ಅವಿನಾಶ್ ಬೈಪಾಡಿತ್ತಾಯ
ಪ್ರತಿಯೊಬ್ಬ ನಾರಿಯ ಮನದೊಳಗೆ ಸೂಕ್ಷ್ಮ ಸಂವೇದನೆಯಿದೆ, ಅದನ್ನು ಅರಿಯುವಲ್ಲಿ ಪುರುಷ ವಿಫಲನಾದಾಗ, ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿಯಾಗಬಲ್ಲಳು ಎಂಬ ದೃಷ್ಟಿಕೋನದೊಂದಿಗೆ, ರಾಮಾಯಣದ ವಿಶಿಷ್ಟ ಪಾತ್ರ ಶೂರ್ಪನಖಿಯ ಮತ್ತೊಂದು ಮುಖವು ಬೆಂಗಳೂರು ರಂಗಶಂಕರದಲ್ಲಿ ಇತ್ತೀಚೆಗೆ ಅನಾವರಣಗೊಂಡಿತು.
ಉಡುಪಿಯ ವಲ್ಲರಿ ಕಡೆಕಾರ್ ಅವರ ಸಂಯೋಜನೆಯೊಂದಿಗೆ, ಯಕ್ಷಗಾನ-ನಾಟಕ ಸಮ್ಮಿಳಿತದೊಂದಿಗೆ, ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣರ ನಿರ್ದೇಶನದೊಂದಿಗೆ ಮೂಡಿ ಬಂದಿರುವ ‘ಶೂರ್ಪನಖಾ – ದಿ ಅನ್‌ಸೀನ್ ಫೇಸ್’, ‘ವೇಷ’, ‘ಅಕ್ಷಯಾಂಬರ’ ಮುಂತಾದವುಗಳ ಸಾಲಿನಲ್ಲಿ ಬೆಂಗಳೂರಿನ ರಂಗಶಂಕರದಲ್ಲಿ ಯಕ್ಷಗಾನ ಆಧಾರಿತವಾದ ರಂಗ ಪ್ರಯೋಗವೊಂದು ಜನ ಮನ ಗೆಲ್ಲುವಲ್ಲಿ ಸಫಲವಾಯಿತು.
ರಾಕ್ಷಸ ಕುಲೋದ್ಧಾರಕ ಲಂಕಾಧೀಶ್ವರ ರಾವಣನನ್ನು ದ್ವೇಷಿಸುತ್ತಲೇ, ರಾಮ-ರಾವಣ ‘ಯುದ್ಧದಲ್ಲಿ ಲಂಕಾಧೀಶ್ವರ ಹತನಾದ’ ಎಂಬ ಸಂದೇಶವನ್ನು ಕೇಳುತ್ತಲೇ ಶೂರ್ಪನಖಿ ಖುಷಿಯಿಂದ ಯಕ್ಷಗಾನ ಪರಂಪರೆಯ ತೆರೆಕುಣಿತ, ಒಡ್ಡೋಲಗದೊಂದಿಗೆ ರಂಗ ಪ್ರವೇಶಿಸುವುದರೊಂದಿಗೆ ಶೂರ್ಪನಖಿಯ ಅನಾವರಣವಾಗುತ್ತದೆ. ಚಂದ್ರನಖಿಯಾದ ಶೂರ್ಪನಖಾ, ಘೋರ ಶೂರ್ಪನಖಿಯಾಗಿ ಪರಿವರ್ತನೆಯಾಗುವ ಬಗೆಯನ್ನು, ನಡುನಡುವೆ ಸ್ತ್ರೀ ಮನದ ತುಮುಲಗಳ ಭಾವ ಸಾಗರದ ಅಲೆಗಳನ್ನು ಸಮರ್ಥವಾಗಿಯೇ ಬಿಂಬಿಸಿದರು ವಲ್ಲರಿ.
ಶೂರ್ಪನಖಿ ಹೆಸರೇ ತನಗಿಷ್ಟವಿಲ್ಲ ಎಂಬಲ್ಲಿಂದಲೇ ತನ್ನಣ್ಣ ರಾವಣ ದ್ವೇಷದೊಂದಿಗೆ, ‘ಇಲ್ಲ, ತಾನು ಚಂದ್ರನಖಿ’ ಎಂದೇ ತನ್ನ ಮನಸ್ಸನ್ನು ತೆರೆಡಿದುವ ಆಕೆ, ಸ್ತ್ರೀಸಹಜ ಬಯಕೆಗಳು, ಮನೋಭಾವಗಳೊಂದಿಗೇ ಬೆಳೆದರೂ, ಆದರಿಸುವವರಿಲ್ಲ. ಅಣ್ಣನು ಪ್ರಾಯಪ್ರಬುದ್ಧೆಯಾದ ತನಗೆ ಮದುವೆ ಮಾಡಿಸುವುದನ್ನು ಬಿಟ್ಟು, ತಾನೇ ಮದುವೆಗೆ ಪ್ರಯತ್ನಿಸುತ್ತಿದ್ದನೆಂಬ ನೋವೂ ಶೂರ್ಪನಖಿಗಿತ್ತು. ಒಲ್ಲದ ಮನಸ್ಸಿನಿಂದಲೇ ರಾವಣ, ಮಾರೀಚರು ತನಗಾಗಿ ವಿದ್ಯುಜ್ಜಿಹ್ವನೆಂಬ ರಾಕ್ಷಸನನ್ನು ಮದುವೆ ಮಾಡಿಸಿದರು. ವಿದ್ಯುಜ್ಜಿಹ್ವನೂ, ಕಾಲಕೇಯರೊಂದಿಗೆ ಯುದ್ಧಕ್ಕಾಗಿ ತಿರುಗಾಟ ಮಾಡುತ್ತಿದ್ದುದರಿಂದ, ಆತನ ಸಾಮೀಪ್ಯಸುಖವನ್ನೂ ಕಳೆದುಕೊಂಡ ನೋವು ಅವಳಿಗೆ. ವಿದ್ಯುಜ್ಜಿಹ್ವ ಮಡಿದ ವಾರ್ತೆ ಬರಸಿಡಿಲಾಗಿ ಎರಗಿದಾಗ ಶೂರ್ಪನಖಿ ಮತ್ತಷ್ಟು ಕುಸಿಯುತ್ತಾಳೆ. ಅಣ್ಣನೇ ಕೊಲ್ಲಿಸಿದನೆಂಬ ಕೊರಗೂ ಆವರಿಸಿತ್ತಲ್ಲ. ಕೊನೆಗೆ, ರಾವಣನ ಅಂಕೆಯಲ್ಲಿರುವ ಲಂಕೆ ಯಾವತ್ತೂ ನನಗೆ ಸ್ಮಶಾನದಂತೆ ಎನ್ನುತ್ತಲೇ ದಂಡಕಾರಣ್ಯದ ಪಾಲಾಗುತ್ತಾಳೆ.
ವಿದ್ಯುಜ್ಜಿಹ್ವನ ನೆನಪಿನ ಕುಡಿಯಾಗಿ ಹುಟ್ಟಿದ ಶಂಭೂಕನ ಲಾಲನೆ ಪಾಲನೆಯ ಹಾವಭಾವಾಭಿವ್ಯಕ್ತಿಯೂ ಈ ಸಂದರ್ಭ ಅನಾವರಣಗೊಳ್ಳುತ್ತದೆ. ಆ ನಿರ್ಜನ ಕಾರ್ಗತ್ತಲ ಪ್ರದೇಶದ ಜೀವನವೇ ಆಕೆಯ ಅಂತರಂಗವನ್ನು ಚಂದ್ರನಖಿಯಿಂದ ನಿಧನವಾಗಿ ಘೋರ ಶೂರ್ಪನಖಿಯಾಗಿ ಪರಿವರ್ತಿಸುತ್ತದೆ. ಅಂತರಂಗವೂ ಒಂದು ಅರಣ್ಯವೇ ಅಲ್ಲವೇ? ಅಲ್ಲಿ ವನ್ಯಪ್ರಾಣಿಗಳ ಗರ್ಜನೆಯಾದರೆ, ಇಲ್ಲಿ ನಾನಾ ಭಾವಗಳ ಗರ್ಜನೆಗಳಿವೆ ಎನ್ನುತ್ತಾಳಾಕೆ. ಈ ವೇಳೆ, ಶಂಭೂಕನ ಸಾವಿನ ವಾರ್ತೆಯು ಆಕೆಯೊಳಗಿನ ಬೆಂಕಿಗೆ ಕಾವು ನೀಡುತ್ತದೆ. ರಾವಣನಿಂದಾಗುವ ಅನ್ಯಾಯ, ವಿಭೀಷಣ-ಕುಂಭಕರ್ಣರು ತೋರಿದ ಪ್ರೀತಿಯ ಸವಿಯ ನೆನಪೂ ಆಕೆಗಾಗುತ್ತಿರುತ್ತದೆ.
ಶಂಭೂಕನನ್ನು ಕೊಂದವರನ್ನು ದಂಡಿಸಲು ಹುಡುಕುತ್ತಾ ದಂಡಕಾರಣ್ಯದಿಂದ ಪಂಚವಟಿಗೆ ಬಂದಾಗ, ಅಲ್ಲಿ ಸೀತೆಯ ಸೌಂದರ್ಯವನ್ನು ನೋಡಿದಾಗ, ಒಳಗಿನೊಳಗಿನ ಸ್ತ್ರೀ ಭಾವನೆಗಳು ಮತ್ತೆ ಚಿಗುರುತ್ತವೆ. ಮನವು ರಾಮನನ್ನು ಬಯಸಿದಾಗ, ಲಕ್ಷ್ಮಣನ ಮೂಲಕ ನ್ಯಾಸಚ್ಛೇದನವಾದ ಬಳಿಕ ಶೂರ್ಪನಖಿ ಮತ್ತೆ ಸಿಡಿದೇಳುತ್ತಾಳೆ. ಅನ್ಯಾಯವಾಯಿತೆಂದು ಹುಯಿಲಿಡುತ್ತಾಳೆ. ಶಂಭೂಕನನ್ನು ಕೊಂದಿದ್ದು ರಾಮನೇ ಎಂಬುದು ಕೂಡ ತಿಳಿಯುವ ಆಕೆಯ ರಾಮ ದ್ವೇಷ ಮುಂದುವರಿಯುತ್ತದೆ. ರಾವಣನ ಸಂಹಾರಾನಂತರ ಅಯೋಧ್ಯೆಗೆ ಬಂದಾಗ, ಸೀತೆಯನ್ನು ಕಾಡಿಗಟ್ಟಿದ ವಿಚಾರ ಕೇಳಿ ಮರುಗುತ್ತಾಳೆ. ಜಾನಕಿಯನ್ನು ಅಂದು ವನವಾಸಕ್ಕೆ ತೆರಳುವಾಗ ಇದೇ ಜನ ಕಣ್ಣೀರ್ಗರೆದು ಬೀಳ್ಕೊಟ್ಟಿದ್ದರು; ಇಂದು ರಾಮನ ರಾಜಕಾರಣಕ್ಕಾಗಿ ಆಕೆಯನ್ನು ಇದೇ ಜನ ಕಾಡಿಗಟ್ಟುವಲ್ಲಿ ಬೆಂಬಲಿಸುತ್ತಾರೆ; ಅವಳೂ ನಾನೂ ಒಂದೇ ತಾಯಿಯ ಮಕ್ಕಳಿದ್ದಂತೆ. ಇದೇ ಪ್ರಕೃತಿಯ ಮಡಿಲಲ್ಲಿದ್ದೇವೆ. ಸೀತೆ ತಾಳ್ಮೆ ಸಹನೆಯಿಂದ ಎಲ್ಲವನ್ನೂ ನುಂಗಿಕೊಂಡಳು. ನಾನು ಹಾಗಾಗುವುದಿಲ್ಲ ಎಂದುಕೊಳ್ಳುತ್ತಲೇ ಹೆಣ್ಣಿಗಾಗುವ ಅನ್ಯಾಯವೊಂದು ಮುಗಿಯದ ರೋದನವಾಗಿ ರಂಗದಲ್ಲಿ ಬಿಂಬಿತವಾಗುತ್ತದೆ.
ರಾಮನೂ, ರಾವಣನೂ ರಾಜಕಾರಣಕ್ಕಾಗಿ ಹೆಣ್ಣಿನ ಮೇಲೆ ದೌರ್ಜನ್ಯವನ್ನು ಬೆಂಬಲಿಸಿದರೇ ಹೊರತು, ನ್ಯಾಯ ದೊರಕಿಸಲಿಲ್ಲ ಎಂಬ ಶೂರ್ಪನಖಾಳ ಕೊರಗು ಇಂದಿನ ರಾಜಕಾರಣದ ಸ್ಥಿತಿಯನ್ನೂ ತೆರೆದಿಟ್ಟಿತು. ಹೆಣ್ಣಿಗೂ ಒಂದು ಸೂಕ್ಷ್ಮ ಮನಸ್ಸಿದೆ ಎಂದು ಅರ್ಥೈಸಿಕೊಳ್ಳಲಾಗದ ಪುರುಷ ಸಮಾಜದ ಮನಸ್ಥಿತಿಯ ಬಗೆಗಿನ ಆಕ್ರೋಶ, ಹೆಣ್ಣಿನ ಆಂತರಿಕ ಭಾವನೆಗಳು, ಸೂಕ್ಷ್ಮ ಸುಕೋಮಲ ಮನಸ್ಸಿಗೆ ಘಾತವಾದಾಗ ಯಾವ ಪರಿ ಬದಲಾವಣೆಯಾಗಬಹುದು ಎಂಬುದನ್ನು ವಲ್ಲರಿ ತಮ್ಮ ಆಂಗಿಕ, ವಾಚಿಕ, ನರ್ತನ ಅಭಿನಯದ ಮೂಲಕ ನವರಸಗಳಲ್ಲಿ ಸಮರ್ಥವಾಗಿ ಪಡಿಮೂಡಿಸಿದರು. ಅಭ್ಯಾಸದ ಪರಿಶ್ರಮವು ನಿಧಾನಗತಿಯ ಯಕ್ಷಗಾನೀಯ ಪ್ರವೇಶ ಕುಣಿತದಲ್ಲಿ ಅತ್ಯಂತ ನಿಖರವಾಗಿ ಬಿಂಬಿತವಾಗುತ್ತಿತ್ತು. ತಾಳ ಲಯಗಳು ಮೇಳೈಸಿದ ಒಂದನೇ ಕಾಲದ ಪ್ರವೇಶದ ಕುಣಿತವು ಮುಗಿದಾಗ, ಇದು ಇನ್ನೂ ಇರಬಾರದಿತ್ತೇ ಎಂಬ ಆನಂದವನ್ನು ಮೂಡಿಸಿದ್ದು ಅತಿಶಯವಲ್ಲ.
ಹಿಮ್ಮೇಳದ ತಾಳ-ಮೇಳ, ಸಾಂದರ್ಭಿಕವಾಗಿ ಏರುಮದ್ದಳೆಯ ನಿನಾದ, ಲಾಲಿತ್ಯ ಸನ್ನಿವೇಶದಲ್ಲಿ ತಬಲಾದ ಮೆಲುದನಿಗೆ ತಕ್ಕಂತೆ ವೀರಾವೇಶ ಮತ್ತು ಶೃಂಗಾರ ರಸದ ಕುಣಿತಗಳು ಶೂರ್ಪನಖಾಂತರಂಗವನ್ನು ಪ್ರೇಕ್ಷಕರೆದುರು ಬಿಚ್ಚಿಡುವಲ್ಲಿ ಯಶಸ್ವಿಯಾಯಿತು.
ದಿನೇಶ್ ಭಟ್ ಯಲ್ಲಾಪುರ ಅವರ ಸುಮಧುರ ಕಂಠದ ಭಾವಸ್ಫುರಿಸುವ ಹಾಡುಗಾರಿಕೆ, ಕೃಷ್ಣಮೂರ್ತಿ ಭಟ್ ಸುಮಧುರ ಮದ್ದಳೆ ವಾದನ, ಶೈಲೇಶ್ ಅವರಿಂದ ಚೆಂಡೆ, ರವಿ ಮೈಸೂರು ಅವರ ವಯಲಿನ್, ಗಣೇಶ್ ಎಲ್ಲೂರು – ತಬಲಾ, ಶೈಲೇಶ್ ನಾಯಕ್ ಡೋಲಕ್ ಜತೆಗೆ ಸ್ವತಃ ವಲ್ಲರಿ ಅವರ ಪರಿಕಲ್ಪನೆಯಲ್ಲೇ ಮೂಡಿದ ಈ ನಾಟಕ-ಯಕ್ಷಗಾನ-ನಾಟ್ಯ ಕಲೆಗಳ ಸಮಾಗಮದ ರಂಗ ಪ್ರಯೋಗ ಪುನರಪಿ ನೋಡುವ ಆಕಾಂಕ್ಷೆಯನ್ನು ಮೂಡಿಸಿತು.
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.