ಬಟ್ಟೆ ಒಗೆದು ನೀರು ಹಿಂಡುವುದು ಹೇಗೆಂಬುದು ನಿಮಗೆ ಗೊತ್ತಿದೆ. ಕಬ್ಬನ್ನು ಜ್ಯೂಸ್ ಯಂತ್ರದೊಳಗೆ ಹಾಕಿ ತಿರುಗಿಸಿದರೆ, ಎಷ್ಟು ಸಾಧ್ಯವೋ ಅಷ್ಟು ರಸ ಹಿಂಡಲು ಜ್ಯೂಸ್ ಅಂಗಡಿಯವನು ಏನೆಲ್ಲಾ ಮಾಡುತ್ತಾನೆ ಎಂಬುದನ್ನೂ ನೋಡಿದ್ದೀರಿ. ಈಗ ಕೇಂದ್ರ ಸರಕಾರವೂ ಅದನ್ನೇ ಮಾಡುತ್ತಿದೆ. ಇಲ್ಲಿ ಹಿಂಡುವುದು ನೀರನ್ನಲ್ಲ, ಬದಲಾಗಿ ಜನ ಸಾಮಾನ್ಯನ, ವಿಶೇಷವಾಗಿ ಮಧ್ಯಮ ವರ್ಗದವರ ರಕ್ತವನ್ನು.
ಅಲ್ಲ ಸ್ವಾಮೀ, ನಮ್ಮಲ್ಲಿ ಮಹಾ ಮಹಿಮರಾದ ಆರ್ಥಿಕ ತಜ್ಞರು, ಆಕ್ಸ್‌ಫರ್ಡ್, ಹಾರ್ವರ್ಡ್ ಪದವಿಯ ಗರಿಯೇರಿಸಿಕೊಂಡವರು ಪ್ರಧಾನಿಗಳಾಗಿ, ವಿತ್ತ ಸಚಿವರಾಗಿದ್ದಾರೆ ಮತ್ತು ಸರಕಾರದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದ್ದಾರೆ. ಅದೇನೋ ಇನ್‌ಫ್ಲೇಶನ್ (ಹಣದುಬ್ಬರ) ಅನ್ನೋ ಭೂತವನ್ನು ಜನರ ಮುಂದಿಟ್ಟು, ಅದಕ್ಕೆ ಕಡಿವಾಣ ಹಾಕಬೇಕಾಗಿದೆ, ದರ ಏರಿಕೆ ಅನಿವಾರ್ಯ, ಏರುತ್ತಿರುವ ದರವನ್ನು ಇಳಿಸಲು ನಮ್ಮಲ್ಲಿ ಮಂತ್ರದಂಡವೇನಿಲ್ಲ ಎಂಬಿತ್ಯಾದಿಯೆಲ್ಲಾ ಹೇಳಿಕೆ ನೀಡುತ್ತಾ, ತಾನೇ ಗೊಂದಲದಲ್ಲಿ ಮುಳುಗಿಕೊಂಡಿದ್ದಾರೆ! ಹೀಗಿರುವಾಗ ಜನ ಸಾಮಾನ್ಯರ ರಕ್ಷಣೆಯ ಮಾತೆಲ್ಲಿಂದ?
