ಇಂಥ ಸ್ಮಾರ್ಟ್‌ಫೋನ್ ಸ್ಕ್ರೀನ್‌ಗಳು ಒಮ್ಮೊಮ್ಮೆ ಜಪ್ಪಯ್ಯ ಎಂದರೂ ಮುಟ್ಟಿದರೆ, ತಟ್ಟಿದರೆ, ಸ್ಪರ್ಶಿಸಿದರೆ, ಒತ್ತಿದರೆ ಪ್ರತಿಸ್ಪಂದಿಸುವುದೇ ಇಲ್ಲ. ಮಣ್ಣಲ್ಲಿ ಅಥವಾ ನೀರಲ್ಲಿ ಕೆಲಸ ಮಾಡಿ ಬಂದು ಮುಟ್ಟಿದಾಗಲೂ ಹೀಗಾಗಿರಬಹುದು. ‘ಹೋಯಿತು, ಇಷ್ಟು ದುಡ್ಡು ಕೊಟ್ಟು ಖರೀದಿಸಿದ ಫೋನ್ ಹಾಳಾಯಿತು’ ಅಂತ, ಎಲ್ಲವನ್ನೂ ಕಳೆದುಕೊಂಡ ಭಾವದಿಂದ ಬಹುತೇಕರು ಮೊಬೈಲ್ ರಿಪೇರಿ ಅಂಗಡಿಗಳಿಗೆ ಧಾವಿಸುತ್ತಾರೆ. ಭಯಾತುರದಿಂದ ನನಗೆ ಫೋನ್ ಮಾಡಿದವರೂ ಇದ್ದಾರೆ. ಪರಸ್ಪರ ಭೇಟಿಯಾದಾಗಲೂ, ‘ಇದು ಕೆಲಸ ಮಾಡುತ್ತಿಲ್ಲ; ನೋಡಿಬಿಡಿ’ ಅಂತ ಮೊಬೈಲನ್ನು ಕೊಟ್ಟವರಿದ್ದಾರೆ. ಹಲವರ ಫೋನ್‌ಗೆ ನಾನು ಮಾಡಿದ ‘ಸ್ಪರ್ಶ ಚಿಕಿತ್ಸೆ’ ಕೆಲಸ ಮಾಡಿದೆ. ಇದೇನೂ ರಾಕೆಟ್ ಸೈನ್ಸ್ ಅಲ್ಲ.
ಬೆರಳ ಸ್ಪರ್ಶಕ್ಕೆ ಫೋನ್ ಸ್ಪಂದಿಸದಿದ್ದರೆ ಅಥವಾ ಮುಟ್ಟಿದರೆ ಯದ್ವಾತದ್ವ ಕೆಲಸ ಮಾಡುತ್ತದೆ ಎಂದಾದರೆ, ಅದೇ ರೀತಿ ಕೆಲವೊಂದು ಆ್ಯಪ್‌ಗಳನ್ನು ಮುಟ್ಟಿದಾಕ್ಷಣ ಫೋನ್ ಹ್ಯಾಂಗ್ ಆಗುತ್ತದೆ (ಎಷ್ಟೇ ಅದುಮಿದರೂ ಮಿಸುಕಾಡುವುದಿಲ್ಲ) ಎಂದಾದರೆ, ಕೆಲವೊಂದು ನಾವೇ ಮಾಡಬಹುದಾದ ಕಾರ್ಯಗಳಿವೆ. ತೀರಾ ಸುಲಭವಿದು. ಫೋನ್ ತಜ್ಞರಲ್ಲಿಗೆ ಒಯ್ಯುವ ಮುನ್ನ ಈ ಸಲಹೆಗಳನ್ನು ಅನುಸರಿಸಿ ನೋಡಿದರೆ, ಸಾಕಷ್ಟು ಹಣ ಉಳಿತಾಯ ಮಾಡಬಹುದು. ಆಂಡ್ರಾಯ್ಡ್ ಅಥವಾ ಆ್ಯಪಲ್ ಅಥವಾ ಬೇರಾವುದೇ ಟಚ್ ಸ್ಕ್ರೀನ್ ಫೋನ್‌ಗಳಿಗೂ ಈ ಸಲಹೆಗಳು ನೆರವಿಗೆ ಬರಬಹುದು.
