Photo by Soumil Kumar on Pexels.com
ಈ ಮಹಿಳೆ ಆ ಏರಿಯಾದಲ್ಲಿ ಚಿರಪರಿಚಿತರು. ಪರಿಚಯ, ಸ್ನೇಹಾಚಾರ ಮಾತುಕತೆ – ಇವುಗಳ ಮೂಲಕ ಎಲ್ಲರ ಮನ ಗೆದ್ದವರು. ಒಂದು ದಿನ ಅವರು, ನಾವೆಲ್ಲ ಹೆಂಗಳೆಯರು ಸೇರಿಕೊಂಡು ಚೀಟಿ ಕಟ್ಟಬಾರದೇಕೆ? ನಮಗೆ ಬೇಕಾದ ಏನಾದರೂ ಚಿನ್ನ, ದೊಡ್ಡ ಮೊತ್ತದ ಸೀರೆ ಖರೀದಿಸಲು ನೆರವಾಗುತ್ತದೆಯಲ್ಲಾ ಅಂತ ಮಾತಿಗಿಳಿದು, ಏರಿಯಾದ ಹೆಂಗಸರನ್ನೆಲ್ಲಾ ಪ್ರೇರೇಪಿಸಿದರು. ಹಾಂ, ಹೌದಲ್ಲ ಅನ್ನಿಸಿದ ಅಲ್ಲಿನ ಹೆಂಗಸರೆಲ್ಲರೂ ಎದ್ದೂ ಬಿದ್ದು, ಏನೇನೋ ಮಾಡಿ, ಕಷ್ಟಪಟ್ಟು ಈ ರೀತಿ ಆರಂಭಿಸಲಾದ ಚೀಟಿಗೆ ಕಂತು ಕಟ್ಟಲಾರಂಭಿಸಿದರು.
ಇದು ನಗರದಲ್ಲಿ ನಡೆಯುತ್ತಿರುವ ಸಾಮಾನ್ಯ ಬ್ಯಾಂಕೇತರ ಹಣಕಾಸು ಚಟುವಟಿಕೆ. ಹಳ್ಳಿಗಳಲ್ಲಿ ಕುರಿ ಫಂಡ್ ಹೆಸರಿನಲ್ಲಿ ಇಂಥದ್ದೇ ಚಟುವಟಿಕೆಯು ಆಪತ್ಕಾಲಕ್ಕೆ ನೆರವಾದ ಅದೆಷ್ಟೋ ಉದಾಹರಣೆಗಳಿವೆ. ಇಲ್ಲಿ ಎಲ್ಲವೂ ನಂಬಿಕೆ, ವಿಶ್ವಾಸದ ಆಧಾರದಲ್ಲಿ ನಡೆಯುತ್ತಿದೆ.
ಒಂದಿಷ್ಟು ಸ್ಥಿತಿವಂತರು ಕೆಲವೆಡೆ ಚಿಟ್ ಫಂಡ್ ಎಂಬ ನಿಧಿಯಲ್ಲಿ ಹಣ ಸೇರಿಸುತ್ತಾ ಹೋಗುತ್ತಾರೆ, ಅದು ಕೂಡ ಆಪತ್ಕಾಲಕ್ಕೋ, ಕನಸಿನ ಮನೆ ಕಟ್ಟುವುದಕ್ಕೋ, ಮದುವೆಗೋ, ವಾಹನ ಖರೀದಿಗೋ, ಸೈಟ್ ಕೊಳ್ಳುವುದಕ್ಕೋ ನೆರವಾಗಲೆಂಬ ದೂರದ ಆಶಯ.
ಈಗ ಕಾಲದ ಜೊತೆ ತಂತ್ರಜ್ಞಾನವೂ ಬದಲಾಗಿದೆ. ಏನಿದ್ದರೂ ಕೈ ಬೆರಳ ತುದಿಯಲ್ಲೇ ಆಗಬೇಕು. ಆನ್‌ಲೈನ್‌ನಲ್ಲೇ ಹಣಕಾಸು ವಹಿವಾಟು ನಡೆಯುತ್ತಿದೆ. ಆರ್‌ಡಿ (ರಿಕರಿಂಗ್ ಡೆಪಾಸಿಟ್) ಕಟ್ಟುವುದೂ ಆನ್‌ಲೈನಲ್ಲೇ ಆಗಿಬಿಡುತ್ತದೆ. ಬ್ಯಾಂಕಿಗೆ ಹೋಗಲು ಪುರುಸೊತ್ತಿಲ್ಲವಾದ್ದರಿಂದ ಹೇಗೂ ಕೈಯಲ್ಲೇ ಸ್ಕ್ರೀನ್ ಉಜ್ಜುತ್ತಾ ಸುಲಭವಾಗಿ ಹಣ ಕೂಡಿಡಬಹುದಲ್ಲಾ…
ಇಷ್ಟೆಲ್ಲದರ ನಡುವೆ, ಕೆಲವರಿಗೆ ದಿಢೀರ್ ಹಣ ಬೇಕಾಗುತ್ತದೆ. ಚೀಟಿ, ಕುರಿ, ಚಿಟ್ ಫಂಡ್ – ಎಲ್ಲದರಿಂದಲೂ ಹಣ ತೆಗೆಯುತ್ತಾರೆ. ಮತ್ತೇನೋ ತುರ್ತಾಗಿ ವಾಹನ ಖರೀದಿಸಬೇಕಾಗುತ್ತದೆ ಎಂದಿಟ್ಟುಕೊಳ್ಳೋಣ. ಹಣ ಹೊಂದಿಸಲು ಮೇಲೆ ಕೆಳಗೆ ನೋಡುತ್ತಿರುತ್ತಾರೆ. ಇಂಥವರಿಗಾಗಿಯೇ ಸಣ್ಣಪುಟ್ಟ ಫೈನಾನ್ಸ್ ಕಂಪನಿಗಳು ಇರುತ್ತವೆ.
ಹೇಳಿ ಕೇಳಿ ಈಗ ಅವಸರದ ಯುಗ. ಅಂಗೈಯಲ್ಲಿ ಅರಮನೆಯ ಕನಸು ಕಾಣುವ ಕಾಲ. ಹಣ ಮಾಡುವುದೇ ಪ್ರಮುಖ ಉದ್ದೇಶವಾಗಿಬಿಟ್ಟಿದೆ. ಲೈಫ್ ಸ್ಟೈಲ್, ಪ್ರತಿಷ್ಠೆ, ಎದುರು ಮನೆಯವರಿಗಿಂತ ತಾವು ದೊಡ್ಡವರೆಂದು ತೋರ್ಪಡಿಸುವ ಹಂಬಲ – ಅತಿಯಾಸೆ.
ಚೀಟಿ ಕಟ್ಟಿಸಿಕೊಂಡಾಕೆ ಸದ್ದಿಲ್ಲದೇ ಮಾಯವಾಗಿಬಿಡುತ್ತಾಳೆ, ಕುರಿ ಫಂಡ್ ಎತ್ತಿದವರು ರಾತೋರಾತ್ರಿ ಗೊತ್ತು ಗುರಿಯಿಲ್ಲದ ಊರಿಗೆ ಶಿಫ್ಟ್. ಚಿಟ್ ಫಂಡ್ ಕಂಪನಿ ಬಾಗಿಲು ಮುಚ್ಚಿರುತ್ತದೆ, ಫೈನಾನ್ಸ್ ಕಂಪನಿಗಳು ಕೈಎತ್ತಿ ದಿವಾಳಿ ಘೋಷಿಸಿವೆ. ಹೇಗಾದರೂ ಮರ್ಯಾದೆ ಉಳಿಸಿಕೊಳ್ಳಬೇಕಲ್ಲಾ… ಅಷ್ಟಕ್ಕಾದರೂ ಎಲ್ಲಿಂದ ಹಣ ತರೋದು?
ಅಂಥವರಿಗಾಗಿ ಕಾದು ಕುಳಿತಿರುತ್ತವೆ ಆ್ಯಪ್‌ಗಳೆಂಬ ಮಾಯಾ ಜಾಲ. ಕಡಿಮೆ ಬಡ್ಡಿ, ಯಾವುದೇ ದಾಖಲೆಯೇ ಇಲ್ಲದೆ ಸಾಲ ಕೊಡುತ್ತೇವೆ ಅಂತೆಲ್ಲ ಆಕರ್ಷಕ ಜಾಹೀರಾತು ಪ್ರದರ್ಶಿಸಿ, ಮೊದಲು ಗ್ರಾಹಕರನ್ನು ಸೆಳೆಯುತ್ತಾರೆ. ದಾಖಲೆಗಳೇ ಇಲ್ಲದೆ ಹಣ ಕೊಡುತ್ತೇವೆ ಎಂದು ಜಾಹೀರಾತು ನೀಡಿದವರನ್ನು ನಂಬಿ, ನಮ್ಮೆಲ್ಲಾ ಖಾಸಗಿ ಮಾಹಿತಿಯನ್ನು ಅವರಿಗೆ ಧಾರೆಯೆರೆದು ಬಿಟ್ಟಿರುತ್ತೇವೆ. ಸುಲಭವಾಗಿ ಹಣ ಸಿಗುವಾಗ ಯಾರಿಗೆ ಬೇಡ? ಆದರೆ ಹಣ ಕಟ್ಟಲು ವಿಳಂಬವಾದಾಗ ಈ ಛಾಯಾ ಕಂಪನಿಗಳು, ಸ್ಟಾರ್ಟಪ್ ಹೆಸರಲ್ಲಿ ಸುಲಿಗೆಗೆ ಇಳಿದು ಇದ್ದಬದ್ದ ಬಲ ಪ್ರಯೋಗ ಮಾಡುತ್ತವೆ, ಮಾನಸಿಕ, ದೈಹಿಕ ಹಿಂಸೆ ನೀಡುತ್ತವೆ. ತತ್ಪರಿಣಾಮವೇ ಈಗಷ್ಟೇ ಬಯಲಿಗೆ ಬಂದ ಸಾಲ ಕೊಡುವ ಆ್ಯಪ್‌ಗಳ ಬಂಡವಾಳ.
ಮನುಷ್ಯನ ಜೀವನ ಶೈಲಿಯೊಂದಿಗೆ ದುರಾಸೆ ಸೇರಿಕೊಂಡಾಗ ಇಂಥವು ಹುಟ್ಟಿಕೊಳ್ಳುತ್ತವೆ. ಹಣಕ್ಕಾಗಿ ಹಪಹಪಿಸುವವರಿಗಾಗಿಯೇ ಈ ಹದ್ದುಗಳು ಕಾದು ಕುಳಿತಿರುತ್ತವೆ. ಆಮಿಷವೊಡ್ಡಿ ಸಾಲದ ಬಲೆಗೆ ಬೀಳಿಸಿಕೊಳ್ಳುತ್ತಾರೆ. ಆಮೇಲೆ, ಗೌಪ್ಯ ಶುಲ್ಕ, ನಿಯಂತ್ರಣವೇ ಇಲ್ಲದ ಬಡ್ಡಿ, ಚಕ್ರ ಬಡ್ಡಿ – ಇವುಗಳು ಜನರನ್ನು ಹಿಂಡಿ ಹಿಪ್ಪೆ ಮಾಡುತ್ತವೆ. ಈ ಪರಿಯ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡವರೂ ಇದ್ದಾರೆ, ಕೆಲವರು ಧೈರ್ಯ ತಳೆದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕಾರಣದಿಂದಾಗಿ ಇಂಥದ್ದೊಂದು ದೇಶವ್ಯಾಪಿ ವಂಚಕರ ಹಿಂಡೇ ಪತ್ತೆಯಾಗಿಬಿಟ್ಟಿದೆ. ವಿಶೇಷವೆಂದರೆ, ಇಂಥ ಸಾಲದ ಬಲೆಗೆ ಬಿದ್ದವರು ವಿದ್ಯೆಯಿಲ್ಲದ ಹಳ್ಳಿ ಗಮಾರರೇನಲ್ಲ, ಸುಶಿಕ್ಷಿತರೇ!
ನಿಜ ವಿಷಯವೇನೆಂದರೆ, ಈ ರೀತಿಯಾಗಿ ಬೇಕಾಬಿಟ್ಟಿಯಾಗಿ, ಮೊಬೈಲ್ ಆ್ಯಪ್ ಮೂಲಕವೇ ನೇರವಾಗಿ ಹಣಕಾಸು ಸಾಲ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ ಯಾರಿಗೂ ಅನುಮತಿ ನೀಡಿಲ್ಲ. ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಸ್ಟೋರ್‌ನಲ್ಲಿ ಸಾಕಷ್ಟು ಇಂಥಹ ಆ್ಯಪ್‌ಗಳಿರುತ್ತವೆ. ಅಷ್ಟೇ ಅಲ್ಲ, ಸಾಕಷ್ಟು ವಂಚಕ ವೆಬ್‌ಸೈಟುಗಳೂ ಇವೆ. ಮೊಬೈಲ್ ಸ್ಕ್ರೀನ್ ತೆರೆದಾಕ್ಷಣ ಇವುಗಳು ಧುತ್ತನೇ ಕಾಣಿಸುವಂತೆ (ಪಾಪ್-ಅಪ್ ಜಾಹೀರಾತುಗಳ ಮೂಲಕ) ಪ್ರಚಾರವನ್ನೂ ಮಾಡಲಾಗುತ್ತದೆ. ಹೆಚ್ಚೇನೂ ಅರಿಯದವರು ಈ ಆಮಿಷಕ್ಕೆ ಬಲಿಯಾಗಿ ಸಾಲದ ಕುಣಿಕೆಗೆ ಗೋಣೊಡ್ಡಿರುತ್ತಾರೆ.
ಈಗ ಬೆಳಕಿಗೆ ಬಂದ ಆ್ಯಪ್‌ಗಳ ವಂಚನಾ ಕಾರ್ಯಜಾಲದಲ್ಲಿ ದೇಶಾದ್ಯಂತ ಹಲವರ ಬಂಧನವಾಗಿದೆ. ಬೆಂಗಳೂರಿನಲ್ಲಿಯೂ ಪೊಲೀಸರು, ಸಿಐಡಿ ಅಧಿಕಾರಿಗಳು ಅಕ್ರಮದಲ್ಲಿ ತೊಡಗಿದ್ದವರನ್ನು ಬಂಧಿಸಿದ್ದಾರೆ. ಹೈದರಾಬಾದ್‌ನಲ್ಲಿ ದೊಡ್ಡ ಕುಳಗಳೇ ಪೊಲೀಸರ ಬಲೆಗೆ ಬಿದ್ದಿವೆ. ಒಂದು ಲೋನ್ ಆ್ಯಪ್‌ಗೆ ಚೀನಾದ ಸಂಪರ್ಕವಿರುವುದೂ ಪತ್ತೆಯಾಗಿದ್ದು, ದೇಶ ಬಿಟ್ಟು ಹೋಗಲು ಪ್ರಯತ್ನಿಸುತ್ತಿದ್ದಾಗ ಚೀನಾದ ಝು ವೈ ಅಲಿಯಾಸ್ ಲಂಬೋ ಎಂಬಾತ ಈಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈ ರೀತಿಯ ವಂಚನೆಯ ಆ್ಯಪ್‌ಗಳಿಗೆ ಗುರುಗ್ರಾಮದಲ್ಲಿ ದೊಡ್ಡ ಕಾಲ್‌ಸೆಂಟರುಗಳೇ ಇವೆಯೆಂದರೆ, ಇವರ ಬಲೆಗೆ ಬಿದ್ದವರ ಸಂಖ್ಯೆ ಎಷ್ಟಿರಬಹುದೆಂಬುದನ್ನು ಊಹಿಸಬಹುದು.
ಇತ್ತೀಚೆಗೆ ಹೈದರಾಬಾದ್‌ನಲ್ಲಿ ಬಯಲಾಗಿರುವ ಒಂದು ಕಂಪನಿಯ ದಂಧೆಯಲ್ಲಿ, ಅದರ ಮಾಸ್ಟರ್ ಮೈಂಡ್, ಚೀನಾದ ಝಿಕ್ಸಿಯಾ ಝಾಂಗ್ ಎಂಬಾತನನ್ನು ಬಂಧಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಅನುಮೋದನೆಯೇ ಇಲ್ಲದ 30 ಮೊಬೈಲ್ ಆ್ಯಪ್‌ಗಳ ಮೂಲಕ ಈ ತಂಡವು ಸಾಲದ ದಂಧೆ ನಡೆಸುತ್ತಿತ್ತು. ವರದಿಯ ಪ್ರಕಾರ, ಈ ವ್ಯಕ್ತಿಯು ದೆಹಲಿಯ ಉಮಾಪತಿ ಎಂಬಾತನ ಜೊತೆ ಸೇರಿಕೊಂಡು ಡಿಜಿಪೀರ್‌ಗೋ ಟೆಕ್ ಪ್ರೈ.ಲಿ. ಎಂಬ ಸಂಸ್ಥೆಯನ್ನು ಕಳೆದ ವರ್ಷ ತೆರೆದಿದ್ದ. ಸಿಂಗಾಪುರ ಮೂಲದ ಝಿಕಾಯ್ ಹೋಲ್ಡಿಂಗ್ ಪ್ರೈ. ಲಿ. ಸಂಸ್ಥೆಯ ನೆರವಿನಿಂದ, ಸ್ಕೈಲೈನ್ ಇನ್ನೊವೇಶನ್ ಟೆಕ್ನಾಲಜಿ ಇಂಡಿಯಾ ಪ್ರೈ.ಲಿ. ಎಂಬ ಮತ್ತೊಂದು ಸಂಸ್ಥೆಯನ್ನೂ ಸೇರಿಸಿಕೊಂಡು, 11 ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿದ್ದರು. ಅವುಗಳ ಸಹಾಯದಿಂದ ಸಾಲ ನೀಡುವ ಆಮಿಷ ಒಡ್ಡಿ, ಭಾರಿ ಶುಲ್ಕ, ಅಪಾರ ಬಡ್ಡಿ ವಿಧಿಸುತ್ತಾ ಹಣ ಮಾಡುತ್ತಿದ್ದರು.
ಸಾಲ ಮರುಪಾವತಿಗೆ ವಿಫಲವಾದವರ ಮೇಲೆ ನಿರಂತರ ಫೋನ್ ಕರೆಗಳ ಮೂಲಕ ಕಿರುಕುಳ ನೀಡುವುದು, ಬೆದರಿಕೆ ಹಾಕುವುದು ಮತ್ತು ನಕಲಿ ಲೀಗಲ್ ನೋಟೀಸ್ ನೀಡುವುದು – ಹೀಗೆ ನಡೆಯುತ್ತಿತ್ತು. ಇದೊಂದು ಬಹುಕೋಟಿ ರೂಪಾಯಿ ಮೊತ್ತದ ದೊಡ್ಡ ವಂಚನೆ. ಕೋವಿಡ್ ಸಂಕಷ್ಟ ಕಾಲದಲ್ಲಂತೂ ಇಂತಹಾ ಡಿಜಿಟಲ್ ರೂಪದ ಹಣಕಾಸು ಕಂಪನಿಗಳು ಅದೆಷ್ಟೋ ಹುಟ್ಟಿಕೊಂಡಿವೆ, ಮೊದಲೇ ಹೈರಾಣಾಗಿರುವ ಜನರನ್ನು ಸುಲಿಗೆ ಮಾಡುತ್ತಿವೆ.
ಇದರ ಜೊತೆಗೆ, ಈ ಆ್ಯಪ್ ಮುಖಾಂತರವಾಗಿ ತಮ್ಮದೇ ಜಾಲದ ಆನ್‌ಲೈನ್ ಗೇಮ್‌ಗಳು, ರಮ್ಮಿ, ಬೆಟ್ಟಿಂಗ್, ಜೂಜು ಮುಂತಾದವುಗಳಲ್ಲಿ ತೊಡಗಿಸಿಕೊಳ್ಳುವಂತೆಯೂ ಪ್ರೇರೇಪಣೆ, ಪ್ರಚೋದನೆ ನೀಡಲಾಗುತ್ತದೆ. ಇವರ ಸಾಲದ ಜಾಲದಲ್ಲಿ ಸಿಲುಕಿದವರು, ಬಲೆಯಿಂದ ಬಿಡಿಸಿಕೊಳ್ಳಲು ಬಹುಶಃ ವರ್ಷಾನುಗಟ್ಟಲೆ ಬೇಕಾದೀತು. ಹಾಗಿರುತ್ತದೆ ಇವರು ಹೆಣೆದಿರುವ ಜಾಲ.
ಇದಕ್ಕೊಂದೇ ಪರಿಹಾರ. ಗೊತ್ತು ಗುರಿಯಿಲ್ಲದ, ಆಳ ಅಗಲ ಏನೂ ತಿಳಿಯದ ಆ್ಯಪ್‌ಗಳಾಗಲೀ, ಹಣ ಕೊಡುತ್ತೇವೆ ಎಂದು ಬಲೆಗೆ ಬೀಳಿಸುವ ವ್ಯಕ್ತಿಗಳಾಗಲೀ, ಎಸ್ಸೆಮ್ಮೆಸ್, ವಾಟ್ಸ್ಆ್ಯಪ್ ಮೂಲಕ ಲೋನ್ ಕೊಡುತ್ತೇವೆ ಅಂತ ಹೇಳುವವರನ್ನಾಗಲೀ ನಂಬಲೇಬೇಡಿ. ದೊಡ್ಡ ದೊಡ್ಡ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಹೆಸರಿನಲ್ಲಿಯೂ (ಕಂಪನಿಗಳ ಹೆಸರಿನ ಸ್ಪೆಲ್ಲಿಂಗ್‌ನಲ್ಲಿ ಸೂಕ್ಷ್ಮ ವ್ಯತ್ಯಾಸಗಳೂ ಇರಬಹುದು) ಬಲೆ ಬೀಸುವವರಿರುತ್ತಾರೆ. ಇವುಗಳ ಬಗ್ಗೆ ಎಚ್ಚರಿಕೆಯಿರಲಿ. ಅದಕ್ಕಿಂತ ದೊಡ್ಡ ಎಚ್ಚರಿಕೆ ಎಂದರೆ, ಯಾವುದೇ ಅಪರಿಚಿತರೊಂದಿಗೆ ನಮ್ಮ ಆಧಾರ್, ಪಾನ್, ಬ್ಯಾಂಕ್ ಖಾತೆ ಸಂಖ್ಯೆ, ಮೊಬೈಲ್ ಸಂಖ್ಯೆ ಮುಂತಾದ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳಲೇಬಾರದು.
ಮತ್ತೊಂದು ರೂಪ
ಕೆಲವು ನಕಲಿ ಆ್ಯಪ್‌ಗಳಂತೂ ಜನರ ಮಾಹಿತಿ ಕದಿಯಲು ಸುಲಭ ವಿಧಾನವನ್ನು ತಿಳಿದುಕೊಂಡಿವೆ. ಒಂದು ಆ್ಯಪ್ ಅಳವಡಿಸಿಕೊಂಡರೆ ಸಾಕು, ಏನೂ ನೋಡದೆ ಎಲ್ಲ ರೀತಿಯ ಸೂಚನೆಗಳಿಗೂ ನಾವು Yes, Yes ಅಂತ ಕ್ಲಿಕ್ ಮಾಡುತ್ತಾ ಹೋಗುತ್ತೇವೆ. ಅಷ್ಟರಲ್ಲಿ ನಮ್ಮ ಮೊಬೈಲ್ ಫೋನಲ್ಲೇ ಇರುವ ನಮ್ಮ ಹೆಸರು, ಮೊಬೈಲ್ ಫೋನ್ ನಂಬರ್, ಇಮೇಲ್ ವಿಳಾಸ, ಮನೆಯ ವಿಳಾಸ, ಜನ್ಮದಿನ, ಕೆಲಸ ಮಾಡುವ ಕಚೇರಿ, ನಾವಿರುವ ಸ್ಥಳ, ಸ್ನೇಹಿತರ ಮೊಬೈಲ್ ಫೋನ್ ಸಂಖ್ಯೆಗಳು, ಬ್ಯಾಂಕಿಂಗ್ ಆ್ಯಪ್‌ಗಳು, ಕ್ರೆಡಿಟ್ ಕಾರ್ಡ್ ಮಾಹಿತಿ… ಇವುಗಳೆಲ್ಲವೂ ಈ ನಕಲಿ ಆ್ಯಪ್‌ಗಳಿಗೆ ಊಡಿಸಿರುತ್ತೇವೆ.
ಐದು ಸಾವಿರ ಕೊಟ್ಟರೆ ಸಾಕು, ಮನೆಯಲ್ಲಿ ಕುಳಿತೇ ತಿಂಗಳಿಗೆ ಸಾವಿರ ಸಾವಿರ ಹಣ ಸಂಪಾದಿಸಿ – ಹೀಗೆಲ್ಲಾ ಆಮಿಷವೊಡ್ಡುವ ಆ್ಯಪ್‌ಗಳೂ ಈ ಸಾಲಲ್ಲಿ ಬರುತ್ತವೆ. ಹಣ ಮಾಡುವ ಧಾವಂತವೋ, ದುರಾಸೆಯೋ – ಇವುಗಳ ಪರಿಣಾಮವಾಗಿ ಬರುವ ಮತ್ತೊಂದು ಅಡ್ಡ ಪರಿಣಾಮವೇ ಈ ಆ್ಯಪ್‌ಗಳ ಮೂಲಕ ಮಾಹಿತಿಯನ್ನೆಲ್ಲಾ ಬಟಾಬಯಲು ಮಾಡಿಕೊಳ್ಳುವುದು.
ಈ ಖಾಸಗಿ ಮಾಹಿತಿಯನ್ನೇ ಕದ್ದು ಬೇರೆ ಕಂಪನಿಗಳಿಗೆ ಮಾರಾಟ ಮಾಡುವ ಜಾಲವೇ ಇದೆ. ಮತ್ತೆ ಕೆಲವು ಸೈಬರ್ ವಂಚಕರು ಬೇರೆಯವರ ಮೊಬೈಲ್ ಫೋನ್ ಹ್ಯಾಕ್ ಮಾಡುವುದಕ್ಕೂ ಈ ರೀತಿಯ ಆ್ಯಪ್‌ಗಳನ್ನು ಹೊರತಂದಿರುವ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ನಮ್ಮ ಕ್ರೆಡಿಟ್ ಕಾರ್ಡ್ ಅಥವಾ ಇಂಟರ್ನೆಟ್ ಬ್ಯಾಂಕ್ ಮಾಹಿತಿಗಳನ್ನೆಲ್ಲ ತಿಳಿದುಕೊಂಡು, ನಮಗರಿವಿಲ್ಲದಂತೆಯೇ ಖಾತೆಯಲ್ಲಿದ್ದ ಹಣ ಬರಿದಾಗಬಹುದು ಎಂಬುದು ನಾವು ಯಾವತ್ತೂ ಗಮನದಲ್ಲಿಟ್ಟುಕೊಳ್ಳಬೇಕಾದ ಎಚ್ಚರಿಕೆ. ಇದಕ್ಕಾಗಿಯೇ, ಆಗಾಗ್ಗೆ ಬ್ಯಾಂಕ್ ಖಾತೆಯಲ್ಲಿನ ವಹಿವಾಟುಗಳನ್ನು ಪರಿಶೀಲಿಸುತ್ತಾ ಇರಬೇಕು.
ಜಗತ್ತೇ ಡಿಜಿಟಲ್ ಆಗಿಬಿಟ್ಟಿರುವಾಗ, ವಂಚಕರೂ ಡಿಜಿಟಲ್ ಆಗಿರುತ್ತಾರೆ. ನಾವು ತಂತ್ರಜ್ಞಾನವನ್ನು ಒಳ್ಳೆಯ ಕಾರ್ಯಗಳಿಗಾಗಿ ಬಳಸಿಕೊಂಡರೆ, ವಂಚಕರು ಇದೇ ತಂತ್ರಜ್ಞಾನದ ಪ್ರಗತಿಯನ್ನು ತಮ್ಮದೇ ರೀತಿಯಲ್ಲಿ ಕೆಟ್ಟ ಕಾರ್ಯಗಳಿಗೇ ಬಳಸಿಕೊಳ್ಳಬಲ್ಲರು. ಇದರ ಅರಿವು ನಮಗಿರಬೇಕಷ್ಟೇ.
ನಮಗೆ ತಿಳಿದಿರುವ ಬ್ಯಾಂಕುಗಳಿಂದ ಮಾತ್ರವೇ ಸಾಲ ಪಡೆಯುವುದು ಕ್ಷೇಮ. ಗೊತ್ತಿಲ್ಲದ ಆ್ಯಪ್, ವೆಬ್ ಸೈಟ್ ಮುಂತಾದವುಗಳ ಆಮಿಷಕ್ಕೆ ಬಲಿಯಾಗದಿರಿ. ಸುಖಾ ಸುಮ್ಮನೆ ಯಾವುದೇ ಲಿಂಕ್‌ಗಳನ್ನೂ ಕ್ಲಿಕ್ ಮಾಡದಿರುವುದು ಶ್ರೇಯಸ್ಕರ. ನಮ್ಮ ದಾಖಲೆ ಪತ್ರಗಳನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಲೇಬಾರದು.
My article Published in Prajavani on 02 Jan 2021 as Prajavani Web Exclusive
iPhone 16e joins the iPhone 16 lineup, featuring the fast performance of the A18 chip,…
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…