ಆಹಾ, ಇಂಥದ್ದೊಂದು ಗೃಹ ಸಚಿವರನ್ನು ಪಡೆದ ಭಾರತವದೆಷ್ಟು ಧನ್ಯ! ಈಗಾಗಲೇ ಭ್ರಷ್ಟಾಚಾರಗಳಿಗೆ, ಬೆಲೆ ಏರಿಕೆಗೆ ಒಗ್ಗಿಕೊಂಡಂತೆ ಭಯೋತ್ಪಾದನೆಗೂ ಒಗ್ಗಿಹೋದಂತಿರುವ ಮುಂಬೈಯಲ್ಲಿ ಮತ್ತೆ ರಕ್ತಪಾತವಾಗಿದೆ. ಮನೆಯಿಂದ ಹೊರ ಹೋದವರಿಗೆ ಮರಳಿ ಬರುವುದರ ಬಗ್ಗೆ ಭರವಸೆಯಿಲ್ಲದಂತಹಾ ಪರಿಸ್ಥಿತಿಯಿದೆ. ಆದರೆ, “ಈ ಸ್ಫೋಟವು ಯಾವುದೇ ವಿದೇಶೀಯರನ್ನು ಗುರಿಯಾಗಿರಿಸಿದ್ದಲ್ಲ, ವಿದೇಶೀಯರು ಭಾರತದಲ್ಲಿ ಸುರಕ್ಷಿತರು” ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ. ಹಾಗಾದರೆ ಭಾರತ ದೇಶದಲ್ಲಿ ಭಾರತೀಯರೇಕೆ ಸುರಕ್ಷಿತರಲ್ಲ? “ಸ್ಫೋಟದ ಬಗ್ಗೆ ಮಾಹಿತಿ ಇರಲಿಲ್ಲ, ಆದರೆ ಇದು ಗುಪ್ತಚರ ವೈಫಲ್ಯ ಅಲ್ಲವೇ ಅಲ್ಲ” ಎಂದೂ ಹೇಳಿದ್ದಾರೆ ಗೃಹ ಸಚಿವರು. ಹಾಗಿದ್ದರೆ ಇದನ್ನು ಏನೆಂದು ಕರೆಯಬೇಕು?
ಈ ಅರ್ಥವಾಗದ ಪ್ರಶ್ನೆಗಳ ನಡುವೆ, ನಮ್ಮ ಭವ್ಯ ಭಾರತದ ಭಾವೀ ಪ್ರಧಾನಿ ರಾಹುಲ್ ಗಾಂಧಿಯವರು ನೀಡಿದ ಹೇಳಿಕೆಯನ್ನೂ ಕೇಳಿದ್ದೀರಿ. ಆಫ್ಘಾನಿಸ್ತಾನ, ಇರಾಕ್‌ಗಳಲ್ಲಿ ಪ್ರತಿದಿನ ದಾಳಿಗಳು ನಡೆಯುತ್ತಿವೆ ಎಂದವರು ಈ ಮುಂಬೈ ದಾಳಿಯನ್ನು ಹೋಲಿಸಿದ್ದಾರಲ್ಲಾ, ಅದು ಮನಸ್ಸಿಗೆ ತೀವ್ರ ನೋವು ತರುವ ಸಂಗತಿ. ಅಲ್ಲಿರುವ ಅತಂತ್ರ ಸರಕಾರಗಳಿಗೂ, ನಮ್ಮಲ್ಲಿರುವ ಸ್ವತಂತ್ರ-ಸಮ್ಮಿಶ್ರ ಸರಕಾರಗಳಿಗೂ ವ್ಯತ್ಯಾಸವೇ ಇಲ್ಲವೇ?
31 ತಿಂಗಳಲ್ಲಿ ಎರಡನೆಯದಂತೆ!
ಪ್ರತೀ ಸ್ಫೋಟ ನಡೆದಾಗಲೂ, ಪ್ರಧಾನಿ ಖಂಡನೆ, ಗೃಹ ಸಚಿವ ಖಂಡನೆ, ರಾಷ್ಟ್ರಪತಿ ಖಂಡನೆ…. ಇತ್ಯಾದಿಗಳು ಚರ್ವಿತಚರ್ವಣವಾಗಿಬಿಟ್ಟಿದೆ. ಈ ರೀತಿ ಖಂಡನೆ ಹೇಳಿಕೆ ನೀಡುವುದಕ್ಕೂ ನಾಚಿಕೆಯಾಗುವುದಿಲ್ಲವೇ? ಎಂಬುದು ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ. ಯಾಕೆಂದರೆ ಈ ಪ್ರಶ್ನೆಯನ್ನು ಯಾರು ಕೂಡ ಕೇಳಿಸಿಕೊಳ್ಳುವುದಿಲ್ಲ!
2008ರ 26/11 ಮುಂಬೈ ದಾಳಿಯ ಬಳಿಕ ಯಾವುದೇ ಭಯೋತ್ಪಾದನೆ ಚಟುವಟಿಕೆಗಳು ನಡೆದಿಲ್ಲ. ಇದು ಎರಡನೆಯದು ಎಂದು ನಮ್ಮ ಘನ ಸರಕಾರದ ಆದರಣೀಯ ಗೃಹ ಸಚಿವರು ಹೇಳಿಕೆ ನೀಡುತ್ತಿದ್ದಾರೆಂದಾದರೆ, 2010ರ ಫೆಬ್ರವರಿಯಲ್ಲಿ ಪುಣೆಯ ಜರ್ಮನ್ ಬೇಕರಿ, ಅದೇ ವರ್ಷದ ಏಪ್ರಿಲ್ ತಿಂಗಳಲ್ಲಿ ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸ್ಫೋಟ, ಅದೇ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ದೆಹಲಿಯ ಜಾಮಾ ಮಸೀದಿಯಲ್ಲಿ ಶೂಟೌಟ್, 2010ರ ಡಿಸೆಂಬರ್‌ನಲ್ಲಿ ವಾರಾಣಸಿಯ ಶಿಟ್ಲಾಘಾಟ್ ಬಾಂಬ್ ಸ್ಫೋಟ. ಆ ಬಳಿಕ ತೀರಾ ಇತ್ತೀಚೆಗೆ 2011ರ ಮೇ ತಿಂಗಳಲ್ಲಿ ದೆಹಲಿ ಹೈಕೋರ್ಟ್ ಆವರಣದಲ್ಲಿಡಲಾಗಿದ್ದ ಕಾರು ಬಾಂಬ್ ಹೆಚ್ಚಿನ ಅನಾಹುತವನ್ನೇನೂ ಮಾಡಿಲ್ಲ. ಇವೆಲ್ಲವೂ ಕೇವಲ ಪಟಾಕಿಗಳೇ? ಎಂಬುದು ನಾವು ಕೇಳಲೇಬೇಕಾದ ಪ್ರಶ್ನೆ.
ಅರಸರಿಗೆ ರಕ್ಷಣೆಯಿದೆ, ತೆರಿಗೆ ಕಟ್ಟುವ ಪ್ರಜೆಗೇಕಿಲ್ಲ?
ನಿರುಪದ್ರವಿಗಳಾಗಿ ಭ್ರಷ್ಟಾಚಾರದ ವಿರುದ್ಧ ಉಪವಾಸ ನಡೆಸಿ ಮಲಗಿ ನಿದ್ರಿಸುತ್ತಿರುವ ಸನ್ಯಾಸಿಗಳನ್ನು, ಜನ ಸಾಮಾನ್ಯರನ್ನು ಹೊಡೆದು ಓಡಿಸಲಾಗುತ್ತದೆ; ಒಂದಿಷ್ಟು ಹೆಚ್ಚು ಆದಾಯ ಬಂದರೆ, ಎಗ್ಗಿಲ್ಲದೆ ತೆರಿಗೆ ಸಂಗ್ರಹಿಸಲಾಗುತ್ತದೆ; ಆದರೆ, ಮೂಲೆ ಮೂಲೆಯಲ್ಲಿಯೂ ಇರುವ ಭಯೋತ್ಪಾದಕರು, ಸಿಮಿ ಕ್ರಿಮಿಗಳು, ಲಷ್ಕರ್‌ಗಳು, ಜಿಹಾದಿಗಳೇ ಮೊದಲಾದವರು ಕೈಗೆ ಸಿಕ್ಕಿದರೂ ಜೈಲಿನಲ್ಲಿ ಆರಾಮವಾಗಿ ‘ಸುರಕ್ಷಿತ’ರಾಗಿದ್ದಾರೆ. ಅಂಥವರನ್ನು ಜೈಲಿನಲ್ಲಿ ಸುರಕ್ಷಿತವಾಗಿ ಇರಿಸುವುದಕ್ಕೋಸ್ಕರ, ಅದೇ ರೀತಿ, ಮಹಾ ಮಹಾನ್ ನಾಯಕರಿಗೆಲ್ಲಾ ಭದ್ರತೆಗಾಗಿ ಭದ್ರತೆಗೆ ಕೋಟಿ ಕೋಟಿ ಹಣ ವಿನಿಯೋಗಿಸಲಾಗುತ್ತದೆ; ಆದರೆ ಜನ ಸಾಮಾನ್ಯ ಯಾವಾಗ ಹೆಣವಾಗುತ್ತಾನೆ ಎಂಬುದು ತಿಳಿಯದೇ ಇರುವ ಪರಿಸ್ಥಿತಿ!
ಇದೆಂಥಾ ವಿಪರ್ಯಾಸ? ನಾವೇ ಆರಿಸಿ ಕಳುಹಿಸಿದವರು, ನಮ್ಮದೇ ತೆರಿಗೆ ಹಣದಲ್ಲಿ ಎಲ್ಲ ರೀತಿಯ ಭದ್ರತೆಗಳನ್ನೂ ಅನುಭವಿಸುತ್ತಿದ್ದರೆ, ತೆರಿಗೆ ತೆತ್ತು “ನಾವಿನ್ನು ಆರಾಮವಾಗಿ ಜೀವನ ಸಾಗಿಸಬಹುದು” ಎಂದು ನೆಮ್ಮದಿಯಿಂದ ಕೂರಲು ಹೊರಟ ಜನಸಾಮಾನ್ಯನಿಗೆ ರಕ್ಷಣೆಯಿಲ್ಲ; ನೆಮ್ಮದಿಯಿಲ್ಲ! ಕೇರಳದಲ್ಲಿ ಪ್ರೊಫೆಸರ್ ಒಬ್ಬರ ಕೈ ಕಡಿಯುವವರು, ಅಲ್ಲಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಸಿಮಿಗಳು, ಇಂಡಿಯನ್ ಮುಜಾಹಿದೀನ್‌ಗಳು ರಾಜಾರೋಷವಾಗಿ ತಿರುಗಾಡುತ್ತಿದ್ದರೆ, ಏನೂ ತಪ್ಪು ಮಾಡದ ಸಾಮಾನ್ಯ ಪ್ರಜೆಯೊಬ್ಬ ಧೈರ್ಯದಿಂದ ನಡೆದಾಡಲೂ ಭಯ ಪಡುತ್ತಿದ್ದಾನೆ!
26/11 ಬಳಿಕ ಮಾಡಿದ ಘೋಷಣೆಗಳ ಪಾಡೇನು?
ನಾವೇ ತೆರಿಗೆ ಕಟ್ಟುವ ಹಣದಿಂದ ಅದೆಷ್ಟೋ ತನಿಖಾ ಸಂಸ್ಥೆಗಳನ್ನು ಸರಕಾರವು ಪೋಷಿಸಿಕೊಂಡು ಬರುತ್ತಿದೆ. ಸಿಬಿಐ, ರಾ, ಐಬಿ, ಎನ್ಐಎ, ನ್ಯಾಷನಲ್ ಗ್ರಿಡ್, ಸಿಐಡಿ, ಸಿಒಡಿ, ಎನ್ಎಸ್‌ಜಿ, ಎನ್ಎಸ್ಎ, ಎಟಿಎಸ್… ಇತ್ಯಾದಿತ್ಯಾದಿ ಅದೆಷ್ಟೋ ತನಿಖಾ ಸಂಸ್ಥೆಗಳು, ಪೊಲೀಸರು ನಮ್ಮನ್ನು ರಕ್ಷಿಸಲು ನೇಮಕಗೊಂಡಿದ್ದಾರೆ. ಹೀಗಾಗಿ ಜನ ಸಾಮಾನ್ಯನ ಆಕ್ರೋಶದ ಕಟ್ಟೆಯೊಡೆಯುವುದು. ನಮ್ಮ ಸರಕಾರವನ್ನು ನಾವೇ ಆರಿಸಿ ಕಳುಹಿಸಿದ್ದೇವೆ, ಅದರ ಪೋಷಣೆಗೆ ಮತ್ತು ನಮ್ಮ ಭದ್ರತೆಗೆ ನಾವೇ ತೆರಿಗೆ ಹಣ ನೀಡುತ್ತೇವೆ. ಹೀಗಾಗಿ ಆಳುವವರು ಎಡವಿದಾಗ ಖಂಡಿಸುವ ಹಕ್ಕು ನಮಗಿದೆ ಅಂತ ನಾವು ಅಂದುಕೊಂಡು ತೃಪ್ತಿಪಡಬಹುದಷ್ಟೇ.
2008ರ 26/11 ಮುಂಬೈ ದಾಳಿಯ ಬಳಿಕ ಕೋಟ್ಯಂತರ ರೂಪಾಯಿ ಭಾರತೀಯ ತೆರಿಗೆದಾರರ ಹಣವನ್ನು ಭಯೋತ್ಪಾದನೆ ವಿರೋಧೀ ಹೋರಾಟಕ್ಕಾಗಿ ಸುರಿಯಲಾಗಿತ್ತು. ಅದೆಲ್ಲ ಎಲ್ಲಿ ಹೋಯಿತು? ಒಂದು ಮೇಲ್ನೋಟವನ್ನೇ ನೋಡಿ:
2008ರ ಮುಂಬೈ ದಾಳಿಯ ಬಳಿಕ ರಾಮ ಪ್ರಧಾನ್ ಸಮಿತಿಯನ್ನು ರಚಿಸಲಾಗಿತ್ತು. ಅದು ಕೆಲವು ಶಿಫಾರಸುಗಳನ್ನು ಕೂಡ ಮಾಡಿತ್ತು. ಅದರಲ್ಲಿ ಪ್ರಮುಖವಾದುದೆಂದರೆ, ಪೊಲೀಸ್ ಬಲದ ಆಧುನೀಕರಣ. ಪೊಲೀಸರಿಗೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸಬೇಕೆಂಬುದು. ಮಾತು ಮಾತು ಮಾತು. ಅಷ್ಟೇ. ಆ ವಿಷಯ ಇನ್ನೂ ಆರಂಭವನ್ನೇ ಪಡೆದಿಲ್ಲ ಎಂದು ತಿಳಿಸಲು ನಮಗೇ ನಾಚಿಕೆಯಾಗುತ್ತಿದೆ!
ಅಂತೆಯೇ, ಗುಪ್ತಚರ ಮಾಹಿತಿಗಳು ರಾಜ್ಯಗಳನ್ನು ನೇರವಾಗಿ ಸಕಾಲದಲ್ಲಿ ತಲುಪುವಂತಾಗಲು ಒಂದು ಕೇಂದ್ರೀಕೃತ ವ್ಯವಸ್ಥೆಯ ಶಿಫಾರಸು ಮಾಡಲಾಗಿದೆ. ಆದರೆ, ಅದು ಕೂಡ ಕಾರ್ಯಾನುಷ್ಠಾನವಾಗಿಲ್ಲ. ಗುಪ್ತಚರ ಮಾಹಿತಿ ಇನ್ನೂ ಗೊಂದಲಮಯ ಹಾದಿಯಲ್ಲೇ ಸಾಗುತ್ತಿದೆ.
ಇನ್ನು, 2003ರಲ್ಲಿ ರಚಿಸಲಾಗಿದ್ದ ಕ್ಷಿಪ್ರ ಸ್ಪಂದನಾ ಪಡೆಗಳನ್ನು ಬಲಪಡಿಸಿ, ಮುಂದೆ ಯಾವುದೇ ದಾಳಿಗಳಾಗದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಅವುಗಳನ್ನೂ ಪುನಶ್ಚೇತನಗೊಳಿಸಿ ಆಧುನೀಕರಣಗೊಳಿಸಬೇಕು ಎಂದು ಕೂಡ ಶಿಫಾರಸು ಮಾಡಲಾಗಿತ್ತು. ಸರಿ, ‘ಫೋರ್ಸ್ ಒನ್’ ಎಂಬ ಪಡೆಯೊಂದನ್ನು ಭಾರೀ ಪ್ರಚಾರದೊಂದಿಗೆ ಆರಂಭಿಸಲಾಯಿತು. ಅದೇನು ಮಾಡುತ್ತಿದೆ? ಉತ್ತರ ಇನ್ನಷ್ಟೇ ತಿಳಿಯಬೇಕಿದೆ!
ಒಟ್ಟಿನಲ್ಲಿ ಕೋಟಿ ಕೋಟಿ ಸುರಿದುದರ ಫಲಿತಾಂಶ ಏನಾಗಿದೆ ಎಂಬುದು ಬುಧವಾರದ ಸ್ಫೋಟದಲ್ಲಿಯೇ ಬಟಾಬಯಲಾಗಿಬಿಟ್ಟಿತಲ್ಲ!
ಒಗ್ಗಿಕೊಳ್ಳುವ ಮನಸ್ಥಿತಿ…
ಮುಂಬೈಯಲ್ಲಿ ಬುಧವಾರ ನಡೆದ ಬಾಂಬ್ ಸ್ಫೋಟದ ದೃಶ್ಯಾವಳಿಗಳನ್ನು ಟಿವಿಯಲ್ಲೊಮ್ಮೆ ನೋಡಿದ್ರಾ? ಅಲ್ಲಿನ ಪ್ರಜೆಗಳೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತಾ, ‘ನಮಗ್ಯಾರೂ ಇಲ್ಲ, ನಮ್ಮ ಕಷ್ಟ ನಮಗೆ’ ಅನ್ನೋ ಭಾವದಲ್ಲಿದ್ದರು. ಮುಂಬಯಿಗರು ಈ ರೀತಿಯ ಬಾಂಬ್ ಸ್ಫೋಟಗಳಿಗೆ ಒಗ್ಗಿಕೊಂಡು ಬಿಟ್ಟರಾ ಅನ್ನೋ ಮನೋಭಾವನೆಯೂ ಸುಳಿದಿತ್ತು. ಸಾಮಾನ್ಯ ಪ್ರಜೆಯೊಬ್ಬ ಈ ಸಂಕಷ್ಟದಲ್ಲಿ ಪರಾವಲಂಬಿಯಾದಾಗ ಮಾನವೀಯ ನೆರವು ನೀಡುತ್ತಿದ್ದರೆ, ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅವರು ಪತ್ರಿಕಾಗೋಷ್ಠಿಯಲ್ಲಿ, ‘ಹಲವರನ್ನು ನಮ್ಮವರು ರಕ್ಷಿಸಿದ್ದಾರೆ’ ಎನ್ನುತ್ತಾ ಕ್ರೆಡಿಟ್ ತೆಗೆದುಕೊಳ್ಳುತ್ತಾರೆ! ಬಹುಶಃ ಭಾರತೀಯರ ಒಗ್ಗಿಕೊಳ್ಳುವ ಮನಸ್ಥಿತಿಯು ಅಧಿಕಾರಸ್ಥರಿಗೆ ವರದಾನವೇ ಆಗಿಬಿಟ್ಟಿದೆ. ಭ್ರಷ್ಟಾಚಾರಕ್ಕೆ ಜನ ಹೇಗೆ ಒಗ್ಗಿಕೊಂಡು ತಮ್ಮ ಪಾಡಿಗೆ ತಾವು ಜೀವನ ಸಾಗಿಸಿಕೊಂಡು ಹೋಗುತ್ತಿದ್ದಾರೋ, ಬಾಂಬ್ ಸ್ಫೋಟದಂತಹಾ ವಿಧ್ವಂಸಕ ಕೃತ್ಯಗಳಿಗೂ ಅವರು ಒಗ್ಗಿಕೊಳ್ಳುವ ಹಂತಕ್ಕೆ ತಲುಪಿದ್ದಾರೆ. ಎಂದಿನಂತೆಯೇ ಮೊಂಬತ್ತಿಗಳು ಬೆಳಗುತ್ತವೆ, ಒಂದಿಷ್ಟು ಕಣ್ಣೀರು ಸುರಿಸಲಾಗುತ್ತದೆ ಮತ್ತು ಸರಕಾರ ಇನ್ನಾದರೂ ನಮ್ಮನ್ನು ರಕ್ಷಿಸುತ್ತದೆ ಎಂಬ ಭರವಸೆಯೊಂದಿಗೆ ಜನ ಅದನ್ನು ಮರೆತುಬಿಡುತ್ತಾರೆ.
ಜನರು ಎಷ್ಟೆಂದು ತಾಳಿಕೊಂಡಾರು?
ಆದರೆ ಬಹುಶಃ ಜನರ ತಾಳ್ಮೆಗೂ ಮಿತಿ ಇದೆ. 26/11ರ ಮುಂಬೈ ದಾಳಿ ನಡೆದ ಬಳಿಕ ಜನರು ಗೇಟ್‌ವೇ ಆಫ್ ಇಂಡಿಯಾ ಬಳಿ ರೊಚ್ಚಿಗೆದ್ದಿದ್ದಾಗ, ರಾಜಕಾರಣಿಗಳೆಲ್ಲರೂ ಒಂದು ಕ್ಷಣ ತಣ್ಣಗಾಗಿಬಿಟ್ಟಿದ್ದರು. ಆಳುವವರ ಮೇಲೆ ಪ್ರಜೆಗಳ ಆಕ್ರೋಶದ ಬಿಸಿ ಅವರಿಗೆ ಅಂದು ಮುಟ್ಟಿತ್ತು. ತತ್ಫಲವಾಗಿ, ಇನ್ನು ಮುಂದೆ ಇಂತಹಾ ಘಟನೆಗಳು ಜರುಗದಂತೆ ಭಯೋತ್ಪಾದನಾ ನಿಗ್ರಹಕ್ಕೆ ಏನೇನೋ ಏಜೆನ್ಸಿಗಳನ್ನು ಘೋಷಿಸಿದರು. ಜನರು ಮೆತ್ತಗಾದರು. ಅದೆಷ್ಟೋ ತನಿಖಾ ಏಜೆನ್ಸಿಗಳು, ಅದೆಷ್ಟೋ ಸಭೆಗಳು, ಅದೆಷ್ಟೋ ಹಣ ಖರ್ಚು. ಆದರೆ ಮುಗ್ಧ ಜನರ ಸಾವು ಇನ್ನೂ ನಿಂತಿಲ್ಲ!
ಜನಾಕ್ರೋಶವನ್ನು ತಣ್ಣಗಾಗಿಸುವ ನಿಟ್ಟಿನಲ್ಲಿ 2009ರಲ್ಲಿ ಸ್ಥಾಪಿಸಲಾಗಿದ್ದ ರಾಷ್ಟ್ರೀಯ ತನಿಖಾ ಏಜೆನ್ಸಿ -ಎನ್ಐಎ ಕೂಡ ಬಲಿಷ್ಠವಾಗಿರುವಂತೆ ಕಾಣಿಸುತ್ತಿಲ್ಲ. ಬಹುಶಃ ಇಷ್ಟೆಲ್ಲಾ ತನಿಖಾ ಏಜೆನ್ಸಿಗಳಿರುವಾಗ ಅದರ ಕಾರ್ಯ ವ್ಯಾಪ್ತಿಯೇನು ಎಂಬ ಬಗ್ಗೆ ಸ್ವತಃ ಎನ್ಐಎ ಗೊಂದಲದಲ್ಲಿ ಸಿಲುಕಿದ್ದಿರಬಹುದು!
ಅಧಿಕಾರಸ್ಥರು ಇದಕ್ಕೆ ಉತ್ತರದಾಯಿಗಳು. ಹಾಗಾಗಿ ಈ ಎಲ್ಲಾ ಏಜೆನ್ಸಿಗಳನ್ನು ಸಾಕುತ್ತಿರುವ ಆಡಳಿತಾರೂಢರು ಇವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುವ ಅಂಶ. ಹಾಗಿದ್ದರೆ ನಮ್ಮ ನೀತಿ-ನಿಯಮಾವಳಿಗಳಲ್ಲಿ, ಆಡಳಿತ ವ್ಯವಸ್ಥೆಯಲ್ಲೇ ಎಲ್ಲೋ ಒಂದು ಕಡೆ ಕೊರತೆಯಿದೆ ಅನಿಸುತ್ತದೆ. ಈ ದೇಶಕ್ಕೆ ಅತಿದೊಡ್ಡ ಕೊರತೆಯೆಂದರೆ ಅದು ಸಮರ್ಥವಾದ ಮತ್ತು ಸಮರ್ಥವಾಗಿ ವಾದ ಮಂಡಿಸಬಲ್ಲ ಪ್ರತಿಪಕ್ಷ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷಕ್ಕಿಂತಲೂ ಹೆಚ್ಚು ಜವಾಬ್ದಾರಿಯಿರುವುದು, ಸರಕಾರವು ಹಾದಿ ತಪ್ಪಿದಾಗಲೆಲ್ಲಾ ಅದನ್ನು ಸರಿದಾರಿಗೆ ತರುವುದು ಪ್ರತಿಪಕ್ಷದ ಹೊಣೆ. ಆದರೆ ಪ್ರತಿಪಕ್ಷಕ್ಕೆ ಬೆಲೆಯಿಲ್ಲದಂತಹಾ ಪರಿಸ್ಥಿತಿಯಿದೆ. ಉಗ್ರವಾದದ ವಿರುದ್ಧ ಒಂದು ಒಳ್ಳೆಯ ಕಟ್ಟು ನಿಟ್ಟಿನ ಕಾನೂನಿಗಾಗಿ ಒತ್ತಾಯಿಸುವ, ಸರಕಾರವನ್ನು ಚಿವುಟಿ ಎಚ್ಚರಿಸುವ, ಸರಕಾರವು ಕ್ರಮ ಕೈಗೊಳ್ಳುವವರೆಗೂ ಬಿಡದೆ ಹೋರಾಟ ಮಾಡುವ ಛಾತಿ ಎಲ್ಲೂ ಗೋಚರಿಸುತ್ತಿಲ್ಲ.
ಆಳುವವರ ಭ್ರಷ್ಟಾಚಾರದಿಂದಾಗಿ ಜನರು ತಮ್ಮ ಹಣವನ್ನೂ ಕಳೆದುಕೊಳ್ಳುತ್ತಿದ್ದಾರೆ. ಈ ಭ್ರಷ್ಟಾಚಾರದ ಹೆಚ್ಚಿದ ಫಲವಾಗಿಯೇ ಭಯೋತ್ಪಾದನೆ ಎಂಬುದು ಇಷ್ಟೊಂದು ಸುಲಭವಾಗಿ ದೇಶವನ್ನು ನುಂಗುತ್ತಿದ್ದು, ಜನ ಸಾಮಾನ್ಯರು ಪ್ರಾಣವನ್ನೂ ಕಳೆದುಕೊಳ್ಳುತ್ತಿದ್ದಾರೆ. ಹಣವೂ ಇಲ್ಲ, ಪ್ರಾಣವೂ ಇಲ್ಲದಂತಾಗುತ್ತಿದೆ. ಭಯೋತ್ಪಾದಕರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಂಡು, ಅವರಿಗೆ ಎಚ್ಚರಿಕೆ ನೀಡುವಂತೆ ಸ್ವಯಂ ಆಗಿ ತಾನೇ ಎಚ್ಚೆತ್ತುಕೊಳ್ಳಲು ಈ ಸರಕಾರಕ್ಕೆ ಅದೆಷ್ಟು ಬಾಂಬ್ ಸ್ಫೋಟಗಳು, ಜೀವ ಬಲಿಗಳು ಬೇಕೋ ಎಂಬ ಜನ ಸಾಮಾನ್ಯನ ಆತಂಕದ ಧ್ವನಿ, ಕಸಬ್‌ನಂತಹಾ ಹಂತಕರಿಗೆ ಅಷ್ಟು ಭದ್ರತೆ ನೀಡಲಾಗುತ್ತದೆ, ನಮಗೇಕಿಲ್ಲ ಎಂಬ ಪ್ರಜೆಗಳ ಹಪಹಪಿಕೆ, ಭ್ರಷ್ಟಾಚಾರದಲ್ಲಿ ಹಾಗೂ ಭಯೋತ್ಪಾದನೆಗೆ ಸುಲಭ ಗುರಿಯಾಗುವಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದ ಹೆಸರು ಮಣ್ಣು ಪಾಲಾಗುತ್ತಿದೆ ಎಂಬ ವಾಸ್ತವಾಂಶ ಅಧಿಕಾರಸ್ಥರಿಗೆ ಕೇಳಿಸೀತೇ?
[ವೆಬ್‌ದುನಿಯಾಕ್ಕಾಗಿ]
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
View Comments
ಪ್ರಿಯ ಬ್ಲಾಗಿಗರೆ,
ಕಣಜ ಜಾಲತಾಣ (www.kanaja.in) ಕರ್ನಾಟಕ ಜ್ಞಾನ ಆಯೋಗದ ಮಹತ್ವದ ಕನ್ನಡ ಅಂತರಜಾಲ ಜ್ಞಾನಕೋಶ ಯೋಜನೆ. ಈ ಯೋಜನೆಯು ಕನ್ನಡಿಗರಿಗಾಗಿಯೇ ರೂಪುಗೊಳ್ಳುತ್ತಿರುವ ಜಾಲತಾಣ. ಈ ಜಾಲತಾಣದ ಬಗ್ಗೆ ನಿಮ್ಮ ಬ್ಲಾಗಿನಲ್ಲೂ ಸೂಕ್ತ ಪ್ರಚಾರ ಸಿಗಬೇಕೆಂಬುದು ನಮ್ಮ ವಿನಂತಿ. ದಯಮಾಡಿ (http://kanaja.in/?page_id=10877) ಈ ಕೊಂಡಿಯಲ್ಲಿ ಇರುವ `ಕಣಜ' ಬ್ಯಾನರುಗಳನ್ನು ನಿಮ್ಮ ಬ್ಲಾಗಿನಲ್ಲಿ ಪ್ರಕಟಿಸಬೇಕೆಂದು ಕೋರಿಕೆ. ಇಲ್ಲಿ ಕೊಟ್ಟಿರುವ ಚಿತ್ರದ ಕೆಳಗೆ ಇರುವ ಸಂಕೇತ ವಾಕ್ಯವನ್ನು ನಿಮ್ಮ ಬ್ಲಾಗಿನ ಹೊಸ ಬ್ಲಾಗ್ ಪ್ರಕಟಣೆ ಜಾಗದಲ್ಲಿ ಪೇಸ್ಟ್ ಮಾಡಿದರೆ ಕಣಜದ ಬ್ಯಾನರ್ ನಿಮ್ಮಲ್ಲಿ ಪ್ರಕಟವಾಗುತ್ತದೆ. ಎಂಬೆಡ್ ಮಾಡುವ ಬಗೆ ಹೇಗೆಂದು ತಿಳಿಯಬೇಕಿದ್ದರೆ ದಯಮಾಡಿ (projectmanager@kanaja.in) ಈ ಮೈಲಿಗೆ ಕಾಗದ ಬರೆಯಿರಿ.
ಕಣಜ ಜಾಲತಾಣದಲ್ಲಿ ನಿಮ್ಮ ಬ್ಲಾಗುಗಳನ್ನೂ ಪಟ್ಟೀಕರಿಸಲಾಗಿದೆ, ಗಮನಿಸಿ. ಬ್ಲಾಗ್ ಲೋಕದ ಮಾಹಿತಿ ಲೇಖನಗಳು ಕನ್ನಡಕ್ಕೆ ಕೊಡುಗೆ ನೀಡುತ್ತಿರುವುದನ್ನು ಸ್ವಾಗತಿಸುತ್ತ `ಕಣಜ'ವನ್ನೂ ನಿಮ್ಮ ಸಹ-ಬ್ಲಾಗ್ ಎಂದೇ ಪರಿಗಣಿಸಿ ಬೆಂಬಲ ನೀಡಿ, ಪ್ರಚಾರ ನೀಡಿ ಎಂದು ವಿನಂತಿಸಿಕೊಳ್ಳುವೆವು.
ತಮ್ಮ ವಿಶ್ವಾಸಿ
ಬೇಳೂರು ಸುದರ್ಶನ
ಸಲಹಾ ಸಮನ್ವಯಕಾರ, ಕಣಜ ಯೋಜನೆ
(ಕರ್ನಾಟಕ ಜ್ಞಾನ ಆಯೋಗದ ಯೋಜನೆ)
ಈ ಮೈಲ್: projectmanager@kanaja.net
http://www.kanaja.in
ವಿಳಾಸ: ಇಂಟರ್ ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ ಬೆಂಗಳೂರು
ನಂ 26/ಸಿ, ಎಲೆಕ್ಟ್ರಾನಿಕ್ಸ್ ಸಿಟಿ, ಹೊಸೂರು ರಸ್ತೆ
ಬೆಂಗಳೂರು - 560100
ದೂರವಾಣಿ: ೯೭೪೧೯೭೬೭೮೯