1. ಸ್ಕ್ರೀನ್, ಬೆರಳು ಸ್ವಚ್ಛವಾಗಿರಲಿ
ಟಚ್ ಸ್ಕ್ರೀನ್ ಕೆಲಸ ಮಾಡದೇ ಇರಲು ಸಾಮಾನ್ಯ ಕಾರಣವೆಂದರೆ ಸ್ವಚ್ಛತೆಯ ಕೊರತೆ. ಕೈಯಲ್ಲಿ ಅಥವಾ ಸ್ಕ್ರೀನ್ ಮೇಲೆ ಎಣ್ಣೆಯ, ನೀರಿನ ಅಂಶ, ಧೂಳು, ಮಣ್ಣು ಇದ್ದರೆ, ನೇರವಾಗಿ ಬಿಸಿಲು ಬಿದ್ದಾಗ ಟಚ್ ಸ್ಕ್ರೀನ್ ಸರಿಯಾಗಿ ಕೆಲಸ ಮಾಡಲಾರದು. ಇದಕ್ಕೇನು ಮಾಡಬೇಕು? ಕೈಗಳು ಸ್ವಚ್ಛವಾಗಿರಲಿ ಮತ್ತು ಒಂದಿನಿತು ತೇವಾಂಶವಿರುವ ಮೆದುವಾದ ಹತ್ತಿಬಟ್ಟೆಯಿಂದ ಸ್ಕ್ರೀನ್ ಗಾಜಿನ ಮೇಲೆ ಚೆನ್ನಾಗಿ ಒರೆಸಿ. ನೀರಿನಂಶ ಜಾಸ್ತಿ ಬೇಡ. ಈಗ ಸ್ಪರ್ಶಿಸಿ ನೋಡಿ.
2. ದಪ್ಪನೆಯ ಸ್ಕ್ರೀನ್ ಗಾರ್ಡ್ ಬೇಡ
ಕೆಳಗೆ ಬಿದ್ದಾಗ ಸ್ಕ್ರೀನ್ ಗಾಜು ಒಡೆದರೆ ಅದನ್ನು ಸರಿಪಡಿಸಲು (ವಿಶೇಷವಾಗಿ ಡಿಸ್‌ಪ್ಲೇ ಕಾರ್ಡ್ ಕೆಟ್ಟುಹೋಗಿದ್ದರೆ) ವ್ಯಯಿಸುವ ಹಣಕ್ಕೆ ಒಂದು ಸಾಮಾನ್ಯ ಮೊಬೈಲ್ ಫೋನನ್ನೇ ಖರೀದಿಸಬಹುದು. ಅಷ್ಟು ದುಬಾರಿ ಇರುತ್ತದೆ ಎಂಬುದು ತಿಳಿದಿರಲಿ. ಈ ಕಾರಣಕ್ಕಾಗಿಯೇ ಕೆಳಗೆ ಬಿದ್ದರೂ ಸ್ಕ್ರೀನ್‌ಗೆ ಹಾನಿಯಾಗದಂತೆ ಕೆಲವರು ಸ್ಕ್ರೀನ್ ಗಾರ್ಡ್ ಅಥವಾ ಟೆಂಪರ್ಡ್ ಗ್ಲಾಸ್ ಅಂಟಿಸಿರುತ್ತಾರೆ. ಇದು ಉತ್ತಮ ಗುಣಮಟ್ಟದ್ದಾಗಿದ್ದರೆ ಸಮಸ್ಯೆಯಾಗುವುದಿಲ್ಲ. ಹಾದಿ-ಬೀದಿಯಲ್ಲಿ ಸಿಗುವವುಗಳಲ್ಲಿ ಕೆಲವು ಕಳಪೆಯಾಗಿರುವ ಸಾಧ್ಯತೆಗಳಿರುವುದರಿಂದ, ಅದನ್ನು ಬದಲಾಯಿಸಿ ನೋಡಿ.
3. ಕಂಪನಿಯ ಚಾರ್ಜರ್
ಫೋನ್ ಚಾರ್ಜ್ ಮಾಡಲು ತೀರಾ ಕಳಪೆ ಗುಣಮಟ್ಟದ ಚಾರ್ಜರ್ ಬಳಸಿದರೆ ಕೂಡ ನಿಮ್ಮ ಬೆರಳ ಸ್ಪರ್ಶವು ಮೊಬೈಲ್ ಸ್ಕ್ರೀನ್ ಮೇಲೆ ಸರಿಯಾಗಿ ಕೆಲಸ ಮಾಡಲಾರದು. ಚಾರ್ಜ್ ಆಗುತ್ತಿರುವಾಗ ಮೊಬೈಲ್ ಸ್ಕ್ರೀನ್ ಮೇಲೆ ಬೆರಳಾಡಿಸಿದಾಗ ನಿಮ್ಮ ಅರಿವಿಗೆ ಇದು ಬಂದಿರಬಹುದು. ಆಯಾ ಮೊಬೈಲ್ ಜತೆಗೆ ಬಂದಿರುವ ಮತ್ತು ಆಯಾ ಕಂಪನಿಯ ಚಾರ್ಜಿಂಗ್ ಅಡಾಪ್ಟರ್‌ಗಳನ್ನೇ ಬಳಸಿ.
