ಬ್ಯಾಂಕುಗಳಲ್ಲಿ ಡಿಜಿಟಲ್ ಕ್ರಾಂತಿಯಿಂದಾಗಿ ಕೆಲಸ ಕಾರ್ಯಗಳು ಸುಲಭವಾದರೂ, ಅದರ ಹೆಸರಿನಲ್ಲಿ ವಿಧಿಸಲಾಗುವ ಶುಲ್ಕಗಳ ಬಗ್ಗೆ ಜನ ಸಾಮಾನ್ಯರಿಗೆ ತಗಾದೆ ಇದ್ದೇ ಇದೆ. ಜನ ಸಾಮಾನ್ಯರು, ಕಿರು ವ್ಯವಹಾರಸ್ಥರು ಕೂಡ ಗೂಗಲ್ ಪೇ, ಪೇಟಿಎಂ, ಫೋನ್‌ಪೇ ಮುಂತಾದ ಆನ್‌ಲೈನ್ ವ್ಯಾಲೆಟ್‌ಗಳನ್ನು ಯಾವುದೇ ಶುಲ್ಕವಿಲ್ಲದೆ ಬಳಸತೊಡಗಿದ್ದಾರೆ. ಜನ ಸಾಮಾನ್ಯರಲ್ಲಿ “ಗೂಗಲ್ ಪೇ ಮಾಡಿ”, “ಪೇಟಿಎಂ ಮಾಡಿ” – ಮುಂತಾದವೆಲ್ಲವೂ ದೈನಂದಿನ ಕ್ರಿಯಾಪದಗಳಾಗಿಬಿಟ್ಟಿವೆ.
ಇಂಥ ಪರಿಸ್ಥಿತಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇದೀಗ ಯುಪಿಐ ಪಾವತಿಗಳಿಗೆ ಶುಲ್ಕ ವಿಧಿಸಬೇಕೇ ಎಂಬ ಕುರಿತು ಜನ ಸಾಮಾನ್ಯರಿಂದ, ಉದ್ಯಮಿಗಳಿಂದ ಅಭಿಪ್ರಾಯ ಸಂಗ್ರಹಣೆಯಲ್ಲಿ ತೊಡಗಿದ್ದು, 2022 ಅಕ್ಟೋಬರ್ 3ರವರೆಗೆ ಯಾರು ಕೂಡ ತಮ್ಮ ಸಲಹೆಗಳನ್ನು ಮಂಡಿಸಲು ಅವಕಾಶವಿದೆ.
ಇತ್ತೀಚಿನ ಅಪ್ಡೇಟ್ ಪ್ರಕಾರ, ಶುಲ್ಕ ವಿಧಿಸುವುದಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.
ಯುಪಿಐ ಎಂದರೇನು?
ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ ಅಥವಾ ಏಕೀಕೃತ ಪಾವತಿ ವ್ಯವಸ್ಥೆಯ ಸಂಕ್ಷಿಪ್ತ ರೂಪವೇ ಯುಪಿಐ. ಭಾರತದ ಆರ್ಥಿಕತೆಯಲ್ಲಿ ಇತ್ತೀಚಿನ ದಿನಗಳಲ್ಲಿ ಈ ವ್ಯವಸ್ಥೆ ಕ್ರಾಂತಿಕಾರಿ ಬದಲಾವಣೆಯನ್ನು ಮಾಡಿದ್ದಂತೂ ಸುಳ್ಳಲ್ಲ. ಜನರು ತಮಗೆ ಅರಿತೋ ಅರಿಯದೆಯೋ ಈ ಪಾವತಿ ವ್ಯವಸ್ಥೆಯ ಮೂಲಕವೇ ಹಣಕಾಸು ವರ್ಗಾವಣೆ – ಪಾವತಿ ವ್ಯವಹಾರಗಳನ್ನು ಮಾಡುತ್ತಿದ್ದಾರೆ. ಯುಪಿಐ ವ್ಯವಸ್ಥೆಯ ಮೂಲಕ ಹಣ ವರ್ಗಾವಣೆ ಅಥವಾ ಪಾವತಿಗೆ ಯಾವುದೇ ಶುಲ್ಕ ಇಲ್ಲ.
ಯಾವುದೇ ಬ್ಯಾಂಕ್ ಖಾತೆ ಹೊಂದಿದವರಿಗೆ ಅವರವರ ಬ್ಯಾಂಕುಗಳ ಹೆಸರಿನಲ್ಲಿ ಮೊಬೈಲ್ ಫೋನ್ ಆ್ಯಪ್ ಆಧಾರಿತ ವಹಿವಾಟು ನಡೆಸುವುದಕ್ಕಾಗಿ ವ್ಯಕ್ತಿಗತ ಯುಪಿಐ ವಿಳಾಸ (ಐಡಿ) ಇರುತ್ತದೆ. ಸರಳವಾಗಿ ಹೇಳಬೇಕಿದ್ದರೆ, ಇದು ವೈಯಕ್ತಿಕ ಇಮೇಲ್ ವಿಳಾಸದಂತೆ. ಮತ್ತೊಬ್ಬರ ಇಮೇಲ್ ವಿಳಾಸ ಗೊತ್ತಿದ್ದರೆ ಹೇಗೆ ಸುಲಭವಾಗಿ ಅವರಿಗೆ ತಕ್ಷಣವೇ ಸಂದೇಶ ಕಳುಹಿಸಬಹುದೋ, ವೈಯಕ್ತಿಕ ಯುಪಿಐ ವಿಳಾಸ ಗೊತ್ತಿದ್ದರೆ ತಕ್ಷಣ ಹಣವನ್ನು ಮೊಬೈಲ್ ಫೋನ್ ಆ್ಯಪ್ ಮೂಲಕ ವರ್ಗಾಯಿಸಬಹುದು. ಇದು ಬ್ಯಾಂಕ್ ಖಾತೆಯಿಂದ ಮತ್ತೊಂದು ಖಾತೆಗೆ ನೇರವಾಗಿ ಮತ್ತು ತತ್‌ಕ್ಷಣ ಹಣ ವರ್ಗಾವಣೆಯಾಗುವ ವ್ಯವಸ್ಥೆ. ಇದು ನಮ್ಮ ಮೊಬೈಲ್ ನಂಬರ್‌ಗೂ ಲಿಂಕ್ ಆಗಿರುವುದರಿಂದ, ಕೆಲವರ ಯುಪಿಐ ವಿಳಾಸವು ಅವರ ಮೊಬೈಲ್ ಐಡಿಯೂ ಆಗಿರಬಲ್ಲುದು.
ಈಗ, ಇದಕ್ಕೆ ಶುಲ್ಕ ವಿಧಿಸುವ ಕುರಿತು ಆರ್‌ಬಿಐ ಆಗಸ್ಟ್ 17ರಂದು ಅಧಿಸೂಚನೆಯನ್ನು ಹೊರಡಿಸಿ, ಜನ ಸಾಮಾನ್ಯರಿಂದ ಅಭಿಪ್ರಾಯ ಸಂಗ್ರಹಣೆಗೆ ಹೊರಟಿದ್ದು, ಇದು ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಲಿದೆಯೇ ಎಂಬ ಕುರಿತು ಆತಂಕಕ್ಕೂ ಕಾರಣವಾಗಿದೆ.
