Categories: myworldOpinion

ಲಜ್ಜೆಗೇಡಿ ರಾಜಕಾರಣಿಗಳನ್ನು ನೀವು ನಂಬುವಿರಾ?

ಏನು ಪ್ರಪಂಚವಿದು! ಏನು ಧಾಳಾಧಾಳಿ! |
ಏನದ್ಭುತಾಪ್ರಶಕ್ತಿಬಿರ್ಘಾತ! ||
ಮಾನವನ ಗುರಿಯೇನು? ಬೆಲೆಯೇನು? ಮುಗಿವೇನು? |
ಏನರ್ಥವಿದಕೆಲ್ಲ? – ಮಂಕುತಿಮ್ಮ

ಇದು ವೆಬ್‌ದುನಿಯಾದಲ್ಲಿ ಸಾಪ್ತಾಹಿಕವಾಗಿ ಮೂಡಿಬರುತ್ತಿರುವ “ನೀವು ನಂಬುವಿರಾ” ಎಂಬ ಸರಣಿಗೆ ಪೂರಕವಾದ ರಂಜನೀಯ ಬೆಳವಣಿಗೆ… ರಾಜಕಾರಣಿಗಳನ್ನು ನೀವು ನಂಬುವಿರಾ? ಎಂದು ನಾವು ಕೇಳುತ್ತೇವೆ. ಹೌದು ಅಥವಾ ಇಲ್ಲ ಎಂದು ಉತ್ತರಿಸುವುದು ನಿಮಗೆ ಬಿಟ್ಟ ವಿಷಯ.

ಹೊಲಸು ರಾಜಕೀಯ ಎಂಬ ಪದಪುಂಜದ ಎಲ್ಲಾ ಮಜಲುಗಳನ್ನೂ ದಾಟಿ, ಇಡೀ ದೇಶಕ್ಕೆ ದೇಶವೇ ಕರ್ನಾಟಕದತ್ತ ನೋಡಿ ನಗುವಂತೆ ಮಾಡಿದ ರಾಜಕಾರಣವಿದು. ಪ್ರಜಾಪ್ರಭುತ್ವದಲ್ಲೇ ಒಂದು ಕಪ್ಪು ಚುಕ್ಕೆ. ಕರ್ನಾಟಕದ ಜನತೆಗೆ ಅವಮಾನ. ರಾಜ್ಯದ ಜನತೆಯ ನಂಬಿಕೆಗೇ ಇಟ್ಟ ಕೊಳ್ಳಿ. ಎರಡೂ ಪಕ್ಷಗಳ ಅಧಿಕಾರ ಲಾಲಸೆಯಿಂದ ನಿರ್ಮಾಣವಾಗಿದೆ ಇಂಥದ್ದೊಂದು ಸ್ಥಿತಿ.

ಇಲ್ಲಿ ಅಂತೂ ಇಂತೂ ಯಡಿಯೂರಪ್ಪನವರ ಮುಖ್ಯಮಂತ್ರಿಯಾಗಬೇಕೆಂಬ ಆಸೆಯೊಂದು ಪೂರ್ಣವಾದಂತಾಯಿತಷ್ಟೇ ಹೊರತಾಗಿ, ಮೈತ್ರಿ, ವಿಶ್ವಾಸ, ರಾಜ್ಯದ ಅಭಿವೃದ್ಧಿ ಚಿಂತನೆ, ಕಾರ್ಯಾನುಷ್ಠಾನದ ಇಚ್ಛಾಶಕ್ತಿ… ಇವುಗಳಿಗೆ ಯಾವುವಕ್ಕೂ ಬೆಲೆ ಇಲ್ಲದಂತಾಯಿತು ಮತ್ತು ರಾಜಕಾರಣಿಗಳನ್ನು ಇನ್ನು ಮುಂದೆ ಯಾರು ಕೂಡ ನಂಬಬಾರದು ಎಂಬಂತಹ ಸ್ಥಿತಿ ನಿರ್ಮಾಣವಾಯಿತು. ಏಳು ದಿನ, ನಾಲ್ಕು ಗಂಟೆ, 40 ನಿಮಿಷ ಕಾಲ ರಾಜ್ಯವಾಳಿದ ಯಡಿಯೂರಪ್ಪ, ರಾಜ್ಯ ಕಂಡ ಅತಿ ಕಡಿಮೆ ಅವಧಿಯ ಮುಖ್ಯಮಂತ್ರಿ ಎಂದೂ ಕರೆಸಿಕೊಂಡರು. ಮುಖ್ಯಮಂತ್ರಿಯಾಗಿ ಸದನದಲ್ಲಿ ಚೊಚ್ಚಲ ಭಾಷಣ ಮಾಡುವ ದಿನವೇ, ವಿಶ್ವಾಸಮತ ಎದುರಿಸುವ ಮುನ್ನ ಕೊನೆಯ ಭಾಷಣವನ್ನೂ ಮಾಡಿದರು ಯಡಿಯೂರಪ್ಪ.

ರಾಷ್ಟ್ರಪತಿ ಭವನದಲ್ಲಿ ಶಾಸಕರ ಪೆರೇಡ್ ಮಾಡಿಸಿ, ನಮಗೆ 125ಕ್ಕಿಂತ ಹೆಚ್ಚು ಸಂಖ್ಯಾಬಲವಿದೆ, ಸರಕಾರ ರಚನೆಗೆ ಅವಕಾಶ ಮಾಡಿಕೊಡಿ ಅಂತೆಲ್ಲಾ ಬೊಬ್ಬೆ ಹೊಡೆದ ತಥಾಕಥಿತ “ಮಿತ್ರ” ಪಕ್ಷಗಳು ಈಗ ಮಾಡಿದ್ದೇನು? ರಾಷ್ಟ್ರಪತಿ ಆಳ್ವಿಕೆ ಕೊನೆಗೊಳಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ, ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಪಕ್ಷಪಾತತನ ಪ್ರದರ್ಶಿಸುತ್ತಿದ್ದಾರೆ ಎನ್ನುವಷ್ಟರ ಮಟ್ಟಿಗೆ ಟೀಕೆಗಳು ಕೇಳಿ ಬಂದಿದ್ದವು. ಇದರೊಂದಿಗೆ, ನಾವಿಬ್ಬರೂ ಮತ್ತೆ ಒಂದಾಗಿದ್ದೇವೆ, ಸ್ಥಿರ ಸರಕಾರ ನೀಡುತ್ತೇವೆ, ಅಸಮಾಧಾನವಿಲ್ಲ ಎಂದು ಸಂವಿಧಾನದ ಪರಮೋಚ್ಚ ಸ್ಥಾನದಲ್ಲಿರುವ ರಾಷ್ಟ್ರಪತಿಯವರಿಗೇ ಸುಳ್ಳು ಹೇಳಿದ ಈ ರಾಜಕಾರಣಿಗಳನ್ನು ಭವಿಷ್ಯದಲ್ಲಿ ನಂಬುವುದಾದರೂ ಹೇಗೆ?

ಈ ದೇಶವನ್ನು ಪ್ರಧಾನಿ ಹುದ್ದೆಯಲ್ಲಿ ಕುಳಿತು ಆಳ್ವಿಕೆ ಮಾಡಿದ ಹಿರಿಯ ರಾಜಕಾರಣಿಯೊಬ್ಬರಿಂದ ಈ ರೀತಿಯ ರಾಜಕೀಯವನ್ನು ನಾವು ನಿರೀಕ್ಷಿಸಿರಲಿಲ್ಲ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರ ಹೇಳಿಕೆಯನ್ನು ನಾವು ಗಮನಿಸಬೇಕು. ಹೌದಲ್ಲ… ದೇಶ ಕಂಡ ಮೊದಲ ಕನ್ನಡ ಪ್ರಧಾನಿ, ಎಷ್ಟೊಂದು ಹೆಮ್ಮೆಯಿತ್ತು, ಗೌರವವಿತ್ತು ನಮಗೆಲ್ಲಾ… ಎಲ್ಲವೂ ಮಣ್ಣುಪಾಲಾಯಿತಲ್ಲಾ…

ಎರಡು ಅಂಶಗಳನ್ನು ನಾವಿಲ್ಲಿ ಗಮನಿಸಬೇಕು. ಒಂದನೆಯದು- ತನ್ನನ್ನು ತಾನು “ಜಾತ್ಯತೀತ” ಎಂದು ಕರೆದುಕೊಳ್ಳುವ ಜೆಡಿಎಸ್ ತಥಾಕಥಿತ “ಕೋಮುವಾದಿ” ಪಕ್ಷದೊಂದಿಗೆ ಕೈಜೋಡಿಸಿ ಮೊದಲ 20 ತಿಂಗಳ ಅಧಿಕಾರದ ಸವಿಯುಂಡಿತಲ್ಲಾ… ತನ್ನ ಅವಧಿ ಮುಗಿದ ಬಳಿಕ, ಬಿಜೆಪಿ ಅಧಿಕಾರಕ್ಕೆ ಬಂದರೆ ಉಳಿಗಾಲವಿಲ್ಲ ಎಂಬ ಕಾರಣಕ್ಕೆ ಕುಂಟು ನೆಪವೊಡ್ಡಿ ಸರಕಾರದ ಪತನಕ್ಕೆ ಕಾರಣವಾಯಿತು. ಆದರೆ ತಮ್ಮ ವಚನಭ್ರಷ್ಟತೆಯಿಂದ “ಜನ ಆಕ್ರೋಶಗೊಂಡಿದ್ದಾರೆ, ಚುನಾವಣೆ ಬಂದರೆ ಮಣ್ಣುಪಾಲಾಗುತ್ತೇವೆ” ಎಂಬುದರ ಸುಳಿವು ಪಡೆದ ಅದೇ ಪಕ್ಷ, “ದಯವಿಟ್ಟು ಸರಕಾರ ರಚಿಸಿ, ಬೇಷರತ್ ಬೆಂಬಲ ನೀಡುತ್ತೇವೆ” ಎಂದು ಬಿಜೆಪಿಯನ್ನು ಗೋಗರೆದಾಗ, ಅದಾಗಲೇ ಚುನಾವಣೆಗೆ ಸಿದ್ಧವಾಗುತ್ತಿದ್ದ ಬಿಜೆಪಿಯಲ್ಲೂ ಒಂದು ಕೈ ನೋಡೋಣ ಎಂಬ ಆಶಾಭಾವವಿತ್ತು.

ಸರಿ, ಜೆಡಿಎಸ್ಸನ್ನು ನಂಬಿ ಬಿಜೆಪಿ ಸರಕಾರ ರಚನೆಗೆ ಒಪ್ಪಿತು. ಈಗ ಬೇಷರತ್ ಬೆಂಬಲವು ಶರ್ತಬದ್ಧ ಬೆಂಬಲಕ್ಕೆ ಸ್ವಯಂಪರಿವರ್ತನೆಯಾಯಿತು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ನಡುಗಿಸಿದ್ದ ಗಣಿ ಹಗರಣದ ಮಹತ್ವದ ಖಾತೆ ತನಗೆ ನೀಡಬೇಕು, ಬೆಂಗಳೂರು-ಮೈಸೂರು ಹೆದ್ದಾರಿ ಯೋಜನೆಯ ಮೇಲೆ ನಿಯಂತ್ರಣವಿರುವ ನಗರಾಭಿವೃದ್ಧಿ ಖಾತೆ ತಮಗೆ ನೀಡಬೇಕು ಎಂದೆಲ್ಲಾ ಖಾತೆಗಾಗಿ ಕ್ಯಾತೆ ಆರಂಭವಾಯಿತು. ಒಪ್ಪಂದ ಪತ್ರಕ್ಕೆ ಛಾಪಾ ಕಾಗದದಲ್ಲೇ ಸಹಿ ಹಾಕಬೇಕು ಎಂಬಿತ್ಯಾದಿ ಷರತ್ತುಗಳು – ಅಂದರೆ ಸರಿ ಸುಮಾರು 21 ತಿಂಗಳ ಹಿಂದೆ ಮೈತ್ರಿ ಏರ್ಪಟ್ಟಾಗ ಇಲ್ಲದೇ ಇದ್ದ ಷರತ್ತುಗಳು ಬಂದವು. ಕೇಂದ್ರದಲ್ಲಿ ಪ್ರತಿಪಕ್ಷ ಸ್ಥಾನದಲ್ಲಿರುವ ರಾಷ್ಟ್ರೀಯ ಪಕ್ಷವೊಂದನ್ನು ಈ ಪ್ರಾದೇಶಿಕ ಪಕ್ಷವೊಂದು ಗಡಗಡನೆ ನಡುಗಿಸುವುದೆಂದರೆ…! ಬಿಜೆಪಿ ಜಗ್ಗಲಿಲ್ಲ. ಪರಿಣಾಮ ಸರಕಾರ ಪತನ.

ಎರಡನೇ ಸಂಗತಿಯೆಂದರೆ, ಕೈಕೊಡುವುದೇ ಚಾಳಿಯಾಗಿಸಿಕೊಂಡಿರುವ ದೇವೇಗೌಡ – ಕುಮಾರಸ್ವಾಮಿ-ರೇವಣ್ಣ ಅವರನ್ನೊಳಗೊಂಡ ಜೆಡಿಎಸ್ ಪಕ್ಷವನ್ನು ಬಿಜೆಪಿ ಎರಡನೇ ಬಾರಿಗೆ ನಂಬಿದ್ದೇಕೆ? ಒಂದು ಬಾರಿಯಾದರೂ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕೆಂಬ ಅಧಿಕಾರ ಲಾಲಸೆಯೇ? ಅಥವಾ ವಾಜಪೇಯಿ ಅವರು 13 ಪಕ್ಷಗಳ ಎನ್‌ಡಿಎ ಸರಕಾರವನ್ನು ಪೂರ್ಣಾವಧಿ ನಡೆಸಿರುವಾಗ ನಮಗೆ ಒಂದು ಪಕ್ಷವನ್ನು ಕನಿಷ್ಠ 19 ತಿಂಗಳ ಕಾಲ ಸರಿದೂಗಿಸಿಕೊಳ್ಳಲು ಸಾಧ್ಯವಾಗದೇಕೆ ಎಂಬ ಹುಂಬ ಧೈರ್ಯವೇ? ಜೆಡಿಎಸ್ ಇತಿಹಾಸ ನೋಡಿದರೆ- ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಂಡಿತು, ಅದಕ್ಕೆ ಕೈಕೊಟ್ಟು, ಬಿಜೆಪಿ ಕೈಹಿಡಿಯಿತು. ಬಿಜೆಪಿಗೂ ಕೈಕೊಟ್ಟು ಮತ್ತೆ ಕಾಂಗ್ರೆಸ್‌ನತ್ತ ವಾಲಿತು. ಆದರೆ ಪಕ್ಷವೇ ಒಡೆಯುವ ಹಂತಕ್ಕೆ ಬಂದಾಗ ಮತ್ತೆ ಬಿಜೆಪಿಯೆಡೆಗೆ ಧಾವಿಸಿತು. ಇದು ಆ ಪಕ್ಷದ ವಿಶ್ವಾಸಾರ್ಹತೆಯನ್ನು ಎತ್ತಿ ತೋರಿಸುವ ಘಟನೆಗಳ ಸರಪಣಿ. ಹೀಗಿದ್ದೂ ರಾಷ್ಟ್ರೀಯ ಪಕ್ಷ ಬಿಜೆಪಿ ದೇವೇಗೌಡರನ್ನು ನಂಬಿತಲ್ಲಾ…! ಇದು ಸ್ವಯಂಕೃತಾಪರಾಧ ಎನ್ನದೇ ವಿಧಿಯಿಲ್ಲ. ಬಿಜೆಪಿಗೆ ಹಾಗೇ ಆಗಬೇಕು ಎನ್ನುವವರಿಗೇನೂ ಕೊರತೆಯಿಲ್ಲ ಈಗ.

ಒಪ್ಪಂದದಂತೆ ಅಧಿಕಾರ ಬಿಟ್ಟು ಕೊಡಲು ನಿರಾಕರಿಸಿದ ಕುಮಾರಸ್ವಾಮಿ ಸರಕಾರಕ್ಕೆ ಬಿಜೆಪಿಯು ಬೆಂಬಲ ಹಿಂತೆಗೆದುಕೊಂಡಾಗ ಜನರಲ್ಲಿ ಬಿಜೆಪಿ ಬಗ್ಗೆ ಅನುಕಂಪವಿತ್ತು. ಮತ್ತೆ ಚುನಾವಣೆಗೆ ಸಿದ್ಧ ಎಂದು ಅದು ಘೋಷಿಸಿದಾಗ ಪೂರ್ಣ ಪ್ರಮಾಣದಲ್ಲಿ ಅನುಕಂಪದ ಅಲೆ ಅದರ ಪರವಾಗಿ ಏಳುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಜೆಡಿಎಸ್ ವಿರುದ್ಧ ಆಕ್ರೋಶ ಮಡುಗಟ್ಟಿತ್ತು. ಆದರೆ ಈಗ ಆಗಿದ್ದೇನು? “ವಚನಭ್ರಷ್ಟ” ಎಂಬ ಹಣೆಪಟ್ಟಿಯನ್ನು ತೊಲಗಿಸಿಕೊಳ್ಳುವ ಉಪಾಯವಾಗಿ ಜೆಡಿಎಸ್ ಮತ್ತೆ ಬೆಂಬಲ ಕೊಟ್ಟಿತಾದರೂ, ಇದೀಗ ವಿಶ್ವಾಸದ್ರೋಹ, ಮಿತ್ರದ್ರೋಹ ಎಂಬಂತಹ ಹಣೆಪಟ್ಟಿಗಳನ್ನು ಹೊತ್ತುಕೊಂಡಿದೆ. ಬಿಜೆಪಿಯು ಅಧಿಕಾರಲಾಲಸೆಯಿಂದಾಗಿಯೇ ಜೆಡಿಎಸ್ ಜತೆಗೆ ಮತ್ತೆ ಕೈಜೋಡಿಸಿತು ಎಂಬ ಕಪ್ಪು ಚುಕ್ಕೆಯನ್ನೂ ತಗುಲಿಸಿಕೊಂಡಿತು. ಹಾಗಾಗಿ ಅದಕ್ಕಿರುವ ಅನುಕಂಪದ ಅಲೆಯ ತೀವ್ರತೆ ಒಂದಿಷ್ಟು ಕಡಿಮೆಯಾಗಿದೆ ಎನ್ನಬಹುದು. ಇನ್ನೊಂದೆಡೆ, ಹುಟ್ಟಿದಾರಭ್ಯ ಅನೇಕ ವಿದಳನೆಗಳನ್ನು ಕಂಡಿದ್ದ ಜನತಾ ದಳದ (ಎಸ್) ಭಾಗವು, ದೇವೇಗೌಡರು ಸ್ವಹಿತಾಸಕ್ತಿಗಾಗಿ ಪಕ್ಷದ ಶಾಸಕರನ್ನೆಲ್ಲಾ ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಿರುವುದರ ಬಗ್ಗೆ ಪಕ್ಷದೊಳಗೆ ಅಸಮಾಧಾನ ಹೊಗೆಯಾಡುತ್ತಿರುವುದರೊಂದಿಗೆ ಮತ್ತೊಂದು ಸುತ್ತಿನ ಒಡಕಿನ ಲಕ್ಷಣಗಳನ್ನು ತೋರಿಸುತ್ತಿದೆ. ಅಸಮಾಧಾನಗೊಂಡಿರುವ ಶಾಸಕರಿಗಂತೂ, ಚುನಾವಣೆ ಎದುರಾದರೆ ಜನರಿಗೆ ಮುಖ ತೋರಿಸುವುದು ಹೇಗೆಂಬ ಚಿಂತೆ ಕಾಡಿದೆ.

ಆದರೆ ಜನತೆ ಇಂಥದ್ದನ್ನೆಲ್ಲಾ ಬಹಳ ಬೇಗ ಮರೆಯುತ್ತಾರೆ ಎಂಬ ಸತ್ಯ ಈ ರಾಜಕಾರಣಿಗಳಿಗೆ ಗೊತ್ತಿದೆ. ಅದೇ ಕಾರಣಕ್ಕೆ “ಆಡಿದ್ದೇ ಆಟ” ಎಂಬಂತಾಗಿದೆ ಅವರ ಧೋರಣೆ. ನಮಗೆ ಜನರ ಪುಕ್ಕಟೆ ಓಟು ದೊರೆತಿದೆ, ಏನು ಬೇಕಾದರೂ ಮಾಡಬಹುದು ಎಂದು ತಿಳಿದುಕೊಂಡಿದ್ದಾರೆ ಈ ರಾಜಕಾರಣಿಗಳು. ಅಧಿಕಾರದ ಮುಂದೆ ರಾಜ್ಯದ ಅಭಿವೃದ್ಧಿಯ ಇಚ್ಛಾಶಕ್ತಿಯೆಲ್ಲಾ ಯಾವ ಲೆಕ್ಕ. ಏನಿದ್ದರೂ ಅಧಿಕಾರ ಮೊದಲು, ಅಭಿವೃದ್ಧಿಯು “ಆಮೇಲೆ ನೋಡಿಕೊಳ್ಳೋಣ” ಎಂಬ ವಿಷಯವಾಗಿಬಿಟ್ಟಿದೆ ಅವರಿಗೆ.

ರಾಜಕೀಯ, ಸಿದ್ಧಾಂತ, ತತ್ವ, ಪ್ರಾಮಾಣಿಕತೆ, ವಿಶ್ವಾಸಾರ್ಹತೆ, ರಾಜ್ಯದ ಪ್ರಗತಿಯ ಇಚ್ಛಾಶಕ್ತಿ, ಸಮಸ್ಯೆ ನಿವಾರಣೆಯ ಕಾಳಜಿ… ಈ ಪದಗಳೆಲ್ಲವೂ ಇಂದಿನ ರಾಜಕಾರಣದಲ್ಲಿ ಅನಾಥವಾಗಿವೆ. ಅಷ್ಟು ಮಾತ್ರವಲ್ಲ, ರಾಷ್ಟ್ರಪತಿಯವರೆದುರೇ ಹಸಿ ಹಸಿ ಸುಳ್ಳು ನುಡಿದ ಈ ರಾಜಕಾರಣಿಗಳು ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭವಾಗಿರುವ ಮಾಧ್ಯಮಗಳ ಮೇಲೂ ಕಪ್ಪು ಚುಕ್ಕೆ ಇರಿಸಲು ಯತ್ನಿಸಿದರು ಎಂಬುದನ್ನು ಇಲ್ಲಿ ಗಮನಿಸಬೇಕು. ನಮ್ಮಿಬ್ಬರ ನಡುವೆ ಯಾವುದೇ ಅಸಮಾಧಾನಗಳಿಲ್ಲ, ಸರಕಾರ ಸುಸೂತ್ರವಾಗಿ ನಡೆಯುತ್ತದೆ, ನಮ್ಮ ನಡುವೆ ಬಿಕ್ಕಟ್ಟು ಇದೆ ಎಂಬುದು ಮಾಧ್ಯಮಗಳ ಸೃಷ್ಟಿ ಅಂತ ಗೂಬೆ ಕೂರಿಸಲಾರಂಭಿಸಿದರು. ಕೊನೆಗೂ ಆಗಿದ್ದೇನು? ಇದು ಮಾಧ್ಯಮಗಳು ಗೂಬೆ ಕೂರಿಸಿದ್ದೇ?

ಚುನಾವಣೆಯ ಸದ್ದು ಕೇಳಿಬರುತ್ತಿದೆ… ಮತದಾರರೇ, ಈ ರಾಜಕಾರಣಿಗಳು ಮತ್ತೆ ಯಾವ ರೀತಿ ಮುಖ ಹೊತ್ತುಕೊಂಡು ನಿಮ್ಮ ಬಳಿ ಮತ ಯಾಚನೆಗಾಗಿ ಬರುತ್ತಾರೆ ಎಂಬುದನ್ನೊಮ್ಮೆ ಯೋಚಿಸಿ… ಯೋಚಿಸಿ ಯೋಚಿಸಿ… ಮತ ಚಲಾಯಿಸಿ… ಸ್ವಾರ್ಥಿಗಳಿಗೆ ಪಾಠ ಕಲಿಸಿ.

 ವೆಬ್‌ದುನಿಯಾ ಕನ್ನಡ ತಾಣದಲ್ಲಿ ಈ ಲೇಖನ ಪ್ರಕಟವಾಗಿದೆ.

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

View Comments

  • ಅವೀ,

    ಚುನಾವಣೆ ಮುಂದಿದೆ ಸರಿ..ಮತದಾರರು ತಮ್ಮ ತಲೆ ಉಪಯೋಗಿಸಬೇಕೆಂಬುದು ನಿಜ.ಆದರೆ ಇರುವ ಆಯ್ಕೆಗಳಲ್ಲಿ ಯಾವುದಾದರೂ ಯೋಗ್ಯವಾದದ್ದು ಇದೆಯೇ?
    ಮತ್ತದೇ ಅಪ್ಪ-ಮಕ್ಕಳ ಕುಟುಂಬದ ಕಪಟ ನಾಟಕ ಬೇಕೇ?
    ಅಧಿಕಾರಕ್ಕಾಗಿ ಓಡೋಡಿ ಹೋಗಿ ಇದ್ದ ಮಾನ ಕಳೆದುಕೊಂಡ ಕಮಲಗಳು ಬೇಕೇ?
    ಬೆನ್ನೆಲುಬು ಇಲ್ಲದಂತೆ ಇರುವ ಹಸ್ತ ಬೇಕೇ?
    ನಿಜಕ್ಕೂ ನಿರಾಶೆಯಾಗುತ್ತೆ...

    ಹೊಸ ವಿಚಾರಗಳ,ಮನ್ವಂತರಿಗಳು ಇಲ್ಲವೇ?

  • ಗಣೇಶ್, ಭೇಟಿ ನೀಡಿದ್ದಕ್ಕೆ ಧನ್ಯವಾದ.

    ಶಿವ್,
    ನಮ್ಮ ರಾಜಕಾರಣಿಗಳು ಚುನಾವಣಾ ವ್ಯವಸ್ಥೆಯನ್ನೇ ತಮಗೆ ಬೇಕಾದಂತೆ ತಿರುಚಿಕೊಂಡುಬಿಟ್ಟಿದ್ದಾರೆ. ಒಟ್ಟಿನಲ್ಲಿ ಬಡ ಮತದಾರ ಮಾತ್ರ, ಚುನಾವಣೆ ಬಂದಾಗ ಓಟು ಹಾಕುತ್ತನೇ ಇರಬೇಕಾಗುತ್ತೆ, ಅವನ ಕಷ್ಟ ಸುಖ ಕೇಳೋರು ಯಾರೂ ಇಲ್ಲದಂತಹ ಪರಿಸ್ಥಿತಿ.

    ರಾಜಕೀಯ ಇಚ್ಛಾಶಕ್ತಿಯೊಂದು ಇದ್ದಿದ್ದರೆ, ಈ ರೀತಿಯೆಲ್ಲಾ ಆಗುತ್ತಿರಲಿಲ್ಲ...

Recent Posts

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

3 weeks ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

3 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

3 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

4 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

5 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

10 months ago