ಇವನ್ನು ನೀವು ತಿಪ್ಪರಲಾಗ ಅನ್ನಿ, ಬಡಬಡಿಕೆ ಅನ್ನಿ, ಎಡಬಿಡಂಗಿತನ ಅನ್ನಿ. ಎಲ್ಲದಕ್ಕೂ ಉದಾಹರಣೆಗಳಾಗಿ ನಿಲ್ಲುತ್ತವೆ ಮುಂಬಯಿ ಮೇಲಿನ ಭಯೋತ್ಪಾದನಾ ದಾಳಿಯ ನಂತರ ನೆರೆಯ ಪಾಕಿಸ್ತಾನದಿಂದ ಹೊರಬರುತ್ತಿರುವ ಹೇಳಿಕೆಗಳು.
ಮುಂಬಯಿ ದಾಳಿ ಪಾಕಿನಿಂದ ಕ್ಷಣ ಕ್ಷಣಕ್ಕೂ ಹೊರಬೀಳುತ್ತಿರುವ ಹೇಳಿಕೆಗಳನ್ನು ಗಮನಿಸಿದಲ್ಲಿ ಅಲ್ಲಿ ಏನಾಗುತ್ತಿದೆ? ಆ ದೇಶವನ್ನು ಯಾರು ನಿಯಂತ್ರಿಸುತ್ತಿದ್ದಾರೆ ಎಂಬುದಕ್ಕೆ ನಿಖರ ಉತ್ತರ ದೊರೆಯಬಹುದು. ಅಲ್ಲಿಯ ಸರಕಾರವು ಉಗ್ರವಾದದ ಕೈಗೊಂಬೆಯಾಗಿಬಿಟ್ಟಿದೆಯೇ? ಸರಕಾರವನ್ನು ಪಾಕಿಸ್ತಾನದ ಐಎಸ್ಐ ಮತ್ತು ಸೇನೆ ನಿಯಂತ್ರಿಸುತ್ತಿದೆಯೇ? ರಾಜಕೀಯ, ರಾಜತಾಂತ್ರಿಕತೆಯ ಅರಿವಿಲ್ಲದವರು, ಅನನುಭವಿಗಳು ಉನ್ನತ ಹುದ್ದೆಗಳನ್ನು ‘ಅಲಂಕರಿಸಿ’ದ್ದಾರೆಯೇ? ಅಧ್ಯಕ್ಷ ಜರ್ದಾರಿ ಹಣೆಗೆ ಗುಂಡಿನ ನಳಿಕೆ ತಾಕಿಸಿದಂತೆಯೇ ಕ್ಷಣಕ್ಕೊಂದು ಹೇಳಿಕೆ ಬದಲಿಸುತ್ತಿರುವುದೇಕೆ? ಅಥವಾ ಪಾಕಿಸ್ತಾನದ ಮುಸ್ಲಿಂ ಲೀಗ್ ಹೇಳುತ್ತಿರುವಂತೆ, ಪಾಕಿಸ್ತಾನ ನಿಜಕ್ಕೂ “ವಿಫಲ ರಾಷ್ಟ್ರ”ವೇ?
ಎಷ್ಟೊಂದು ತಿಪ್ಪರಲಾಗಗಳು! ಒಂದು ಇಡೀ ರಾಷ್ಟ್ರವನ್ನೇ ಆಳುವ, ಜವಾಬ್ದಾರಿಯುತ ಹುದ್ದೆಯಲ್ಲಿರುವ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ, ಚುನಾಯಿತ ಸರಕಾರದ ಪ್ರಧಾನ ಮಂತ್ರಿ ಯೂಸುಫ್ ರಜಾ ಗಿಲಾನಿ, ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ಅವರಿಂದ ಈ ರೀತಿ ಬಾಯಿಗೆ ಬಂದ ಹೇಳಿಕೆಗಳು ಹೊರಬರುತ್ತಿರುವುದು ಪಾಕಿಸ್ತಾನದಲ್ಲಿ ಅಧಿಕಾರ ನಿಜಕ್ಕೂ ಯಾರ ಕೈಯಲ್ಲಿದೆ ಎಂಬುದರ ಶಂಕೆಗೆ ಕಾರಣವಾಗುತ್ತಿದೆ.