ಬ್ಯಾಂಕುಗಳ ಖಾಸಗೀಕರಣದಿಂದ ಹಿಡಿದು, ಬ್ಯಾಂಕುಗಳ ಕಂಪ್ಯೂಟರೀಕರಣ, ಖಾಸಗಿ ಬ್ಯಾಂಕುಗಳ ಪ್ರವೇಶ, ಸಾರ್ವಜನಿಕ ಬ್ಯಾಂಕುಗಳ ವಿಲೀನ, ಕಂಪ್ಯೂಟರ್‌ಗಳ ನೆರವಿನಿಂದಾಗಿ ಸಿಬ್ಬಂದಿ ಕಡಿತ, ಹೆಚ್ಚು ನೋಟುಗಳನ್ನು ಮುದ್ರಿಸಬೇಕಾದ ಅಗತ್ಯವೂ ಇಲ್ಲದಿರುವುದು – ಇಷ್ಟೆಲ್ಲ ಆಗುವಾಗ, ಕೆಲಸ ಕಾರ್ಯಗಳು ಸುಲಭವಾಗಬೇಕಿತ್ತಲ್ಲವೇ? ಹಣಕಾಸು ಸಂಸ್ಥೆಗಳ ನಿರ್ವಹಣಾ ವೆಚ್ಚ ಕಡಿಮೆಯಾಗಿ ಲಾಭ ಹೆಚ್ಚಾಗಬೇಕಿತ್ತಲ್ಲವೇ? ಆದರೆ, ಎಲ್ಲದಕ್ಕೂ ಶುಲ್ಕ ನೀಡಬೇಕು, ಎಟಿಎಂನಿಂದ ನಿಗದಿತ ಸಂಖ್ಯೆಗಿಂತ ಹೆಚ್ಚು ಬಾರಿ ಹಣ ತೆಗೆದರೆ ಶುಲ್ಕ, ಹೆಚ್ಚುವರಿ ಚೆಕ್ ಹಾಳೆಗಳು ಬೇಕಿದ್ದರೆ ಶುಲ್ಕ, ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದರೆ ಶುಲ್ಕ, ಎಸ್ಸೆಮ್ಮೆಸ್ ನೋಟಿಫಿಕೇಶನ್‌ಗೆ ಶುಲ್ಕ, ಡೆಬಿಟ್/ಕ್ರೆಡಿಟ್ ಕಾರ್ಡು ವಹಿವಾಟುಗಳಿಗೆ ಶುಲ್ಕ, ದಿನಕ್ಕೆ ನಿಗದಿತ ಮೊತ್ತಕ್ಕಿಂತ ಹೆಚ್ಚು ವಹಿವಾಟು ನಡೆಸಿದರೆ ಶುಲ್ಕ, ಇಂಟರ್ನೆಟ್ ಬ್ಯಾಂಕಿಂಗ್ ಮೂಲಕವೇ ಕೆಲವು ಸೇವೆಗಳಿಗೆ ಪಾವತಿ ಮಾಡಬೇಕಿದ್ದರೂ ಸೇವಾ ಶುಲ್ಕ! ಡಿಜಿಟಲ್ ಕ್ರಾಂತಿಯಿಂದ ಕೆಲಸ ಸುಲಭವಾಗಿದೆ, ಸಿಬ್ಬಂದಿ ಸಂಖ್ಯೆ ಕಡಿಮೆಯಾಗಿದೆ, ಹಾಗಿರುವಾಗ ಶುಲ್ಕ ಮಾತ್ರ ಹೆಚ್ಚಾಗುತ್ತಿರುವುದೇಕೆ? ಇದು ಜನಸಾಮಾನ್ಯರನ್ನು ಕಾಡುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ.
ಆರ್‌ಬಿಐ ಹೇಳಿದ್ದೇನು?
ಹಣ ಪಾವತಿಯ ಡಿಜಿಟಲ್ ವ್ಯವಸ್ಥೆಯ ಪಾಲುದಾರರಿಗೆ ಹೊರೆಯಾಗದಂತೆ ಮತ್ತು ಗ್ರಾಹಕರಿಗೂ ಸಮಸ್ಯೆಯಾಗದಂತೆ ಮತ್ತು ಈ ವ್ಯವಸ್ಥೆಯನ್ನು ಆರ್ಥಿಕವಾಗಿ ಬಲಿಷ್ಠವಾಗಿಸುವ ಉದ್ದೇಶದಿಂದ ಜನಸಾಮಾನ್ಯರು ಮತ್ತು ಉದ್ಯಮಗಳಿಂದ ಭಾರತೀಯ ರಿಸರ್ವ್ ಬ್ಯಾಂಕು ಅಭಿಪ್ರಾಯ ಕೋರಿದೆ. ಪ್ರಸ್ತುತ IMPS (ಕ್ಷಿಪ್ರ ಹಣಪಾವತಿ ಸೇವೆ), NEFT (ರಾಷ್ಟ್ರೀಯ ಎಲೆಕ್ಟ್ರಾನಿಕ್ ನಿಧಿ ವರ್ಗಾವಣೆ), RTGS (ರಿಯಲ್ ಟೈಂ ಗ್ರಾಸ್ ಸೆಟ್ಲ್‌ಮೆಂಟ್) ಹಾಗೂ UPI. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ಪ್ರೀಪೇಯ್ಡ್ ಪಾವತಿ ವ್ಯವಸ್ಥೆಗಳು (PPI) ಮೊದಲಾದ ಇತರ ಹಣ ವರ್ಗಾವಣೆ ಪ್ರಕ್ರಿಯೆಗಳೂ ಚಾಲ್ತಿಯಲ್ಲಿವೆ.
ಹಣ ವರ್ಗಾವಣೆಯಾಗುವಾಗ ತಾಂತ್ರಿಕವಾಗಿ ಸಮಸ್ಯೆ/ಎಲೆಕ್ಟ್ರಾನಿಕ್ ಸಂಘರ್ಷಗಳಾಗದಂತೆ ಮತ್ತು ಆದಾಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಿದೆ ಎಂಬುದು ಆರ್‌ಬಿಐ ನೀಡಿರುವ ಕಾರಣ. ಇದು ಉತ್ತಮ ಭವಿಷ್ಯದ ದೃಷ್ಟಿಯಿಂದ ದೀರ್ಘಕಾಲೀನ ವ್ಯವಸ್ಥೆ. ಯುಪಿಐ ವ್ಯವಸ್ಥೆಯು ನಿಧಿ ವರ್ಗಾವಣೆಗೆ ಮತ್ತು ವ್ಯಾಪಾರಿಗಳಿಗೆ ಪಾವತಿ ವ್ಯವಸ್ಥೆಯಾಗಿಯೂ ಕೆಲಸ ಮಾಡುತ್ತಿದೆ. ಈ ವ್ಯವಸ್ಥೆಯಲ್ಲಿ ತೊಡಗಿಕೊಂಡಿರುವ ಪಾಲುದಾರರೆಲ್ಲರಿಗೂ ತಮ್ಮದೇ ಆದ ಖರ್ಚು ವೆಚ್ಚಗಳಿರುತ್ತವೆ. ಆರ್‌ಬಿಐ ಪಟ್ಟಿ ಮಾಡಿರುವ ಪ್ರಕಾರ, ಈ ಪಾಲುದಾರರೆಂದರೆ, ಪಾವತಿದಾರ, ಪಾವತಿ ಸ್ವೀಕೃತದಾರರ ಮಧ್ಯೆ ಇರುವ ಪಿಎಸ್‌ಪಿ (ಪಾವತಿ ಸೇವಾ ಪೂರೈಕೆದಾರ), ಹಣ ಒದಗಿಸುವ ಬ್ಯಾಂಕ್, ಫಲಾನುಭವಿ ಬ್ಯಾಂಕ್, ಭಾರತದ ರಾಷ್ಟ್ರೀಯ ಪಾವತಿ ನಿಗಮ (NPCI), ಬ್ಯಾಂಕ್ ಖಾತೆದಾರರು (ಪಾವತಿದಾರ ಮತ್ತು ಸ್ವೀಕೃತದಾರ/ವ್ಯಾಪಾರಿಗಳು) ಮತ್ತು ಮೂರನೇ ವ್ಯಕ್ತಿಯಾಗಿ ಕೆಲಸ ಮಾಡುವ ಅಪ್ಲಿಕೇಶನ್ ಪೂರೈಕೆದಾರರು. ಅಂದರೆ, ಒಂದ್ರೂಪಾಯಿ ವರ್ಗಾವಣೆಯಾಗಬೇಕಿದ್ದರೂ, ಈ ಎಲ್ಲ ವ್ಯವಸ್ಥೆಗಳನ್ನು ದಾಟಿ ಅದು ಹೋಗಬೇಕು. ಇವುಗಳಲ್ಲಿ ಯಾವುದೇ ಒಂದರಲ್ಲಿ ಸಮಸ್ಯೆಯಾದರೂ, ತಾಂತ್ರಿಕ ಸಮಸ್ಯೆಯಾದರೂ ನಿರ್ವಹಣೆ ತುಂಬಾ ಕಷ್ಟವಿದೆ.
ಇವುಗಳಲ್ಲಿ ಪಾವತಿ ಮಾಡುವ, ಪಾವತಿ ಸ್ವೀಕರಿಸುವ ಮತ್ತು ಪಾವತಿ ಸೇವಾ ಪೂರೈಕೆದಾರ (PSP) – ಈ ಮೂರು ಅಂಗಗಳು ಅತ್ಯಂತ ಪ್ರಮುಖ ಎಂದು ಆರ್‌ಬಿಐ ಗುರುತಿಸಿದೆ. ಇದರ ನಿರ್ವಹಣೆಗೆ ವೆಚ್ಚ ತಗುಲುತ್ತದೆ ಮತ್ತು ಯಾವುದೇ ಪಾವತಿ ವ್ಯವಸ್ಥೆಯಲ್ಲಿ ಒಳಗೊಂಡಿರುವ ಪಿಎಸ್‌ಪಿಗಳು ಕೂಡ ಇದರಲ್ಲಿ ತೊಡಗಿಕೊಳ್ಳಬೇಕಿದ್ದರೆ, ಹೊಸ ತಂತ್ರಜ್ಞಾನ, ಸಿಸ್ಟಂ ಮತ್ತು ಪ್ರಕ್ರಿಯೆಗಳನ್ನು ಅಳವಡಿಸಲು/ನಿಭಾಯಿಸಲು ಖರ್ಚು-ವೆಚ್ಚಗಳಿಗಾಗಿ ಆದಾಯ ಪಡೆಯಬೇಕಾಗುತ್ತದೆ.
ಜನರಿಂದ ಅಭಿಪ್ರಾಯ ಸಂಗ್ರಹಣೆ
ಯುಪಿಐ ಮೂಲಕ ತತ್‌ಕ್ಷಣವೇ ಹಣ ವರ್ಗವಾಗಬೇಕಿರುವುದರಿಂದ ಪಾವತಿ ವ್ಯವಸ್ಥೆಯಲ್ಲಿ ಅದಕ್ಕೆ ಹೆಚ್ಚುವರಿ ವೆಚ್ಚ ತಗುಲುತ್ತದೆ. ಹೀಗಾಗಿ ಆರ್‌ಬಿಐ ಪ್ರಮುಖವಾಗಿ ಮೂರು ವಿಚಾರಗಳಲ್ಲಿ ಜನಾಭಿಪ್ರಾಯ ಕೇಳಿದೆ. ಅವೆಂದರೆ:
ಇದರ ಜೊತೆಗೆ, ಐಎಂಪಿಎಸ್‌ಗೆ ವಿಧಿಸಲಾಗುತ್ತಿರುವ ಶುಲ್ಕಗಳನ್ನು ಕೂಡ ಆರ್‌ಬಿಐ ನಿಯಂತ್ರಿಸಬೇಕೇ? ಅಥವಾ ಶುಲ್ಕಗಳಿಗೆ ಮಿತಿ ಹೇರಬೇಕೇ? ಎಂಬ ಪ್ರಶ್ನೆಯನ್ನೂ ಕೇಳಿದೆ.
ಇನ್ನೂ ನಿರ್ಣಯವಾಗಿಲ್ಲ
ಹೀಗೆ ಸಂಗ್ರಹಿಸಿದ ಜನಾಭಿಪ್ರಾಯದ ಆಧಾರದಲ್ಲಿ, ದೇಶದಲ್ಲಿನ ವಿಭಿನ್ನ ಪಾವತಿ ಸೇವೆಗಳು/ಚಟುವಟಿಕೆಗಳಿಗೆ ಶುಲ್ಕ ವಿಧಿಸುವ ವ್ಯವಸ್ಥೆಯನ್ನು ನಿಗದಿಗೊಳಿಸಿ, ಸೂಕ್ತ ನಿಯಮಗಳನ್ನು ರೂಪಿಸಲಾಗುತ್ತದೆ. ಆದರೆ, ಇದುವರೆಗೂ ಈ ವಿಚಾರದ ಬಗ್ಗೆ ನಾವು ಯಾವುದೇ ನಿರ್ಣಯಗಳನ್ನಾಗಲೀ ತೆಗೆದುಕೊಂಡಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.
2020ರ ಜನವರಿ 1ರಿಂದ ಯುಪಿಐ ವಹಿವಾಟಿಗೆ ಶೂನ್ಯ ಶುಲ್ಕ ವ್ಯವಸ್ಥೆಯನ್ನು ಕೇಂದ್ರ ಸರಕಾರವು ಜಾರಿಗೊಳಿಸಿತ್ತು. ಅಂದರೆ, ಯುಪಿಐ ಪಾವತಿ ಮಾಡಿದ/ಸ್ವೀಕರಿಸಿದ ಬಳಕೆದಾರರಿಗಾಗಲೀ, ವ್ಯಾಪಾರಿಗಳಿಗಾಗಲೀ ಶುಲ್ಕ ವಿಧಿಸುವಂತಿಲ್ಲ.
ಒಟ್ಟಿನಲ್ಲಿ ಒಂದು ಪಾವತಿಯು ಗಮ್ಯ ಸ್ಥಾನವನ್ನು ತಲುಪುವ ನಡುವಿನ ಪ್ರಕ್ರಿಯಾ ಹಂತದಲ್ಲಿ ಖರ್ಚುವೆಚ್ಚ ಇರುವುದಂತೂ ದಿಟ. ಇದಕ್ಕೆ ಸರಕಾರ ಸಬ್ಸಿಡಿ ನೀಡುತ್ತದೆಯೋ, ಶುಲ್ಕ ವಿಧಿಸಿ ವೆಚ್ಚದ ಹೊರೆಯನ್ನು ತಗ್ಗಿಸಿಕೊಳ್ಳುತ್ತದೆಯೋ ಎಂಬುದು ಜನಾಭಿಪ್ರಾಯದ ಮೇಲೆ ನಿಂತಿದೆ. ಜೊತೆಗೆ ಸರಕಾರದ ಒಪ್ಪಿಗೆಯೂ ಬೇಕಾಗುತ್ತದೆ ಎಂಬುದು ನೆನಪಿರಲಿ.
ನಿಮ್ಮ ಅಭಿಪ್ರಾಯಗಳನ್ನು dpssfeedback@rbi.org.in ವಿಳಾಸಕ್ಕೆ ಅಭಿಪ್ರಾಯ ಕಳುಹಿಸಿ.
ಚರ್ಚೆಗೆ ಸಂಬಂಧಿಸಿದ ದಾಖಲೆ ಪತ್ರದ ಪೂರ್ಣ ರೂಪವನ್ನು ಇಲ್ಲಿ ಓದಬಹುದು. ಇದರಲ್ಲಿ ಹಣಪಾವತಿ ವ್ಯವಸ್ಥೆಯ ಕುರಿತಾಗಿ ಸಂಪೂರ್ಣ ಮಾಹಿತಿಯಿದೆ.
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.