Categories: myworld

ಯುಪಿಎ: ನಕ್ಸಲರ ಮೇಲೆ ಈ ‘ಮಮತೆ’ ನ್ಯಾಯವೇ?

ಮುಗ್ಧರ ಹತ್ಯೆಗೆ ಕೊನೆ ಎಂದು?

ಯುಪಿಎ ಸರಕಾರದ ಮೊದಲ ಐದು ವರ್ಷಗಳ ಆಡಳಿತಾವಧಿಯಲ್ಲಿ ಜಿಹಾದಿಗಳ ಅಟ್ಟಹಾಸ ಅಲ್ಲಲ್ಲಿ ನಡೆಯುತ್ತಾ, ಸಾವಿರಾರು ಮುಗ್ಧ ಜೀವಗಳು ಬಲಿಯಾದವು. ವರ್ಷದ ಹಿಂದೆ ಮರಳಿ ಅಧಿಕಾರಕ್ಕೇರಿದ ಯುಪಿಎ-2 ಅವಧಿಯಲ್ಲೀಗ ನಕ್ಸಲರ ವಿಕಟಾಟ್ಟಹಾಸ. ಕಳೆದ ಫೆಬ್ರವರಿ ತಿಂಗಳಿಂದೀಚೆಗೆ ಕನಿಷ್ಠ 9 ಬಾರಿ ನಕ್ಸಲರು ತಮ್ಮ ಅಮಾನುಷ ನೀತಿಯನ್ನು ಎಗ್ಗಿಲ್ಲದೆ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.

ಇಂದಿರಾಗಾಂಧಿ ಬಳಿಕ ದೇಶವನ್ನು ಹೆಚ್ಚು ಕಾಲ ಆಳಿದ ಪ್ರಧಾನಿ ಎಂಬ ಹೆಗ್ಗಳಿಕೆಯ ಶಾಂತ ಮುಖಮುದ್ರೆಯ ಪ್ರಧಾನಿ ಮನಮೋಹನ್ ಸಿಂಗ್ ಅವರ ಸರಕಾರವೇಕೆ ಈ ರೀತಿಯ ತಾತ್ಸಾರ, ನಿರ್ಲಕ್ಷ್ಯ, ಅಸಡ್ಡೆಯ ಆಡಳಿತ ನಡೆಸುತ್ತಿದೆ? ನಕ್ಸಲರ ದಮನಕ್ಕೆ ದಿಟ್ಟ ನಿರ್ಧಾರ ಕೈಗೊಳ್ಳದೇ ಇರುವುದು ಮೈತ್ರಿ ಸರಕಾರದ ಅನಿವಾರ್ಯತೆಯೇ? ಅಥವಾ ಒಂದು ಗಟ್ಟಿ ಧೈರ್ಯದ, ಸರ್ದಾರ್ ಪಟೇಲ್‌ರಂತಹ ಗಂಡೆದೆಯ, ದಿಟ್ಟ ನಿಲುವಿನ ಗೃಹ ಸಚಿವರು ಇಲ್ಲದಿರುವುದು ಇದಕ್ಕೆ ಕಾರಣವೇ?