ಪೆಟ್ರೋಲನ್ನು ಬಡ ಮಧ್ಯಮ ವರ್ಗದವರು ಮಾತ್ರವೇ ತಮ್ಮ ಬೈಕುಗಳಿಗೆ ಅಥವಾ ಒಂದಿಷ್ಟು ಸುಖವಾಗಿರೋಣ ಅಂತ ಖರೀದಿಸಿದ ಕಾರುಗಳಿಗೋ ಬಳಸುತ್ತಾರೆ. ಅಲ್ಲಿಗೇ ಕೊಡಲಿ ಹಾಕಿದರೆ, ಜನ ಸಾಮಾನ್ಯ ಖಂಡಿತಾ ಮೇಲೇಳಲಾರ ಎಂಬುದು ಆಳುವವರಿಗೆ ಗೊತ್ತಿದೆ. ಮಂತ್ರಿಗಳು, ಮಾಗಧರು, ಅಧಿಕಾರಿಗಳು ಬಳಸುವ ಹೆಚ್ಚಿನ ಐಷಾರಾಮಿ ಕಾರುಗಳು ಡೀಸೆಲ್ ಬಳಸುತ್ತವೆ. ಅಂದರೆ ಇದು ಶ್ರೀಮಂತರು ಬಳಸುವ ಇಂಧನ. ಅದಕ್ಕೆ ನೀಡಲಾಗುವ ಸಬ್ಸಿಡಿಯನ್ನೇನಾದರೂ ಮುಟ್ಟಿದರೆ, ಸರಕಾರವೇ ಪತನವಾಗಬಹುದು ಎಂಬ ಆತಂಕ. ಯಾಕೆಂದರೆ, ನಮ್ಮನ್ನು ಆಳುವ ಬಹುತೇಕ ಮಂದಿ ಬಳಸುವುದು ಈ ಐಷಾರಾಮದ ಡೀಸೆಲ್ ವಾಹನಗಳನ್ನೇ ಅಲ್ಲವೇ? ಐಷಾರಾಮಿ ಕಾರುಗಳಿಗೆ ಬಳಸುವ ಡೀಸೆಲ್‌ಗೆ ಸಬ್ಸಿಡಿ ಹಿಂತೆಗೆದುಕೊಂಡು, ಕೃಷಿ ಪಂಪ್ ಸೆಟ್ಟುಗಳು, ಟ್ಯಾಕ್ಸಿಗಳು, ಸರಕು ಸಾಗಾಟ ವಾಹನಗಳು, ಜನ ಸಾರಿಗೆ ವಾಹನಗಳು ಬಳಸುವ ವಾಹನಗಳಿಗೆ ಮಾತ್ರವೇ ಸಬ್ಸಿಡಿ ನೀಡಿದರೆ ಜನರು ಒಂದಿಷ್ಟು ಉಸಿರಾಡುವಂತೆ ಮಾಡುವ ಧೈರ್ಯ ಸರಕಾರಕ್ಕಿದೆಯೇ?
ಜನರಿಗೆ ಹೀಗೂ ಮೋಸ ಮಾಡಬಹುದು!
2009ರ ಜುಲೈ ತಿಂಗಳಲ್ಲಿ ಪೆಟ್ರೋಲ್ ದರ ನಿಯಂತ್ರಣವನ್ನು ಸರಕಾರವು ತೈಲ ಕಂಪನಿಗಳ ಸುಪರ್ದಿಗೆ ಒಪ್ಪಿಸಿದ ಬಳಿಕ ಎರಡು ವರ್ಷಗಳಲ್ಲಿ 12ನೇ ಬಾರಿ ಪೆಟ್ರೋಲ್ ದರ ಏರಿಸಲಾಗಿದೆ. ಆಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಳಿಕೆಯಾಗುತ್ತಿದೆ, ಅದಕ್ಕೆ ಅನುಸಾರವಾಗಿ ಪ್ರತೀ ಹದಿನೈದು ದಿನಗಳಿಗೊಮ್ಮೆ ಬೆಲೆ ಪರಿಷ್ಕರಿಸಲಾಗುತ್ತದೆ ಎಂದು ಅಂದು ಘೋಷಿಸಲಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಗಳು ಹಲವಾರು ಬಾರಿ ಏರಿವೆ, ಇಳಿಕೆಯೂ ಆಗಿವೆ. ಆದರೆ ಭಾರತದಲ್ಲಿ ಮಾತ್ರ ಏರುತ್ತಲೇ ಇದೆ! ಜನರನ್ನು ಹೇಗೆ ಮೋಸಪಡಿಸುವುದು ಅಂತ ಇವರನ್ನು ನೋಡಿ ಕಲಿಯಬೇಕು!
ಇದು ಶ್ರೀಮಂತರ ಸರಕಾರ. ಇಲ್ಲಿರುವವರೆಲ್ಲರೂ ಕೋಟಿ ಕೋಟಿ ಹಣ ಮಾಡುತ್ತಿದ್ದಾರೆ. ಇವತ್ತು ಪತ್ರಿಕೆಗಳಲ್ಲಿ ಬಂದಿರುವ ವರದಿಯನ್ನೇ ನೋಡಿ. ಯುಪಿಎ ಸರಕಾರದ ಮಂತ್ರಿಗಳಲ್ಲಿ ಶೇ.77 ಮಂದಿಯ ಆಸ್ತಿಪಾಸ್ತಿಯು ಮೂರು ವರ್ಷಗಳ ಹಿಂದೆ ಘೋಷಿಸಿದ್ದಕ್ಕಿಂತ 3 ಕೋಟಿ ಹೆಚ್ಚಾಗಿ, 10.3 ಕೋಟಿಗೆ ತಲುಪಿದೆ! ಅಂದರೆ, ಇವರಿಗೆ ಹಣದುಬ್ಬರವಾಗಲೀ, ಬೆಲೆ ಏರಿಕೆಯಾಗಲೀ, ಪೆಟ್ರೋಲ್ ಬೆಲೆಯಾಗಲೀ ತಟ್ಟುವುದು ಸಾಧ್ಯವೇ ಇಲ್ಲ. ಹೀಗಾಗಿ ಜನ ಸಾಮಾನ್ಯರ ಬವಣೆಯೂ ಅರಿವಾಗುವುದಿಲ್ಲ!
ಅಷ್ಟು ಮಾತ್ರವಲ್ಲ, ಕಾಂಗ್ರೆಸ್ ನೇತೃತ್ವದ ಯುಪಿಎ ಸಚಿವ ಸಂಪುಟದಲ್ಲಿ ಒಬ್ಬೊಬ್ಬರ ಆಸ್ತಿ ನೋಡಿದರೆ ತಲೆ ತಿರುಗಬಹುದು. (ಹೆಚ್ಚಿನ ವರದಿಗೆ ಇಲ್ಲಿ ಕ್ಲಿಕ್ ಮಾಡಿ) ಸಚಿವ ಕಮಲ್‌ನಾಥ್ ಆಸ್ತಿ 263 ಕೋಟಿ, ಪ್ರಫುಲ್ ಪಟೇಲ್ 122 ಕೋಟಿ… ಪಟ್ಟಿ ದೊಡ್ಡದೇ ಇದೆ. ಹೀಗಿರುವಾಗ ಸರಕಾರದಲ್ಲಿರುವವರಿಗೆ ಜನ ಸಾಮಾನ್ಯರ ಬವಣೆ ಅರ್ಥವಾಗದಿರುವುದಕ್ಕೆ ಖಂಡಿತಾ ಸಮರ್ಥನೆಯಿದೆ!
ಕುಂಟು ನೆಪ
ಪೆಟ್ರೋಲಿಯಂ ವಿತರಣಾ ಕಂಪನಿಗಳಿಗೆ ನಷ್ಟವಾಗುತ್ತಿದೆ ಎಂಬುದು ಕುಂಟು ನೆಪ ಅಂತ ನಮ್ಮ ನಿಮ್ಮಂಥಾ ಜನ ಸಾಮಾನ್ಯರು ಅಂದುಕೊಳ್ಳಬಹುದು. ಯಾಕೆಂದರೆ, ದಿನಕ್ಕೆ ಹತ್ತು ಹದಿನೈದು ಕೋಟಿ ನಷ್ಟವಾಗುತ್ತದೆ ಎಂದು ಈ ಪೆಟ್ರೋಲಿಯಂ ಕಂಪನಿಗಳು ಹೇಳಿಕೊಳ್ಳುತ್ತಿದ್ದರೆ, ಇದುವರೆಗೆ ಅವುಗಳು ಬಾಳಿ ಬದುಕಿದ್ದು ಹೇಗೆ? ಕೋಟಿ ಕೋಟಿ ನಷ್ಟವಾಗಿಯೂ ವ್ಯವಹಾರ ನಡೆಸುತ್ತಿರುವುದು ಹೇಗೆ ಸಾಧ್ಯ? ನಿಜಕ್ಕೂ ಎಲ್ಲಿ ನಷ್ಟವಾಗುತ್ತಿದೆ? ಈ ತೈಲ ಕಂಪನಿಗಳೆಂಬ ಬಿಳಿಯಾನೆಗಳನ್ನು ಸಾಕುವುದಕ್ಕೇ ಹಣ ಸಾಲುತ್ತಿಲ್ಲವೇ? ಎಂಬುದು ಮೇಲ್ನೋಟಕ್ಕೆ ವ್ಯಕ್ತವಾಗುವ ಪ್ರಶ್ನೆಗಳಾದರೆ, ತೈಲ ಕಂಪನಿಗಳು ನಿಜಕ್ಕೂ ತೈಲ ಬೆಲೆಯನ್ನು ಯಾವ ರೀತಿ ಲೆಕ್ಕಾಚಾರ ಮಾಡುತ್ತಿವೆ ಎಂಬುದರ ಸ್ಪಷ್ಟ ವಿಚಾರ ಜನರ ಮುಂದಿಲ್ಲ. ಅದ್ಯಾವ ಸೂತ್ರ ಆಧರಿಸಿ ಅವರು ಬೆಲೆ ನಿಗದಿಪಡಿಸುತ್ತಾರೆ? ಪೆಟ್ರೋಲ್ ಬಂಕುಗಳ ಅತ್ಯಾಧುನಿಕ, ಐಷಾರಾಮದ ಕಟ್ಟಡಗಳನ್ನು ನೋಡಿದರೆ, ಮತ್ತು ಪೆಟ್ರೋಲ್ ಬಂಕ್‌ಗಾಗಿ ಗುತ್ತಿಗೆ ಪಡೆಯಲು ಹಣವುಳ್ಳವರ ಪೈಪೋಟಿ ನೋಡಿದರೆ ಗೊತ್ತಾಗುತ್ತದೆ ಅದು ಎಷ್ಟು ನಷ್ಟ ಅನುಭವಿಸುತ್ತವೆ ಎಂಬುದು! ಅಂದರೆ, ಎಲ್ಲಿಯೂ ಪಾರದರ್ಶಕತೆಯಿಲ್ಲ. ಹೀಗಾಗಿಯೇ ಜನರಲ್ಲಿ ಶಂಕೆ ಮೂಡಲು ಕಾರಣವಾಗಿದೆ.
ಪ್ರತೀ ಬಾರಿಯೂ ಖಜಾನೆ ಖಾಲಿಯಾಗುತ್ತಿದೆ ಎಂದಾದಾಗ ಸರಕಾರ ಮೊದಲು ನೋಡುವುದು ಮಧ್ಯಮ ವರ್ಗದವರು ಬಳಸುವ ಪೆಟ್ರೋಲನ್ನು. ಅಲ್ಲಿಯೇ ಕುಳಿತುಕೊಂಡು ಕತ್ತು ಹಿಚುಕಿ, ಹಣ ಹಿಂಡುತ್ತದೆ.
ಬಡ್ಡಿ ಹೆಚ್ಚಳವೆಂಬ ಮತ್ತೊಂದು ‘ಹಿಂಡುವ’ ತಂತ್ರ
ಇನ್ನು, ಸಾಲ ಸೋಲ ಮಾಡಿ ಮನೆ ಕಟ್ಟಿದವರು, ಬದುಕುವುದಕ್ಕಾಗಿ ಬ್ಯಾಂಕುಗಳಿಂದ ಯಾವುದೋ ವ್ಯವಹಾರ ಮಾಡಲು ಸಾಲ ತೆಗೆದವರನ್ನೂ ಸರಕಾರ ಬಿಡುವುದಿಲ್ಲ. ಬಡ್ಡಿ ದರ ಏರಿಸುತ್ತಲೇ ಇದೆ. ಅದಕ್ಕೆ ನೀಡುವ ನೆಪವೆಂದರೆ, ಹಣದುಬ್ಬರವೆಂಬ ಭೂತವನ್ನು ನಿಯಂತ್ರಿಸಲು! ಅದೇ ಹೊತ್ತಿಗೆ, ಹಣವಿದ್ದ ಶ್ರೀಮಂತರು ಬ್ಯಾಂಕುಗಳಲ್ಲಿ ಕೂಡಿಟ್ಟಿರುವ ಹಣದ ಬಡ್ಡಿಯೂ ಏರಿಕೆಯಾಗಿ, ಅವರಿಗೆ ಲಾಭವೇ ಹೆಚ್ಚಾಗುತ್ತದೆ! ಬಡವರು ಮತ್ತಷ್ಟು ಬಡವರಾಗುತ್ತಾರೆ, ಶ್ರೀಮಂತರು ಮತ್ತಷ್ಟು ಸಿರಿವಂತರಾಗುತ್ತಾರೆ! ಇದು ನಮ್ಮ ಮಹಾಮಹಿಮ ವಿತ್ತ ತಜ್ಞರ ಆಡಳಿತ ವೈಖರಿ! ಇಂಧನ ದರ ಏರಿಕೆ ಮಾಡಿದರೆ, ಹಣದುಬ್ಬರ ಜಾಸ್ತಿಯಾಗುತ್ತದೆ ಎಂಬುದು ಕನಿಷ್ಠ ಜ್ಞಾನ. ಆ ಹಣದುಬ್ಬರ ನಿಯಂತ್ರಣಕ್ಕೆ ಸಾಲ ಮಾಡಿದ ಜನರನ್ನು ಹಿಂಡುವುದು ಎಷ್ಟು ಸರಿ?
