Categories: Info@Technology

ಆಧಾರ್ ದುರ್ಬಳಕೆ ಬಗ್ಗೆ ಆತಂಕವೇ? Lock ಮಾಡಿಕೊಳ್ಳುವುದು ಸುಲಭ!

Avinash-Logo_thumb.png“ಹತ್ತು ವರ್ಷಗಳ ಬಳಿಕ ಮದುವೆ ಆಮಂತ್ರಣ ಪತ್ರಗಳು ಹೇಗಿರುತ್ತವೆ? ವಧು-ವರರನ್ನು ಹಾಗೂ ಅವರ ಹೆತ್ತವರನ್ನು ಆಧಾರ್ ನಂಬರ್ ಮೂಲಕವೇ ಹೆಸರಿಸಲಾಗುತ್ತದೆ!”

ಆಧಾರ್ ಸಂಖ್ಯೆ ಕಡ್ಡಾಯ ಕುರಿತ ಕೇಂದ್ರ ಸರಕಾರದ ನಿಯಮಾವಳಿಗಳ ಕುರಿತು ಎಲ್ಲೆಡೆ ಹರಿದಾಡುತ್ತಿರುವ ಸಾಕಷ್ಟು ಜೋಕ್‌ಗಳಲ್ಲಿ ಇದೂ ಒಂದು. ಆಧಾರ್ ಕಾರ್ಡ್ ಎಂಬುದು ಭಾರತೀಯನ ಅನನ್ಯತೆಗೆ ಕಾರಣವಾಗುವ ಗುರುತಿನ ಚೀಟಿ ಎಂಬುದು ನಿರ್ವಿವಾದ. ಬ್ಯಾಂಕ್ ಖಾತೆಗೆ, ಮೊಬೈಲ್ ನಂಬರ್‌ಗೆ ಲಿಂಕ್ ಮಾಡಿರಬೇಕೆಂಬುದು ಕೇಂದ್ರ ಸರಕಾರದ ನಿಯಮ. ಸರಕಾರದಿಂದ ಸಿಗಬಹುದಾದ ಯಾವುದೇ ಸವಲತ್ತುಗಳಿಗೂ ಆಧಾರ್ ಕಡ್ಡಾಯ. ಇವೆಲ್ಲವನ್ನು ಮಾಡಿರುವುದರ ಹಿಂದೆ ಮೂಲ ಕಾರಣವೆಂದರೆ ಭ್ರಷ್ಟಾಚಾರ ತಪ್ಪಿಸುವುದು, ತೆರಿಗೆ ಕಳ್ಳತನ ನಿಯಂತ್ರಿಸುವುದು, ಸರಕಾರಿ ಸವಲತ್ತುಗಳ ದುರುಪಯೋಗ ತಡೆಯುವುದು, ಭಯೋತ್ಪಾದಕರ ನಿಗ್ರಹ, ಒಟ್ಟಿನಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕುವುದು. ಮತ್ತೊಂದಿದೆ – ಕಪ್ಪು ಹಣದ ವಹಿವಾಟಿನ ಜಾಡನ್ನೂ ಹಿಡಿಯುವುದು!

ಸರಕಾರದ ಕೈಯಲ್ಲಿ ನಮ್ಮ ಆಧಾರ್ ಕಾರ್ಡ್‌ನ ಡೇಟಾಬೇಸ್ ಅಂದರೆ ನಮ್ಮ ಕುರಿತ ಸಂಪೂರ್ಣ ವಿವರಗಳನ್ನು ಹೊಂದಿರುವ ಮಾಹಿತಿಸಂಚಯವೇ ಇದೆ. ಇತ್ತೀಚೆಗೆ ಹ್ಯಾಕರ್‌ಗಳ ಕಾಟದಿಂದಾಗಿ, ಈ ಮಾಹಿತಿಯೂ ಸೋರಿಕೆಯಾದರೆ, ಇದಕ್ಕೆ ಲಿಂಕ್ ಆಗಿರುವ ಇತರ ಖಾತೆಗಳ ಅವಸ್ಥೆಯೇನು ಅಂತ ಆತಂಕ ವ್ಯಕ್ತವಾಗುವುದು ಸಹಜವೇ. ಯಾಕೆಂದರೆ ಆಧಾರ್‌ನಲ್ಲಿ ನಮ್ಮ ಜೀವವೇ ಇದೆ, ಅರ್ಥಾತ್, ಬಯೋಮೆಟ್ರಿಕ್ ವಿವರಗಳಾದ ನಮ್ಮ ಐರಿಸ್ (ಕಣ್ಣುಪಾಪೆ), ಬೆರಳಚ್ಚು ಮತ್ತು ಮುಖ – ಈ ಮಾಹಿತಿಗಳಿರುತ್ತವೆ. ಜತೆಗೆ ಹೆಸರು, ವಿಳಾಸ, ಫೋನ್ ಸಂಖ್ಯೆ, ಜನ್ಮದಿನಾಂಕ, ವಯಸ್ಸು, ಲಿಂಗ, ಇಮೇಲ್ ವಿಳಾಸ ಮುಂತಾದ ಸಮಸ್ತ ವಿವರಗಳಿರುತ್ತವೆ. ಇವೆಲ್ಲ ಸೈಬರ್ ಕಳ್ಳರ ಪಾಲಾದರೆ ಸಂಕಷ್ಟವಿದ್ದೇ ಇದೆ. ಯಾವುದಾದರೂ ಸರಕಾರಿ ಸವಲತ್ತುಗಳನ್ನು ಪಡೆಯುವಾಗಲೋ, ಸಿಮ್ ಕಾರ್ಡ್, ಬ್ಯಾಂಕ್ ಖಾತೆ ಮುಂತಾದ ಸೇವೆಗಳನ್ನು ಬಳಸಲು ದೃಢೀಕರಣಕ್ಕಾಗಿ ಇವುಗಳನ್ನು ಬಳಸಲಾಗುತ್ತದೆ. ಇವು ದುರುಪಯೋಗವಾದರೆ?

ಈ ಆತಂಕವನ್ನು ಮನಗಂಡಿರುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ), ಪರಿಹಾರವೊಂದನ್ನು ನೀಡಿರುವುದು ಹೆಚ್ಚಿನವರಿಗೆ ಗೊತ್ತಿಲ್ಲ. ‘ನಿಮ್ಮ ಮಾಹಿತಿ ನಮ್ಮಲ್ಲಿ ಸುರಕ್ಷಿತವಾಗಿದೆ’ ಎಂದು ಪ್ರಾಧಿಕಾರವು ಹೇಳಿದೆಯಾದರೂ, ಮತ್ತೂ ಶಂಕೆಗಳು ಕಾಡಿದಲ್ಲಿ ಜನರು ತಮ್ಮ ಆಧಾರ್ ಕಾರ್ಡ್‌ಗೆ ಆನ್‌ಲೈನ್‌ನಲ್ಲಿ ‘ಬೀಗ’ ಹಾಕಿ ಇರಿಸಿಕೊಳ್ಳಬಹುದು, ಬೇಕಾದಾಗಲಷ್ಟೇ ತೆರೆಯಬಹುದಾದ ತಂತ್ರಜ್ಞಾನವೊಂದನ್ನು ಪರಿಚಯಿಸಿದೆ.

ಆಧಾರ್ ಬಳಕೆದಾರರು ತಮ್ಮ ಬಯೋಮೆಟ್ರಿಕ್ ಮಾಹಿತಿಯು ದುರ್ಬಳಕೆಯಾಗದಂತೆ ತಡೆಯಲು ಲಾಕ್ ವ್ಯವಸ್ಥೆಯನ್ನು ಯುಐಡಿಎಐ ಮಾಡಿಕೊಟ್ಟಿದೆ. ಲಾಕ್ ಮಾಡಿಟ್ಟರೆ, ನಮ್ಮ ಖಾಸಗಿ ಮಾಹಿತಿಗಳು ಸುರಕ್ಷಿತವಾಗಿರುತ್ತವೆ. ಅಂದರೆ ಬಯೋಮೆಟ್ರಿಕ್ ವ್ಯವಸ್ಥೆಯನ್ನು ನಾವೇ ಲಾಕ್ ಮಾಡಬಹುದು. ಲಾಕ್ ಮಾಡಿದರೆ, ಆಧಾರ್ ಕಾರ್ಡ್ ಬಳಕೆದಾರರಾಗಲೀ ಅಥವಾ ಬೇರೆ ಯಾರೇ ಆಗಲಿ, ನಮ್ಮ ಗುರುತಿನ (ಐಡೆಂಟಿಟಿ) ದೃಢೀಕರಣಕ್ಕೆ ಈ ಬಯೋಮೆಟ್ರಿಕ್ ಮಾಹಿತಿಯನ್ನು ಬಳಸುವುದು ಸಾಧ್ಯವಾಗುವುದಿಲ್ಲ. ಭದ್ರವಾಗಿರುತ್ತದೆ. ನಮಗೆ ಬೇಕಾದಾಗಲೂ ಬಳಸಲು ಬರುವುದಿಲ್ಲವೇ ಎಂಬ ಶಂಕೆ ನಿಮಗಿರಬಹುದು. ಭಯ ಬೇಡ, ಅದನ್ನು ನಾವೇ ಅನ್‌ಲಾಕ್ ಮಾಡಬಹುದು ಮತ್ತು 10 ನಿಮಿಷಗಳ ಬಳಿಕ ಅದು ಪುನಃ ಲಾಕ್ ಆಗುತ್ತದೆ.

ಆಧಾರ್ ಕಾರ್ಡ್ ಲಾಕ್ ಮಾಡುವುದು ಹೇಗೆ?
ನಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಅದಕ್ಕೆ ಲಿಂಕ್ ಆಗಿರುವ ಮೊಬೈಲ್ ನಂಬರ್ ನಮ್ಮಲ್ಲಿರಬೇಕು. ನಂತರ ಕಂಪ್ಯೂಟರಿನ ಬ್ರೌಸರ್‌ನಲ್ಲಿ https://resident.uidai.gov.in/biometric-lock ತಾಣಕ್ಕೆ ಹೋಗಿ. ಅಲ್ಲಿ ಕಾಣಿಸುವ ಬಾಕ್ಸ್‌ಗಳಲ್ಲಿ ಆಧಾರ್ ಸಂಖ್ಯೆ, ಸೆಕ್ಯುರಿಟಿ ಕೋಡ್ (ಕ್ಯಾಪ್ಚಾ) ಎಂಟರ್ ಮಾಡಿ. ಆಗ ನಿಮ್ಮ ಮೊಬೈಲ್‌ಗೆ ಒಟಿಪಿ (ಏಕಕಾಲದ ಪಾಸ್‌ವರ್ಡ್) ಬರುತ್ತದೆ. ಅದನ್ನು ನಮೂದಿಸಿ. ಆಧಾರ್ ಲಾಕ್ ಮಾಡಿಬಿಡಿ.

ಇದಕ್ಕೆ ಆಧಾರ್ ಕಾರ್ಡ್ ಜತೆ ನೋಂದಣಿಯಾಗಿರುವ ನಂಬರ್ ಇರುವ ಮೊಬೈಲ್ ಫೋನ್ ನಿಮ್ಮ ಕೈಯಲ್ಲಿರಬೇಕು. ನಿಮ್ಮ ಕೈಯಲ್ಲಿದ್ದರೆ ಮಾತ್ರವೇ ನಿಮ್ಮ ಆಧಾರ್ ಸಂಖ್ಯೆಯನ್ನು ಲಾಕ್/ಅನ್‌ಲಾಕ್ ಮಾಡುವುದು ಸಾಧ್ಯವಾಗುತ್ತದೆ. ಮೊಬೈಲ್ ನಂಬರ್ ಲಿಂಕ್ ಆಗದಿದ್ದರೆ ಅಥವಾ ಹೊಸ ನಂಬರ್ ಲಿಂಕ್ ಮಾಡಬೇಕಿದ್ದರೆ ಸಮೀಪದ ಆಧಾರ್ ನೋಂದಾವಣೆ ಕೇಂದ್ರಕ್ಕೆ ಹೋಗಿ ಮೊದಲು ಮಾಡಿಸಿಕೊಳ್ಳಿ.

ಈ ರೀತಿಯಾಗಿ ಬಯೋಮೆಟ್ರಿಕ್ ದತ್ತಾಂಶವನ್ನು ಲಾಕ್ ಮಾಡಿದ ಬಳಿಕ, ಆಧಾರ್ ಬಳಸಿ ಯಾವುದನ್ನೇ ಆಗಲಿ, ದೃಢೀಕರಣ (ಆಥೆಂಟಿಫಿಕೇಶನ್) ಕೂಡ ಮಾಡುವುದು ಸಾಧ್ಯವಾಗುವುದಿಲ್ಲ. ಆದರೆ, ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಯಾವುದೇ ಬ್ಯಾಂಕ್ ವ್ಯವಹಾರಗಳು ಹಾಗೆಯೇ ಮುಂದುವರಿಯುತ್ತವೆ, ಅವಕ್ಕೇನೂ ಧಕ್ಕೆಯಾಗುವುದಿಲ್ಲ. ಆಧಾರ್ ಮೂಲಕ ದೃಢೀಕರಣವನ್ನಷ್ಟೇ ನಿರ್ಬಂಧಿಸಲಾಗುತ್ತದೆ.

ಲಾಕ್ ಆದ ನಂತರ, ಬೇರೆಯವರು ಅಥವಾ ನೀವೇ ಆದರೂ, ಯಾವುದೇ ವಹಿವಾಟಿನ ದೃಢೀಕರಣಕ್ಕೆ ಆಧಾರ್ ಬಳಸಲು ಹೋದರೆ, ಅಲ್ಲಿ ಎರರ್ (ಕೋಡ್ 330) ತೋರಿಸುತ್ತದೆ. ಆತಂಕ ಪಡಬೇಕಿಲ್ಲ, ಆಧಾರ್ ಬಯೋಮೆಟ್ರಿಕ್ ದತ್ತಾಂಶವು ಲಾಕ್ ಆಗಿದೆ ಎಂಬುದು ಇದರರ್ಥ.

ಅನ್‌ಲಾಕ್ ಮಾಡುವುದು ಹೇಗೆ?
ಸರಕಾರಿ ಸವಲತ್ತು ಪಡೆಯಲು ಅಥವಾ ಬೇರೆ ಯಾವುದೇ ಸೇವೆಗಳಿಗೆ ಆಧಾರ್ ಸಂಖ್ಯೆಯ ಬಯೋಮೆಟ್ರಿಕ್ ಅಂಶಗಳ ಮೂಲಕ ದೃಢೀಕರಣದ ಅಗತ್ಯವಿದ್ದಾಗ, ನಾವೇ ಅದನ್ನು ಅನ್‌ಲಾಕ್ ಮಾಡಿಕೊಳ್ಳಬಹುದು. ಅದು ಹೇಗೆ? ಕಂಪ್ಯೂಟರಲ್ಲಿ ಪುನಃ ಅದೇ ವೆಬ್‌ಸೈಟಿಗೆ ಹೋಗಿ, ಆಧಾರ್ ಸಂಖ್ಯೆ, ಕ್ಯಾಪ್ಚಾ ದಾಖಲಿಸಿ ಹಾಗೂ ಒಟಿಪಿ ಎಂಟರ್ ಮಾಡಿ. ಹತ್ತು ನಿಮಿಷಗಳ ಕಾಲ ಅನ್‌ಲಾಕ್ ಆಗಿರುತ್ತದೆ. ನಂತರ ತಾನಾಗಿ ಲಾಕ್ ಆಗುತ್ತದೆ. ಇದು ಭದ್ರತೆಗಾಗಿ ರೂಪಿಸಲಾದ ವ್ಯವಸ್ಥೆ.

ನೆನಪಿಡಿ: ವಿಶಿಷ್ಟ ಗುರುತಿನ ಪ್ರಾಧಿಕಾರವೇ ಹೇಳುವ ಪ್ರಕಾರ, ಪ್ರತೀ 10 ವರ್ಷಗಳಿಗೊಮ್ಮೆ ನಮ್ಮ ಬಯೋಮೆಟ್ರಿಕ್ ದತ್ತಾಂಶವನ್ನು ಆಧಾರ್ ಕಾರ್ಡ್‌ನಲ್ಲಿ ನವೀಕರಿಸಬೇಕಾಗುತ್ತದೆ. ಕಾರಣವೇನೆಂದರೆ, ಏನಾದರೂ ಅಪಘಾತವಾಗಿದ್ದಿದ್ದರೆ ಅಥವಾ ಬೇರೆ ಯಾವುದೇ ಕಾಯಿಲೆಯಿಂದಾಗಿ, ಉದಾಹರಣೆಗೆ, ಕಣ್ಣು/ಮುಖದಲ್ಲಿ ಅಥವಾ ಕೈಬೆರಳಿನ ಊನವೇ ಮುಂತಾಗಿ, ಬಯೋಮೆಟ್ರಿಕ್ ದತ್ತಾಂಶದಲ್ಲಿ ಬದಲಾವಣೆಯಾಗಿರುವ ಸಾಧ್ಯತೆಗಳಿರುತ್ತವೆ. ಅದು ಆಧಾರ್ ಮಾಹಿತಿ ಸಂಚಯದಲ್ಲಿ ಅಪ್‌ಡೇಟ್ ಆಗಿರಬೇಕಾಗುತ್ತದೆ.

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. 2017 ಜುಲೈ 3, ವಿಜಯ ಕರ್ನಾಟಕ ಅಂಕಣ

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

View Comments

  • ಉಪಯುಕ್ತ ಮಾಹಿತಿ. ಧನ್ಯವಾದಗಳು ಅವಿನಾಶ್

Share
Published by
Avinash B

Recent Posts

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

1 month ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

4 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

4 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

4 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

6 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

11 months ago