Categories: myworld

ಭ್ರಷ್ಟಾಚಾರಿಗಳು ಸದನದೊಳಗೆ, ಧ್ವನಿಯೆತ್ತಿದವರು ಜೈಲಿಗೆ!

ಶಾಂತಿಯುತ ಚಳವಳಿ ನಡೆಸುತ್ತಿದ್ದವರ ಮೇಲೆ ಲಾಠಿ ಚಾರ್ಜ್ ಮಾಡಿ ದಬ್ಬಾಳಿಕೆ ನಡೆಸುತ್ತಿದ್ದ ಬ್ರಿಟಿಷರನ್ನು ಹೊಡೆದೋಡಿಸಿ 65 ವರ್ಷಗಳ “ಸ್ವಾತಂತ್ರ್ಯ”ದ ಬಳಿಕ ಹೊಸದೊಂದು ವರ್ಷವು ಇಷ್ಟು ಕೆಟ್ಟದಾಗಿ ದಬ್ಬಾಳಿಕೆಯಿಂದಲೇ ಆರಂಭವಾಗಿರುವುದು ಜನ ಸಾಮಾನ್ಯನ ದುರಂತ! ಗಾಂಧೀವಾದಿ ಅಣ್ಣಾ ಹಜಾರೆಯವರಿದ್ದ ಮಯೂರ್‌ಗಂಜ್ ಮನೆಯೊಳಗೆ ಯಾವುದೇ ಸೆಕ್ಷನ್ 144 ಇಲ್ಲದಿದ್ದರೂ, ಅಥವಾ ಅವರು ಯಾವುದೇ ಅಪರಾಧ ಕೃತ್ಯಗಳನ್ನು ಎಸಗಲು ಹೊರಟಿಲ್ಲ ಎಂಬುದು ಹಾಲಿನಷ್ಟೇ ಬೆಳ್ಳಗಿನ ಸತ್ಯವಾಗಿದ್ದರೂ, “ಮುನ್ನೆಚ್ಚರಿಕೆ ಕ್ರಮ”ವಾಗಿ ಅವರನ್ನು ಬಂಧಿಸಿದ್ದೇವೆ ಎನ್ನುತ್ತಿದೆ ಸೋನಿಯಾ ಗಾಂಧಿ ಸರಕಾರ! ಈಗ ಪ್ರಶ್ನೆ ಉಳಿದಿರುವುದು ಈ ಸರಕಾರ ಪ್ರಜಾಪ್ರಭುತ್ವಕ್ಕೆ ಎಷ್ಟು ಬೆಲೆ ಕೊಡುತ್ತಿದೆ ಎಂಬುದು.

ನಗು ಬಂದರೆ ಹತ್ತಿಕ್ಕಿಕೊಳ್ಳಿ. ದೇಶದ ಖಜಾನೆಯನ್ನು ಲೂಟಿ ಮಾಡುವವರು, ಹಣ ಮಾಡುವ ಉದ್ದೇಶವನ್ನೇ ತಮ್ಮ ನರ ನಾಡಿಗಳಲ್ಲೂ ತುಂಬಿಕೊಂಡಿರುವ ಹಲವರು, ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದ ಕೆಲವರು ಸಂಸತ್ತಿನೊಳಗೆ ಸೇರಿಕೊಂಡು ಅಧಿಕಾರ ಚಲಾಯಿಸುತ್ತಾರೆ, ಕಾನೂನು ರೂಪಿಸುತ್ತಾರೆ. ಆದರೆ, ಜನರ ಜೀವನ ಸುಧಾರಣೆಯಾಗಬೇಕು, ಬೆಲೆ ಏರಿಕೆಯ ಬಿಸಿಯಿಂದ ಜನರನ್ನು ರಕ್ಷಿಸಬೇಕು, ಪ್ರತಿಯೊಂದರಲ್ಲಿಯೂ ಅನ್ಯಾಯ ಅನುಭವಿಸುತ್ತಾ, ಲಂಚ ನೀಡಬೇಕಾಗಿ ಬರುತ್ತಿರುವ ಪ್ರಜೆಗಳಿಗೆ ಸಮಾಧಾನ ದೊರೆಯಬೇಕು ಎಂದು ಆಗ್ರಹಿಸಿ ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದವರನ್ನು ಬಂಧಿಸಿ ಜೈಲಿಗಟ್ಟುತ್ತಾರೆ. ಅದು ಕೂಡ “ಕಾನೂನು ಉಲ್ಲಂಘಿಸಿದ್ದಾರೆ” ಎಂಬ ನಕಲಿ ಆರೋಪದಲ್ಲಿ! ಶಾಂತಿಯುತ ಹೋರಾಟ ಮಾಡುವುದು ಖಜಾನೆ ಕೊಳ್ಳೆ ಹೊಡೆಯುವಷ್ಟು ದೊಡ್ಡ ಪ್ರಮಾಣದ ಕ್ರಿಮಿನಲ್ ಕೃತ್ಯವಾಗುವುದು ಎಂದಿಗೂ ಸಾಧ್ಯವಿಲ್ಲ ಎಂಬುದು ಯಾರಿಗೂ ಅರ್ಥವಾಗುವ ಸಂಗತಿ.

ಅದರ ಮೇಲೆ, “ನಮಗೆ ಜನತೆ ಅಧಿಕಾರ ಕೊಟ್ಟಿದ್ದಾರೆ, ಜನಾದೇಶ ಕೊಟ್ಟಿದ್ದಾರೆ, ಒಂದು ಚುನಾವಣೆಯಲ್ಲಿ ನಿಂತು ಗೆಲ್ಲಲಾಗದವರು ನಮಗೆ ಬೋಧಿಸುವುದೆಂದರೇನು?ನಮಗೆ ಸಂವಿಧಾನವಿದೆ. ಅದನ್ನು ತಿದ್ದುಪಡಿ ಮಾಡಲು ಇವರ್ಯಾರು” ಅಂತ ಪ್ರಶ್ನೆ ಮಾಡುತ್ತಾ, ಶಾಂತಿಯುತ ಪ್ರತಿಭಟನೆ ಮಾಡುತ್ತಿರುವವರನ್ನು ಕಾರಾಗೃಹದೊಳಕ್ಕೆ ತಳ್ಳುತ್ತಾ, ಇದು” ಯುಪಿಎ ಸರಕಾರದ ಸಾಧನೆ” ಅಂತ ಹೇಳಿಕೊಳ್ಳಲು ಹೆಮ್ಮೆಯನ್ನೂ ಪಡುತ್ತಿರುತ್ತಾರೆ!

ಪ್ರತಿ ಬಾರಿಯೂ ಬೆಲೆ ಏರಿಕೆ ನಿಯಂತ್ರಿಸ್ತೇವೆ ಅನ್ನೋದು ಎಂಥಾ ಪೌರುಷ?
ಜನ ಸಾಮಾನ್ಯರು ದಿನಂಪ್ರತಿ ಬೆಲೆ ಏರಿಕೆಗಳಿಂದ, ಅಡಿಗಡಿಗೂ ಭ್ರಷ್ಟಾಚಾರವನ್ನು ಎದುರಿಸುತ್ತಾ ವಿಲವಿಲನೆ ಒದ್ದಾಡುತ್ತಿದ್ದರೆ, “ಭ್ರಷ್ಟಾಚಾರ ನಿಗ್ರಹವೇ ನಮ್ಮ ಗುರಿ, ಬೆಲೆ ಏರಿಕೆಯನ್ನು ನಿಯಂತ್ರಣಕ್ಕೆ ಆದ್ಯತೆ ನೀಡುತ್ತೇವೆ” ಎಂದು ಪ್ರತಿ ಬಾರಿಯ ಸ್ವಾತಂತ್ರ್ಯೋತ್ಸವದಂದು ಅದೇ ಹಳೇ ಟೇಪನ್ನು ರೀವೈಂಡ್ ಮಾಜಿ ಕೆಂಪುಕೋಟೆಯೆದುರು ನಮ್ಮನ್ನಾಳುವವರು ಹೆಮ್ಮೆಯಿಂದಲೇ ಕೈಯಾಡಿಸುತ್ತಾ ಘೋಷಿಸುತ್ತಾರೆ. ಆದರೆ, ಭ್ರಷ್ಟಾಚಾರ ನಿಗ್ರಹಕ್ಕೊಂದು ಸಮರ್ಥ, ಪ್ರಬಲ ಕಾನೂನು ಕೊಡಿ ಅಂತ ಕೇಳಿದರೆ, ಅವರನ್ನು ಒದ್ದು ಒಳಗೆ ಹಾಕುತ್ತಾರೆ! ಹಾಗಿದ್ದರೆ ಭವ್ಯ ಭಾರತದ ಘನತೆವೆತ್ತ ಪ್ರಧಾನಿ ಮನಮೋಹನ್ ಸಿಂಗ್ ಅವರೇ, ಇದೆಂಥಾ ಪೌರುಷ?

ಆದರೆ ಅವರದೂ ತಪ್ಪಿಲ್ಲ ಬಿಡಿ. ಅಹಿಂಸಾ ಹೋರಾಟ ನಡೆಸುತ್ತಿದ್ದ ಅಂಥಾ ಗಾಂಧೀಜಿಯವರನ್ನೇ ಈ ಹಿಂದೆ ನಮ್ಮನ್ನು ಆಳುತ್ತಿದ್ದ ಬ್ರಿಟಿಷರು ಜೈಲಿಗೆ ತಳ್ಳಿರಲಿಲ್ಲವೇ? ಹಾಗಿರುವಾಗ ಇದೇನು ಮಹಾ? ಅಂತ ಸುಮ್ಮನಿರಬಹುದು. ಯಾಕೆಂದರೆ, ನಮಗೆ ಹೇಳಿ ಕೇಳಿ ಸ್ವಾತಂತ್ರ್ಯ ಸಿಕ್ಕಿದೆ. ಅದು ಬರೇ ಬ್ರಿಟಿಷರಿಂದ ಮಾತ್ರ, ಆದರೆ ಲಂಚಕೋರರಿಂದ, ಭ್ರಷ್ಟಾಚಾರಿಗಳಿಂದ ಸ್ವಾತಂತ್ರ್ಯ ಸಿಕ್ಕಿದೆಯೇ ಅಂತ ನಮಗೆ ನಾವೇ ಕೇಳಿಕೊಂಡರೆ ಪರಿಸ್ಥಿತಿ ಅರ್ಥವಾಗುತ್ತದೆ.

ನೀವು ತಿನ್ನಿ, ಆದ್ರೆ ನಮಗೆ ಬದುಕಲು ಬೇಕಾದಷ್ಟಾದ್ರೂ ಕೊಟ್ಬಿಡಿ!
ಜನರು ಭ್ರಷ್ಟಾಚಾರಕ್ಕೆ ಎಷ್ಟರ ಮಟ್ಟಿಗೆ ಒಗ್ಗಿಕೊಂಡುಹೋಗಿದ್ದಾರೆಂದರೆ, “ಸ್ವಾಮೀ, ನಾವೇ ತೆರಿಗೆ ಕಟ್ಟಿ ತುಂಬಿದ್ದ ಸರ್ಕಾರಿ ಬೊಕ್ಕಸದಿಂದ, ನಿಮ್ಮ ಐಷಾರಾಮಕ್ಕೆ, ಆಡಂಬರಂದ ಸಕಲ ಸೌಕರ್ಯಕ್ಕೆ ನೀವೆಷ್ಟು ಬೇಕಾದರೂ ನುಂಗಿ ನೀರು ಕುಡಿಯಿರಿ. ಆದರೆ, ನಮಗೆ ಕೇವಲ ದಿನಂಪ್ರತಿ ದಿನ ದೂಡಲು ಸಾಧ್ಯವಾಗುವಷ್ಟರ ಮಟ್ಟಿಗೆ, ಚಿಂತೆಯಿಲ್ಲದೆ ಬದುಕುವಂತಾಗಲು ಮಾತ್ರವೇ ನಮ್ಮದೇ ತೆರಿಗೆ ಹಣವನ್ನು ಒಂದಿಷ್ಟು ವಿನಿಯೋಗಿಸಿ” ಅನ್ನೋ ಮನಸ್ಥಿತಿಗೂ ತಲುಪಿದ್ದಾರೆ ಕೆಲವರು.

ಇಂಥ ಭಾವನೆ ಬರಲು ಕಾರಣವೇನು? ಈ ಸರಕಾರದ ನೀತಿಗಳನ್ನೇ ನೋಡಿ. ಬೆಲೆ ಏರಿಕೆಯನ್ನು ನಿಯಂತ್ರಿಸಲಾಗದೆ, ಅದೇನೋ ಹಣದುಬ್ಬರ ಎಂಬ ಭೂತವೊಂದನ್ನು ತೋರಿಸುತ್ತಾರೆ. ಅದನ್ನು “ನಿಯಂತ್ರಿಸಲು”, ಸಾಲ ಸೋಲ ಮಾಡಿ ಮನೆ ಕಟ್ಟಿಕೊಂಡೋ, ಓಡಾಡಲು ವಾಹನ ಇಟ್ಟುಕೊಂಡೋ ಇರುವ ಜನ ಸಾಮಾನ್ಯರ ಸಾಲದ ಮೇಲಿನ ಬಡ್ಡಿಯ ದರ ಹೆಚ್ಚಿಸುತ್ತಾರೆ. ಆದರೆ, ಉಳ್ಳವರು ಕೂಡಿಡುತ್ತಲೇ ಹೋಗುವ ಠೇವಣಿ ಹಣದ ಬಡ್ಡಿ ದರ ಹೆಚ್ಚಿಸುತ್ತಾ, ಜನ ಸಾಮಾನ್ಯರು, ಮಧ್ಯಮವರ್ಗದವರು ಭಿಕ್ಷುಕರಾಗುತ್ತಾ ಹೋರಾಗುತ್ತಾರೆ; ಖಜಾನೆಯ ಭಕ್ಷಕರು ಸಿರಿವಂತರಾಗುವ ನೀತಿಯನ್ನು ಅನುಸರಿಸುತ್ತಾರೆ.

ದಿಕ್ಕಿಲ್ಲದ ಸರಕಾರ
ತಪ್ಪಲ್ಲ. ಈ ಸರಕಾರಕ್ಕೆ ದಿಕ್ಕಿಲ್ಲ. ದಿಕ್ಕು ತಪ್ಪಿದೆ. ವಿಶ್ವಸಂಸ್ಥೆಯಲ್ಲಿ ಹೋಗಿ ಪೋರ್ಚುಗೀಸ್ ಭಾಷಣ ಓದುತ್ತದೆ, ಭಯೋತ್ಪಾದನೆ ನಿಲ್ಲುವವರೆಗೆ ಪಾಕಿಸ್ತಾನದೊಂದಿಗೆ ಮಾತುಕತೆ ಇಲ್ಲ ಅಂತ ಹೇಳುತ್ತಲೇ, ಪಾಕ್ ಜತೆ ಕೈಕುಲುಕಿ ಬರುತ್ತದೆ. ಮನಸ್ಸು ಬಂದಾಗಲೆಲ್ಲಾ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿ, ಹಣದುಬ್ಬರ ಹೆಚ್ಚಿಸಿದೆ. ನಮ್ಮ ದೇಶದಲ್ಲೇ ಬೆಳೆಯುವ ಅಕ್ಕಿ, ಬೇಳೆಗಳ ಬೆಲೆ ನಮ್ಮ ನಿಯಂತ್ರಣದಲ್ಲಿಲ್ಲ, “ಬಾಹ್ಯ ಪ್ರಭಾವ” ಕಾರಣ ಅಂತೆಲ್ಲಾ ಹೇಳುತ್ತದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಇಳಿಕೆಯಾದರೂ, ನಮ್ಮಲ್ಲಿ ಇಳಿಕೆ ಮಾಡುವ ಬಗ್ಗೆ ತುಟಿ ಪಿಟಕ್ಕೆನ್ನುವುದಿಲ್ಲ, ಸೆಕ್ಷನ್ 144 ಉಲ್ಲಂಘಿಸಿದ್ದಾರೆ ಅಂತ ಹೇಳಿ, ತಮ್ಮ ಮನೆಯೊಳಗೇ ಕುಳಿತಿದ್ದ ಅಣ್ಣಾ ಹಜಾರೆಯವರನ್ನು “ಮುನ್ನೆಚ್ಚರಿಕೆ ಕ್ರಮವಾಗಿ” ವಶಕ್ಕೆ ತೆಗೆದುಕೊಂಡು, ಬಳಿಕ ಬಂಧನ ಘೋಷಿಸುತ್ತದೆ; ನಮ್ಮದೇ ದೇಶದೊಳಗಿರುವ ಪಾಕ್ ಕೈದಿಯ ಬಿಡುಗಡೆಗೆ ಪಾಕಿಸ್ತಾನ ಪ್ರಯತ್ನಿಸಬೇಕು ಅಂತ ದೇವಸ್ಥಾನದಷ್ಟು ಪವಿತ್ರವಾಗಿರುವ ಸಂಸತ್ತಿನೊಳಗೆ ಕುಳಿತುಕೊಂಡು “ಜವಾಬ್ದಾರಿಯುತ” ಹೇಳಿಕೆ ನೀಡುತ್ತದೆ… ಸೋನಿಯಾ ಗಾಂಧಿ ಅವರ ಯುಪಿಎ ಸರಕಾರದಲ್ಲಿ ಸಿಬಲ್, ಚಿದಂಬರಂ, ಮನೀಷ್ ತಿವಾರಿ, ದಿಗ್ವಿಜಯ್ ಸಿಂಗ್ ಅವರೇ ಮುಖ್ಯರಾಗಿ ಪ್ರಧಾನಿ ಹತಾಶರಾಗಿದ್ದಾರೆ. ಹೀಗಿರುವಾಗ, “ಪೊಲೀಸರು ಶಾಂತಿಯುತ ಪ್ರತಿಭಟನೆಗೆ 22 ಷರತ್ತುಗಳನ್ನು ಒಡ್ಡಿದ್ದಾರೆ. ಏನಿದು? ದಯವಿಟ್ಟು ನೀವಾದರೂ ಮಧ್ಯಪ್ರವೇಶಿಸಿ” ಅಂತ ಅಣ್ಣಾ ಹಜಾರೆಯವರೇ ಗೋಗರೆದಾಗ, “ನಾನೇನೂ ಮಾಡುವಂತಿಲ್ಲ” ಎಂದು ಅಸಹಾಯಕತೆಯಿಂದ ಪ್ರಧಾನಿಯೇ ಕೈಚೆಲ್ಲಿ ಕುಳಿತಿದ್ದಾರೆ…. ಅದು ಕೂಡ, ಬೆಲೆ ಏರಿಕೆಯಿಂದ ಜನಸಾಮಾನ್ಯರು ಪ್ರತಿದಿನ ವಿಲವಿಲನೆ ಒದ್ದಾಡುತ್ತಿದ್ದಾಗಲೂ “ಬೆಲೆ ನಿಯಂತ್ರಣ ನನ್ನ ಕೈಯಲ್ಲಿಲ್ಲ” ಎಂಬ ಹತಾಶ ಭಾವನೆಯಿಂದ ಎರಡೂ ಕೈಗಳನ್ನೆತ್ತಿದಂತೆ!

ನಮ್ಮ ಭವ್ಯ ಭವಿಷ್ಯದ ಭಾವಿ ಪ್ರಧಾನಿ, ಕಾಂಗ್ರೆಸ್‌ನ ಯುವ ನೇತಾರ ರಾಹುಲ್ ಗಾಂಧಿ ಅವರು ಭಟ್ಟಾ ಪರ್ಸೂಲ್‌ನಲ್ಲಿ ಸೆಕ್ಷನ್ 144 ಉಲ್ಲಂಘಿಸಿದಾಗ, ಇದು ಜನರ ಹಕ್ಕುಗಳಿಗಾಗಿನ ಹೋರಾಟ ಎಂದು ಹೇಳಿಕೊಂಡಿದ್ದ ಕಾಂಗ್ರೆಸ್, ನಿಜವಾಗಿಯೂ ನಿಸ್ವಾರ್ಥವಾದ (ಯಾವುದೇ ಓಟಿಗಾಗಿ ಅಲ್ಲ ಎಂಬುದನ್ನು ದಯವಿಟ್ಟು ನೆನಪಿಸಿಕೊಳ್ಳಿ) ಜನಪರ ಕಾಳಜಿಯಿಂದ ಹೋರಾಟ ನಡೆಸಿದರೆ, “ಕಾನೂನು ಉಲ್ಲಂಘನೆ” ಎಂಬ ಬಣ್ಣ ಹಚ್ಚಿ ಬಂಧಿಸುವುದು ಎಂಥಹಾ ಆಡಳಿತದ ಸೂಚನೆ? ಹಿಂದೆ ಸರ್ವಾಧಿಕಾರಿಗಳು ಅಂತ ಕರೆಸಿಕೊಂಡವರು ಮಾತ್ರ ಈ ರೀತಿ ಮಾಡುತ್ತಿದ್ದರು ಎಂಬುದನ್ನು ಕೇಳಿ ತಿಳಿದಿದ್ದೇವೆ. ಅದನ್ನೀಗ ಪ್ರತ್ಯಕ್ಷ ಕಾಣುತ್ತಿದ್ದೇವೆಯೇ?

ಆಂದೋಲನ ತಣ್ಣಗಾಗದಿರಲಿ…
ಈ ಮೊದಲು ಕಪ್ಪು ಹಣದ ವಿರುದ್ಧ ಶಾಂತಿಯುತವಾಗಿಯೇ ಬಾಬಾ ರಾಮದೇವ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರು, ಮಕ್ಕಳು, ವೃದ್ಧರ ಮೇಲೆ ಲಾಠಿ ಚಾರ್ಜ್ ನಡೆಸಿದ್ದ ಸರಕಾರದಿಂದ ನಾವು ಇನ್ನೆಂತಹುದ್ದನ್ನು ನಿರೀಕ್ಷಿಸುವುದು ಸಾಧ್ಯ? ಅಧಿಕಾರ ಮದ ಇದ್ದರೆ ಹೀಗೇ ಆಗುವುದು. ಜನರ ಭಾವನೆಗಳನ್ನು ಅರ್ಥೈಸಿಕೊಳ್ಳಲಾಗದ ಸರಕಾರ ಇದ್ದರೆಷ್ಟು ಹೋದರೆಷ್ಟು ಎಂಬ ಪ್ರಶ್ನೆ ನಮಗೆ ನಾವೇ ಕೇಳಿಕೊಳ್ಳಬೇಕು. ಪ್ರಜಾಪ್ರಭುತ್ವದ ದಮನಕಾರಿ ನೀತಿಯ ವಿರುದ್ಧ ದೇಶಾದ್ಯಂತ ಯುವ ಜನತೆ ಸಿಟ್ಟಿಗೆದ್ದಿದ್ದಾರೆ. ಅಂಥಹಾ ತಾತನೇ ನಮ್ಮ ಪರವಾಗಿ ಹೋರಾಟ ಮಾಡುತ್ತಿದ್ದರೆ, ನಮಗೆ ನಾಚಿಕೆಯಾಗುವುದಿಲ್ಲವೇ ಅಂತ ಕೇಳಿಕೊಂಡೇ ಜನರು ಹೋರಾಟದ ಕಣಕ್ಕಿಳಿಯುತ್ತಿದ್ದಾರೆ. ಹಜಾರೆ ಆರಂಭಿಸಿದ ಈ ಹೋರಾಟ, ಆಂದೋಲನ, ಚಳವಳಿಯ ಕಾವು ತಣ್ಣಗಾಗದಿರಲಿ. ನಮ್ಮನ್ನು ಆಳುವ “ಜನ ನಾಯಕರು” ತಾವೆಂದು ಎದೆ ತಟ್ಟಿಕೊಂಡು ಹೇಳುತ್ತಾ, ಚುನಾವಣೆ ಬಂದಾಗ ಹಲ್ಲು ಕಿಸಿಯುವ ಈ ನಾಯಕ ಶಿಖಾಮಣಿಗಳು ಎಂಥವರೆಂಬುದನ್ನು ಜನರು ಅರ್ಥ ಮಾಡಿಕೊಳ್ಳತೊಡಗಿದ್ದಾರೆ. ಅದನ್ನೇ ಈ ರಾಜಕಾರಣಿಗಳು ಅರ್ಥ ಮಾಡಿಕೊಳ್ಳುವವರೆಗೂ ಹೋರಾಟ ನಿಲ್ಲದಿರಲಿ. “ನಾವು ಜನರಿಂದ ಆರಿಸಿ ಬಂದಿದ್ದೇವೆ, ಸಂವಿಧಾನವಿದೆ, ನಮಗೆ ಹೇಳಲು ನೀವ್ಯಾರು?” ಅಂತ ಅಣ್ಣಾ ಬಳಗವನ್ನು ಪ್ರಶ್ನಿಸುವವರು ಕಳೆದ 64 ವರ್ಷಗಳಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ಏನು ಮಾಡಿದ್ದಾರೆ? ಅನ್ನೋದು ನಿಮ್ಮ ಮನಸ್ಸಿನಲ್ಲಿರಲಿ. ಇಷ್ಟಕ್ಕೂ ಅಣ್ಣಾ ಹಜಾರೆ ಅವರು ಮಾಡಿದಂತಹಾ ತಪ್ಪಾದರೂ ಏನು? ಅನ್ನೋದನ್ನೂ ನಮಗೆ ನಾವೇ ಕೇಳಿಕೊಳ್ಳಬೇಕಾಗಿದೆ.

ಬನ್ನಿ, ಅಣ್ಣಾ ಹಜಾರೆಯವರನ್ನು ಬೆಂಬಲಿಸೋಣ… ಭ್ರಷ್ಟಾಚಾರದ ವಿರುದ್ಧದ ಹೋರಾಟದ ಕಿಚ್ಚು ತಣ್ಣಗಾಗದಿರುವಂತೆ ನೋಡಿಕೊಳ್ಳೋಣ!
[ವೆಬ್‌ದುನಿಯಾಕ್ಕಾಗಿ]

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

View Comments

  • ಪ್ರಶ್ನೆಗಳು ಸರಿಯಾಗಿವೆ.. ಪ್ರಶ್ನೆಯನ್ನು ನಾವೇ ಕೇಳಿಕೊ೦ಡು ಉತ್ತರವನ್ನೂ ನಾವೇ ಕೊಟ್ಟುಕೊ೦ಡು ಉತ್ತರಪತ್ರಿಕೆಯನ್ನು ನಾವೇ ಇಟ್ಟುಕೊಳ್ಳುವ ಪರಿಸ್ಥಿತಿ ಅನ್ನಿಸುವುದಿಲ್ಲವೇ..?

    ಕಳಕಳಿಯ ಲೇಖನ..

  • ವಿಜಯಶ್ರೀ,
    ಹೌದು, ಒಳ್ಳೆಯ ಉಪಮೆ. ಚಿದಂಬರಂ ಅವರು ಕೂಡ ಬಯಸೋದು ಇದನ್ನೇ, ನಿನ್ನೆ ಪಾರ್ಲಿಮೆಂಟಿನಲ್ಲಿ ಅವರು ಎಲ್ಲ ಸಂಸದರನ್ನು ಅಣ್ಣಾ ಹಜಾರೆ ವಿರುದ್ಧ ಎತ್ತಿ ಕಟ್ಟಲು ನೋಡಿದ್ದರು. ಅಂದ್ರೆ, ಸಂಸದೀಯ ವ್ಯವಸ್ಥೆಗೆ ಅಣ್ಣಾ ಬೆದರಿಕೆ ಎಂಬರ್ಥದ ರೀತಿಯಲ್ಲಿ ಮಾತನಾಡಿದ್ದರು. ಎಂಥಾ ದುರಂತ ನೋಡಿ. ಇವರು ನಮ್ಮನ್ನು ಆಳುವವರು!

Share
Published by
Avinash B

Recent Posts

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

3 weeks ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

3 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

3 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

4 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

5 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

10 months ago