Categories: myworldOpinion

ತುತ್ತು ಅನ್ನ, ಬೊಗಸೆ ನೀರು, ಮತ್ತೊಂದು ನ್ಯಾನೋ ಕಾರು!

ಕೈಗೆಟಕುವ ಸಣ್ಣ ಕಾರುಗಳ ಜಗತ್ತಿನ ಹೆಬ್ಬಾಗಿಲನ್ನು ಭಾರತೀಯ ಕಂಪನಿಯೊಂದು ತೆರೆದುಬಿಟ್ಟಿದೆ. ಹಲವು ನಿರೀಕ್ಷೆಗಳ ಬಳಿಕ ಗುರುವಾರ ಜನಸಾಮಾನ್ಯನೊಬ್ಬ ಕೂಡ ಕಾರು ಖರೀದಿಸುವ ಕನಸು ಕಂಡಿದ್ದಾನೆ, ಮನಸೂ ಮಾಡುತ್ತಿದ್ದಾನೆ. ಈ ಕನಸು ನನಸಾಗಿಸಲು ನೆರವಾಗಿದ್ದು ಭಾರತೀಯ ದಿಗ್ಗಜ ರತನ್ ಜೆ. ಟಾಟಾ. ಗುರುವಾರವಂತೂ ಇಡೀ ದೇಶ ಮಾತ್ರವೇ ಅಲ್ಲ, ಸಪ್ತ ಸಮುದ್ರದಾಚೆಗಿರುವ ರಾಷ್ಟ್ರಗಳೆಲ್ಲಾ ಭಾರತದತ್ತ ದೃಷ್ಟಿ ಇರಿಸಿದ್ದವು. ಟಾಟಾ ಅವರ ಬಹು ನಿರೀಕ್ಷಿತ ಲಕ್ಷ ರೂ. ಕಾರು ಹೇಗಿರಬಹುದು, ಏನೆಲ್ಲಾ ಇದೆ ಅದರಲ್ಲಿ ಎಂಬ ತುಡಿತ, ಕಾತುರತೆ ಎಲ್ಲರಲ್ಲೂ ಇತ್ತು.

ಲಕ್ಷ ಬೆಲೆಯಲ್ಲಿ ಪುಟ್ಟ ಕಾರು… ಇಂಥದ್ದೊಂದು ಕನಸನ್ನು ಅಂದು ರತನ್ ಟಾಟಾ ಘೋಷಿಸಿದಾಗ, ಎಲ್ಲರೂ ಟಾಟಾ ಅಂತ ಕೈಬೀಸಿದವರೇ. ಇದು ಆಗದ ಹೋಗದ ಮಾತು, ಅಸಾಧ್ಯ ಅಂತ ಆತ್ಮವಿಶ್ವಾಸ ಕೆಡಿಸುವ ಮಾತುಗಳನ್ನು ಆಡಿದವರೇ. ಎಲ್ಲವನ್ನೂ ಮೀರಿ ಟಾಟಾ ನಿಧಾನವಾಗಿ ಬೆಳೆಯುತ್ತಿದ್ದರೆ, ಜನಸಾಮಾನ್ಯನೊಬ್ಬ ಆಗಲೇ ಕನಸು ಕಾಣಲಾರಂಭಿಸಿದ್ದ.

ಎಲ್ಲರ ನಿರೀಕ್ಷೆಗಳನ್ನು ಟಾಟಾ ಹುಸಿ ಮಾಡಲಿಲ್ಲ. “ನ್ಯಾನೋ” ಹೆಸರಿನ ಲಕ್ಷ ರೂ. ಕಾರು ಅನಾವರಣಗೊಂಡಾಗ, ಆ ಕಾರು “ಕ್ಯೂಟ್” ಆಗಿದೆ ಎಂಬ ಉದ್ಗಾರ ಪ್ರತಿಸ್ಪರ್ಧಿ ಕಾರು ತಯಾರಕರ ಬಾಯಿಯಿಂದಲೇ ಹೊರಬಿದ್ದಿದ್ದು, ಅಷ್ಟು ಕಡಿಮೆ ಮೌಲ್ಯಕ್ಕೆ ವಾಯುಮಾಲಿನ್ಯ, ಸುರಕ್ಷತೆ ಮುಂತಾದ ನಿಯಮಗಳಿಗೆ ಬದ್ಧವಾಗಿರುವ ಕಾರು ನೀಡುವುದು ಸಾಧ್ಯವೇ ಇಲ್ಲ ಎಂದು ಟೀಕಿಸುತ್ತಿದ್ದ ಪ್ರತಿಸ್ಪರ್ಧಿಗಳ ಎದೆಗೂಡೊಳಗೆ ಸಣ್ಣಗೆ ನಡುಕ ಶುರು ಹಚ್ಚಿಕೊಂಡಿದ್ದು… ಇದೆಲ್ಲಾ ಈಗಿನ ತತ್‌ಕ್ಷಣದ ಪ್ರತಿಸ್ಪಂದನೆ.

ಮಧ್ಯಮವರ್ಗದವರಿಗಾಗಿಯೇ ಟಾಟಾ ಅವರು ಕಾರು ರೂಪಿಸಿದ್ದು ಮತ್ತು ಅದನ್ನು ಸಾಧಿಸಿ ತೋರಿಸಿದ್ದು ಅವರ ಇಚ್ಛಾಶಕ್ತಿಯ ಪ್ರತೀಕ. “ಸ್ಕೂಟರಿನಲ್ಲಿ ಒಂದು ಸಂಸಾರ ಪ್ರಯಾಣಿಸುತ್ತಿತ್ತು. ಗಂಡ ಸ್ಕೂಟರ್ ಚಲಾಯಿಸುತ್ತಿದ್ದರೆ, ಒಂದು ಮಗು ಮುಂದೆ, ಮತ್ತೊಂದು ಮಗು, ಹೆಂಡತಿ ಹಿಂದಿನ ಸೀಟಿನಲ್ಲಿ. ಇಂಥ ದೃಶ್ಯವೊಂದನ್ನು ಕಂಡಿದ್ದೆ. ಅಂದೇ ಅಗ್ಗದ ಬೆಲೆಯ ಕಾರು ರೂಪಿಸುವ ಕನಸು ಮೊಳಕೆಯೊಡೆಯಿತು” ಅಂತ ರತನ್ ಟಾಟಾ ಅವರು ಇದರ ಹಿಂದಿನ ಪ್ರೇರಣೆಯನ್ನು ಬಿಚ್ಚಿಟ್ಟಿದ್ದಾರೆ.

ನಾಲ್ಕೈದು ವರ್ಷಗಳ ಕಠಿಣ ಪರಿಶ್ರಮದ ಬಳಿಕ ಟಾಟಾ ಎಂಜಿನಿಯರ್‌ಗಳು ಈ ಕ್ಯೂಟ್ ಕಾರನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ಉತ್ಪಾದನೆಯಾಗಲಿರುವ ಈ ಕಾರು 2008ರ ಮಧ್ಯಭಾಗದಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಅಂತೆಯೇ ಲ್ಯಾಟಿನ್ ಅಮೆರಿಕಾ, ದಕ್ಷಿಣ ಆಫ್ರಿಕಾ ಮುಂತಾದ ರಾಷ್ಟ್ರಗಳಿಗೂ ರಫ್ತಾಗಲಿದೆ. ಸಾಮಾನ್ಯ ಮತ್ತು ಡಿಲಕ್ಸ್ ಮಾಡೆಲ್‌ಗಳು ಹೊರಬರಲಿವೆ. ಡಿಲಕ್ಸ್ ಮಾಡೆಲ್‌ನಲ್ಲಿ ಎಸಿ ಮತ್ತಿತರ ಆಧುನಿಕ ಸೌಕರ್ಯಗಳಿರುತ್ತವೆ.

ಮಾರುತಿ-800 Vs ನ್ಯಾನೋ… ಒಂದು ಹೋಲಿಕೆ:

ಐಷಾರಾಮಿ ಮೋಟಾರು ಬೈಕುಗಳಷ್ಟೇ ಬೆಲೆಯುಳ್ಳ ಈ ಕಾರು, ವಾಯುಮಾಲಿನ್ಯಕ್ಕೆ ಸಂಬಂಧಿಸಿದಂತೆ ಅದು ಮೋಟಾರ್ ಸೈಕಲ್‌ಗಳಿಗಿಂತ ಉತ್ತಮ ಗುಣಮಟ್ಟದ್ದು, ಕಡಿಮೆ ಮಾಲಿನ್ಯ ಹೊರಸೂಸುತ್ತದೆ ಎಂದಿದ್ದಾರೆ ನವದೆಹಲಿಯ ಪ್ರಗತಿ ಮೈದಾನದಲ್ಲಿ ಕಿಕ್ಕಿರಿದು ತುಂಬಿದ್ದ ಆಟೋ ಎಕ್ಸ್‌ಪೋಗೆ ಸ್ವತಃ ನ್ಯಾನೋ ಕಾರು ಚಲಾಯಿಸುತ್ತಾ ಬಂದ ರತನ್ ಟಾಟಾ.

ಕಳೆದ ಎರಡು ದಶಕಗಳಿಂದ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸಿದಂತಿದ್ದ ಮಾರುತಿ-800 ಕಾರಿಗಿಂತ ಶೇ.8ರಷ್ಟು ಗಾತ್ರ ಕಡಿಮೆಯಾದರೂ, ಒಳಗಿನ ಸ್ಥಳಾವಕಾಶ ಹೋಲಿಸಿದರೆ, ಶೇ.21ರಷ್ಟು ಹೆಚ್ಚು ಸ್ಥಳವಿದೆ.

ನ್ಯಾನೋದ ಉದ್ದ 3100 ಎಂಎಂ, ಅಂದರೆ ಮಾರುತಿ-800ಗಿಂತ ಶೇ.8 ಕಿರಿದು. ಆದರೆ ಅದರ ಎತ್ತರ ಮತ್ತು ಅಗಲ ತದ್ವಿರುದ್ಧ. ಅಂದರೆ ಮಾರುತಿಗಿಂತ ಹೆಚ್ಚು! 1500 ಎಂಎಂ ಅಗಲ ಇರುವ ನ್ಯಾನೋ, ಮಾರುತಿಗಿಂತ ಶೇ. 4 ಹೆಚ್ಚು ಅಗಲ ಮತ್ತು  1600 ಎಂಎಂ ಎತ್ತರವಿದ್ದು, ಇದು ಮಾರುತಿಯ ಶೇ.14ರಷ್ಟು ಹೆಚ್ಚು.

ಮಾರುತಿಯಲ್ಲಿರುವುದು 3-ಸಿಲಿಂಡರ್‌ನ 796 ಸಿಸಿ ಎಂಜಿನ್. ನ್ಯಾನೋದಲ್ಲಿ 2 ಸಿಲಿಂಡರಿನ 623 ಸಿಸಿ ಎಂಜಿನ್ ಇದೆ. ಮಾರುತಿ-800ನಲ್ಲಿ 37 ಬಿಎಚ್‌ಪಿ ಶಕ್ತಿ ಉತ್ಪಾದನೆಯಾದರೆ, ನ್ಯಾನೋದಲ್ಲಿ ಶೇ.11ರಷ್ಟು ಕಡಿಮೆ ಅಂದರೆ 33 ಬಿಎಚ್‌ಪಿ ಮಾತ್ರ.

ಆದರೆ ವೇಗದ ಬಗ್ಗೆ ಹೇಳುವುದಾದರೆ, ಟಾಟಾ ಕಂಪನಿ ಏನೂ ಹೇಳದಿದ್ದರೂ, ಮಾರುತಿಯಲ್ಲಾದರೆ ಗರಿಷ್ಠ ಗಂಟೆಗೆ 120 ಕಿ.ಮೀ.ವರೆಗೂ ವೇಗದಲ್ಲಿ ಧಾವಿಸಬಹುದು. ಆದರೆ ನ್ಯಾನೋದಲ್ಲಿ ಇದರ ಪ್ರಮಾಣ 60ರಿಂದ 70 ಕಿ.ಮೀ. ಮಾತ್ರ ಎಂಬುದು ಒಂದು ಅಂದಾಜು.

ಇಂಧನ ಕ್ಷಮತೆಯಂತೂ ಬಹುತೇಕ ಮಾರುತಿಯಷ್ಟೇ. ಅಂದರೆ ಲೀಟರಿಗೆ ಸರಾಸರಿ 20 ಕಿ.ಮೀ.

ಕ್ಯೂಟ್ ನ್ಯಾನೋ:

  • ನೋಡಿದ ತಕ್ಷಣವೇ ಎಷ್ಟೊಂದು ಮುದ್ದಾಗಿದೆ ಅನ್ನುವ ಶೈಲಿ. ವಿಶೇಷವಾಗಿ ಗಮನ ಸೆಳೆಯುವುದು ಅದರ ಮುಂಭಾಗದ ಕಣ್ಣುಗಳಂತಿರುವ ಹೆಡ್‌ಲೈಟ್‌ಗಳು ಮತ್ತು ಕಣ್ರೆಪ್ಪೆಯಂತೆ ಈ ಹೆಡ್‌ಲ್ಯಾಂಪನ್ನು ಆರಿಸಿರುವ ಇಂಡಿಕೇಟರುಗಳು.

    * 623 ಸಿಸಿ, 33 ಬಿಎಚ್‌ಪಿ ಎಂಜಿನ್
    * ಲೀಟರ್ ಪೆಟ್ರೋಲ್‌ಗೆ 20 ಕಿ.ಮೀ. ಸರಾಸರಿ ಮೈಲೇಜ್
    * ಡೀಲರ್ ಬೆಲೆ ಒಂದು ಲಕ್ಷ ರೂಪಾಯಿ. ನೋಂದಣಿ ಶುಲ್ಕ, ಸಾಗಾಣಿಕಾ ವೆಚ್ಚ, ವ್ಯಾಟ್ ತೆರಿಗೆ ಪ್ರತ್ಯೇಕ ನೀಡಬೇಕು. ಒಟ್ಟಾರೆ 1.20 ಲಕ್ಷದ ಆಚೀಚೆ
    * ನಾಲ್ಕು ಸೀಟು, ಐದು ಮಂದಿಗೂ ಅಡ್ಜೆಸ್ಟ್ ಮಾಡಿಕೊಳ್ಳಬಹುದು
    * ಹೆಚ್ಚೇನೂ ಸೌಕರ್ಯಗಳಿಲ್ಲದ ಡ್ಯಾಶ್‌ಬೋರ್ಡ್. ಇಲ್ಲಿ ಸ್ಪೀಡೋಮೀಟರ್, ಓಡೋಮೀಟರ್, ಫ್ಯುಯೆಲ್ ಗಾಜ್ ಮಾತ್ರ ಇದೆ.
    * ಎಂಜಿನ್ ಹಿಂಭಾಗದಲ್ಲಿರುತ್ತದೆ
    * 30 ಲೀಟರ್ ಇಂಧನ ಟ್ಯಾಂಕ್
    * ಟ್ಯೂಬ್ ರಹಿತ ಟೈರುಗಳು
    * ಸಿಂಗಲ್ ವಿಂಡ್‌ಶೀಲ್ಡ್ ವೈಪರ್
    * ಮುಂಭಾಗದಲ್ಲಿ ವಿಂಡ್‌ಶೀಲ್ಡ್ ವಾಷರ್ ಕಂಟೈನರ್ ಇರುತ್ತದೆ. ಜತೆಗೆ ಸೂಟ್‌ಕೇಸ್ ಇರಿಸಲೂ ಜಾಗ ಲಭ್ಯ.
    * ಯೂರೋ-4, ಭಾರತ್ -3 ಮಾದರಿಗೆ ಬದ್ಧ
    * ಫ್ರಂಟ್ ಮತ್ತು ಸೈಡ್ ಕ್ರ್ಯಾಶ್ ಪರೀಕ್ಷೆಯಲ್ಲಿ ಸುರಕ್ಷಿತ ಅಂತ ಪಾಸ್ ಆಗಿದೆ.
    * 500 ಯುವ ಎಂಜಿನಿಯರ್‌ಗಳ 4 ವರ್ಷದ ಸತತ ಪರಿಶ್ರಮ
    * ಒಂದು ಬೇಸಿಕ್ ಮತ್ತು ಎರಡು ಡಿಲಕ್ಸ್ ಮಾದರಿಗಳಲ್ಲಿ ಲಭ್ಯ.
    * ಡಿಲಕ್ಸ್ ಮಾಡೆಲಿನಲ್ಲಿ ಎಸಿ, ಪವರ್ ಸ್ಟೀರಿಂಗ್
    * ಮೊದಲು ಪೆಟ್ರೋಲ್ ಮಾದರಿ ಬರುತ್ತದೆ, ಅದರ ಹಿಂದೆ ಡೀಸೆಲ್ ಕಾರು ಹಿಂಬಾಲಿಸುವ ನಿರೀಕ್ಷೆ ಇದೆ.

ಎಲ್ಲಾ ಸರಿ, ನ್ಯಾನೋದಲ್ಲಿ ಏನು ಡ್ರಾಬ್ಯಾಕ್? ಇದರ ಟೈರುಗಳು ತುಂಬಾ ಚಿಕ್ಕವು. ಹಾಗಾಗಿ ಪ್ರಯಾಣಕ್ಕೆ ತೊಂದರೆಯಾಗಬಹುದು. ಇನ್ನೊಂದು ಎಂದರೆ, ದೂರ ಪ್ರಯಾಣ ಮಾಡುವಂತಾಗಲು ಹೆಚ್ಚು ಸಾಮಾನು ಇರಿಸಿಕೊಂಡು ಹೋಗುವುದು ಕಷ್ಟ. ಜಾಗ ಕಡಿಮೆ ಇದೆ. ಆದರೆ “ನಾವಿಬ್ಬರು, ನಮಗಿಬ್ಬರು” ಅನ್ನುವ ಪುಟ್ಟ ಸಂಸಾರವನ್ನೇ ಗುರಿಯಾಗಿರಿಸಿ ಈ ಕಾರು ನಿರ್ಮಿಸಲಾಗಿರುವುದಂತೂ ಸ್ಪಷ್ಟವಾಗಿ ತಿಳಿಯುತ್ತದೆ.

ಮಾರುಕಟ್ಟೆಯಲ್ಲಿ…

ನೋಡಿದ ತಕ್ಷಣವೇ ಇದು ಎಷ್ಟೊಂದು ಮುದ್ದಾಗಿದೆಯಲ್ಲಾ, ತೆಗೆದುಕೊಂಡೇ ಬಿಡೋಣ ಅನಿಸುತ್ತದೆ. ಡೀಲರ್ ಬೆಲೆ 1 ಲಕ್ಷ. ಇನ್ಶೂರೆನ್ಸ್, ತೆರಿಗೆ, ಮತ್ತಿತರ ಶುಲ್ಕಗಳೆಲ್ಲಾ ಸೇರಿದರೆ ಅಂದಾಜು 1.25 ಲಕ್ಷ ಆಗಬಹುದು. ಅಂದರೆ ತಿಂಗಳಿಗೆ ಸುಮಾರು ಎರಡೂವರೆ ಸಾವಿರ ರೂಪಾಯಿ ಸಮಾನ ಮಾಸಿಕ ಕಂತುಗಳ (ಇಎಂಐ) ಆಧಾರದಲ್ಲಿ ಸಾಲದ ಮೂಲಕ ಯಾರು ಕೂಡ ಈ ಕಾರನ್ನು ತಮ್ಮದಾಗಿಸಿಕೊಳ್ಳಬಹುದು. ಹಾಗಾಗಿ ದ್ವಿಚಕ್ರ ವಾಹನಿಗರೆಲ್ಲಾ ಈಗಾಗಲೇ ನ್ಯಾನೋ ಮೇಲೆ ಕಣ್ಣಿಟ್ಟಿದ್ದಾರೆ.

ವಿಶ್ವದ ಮಾರುಕಟ್ಟೆಯಲ್ಲಿ, ವಿಶೇಷವಾಗಿ ಭಾರತದಲ್ಲಿ, ಮೋಟಾರ್ ಬೈಕ್ ಮತ್ತು ಕಾರುಗಳ ನಡುವೆ ಒಂದು ನಿರ್ಯಾತ ಸ್ಥಳವಿದೆ. ಮೋಟಾರು ಬೈಕಿನಲ್ಲಿ ಸಂಸಾರ ಒಯ್ಯುವುದು ಸಾಧ್ಯವಿಲ್ಲ, ಕಾರು ಖರೀದಿಸುವ ಶಕ್ತಿ ಇಲ್ಲ. ಈ ನಿರ್ಯಾತ ಪ್ರದೇಶವನ್ನು ತುಂಬಲಿದೆ ಈ ಕಾರು. ಅಸಾಧ್ಯ ಎಂಬುದನ್ನು ಟಾಟಾ ಸಾಧ್ಯವಾಗಿಸಿದ್ದರಿಂದ, ಈ ಹಿಂದೆ ಟೀಕಿಸುತ್ತಿದ್ದ ವಿಶ್ವದ ಪ್ರಮುಖ ಕಾರು ಕಂಪನಿಗಳು ತಾವೂ ಕೂಡ ಇಂಥದ್ದೊಂದು ಕಾರನ್ನೇಕೆ ನಿರ್ಮಿಸಬಾರದು ಎಂಬುದನ್ನು ಈಗಲೇ ಯೋಚಿಸತೊಡಗಿವೆ. ಭವಿಷ್ಯದಲ್ಲಿ ಸ್ಪರ್ಧೆ ಏರ್ಪಡಬಹುದು, ಗುಣಮಟ್ಟವೂ ಹೆಚ್ಚಬಹುದು ಎಂಬುದು ಕಾರು ಕೊಳ್ಳಬಯಸುವ ಜನಸಾಮಾನ್ಯರ ನಿರೀಕ್ಷೆ.

ನ್ಯಾನೋ ಅಂದರೆ ಒಂದು ಶತಕೋಟಿ ಅಂತ ಅರ್ಥ. ಶತಕೋಟಿ ಭಾರತೀಯರನ್ನು ಕಾರಿನ ಚಾಲಕನ ಸೀಟಿನಲ್ಲಿ ಟಾಟಾ ಕೂರಿಸುತ್ತಾರೆಯೇ? ಕಾದು ನೋಡೋಣ…

ಈ ಲೇಖನವು ವೆಬ್ ದುನಿಯಾ ಕನ್ನಡ ತಾಣದಲ್ಲಿ ಪ್ರಕಟವಾಗಿದೆ.

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

View Comments

  • ಈಗಾಗಲೇ ದೊಡ್ಡ ಪಟ್ಟಣಗಳ ಬೀದಿಗಳು ಕಿಕ್ಕಿರಿದಿರುವಾಗ ಈ ಪುಟಾಣಿಯನ್ನು ಎಲ್ಲಿ ನಡೆಸುತ್ತಾರಂತೆ ರತನ್ ಸಾಹೇಬರು? ಕಾರುಗಳ ಮೇಳ ದಿನವೂ ರಸ್ತೆ ಮೇಲೆ. ಸದ್ಯಕ್ಕೆ ಬೈಕುಗಳಿಗೆ, ಸ್ಕೂಟರುಗಳಿಗೆ ನುಸುಳಲು ಜಾಗ ಮಾಡಿಕೊಳ್ಳುವ ಮಟ್ಟಿಗಿದೆ ಪರಿಸ್ಥಿತಿ. ಇನ್ನೂ ಕಾರನ್ನೇ ಇಂಥ ಬೀದಿಗಿಳಿಸಿದರೆ....? ಹಾರುವ ಕಾರಿದ್ದರೆ ಆಗಿತ್ತೇನೊ!

  • ಸ್ಕೂಟರ್‍ನಲ್ಲಿ ಪ್ರಯಾಣಿಸುವ ಸಣ್ಣ ಕುಟುಂಬಕ್ಕೆಂದೇ ಇರುವ ಈ ಕಾರಿನ ಬಳಕೆ ಸೀಮಿತವಾಗಿದೆ. ನೋಡೋಣ. ಬಡ್ಜೆಟ್ ವಿಮಾನಯಾನ, ಮೊಬೈಲ್ ಕ್ರಾಂತಿಯಂತೆ ಈ ಕಾರೂ ಕ್ರಾಂತಿ ತರುವುದೋ ಎಂದು.

    ಒಲವಿನಿಂದ
    ಬಾನಾಡಿ.

  • ನಗುವು ಸಹಜದ ಧರ್ಮ
    ನಗಿಸುವುದು ಪರ ಧರ್ಮ
    ನಗುವ ನಗಿಸುತ ನಗಿಸಿ
    ನಗುತ ಬಾಳುವ ವರವ
    ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ-
    ಎಂದವರು ಡಿ.ವಿ.ಜಿ. ಜೀವನವನ್ನು ನೋಡುವ ದೃಷ್ಟಿಯಲ್ಲಿ ನವಿರಾದ ಹಾಸ್ಯವನ್ನು ಬೆರೆಸಿಕೊಂಡು ಬಿಟ್ಟರೆ ಯಾವ ಕಷ್ಟಗಳೂ ನಮ್ಮನ್ನು ಕುಗ್ಗಿಸುವುದಿಲ್ಲ, ಅವಮಾನಗಳು ನಮ್ಮನ್ನು ನಿರ್ನಾಮ ಮಾಡುವುದಿಲ್ಲ. ಹಾಸ್ಯ ಶಾಕ್ ಅಬ್ಸಾರ್ವರ್‌ನಂತೆ ಆಘಾತಗಳನ್ನು ತಾಳಿಕೊಳ್ಳಬಲ್ಲ ಶಕ್ತಿಯನ್ನು ಕೊಡುತ್ತದೆ.
    ಕನ್ನಡದಲ್ಲಿ ವೈವಿಧ್ಯಮಯ ಹಾಸ್ಯಕ್ಕಾಗಿ ಮೀಸಲಾದ ಬ್ಲಾಗ್ ‘ನಗೆ ನಗಾರಿ ಡಾಟ್ ಕಾಮ್’.
    ವಿಳಾಸ: http://nagenagaaridotcom.wordpress.com/

    ದಯವಿಟ್ಟು ಒಮ್ಮೆ ಇಲ್ಲಿ ಭೇಟಿಕೊಡಿ. ನಿಮ್ಮ ಮುಖದ ಮೇಲೆ ತೆಳುನಗೆಯ ಗೆರೆ ಮೂಡದಿದ್ದರೆ ಕೇಳಿ. ಇಷ್ಟವಾದರೆ ನಿಮ್ಮ ಬ್ಲಾಗ್ ಫೀಡಿನಲ್ಲಿ ಇದನ್ನು ಸೇರಿಸಿಕೊಳ್ಳಿ, ಮೆಚ್ಚುಗೆಯಾದರೆ ನಿಮ್ಮ ಇತರೆ ಗೆಳೆಯ, ಗೆಳತಿಯರಿಗೆ ಇದರ ಬಗ್ಗೆ ತಿಳಿಸಿ.

    ನಗೆ ಸಾಮ್ರಾಟ್

  • ಸುಪ್ತದೀಪ್ತಿಯವರೆ,
    ನಿಮ್ಮ ಶಂಕೆ ಕೇಳಿದ ಮೇಲೆ ನಾನು ಕೂಡ ನ್ಯಾನೋ ಖರೀದಿಸಬೇಕೇ ಬೇಡವೇ ಅಂತ ಯೋಚನೆ ಮಾಡಿಕೊಳ್ಳರಾಂಭಿಸಿದ್ದೇನೆ. ನನಗೆ ಬೈಕೇ ಸಾಕು. :)

    ಹಾರು ಕಾರು... ತುಂಬಾ ಒಳ್ಳೆಯ ಐಡಿಯಾ... ನಾನಂತೂ ಅದ್ಕೇ ಸಿದ್ಧನಾಗ್ತೀನಿ.

  • ಬಾನಾಡಿ ಅವರೆ,
    ಬಹುಶಃ ನಗರ ಪ್ರದೇಶಗಳಲ್ಲಿ ಇದನ್ನು ಖರೀದಿಸಿದರೆ ಪ್ರೆಸ್ಟೀಜ್ ವಿಷಯ ಅಡ್ಡಿ ಬಂದೀತು ಅನಿಸುತ್ತೆ. ಹಾಗಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಈ ಕಾರು ಹೆಚ್ಚು ಜನಾಕರ್ಷಣೆ ಪಡೆಯಬಹುದು. ನಗರ ಪ್ರದೇಶಗಳಲ್ಲಾದರೆ, ಸಿರಿವಂತ ವರ್ಗದವರು ತಮ್ಮ ಮಕ್ಕಳಿಗೆ ಆಟಿಕೆ ಸಾಮಾನು ಎಂಬ ರೂಪದಲ್ಲಿ ಇದನ್ನು ನೀಡಬಹುದೂಂತ ಕಾಣಿಸುತ್ತೆ. :)

  • ನಗೆಸಾಮ್ರಾಟರೆ,

    ಬ್ಲಾಗು ಲೋಕಕ್ಕೆ ಸ್ವಾಗತ. ನಾವೂ ಓದುಗರಾಗ್ತೀವಿ.

Recent Posts

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

3 weeks ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

3 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

3 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

4 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

5 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

11 months ago