ಒಟ್ಟಿನಲ್ಲಿ ಸರ್ಕಾರ ದಿಕ್ಕೆಟ್ಟಿದೆ
ಸರಕಾರಕ್ಕೆ ನಿಜಕ್ಕೂ ಬಡವರ ಬಗ್ಗೆ ಕಾಳಜಿ ಇದೆಯೆಂದಾದರೆ, ಮತ್ತು ತೈಲ ಕಂಪನಿಗಳನ್ನು “ಬಚಾವ್” ಮಾಡುವ ಉದ್ದೇಶವಿದೆಯೆಂದಾದರೆ, ಇಂಧನದ ಮೇಲೆ ವಿಧಿಸುವ ಆಮದು ಸುಂಕ, ಸೆಸ್, ಮಾರಾಟ ತೆರಿಗೆ, ಸೇವಾ ತೆರಿಗೆ, ವ್ಯಾಟ್… ಆ ತೆರಿಗೆ, ಈ ತೆರಿಗೆ… ಇವುಗಳಲ್ಲೆಲ್ಲಾ ಒಂದಿಷ್ಟು ಕಡಿತ ಮಾಡಲಿ. ಯಾಕೆಂದರೆ, ಇಂಧನ ಬೆಲೆಯಲ್ಲಿ ಅರ್ಧಕ್ಕೂ ಹೆಚ್ಚು ಪಾಲು ಇರುವುದು ಈ ತೆರಿಗೆಗಳ ಪಾಲು. ಈ ನಿಟ್ಟಿನಲ್ಲಿ ಏನೇ ಮಾಡಿದರೂ ಈ ಸರಕಾರ ಅಧಿಕಾರಕ್ಕೇರಲು ಕಾರಣವಾಗಿರುವ “ಆಮ್ ಆದ್ಮೀ”ಗೇ ಅಲ್ಲವೇ ಪ್ರಯೋಜನವಾಗುವುದು? ಹಾಗೆ ಮಾಡಲು ನಮ್ಮ ರಾಜಕಾರಣಿಗಳಿಗೆ ಸುತಾರಾಂ ಮನಸ್ಸಿಲ್ಲ. ಅಲ್ಲೂ ರಾಜಕೀಯ ಬಿಡುವುದಿಲ್ಲ!
ಬದಲಾಗಿ, ಸೌರ ಶಕ್ತಿಯ ಬಳಕೆಗೆ ಸರಕಾರ ಉತ್ತೇಜನ, ಪ್ರೋತ್ಸಾಹ ನೀಡಲಿ. ಇದರಿಂದ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅವಲಂಬನೆ ಕಡಿಮೆಯಾಗಬಹುದು.
ಸಬ್ಸಿಡಿ ನೀಡಿದರೆ ಸರಕಾರಕ್ಕೆ ತೊಂದರೆಯಾಗುತ್ತದೆ ಎಂಬುದೇನೋ ಸರಿ. ಆದರೆ, ಈಗಾಗಲೇ ಎಲ್ಲ ರೀತಿಯಲ್ಲಿಯೂ, ಪ್ರತಿಯೊಂದು ವಸ್ತುವಿನ ಮೂಲಕವೂ ನಾವು ಸರಕಾರದ ಖಜಾನೆಗೆ ತೆರಿಗೆ ತೆರುತ್ತಿದ್ದೇವೆ. ಅದನ್ನು ಬಳಸಬೇಕಾಗಿರುವುದು ಕೂಡ ನಮಗಾಗಿಯೇ ಅಲ್ಲವೇ? ಹೀಗಿರುವಾಗ, ಈಗ ಬೆಲೆ ಏರಿಕೆ ಯಾವುದೇ ರೀತಿಯಲ್ಲಿಯೂ ತಟ್ಟದೆ ನಿಶ್ಚಿಂತೆಯಿಂದ (ಅಂದರೆ, ಅವರ ಫೋನ್ ಬಿಲ್, ವಿದ್ಯುತ್ ಬಿಲ್, ಸಂಚಾರ ಬಿಲ್, ತಿಂಡಿ ತಿನಸು, ಆಳುಗಳು, ಸೇವಕರ ಬಿಲ್… ಇತ್ಯಾದಿ ಎಲ್ಲ ಖರ್ಚು ವೆಚ್ಚಗಳನ್ನೂ ಜನರ ತೆರಿಗೆ ಹಣದ ಮೂಲಕ ಸರಕಾರವೇ ಭರಿಸುತ್ತದೆ) ಆಡಳಿತ ನಡೆಸುತ್ತಿರುವವರ ಕರ್ತವ್ಯವೆಂದರೆ ಜನರಿಗೆ ಕೊಂಚವಾದರೂ ನೆಮ್ಮದಿ ನೀಡುವುದೇ ಅಲ್ಲವೇ?
ಒಟ್ಟಿನಲ್ಲಿ ಮೂರು ವರ್ಷಗಳಿಂದ ಪ್ರತಿಯೊಂದು ವಸ್ತುವಿನ ಬೆಲೆಯೂ ಗಗನಕ್ಕೇರಿ ಬಡ ಪ್ರಜೆ ಕಂಗಾಲಾಗಿದ್ದಾನೆ. ವಿದ್ಯಾಭ್ಯಾಸ ಕೈಗೆಟುಕದಷ್ಟು ಶುಲ್ಕ ಹೆಚ್ಚಾಗಿದೆ. ವಿದ್ಯುತ್ ದರ ಏರಿದೆ, ನೀರಿನ ದರ ಏರಿದೆ, ನಾಳೆ ಅಡುಗೆ ಅನಿಲದ ಸಿಲಿಂಡರನ್ನೂ ಗ್ರಾಹಕರ ಮನೆ ಬಾಗಿಲಿನಲ್ಲೇ ‘ಬೆಲೆ’ ಸ್ಫೋಟ ಮಾಡುವಂತಹಾ ಯತ್ನವೊಂದೂ ಕೇಳಿಬರುತ್ತಿದೆ. ಇನ್ನು ವರ್ಷಕ್ಕೆ 4 ಸಿಲಿಂಡರುಗಳಿಗೆ ಮಾತ್ರವೇ ಸಬ್ಸಿಡಿ, ಹೆಚ್ಚು ಬೇಕಾದರೆ ಸಿಲಿಂಡರಿಗೆ ಅಂದಾಜು 800 ರೂ. ನೀಡಬೇಕಾಗುವಂತಹಾ ಪ್ರಯತ್ನ. ಹೀಗೆ ಆದರೆ, ಈ ಬೆಲೆ ಏರಿಕೆಯ ಊರಿನಲ್ಲಿ ಬದುಕಲು ಕಷ್ಟ ಎಂದುಕೊಂಡು, ಊರು ಬಿಟ್ಟು ಓಡಿ ಹೋಗಲೂ ಕೈಯಲ್ಲಿ ಹಣವಿಲ್ಲದಂತಾಗುತ್ತದೆ!
ಸರಕಾರ ಬುದ್ಧಿವಂತಿಕೆ
ಸರಕಾರಕ್ಕೆ ಜನರನ್ನು ಮೂರ್ಖರಾಗಿಸಲು ಚೆನ್ನಾಗಿ ಗೊತ್ತಿದೆ… ಚುನಾವಣೆಗಳು ಬರಲಿ ನೋಡೋಣ…. ಅವರೆಂದಾದರೂ ದರ ಏರಿಸುವ ದುಸ್ಸಾಹಸಕ್ಕೆ ಇಳಿಯುತ್ತಾರೆಯೇ? ಖಂಡಿತಾ ಇಲ್ಲ.
ಒಂದು ಅಂದಾಜಿನ ಪ್ರಕಾರ, ಉಗ್ರಗಾಮಿ ಅಜ್ಮಲ್ ಕಸಬ್‌ನನ್ನು ಜೈಲಿನಲ್ಲಿಟ್ಟುಕೊಂಡು ಭದ್ರತೆಯಿಂದ ಸಾಕಿ ಸಲಹಲು ದಿನಕ್ಕೆ 7.5 ಲಕ್ಷ ರೂಪಾಯಿ ಖರ್ಚಾಗುತ್ತಿದೆ. ಅಂತೆಯೇ ಮತ್ತೊಬ್ಬ ಭಯೋತ್ಪಾದಕ, ಈಗಾಗಲೇ ಮರಣ ದಂಡನೆಗೆ ಗುರಿಯಾಗಿರುವ ಅಫ್ಜಲ್ ಗುರುವನ್ನು ಭಾರೀ ಭದ್ರತೆಯಿಂದ ಸಾಕಲು ಕೂಡ ಬಹುಶಃ ಅಷ್ಟೇ ವೆಚ್ಚವಾಗಬಹುದು. ಇದೆಲ್ಲವೂ ಜನ ಸಾಮಾನ್ಯರು ಕಟ್ಟುವ ತೆರಿಗೆಯಿಂದ ಬರುವ ಹಣವೇ ಎಂಬುದನ್ನು ಮರೆಯುವಂತಿಲ್ಲ. ಅವರಿಗೆ ದೊರೆಯುವ ಜೀವನ ಭದ್ರತೆ, ನಮ್ಮ ಜನ ಸಾಮಾನ್ಯರಿಗಿಲ್ಲ. ನಾಳೆ ಯಾವುದರ ಬೆಲೆ ಹೆಚ್ಚಾಗುತ್ತದೋ ಎಂಬ ಆತಂಕದಲ್ಲೇ ಜನರು ಜೀವನ ಕಳೆಯುವಂತಾಗಿದೆ!
ಜನರ ಮೌನವೇ ಸರಕಾರಕ್ಕೆ ಅಮೃತ!
ಬಗ್ಗಿದವನಿಗೆ ಒಂದು ಗುದ್ದು ಜಾಸ್ತಿ ಎಂಬ ಗಾದೆ ಮಾತನ್ನು ನೀವೆಲ್ಲಾ ಕೇಳಿದ್ದೀರಿ. ನಾವು-ನೀವು ಸುಮ್ಮನಿರುವುದಕ್ಕೆ ಈ ದೇಶದಲ್ಲಿ ಏನೇನೆಲ್ಲಾ ಆಗುತ್ತಿದೆ ಎಂಬುದನ್ನೀಗ ಕಣ್ಣಾರೆ ಕಾಣುತ್ತಿದ್ದೀರಿ. ಕಳೆದ ಎರಡು ವರ್ಷಗಳಲ್ಲಿ, ಅಂದರೆ ಪೆಟ್ರೋಲ್ ಬೆಲೆ ನಿಯಂತ್ರಣವನ್ನು ನಮ್ಮನ್ನು ಆಳುತ್ತಿರುವ ಈ ನಮ್ಮ ಘನ ಕೇಂದ್ರ ಸರಕಾರವು ತೈಲ ಕಂಪನಿಗಳಿಗೇ ಬಿಟ್ಟು ಕೊಟ್ಟ ಬಳಿಕ, 12ನೇ ಬಾರಿ ದರ ಏರಿಕೆ ಮಾಡಿದೆ. ಎಷ್ಟೇ ದರ ಏರಿಕೆ ಮಾಡಿದರೂ ಈ ಜನರು ನಾಲ್ಕು ದಿನ ಕೂಗಾಡುತ್ತಾರೆ, ಆಮೇಲೆ ಅವರಲ್ಲಿ ಬೆಲೆ ಏರಿಕೆಗೆ ಇಮ್ಯುನಿಟಿ (ಪ್ರತಿರೋಧ ಶಕ್ತಿ) ಬಂದಿರುತ್ತದೆ ಎಂಬುದು ಸರಕಾರಕ್ಕೆ ಮನದಟ್ಟಾಗಿದೆ. ಹೀಗಾಗಿ, ಕೊಂಚ ಕೊಂಚವೇ ನಿಧಾನ ವಿಷದಂತೆ ಬೆಲೆ ಏರಿಕೆ ಮಾಡುತ್ತಾ, ಒಂದೆರಡ್ಮೂರು ರೂಪಾಯಿ ದೊಡ್ಡ ಸಂಗತಿಯೇನಲ್ಲ ಎಂಬ ಭಾವನೆ ಉಂಟಾಗುತ್ತದೆ. ಹೀಗಾಗಿ ಜುಲೈ 2009ರಲ್ಲಿ ಲೀಟರಿಗೆ 48 ರೂಪಾಯಿ ಆಸುಪಾಸು ಇದ್ದ ಪೆಟ್ರೋಲ್ ಬೆಲೆ, ನಾವೆಲ್ಲಾ ನಿದ್ದೆಯಿಂದ ಎಚ್ಚೆತ್ತುಕೊಳ್ಳುವಾಗ ಇನ್ನು 100 ರೂಪಾಯಿಗೆ ತಲುಪಿದರೂ ಆಶ್ಚರ್ಯವಿಲ್ಲ! ಜನ ಎಚ್ಚೆತ್ತುಕೊಳ್ಳುವುದು ಯಾವಾಗ? ಬಹುಶಃ ಪೆಟ್ರೋಲ್ ಬೆಲೆ ಏರಿಕೆಯೆಂಬ “ಹಗರಣ”ಕ್ಕೆ ಕಡಿವಾಣ ಹಾಕಲು, ದೇಶವ್ಯಾಪಿ ಆಂದೋಲನ ನಡೆಸಲು ಮತ್ತೊಬ್ಬ ಅಣ್ಣಾ ಹಜಾರೆ ಬೇಕೇನೋ!
ದಮ್ಮಿಲ್ಲದ ಪ್ರತಿಪಕ್ಷ
ತಮ್ಮ ಆಡಳಿತದ, ವಿತ್ತ ವ್ಯವಸ್ಥೆಯ ಸಮತೋಲನಗೊಳಿಸುವ ಅಸಾಮರ್ಥ್ಯವನ್ನು ಬಚ್ಚಿಟ್ಟು, ತಾನು ಬಚಾವ್ ಆಗಲು ಜನಸಾಮಾನ್ಯನಿಗೆ ಹೊಡೆಯುವುದೇ ಅತ್ಯಂತ ಸುಲಭ ಮಾರ್ಗ ಎಂದುಕೊಂಡಂತಿದೆ ನಮ್ಮನ್ನಾಳುವ ಸರಕಾರ. ಪ್ರತಿಪಕ್ಷಗಳೂ ಒಂದಷ್ಟು ದಿನ ಕೂಗಾಡುತ್ತವೆ. ಅಷ್ಟು ಹೊತ್ತಿಗೆ ಬೇರೊಂದು “ಬರ್ನಿಂಗ್ ಇಶ್ಯೂ”ವನ್ನು ಸರಕಾರವು ತನ್ನ ಬತ್ತಳಿಕೆಯಿಂದ ಹೊರ ಹಾಕಿರುತ್ತದೆ. ಪ್ರತಿಪಕ್ಷಗಳ ಗಮನ ಅತ್ತ ಹೋಗುತ್ತದೆ. ಅಲ್ಲಿಗೆ ಜನ ಸಾಮಾನ್ಯನ ಸ್ಥಿತಿ ದೇವರಿಗೇ ಪ್ರೀತಿ!
ಆಡಳಿತ ಪಕ್ಷದಷ್ಟೇ ಪ್ರತಿಪಕ್ಷಗಳಿಗೂ ಜವಾಬ್ದಾರಿಯಿದೆ ಮತ್ತು ಶಕ್ತಿಯಿರಬೇಕಾಗಿತ್ತು. ಆದರೆ, ಬೆಲೆ ಏರಿಕೆಯಿಂದ ಜನ ಸಾಮಾನ್ಯರನ್ನು ರಕ್ಷಿಸಲು ಮಾತ್ರ ಯಾರೂ ಮುಂದಾಗುತ್ತಿಲ್ಲ. ಈ ಬಾರಿಯಾದರೂ ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಮುಂದೆ ಹೋಗಿ, ಜನ ಸಾಮಾನ್ಯ ಸಾಯುತ್ತಿದ್ದಾನೆ ಅಂತ ಸರಕಾರದ ಮನಸ್ಸಿಗೆ ನಾಟುವಂತೆ ಮಾಡಬಲ್ಲವೇ?
ಅಂತರಜಾಲದಲ್ಲಿ ಹರಿದಾಡುವ ಎರಡು ಮಾತು
* ಈಗಾಗಲೇ ಕೋಟಿ ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆಯುತ್ತಿರುವುದರ ಬಗ್ಗೆ ಜನ ಸಾಮಾನ್ಯರೂ ಧ್ವನಿಯೆತ್ತಿ ಅಣ್ಣಾ ಹಜಾರೆಯವರ ಬೆಂಬಲಕ್ಕೆ ನಿಂತಿದ್ದಕ್ಕಾಗಿ, ಯುಪಿಎ ಸರಕಾರ ಈ ರೀತಿಯಾಗಿ, ಅಂದರೆ ಬೆಲೆ ಏರಿಕೆ ತಡೆಗೆ ಯಾವುದೇ ಕ್ರಮ ಕೈಗೊಳ್ಳದಿರುವ ಮೂಲಕ, ಸೇಡು ತೀರಿಸಿಕೊಳ್ಳುತ್ತಿದೆ.
* ಪೆಟ್ರೋಲ್ 75, ಸಚಿನ್ 99, ಮೊದಲು 100 ತಲುಪುವುದು ಯಾರು?
[ವೆಬ್‌ದುನಿಯಾಕ್ಕಾಗಿ]
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು