ಇಂದು ಶಿಕ್ಷಕರ ದಿನ. ಈ ಲೇಖನ ವೆಬ್ ದುನಿಯಾ ಕನ್ನಡ ತಾಣದಲ್ಲಿ ಇಲ್ಲಿ ಪ್ರಕಟವಾಗಿದೆ.
ಗುರು ಎಂಬ ಶಬ್ದ ಎಷ್ಟೊಂದು ಪಾವನವಾದುದು ಮತ್ತು ಗೌರವಯುತವಾದುದು ಎಂದರೆ ಇದನ್ನು ಕೇಳಿದ ತಕ್ಷಣವೇ ಶಿಷ್ಯರ ತಲೆ ಗೌರವದಿಂದ ಸ್ವಯಂ ಆಗಿ ಬಾಗುತ್ತದೆ. ಗುರುವು ದೂರ ಮಾಡಿದರೂ ತನ್ನ ಒಳಮನಸ್ಸು ಸ್ವೀಕರಿಸಿದ್ದವರನ್ನೇ ಗುರುವೆಂದು ಪರಿಭಾವಿಸಿಕೊಂಡು, ಏಕಾಗ್ರತೆಯಿಂದ ಬಿಲ್ವಿದ್ಯೆ ಸಾಧಿಸಿ, ಗುರುದಕ್ಷಿಣೆಯಾಗಿ ಕೊಂಬೆರಳು ಕತ್ತರಿಸಿದ ಗುರುವನ್ನು ನಮ್ಮ ಇತಿಹಾಸ ಕಂಡಿದೆ. ಎಲ್ಲೋ ದಟ್ಟ ಹಳ್ಳಿಯೊಂದರಲ್ಲಿ, ಮೂಲಭೂತ ಸೌಕರ್ಯವೂ ಇಲ್ಲದ ಶಾಲೆಯಲ್ಲಿ ಎಲ್ಲಾ ನೋವು ನುಂಗಿಕೊಂಡು, ತನ್ನನ್ನೇ ನೆಚ್ಚಿಕೊಂಡು ಬಂದ ಮಕ್ಕಳಿಗೆ ವಿದ್ಯೆಯನ್ನು ಧಾರೆಯೆರೆದು, ಅವರ ಭವಿಷ್ಯ ಉಜ್ವಲವಾಗಿಸುವಲ್ಲೇ ಸಂತೋಷ ಕಾಣುವ ಶಿಕ್ಷಕರ ಬಗ್ಗೆಯೂ ಆಗೀಗ್ಗೆ ಕೇಳುತ್ತೇವೆ.
ಮಗುವಿನ ಮನಸ್ಸು ಹಸಿ ಮಣ್ಣಿನಂತೆ. ಅದನ್ನು ಎರಡೂ ಕೈಗಳಿಂದ ಆದರದಿಂದ ತಟ್ಟಿ, ತಟ್ಟಿ ಸುಂದರವಾದ, ಕಲಾತ್ಮಕವಾದ ವಿಗ್ರಹ ರೂಪಿಸುವುದು ಗುರುವಿನ ಗುರಿ. ಗುರುವಿಲ್ಲದ ಗುರಿಯು ಕೂಡ ಸಾಧಿಸಲಸದಳ. ಅದಕ್ಕೇ ಹೇಳುವುದು ವಿದ್ಯೆಯು ದುಡ್ಡುಕೊಟ್ಟು ಖರೀದಿಸಬಲ್ಲ ಸೊತ್ತಲ್ಲ. ಅಥವಾ ವಿದ್ಯೆ ಎಂಬುದು ಮಾರಾಟದ ಸೊತ್ತೂ ಅಲ್ಲ. ವಿದ್ಯೆಯನ್ನಂತೂ ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವೇ ಇಲ್ಲ.
ಗುರುವು ತನ್ನ ಶಿಷ್ಯರಿಗೆ, ತನ್ನನ್ನೇ ನಂಬಿ ಭವಿಷ್ಯ ರೂಪಿಸಲೆಂದು ಬಂದವರಿಗೆ ಇಂತಹ ವಿದ್ಯೆಯನ್ನು ಕೊಟ್ಟುಬಿಡುವುದಿಲ್ಲ, ಬದಲಾಗಿ ಕಾಯಾ, ವಾಚಾ, ಮನಸಾ ಧಾರೆಯೆರೆಯುತ್ತಾನೆ. ಆ ಮಟ್ಟಿಗೆ ಸಾರ್ಥಕ ಗುರುಗಳನ್ನು ಪಡೆದ ಇಂದಿನ ಮಕ್ಕಳು ಧನ್ಯರು.
ಮಕ್ಕಳನ್ನು ದುರಾಚಾರಕ್ಕೆಳಸುವ, ತಪ್ಪು ಮಾರ್ಗಕ್ಕೆ ಎಳೆಯುವ, ತನ್ನ ವೈಯಕ್ತಿಕ ಕೋಪವನ್ನು ಮಕ್ಕಳ ಮೇಲೆ ತೋರ್ಪಡಿಸುವ ಬೆರಳೆಣಿಕೆಯ ಶಿಕ್ಷಕರನ್ನು ಮರೆಯೋಣ. ನಮಗೆ ಗುರಿ ಮುಟ್ಟಲು ದಾರಿ ತೋರುವ, ಸದಾ ಕಾಲವೂ ಸಮಸ್ಯೆಗೆ ಸಮರ್ಪಕ ಪರಿಹಾರ ನೀಡುತ್ತಾ, ನಿಸ್ವಾರ್ಥ ಮನೋಭಾವದಿಂದ ದಾರಿದೀಪವಾಗುವ ಶಿಕ್ಷಕರನ್ನು ಇಂದಾದರೂ ನೆನೆಯೋಣ.
ಗುರುವು ಹೇಳುತ್ತಲೇ ಇರುವ ಒಂದು ವಾಕ್ಯ ಬಹುಶಃ ಎಲ್ಲರೂ ಕೇಳಿರಬಹುದು. “ಮಕ್ಕಳೇ, ನೀವು ಬೆಳೆದು ದೊಡ್ಡವರಾಗಿ, ನೀವೇನೂ ನನಗೆ ಗುರುದಕ್ಷಿಣೆ ಕೊಡಬೇಕಾಗಿಲ್ಲ. ಸತ್ಪಥದಲ್ಲಿ ಮುನ್ನಡೆದು ಹೆಸರು ಗಳಿಸಿದರೆ, ನಮಗದೇ ನೀವು ನೀಡುವ ಗುರುದಕ್ಷಿಣೆ”. ಸಣ್ಣವರಿರುವಾಗ ಈ ಮಾತಿನ ಹಿಂದಿನ ಅರ್ಥ ನಮಗರಿವಾಗುತ್ತಿರಲಿಲ್ಲ. ಈಗೊಂದು ಬಾರಿ ಆ ಮಾತನ್ನು ನೆನಪಿಸಿಕೊಳ್ಳಿ. ಅದನ್ನಾಡುತ್ತಿದ್ದವರ ಹೃದಯಾಂತರಾಳ ನಮಗರ್ಥವಾಗುತ್ತದೆ! ತನ್ನ ಮಾರ್ಗದರ್ಶನ ಪಡೆದ ಮಗು ಜೀವನದಲ್ಲಿ ಯಶಸ್ವಿಯಾಗಬೇಕು ಎಂಬುದಷ್ಟೇ ಆ ಮನಸ್ಸಿನಲ್ಲಿರುವ ಏಕೈಕ ತುಡಿತ.
ಒಂದು ವಿಷಯ ಗೊತ್ತೇ? ಶಾಲೆಯಲ್ಲಿ ಪಾಠ ಕಲಿಸಿದವರು ಮಾತ್ರವೇ ಶಿಕ್ಷಕರಲ್ಲ. ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ನಮಗೊಬ್ಬೊಬ್ಬ ಗುರು ಎದುರಾಗುತ್ತಾರೆ. ಶಾಲೆ ಮುಗಿಯಿತು, ಇನ್ನು ಶಿಕ್ಷಕರ ಹಂಗಿಲ್ಲ ಎಂದುಕೊಳ್ಳುವಂತಿಲ್ಲ. ನಮ್ಮ ಜೀವನಕ್ಕೆ ಭದ್ರವಾದ ಬುನಾದಿ ಹಾಕಿಕೊಡುವ ಶಿಕ್ಷಕರ ಒಂದು ಪಾತ್ರವು ಅಲ್ಲಿಗೆ ಮುಕ್ತಾಯವಾಗುತ್ತದೆಯಷ್ಟೆ. ಅದೇ ಪಾತ್ರವು ಮುಂದೆ ಜೀವನ ಎಂದರೇನೆಂದು ಅರಿವು ಮೂಡುತ್ತಿರುವ ಸಂದರ್ಭದಲ್ಲಿ ಹೆಜ್ಜೆ ಹೆಜ್ಜೆಗೂ ಬಂದು ಮುಖತೋರಿಸುತ್ತದೆ. ಮಗೂ ದಾರಿ ತಪ್ಪುತ್ತಿದ್ದೀಯಾ, ಈ ದಾರಿಯಲ್ಲಿ ಹೋದರೆ ಒಳ್ಳೆಯದು ಮತ್ತು ಯಶಸ್ಸು ಸಾಧಿಸುವೆ ಅಂತ ದಾರಿ ದೀಪವಾಗುತ್ತಿರುತ್ತದೆ. ಇದು ಜ್ಞಾತ ಎಚ್ಚರಿಕೆಯಾಗಬಹುದು, ಇಲ್ಲವೇ ಹಿಂದಿನ ಗುರುವಿನ ಬೋಧನೆಯಿಂದ ನಮ್ಮ ಒಳಮನಸ್ಸಿನಾಳದಿಂದ ಹೊರಡುವ ಅಜ್ಞಾತ ಸಂದೇಶವೂ ಆಗಿರಬಹುದು.
ಒಮ್ಮೆ ಆ ಮಹಾತ್ಮನಲ್ಲಿಗೆ ತೆರಳಿ, “ಗುರುಗಳೇ, ನಾನೀಗ ಹೀಗಿದ್ದೇನೆ, ಈ ಮಟ್ಟಕ್ಕೇರಿದ್ದೇನೆ. ಎಲ್ಲವೂ ನಿಮ್ಮಿಂದಾಗಿ, ನಿಮ್ಮ ಆಶೀರ್ವಾದದಿಂದಾಗಿ” ಅಂತ ಹೇಳಿಬಿಡಿ ನೋಡೋಣ… ಆ ಹಿರಿ ಹೃದಯ ಹಿರಿ ಹಿರಿಹಿಗ್ಗುತ್ತದೆ. ಮನತುಂಬುತ್ತದೆ. ಕಂಗಳು ಹೊಳೆಯುತ್ತವೆ. ಮುಖದಲ್ಲಿ ಧನ್ಯತಾ ಭಾವವಿರುತ್ತದೆ. ಚಿಕ್ಕವರಿರುವಾಗ ನಮ್ಮನ್ನು ತಿದ್ದಿ ತೀಡುವುದರಲ್ಲೇ ಜೀವನ ಸವೆಸಿದ ಅದೇ ಮುಖಾರವಿಂದದಲ್ಲಿ ಸಾರ್ಥಕತೆಯ ಗೆರೆಗಳು ಗೋಚರಿಸುತ್ತವೆ.
ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಒಳಮನಸ್ಸಿನ ರೂಪದಲ್ಲಿ ಚಿರಸ್ಥಾಯಿಯಾಗಿದ್ದುಕೊಂಡು ಜೀವನ ಮುನ್ನಡೆಸುವ, ಗುರಿಯಿಲ್ಲದಾಗ ಗುರುವಾಗುವ ಮತ್ತು ಗುರುವಾಗಿದ್ದುಕೊಂಡು ಗುರಿ ತೋರಿಸುವ, ಆ ಗುರುವೆಂಬೋ ಶಕ್ತಿಗಿದೋ ಹೃದಯದಾಳದ ನಮನ.
ತಸ್ಮೈ ಶ್ರೀ ಗುರವೇ ನಮಃ
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.