿ ಸ್ಫೋಟಗಳ ಬಳಿಕ ನಡೆದ ಸಭೆಯಲ್ಲಿ ಇದೇ ಪ್ರಧಾನಿ ‘ಭಯೋತ್ಪಾದನೆ ವಿರುದ್ಧದ ಕಾನೂನು ಕಠಿಣಗೊಳಿಸಲು ಹಿಂಜರಿಯುವುದಿಲ್ಲ’ ಎಂದು ಹೇಳಿದ್ದರು. ಕೆಲವೇ ದಿನಗಳ ಬಳಿಕ, ಪಕ್ಷದ ಲೆಕ್ಕಾಚಾರ ಅಳೆದು ತೂಗಿ ನೋಡಿದ ಬಳಿಕ, ಈಗಿರುವ ಕಾನೂನನ್ನೇ ಬಲಪಡಿಸಿದರೆ ಸಾಕು, ಭದ್ರತಾ ಪಡೆಗಳಿಗೆ ಮತ್ತಷ್ಟು ಶಕ್ತಿ ತುಂಬಿದರೆ ಸಾಕು ಎನ್ನುತ್ತಾರೆ. ಮೊನ್ನೆ ಮುಂಬಯಿ ಘಟನೆಯ ಬಳಿಕವೂ, ಉಗ್ರರನ್ನು ತಪ್ಪಿಸಿಕೊಳ್ಳಲು ಬಿಡುವುದಿಲ್ಲ, ಕಾನೂನು ಬಲಪಡಿಸುತ್ತೇವೆ ಎಂದು ಹೇಳಿದ್ದಾರೆ. ಬಿರುಗಾಳಿ ಬೀಸಿದಾಗಲೊಮ್ಮೆ ಜವಾಬ್ದಾರಿಯುತ ಹುದ್ದೆಯಲ್ಲಿರುವ ವ್ಯಕ್ತಿಯಿಂದ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಬರಬಹುದಾದ ಇಂಥ ಮಾತುಗಳು ಬರುತ್ತವೆ, ಬರುತ್ತಲೇ ಇರುತ್ತವೆ! ಇದನ್ನು ಯಾರೂ ನಂಬುವ ಸ್ಥಿತಿಯಲ್ಲಿ ಇಲ್ಲ.
ದೇಶದಲ್ಲಿ ಲಷ್ಕರ್, ಸಿಮಿ, ಅಲ್ ಖೈದಾ ಉಗ್ರಗಾಮಿಗಳಿದ್ದಾರೆ, ನಕ್ಸಲರೂ ಇದ್ದಾರೆ. ನಿಜವಾಗಿಯೂ ದೇಶದ ಸಾರ್ವಭೌಮತೆ ಅಪಾಯದಲ್ಲಿದೆ. ಇವೆಲ್ಲವೂ ನಮ್ಮ ದಪ್ಪ ಚರ್ಮದ, ಓಟುಪ್ರಿಯ ರಾಜಕಾರಣಿಗಳ ಅರಿವಿಗೆ ಬರುವುದು ಯಾವಾಗ? ಭಯೋತ್ಪಾದನಾ ವಿರೋಧೀ ಕಾನೂನುಗಳು ಅಲ್ಪಸಂಖ್ಯಾತರನ್ನೇ ಗುರಿಯಾಗಿರಿಸಿಕೊಂಡಿದೆ, ಇದಕ್ಕೆ ತಿದ್ದುಪಡಿಯಾಗಬೇಕಿದೆ ಎಂಬುದು ಓಟು ಬ್ಯಾಂಕ್ ರಾಜಕಾರಣಿಗಳ ಕೂಗಾಟ. ಸಾರ್ವಭೌಮತೆಗಿಂತ ಓಟು ಬ್ಯಾಂಕೇ ಮೇಲು ಎಂದು ನಮ್ಮ ರಾಜಕಾರಣಿಗಳು ಪರಿಗಣಿಸಿರುವುದು ಪ್ರಜಾತಂತ್ರ ವ್ಯವಸ್ಥೆಯ ದೌರ್ಭಾಗ್ಯ ಎನ್ನದೇ ವಿಧಿಯಿಲ್ಲ.
ಓಟ್ ಬ್ಯಾಂಕ್ ರಾಜಕಾರಣಿಗಳಲ್ಲೊಂದು ವಿನಂತಿ:
ಓಟು ಪಡೆಯುವುದಕ್ಕೋಸ್ಕರ ನಿಮ್ಮ ನಿಮ್ಮ ಜೇಬಿನಿಂದ ಎಷ್ಟು ಬೇಕಾದರೂ ಹಣ ಖರ್ಚು ಮಾಡಿ, ಏನು ಬೇಕಾದರೂ ಮಾಡಿ. ಆದರೆ ದೇಶದ ಸಾರ್ವಭೌಮತೆ ರಕ್ಷಣೆಗಾಗಿ ಮತ್ತು ನಿಮಗೆ ಓಟು ಹಾಕುವ ದೇಶದ ಅದೇ ಮುಗ್ಧ ಜನರ ರಕ್ಷಣೆಗಾಗಿಯೂ ಒಂದಿಷ್ಟು ಸಮಯ, ತಲೆ ವ್ಯಯಿಸಿ. ಭಾರತದಲ್ಲೂ ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿರುವ ಅರಾಜಕತೆ ಕಾಡದಂತೆ ದಯವಿಟ್ಟು ನೋಡಿಕೊಳ್ಳಿ.
ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ… ಧಿಕ್ಕಾರವಿರಲಿ, ಹಿಡಿಶಾಪವಿರಲಿ.
ಇದು ವೆಬ್‌ದುನಿಯಾಕ್ಕೆ ಸಿದ್ಧಪಡಿಸಿದ ಲೇಖನ. (http://kannada.webdunia.com/newsworld/news/current/0811/29/1081129030_1.htm)
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು