ಅದ್ಭುತ ಮೆದುಳಿಗೆ ಅನ್ವರ್ಥ ನಾಮವೇ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ. ಎಂಜಿನಿಯರಿಂಗ್ ಕ್ಷೇತ್ರದ ದಂತಕಥೆಯೇ ಆಗಿಬಿಟ್ಟಿರುವ ಭಾರತ ಕಂಡ ಮಹಾಮೇಧಾವಿ, ಆಧುನಿಕ ಭಾರತದ ಶಿಲ್ಪಿ, ಭಾರತ ರತ್ನ, ಕನ್ನಂಬಾಡಿಯ ಶಿಲ್ಪಿ, ಸರ್ ಎಂ.ವಿ. (1860-1962) ಅವರ 150ನೇ ಜನ್ಮದಿನ ಇಂದು. ಇದನ್ನು ಪ್ರತಿ ವರ್ಷ ಸೆಪ್ಪೆಂಬರ್ 15ರಂದು ಎಂಜಿನಿಯರ್‌ಗಳ ದಿನಾಚರಣೆ ಎಂದು ದೇಶಾದ್ಯಂತ ಆಚರಿಸಲಾಗುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವೂ ಹೌದು.
ಜಲಸಂಪನ್ಮೂಲ ರಕ್ಷಣೆಗೆ ಸಂಬಂಧಿಸಿದ ತಮ್ಮ ಪ್ರತಿಭೆಗಾಗಿ ಅಂತಾರಾಷ್ಟ್ರೀಯವಾಗಿ ಗೌರವ ಪಡೆದಿರುವ ವಿಶ್ವೇಶ್ವರಯ್ಯ ಬಾಳಿ ಬದುಕಿದ್ದು ನೂರೊಂದು ವರುಷ. ಅಂತೆಯೇ ಅವರು ದೇಶಾದ್ಯಂತ ನೂರೊಂದು ನೆನಪುಗಳನ್ನು ಬಿಟ್ಟು ಹೋಗಿದ್ದಾರೆ, ಇಂದಿನ ಪ್ರತೀ ಎಂಜಿನಿಯರ್‌ಗಳಿಗೂ ಆದರ್ಶಪ್ರಾಯರಾಗಿದ್ದಾರೆ. ಭಾರತದ ಆದ್ಯಂತವಾಗಿ ಹಲವಾರು ನದಿಗಳಿಗೆ ಸೇತುವೆ, ಅಣೆಕಟ್ಟೆ ಮುಂತಾದವುಗಳನ್ನು ಕಟ್ಟಿಸುವಲ್ಲಿ, ಕೈಗಾರಿಕೆ ಮತ್ತು ನೀರಾವರಿ ಯೋಜನೆಗಳನ್ನು ರೂಪಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದ ಅವರು, ಮೈಸೂರಿನಲ್ಲಿ ಬೃಂದಾವನ ಉದ್ಯಾನದ ಪಕ್ಕ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿದ ಕನ್ನಂಬಾಡಿ ಅಣೆಕಟ್ಟೆ (ಕೃಷ್ಣರಾಜ ಸಾಗರ)ಯಿಂದಾಗಿ ಜನಜನಿತರು.
ಅಂತೆಯೇ, ಜೋಗ ಜಲ ವಿದ್ಯುತ್ ಯೋಜನೆಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದ ಅವರು, ಕರ್ನಾಟಕದ ಸರ್ವಾಂಗೀಣ ಪ್ರಗತಿಯ ರೂವಾರಿ ಎಂಬ ಹೆಸರೂ ತಮ್ಮದಾಗಿಸಿಕೊಂಡವರು.
1955ರಲ್ಲಿ ಭಾರತ ರತ್ನ ಪ್ರಶಸ್ತಿ ಪುರಸ್ಕೃತರಾಗಿದ್ದ ಅವರು ಹುಟ್ಟಿದ್ದು ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ. ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪೂರೈಸಿ ಮುಂಬೈಯಲ್ಲಿ ಲೋಕೋಪಯೋಗಿ ಇಲಾಖೆ ಸೇರಿ, ಬಳಿಕ ಭಾರತ ನೀರಾವರಿ ಆಯೋಗಕ್ಕೆ ಸೇರ್ಪಡೆಯಾದ ಬಳಿಕ ಅವರು ಮಾಡಿದ ಸುಧಾರಣೆಗಳು ಅದ್ಭುತ, ಅತ್ಯದ್ಭುತ. ಅವರ ಸಾಧನೆಯನ್ನು ಗುರುತಿಸಿದ ಬ್ರಿಟಿಷ್ ಸರಕಾರ ಅವರಿಗೆ ಸರ್ ಬಿರುದು ನೀಡಿ ಗೌರವಿಸಿತ್ತು.
ಕಡುಬಡತನದಿಂದಲೇ ಹುಟ್ಟಿ ಬದುಕಿದ ಅವರು ನಿವೃತ್ತಿಯ ನಂತರ ಮೈಸೂರು ಸಂಸ್ಥಾನದಲ್ಲಿ ದಿವಾನ ಹುದ್ದೆಯನ್ನು ಅಲಂಕರಿಸಿದ್ದರು. ಅದೊಮ್ಮೆ, ಸಂಬಳ ಹೆಚ್ಚು ಮಾಡುವುದಕ್ಕೆ ಮೈಸೂರು ಮಹಾರಾಜರು ನಿರ್ಧರಿಸಿದಾಗ, ವಿನಾಕಾರಣ ಸಂಬಳ ಹೆಚ್ಚಿಸುವುದು ಸರಿಯಲ್ಲ ಎಂದು ನಯವಾಗಿ ನಿರಾಕರಿಸಿ ಗರಿಮೆ ಮೆರೆದವರು.
ಕಡು ಬಡತನದಲ್ಲಿಯೇ ಹುಟ್ಟಿ ಬೆಳೆದು, ದೇಶದ ಮೇರು ವ್ಯಕ್ತಿಯಾಗಿ ಬೆಳೆದ, ಬೆಳಗಿದ ಮತ್ತು ಜನರ ಬಾಳು ಬೆಳಗಿಸಿದ ಅವರು, ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದ್ದಾರೆ. ಅವರದು ಬೆಲೆ ಕಟ್ಟಲಾಗದ ಸಾಧನೆ ಮತ್ತು ಅವರ ದೂರಗಾಮಿ ಯೋಜನೆಗಳು ಇಂದಿಗೂ ಸಕಾಲಿಕವಾಗಿರುವುದು, ಅವರ ಯೋಜನೆ-ಯೋಚನೆಗಳು ಸಮಯದ ಪ್ರವಾಹದಲ್ಲಿ ಎಷ್ಟೊಂದು ದೂರ ತಲುಪಿದೆ ಎಂಬುದಕ್ಕೆ ನಿದರ್ಶನ.
1928ರಲ್ಲಿ ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸ್ಥಾಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಅವರು, ಅದು ಕಾಲಾನಂತರದಲ್ಲಿ ಅವಸಾನದಂಚಿಗೆ ತಲುಪಿದ್ದಾಗ ತಾವೇ ಆಡಳಿತದ ಉಸ್ತುವಾರಿ ವಹಿಸಿ ಪುನಶ್ಚೇತನಗೊಳಿಸಿದ್ದರು. ಅಂತೆಯೇ ಭದ್ರಾವತಿಯಲ್ಲಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಮೈಸೂರಿನಲ್ಲಿ ಗಂಧದೆಣ್ಣೆ ಕಾರ್ಖಾನೆ, ಸಾಬೂನು, ಕಾಗದ ಕಾರ್ಖಾನೆ, ಚರ್ಮ ಹದ ಮಾಡುವ ಕಾರ್ಖಾನೆಗಳನ್ನು ಸ್ಥಾಪಿಸುವ ಮೂಲಕ ಸ್ವಾತಂತ್ರ್ಯ ಪೂರ್ವದಿಂದಲೇ ಭಾರತದಲ್ಲಿ ಕೈಗಾರಿಕೆ, ನೀರಾವರಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅಂತೆಯೇ ಮೋಟಾರು ಉದ್ಯಮದಲ್ಲಿಯೂ ಕೈಯಾಡಿಸಿದವರು. ಇದಲ್ಲದೆ ಬ್ಯಾಂಕಿಂಗ್ ವಲಯದಲ್ಲಿಯೂ ತಮ್ಮ ಛಾಪು ಒತ್ತಿದ ಅವರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಸಂಸ್ಥಾಪಕರು ಕೂಡ. ಚೇಂಬರ್ ಆಫ್ ಕಾಮರ್ಸ್ ರಚನೆಯೂ ಅವರ ಸಾಧನೆಯ ಹಿರಿಮೆಯ ತುರಾಯಿಗೆ ಮತ್ತೊಂದು ಗರಿ. ಯೆಮೆನ್‌ನಲ್ಲಿ ಅಣೆಕಟ್ಟೆ ಸ್ಥಾಪಿಸಿದ್ದು ಅವರ ಕೀರ್ತಿ ವಿದೇಶದಲ್ಲಿಯೂ ಪಸರಿಸಿದ್ದಕ್ಕೆ ಒಂದು ಉದಾಹರಣೆ.
ಸ್ವಾತಂತ್ರ್ಯ ಹೊಸ್ತಿಲಲ್ಲಿರುವಾಗಲೇ ದೇಶದ ಸರ್ವಾಂಗೀಣ ಪ್ರಗತಿ ಬಗ್ಗೆ ಕನಸು ಕಂಡಿದ್ದ ಅವರು, ದೇಶದ ಅಭಿವೃದ್ಧಿ, ಕೈಗಾರಿಕೆ ಸ್ಥಾಪನೆ ಕುರಿತಾಗಿ ಮಹಾತ್ಮ ಗಾಂಧೀಜಿ ಜೊತೆ ಆಗಾಗ್ಗೆ ಚರ್ಚೆ ನಡೆಸುತ್ತಿದ್ದ, ಪತ್ರ ವ್ಯವಹಾರಗಳನ್ನೂ ನಡೆಸುತ್ತಿದ್ದ ಸರ್ ಎಂ.ವಿ.,
ಬಡ ಕುಟುಂಬದಲ್ಲೇ ಹುಟ್ಟಿ ಬೆಳೆದ ಅವರಲ್ಲಿ ಅದೆಂಥಾ ಪ್ರತಿಭೆಯಿತ್ತು! ಅದಕ್ಕಾಗಿಯೇ ಅವರ ಮೆದುಳನ್ನು ಇಂದಿಗೂ ಮ್ಯೂಸಿಯಂ (ವಸ್ತು ಸಂಗ್ರಹಾಲಯ) ನಲ್ಲಿ ಇರಿಸಲಾಗಿದ್ದು, ಅದನ್ನು ಅಧ್ಯಯನ ಮಾಡುವ ಕುರಿತಾಗಿ ಸಂಶೋಧಕರು ಯೋಚಿಸಿದ್ದರು!
ಯಾರಾದರೂ ಒಳ್ಳೆಯ ಸಲಹೆ, ಉಪಾಯ, ಯೋಜನೆಗಳನ್ನು ರೂಪಿಸಿದರೆ, “ಆಹಾ! ನಿನ್ನದು ವಿಶ್ವೇಶ್ವರಯ್ಯವರ ಮೆದುಳು” ಅಂತ ಹೇಳುವಷ್ಟರ ಮಟ್ಟಿಗೆ ಜನಮಾನಸದಲ್ಲಿ ಹಾಸುಹೊಕ್ಕಾಗಿರುವ ಅವರ ಹೆಸರು ದೇಶದ ಚರಿತ್ರೆಯಲ್ಲಿ ಚಿರಸ್ಥಾಯಿ. ಅಂತಹಾ ಶಾಶ್ವತ ಚೇತನಕ್ಕೆ ವೆಬ್‌ದುನಿಯಾ ಬಳಗದಿಂದ ಸಾಸಿರ ಸಾಸಿರ ಪ್ರಣಾಮಗಳು.
[Webdunia]
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
View Comments
eMdu mareyabarada ,mareyalagada pratiBhi sir M.V. ...monne avara janamada dina ,Ravindra Kalakeshrtadalli "Kannadabadi kattadidarre " anno natak ittu..adaralli neevu heLida ella vishyagaLannu abhinayada mulak torisidaru
ಖಂಡಿತವಾಗಿಯೂ ಹೌದು ಮಹಾಂತೇಶ್. ಇಂಜಿನಿಯರುಗಳ ಆರಾಧ್ಯ ದೈವವೇ ಸರಿ. ಪ್ರಾತಃಸ್ಮರಣೀಯರು ವಿಶ್ವೇಶ್ವರಯ್ಯ, ನಾಟಕ ನೋಡಿ ಮತ್ತಷ್ಟು ಜ್ಞಾನ ಹೆಚ್ಚಿಸಿಕೊಂಡದ್ದು ಕೇಳಿ ಸಂತೋಷವಾಯಿತು.