Online Shopping Safety Tips: ದೀಪಾವಳಿಗೆ ಬ್ಯಾಂಕ್ ಖಾತೆ ದಿವಾಳಿಯಾಗದಿರಲಿ

Online Shopping Safety Tips: ಬಿಟ್ಟೂಬಿಡದ ಮಳೆ, ಬೆಂಗಳೂರಲ್ಲಾದರೆ ರಸ್ತೆ ಗುಂಡಿ. ಹೊರಗೆ ಹೋಗುವುದು ಹೇಗೆ? ಆನ್‌ಲೈನ್ ಶಾಪಿಂಗ್ ತಾಣಗಳಲ್ಲಿ ಕುಳಿತಲ್ಲೇ ಶಾಪಿಂಗ್ ಮಾಡಬಹುದು, ಭರ್ಜರಿ ಕೊಡುಗೆಗಳೂ ಇರುತ್ತವೆ ಎಂಬ ಯೋಚನೆಯಾದಲ್ಲಿ, ಸ್ವಲ್ಪ ಎಚ್ಚರಿಕೆ ವಹಿಸಿ. ವಂಚಕರ ಸುಳಿಗೆ ಸಿಲುಕಿ ಸಾವಿರ, ಲಕ್ಷಾಂತರವೂ ಅಲ್ಲ, ಕೋಟ್ಯಂತರ ರೂಪಾಯಿ ಕಳೆದುಕೊಂಡವರ ಸುದ್ದಿಗಳನ್ನು ಕೇಳುತ್ತಿದ್ದೇವೆ. ಇಂತಹಾ ಪರಿಸ್ಥಿತಿಯಲ್ಲಿ ಹಬ್ಬದ ಸೀಸನ್‌ನಲ್ಲಿ ಮಿಕವನ್ನು ಬೇಟೆಯಾಡಲು ಸೈಬರ್ ವಂಚಕರೂ ಕಾದು ಕುಳಿತಿರುತ್ತಾರೆ.

ಸ್ನೇಹಿತನ ಪ್ರಕಾಶನ ಅನುಭವ. ಅವರ ಮಿತ್ರರೊಬ್ಬರು ವಾಟ್ಸ್ಆ್ಯಪ್ ಮೂಲಕ ಒಂದು ಲಿಂಕ್ ಕಳುಹಿಸಿದ್ದರು. ಇದು Forwarded Many Times ಎಂಬ ಗುರುತು ಇದ್ದ ಸಂದೇಶ. ಈತ ಅದನ್ನು ಗಮನಿಸಿಲ್ಲವೋ, ಮಿತ್ರ ಕಳುಹಿಸಿದ್ದಲ್ಲಾ ಎಂದು ನಿರ್ಲಕ್ಷ್ಯ ತಾಳಿದನೋ… ಫ್ಲಿಪ್‌ಕಾರ್ಟ್, ಅಮೆಜಾನ್‌ನಲ್ಲಿ ಆನ್‌ಲೈನ್‌ನಲ್ಲಿ ಶೇ.40 ರಿಯಾಯಿತಿ ಕೂಪನ್ ಪಡೆಯಲು ಕ್ಲಿಕ್ ಮಾಡಿ ಎಂದಿತ್ತು. ಕ್ಲಿಕ್ ಮಾಡಿದ. ತೆರೆದುಕೊಂಡ ಪುಟದಲ್ಲಿ ತನ್ನ ವಿವರವನ್ನೆಲ್ಲ ತುಂಬುತ್ತಾ ಹೋದ, ಸಬ್‌ಮಿಟ್ ಬಟನ್ ಒತ್ತಿದ.

ಕೆಲವು ಕ್ಷಣಗಳು ಕಳೆದಾಗ ಈತನಿಗೊಂದು ಫೋನ್ ಕರೆ ಬಂತು. ‘ಸರ್, ನೀವೀಗ ಕೂಪನ್‌ಗಾಗಿ ಅಪ್ಲೈ ಮಾಡಿದ್ದೀರಿ, ಅದನ್ನು ಅಪ್ರೂವ್ ಮಾಡಲು ಒಟಿಪಿ ಕಳುಹಿಸಿದ್ದೇವೆ. ಅದನ್ನು ಹೇಳಿ’ ಅಂತ ಅತ್ತಲಿಂದ ಯುವತಿಯೊಬ್ಬಳು ಉಲಿದಳು. ಇವ ಒಟಿಪಿ ಸಂಖ್ಯೆ ಹೇಳಿದ. ಕೆಲವು ನಿಮಿಷ ಕಳೆಯುತ್ತಿದ್ದಂತೆಯೇ, ‘ನಿಮ್ಮ ಬ್ಯಾಂಕ್ ಖಾತೆಯಿಂದ 20 ಸಾವಿರ ರೂ. ವರ್ಗಾವಣೆಯಾಗಿದೆ’ ಎಂಬ ಎಸ್ಸೆಮ್ಮೆಸ್ ಬಂದಾಗ ಹೌಹಾರಿದ. ತಾನು ಮೊಬೈಲ್ ಬ್ಯಾಂಕಿಂಗ್‌ಗೆ ಎರಡು ಹಂತದ ಪರಿಶೀಲನಾ ವ್ಯವಸ್ಥೆ (ಟು ಸ್ಟೆಪ್ ವೆರಿಫಿಕೇಶನ್) ಬಳಸಿದರೂ ಹೀಗಾಯಿತಲ್ಲ ಎಂಬುದು ಈತನ ಆಘಾತಕ್ಕೆ ಕಾರಣ.

ಮತ್ತೊಂದು ಘಟನೆ. ಸ್ನೇಹಿತೆಯೊಬ್ಬರು ಹಠ ಹಿಡಿಯುತ್ತಿದ್ದ ಮಗುವನ್ನು ಸಾಗಹಾಕಲು ಮೊಬೈಲ್ ಕೊಟ್ಟುಬಿಟ್ಟಿದ್ದರು. ಇಂಟರ್ನೆಟ್ ಆನ್ ಇತ್ತು. ಮಗು ಯೂಟ್ಯೂಬ್ ವಿಡಿಯೊ ನೋಡುತ್ತಿದ್ದಾಗ, ಅದೇನೋ ವಿಂಡೋ ಪಾಪ್-ಅಪ್ ಆಗಿ ಕಾಣಿಸಿಕೊಂಡಿತು. ಆಕರ್ಷಕ ಬಣ್ಣ ಬಣ್ಣದ ಚಿತ್ರವೂ ಇತ್ತು. ಆ ಹುಡುಗಿ ಏನೆಂದು ತಿಳಿಯದೆ ಕ್ಲಿಕ್ ಮಾಡಿಬಿಟ್ಟಳು. ಇನ್ನೂ ಒಂದು ವಿಂಡೋ ಕಾಣಿಸಿಕೊಂಡಿತು. ಓದದೆಯೇ ಕ್ಲಿಕ್ ಮಾಡಿದಳು. ಅದೇನೋ ಆ್ಯಪ್ ತಾನಾಗಿಯೇ ಡೌನ್‌ಲೋಡ್ ಆಗಿ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಆಯಿತು. ಹುಡುಗಿಗೆ ತಿಳಿಯಲಿಲ್ಲ. ಆದರೆ, ಆ ಮೊಬೈಲ್‌ನಲ್ಲಿ ನಡೆಯುತ್ತಿದ್ದ ಎಲ್ಲ ಬೆರಳಚ್ಚಿಸುವಿಕೆಯನ್ನೂ ಈ ಆ್ಯಪ್ ಟ್ಯ್ರಾಕ್ ಮಾಡುತ್ತಿತ್ತು. ನಂತರ ಸ್ನೇಹಿತೆಯು ಬ್ಯಾಂಕಿಂಗ್ ವಹಿವಾಟು ನಡೆಸಿದಾಗ ಬಳಕೆದಾರ ಐಡಿ, ಪಾಸ್‌ವರ್ಡ್‌ಗಳು ಈ ಕುತಂತ್ರಾಂಶದ ಮೂಲಕ ರೆಕಾರ್ಡ್ ಆಗಿ, ಮಾಹಿತಿಯು ಸೈಬರ್ ವಂಚಕರಿಗೆ ರವಾನೆಯಾಯಿತು. ಕೆಲವೇ ಕ್ಷಣಗಳಲ್ಲಿ ಈಕೆಯ ಬ್ಯಾಂಕ್ ಖಾತೆಯಿಂದಲೂ ಹಣ ಹೋಯಿತು.

ಇವೆಲ್ಲವೂ ಧಾವಂತದ ಬದುಕಿನಲ್ಲಿ ಆನ್‌ಲೈನ್ ಆಗಿರುವುದರ ಹಿಂದಿರುವ ಕರಾಳ ಮುಖಗಳು. ಎಚ್ಚರಿಕೆ ವಹಿಸದಿದ್ದರೆ ಹಣ ಕಳೆದುಕೊಳ್ಳುತ್ತೇವೆ. ಹೇಗಿದ್ದರೂ ಹಬ್ಬಗಳ ಸಾಲು ಬಂದಿದೆ, ಖರೀದಿ ಉತ್ಸಾಹವಿದೆ. ಶುಭಾಶಯಗಳ ವಿನಿಮಯವೂ ಆಗುತ್ತಿದೆ. ಎಲ್ಲವೂ ಅಂತರಜಾಲ ಬಳಸಿ ಮೊಬೈಲ್ ಮೂಲಕವೇ. ಹೇಗೂ ಕುಳಿತಲ್ಲೇ ಆಗುತ್ತದೆಯಲ್ಲಾ! ನಿಮಗೂ ಬಂದಿರಬಹುದು ಇಂಥ ವಾಟ್ಸ್ಆ್ಯಪ್ ಸಂದೇಶಗಳು – “ಅವಿನಾಶ ನಿಮಗೆ ಶುಭಾಶಯ ಕೋರಿದ್ದಾರೆ, ಅದನ್ನು ನೋಡಲು ಕ್ಲಿಕ್ ಮಾಡಿ”. ಸ್ನೇಹಿತ ಏನು ವಿಶ್ ಮಾಡಿದ್ದಾರೆ ಎಂದು ಕ್ಲಿಕ್ ಮಾಡಿದರೆ ಕೆಡುವ ಅಪಾಯವೇ ಹೆಚ್ಚು. ನಿಮ್ಮ ಮಾಹಿತಿಯನ್ನು ಕದಿಯುವ ಹುನ್ನಾರಗಳಿವು ಎಂಬುದು ಅರ್ಥವಾಗುವಾಗ ಕಾಲ ಮಿಂಚಿರುತ್ತದೆ.

ಏನು ಎಚ್ಚರಿಕೆ ವಹಿಸಬೇಕು?

  • ಈಗಾಗಲೇ ಜನಜನಿತವಾಗಿರುವ ಶಾಪಿಂಗ್ ತಾಣಗಳನ್ನೇ ಬಳಸಿ. ಆದರೆ, ಅದನ್ನೇ ಹೋಲುವ ತಾಣಗಳು ನಿಮ್ಮ ಕಣ್ಣುಗಳಿಗೆ ಮಣ್ಣೆರಚಬಹುದು, ಎಚ್ಚರ ವಹಿಸಿ.
  • ಯಾವುದೇ ಅಪರಿಚಿತ ಲಿಂಕ್ ಕ್ಲಿಕ್ ಮಾಡಲು ಹೋಗಬೇಡಿ.
  • ಲಕ್ಷ ಬೆಲೆ ಬಾಳುವ ಫೋನ್ ಶೇ.70 ರಿಯಾಯಿತಿಯಲ್ಲಿ ಸಿಗುತ್ತದೆ, ತಕ್ಷಣ ಖರೀದಿಸಿ ಎಂಬ ಆಮಿಷವಿರುವ ಹೊಸ ಶಾಪಿಂಗ್ ತಾಣಗಳ ಬಗ್ಗೆ ಎಚ್ಚರ ವಹಿಸಿ.
  • ಡೆಬಿಟ್-ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಸಾಧ್ಯವಿದ್ದಷ್ಟೂ ಹಂಚಿಕೊಳ್ಳಬೇಡಿ. ಬಳಸಿದರೂ, ಆ್ಯಪ್‌ನಲ್ಲಿ ಅಥವಾ ಬ್ರೌಸರ್‌ನಲ್ಲಿ, ಅಥವಾ ಆಯಾ ತಾಣಗಳಲ್ಲಿ ಸೇವ್ ಆಗದಂತೆ ನೋಡಿಕೊಳ್ಳಿ. 16 ಅಂಕಿ ಮರಳಿ ಟೈಪ್ ಮಾಡುವುದಕ್ಕೆ ಉದಾಸೀನ ತೋರಿದರೆ, ಅಪಾಯ ಕಟ್ಟಿಟ್ಟ ಬುತ್ತಿ.
  • ವ್ಯಾಲೆಟ್‌ಗಳ ಬಳಕೆ ಒಂದಿಷ್ಟು ಸುರಕ್ಷಿತ. ಯಾಕೆಂದರೆ, ಅದರಲ್ಲಿ ನಿರ್ದಿಷ್ಟ ಮೊತ್ತದ ಹಣವನ್ನು ಮಾತ್ರ ಇರಿಸಿದಲ್ಲಿ ಹ್ಯಾಕ್ ಆದರೂ ದೊಡ್ಡ ಸಮಸ್ಯೆಯಾಗಲಾರದು.
  • ಬ್ಯಾಂಕಿಂಗ್ ವಹಿವಾಟಿಗೆ ಎರಡು ಹಂತದ ಪರಿಶೀಲನೆ (ಟು ಸ್ಟೆಪ್ ವೆರಿಫಿಕೇಶನ್) ಎನೇಬಲ್ ಮಾಡಿಕೊಳ್ಳಿ. ಇದು ಸ್ವಲ್ಪ ಮಟ್ಟಿಗೆ ಸುರಕ್ಷತೆ ನೀಡುತ್ತದೆ.
  • ಆ್ಯಪ್ ಸ್ಟೋರ್‌ನಿಂದ ಮಾತ್ರವೇ ಯಾವುದೇ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
  • ಹಣ ಪಾವತಿಸುವುದರ ಬದಲಾಗಿ, ಸಿಒಡಿ (ಕ್ಯಾಶ್ ಆನ್ ಡೆಲಿವರಿ – ಸರಕು ಕೈಸೇರಿದಾಗ ಹಣ ಪಾವತಿ) ವ್ಯವಸ್ಥೆಯಿದ್ದರೆ ಅದನ್ನೇ ಆಯ್ಕೆ ಮಾಡಿಕೊಳ್ಳಿ.
  • ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳ ಪಾಸ್‌ನರ್ಡ್/ಪಿನ್ ಅನ್ನು ಆಗಾಗ್ಗೆ ಬದಲಿಸುತ್ತಿರಿ, ಊಹಿಸಲಾಗದ ಪಾಸ್‌ವರ್ಡ್ ಇರಲಿ.
  • ಮೊಬೈಲ್ ಫೋನ್‌ನ ತಂತ್ರಾಂಶಕ್ಕಾಗಿ ಕಾಲಕಾಲಕ್ಕೆ ಬರುವ ಅಪ್‌ಡೇಟನ್ನು ಅಳವಡಿಸಿಕೊಳ್ಳಿ. ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ.
  • ಪ್ರಮುಖ ಮೊಬೈಲ್ ತಯಾರಕ ಕಂಪನಿಗಳೇ ಒದಗಿಸುವ ಆ್ಯಂಟಿ-ವೈರಸ್ ತಂತ್ರಾಂಶ ಮೂಲಕ ಸ್ಕ್ಯಾನ್ ಮಾಡುತ್ತಾ ಇರಿ.
  • ಹಣಕಾಸು ವಹಿವಾಟು ಮಾಡುವಾಗ ಯಾವುದೇ ಕಾರಣಕ್ಕೂ ಸಾರ್ವಜನಿಕವಾಗಿ ಲಭ್ಯ ಇರುವ, ವಿಶೇಷತಃ ಉಚಿತವಾಗಿ ಲಭ್ಯವಿರುವ ವೈಫೈ ಬಳಸಬೇಡಿ.
  • ಉಚಿತ ವೈಫೈ ಸಿಗುತ್ತದೆ ಎಂಬ ಕಾರಣಕ್ಕೆ ಪರಿಚಿತವಲ್ಲದ ಅಥವಾ ನಕಲಿ (ಉದಾಹರಣೆಗೆ, ನೀವು ರೈಲ್ವೇ ಸ್ಟೇಶನ್‌ನಲ್ಲಿದ್ದರೆ, ಇಂಡಿಯನ್ ರೈಲ್ವೇ ಎಂಬ ಹೆಸರಲ್ಲೇ ನಕಲಿ ವೈಫೈ ಹಾಟ್‌ಸ್ಪಾಟ್ ಕಾಣಿಸಬಹುದು) ವೈಫೈಗೆ ಸಂಪರ್ಕಿಸಲೇಬೇಡಿ.
  • ಮಕ್ಕಳ ಕೈಗೆ ಮೊಬೈಲ್ ಕೊಡಬೇಡಿ. ಗೊತ್ತಿಲ್ಲದೆ ಧುತ್ತನೇ ಬರುವ ಲಿಂಕ್ ಒತ್ತಿ, ಕುತಂತ್ರಾಂಶಗಳು (ಮಾಲ್‌ವೇರ್) ಇರುವ ಆ್ಯಪ್‌ಗಳು ಸ್ವಯಂಚಾಲಿತವಾಗಿ ಇನ್‌ಸ್ಟಾಲ್ ಆಗಿ, ಸೇವ್ ಆಗಿರುವ ಬ್ಯಾಂಕಿಂಗ್ ಮಾಹಿತಿಯನ್ನು (ಲಾಗಿನ್ ಐಡಿ, ಟೈಪ್ ಮಾಡುವ ಪಾಸ್‌ವರ್ಡ್ ಮುಂತಾದವು) ತಮ್ಮನ್ನು ಕಳುಹಿಸಿದ ಒಡೆಯನಿಗೆ ರವಾನಿಸಬಲ್ಲವು. ಬ್ಯಾಂಕ್ ಖಾತೆಯಲ್ಲಿದ್ದ ಹಣ ಖಾಲಿಯಾಗುವುದು ಸುಲಭ.
  • ಒಟಿಪಿ ಯಾರ ಜೊತೆಗೂ ಹಂಚಿಕೊಳ್ಳಲೇಬಾರದು.
  • ಸೈಬರ್ ಸೆಂಟರ್‌ಗಳಲ್ಲಿರುವ ಕಂಪ್ಯೂಟರಿನಲ್ಲಿ ಆನ್‌ಲೈನ್ ಹಣಕಾಸು ವಹಿವಾಟು ಮಾಡದಿರಿ.

My Article published in Prajavani by Avinash B on 18/19 October 2022

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

3 weeks ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

3 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

3 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

4 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

5 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

10 months ago