4. ಸಾಫ್ಟ್ ರೀಬೂಟ್ ಮತ್ತು ಹಾರ್ಡ್ ರೀಬೂಟ್
ಇವ್ಯಾವುವೂ ಕೆಲಸ ಮಾಡಿಲ್ಲವೆಂದರೆ ಮತ್ತೊಂದು ವಿಧಾನವಿದೆ. ಇದು ನಿಮ್ಮ ಆ್ಯಪ್‌ಗಳ ಯದ್ವಾತದ್ವಾ ವರ್ತನೆಗೂ, ಟಚ್ ಸ್ಕ್ರೀನ್‌ನ ಬೇಕಾಬಿಟ್ಟಿ ವರ್ತನೆಗೂ ಪರಿಹಾರವಾಗಬಹುದು ಮತ್ತು ಅದೆಷ್ಟೋ ಸಮಸ್ಯೆಗಳಿಗೂ ಸದ್ದಿಲ್ಲದ ಪರಿಹಾರ ನೀಡಬಹುದು. ಇದು ನಿಮ್ಮೆಲ್ಲ ಫೈಲುಗಳು, ಸೆಟ್ಟಿಂಗ್‌ಗಳನ್ನೆಲ್ಲ ಅಳಿಸಿ ಹಾಕಿ, ಮೊಬೈಲಿನ ತಂತ್ರಾಂಶವನ್ನು ಹೊಚ್ಚ ಹೊಸದರಂತೆ ಮಾಡಬಲ್ಲ ‘ಫ್ಯಾಕ್ಟರಿ ಡೇಟಾ ರೀಸೆಟ್’ ಮಾಡುವ ವಿಧಾನವಲ್ಲ. ರೀಸೆಟ್ ಹಾಗೂ ರೀಬೂಟ್ ನಡುವೆ ವ್ಯತ್ಯಾಸವಿದೆ. ರೀಬೂಟ್ ಎಂದರೆ ರೀಸ್ಟಾರ್ಟ್ ಎಂದಷ್ಟೇ ಅರ್ಥ. ಸಾಫ್ಟ್ ರೀಬೂಟ್ ಎಂದರೆ, ಮೊಬೈಲನ್ನು ನಾವು ಸಾಮಾನ್ಯವಾಗಿ ಮಾಡುವಂತೆ ರೀಸ್ಟಾರ್ಟ್ ಮಾಡುವುದು. ಅದರಿಂದಲೂ ಪರಿಹಾರವಾಗದಿದ್ದರೆ, ಹಾರ್ಡ್ ರೀಬೂಟ್ ಮಾಡಬೇಕಾಗುತ್ತದೆ. ಇದಕ್ಕೆ, ಐಫೋನ್ 6 ಹಾಗೂ ಕೆಳಗಿನ ಆವೃತ್ತಿಯ ಫೋನ್ ಉಳ್ಳವರು ಹೋಮ್ ಬಟನ್ ಮತ್ತು ಪವರ್ ಬಟನ್ ಎರಡನ್ನೂ ಏಕಕಾಲಕ್ಕೆ ಒತ್ತಿ ಹಿಡಿದುಕೊಳ್ಳಿ. ಆ್ಯಪಲ್‌ನ ಲೋಗೋ ಬರುವವರೆಗೆ ಕಾದು, ಕೈಬಿಡಿ. ರೀಬೂಟ್ ಆಗುತ್ತದೆ. ಐಫೋನ್ 7 ಹಾಗೂ ನಂತರದ ಆವೃತ್ತಿ ಹೊಂದಿದವರು ಪವರ್ ಬಟನ್ ಹಾಗೂ ವಾಲ್ಯೂಮ್ ಡೌನ್ ಬಟನ್ ಏಕಕಾಲಕ್ಕೆ ಒತ್ತಿ ಹಿಡಿದುಕೊಳ್ಳಬೇಕು.
ಆಂಡ್ರಾಯ್ಡ್ ಫೋನ್‍ನಲ್ಲಾದರೆ, ಪವರ್ ಬಟನ್ ಹಾಗೂ ವಾಲ್ಯೂಮ್ ಡೌನ್ ಬಟನ್‌ಗಳನ್ನು ಏಕಕಾಲದಲ್ಲಿ ಒತ್ತಿ ಹತ್ತು ಹದಿನೈದು ಸೆಕೆಂಡ್ ಹಿಡಿದುಕೊಳ್ಳಿ. ಆಯಾ ಫೋನ್‌ನ ಕಂಪನಿ ಲೋಗೋ ಬರುವವರೆಗೂ ಒತ್ತಿ ಹಿಡಿದು, ನಂತರ ಬಿಟ್ಟುಬಿಡಿ. ರೀಸ್ಟಾರ್ಟ್ ಆಗುತ್ತದೆ.
5. ಸ್ಟೋರೇಜ್ ನೋಡಿಕೊಳ್ಳಿ
ಕೆಲವೊಮ್ಮೆ ನಿಮ್ಮ ಆಂತರಿಕ ಸ್ಟೋರೇಜ್ (ಇಂಟರ್ನಲ್ ಮೆಮೊರಿ) ಭರ್ತಿಯಾಗಿ, ಹೊಸ ಫೈಲುಗಳಿಗೆ ಜಾಗ ಇಲ್ಲದೇ ಹೋದಾಗಲೂ ಟಚ್ ಸ್ಕ್ರೀನ್ ಅಥವಾ ಬೇರೆ ಆ್ಯಪ್‌ಗಳು ಸರಿಯಾಗಿ ಕೆಲಸ ಮಾಡಲಾರವು. ಇದಕ್ಕಾಗಿ ಫೋನ್‌ನಲ್ಲಿರುವ ಫೋಟೋ, ವೀಡಿಯೋ, ಆಡಿಯೋ ಮತ್ತಿತರ ಫೈಲುಗಳಲ್ಲಿ ಬೇಡವಾಗಿರುವುದನ್ನು ಡಿಲೀಟ್ ಮಾಡಿ ಮತ್ತು ಬೇಕಾಗಿರುವುದನ್ನು ಬೇರೆ ಮೆಮೊರಿ ಕಾರ್ಡ್ ಅಥವಾ ಕಂಪ್ಯೂಟರಿಗೆ, ಬಾಹ್ಯ ಹಾರ್ಡ್ ಡ್ರೈವ್‌ಗೆ ವರ್ಗಾಯಿಸಿಬಿಡಿ.
ಇವ್ಯಾವುವೂ ನಿಮ್ಮ ಟಚ್ ಸ್ಕ್ರೀನ್ ಸಮಸ್ಯೆಯನ್ನು ಸರಿಪಡಿಸಿಲ್ಲವೆಂದಾದರೆ ಕೊನೆಗೆ ಫ್ಯಾಕ್ಟರಿ ಡೇಟಾ ರೀಸೆಟ್ ಆಯ್ಕೆ ಮಾಡಿಕೊಳ್ಳಿ. ಅದೂ ಆಗಿಲ್ಲವೆಂದಾದರೆ ಮಾತ್ರ ಮೊಬೈಲ್ ದುರಸ್ತಿ ತಜ್ಞರ ಸಹಾಯ ಪಡೆಯಬಹುದು. ಆದರೆ ನೆನಪಿರಲಿ, ಮೊಬೈಲ್ ಮಾರಾಟ ಮಾಡುವವರೆಲ್ಲರೂ ಮೊಬೈಲ್ ತಜ್ಞರಾಗಿರುವುದಿಲ್ಲ.
ಯಾವತ್ತೂ ಮೊಬೈಲ್ ಕೈಯಿಂದ ಜಾರಿ ಬೀಳದಂತೆ ಎಚ್ಚರಿಕೆ ವಹಿಸಿ. ಇದು ಅದರೊಳಗಿನ ಸೂಕ್ಷ್ಮವಾಗಿರುವ ಆಂತರಿಕ ಹಾರ್ಡ್‌ವೇರ್ ಭಾಗಗಳಿಗೆ (ಯಂತ್ರಾಂಶಗಳಿಗೆ) ಹಾನಿ ಉಂಟು ಮಾಡಬಹುದು.
ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಜಯ ಕರ್ನಾಟಕ ಅಂಕಣ, 03 ಅಕ್ಟೋಬರ್ 2017 ಮಂಗಳವಾರ
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು