ಲಾಲ್ ಬಹಾದೂರ್ ಶಾಸ್ತ್ರಿ, ಸ್ವತಂತ್ರ ಭಾರತದ ಎರಡನೇ ಪ್ರಧಾನಿ. ಅದಕ್ಕೂ ಮಿಗಿಲಾಗಿ ಅವರನ್ನು ನಾವು ನೆನಪಿಸಿಕೊಳ್ಳುವುದು ಜೈವಾನ್ ಜೈಕಿಸಾನ್ ಎಂಬ ಉತ್ತೇಜನ ನೀಡಬಲ್ಲ ಘೋಷಣೆಗಾಗಿ ಹಾಗೂ ರಾಜಕಾರಣಿಯೊಬ್ಬ ವೈಫಲ್ಯದ ಹೊಣೆ ಹೊರುವ ಗಟ್ಟಿ ಮನಸ್ಸಿಗಾಗಿ.
ಕೃಷಿತೋ ನಾಸ್ತಿ ದುರ್ಭಿಕ್ಷಂ ಎಂಬ ಹಿರಿಯರ ಅನುಭವ ನುಡಿಯನ್ನು ನಾವು ಕೇಳಿದ್ದೇವೆ. ಕೃಷಿಕರೇ ದೇಶದ ಬೆನ್ನೆಲುಬು ಎಂಬುದನ್ನು ಗಟ್ಟಿಯಾಗಿ ನಂಬಿದವರು ಶಾಸ್ತ್ರಿಗಳು ಮತ್ತು ತಾವೂ ಅನುಸರಿಸಿ ರೈತರನ್ನು ಪ್ರೋತ್ಸಾಹಿಸುತ್ತಾ, ದೇಶದ ಕೃಷಿ ಉತ್ಪಾದನೆಗೆ ಹೊಸ ಹೊಳಹು ನೀಡಿದ ಶಾಸ್ತ್ರಿಗಳು, ರೈಲ್ವೇ ಸಚಿವರಾಗಿದ್ದಾಗ ನಡೆದ ಅಪಘಾತಗಳಿಗಾಗಿ ಹುದ್ದೆಗೇ ರಾಜೀನಾಮೆ ನೀಡಿ ರಾಜಕೀಯ ನೇತಾರನಿಗಿರಬೇಕಾದ ನೈತಿಕ ಜವಾಬ್ದಾರಿಯನ್ನು ಸದಾ ನೆನಪಲ್ಲಿಟ್ಟುಕೊಳ್ಳುವಂತೆ ಮಾಡಿದವರು.
ಪ್ರಧಾನಿಯಾಗಿ ದೇಶವಾಳಿಯೂ ಸರಳತೆಯನ್ನೇ ಮೈಗೂಡಿಸಿಕೊಂಡಿದ್ದ ಶಾಸ್ತ್ರಿಗಳಿಗೆ ಸ್ವಂತ ಮನೆಯಿರಲಿಲ್ಲ ಮತ್ತು ತಮ್ಮ ಜೀವಿತದ ಕೊನೆಯ ಅವಧಿಯಲ್ಲಿ 12 ಸಾವಿರದ ಪ್ರೀಮಿಯರ್ ಪದ್ಮಿನಿ ಕಾರು ಖರೀದಿಸಲು ಕೊರತೆಯಾಗಿದ್ದ 5000 ರೂ.ಗೆ ಬ್ಯಾಂಕಿನಲ್ಲಿ ಸಾಲ ಮಾಡಿದ್ದರು (1964ರಲ್ಲಿ). ಎರಡು ವರ್ಷಗಳಲ್ಲಿ ಅವರು ನಿಗೂಢ ಸಾವನ್ನಪ್ಪಿದ್ದರು. ಹೀಗೆ, ಬ್ಯಾಂಕಿನಿಂದ ಸಾಲ ತೀರಿಸುವ ನೋಟಿಸ್ ಬಂದಾಗ, ಅವರ ಪತ್ನಿ ತಮ್ಮ ಪಿಂಚಣಿ ನಿಧಿಯಿಂದ ಸಾಲ ತೀರಿಸಿದರು ಎಂಬ ವಿಷಯವನ್ನು ಕಾಂಗ್ರೆಸ್ ನೇತಾರ ಶಶಿ ತರೂರ್ ಅವರು ಟ್ವೀಟ್ ಮೂಲಕ ತಿಳಿಸಿದ್ದರು. ಜನ ಸೇವೆಯಲ್ಲಿ ನಿರತರಾಗುವ ರಾಜಕಾರಣಿಗಳಿಗೆ ಶಾಸ್ತ್ರಿಗಳ ಈ ಸರಳತೆಯೇ ಒಂದು ಅನುಕರಣಯೋಗ್ಯ.
ಇದರ ಜೊತೆಗೆ, ನಾವು ಕೇಳಿ ತಿಳಿದಂತೆ ಅವರ ಮನಸ್ಸಿನಲ್ಲಿ ಯಾವತ್ತೂ ಖಚಿತವಾಗಿದ್ದ ಹರಿಜನೋದ್ಧಾರ ಹಾಗೂ ಕೃಷಿಕರ ಉದ್ಧಾರ ಎಂಬ ಮಂತ್ರಗಳೇ ಲಾಲ್ ಬಹಾದುರ್ ಶಾಸ್ತ್ರಿಯವರನ್ನು ಸದಾ ಸ್ಮರಣೀಯವಾಗಿಸಿವೆ. ಜಾತಿ ಪದ್ಧತಿಗೆ ಅವರ ವಿರೋಧ ಹೇಗಿತ್ತು? ತಮ್ಮ ಮನೆತನದ ‘ಶ್ರೀವಾಸ್ತವ’ ಎಂಬ ಹೆಸರನ್ನು ಅವರು ತೊರೆದಿರುವುದರಲ್ಲಿಯೇ ಅವರ ಮತ್ತೊಂದು ಅನುಕರಣೀಯ ನಡೆಯನ್ನು ನಾವು ಗಮನಿಸಬಹುದಾಗಿತ್ತು. ಇದು ಏಳನೇ ತರಗತಿಯ ಬಾಲಕನಾಗಿದ್ದಾಗ ಅವರಿಗೆ ಹೊಳೆದಿದ್ದ ವಿಶೇಷ ಜ್ಞಾನ. ಆ ಬಳಿಕ 1921ರಲ್ಲಿ ಕಾಶಿ ವಿದ್ಯಾಪೀಠದಿಂದ ಶಾಸ್ತ್ರ ಜ್ಞಾನದ ಅಧ್ಯಯನದ ಮೂಲಕ ಗಳಿಸಿದ ಪದವಿಯಾಗಿತ್ತು ‘ಶಾಸ್ತ್ರಿ’ ಎಂಬುದು. ಗಳಿಸಿದ ಪದವಿಯನ್ನೇ ಅವರು ತಮ್ಮ ಉಪನಾಮವನ್ನಾಗಿ ಉಳಿಸಿಕೊಂಡರು.
ಕ್ಷೀರ ಕ್ರಾಂತಿಯಾಗಲೀ, ಹಸಿರು ಕ್ರಾಂತಿಯಾಗಲೀ, ನಮಗೆ ಫಕ್ಕನೇ ಹೊಳೆಯುವುದು ಲಾಲ್ ಬಹಾದೂರ್ ಶಾಸ್ತ್ರಿಗಳ ಹೆಸರು. ಗುಜರಾತ್‌ನ ಅನಂದ್‌ನಲ್ಲಿ ಕ್ಷೀರೋತ್ಪಾದಕರ ಸಹಕಾರ ಸಂಘ ಅಮುಲ್ ಅನ್ನು ಪೋಷಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅವರು, ಅಲ್ಲಿ ಪಡೆದ ಜ್ಞಾನದಿಂದ ರಾಷ್ಟ್ರೀಯ ಹೈನುಗಾರಿಕಾ ಅಭಿವೃದ್ಧಿ ಮಂಡಳಿ ಸ್ಥಾಪಿಸುವ ಮೂಲಕ ಕ್ಷೀರ ಕ್ರಾಂತಿಗೆ ಬಲ ತುಂಬಿದ್ದರು. ಈ ಮೂಲಕ ಹಾಲು ಉತ್ಪಾದನೆ ಹೆಚ್ಚಿ ಹೈನುಗಾರರ ಬದುಕು ಹಸನಾಗಿಸುವಲ್ಲಿ ಅವರ ಪಾತ್ರ ಮಹತ್ವದ್ದು.
ಇನ್ನು ಜೈ ಜವಾನ್ – ಜೈ ಕಿಸಾನ್ ಎಂಬ ಘೋಷಣೆಯ ಕುರಿತು. 1965ರಲ್ಲಿ ಎಡಬಿಡಂಗಿ ಪಾಕಿಸ್ತಾನದ ಧಾರ್ಷ್ಟ್ಯದಿಂದಾಗಿ ಭಾರತ-ಪಾಕಿಸ್ತಾನ ಯುದ್ಧ ನಡೆದಾಗ ತಮ್ಮ ದಿಟ್ಟತನ ಪ್ರದರ್ಶಿಸಿದ್ದರು ಶಾಸ್ತ್ರಿ. ಅಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಶಾಸ್ತ್ರಿಯವರು ಜೈಜವಾನ್, ಜೈ ಕಿಸಾನ್ (ದೇಶ ರಕ್ಷಣೆಯ ಹೊಣೆ ಹೊತ್ತ ಸೈನಿಕರಿಗೆ ಹಾಗೂ ದೇಶದ ಬೆನ್ನೆಲುಬಾಗಿರುವ ರೈತರಿಗೆ ಜೈಕಾರ) ಘೋಷಿಸಿದಾಗ, ಈ ಘೋಷಣೆಯು ಇಡೀ ದೇಶವನ್ನು ಒಗ್ಗೂಡಿಸಿದ್ದು ಸುಳ್ಳಲ್ಲ. ದೇಶ ಕಾಯುವ ಸೈನಿಕರ ಆತ್ಮಬಲವೂ ಹೆಚ್ಚಿತು, ಆತ್ಮ ನಿರ್ಭರತೆಗೆ ಪೂರಕವಾದ ‘ಜೈ ಕಿಸಾನ್’ ಉತ್ತೇಜನದಿಂದ ದೇಶದ ಕೃಷಿಕ ಸಮುದಾಯವೂ ಉತ್ಪಾದನೆ ಹೆಚ್ಚಿಸುವಂತಾಯಿತು. ಆ ಕಾಲದಲ್ಲಿ ರೂಪಿಸಿದ ನೀತಿಗಳಿಂದಾಗಿ, ಕೃಷಿ ಉತ್ಪನ್ನಗಳ ಆಮದು ತಗ್ಗಿ, ದೇಶೀಯ ಉತ್ಪಾದನೆ ಹೆಚ್ಚಿಸುವಲ್ಲಿ ಈ ಪ್ರೋತ್ಸಾಹದಾಯಕ ನಡೆ-ನುಡಿ ಪ್ರಮುಖ ಪಾತ್ರ ವಹಿಸಿತ್ತು ಎಂಬುದು ಇತಿಹಾಸ ಕೆದಕಿದಾಗ ತಿಳಿದುಬರುವ ಅಂಶ.
ಇಂದು ನಾಡಿನಾದ್ಯಂತ ಕೃಷಿಕರು ಕಂಗೆಟ್ಟಿದ್ದಾರೆ. ಬರ, ಪ್ರವಾಹ ಮುಂತಾದವುಗಳೊಂದಿಗೆ ಕೃಷಿ ಬಗ್ಗೆ ಹೊಸ ಪೀಳಿಗೆಗಿರುವ ನಿರಾಸಕ್ತಿ. ಇದರೊಂದಿಗೆ ಸಾಲ ಸೋಲ ಮಾಡಿಯೋ, ಮಧ್ಯವರ್ತಿ, ದಲ್ಲಾಳಿಗಳಿಂದ ವಂಚನೆಗೀಡಾಗಿಯೋ ಕಂಗೆಟ್ಟಿರುವ ರೈತರ ಆತ್ಮಹತ್ಯೆಯ ವರದಿಗಳು. ಇವೆಲ್ಲವೂ ಕೃಷಿ ಕ್ಷೇತ್ರದ ಬಗ್ಗೆ ನಮ್ಮ ಅನಾಸಕ್ತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇಂಥ ಸಂದರ್ಭದಲ್ಲೆಲ್ಲಾ, ಕೃಷಿಕರಿಗೆ ಉತ್ತೇಜನ ನೀಡುತ್ತಿದ್ದ ಶಾಸ್ತ್ರಿ ನೆನಪಾಗುತ್ತಾರೆ, ಅವರ ಜೈ ಕಿಸಾನ್ ಘೋಷಣೆ ನೆನಪಾಗುತ್ತದೆ. 1965ರಲ್ಲಿ ಶಾಸ್ತ್ರಿಯವರು ಹಸಿರು ಕ್ರಾಂತಿಗೆ ಅಂದರೆ ಕೃಷಿ ಚಟುವಟಿಕೆಗೆ ಉತ್ತೇಜನ ನೀಡಿದ ಪರಿಣಾಮವಾಗಿ ಪಂಜಾಬ್, ಹರ್ಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ ಆಹಾರ ಧಾನ್ಯ ಉತ್ಪಾದನೆ ಸಾಕಷ್ಟು ವರ್ಧಿಸಿತೆಂಬುದನ್ನು ನಾವು ಓದಿದ್ದೇವೆ. ಅವರು ಇದಕ್ಕಾಗಿ ಕೈಗೊಂಡ ಕ್ರಮಗಳು ಬಹುಶಃ ಇಂದಿಗೂ ಅನುಕರಣೀಯವಾಗಬಹುದು.
ಕುರಿಯನ್ ವರ್ಗೀಸ್ ನೇತೃತ್ವದಲ್ಲಿ ಗುಜರಾತ್‌ನಲ್ಲಿ ನಡೆಯುತ್ತಿದ್ದ ಕ್ಷೀರ ಕ್ರಾಂತಿಯ ಬಗ್ಗೆ ಅವರಿಗೆ ವಿಶೇಷ ಆಸಕ್ತಿಯಿತ್ತು. ಈ ಸಹಕಾರ ಸಂಸ್ಥೆಯ ಯಶಸ್ವಿನಿಂದ ಪ್ರೇರಿತರಾಗಿದ್ದ ಶಾಸ್ತ್ರಿ, ಅಲ್ಲಿಯೇ ಗ್ರಾಮ ವಾಸ್ತವ್ಯ ನಡೆಸಿದರು, ರೈತರೊಂದಿಗೆ ಬೆರೆತರು. ಅಮುಲ್‌ನ ಯಶಸ್ಸಿನ ಮಾದರಿಯನ್ನು ದೇಶದ ಇತರೆಡೆಯೂ ಪ್ರಸಾರ ಮಾಡಿದರೆ, ದೇಶದ ಇತರೆಡೆಯೂ ರೈತರ ಸಾಮಾಜಿಕ-ಆರ್ಥಿಕ ಸ್ಥಿತಿಗತಿ ಉನ್ನತಿಯಾಗುತ್ತದೆಯಲ್ಲಾ ಎಂದು ವರ್ಗೀಸ್ ಜೊತೆ ಚರ್ಚಿಸಿದ ಪರಿಣಾಮ, ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯು ಸ್ಥಾಪನೆಗೊಂಡಿತು.
ಶಾಸ್ತ್ರೀಜಿಯವರು ಬರೇ ಆಡುವವರಲ್ಲ, ಸ್ವತಃ ಮಾಡಿ ತೋರಿಸುವವರು. ಯುದ್ಧ ಕಾಲದಲ್ಲಿ ದೇಶದಲ್ಲಿ ಆಹಾರದ ಕೊರತೆ ಕಾಣಿಸಿಕೊಂಡಿತ್ತಷ್ಟೇ. ಆ ಸಂದರ್ಭದಲ್ಲಿ, ದೇಶವಾಸಿಗಳಿಗೆ ಬೋಧನೆ ಮಾಡುವ ಮೊದಲು, ತಾವು ಮನೆಯಿಂದಲೇ ಆರಂಭಿಸಿ, ಮಾದರಿಯಾದವರು. ದೇಶದಲ್ಲಿನ ಆಹಾರ ಕೊರತೆಯ ಸುಧಾರಣೆಗೆ, ಒಂದು ವಾರ ಕಾಲ ಒಪ್ಪೊತ್ತಿನ ಉಪವಾಸಕ್ಕೆ ದೇಶವಾಸಿಗಳಲ್ಲಿ ವಿನಂತಿಸುವ ಮುನ್ನ ಅವರು ತಮ್ಮ ಕುಟುಂಬದಿಂದಲೇ ಅದನ್ನು ಆರಂಭಿಸಿದವರು. ಅಂದು ಅವರು ನೀಡಿದ್ದ ಈ ಕರೆಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೋಟೆಲ್, ಉಪಾಹಾರ ಗೃಹಗಳೂ ಪ್ರತೀ ಸೋಮವಾರ ಸಂಜೆ ಬಾಗಿಲು ಹಾಕುತ್ತಿದ್ದವು. ಇದನ್ನು ದೇಶದ ಕೆಲವೆಡೆ ‘ಶಾಸ್ತ್ರಿ ವ್ರತ’ ಎಂಬ ಹೆಸರಿನಲ್ಲಿ ಅತ್ಯಂತ ಶ್ರದ್ಧೆಯಿಂದ, ಬದ್ಧತೆಯಿಂದ, ದೇಶದ ಹಿತದೃಷ್ಟಿಯಿಂದ ಆಚರಿಸಲಾಗಿತ್ತು ಎಂಬುದು ಅರ್ಧ ಶತಮಾನದ ಹಿಂದಿನ ನಮ್ಮದೇ ಪ್ರಜೆಗಳ ಮನಸ್ಥಿತಿಯನ್ನೂ ಸಾರಿ ಹೇಳುವ ಅಂಶಗಳಲ್ಲೊಂದು. ಅಷ್ಟಕ್ಕೇ ಸುಮ್ಮನೆ ಕೂರದೆ, ಕೃಷಿ ಉತ್ಪಾದನೆ ಹೆಚ್ಚಿಸುವ ಬಗ್ಗೆ ರೈತರನ್ನು ಪ್ರಚೋದಿಸಿದರು. ಈ ಬೋಧನೆಯನ್ನು ಮಾಡುವ ಮೊದಲು ಅವರು ಅದನ್ನು ತಮ್ಮದೇ ಮನೆಯಲ್ಲಿ ಮಾಡಿ ತೋರಿಸಿದರು. ದೆಹಲಿಯ ಅಧಿಕೃತ ನಿವಾಸದ ಹುಲ್ಲು ಹಾಸಿನಲ್ಲೇ ಸಣ್ಣದಾಗಿ ಕೃಷಿ ಆರಂಭಿಸಿ, ಎಲ್ಲವೂ ನಮ್ಮ ಮನೆಯಿಂದಲೇ ಆರಂಭವಾಗಲಿ, ಇದು ಮುಂದಿನ ದೊಡ್ಡ ಹೆಜ್ಜೆಗೆ ಪ್ರೇರಣೆಯಾಗುತ್ತದೆ ಅಂತ ನೀಡಿದ ಸಂದೇಶ ಈಗಿನ ರಾಜಕಾರಣಿಗಳಿಗೂ ಒಂದು ಪಾಠ.
ಸ್ವಾತಂತ್ರ್ಯ ಹೋರಾಟದ ಸದ್ದು ಜೋರಾಗುತ್ತಿದ್ದ ಸಂದರ್ಭದಲ್ಲಿ ಶಾಸ್ತ್ರಿ ಆಗಿನ್ನೂ ಬಾಲಕ. ಹತ್ತನೇ ಇಯತ್ತೆಯಲ್ಲಿ ಓದುತ್ತಿದ್ದಾಗ ಗಾಂಧೀಜಿಯಿಂದ ಪ್ರೇರಣೆ ಪಡೆದು, 1921ರಲ್ಲಿ ಅಂತಿಮ ಪರೀಕ್ಷೆಯ ಮೊದಲೇ ಬ್ರಿಟಿಷ್ ಸರ್ಕಾರದ ಶಾಲೆಯಿಂದ ಹೊರಬಿದ್ದು, ಅಸಹಕಾರ ಚಳವಳಿಯ ಮೂಲಕ ಹೋರಾಟಕ್ಕೆ ಧುಮುಕಿದ್ದರು. ಪರಿಣಾಮ ಅವರ ಬಂಧನ. ಆದರೆ, ಆಗ ಅವರು ಅಪ್ರಾಪ್ತ ವಯಸ್ಕ ಎಂಬ ಕಾರಣಕ್ಕೆ ಬಿಡುಗಡೆ ಮಾಡಲಾಯಿತು. ಬಳಿಕ, ಸ್ವಾತಂತ್ರ್ಯ ಹೋರಾಟಗಾರರಾದ ಜೆ.ಬಿ.ಕೃಪಲಾನಿ ಮತ್ತಿತರರ ಬೆಂಬಲದ ಮೂಲಕ ಸ್ಥಾಪನೆಯಾದ ಕಾಶಿ ವಿದ್ಯಾಪೀಠದಲ್ಲಿ ಓದು ಮುಂದುವರಿಸಿ ‘ಶಾಸ್ತ್ರಿ’ ಪದವಿ ಪಡೆದರು. ನಂತರ ಲಾಲಾ ಲಜಪತ್ ರಾಯ್ ಸ್ಥಾಪಿಸಿದ ಲೋಕಸೇವಕ ಮಂಡಲದ ಸದಸ್ಯರಾಗಿ ಅವರು ಗಾಂಧೀಜಿ ಮಾರ್ಗದರ್ಶನದಲ್ಲಿ ಹರಿಜನರ ಏಳಿಗೆಗೆ ಶ್ರಮಿಸಿದ್ದು ಇತಿಹಾಸ. ಇಷ್ಟೆಲ್ಲ ಹೋರಾಟ, ಸಂಘಟನೆಯ ಹಿನ್ನೆಲೆಯೊಂದಿಗೆ ಅವರು ರಾಜಕೀಯ ಪ್ರವೇಶಿಸಿದ್ದರು ಮತ್ತು ಇವೆಲ್ಲವೂ ಅವರು ತೆಗೆದುಕೊಂಡ ನಿರ್ಧಾರಗಳಿಗೆ ಅಡಿಗಲ್ಲಾಗಿತ್ತು ಎಂಬುದನ್ನು ನಾವು ಗಮನಿಸಬೇಕು.
1964ರ ಮೇ 27ರಂದು ನೆಹರೂ ಗತಿಸಿದ ಸಂದರ್ಭದಲ್ಲಿ ದೇಶದ ಪ್ರಧಾನ ಮಂತ್ರಿಯಾಗಿ ಜೂ.9ರಂದು ಪ್ರಮಾಣ ವಚನ ಸ್ವೀಕರಿಸುವಂತೆ ಮಾಡುವಲ್ಲಿ ಮುಖ್ಯ ಪಾತ್ರ ವಹಿಸಿದ್ದವರು ಅಂದಿನ ಕಾಂಗ್ರೆಸ್ ಅಧ್ಯಕ್ಷ ಕೆ.ಕಾಮರಾಜ್. ಪ್ರಧಾನಿಯಾಗಿ ಮೊದಲ ಬಾರಿ ದೇಶವಾಸಿಗಳನ್ನು ಉದ್ದೇಶಿಸಿ ಅವರು ಆಡಿದ್ದ ಮಾತುಗಳು ಇಂದಿನ ಪರಿಸ್ಥಿತಿಯಲ್ಲಿ ಅನುಕರಣೀಯ.
“ಪ್ರತಿಯೊಂದು ದೇಶವೂ ಇತಿಹಾಸದ ಕವಲು ದಾರಿಗಳೆದುರು ನಿಲ್ಲುವಾಗ, ಮುಂದೆ ಯಾವ ಕಡೆ ಸಾಗಬೇಕೆಂಬುದನ್ನು ಆಯ್ಕೆ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗುವುದು ಸಹಜ. ಆದರೆ, ನಮಗೋ, ಎಡ-ಬಲ ನೋಡುವ ಪ್ರಶ್ನೆಯಾಗಲೀ, ಗೊಂದಲವಾಗಲೀ ಇಲ್ಲವೇ ಇಲ್ಲ. ನಮ್ಮದೇನಿದ್ದರೂ ದಾರಿ ನೇರ ಮತ್ತು ಖಚಿತ – ಸಮಾಜವಾದಿ ಪ್ರಜಾಪ್ರಭುತ್ವವನ್ನು ಕಟ್ಟುವುದು. ಇಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಮತ್ತು ಸಮೃದ್ಧಿಯಿರುತ್ತದೆ; ವಿಶ್ವ ಶಾಂತಿಗೆ ಶ್ರಮಿಸುವ ಮತ್ತು ನೆರೆಯ ರಾಷ್ಟ್ರಗಳೊಂದಿಗೆ ಸ್ನೇಹ ಕಾಯ್ದುಕೊಳ್ಳುವ ಗುರಿ ಇದೆ.” – ಈ ಮಾತುಗಳಲ್ಲಿ ಅವರ ದೂರದೃಷ್ಟಿಯಂತೂ ಖಡಾಖಂಡಿತವಾದಂತಿತ್ತು.
ಇಂಥ ಜನ ನಾಯಕನನ್ನು ಉಳಿಸಿಕೊಳ್ಳುವ ಭಾಗ್ಯವು ಭಾರತಕ್ಕಿರಲಿಲ್ಲ. ಕಾಲು ಕೆರೆಯುತ್ತಲೇ ಇರುವ ಪಾಕಿಸ್ತಾನ ಹಾಗೂ ಶಾಂತಿ ಸ್ಥಾಪನೆಗೆ ಶ್ರಮಿಸುತ್ತಿದ್ದ ಭಾರತದ ನಡುವಿನ ಬಿಕ್ಕಟ್ಟಿಗೆ ಸಂಧಾನ ಪ್ರಕ್ರಿಯೆಯು 1966ರ ಜನವರಿ 10ರಂದು ಉಜ್ಬೆಕಿಸ್ತಾನದ (ಅಂದಿನ ಸೋವಿಯತ್ ಒಕ್ಕೂಟದ ಭಾಗ) ತಾಷ್ಕೆಂಟಿನಲ್ಲಿ ನಡೆದಿತ್ತು. ಮರು ದಿನವೇ ಶಾಸ್ತ್ರಿಯವರು ಸಾವಿಗೀಡಾದರೆಂಬ ಆಘಾತಕಾರಿ ಸುದ್ದಿ ಭಾರತವನ್ನು ಸಿಡಿಲೆರಗಿದಂತೆ ಅಪ್ಪಳಿಸಿತು. ಸಾವಿನ ಕಾರಣ ಇಂದಿಗೂ ನಿಗೂಢವೇ ಆಗಿದೆ. ಈ ಕುರಿತ ಕಡತಗಳು ಕೂಡ ಸರ್ಕಾರದ ಪತ್ರಾಗಾರದಿಂದಲೇ ಕಾಣೆಯಾಗಿದೆ ಎಂಬುದು ಇಂದಿಗೂ ದೇಶವು ಅರಗಿಸಿಕೊಳ್ಳಲಾಗದ ಸತ್ಯ. ಆರ್‌ಟಿಐ ವ್ಯಾಪ್ತಿಯಲ್ಲೂ ಈ ಮಾಹಿತಿ ಸಿಕ್ಕಿಲ್ಲ. ತಮ್ಮ ಪತಿಗೆ ವಿಶಪ್ರಾಶನ ಮಾಡಲಾಗಿದೆ ಎಂಬ ಅವರ ಪತ್ನಿ ಲಲಿತಾ ಶಾಸ್ತ್ರಿಯವರ ನೋವಿನ ಆರೋಪವು, ಆರೋಪವಾಗಿಯೇ ಉಳಿಯಿತು. ಪೋಸ್ಟ್ ಮಾರ್ಟಂ ಮಾಡಲಾಗಿತ್ತೇ? ಶಾಸ್ತ್ರಿ ಹತ್ಯೆಯ ಆರೋಪದ ಕುರಿತು ತನಿಖೆಯಾಗಿತ್ತೇ? ಎಂಬ ಮಾಹಿತಿ ನಿಗೂಢವಾಗಿಯೇ ಇದೆ.
ಅದೇನೇ ಇರಲಿ, ಭಾರತದ ಕೃಷಿಕರ ಕನಸಿಗೆ ಏಣಿ ಹಾಕಿ, ಸದಾ ಸ್ಮರಿಸಿಕೊಳ್ಳುವಂಥ ಕಾರ್ಯ ಮಾಡಿದ ಲಾಲ್ ಬಹಾದೂರ್ ಶಾಸ್ತ್ರಿಯವರು ತಮ್ಮ ಜನ್ಮದಿನವನ್ನು ತಮ್ಮದೇ ಗುರು, ಗಾಂಧೀಜಿಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಅವರಿಗೂ ಭಾರತೀಯರ ನಮನ ಸಲ್ಲುತ್ತಿದೆ.
ಈ ಸಂದರ್ಭದಲ್ಲಿ ಶಾಸ್ತ್ರಿಯವರು ದೆಹಲಿಯ ರಾಮಲೀಲಾ ಮೈದಾನದಲ್ಲಿ ಮಾಡಿದ ಭಾಷಣವೊಂದರಲ್ಲಿ ಹೇಳಿದ ಮಾತು ಜಾತ್ಯತೀತ ಭಾರತಕ್ಕಿಂದು ಹೆಚ್ಚು ಪ್ರಸ್ತುತವಾಗುತ್ತಿದೆ. ಧರ್ಮವನ್ನು ರಾಜಕಾರಣದೊಂದಿಗೆ ಬೆಸೆಯುವುದಕ್ಕೆ ಅವರ ಸ್ಪಷ್ಟ ವಿರೋಧವಿತ್ತು. ಶಾಸ್ತ್ರಿಯವರು ಹಿಂದು ಆಗಿರುವುದರಿಂದ ಪಾಕಿಸ್ತಾನದೊಂದಿಗೆ ಅವರು ಯುದ್ಧಕ್ಕೆಳಸುತ್ತಾರೆ ಎಂಬ ಅಂದಿನ ಬಿಬಿಸಿ ವರದಿಯೊಂದಕ್ಕೆ ಅವರು ಪ್ರತಿಕ್ರಿಯಿಸಿದ್ದು ಹೀಗೆ:
“ನಾನು ಹಿಂದುವಾದರೆ, ಈ ಸಭೆಯ ಅಧ್ಯಕ್ಷತೆ ವಹಿಸಿದವರು ಮೀರ್ ಮುಷ್ತಾಕ್, ಒಬ್ಬ ಮುಸ್ಲಿಂ. ಈಗಷ್ಟೇ ಮಾತನಾಡಿದ ಫ್ರ್ಯಾಂಕ್ ಅಂಥೋನಿ ಒಬ್ಬ ಕ್ರಿಶ್ಚಿಯನ್. ಇಲ್ಲಿ ಸಿಖ್ಖರು, ಪಾರ್ಸಿಗಳೂ ಇದ್ದಾರೆ. ನಮ್ಮ ದೇಶದಲ್ಲಿ ಹಿಂದು, ಮುಸಲ್ಮಾನ, ಕ್ರೈಸ್ತರು, ಸಿಕ್ಖರು, ಪಾರ್ಸಿಗಳು ಮತ್ತಿತರ ಧರ್ಮಗಳವರಿದ್ದಾರೆ. ನಮ್ಮಲ್ಲಿ ಮಂದಿರಗಳಿವೆ, ಮಸೀದಿಗಳಿವೆ, ಗುರುದ್ವಾರ, ಚರ್ಚುಗಳೂ ಇವೆ. ಆದರೆ ನೆನಪಿಡಿ, ನಾವೆಂದೂ ಇವುಗಳನ್ನು ರಾಜಕೀಯಕ್ಕೆ ಬೆರೆಸುವುದಿಲ್ಲ. ಇದುವೇ ಭಾರತ ಮತ್ತು ಪಾಕಿಸ್ತಾನಕ್ಕಿರುವ ವ್ಯತ್ಯಾಸ. ಪಾಕಿಸ್ತಾನವು ತನ್ನನ್ನು ತಾನು ಇಸ್ಲಾಮಿಕ್ ರಾಷ್ಟ್ರ ಎಂದು ಘೋಷಿಸಿಕೊಂಡು, ಧರ್ಮವನ್ನೇ ರಾಜಕೀಯಕ್ಕೆ ಬಳಸುತ್ತಿದ್ದರೆ, ನಾವು ಭಾರತೀಯರಿಗೆ ಯಾವುದೇ ಧರ್ಮವನ್ನು ಅನುಸರಿಸುವ, ಯಾವುದೇ ರೀತಿಯಲ್ಲಿ ದೇವರನ್ನು ಪೂಜಿಸುವ ಸ್ವಾತಂತ್ರ್ಯವಿದೆ. ರಾಜಕೀಯದ ವಿಷಯಕ್ಕೆ ಬಂದರೆ, ನಾವು ಪ್ರತಿಯೊಬ್ಬರೂ ಕೂಡ ಮತ್ತೊಬ್ಬರಷ್ಟೇ ಸಮಾನವಾದ ಭಾರತೀಯರು”!
ಜಾತ್ಯತೀತ ಭಾರತದ ಶಕ್ತಿಯ ಬಗ್ಗೆ ಅವರಿಗಿದ್ದ ಅಚಲ ನಂಬಿಕೆಯದು. ಜೈ ಜವಾನ್, ಜೈ ಕಿಸಾನ್ – ಈ ಘೋಷಣೆ ಸದಾ ನಮಗೆ ಪ್ರೇರಣೆಯಾಗಲಿ!
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.