ಇದಕ್ಕೆ ತೀರಾ ಇತ್ತೀಚಿನ ಸೇರ್ಪಡೆ ಎಂದರೆ ಭಾರತೀಯ ವಾಯುಪಡೆಯಿಂದ ಆಗಿದೆ ಎನ್ನಲಾಗುತ್ತಿರುವ ವಾಯು ಸೀಮೆ ಉಲ್ಲಂಘನೆ ಪ್ರಕರಣ. ಡಿಸೆಂಬರ್ 13ರಂದು ಭಾರತೀಯ ವಾಯುಪಡೆಯ ಜೆಟ್ ವಿಮಾನಗಳು ಪಾಕಿಸ್ತಾನೀ ವಾಯು ಸೀಮೆಯೊಳಗೆ ಅಕ್ರಮವಾಗಿ ಪ್ರವೇಶಿಸಿದವು ಎಂದು ಪಾಕಿಸ್ತಾನದ ಜಿಯೋ ಟಿವಿ ವರದಿ ಮಾಡಿತು. ತಕ್ಷಣವೇ ಪತ್ರಿಕಾಗೋಷ್ಠಿ ಕರೆದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ, “ಭಾರತದಿಂದ ಯಾವುದೇ ಅತಿಕ್ರಮಣವಾಗಿಲ್ಲ, ಇದು ಆಕಸ್ಮಿಕ. 50 ಸಾವಿರ ಅಡಿ ಎತ್ತರದಲ್ಲಿ ಹಾರಾಡುತ್ತಿರುವಾಗ, ವಿಮಾನಗಳನ್ನು ತಿರುಗಿಸಬೇಕಾದಾಗ ಈ ರೀತಿಯಾಗುವುದು ಸಹಜ. ಇದೊಂದು ‘ತಾಂತ್ರಿಕ ಸೀಮಾಪ್ರವೇಶ” ಎಂದಷ್ಟೇ ಹೇಳಿ ತಳ್ಳಿ ಹಾಕಿದ್ದರು. ಭಾರತದ ವಾಯುಪಡೆಯೂ ಈ ಕುರಿತು ಸ್ಪಷ್ಟನೆ ನೀಡಿದೆ. ಭಾರತವು ಒಟ್ಟಾರೆಯಾಗಿ ಈ ಪ್ರಕರಣದ ಬಗ್ಗೆ ಕನಿಷ್ಠ ಮೂರು ಬಾರಿ ಸ್ಪಷ್ಟೀಕರಣ ನೀಡಿದೆ. ಇದೀಗ ನಾಲ್ಕು ದಿನಗಳ ಬಳಿಕ ಈ ಹೇಳಿಕೆಗೆ ಪಾಕಿಸ್ತಾನದಿಂದ ಮತ್ತೊಂದು ಹೇಳಿಕೆ ಹೊರಬಿದ್ದಿದ್ದು, ಭಾರತವು ವಾಯು ಸೀಮೆ ಉಲ್ಲಂಘಿಸಿದ್ದು ಹೌದು ಎನ್ನುತ್ತಾ ಪಾಕಿಸ್ತಾನವು ಭಾರತದ ಸಹಾಯಕ ಹೈಕಮಿಶನರ್ ಮನ್‌ಪ್ರೀತ್ ವೋರಾ ಅವರ ಬಳಿ ಅಧಿಕೃತ ಪ್ರತಿಭಟನೆ ಸಲ್ಲಿಸಿದ್ದು, ಭಾರತದಿಂದ ಸ್ಪಷ್ಟನೆ ಕೇಳಿದೆ.