ಸರಕಾರ ಏನು ಮಾಡುತ್ತಿದೆ?ಒಂದೆಡೆ ಜನ ಏರುತ್ತಲೇ ಇರುವ ಜೀವನಾವಶ್ಯಕ ವಸ್ತುಗಳ ಬೆಲೆಗಳಿಂದಾಗಿ ತತ್ತರಿಸುತ್ತಿದ್ದರೆ, ಮತ್ತೊಂದೆಡೆ ನಾಳೆ ಬೆಳಿಗ್ಗೆ ಸೂರ್ಯೋದಯ ಕಾಣುತ್ತೇವೆಯೇ ಎಂಬ ಆತಂಕದ ನೆರಳಿನಲ್ಲಿ ಬದುಕುವಂತಾಗಿದೆ. ಯುಪಿಎ ಸರಕಾರದ ಮೊದಲ ಅವಧಿಯ ಅಂತ್ಯಭಾಗದಲ್ಲೇ ಹಣದುಬ್ಬರವನ್ನು ವರ್ಷಾಂತ್ಯದೊಳಗೆ ನಿಯಂತ್ರಿಸುತ್ತೇವೆ ಎಂಬ ಹೇಳಿಕೆ, ಮನಮೋಹನ್ ಸಿಂಗ್ ಬಾಯಲ್ಲಿ ಮಗದೊಮ್ಮೆ ಮೊನ್ನೆ ಪುನರಾವರ್ತನೆಯಾಗಿದೆ. ಆದರೆ ಡೆಡ್‌ಲೈನ್ ಮಾತ್ರ ಒಂದು ವರ್ಷ ಬದಲಾಗಿದೆ. ಡಿಸೆಂಬರ್ ತಿಂಗಳೊಳಗೆ ಹಣದುಬ್ಬರ ಕಡಿಮೆಯಾಗಿ ಬೆಲೆಗಳು ನಿಯಂತ್ರಣಕ್ಕೆ ಬರುತ್ತವೆ ಎಂದಿದ್ದಾರೆ ಮೊನ್ನೆ ನಡೆದ ಯುಪಿಎ-2 ವರ್ಷಾಚರಣೆಯ ಕಾರ್ಯಕ್ರಮದಲ್ಲಿ ನಮ್ಮ ಪ್ರಧಾನಿಯವರು.

ಹಾಗಿದ್ದರೆ ಈ ಮಾತುಗಳನ್ನು ಎಷ್ಟರ ಮಟ್ಟಿಗೆ ನಾವು ನಂಬಿ ಕುಳಿತುಕೊಳ್ಳಬಹುದು? ಜಾಗತಿಕ ಹಣಕಾಸು ಹಿಂಜರಿತದ ಪರಿಣಾಮ ಭಾರತದ ಮೇಲೆ ಅಷ್ಟಾಗಿ ಆಗಿಲ್ಲ, ಬೇರೆಲ್ಲಾ ದೇಶಗಳಿಗಿಂತ ಭಾರತವೇ ಹೆಚ್ಚು ಬೇಗ ಚೇತರಿಸಿಕೊಂಡಿದೆ ಎಂಬ ಸಂತಸದಾಯಕ ಸುದ್ದಿ ಇದ್ದರೂ ಕೂಡ, ಪ್ರಜೆಗಳು ನೆಮ್ಮದಿಯಿಂದ ಬದುಕಲು ಬೇಕಾಗಿರುವ ಬೆಲೆ ಏರಿಕೆ ನಿಯಂತ್ರಣಕ್ಕೆ ಬರಲು ಇಷ್ಟು ವಿಳಂಬವಾಗುತ್ತಿದೆಯೇಕೆ? ಆಹಾರ ರಂಗದ ನಿರ್ವಹಣೆಯಲ್ಲಿನ ವೈಫಲ್ಯವೇ?

ಗೊಂದಲದ ರಾಶಿಯೊಳಗೆ ಪ್ರತಿಪಕ್ಷಗಳು
ಐಪಿಎಲ್ ಕ್ರಿಕೆಟಿನಲ್ಲಿ ಬಹುದೊಡ್ಡ ಹಗರಣವೇ ಹೊರಬರುತ್ತದೆ ಎಂಬಷ್ಟರ ಮಟ್ಟಿಗೆ ಲಲಿತ್ ಮೋದಿ, ಶಶಿ ತರೂರ್ ಪ್ರಸಂಗಗಳು ಸದ್ದು ಮಾಡಿದವು. ಹಲವು ಘಟಾನುಘಟಿ ಯುಪಿಎ ಮಂತ್ರಿಗಳ ಹೆಸರುಗಳು ಕೇಳಿಬಂದವು. ಈಗೇನಾಯಿತು? ಠುಸ್…ಆಗಿವೆ ಅಷ್ಟೆ. ಬೆಲೆ ಏರಿಕೆ, ಮಹಿಳಾ ಮೀಸಲಾತಿ ಮಸೂದೆ, ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿ, ಉಗ್ರರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನವನ್ನು ಸರಿ ದಾರಿಗೆ ತರುವಲ್ಲಿ, ರಾಜತಾಂತ್ರಿಕ ಪ್ರಜ್ಞೆ ಬಳಸುವಲ್ಲಿ ವೈಫಲ್ಯ, ದೇಶದ್ರೋಹಿ ಮಾಧುರಿ ಗುಪ್ತಾ ವಿಷಯ… ಇವುಗಳೆಲ್ಲಾ ಜನರ ಮೇಲೆ ನೇರ ಪರಿಣಾಮ ಬೀರುವಂಥವು. ಸದ್ದಿಲ್ಲದೆ ಜನಮಾನಸದಿಂದ ದೂರವಾಗುತ್ತಿವೆ. ಅತ್ತ ಬಿಟಿ ಬದನೆ, ಪರಮಾಣು ಬಾಧ್ಯತಾ ಮಸೂದೆ, ಪಾಕಿಸ್ತಾನದ ಪರಮೋನ್ನತ ಸ್ಥಾನದಲ್ಲಿರುವವರೊಂದಿಗೆ ಜನಾಭಿಪ್ರಾಯಕ್ಕೆ ವಿರುದ್ಧವಾಗಿ ಶಾಂತಿ ಮಾತುಕತೆ ಮುಂದುವರಿಕೆ… ಮುಂತಾದವು ಸದ್ದಿಲ್ಲದೆ ನಡೆಯುತ್ತಲೇ ಇದೆ. ಇನ್ನೊಂದೆಡೆ ನಕ್ಸಲರ ಅಟ್ಟಹಾಸ, ಸಿಆರ್‌ಪಿಎಫ್ ಯೋಧರ ಮಾರಣಹೋಮ, ಆಗಾಗ್ಗೆ ರೈಲು ಸ್ಫೋಟ, ದಾಳಿ, ಲೂಟಿ ಇತ್ಯಾದಿ ನಡೆಯುತ್ತಲೇ ಇವೆ.

ಇನ್ನು ಪ್ರತಿಪಕ್ಷಗಳು? ಯಾವ ವಿಷಯಕ್ಕೇಂತ ಪ್ರತಿಭಟನೆ ನಡೆಸೋದು? ಒಂದರ ಬಗ್ಗೆ ಬಲವಾಗಿ ಧ್ವನಿಯೆತ್ತಿದಾಗ, ಮತ್ತೊಂದು ವಿಷಯ ಹೊರಬೀಳುತ್ತದೆ. ಬೆಲೆ ಏರಿಕೆ ಕುರಿತು ಪ್ರತಿಭಟನೆ ತೀವ್ರವಾಗಿ, ಇನ್ನೇನು ಸಕ್ಕರೆ ಆಮದು, ಗೋಧಿ, ಅಕ್ಕಿಗಳು ದಾಸ್ತಾನುದಾರರ ಕೋಠಿಗಳಲ್ಲಿ ರಾಶಿಬಿದ್ದು, ಕೊಳೆಯುತ್ತಿದೆ ಎಂಬಿತ್ಯಾದಿ ‘ಘೋಟಾಲ’ಗಳು ಹೊರಬೀಳಲಿವೆ ಎಂದಾಗುವಾಗ, ಖಂಡನಾ ನಿರ್ಣಯ ವಿಷಯ ಧುತ್ತನೇ ಮೇಲೆದ್ದು ಬರುತ್ತದೆ. ಅದು ಮುಗಿದಾಗ, ಟೆಲಿಕಾಂ ಸಚಿವ ಎ.ರಾಜಾಗೆ ಸಂಬಂಧಿಸಿದ 2ಜಿ ಸ್ಪೆಕ್ಟ್ರಂ ಹಗರಣದ ಸದ್ದು ಜೋರಾಗುತ್ತದೆ. ಅಷ್ಟರಲ್ಲಿ ನಕ್ಸಲರು ದಾಳಿ ಮಾಡಿರುತ್ತಾರೆ. ಗೃಹಸಚಿವ ಚಿದಂಬರಂ ತಲೆದಂಡವಾಗುತ್ತದೆ ಎಂಬಂತಿರುವಾಗ, ಇನ್ನೇನೋ ಒಂದು ವಿಷಯ ಮುಖ್ಯವಾಗಿಬಿಡುತ್ತದೆ.

ಈ ವರ್ಷದ ನಕ್ಸಲ್ ದಾಳಿಗಳು
ಮೇ 28ರ ಶುಕ್ರವಾರ ಸಂಭವಿಸಿದ ಈ ನಕ್ಸಲ್ ದಾಳಿ, 2010ರಲ್ಲಿ ನಡೆದ 9ನೇ ಅತ್ಯಂತ ಪ್ರಮುಖ ನಕ್ಸಲ್ ದಾಳಿಯಾಗಿದೆ.
* ಫೆ.15ರಂದು ಸಿಲ್ಡಾ (ಪ.ಮಿಡ್ನಾಪುರ)ದ ಭದ್ರತಾ ಪಡೆ ಶಿಬಿರದ ಮೇಲೆ ದಾಳಿ ನಡೆಸಿ 24 ಮಂದಿಯ ಹತ್ಯೆ
* ಏ.4ರಂದು ಒರಿಸ್ಸಾ ಕೊರಪುಟ್ ಜಿಲ್ಲೆಯಲ್ಲಿ ಭೂಗತ ಬಾಂಬ್ ಸ್ಫೋಟಿಸಿ ಮಾವೋವಾದಿ ವಿರೋಧಿ ಕಾರ್ಯಾಚರಣಾ ವಿಶೇಷ ತಂಡದ 11 ಯೋಧರ ಹತ್ಯೆ
* ಏ.6ರಂದು ದಾಂತೆವಾಡ ಜಿಲ್ಲೆಯಲ್ಲಿ ಭಯಾನಕ ದಾಳಿ ಸಂಘಟಿಸಿ 76 ಸಿಆರ್‌ಪಿಎಫ್ ಯೋಧರ ಹತ್ಯೆ
* ಮೇ 8ರಂದು ಛತ್ತೀಸಗಢದ ಬೀಜಾಪುರ್ ಜಿಲ್ಲೆಯಲ್ಲಿ ಅರೆಸೇನಾ ಪಡೆಯ ಬುಲೆಟ್-ಪ್ರೂಫ್ ವಾಹನ ಸ್ಫೋಟಿಸಿ 8 ಯೋಧರ ಹತ್ಯೆ
* ಮೇ 17ರಂದು ಛತ್ತೀಸಗಢದ ದಾಂತೆವಾಡದಲ್ಲಿ ಪಾಪದ ಜನರು ಪ್ರಯಾಣಿಸುತ್ತಿದ್ದ ಬಸ್ ಸ್ಫೋಟಿಸಿ 30ಕ್ಕೂ ಹೆಚ್ಚು ಮಂದಿಯ ಕಗ್ಗೊಲೆ (ಇದರಲ್ಲಿ ವಿಶೇಷ ಪೊಲೀಸ್ ಅಧಿಕಾರಿಗಳೂ ಇದ್ದರು)
* ಮೇ 19ರಂದು ಪಶ್ಚಿಮ ಮಿಡ್ನಾಪುರ ದಿಲ್ಲೆಯ ಜಾರಗ್ರಾಮದ ರೈಲು ಹಳಿಯಲ್ಲಿ, ನೆಲ ಬಾಂಬ್ ಸ್ಫೋಟಿಸಿ, ಗೂಡ್ಸ್ ರೈಲಿನ ಚಾಲಕರಿಗೆ ಗಾಯ, ಎಂಜಿನ್‌ಗೆ ಹಾನಿ
* ಮೇ 20ರಂದು ಬಿಹಾರದ ದಿಗ್ವಾರ ಮತ್ತು ಪಿಪ್ರಾ ನಿಲ್ದಾಣಗಳ ನಡುವೆ ರೈಲು ಹಳಿ ಸ್ಫೋಟಿಸಿದ್ದರಿಂದ ಗೂಡ್ಸ್ ರೈಲು ಹಳಿ ತಪ್ಪಿ 14 ತೈಲ ಟ್ಯಾಂಕರುಗಳಿಗೆ ಹಾನಿ
* ಮೇ 22ರಂದು ಪ.ಮಿಡ್ನಾಪುರದ ಬನ್‌ಸ್ಥಲದಲ್ಲಿ ಗುಂಡಿನ ಚಕಮಕಿ, ಒಬ್ಬ ಪೊಲೀಸ್, ಒಬ್ಬ ನಾಗರಿಕನಿಗೆ ಗಾಯ
* ಮೇ 28ರಂದು ಪ.ಮಿಡ್ನಾಪುರ ಜಿಲ್ಲೆಯಲ್ಲಿ ನಕ್ಸಲರ ಅಟ್ಟಹಾಸದಿಂದ ಮುಂಬೈಗೆ ಬರುತ್ತಿದ್ದ ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿ 65ಕ್ಕೂ ಹೆಚ್ಚು ಮಂದಿ ಸಾವು

ಹಾಗಿದ್ದರೆ ಕೇಂದ್ರಕ್ಕೆ ಮಮತಾ ಭಯವೇ?
ಸ್ವತಃ ಪ್ರಧಾನಿಯವರೇ ಒಪ್ಪಿಕೊಂಡಂತೆ, ನಕ್ಸಲ್‌ವಾದ ಎಂಬುದು ದೇಶ ಎದುರಿಸುತ್ತಿರುವ ಅತಿದೊಡ್ಡ ಸವಾಲು. ಮನದಾಳದ ಮಾತನ್ನು ಹೊರ ಹಾಕುವ ಧೈರ್ಯ ಮಾಡಿದ ಹೊರತಾಗಿಯೂ, ನಕ್ಸಲರ ಕುರಿತು ನೇರ ನಡೆಯನ್ನು, ನೇರ ನುಡಿಯನ್ನು, ಖಡಾಖಂಡಿತ ನಿರ್ಧಾರವನ್ನು ಕೈಗೊಳ್ಳಲಾಗುತ್ತಿಲ್ಲವೇಕೆ? ಗೃಹ ಸಚಿವರು ಹೇಳುತ್ತಾರೆ, ಪ್ರಮುಖ ಆಂತರಿಕ ಭದ್ರತೆಯ ಅಪಾಯವಾಗಿರುವ ನಕ್ಸಲ್‌ವಾದವನ್ನು ಮಟ್ಟಹಾಕಲು ನಮಗೆ ‘ಪೂರ್ಣ ಜನಾದೇಶ’ದ ಕೊರತೆಯಿದೆ ಎಂದು. ಹಾಗಿದ್ದರೆ, ನಕ್ಸಲರನ್ನು ಬೆಂಬಲಿಸುವವರನ್ನೇ ಕೇಂದ್ರ ಸರಕಾರವು ಅಸ್ತಿತ್ವಕ್ಕಾಗಿ ಅವಲಂಬಿಸಿದೆ ಎಂದರ್ಥವೇ?

ಈ ಪ್ರಶ್ನೆ ಬಂದಾಗ ಹೆಸರು ನೆನಪಾಗುವುದು ಕೇಂದ್ರ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ. ಅವರಿಗಂತೂ ಪಶ್ಚಿಮ ಬಂಗಾಳದಲ್ಲಿ ಎಡರಂಗ ಸರಕಾರವನ್ನು ಮಟ್ಟ ಹಾಕುವುದೊಂದೇ ಏಕೈಕ ಉದ್ದೇಶ. ಹಲವಾರು ಸಂದರ್ಭಗಳನ್ನು ಕೂಲಂಕಷವಾಗಿ ಪರಿಶೀಲಿಸಿ ನೋಡಿದರೆ ಮಾವೋವಾದಿಗಳಿಗೂ, ತೃಣಮೂಲಕ್ಕೂ ಸಖ್ಯವಿದೆ ಎಂಬುದು ಬಹುತೇಕ ದೃಢವಾಗಿದೆ. ಲಾಲ್‌ಘರ್‌ನಲ್ಲಿ ಮಮತಾ ಅವರೇ ನಕ್ಸಲ್‌ವಾದಿ ನಾಯಕ ಛತ್ರಧರ್ ಮಹತೋ ಜತೆ ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ವೇದಿಕೆ ಹಂಚಿಕೊಂಡಿದ್ದರು. ಲಾಲ್‌ಘರ್‌ನಲ್ಲಿ ಆದಿವಾಸಿಗಳ ಹೋರಾಟಕ್ಕೆ ಬೆಂಬಲ ಸೂಚಿಸಲೆಂದು ಹೋಗಿದ್ದರವರು. ಪಶ್ಚಿಮ ಬಂಗಾಳದಲ್ಲಿ ಹಲವಾರು ಕೈಗಾರಿಕೆಗಳ ಸ್ಥಾಪನೆ ವಿರುದ್ಧದ ಹೋರಾಟಕ್ಕೆ ತೃಣಮೂಲಕ್ಕೆ ಸಿಪಿಐ(ಮಾವೋವಾದಿ) ನೀಡಿದ್ದ ಬೆಂಬಲವೇನೂ ಗೌಪ್ಯವಾಗಿ ಉಳಿದಿಲ್ಲ.

ಇದೀಗ, ಶುಕ್ರವಾರದ ಘಟನೆಯ ಹೊಣೆ ಹೊತ್ತುಕೊಂಡಿರುವ ಪಿಸಿಪಿಎ (ಪೀಪಲ್ಸ್ ಕಮಿಟಿ ಅಗೇನ್‌ಸ್ಟ್ ಪೊಲೀಸ್ ಅಟ್ರಾಸಿಟೀಸ್) ಜೊತೆಗೆ ಮಮತಾ ಲಿಂಕ್ ಇದೆ ಎಂದು ಬಂಗಾಳ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಜಿ ವರ್ಷದ ಹಿಂದೆ ಪತ್ರಿಕಾಗೋಷ್ಠಿಯಲ್ಲೇ ಆರೋಪಿಸಿದ್ದರು. ಎರಡು ವರ್ಷಗಳ ಹಿಂದೆ, ಲಾಲ್‌ಘರ್‌ನಲ್ಲಿ ನಡೆಯುತ್ತಿರುವುದೆಲ್ಲವೂ ಆಡಳಿತಾರೂಢ ಸಿಪಿಐ(ಮಾರ್ಕ್ಸ್‌ವಾದಿ) ಬಣಗಳ ನಡುವಿನ ಘರ್ಷಣೆಯಷ್ಟೇ ಎಂದು ಮಮತಾ ಹೇಳಿದ್ದರು. ಆನಂತರ ಬುದ್ಧದೇವ್ ಹತ್ಯಾಯತ್ನ ನಡೆದಿದ್ದಾಗ, ಇದು ಸಿಪಿಎಂ ಸ್ಟಂಟ್ ಎಂದಿದ್ದರು ಮಮತಾ. ಆದರೆ ಕೆಲವೇ ದಿನಗಳಲ್ಲಿ, ನಾವೇ ಹತ್ಯೆಗೆ ಯತ್ನಿಸಿದ್ದು ಎಂದು ಸ್ವತಃ ಮಾವೋವಾದಿಗಳೇ ಘೋಷಿಸಿದಾಗ, ಮಮತಾ ಪೆಚ್ಚು ಮೋರೆ ಹಾಕಬೇಕಾಗಿತ್ತು.

ಇದರೊಂದಿಗೆ, ಇತ್ತೀಚೆಗೆ ನಕ್ಸಲರ ವಿರುದ್ಧ ಜಂಟಿ ಕಾರ್ಯಾಚರಣೆ ಆರಂಭಿಸುವಾಗಲೂ, ಕೇಂದ್ರ ಸರಕಾರವು ತನ್ನನ್ನು ಕೇಳಿಲ್ಲ ಎಂದು ತಗಾದೆ ತೆಗೆದಿದ್ದರು ಮಮತಾ. ಇದೆಲ್ಲಾ ಯಾಕಾಗಿ?

ಹೀಗೆಲ್ಲ ಇರುವಾಗ, ಯುಪಿಎ ಸರಕಾರ ಕೂಡ ಮಮತಾ ಹಂಗಿನಲ್ಲಿರುವ ಕಾರಣದಿಂದಾಗಿ, ನಕ್ಸಲರ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳದಿರಲು ಇದೇ ಕಾರಣವೇ ಎಂಬುದು ಜನರ ಮನಸ್ಸಿನಲ್ಲಿ ಮೂಡಿರುವ ಪ್ರಶ್ನೆ.

ಹಾಗಿದ್ದರೆ ಈ ಮುಗ್ಧ ಜನರ ಹತ್ಯೆ, ದರೋಡೆ ಮಾಡುತ್ತಲೇ ಬಂದಿರುವ ನಕ್ಸಲರನ್ನು ಹತ್ತಿಕ್ಕುವಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆ ಇದೆಯೆಂದಾಯಿತು. ದೇಶಕ್ಕಾಗಿ ಪ್ರಾಣವನ್ನೇ ಒತ್ತೆಯಿಡುತ್ತಿರುವ ಯೋಧರ ಸಮೂಹವನ್ನೇ ಇನ್ನಿಲ್ಲದಂತೆ ನಕ್ಸಲರು ಹೊಸಕಿ ಹಾಕಿದ ಬಳಿಕವೂ, ಮತ್ತು ಆನಂತರದ ದಿನಗಳಲ್ಲಿಯೂ ಅಲ್ಲಲ್ಲಿ ಸಣ್ಣಪುಟ್ಟ ಸ್ಫೋಟ, ಹಿಂಸಾಚಾರ ನಡೆಸಿ, ಮಗದೊಂದು ಮಾರಣಹೋಮ ನಡೆಸಿದ್ದರೂ, ಸರಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದರೆ ಏನರ್ಥ? ಕಾಂಗ್ರೆಸ್ ಮತ್ತು ಇತರ ಬೆಂಬಲಿಗ ಪಕ್ಷಗಳ ನಡುವೆ ನಕ್ಸಲ್ ವಿರುದ್ಧ ಕಾರ್ಯಾಚರಣೆಗೆ ಸಹಮತವಿಲ್ಲವೇ? ದೇಶದ ಮೂರನೇ ಒಂದಂಶದಷ್ಟು ರಾಜ್ಯಗಳಲ್ಲಿ ಆವರಿಸಿಕೊಂಡಿರುವ ನಕ್ಸಲರನ್ನು ಮಟ್ಟ ಹಾಕಲು ಈಗ ನಡೆಯುತ್ತಿರುವ ಅರೆಮನಸ್ಸಿನ ಕಾರ್ಯಾಚರಣೆಯೇಕೆ? ಜನರ ರಕ್ಷಣೆಗಾಗಿ ಆಂತರಿಕ ವಿದ್ರೋಹಿಗಳನ್ನು ಮಟ್ಟ ಹಾಕಲು ಮೀನ-ಮೇಷ ಯಾಕೆ? ನಕ್ಸಲರೊಂದಿಗೆ ಸರಸವೋ, ಸಮರವೋ… ಸರಕಾರ, ರಾಜಕಾರಣಿಗಳು ಏನೇ ಮಾಡಿಕೊಳ್ಳಲಿ, ಮುಗ್ಧ ಜನರ ಹತ್ಯೆಯಾಗದಂತೆ ನೋಡಿಕೊಂಡರೆ ಸಾಕು!
[ವೆಬ್‌ದುನಿಯಾಕ್ಕಾಗಿ ಸಿದ್ಧಪಡಿಸಿದ ಲೇಖನ]

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Share
Published by
Avinash B

Recent Posts

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

1 month ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

1 month ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

2 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

3 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

8 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

8 months ago