ಮುಂಬಯಿ ದಾಳಿಯಲ್ಲಿ ಪಾಕಿಸ್ತಾನೀಯರ ಕೈವಾಡವಿದೆ, ಬಂಧಿತ ಉಗ್ರಗಾಮಿ ಪಾಕಿಸ್ತಾನದವ ಎಂದು ಪಾಕಿಸ್ತಾನದ ಮಾಧ್ಯಮಗಳು, ಬ್ರಿಟನ್ ಮಾಧ್ಯಮಗಳು, ಅಮೆರಿಕ, ಭಾರತ, ರಷ್ಯಾದ ಬೇಹುಗಾರಿಕಾ ಏಜೆನ್ಸಿಗಳೆಲ್ಲವೂ ತನಿಖೆ ನಡೆಸಿ ಘಂಟಾಘೋಷವಾಗಿ ಸಾರುತ್ತಿದ್ದರೆ, ಪಾಕಿಸ್ತಾನವು “ನಮಗೆ ಸಾಕ್ಷ್ಯಾಧಾರ ಒಪ್ಪಿಸಿ” ಎಂಬ ತಗಾದೆ ತೆಗೆದದ್ದು ಮತ್ತೊಂದು ವಿಪರ್ಯಾಸ. ಬಂಧಿತ ಉಗ್ರಗಾಮಿ ಮೊಹಮದ್ ಅಜ್ಮಲ್ ಕಸಬ್ ಪಾಕಿಸ್ತಾನದ ಫರೀದ್‌ಕೋಟ್ ಪ್ರಾಂತ್ಯದವನು ಎಂದು ಪಾಕಿಸ್ತಾನಿ ಮಾಧ್ಯಮಗಳೇ ಕುಟುಕು ಕಾರ್ಯಾಚರಣೆಯ ಮೂಲಕ, ಆತನ ತಂದೆಯ ಹೇಳಿಕೆ, ಸ್ವಯಂ ಆತನ ತಪ್ಪೊಪ್ಪಿಗೆಯ ಸಹಿತ ವರದಿ ಮಾಡಿದ್ದರೆ, ಜರ್ದಾರಿ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ‘ಕಸಬ್ ಪಾಕಿಸ್ತಾನೀ ನಾಗರಿಕ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ, ಇದ್ದರೆ ತೋರಿಸಿ’ ಎಂದು ಹೇಳಿಬಿಟ್ಟರು.
ಇದಕ್ಕೆ ಮುನ್ನ ಮತ್ತೊಂದು ತಿಪ್ಪರಲಾಗ ಗಮನಿಸಿ. ಕಂದಹಾರ್ ವಿಮಾನ ಅಪಹರಣ ಪ್ರಕರಣದಲ್ಲಿ ಭಾರತದಿಂದ ಬಿಡುಗಡೆಗೊಂಡ ಉಗ್ರಗಾಮಿ, ಜೈಷೆ ಮೊಹಮ್ಮದ್ ಸಂಘಟನೆಯ ಸಂಸ್ಥಾಪಕ ಮೌಲಾನಾ ಮಸೂದ್ ಅಜರ್‌ನನ್ನು ಬಂಧಿಸಿ ಗೃಹಬಂಧನದಲ್ಲಿರಿಸಲಾಗಿದೆ ಎಂದು ಇಡೀ ಜಗತ್ತಿಗೇ ಡಿಸೆಂಬರ್ 9ರಂದು ಪಾಕಿಸ್ತಾನದ ರಕ್ಷಣಾ ಸಚಿವ ಚೌಧುರಿ ಅಹ್ಮದ್ ಮುಖ್ತಾರ್ ಸಾರಿದ್ದರು. ಡಿಸೆಂಬರ್ 18ರಂದು ಪಾಕ್ ವಿದೇಶ ಸಚಿವ ಶಾ ಮಹ್ಮೂದ್ ಖುರೇಶಿ ಅವರು ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿದರು. ಅಜರ್ ಈಗಲೂ ತಲೆಮರೆಸಿಕೊಂಡಿದ್ದಾನೆ ಎಂದರು. ಅದೇ ರೀತಿ, ಭಾರತದಲ್ಲಿರುವ ಪಾಕಿಸ್ತಾನಿ ಹೈಕಮಿಶನರ್ ಶಹೀದ್ ಮಲಿಕ್‌ರಿಂದ ಬಂದ ಹೇಳಿಕೆ ಗಮನಿಸಿ: “ಮಸೂದ್ ಅಜರ್‌ನನ್ನು ನಾವು ಬಂಧಿಸಿಲ್ಲ, ಆತ ಎಲ್ಲಿದ್ದಾನೆಂದು ಗೊತ್ತಿಲ್ಲ, ಅವನಿಗಾಗಿ ಇನ್ನೂ ಹುಡುಕುತ್ತಿದ್ದೇವೆ”! ಎಂಥ ವಿಪರ್ಯಾಸದ ಹೇಳಿಕೆಗಳು!
ನವೆಂಬರ್ 28ರಂದು, ಮುಂಬಯಿಯು ಇನ್ನೂ ಹೊತ್ತಿ ಉರಿಯುತ್ತಿರುವಾಗ, ತನಿಖೆಗೆ ನೆರವಾಗಲು ಐಎಸ್ಐ ಮುಖ್ಯಸ್ಥ ಶುಜಾ ಪಾಶಾ ಅವರನ್ನು ದೆಹಲಿಗೆ ಕಳುಹಿಸುವುದಾಗಿ ಪ್ರಧಾನ ಮಂತ್ರಿ ಯೂಸುಫ್ ರಜಾ ಗಿಲಾನಿ ಹೇಳಿದ್ದರು. ಮರುದಿನ ಹೇಳಿಕೆ ನೀಡಿದ ಜರ್ದಾರಿ, ಐಎಸ್ಐ ಮುಖ್ಯಸ್ಥ ಈಗ ಬರುವುದಿಲ್ಲ ಎಂದುಬಿಟ್ಟರು. ಅದೇ ದಿನ, ಪಾಕಿಸ್ತಾನೀ ಸೇನೆಯು ಯುದ್ಧದ ಸರ್ವ ಸನ್ನದ್ಧ ಸ್ಥಿತಿಯಲ್ಲಿತ್ತು. ಭಾರತದ ವಿದೇಶಾಂಗ ಸಚಿವರೆಂದು ಹೇಳಿಕೊಂಡವರೊಬ್ಬರು ದೂರವಾಣಿ ಕರೆ ಮಾಡಿ ಜರ್ದಾರಿಗೆ ದಾಳಿಯ ಎಚ್ಚರಿಕೆ ನೀಡಿದ್ದರು ಎಂಬುದು ಪಾಕಿಸ್ತಾನ ನೀಡಿದ ಕಾರಣವಾಗಿತ್ತು. ಆ ಬಳಿಕ ಈ ಕುರಿತು ಸ್ಪಷ್ಟನೆ ನೀಡಿದ ಪಾಕಿಸ್ತಾನಿ ಮಾಹಿತಿ ಸಚಿವೆ ಶೆರಿ ರಹಮಾನ್, ಯಾವುದೇ ಕರೆ ಕೂಡ ಸೂಕ್ತ ತಪಾಸಣೆಯಿಲ್ಲದೆ ನೇರವಾಗಿ ಜರ್ದಾರಿಗೆ ತಲುಪುವುದಿಲ್ಲ ಎಂದರು! ಹಾಗಿದ್ದರೆ ನಕಲಿ ಕರೆ ಬಂದಿತ್ತು ಎಂಬ ವಿಷಯ ಸುಳ್ಳೇ?
ಇನ್ನು ಮುಂಬಯಿ ದಾಳಿಯಲ್ಲಿ ಪಾಕಿಸ್ತಾನದ ಕೈವಾಡದ ಕುರಿತು. ಡಿಸೆಂಬರ್ 9ರಂದು ಹೇಳಿಕೆ ನೀಡಿದ ಜರ್ದಾರಿ, ಪಾಕಿಸ್ತಾನದ “ಸರಕಾರೇತರ ವ್ಯಕ್ತಿಗಳು (ನಾನ್ ಸ್ಟೇಟ್ ಆಕ್ಟರ್ಸ್)” ಇದರಲ್ಲಿ ಒಳಗೊಂಡಿರಬಹುದು, ಅವರ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದರು. 9 ದಿನಗಳ ಬಳಿಕ ಆಸಿಫ್ ಅಲಿ ಜರ್ದಾರಿ ಎಂಬ ಪಾಕಿಸ್ತಾನದ ಪರಮೋಚ್ಚ ಸ್ಥಾನದಲ್ಲಿರುವ ನಾಯಕನಿಂದ ಬಂದ ಹೇಳಿಕೆ: “ಜಿಹಾದಿಗಳು ಪಾಕಿಸ್ತಾನದಿಂದಲೇ ಬಂದವರೆಂಬುದಕ್ಕೆ ಸಾಕ್ಷ್ಯಾಧಾರವಿಲ್ಲ. ಬಂಧಿತ ಉಗ್ರಗಾಮಿ ಕಸಬ್ ಪಾಕಿಸ್ತಾನೀಯನೇ ಅಲ್ಲ”!.
ಆ ಮೇಲೆ, ಲಷ್ಕರ್ ಇ ತೋಯ್ಬಾದ ಮತ್ತೊಂದು ಮುಖ ‘ಜಮಾತ್ ಉದ್ ದಾವಾ’ಕ್ಕೆ ವಿಶ್ವಸಂಸ್ಥೆ ನಿಷೇಧ ಹೇರಿದ ಬಳಿಕ ಜಗತ್ತಿನೆದುರು ಉಗ್ರವಾದದ ವಿರುದ್ಧ ಭಾರೀ ಕಾರ್ಯಾಚರಣೆ ಮಾಡಿದಂತೆ ನಟಿಸಿದ ಪಾಕಿಸ್ತಾನವು, ಎರಡೇ ದಿನದಲ್ಲಿ ಬಂಧಿತರೆಲ್ಲರನ್ನೂ ಬಿಡುಗಡೆ ಮಾಡಿತು. ಆದರೆ ಅದರ ಮುಖ್ಯಸ್ಥ, ಮುಂಬಯಿ ದಾಳಿಯ ಹಿಂದಿರುವ ರೂವಾರಿ ಎನ್ನಲಾಗುತ್ತಿರುವ ಹಫೀಜ್ ಸಯೀದ್ ಗೃಹ ಬಂಧನದಲ್ಲಿದ್ದಾನೆ. ಆತ ಬಿಡುಗಡೆಯಾದರೂ ಯಾವುದೇ ರೀತಿ ಆಶ್ಚರ್ಯಪಡಬೇಕಾಗಿಲ್ಲ.
ಈ ಕುರಿತು ಮಾಜಿ ಪ್ರಧಾನಿ ನವಾಜ್ ಶರೀಫ್ ಅವರ ಕಳವಳದಲ್ಲಿಯೂ ಹುರುಳಿಲ್ಲದಿಲ್ಲ. ಇಂಥ ವ್ಯತಿರಿಕ್ತ ಹೇಳಿಕೆಗಳಿಂದ ವಿಶ್ವ ಸಮುದಾಯದೆದುರು ಪಾಕಿಸ್ತಾನದ ಮಾನ ಹರಾಜಾಗುತ್ತಿದೆ, ಪಾಕಿಸ್ತಾನವೊಂದು ‘ವಿಫಲ ರಾಷ್ಟ್ರ’ ಎಂದು ಬಿಂಬಿಸಲ್ಪಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರವರು. ಈಗಿನ ಬಿಕ್ಕಟ್ಟನ್ನು ಪಾಕಿಸ್ತಾನವು ಎದುರಿಸುತ್ತಿರುವ ರೀತಿ ನೋಡಿದರೆ, ಶರೀಫ್ ಆತಂಕದಲ್ಲಿ ಹುರುಳಿದೆ ಅನ್ನಿಸುತ್ತದೆ.
ಬಹುಶಃ ಮುಂಬಯಿ ಮೇಲೆ ದಾಳಿಯಾದ ಬಳಿಕ, ಪಾಕಿಸ್ತಾನ ಭಯೋತ್ಪಾದನೆಯ ಪೋಷಕ ರಾಷ್ಟ್ರ ಎಂಬುದು ಜಗತ್ತಿಗೇ ಸ್ಪಷ್ಟವಾಗತೊಡಗಿರುವಂತೆಯೇ, ಅಧಿಕಾರದಲ್ಲಿರುವವರು ಏನು ಮಾಡಬೇಕೆಂದು ತೋಚಲಾರದೆ ಕೈಕೈ ಹಿಸುಕಿಕೊಳ್ಳುತ್ತಾ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಮಾನ ಉಳಿಸುವ ನಿಟ್ಟಿನಲ್ಲಿ ಒಂದು ಹೇಳಿಕೆ ನೀಡುತ್ತಿದ್ದಾರೆ. ಆದರೆ ತೆರೆಯ ಹಿಂದಿದ್ದುಕೊಂಡು ಬಂದೂಕಿನ ನಳಿಗೆಯೊಂದಿಗೆ ಅಧಿಕಾರಕೇಂದ್ರವನ್ನು ನಿಯಂತ್ರಿಸುವಂತಿರುವ ಐಎಸ್ಐ, ಪಾಕಿಸ್ತಾನ ಸೇನೆಯು ಒಳಗಿಂದೊಳಗೇ ಧಮಕಿ ಹಾಕತೊಡಗಿದಾಗ, ಅದೇ ಹೇಳಿಕೆಗಳು ವ್ಯತಿರಿಕ್ತ ರೂಪಕ್ಕೆ ಬದಲಾಗಿಬಿಡುತ್ತವೆ. ಹಾಗಂದುಕೊಳ್ಳಬಹುದೇ?
ಮುಷರಫ್ ಕಾಲದಿಂದಲೂ ಪಾಕಿಸ್ತಾನದ ಸೇನೆಯು ಸ್ವಂತ ನೆಲದಲ್ಲೇ ಜನರ ಟೀಕೆಗೆ ಗುರಿಯಾಗುತ್ತಿತ್ತು. ಮುಂಬಯಿ ದಾಳಿಗಳ ಬಳಿಕ ಪಾಕಿಸ್ತಾನೀ ಸೇನೆಯು ಐಎಸ್ಐ ಬಲದಿಂದ ಮತ್ತಷ್ಟು ಉತ್ತೇಜನ ಪಡೆದುಕೊಂಡಿದೆ. ಇಸ್ಲಾಮಾಬಾದ್‌ನ ಪರ್ಯಾಯ ಅಧಿಕಾರ ಕೇಂದ್ರವಾಗಿ ಅದು ತನ್ನನ್ನು ಪರಿಗಣಿಸುತ್ತಿದೆ. ಜರ್ದಾರಿ ನೇತೃತ್ವದ ಸರಕಾರದ ಹಲವಾರು ತಿಪ್ಪರಲಾಗ ಪ್ರಸಂಗಗಳು ಪ್ರಜಾಪ್ರಭುತ್ವವಾಗಿ ಚುನಾಯಿತ ಸರಕಾರಗಳು ಪಾಕಿಸ್ತಾನದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಲಾರವು ಎಂಬ ಭಾವನೆ ಬಿಂಬಿಸುವ ಪ್ರಯತ್ನವೋ ಎಂಬ ಸಂದೇಹವೂ ಮೂಡುತ್ತಿದೆ.
ನೆನಪಿಡಿ, ಪಾಕಿಸ್ತಾನದ ಅಧ್ಯಕ್ಷ ಸ್ಥಾನಕ್ಕೇರಿರುವ ಆಸಿಫ್ ಅಲಿ ಜರ್ದಾರಿ ಅಲ್ಲಿ “ಮಿಸ್ಟರ್ 10%” ಅಂತಲೇ ಗುರುತಿಸಲ್ಪಟ್ಟಿದ್ದಾರೆ. ಅಂಥವರಿಂದ ನಾವು ಏನನ್ನು ನಿರೀಕ್ಷಿಸಬಹುದು? ಪಾಕಿಸ್ತಾನವನ್ನು ಇನ್ನು ನಂಬುವುದಾದರೂ ಹೇಗೆ? ಅದು ಉಗ್ರಗಾಮಿಗಳನ್ನು ಮಟ್ಟ ಹಾಕುತ್ತದೆ ಅಂತ ನಿರೀಕ್ಷಿಸುವುದಾದರೂ ಹೇಗೆ? ಒಟ್ಟಿನಲ್ಲಿ ಪಾಕಿಸ್ತಾನದೊಳಗಿನ ತಳಮಳಗಳು ಜಾಗತಿಕವಾಗಿ ತಮ್ಮ ಮೇಲೆ ಬಿದ್ದ ದೃಷ್ಟಿಯನ್ನು, ಮುಂಬಯಿ ದಾಳಿಯ ತನಿಖೆಯನ್ನು ದಿಕ್ಕುತಪ್ಪಿಸಿ, ತಾವೂ ದಿಕ್ಕು ತಪ್ಪುವತ್ತ ಹೆಜ್ಜೆ ಇರಿಸಿದಂತಾಗುತ್ತಿದೆ. ಪಾಕಿಸ್ತಾನವನ್ನು ಆ ದೇವರೇ ಕಾಪಾಡಬೇಕು.
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
View Comments
ಈವಾಗ ಕಸಬ್ ನೇರವಾಗಿ ಪಾಕ್ ಗೆ ಪತ್ರ ಬರೆದಿದ್ದಾನೆ ಅಲ್ವಾ? ಈಗ ಸಿಕ್ತಲ್ಲ ಬಲವಾದ ಸಾಕ್ಷ್ಯಗಳು..ಆದರೆ ದಿನಕ್ಕೊಂದು ಹೇಳಿಕೆ ನೀಡುವ ಪಾಕ್ ಇದನ್ನು ಒಪ್ಪುವುದೇ..ನಮ್ಮ ವಿದೇಶಾಂಗ ಸಚಿವರು ಬರೆದಿದ್ದಾರೆ..ಕಸಬ್ ಬರೆದಿದ್ದಲ್ಲಾ..ಅಂದ್ರೂ ಅನ್ನಬಹುದು!!!!
-ತುಂಬುಪ್ರೀತಿ,
ಚಿತ್ರಾ
ಅದು ಸಾಕ್ಷಿ ಆಗಲ್ಲ ಅಂತ ಆಣಿಮುತ್ತು.
ನನ್ ಸ್ನೇಹಿತ ಹೇಳ್ತಿರ್ತನೆ, ಒಂದು ರಸ್ತೆ ಹಾಳಾಗಿದೆ ಸರಿ ಮಾಡ್ತ ಇಲ್ಲ ಆಂದೆ ಅದನ್ನು ಪೂರ್ತಿ ಹದಗೆಡಿಸಿಬಿಡು ಬೇಗ ಸರಿ ಹೋಗತ್ತೆ ಅಂತ. ಹಾಗೇನಾದ್ರು ಆಗುತ್ತ ನೋಡ್ಬೇಕು.
ಚಿತ್ರಾ,
ನೋಡಿದ್ರಾ... ಪತ್ರ ತಲುಪಿದ್ರೂ, ಕಸಬ್ ಹೆಸರಿನ ಯಾವುದೇ ಪಾಕಿಸ್ತಾನೀ ನಾಗರಿಕನೇ ಇಲ್ಲ ಎಂದು ಹೇಳಿದೆ ಪಾತಕಿಸ್ತಾನ. ಪಾಕಿಸ್ತಾನದ ಭವಿಷ್ಯ ಅಧೋಗತಿಯಾಗಿಬಿಡ್ತಾ ಇದೆ.
ಪ್ರಸನ್ನ ಅವರೆ,
ನೀವು ಹೇಳಿದಂತೆ, ಹಾಗೆ ಮಾಡಬಹುದು. ಆದ್ರೆ, ನಮ್ಮ ಸರಕಾರ ತಾಳ್ಮೆ, ಶಾಂತಿ, ಸಹನೆ ಇತ್ಯಾದಿಗಳನ್ನು ತನ್ನ ಆಜನ್ಮಸಿದ್ಧ ಹಕ್ಕು ಎಂದುಕೊಳ್ಳುತ್ತಿದೆಯಲ್ಲ..
ಅವಿ,
ಪಾಕಿಸ್ತಾನವನ್ನು ಆ ದೇವರೇ ಕಾಪಾಡಬೇಕು. ಅಂದಿದ್ದೀರಲ್ಲ.. ದೇವರಾದರೂ ಯಾಕೆ
ಕಾಪಾಡಬೇಕು ? ಅದು ಇಂದು ಪಾಕಿಸ್ತಾನವಾಗಿ ಉಳಿದಿಲ್ಲ. ಬರಿಯ ಪಾತಕೀಸ್ಥಾನ ತಾನೆ ?
ಶಮ, ನಂದಿಬೆಟ್ಟ
ಶಮ,
ನೀವಂದಿದ್ದು ನಿಜ. ಅಲ್ಲಿ ನೋಡಿದ್ರಾ... ಸಣ್ಣ ಮಕ್ಕಳಿಗೆ ಕೂಡ ಯಾವ ರೀತಿ ಪಾಠ ಹೇಳ್ಕೊಡ್ತಾರೆ ಅಂತ... ಹಿಂದೊಮ್ಮೆ ಭಾರತವೂ ಪಾಕಿಸ್ತಾನದ ಭಾಗವಾಗಿತ್ತು ಅಂತ ಅಲ್ಲಿನ ಪಠ್ಯ ಪುಸ್ತಗಳಲ್ಲಿದೆ ಅಂತ ಟೈಮ್ಸ್ ಆಫ್ ಇಂಡಿಯಾ ವರದಿ ಓದಿದೆ.
ನಮ್ಮ ಪ್ರಧಾನ ಮಂತ್ರಿಗಳು ಹೇಳ್ತಿದರೆ ದೇಶವಿಲ್ಲದ ಉಗ್ರರು ಅಂತ. ಪಾಕಿಸ್ತಾನಿಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಜರ್ದಾರಿ Mr.10% ಆದ್ರೆ ಇವ್ರು ಏನು ಅವಿ ಸಾರ್? ಛೇ ನಮ್ ಬಗ್ಗೆನೆ ನಾಚಿಕೆ ಹೇಸಿಗೆ ಎರಡೂ ಆಗತ್ತೆ. ಇದೆನಾ ಮುತ್ಸದ್ದಿತನ ಅಂದ್ರೆ?
ಪ್ರಸನ್ನ ಅವರೆ,
ಬಾಯಿಗೆ ಬಂದಂತೆ ಮಾತನಾಡುವುದೇ ಮುತ್ಸದ್ಧಿತನ. ನಮ್ಮವರು ಗಟ್ಟಿಯಾಗಿ ಮಾತನಾಡದ ಕಾರಣದಿಂದಾಗಿ, ಇದೀಗ ಮುಂಬಯಿ ಪ್ರಕರಣ ಮೂಲೆಗುಂಪಾಗಿದೆ ಮತ್ತು ಭಾರತ-ಪಾಕ್ ಸಂಘರ್ಷ ಸ್ಥಿತಿಯೇ ಜಗತ್ತಿಗೆ ಪ್ರಮುಖವಾಗಿದೆ. ಉಗ್ರವಾದ ಎಂಬೋದು ಮರೆತೇ ಹೋಗಿದೆ.
ಇನ್ನೇನಾದ್ರೂ ಪಾಕಿಸ್ತಾನೀಯರಿಂದ ದಾಳಿ ನಡೆದ್ರೆ ಸುಮ್ಮನಿರಲ್ಲ ಅಂತಾದ್ರೂ ನಮ್ಮವರು ಎಚ್ಚರಿಕೆ ಕೊಡಬಹುದಿತ್ತು.