ಜಾಗತಿಕ ನಂ.1 ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ನನ್ನು ಭಯೋತ್ಪಾದನೆಯ ತವರೂರು ಎಂದು ನಾವೆಲ್ಲರೂ ಅದೆಷ್ಟೋ ವರ್ಷಗಳಿಂದ ಹೇಳುತ್ತಾ ಬಂದಿರುವ ಪಾಕಿಸ್ತಾನವೆಂಬ ಅಸ್ಥಿರ ನಾಡಿನ ಹೃದಯ ಭಾಗದಲ್ಲೇ ಅಮೆರಿಕ ಪಡೆಗಳು ಕೊಂದು ಹಾಕಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ನಾವೇನೂ ಭಯೋತ್ಪಾದಕರನ್ನು ಪೋಷಿಸುತ್ತಿಲ್ಲ ಎನ್ನುತ್ತಲೇ, ಲಾಡೆನ್ ಪಾಕಿಸ್ತಾನದಲ್ಲೇ ಇದ್ದಾನೆ ಎಂಬ ಕುರಿತು ಹಲವಾರು ಬೇಹುಗಾರಿಕಾ ವರದಿಗಳು ಬಹಿರಂಗವಾದಾಗಲೂ, “ಇಲ್ಲ, ಇಲ್ಲ, ನಮ್ಮಲ್ಲಿಲ್ಲ” ಎಂದು ಹೇಳುತ್ತಲೇ ಬಂದಿದ್ದ ಪಾಕಿಸ್ತಾನವು ಈಗಲೂ ಇದರಿಂದ ಪಾಠ ಕಲಿತಂತೆ ಕಂಡುಬರುತ್ತಿಲ್ಲ. ಎಲ್ಲ ಉಗ್ರಗಾಮಿ ಚಟುವಟಿಕೆಗಳಲ್ಲಿ ಪಾಕಿಸ್ತಾನದ ಬೇಹುಗಾರಿಕಾ ಏಜೆನ್ಸಿ ‘ಐಎಸ್ಐ’ ಮತ್ತು ಅದರೊಂದಿಗೇ ಥಳುಕು ಹಾಕಿಕೊಂಡಿರುವ ಪಾಕ್ ಸೇನೆಯ ಕೈವಾಡವಿದೆ ಎಂಬ ಅಮೆರಿಕ, ಭಾರತದ ಬೇಹುಗಾರಿಕಾ ವರದಿಗಳನ್ನು ಪ್ರಜಾಸತ್ತಾತ್ಮವಾಗಿ ಚುನಾಯಿತವಾದ ಸರಕಾರವು ಈಗಲೂ ಒಪ್ಪಿಕೊಳ್ಳಲು ಸಿದ್ಧವಿಲ್ಲ.
ಪಾಕ್ ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರು ಸಂಸತ್ತಿನಲ್ಲಿ ಸೋಮವಾರ ಮಾಡಿದ ಭಾಷಣವನ್ನೇ ಒಂದಿಷ್ಟು ಅವಲೋಕಿಸಿ ನೋಡಿ. ‘ಐಎಸ್ಐ ನಮ್ಮ ರಾಷ್ಟ್ರದ ಆಸ್ತಿ, ಪಾಕಿಸ್ತಾನ ಸೇನೆಯು ನಮ್ಮ ದೇಶದ ಹೆಮ್ಮೆ’ ಎಂಬಿತ್ಯಾದಿಯಾಗಿ ಇಂದ್ರ-ಚಂದ್ರ ಎಂದೆಲ್ಲಾ ಅವರು ಹೊಗಳುತ್ತಿದ್ದರೆ, ಪಾಕಿಸ್ತಾನದಲ್ಲಿನ ವ್ಯವಸ್ಥೆಯು ಇಂದು ಈ ಪರಿ ಕೆಟ್ಟು ಹೋಗಲು ಕಾರಣವೇನು ಮತ್ತು ನಿಜಕ್ಕೂ ಪಾಕಿಸ್ತಾನವನ್ನು ಯಾರು ಮುನ್ನಡೆಸುತ್ತಿದ್ದಾರೆ ಎಂಬುದಕ್ಕೆ ಉತ್ತರದ ಎಳೆಯೊಂದು ಸಿಕ್ಕಿಬಿಡುತ್ತದೆ. ಅಂದರೆ, ಪಾಕಿಸ್ತಾನೀಯರ ರಕ್ತದ ಕಣ ಕಣದಲ್ಲಿಯೂ, ಅವರು ಪ್ರಾಥಮಿಕ ಮಟ್ಟದಿಂದಲೇ ಪಡೆದ ಶಿಕ್ಷಣದ ಅನುಸಾರವಾಗಿ, ಕಾಶ್ಮೀರ ಕೇಂದ್ರಿತವಾದ ಭಾರತ-ವಿರೋಧೀ ಭಾವನೆಯು ಬಲವಾಗಿ ನೆಟ್ಟಿದೆ. ಅದನ್ನು ಬದಲಾಯಿಸಿಕೊಂಡು, ಯಥಾರ್ಥವನ್ನು ಅರಿತುಕೊಂಡು, ವಾಸ್ತವಕ್ಕೆ ಮರಳುವಂತಹಾ ಯೋಚನಾ ಶಕ್ತಿ ಇರುವವರು ಅಲ್ಲಿ ಯಾರೂ ಇಲ್ಲವೇ ಎಂಬ ಪ್ರಶ್ನೆ ಖಂಡಿತವಾಗಿಯೂ ಏಳುತ್ತದೆ. ಕೆಲವರಾದರೂ ಈ ರೀತಿ ವಾಸ್ತವ ಪರಿಸ್ಥಿತಿ ಬಗ್ಗೆ ಯೋಚಿಸಬಹುದು, ಆದರೆ ಅವರಿಗೆ ಐಎಸ್ಐ, ಪಾಕ್ ಸೇನೆಯ ಪ್ರಮುಖ ಹುದ್ದೆಗಳಲ್ಲಿರುವ ಧರ್ಮಾಂಧರೇ ಅಡ್ಡಿಯಾಗುತ್ತಿದ್ದಿರಬಹುದು ಎಂಬುದು ನಮ್ಮ ಊಹೆ.
ಇದೆಂಥಾ ಸಾರ್ವಭೌಮ ರಾಷ್ಟ್ರ…
ಅದಿರಲಿ, ಹಲವಾರು ವರ್ಷ ಮಿಲಿಟರಿ ಆಡಳಿತದಡಿ ನಲುಗುತ್ತಾ, ಮಧ್ಯೆ ಮಧ್ಯೆ ಪ್ರಜಾಸತ್ತಾತ್ಮಕ ಸರಕಾರಗಳನ್ನು ಕಂಡಿದ್ದ ಪಾಕಿಸ್ತಾನವು ಈಗಲೂ ತಾನು ಸಾರ್ವಭೌಮ ರಾಷ್ಟ್ರ ಎಂದು ಹೇಳಿಕೊಳ್ಳುತ್ತಿದೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರಕಾರದ ಕೈಯಲ್ಲಿ ಖಂಡಿತವಾಗಿಯೂ ಅಧಿಕಾರ ಇಲ್ಲ ಎಂಬುದು ಅಲ್ಲಿನ ಬೆಳವಣಿಗೆಗಳನ್ನು ಗಮನಿಸಿದರೆ ನಮಗೆ ವೇದ್ಯವಾಗುವ ಸಂಗತಿ. ಅಂಥಹಾ ಸಾರ್ವಭೌಮ ರಾಷ್ಟ್ರದ ಒಳಗೆ, ಅಮೆರಿಕದ ‘ದಾಳಿಕಾರ’ರು ಸದ್ದಿಲ್ಲದೆ ನುಸುಳಿ ವಿಶ್ವದ ನಂ.1 ಭಯೋತ್ಪಾದಕನನ್ನು ಮುಗಿಸಿಬಿಡುತ್ತಾರೆ ಎಂದಾದರೆ, ಅದರ ಸಾರ್ವಭೌಮತೆ ಎಲ್ಲಿಗೆ ಹೋಯಿತು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಅಷ್ಟು ಮಾತ್ರವಲ್ಲ, ಅಮೆರಿಕವು ಏಕಾಏಕಿ, ಹೇಳದೇ ಕೇಳದೇ (ಪಾಕ್ ಹೇಳುತ್ತಿರುವಂತೆ) ಬೇರೊಂದು ದೇಶದೊಳಕ್ಕೆ ನುಗ್ಗಿ, ಈ ರೀತಿ ಮಾಡಬಹುದೇ? ಅದು ಕೂಡ ಶಸ್ತ್ರಾಸ್ತ್ರಗಳು, ಹೆಲಿಕಾಪ್ಟರ್‌ಗಳು ಇತ್ಯಾದಿಗಳ ಜೊತೆಗೆ!
ಹಾಗಿರುವಾಗ, ತನ್ನ ನೆಲದೊಳಗೆ ಅಮೆರಿಕ ಪಡೆಗಳು ನುಗ್ಗಿದ್ದು ಕೂಡ ಗೊತ್ತಾಗದೇ ಇರುವಂತಹಾ ಪಾಕಿಸ್ತಾನ ಅದೆಂಥಾ ಸಾರ್ವಭೌಮ ರಾಷ್ಟ್ರವಾಗಲು ಸಾಧ್ಯ? ಅಲ್ ಖೈದಾ ಭಯೋತ್ಪಾದಕ ಸಂಘಟನೆಯನ್ನು ಸೃಷ್ಟಿ ಮಾಡಿದ್ದೇ ನೀವು ಅಂತ ಚೆಂಡನ್ನು ಅಮೆರಿಕದ ಅಂಗಣದಲ್ಲಿ ಹಾಕಿದ ಪಾಕ್ ಪ್ರಧಾನಿ ಗಿಲಾನಿ, ನಾವಿದನ್ನು ಬಲವಾಗಿ ವಿರೋಧಿಸುತ್ತೇವೆ ಎನ್ನುತ್ತಾ ಕೈತೊಳೆದುಕೊಂಡಿದ್ದಾರೆ. ಬಹುಶಃ ಅಮೆರಿಕವು ಪಾಕ್ ನೆಲದೊಳಗೇ ಸ್ವತಂತ್ರವಾಗಿ ಕಾರ್ಯಾಚರಣೆ ಮಾಡಿದ್ದು ಪಾಕ್ ಪ್ರಜೆಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿರುವುದರಿಂದ ಈ ಹೇಳಿಕೆ ಹೊರಬಿದ್ದಿದೆ ಎಂದಷ್ಟೇ ಅರ್ಥೈಸಿಕೊಳ್ಳಬಹುದು.
ಸೌದಿ ಅರೇಬಿಯಾ ಮೂಲದ ಜಾಗತಿಕ ಭಯೋತ್ಪಾದಕನೊಬ್ಬ, ತನ್ನ ನೆಲದಲ್ಲೇ ಐದು ವರ್ಷಗಳಿಂದ ಸುರಕ್ಷಿತವಾಗಿ ನೆಲೆಯೂರಿ, ವಿಶ್ವಾದ್ಯಂತದ ತನ್ನ ಅಲ್ ಖೈದಾ ಸಂಘಟನೆಯ ಭಯೋತ್ಪಾದನಾ ಚಟುವಟಿಕೆಗಳನ್ನು ನಿಯಂತ್ರಿಸುತ್ತಾನೆ. ಅದು ಪಾಕಿಸ್ತಾನದ ಅತ್ಯಂತ ‘ಹೆಮ್ಮೆ’ಯ ಸೇನಾಪಡೆಗಳಿಗೆ, ‘ದೇಶದ ಆಸ್ತಿ’ಯಾಗಿರುವ ‘ಕು’ಖ್ಯಾತ ಬೇಹುಗಾರಿಕಾ ದಳ ಐಎಸ್ಐಗೆ ಕೂಡ ತಿಳಿಯುದಿಲ್ಲವೆಂದಾದರೆ, “ಸರ್ವತಂತ್ರ ಸ್ವತಂತ್ರ ಸಾರ್ವಭೌಮ ರಾಷ್ಟ್ರ” ಎಂದು ಪಾಕಿಸ್ತಾನವು ಯಾವ ಅರ್ಥದಲ್ಲಿ ಹೇಳಿಕೊಳ್ಳುತ್ತದೆ? ಅಮೆರಿಕವು ಇದೇ ರೀತಿ, ಯಾವುದಾದರೂ ತನಗೆ ಬೇಕಾದ ಉಗ್ರಗಾಮಿಯನ್ನು ಹಿಡಿಯಲು ಭಾರತದೊಳಕ್ಕೆ ಬಂದು, ಸರಕಾರದ ಅರಿವಿಗೆ ಬಾರದೆಯೇ ಕಾರ್ಯಾಚರಣೆ ನಡೆಸಿದರೆ ನಾವು ಸುಮ್ಮನಿರುತ್ತೇವೆಯೇ? ವಿಶ್ವದ ದೊಡ್ಡಣ್ಣ ಎಂಬ ಪಟ್ಟವನ್ನು ಮರಳಿ ಪಡೆದುಕೊಳ್ಳುವ ಅಮೆರಿಕದ ಈ ಹುನ್ನಾರವೇ ಇದು? ಇಷ್ಟೆಲ್ಲಾ ಆದರೂ ಪಾಕಿಸ್ತಾನವೇಕೆ ತಣ್ಣಗಿನ ಪ್ರತಿಕ್ರಿಯೆ ನೀಡಿ ಕೈತೊಳೆದುಕೊಂಡಿದೆ? ಇವೆಲ್ಲವೂ ಉತ್ತರ ಗೊತ್ತಿದ್ದರೂ ಬಹಿರಂಗವಾಗದ ಪ್ರಶ್ನೆಗಳು.
ಅಮೆರಿಕ, ಪಾಕಿಸ್ತಾನ… ಯಾರು ನಂಬಿಕೆಗೆ ಅರ್ಹರು?
ಹತ್ತು ವರ್ಷಗಳ ಹಿಂದೆಯೇ ಅಂದರೆ 2001ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಹಾಗೂ ಅಂದಿನ ಪಾಕ್ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್ ನಡುವೆ, ‘ಲಾಡೆನ್ ಪಾಕಿಸ್ತಾನದಲ್ಲಿದ್ದರೆ, ಅವನನ್ನು ಪತ್ತೆ ಹಚ್ಚಿ ಹಿಡಿಯುತ್ತೇವೆ, ನೀವು ಪ್ರತಿಭಟನೆಯ ನಾಟಕವಾಡಿ’ ಎಂಬ ಒಪ್ಪಂದ ನಡೆದಿತ್ತು ಎಂಬ ವರದಿಯೂ ಈಗ ಹೊರಬಿದ್ದಿರುವುದನ್ನು ಇಲ್ಲಿ ಉಲ್ಲೇಖಿಸಬೇಕಾಗುತ್ತದೆ.
ಹಾಗಿದ್ದರೆ, ಪಾಕಿಸ್ತಾನದ ಸೇನಾ ಅಭಿವೃದ್ಧಿಗೆ ಕೋಟಿ ಕೋಟಿ ಡಾಲರ್ ಧನ ಸಹಾಯ ನೀಡುತ್ತಲೇ ಬಂದಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾರನ್ನು ನಂಬಬೇಕೇ? ಪಾಕಿಸ್ತಾನದ ಮಾಜಿ ಅಧ್ಯಕ್ಷ, ಮಾಜಿ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್ ಅವರ ಹೇಳಿಕೆಗಳನ್ನು ನಂಬಬೇಕೇ? ಅಥವಾ ಅಮೆರಿಕ ಆಡುತ್ತಿರುವ ಆಟವನ್ನು ನಂಬಬೇಕೇ? ಯಾರು ಕೂಡ ನಂಬಿಕೆಗೆ ಅರ್ಹರಲ್ಲ. ಆದರೆ ಭಾರತ ಸರಕಾರಕ್ಕೆ ಮಾತ್ರ ಪಾಕಿಸ್ತಾನದ ಜೊತೆಗೆ ಮಾತುಕತೆ ಮುಂದುವರಿಸುವುದರಲ್ಲಿ ಬಲವಾದ ನಂಬಿಕೆ! ಇದೆಂಥಾ ವಿಪರ್ಯಾಸ?
ಪಾಕ್ ನೆಲದಲ್ಲಿ ಈಗಲೂ ಆಶ್ರಯ ಪಡೆದುಕೊಂಡು ಐಷಾರಾಮಿ ಜೀವನ ನಡೆಸುತ್ತಿರುವ ದಾವೂದ್ ಇಬ್ರಾಹಿಂ, ಜಕೀ ಉರ್ ರಹಮಾನ್ ಲಖ್ವಿ ಛೋಟಾ ಶಕೀಲ್ ಮುಂತಾದ ಅದೆಷ್ಟೋ ಪಾತಕಿಗಳಿದ್ದಾರೆ. ಕಂದಹಾರ್ ವಿಮಾನ ಅಪಹರಣ ಮೂಲಕ ದೇಶದ ಜೈಲಿನಿಂದ ತಪ್ಪಿಸಿಕೊಂಡ ಧರ್ಮಾಂಧ ಹಂತಕರಿದ್ದಾರೆ. ಮುಂಬೈಯಲ್ಲಿ ಮಾರಣ ಹೋಮ ನಡೆಸುವಲ್ಲಿ ಸಂಚು ರೂಪಿಸಿದ ಕಿರಾತಕರ ಪಡೆಯೇ ಅಲ್ಲಿ ಸುರಕ್ಷಿತವಾಗಿದೆ. “ನಮ್ಮವರು ಯಾರೂ ತಪ್ಪು ಮಾಡಿಲ್ಲ, ಅಂಥವರು ನಮ್ಮಲ್ಲಿ ಯಾರೂ ಇಲ್ಲ” ಎಂದು ಹೇಳುತ್ತಲೇ ಬಂದಿರುವ ಪಾಕಿಸ್ತಾನವನ್ನೂ ಹಾಗಿದ್ದರೆ ನಾವು ಈಗಲೂ ನಂಬಬೇಕೇ?
ಒಬ್ಬ ಜಾಗತಿಕ ಭಯೋತ್ಪಾದಕನು ಪಾಕಿಸ್ತಾನದ ರಾಜಧಾನಿಯ ಪಕ್ಕದಲ್ಲೇ ಐದು ವರ್ಷಗಳಿಂದ ಗೂಡು ಕಟ್ಟಿಕೊಂಡಂತೆ ವಾಸಿಸುತ್ತಿದ್ದುದು, ಅದು ಕೂಡ ಪಾಕಿಸ್ತಾನದ ಮಿಲಿಟರಿ ಅಕಾಡೆಮಿಯ ಪಕ್ಕದಲ್ಲೇ ಇದ್ದುದು, ಸ್ವತಃ ಪಾಕಿಸ್ತಾನ ಸರಕಾರಕ್ಕೆ ತಿಳಿದಿಲ್ಲ ಎಂದರೆ ನಂಬುವುದಾದರೂ ಹೇಗೆ? ಮುಂಬೈ ದಾಳಿಯಾದಂದಿನಿಂದಲೂ ಹೇಳಿಕೊಳ್ಳುತ್ತಾ ಬಂದಿದ್ದ “ಈ ಭಯೋತ್ಪಾದಕರು ನಮ್ಮವರಲ್ಲ, ನಾನ್-ಸ್ಟೇಟ್ ಆಕ್ಟರ್ಸ್” ಅಂತ ಪಾಕಿಸ್ತಾನವು ಹೇಳಿ ಕೈತೊಳೆದುಕೊಳ್ಳುತ್ತಾ ಇದೆ. ಈಗಲೂ ಅದಕ್ಕೆ, ಸೌದಿ ಅರೇಬಿಯಾ ಮೂಲದ ಲಾಡೆನ್ ನಮ್ಮವನಲ್ಲ ಎಂದು ಹೇಳಿಕೊಳ್ಳಲು ಒಳ್ಳೆಯ ಅವಕಾಶವಿದೆ. ತಪ್ಪಿಸಿಕೊಳ್ಳಲು ಮಾರ್ಗವೂ ಇದೆ. ಅಮೆರಿಕವೂ ಕೂಡ ಕಣ್ಣು ಮುಚ್ಚಿ ನಂಬಲು ಸಿದ್ಧವಾಗಿದೆ. ಜಗತ್ತು ಕೂಡ ನಂಬುವಷ್ಟರ ಮಟ್ಟಕ್ಕೆ ತಲುಪಿದೆ.
ಅಮೆರಿಕ ಎಡಬಿಡಂಗಿತನ…
ಇನ್ನೂ ಒಂದು ಕೋನದಲ್ಲಿ ಚಿಂತಿಸಿ ನೋಡಿ. ಪಾಕ್ ನೆಲದಲ್ಲೇ ಹೋಗಿ ಲಾಡೆನ್ ಹತ್ಯೆ ಮಾಡಿದ ಬೆನ್ನಿಗೇ ಅಮೆರಿಕವು 26/11ರ ಮುಂಬೈ ದಾಳಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಭಾರತಕ್ಕೆ ಒಪ್ಪಿಸಿ, “ನೋಡಿ, ನಿಮ್ಮೂರಿನ ದಾಳಿಯಲ್ಲಿ ಪಾಕಿಸ್ತಾನದ ಐಎಸ್ಐ ನೇರ ಕೈವಾಡವಿದೆ, ಪಾಕ್ ಸೇನೆಯ ಕೈವಾಡವಿದೆ” ಎಂದು ಹೇಳಿ, “ಏನಾದರೂ ಕ್ರಮ ಕೈಗೊಳ್ಳುವುದಾದರೆ ಕೈಗೊಳ್ಳಿ” ಎಂಬರ್ಥದ ಚಿತಾವಣೆ ನೀಡಿದೆ. ಅಂದರೆ, ವಿಶ್ವ ಮಟ್ಟದಲ್ಲಿ ಬೆಳೆಯುತ್ತಿರುವ ಭಾರತವನ್ನು ಒಂದರ್ಥದಲ್ಲಿ ಪ್ರಚೋದಿಸುತ್ತಾ, ಭಾರತ-ಪಾಕ್ ಯುದ್ಧವಾಗಲೆಂದು ಆಶಿಸುವ ಅಮೆರಿಕವು, ಅಮೆರಿಕದ ಪಾರಮ್ಯಕ್ಕೆ ಸವಾಲಾಗಿರುವ ಭಾರತೀಯ ಉಪಖಂಡದಲ್ಲಿ ಎಂದಿಗೂ ಶಾಂತಿ ಇರಬಾರದು ಎಂಬ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿದೆಯೇ ಎಂಬ ಶಂಕೆ ಮೂಡುವುದಕ್ಕೂ ಆಸ್ಪದವಿದೆ. ಪಾಕಿಸ್ತಾನವೆಂದಿಗೂ ತನ್ನತನವನ್ನು, ಧರ್ಮಾಂಧತೆಯನ್ನು ತೊರೆದು, ವಾಸ್ತವ ಜಗತ್ತಿಗೆ ತೆರೆದುಕೊಳ್ಳದ ಹೊರತು ಉದ್ಧಾರವಾಗುವುದಿಲ್ಲ ಎಂಬುದರ ಅರಿವು ಅಮೆರಿಕೆಗೂ ಇದೆ. ಭಾರತವನ್ನು ಅಶಾಂತಿಯ ಬೀಡನ್ನಾಗಿ ಮಾಡಲು ಈ ಪಾಕಿಸ್ತಾನ ಸಾಕು ಎಂಬುದು ಅದರ ಲೆಕ್ಕಾಚಾರವೂ ಆಗಿರಬಹುದು.
ಇದಕ್ಕಾಗಿಯೇ ಅದು ಒಂದು ಕೈಯಲ್ಲಿ ಪಾಕಿಸ್ತಾನಕ್ಕೆ ಸಹಾಯ ಹಸ್ತ ಚಾಚಿ ನೆರವಿನ ಮಹಾಪೂರವನ್ನೇ ಹರಿಸುತ್ತಿದ್ದರೆ, ಇನ್ನೊಂದು ಬಾಯಿಯಲ್ಲಿ, ‘ಉಗ್ರರ ವಿರುದ್ಧ ಕ್ರಮ ಕೈಗೊಳ್ಳಿ… ಇಲ್ಲದಿದ್ದರೆ….’ ಎಂಬ ತೋರಿಕೆಯ ಬೆದರಿಕೆಯನ್ನು ಹಾಕುತ್ತಿದೆ. ಪಾಕಿಸ್ತಾನ ಇಂಥಾ ಬೆದರಿಕೆಗಳಿಗೆ ಖಂಡಿತಾ ಜಗ್ಗುವುದಿಲ್ಲ ಎಂಬುದು ಅದಕ್ಕೂ ಗೊತ್ತು. ಯಾಕೆಂದರೆ ಅಲ್ಲಿನ ಆಡಳಿತಗಾರರ ಮನಸ್ಸು ಅಷ್ಟರ ಮಟ್ಟಿಗೆ ಜಡ್ಡುಗಟ್ಟಿದೆ ಮತ್ತು ಸ್ವಂತ ಯೋಚನಾ ಶಕ್ತಿಯೂ ಇಲ್ಲ. ಎಲ್ಲವೂ ಐಎಸ್ಐ, ಪಾಕ್ ಸೇನೆ ಮುಂತಾದ ‘ಗಟ್ಟಿ ಮೆದುಳು’ಗಳಿಂದಲೇ ಐಡಿಯಾ ಹರಿದುಬರಬೇಕಾಗುತ್ತದೆ!
ಮತ್ತೊಂದು ವಾದವೂ ಇದೆ. ಬರಾಕ್ ಒಬಾಮ ಅವರು ಈಗಾಗಲೇ ಮುಂದಿನ ಅವಧಿಗೆ ಅಮೆರಿಕ ಅಧ್ಯಕ್ಷರಾಗಿ ಮುಂದುವರಿಯುವ ಇರಾದೆ ಹೊಂದಿದ್ದಾರೆ. ಮುಂದಿನ ವರ್ಷ ಅಲ್ಲಿ ಅಧ್ಯಕ್ಷೀಯ ಚುನಾವಣೆಗಳೂ ನಡೆಯಲಿವೆ. ಹೀಗಾಗಿ, “ಭಯೋತ್ಪಾದಕರ ವಿರುದ್ಧ ಸಮರ ಸಾರಿದ್ದು ಒಬಾಮ” ಎಂಬ ಹೆಗ್ಗಳಿಕೆಯೊಂದು ಚುನಾವಣೆಯಲ್ಲಿ ಪೂರಕವಾಗಬಹುದೆಂಬುದೂ ಅವರ ಲೆಕ್ಕಾಚಾರವಾಗಿರಬಹುದು. 9/11ರ ಅಮೆರಿಕ ವಿಶ್ವ ವ್ಯಾಪಾರ ಕೇಂದ್ರದ ಮೇಲೆ ಅಲ್ ಖೈದಾ ಉಗ್ರಗಾಮಿ ಸಂಘಟನೆ ನಡೆಸಿದ ದಾಳಿಯ ಸೇಡು ತೀರಿಸಿಕೊಂಡಿದ್ದೇವೆ ಎಂದು ಹೇಳಿಕೊಳ್ಳಲು ಅವರಿಗೊಂದು ವಸ್ತು ಸಿಕ್ಕಿದಂತಾಗಿದೆ.
ಶಾಂತಿ ಪ್ರಿಯ ಭಾರತ…
ಕಂದಹಾರ್ ವಿಮಾನ ಅಪಹರಣ, ಸಂಸತ್ ಮೇಲೆ ದಾಳಿ, ಮುಂಬೈಯಲ್ಲಿ 1992ರ ಕೋಮು ಹಿಂಸಾಚಾರ, ದೇಶದ ಹಲವೆಡೆ ಬಾಂಬ್ ಸ್ಫೋಟಗಳ ಸರಪಣಿ, ಕಾಶ್ಮೀರ ಹಿಂಸಾಚಾರ…. ಇವೆಲ್ಲವುಗಳಲ್ಲಿಯೂ ಪಾಕಿಸ್ತಾನ ಮೂಲದ ಭಯೋತ್ಪಾದಕರ ಕೈವಾಡವಿದೆ ಎಂದು ಹಲವಾರು ತನಿಖಾ ವರದಿಗಳು ನಮ್ಮ ಕೈಯಲ್ಲಿವೆ. ಲಷ್ಕರ್ ಉಗ್ರ ಹಫೀಜ್ ಸಯೀದ್, ಕಂದಹಾರ್ ಪ್ರಕರಣದಲ್ಲಿ ತಪ್ಪಿಸಿಕೊಂಡಿದ್ದ ಮಸೂದ್ ಅಜರ್, ಒಮರ್ ಶೇಖ್ ಮತ್ತು ಅಹ್ಮದ್ ಜರ್ಗಾರ್, ಮುಂಬೈ ಸ್ಫೋಟಗಳ ರೂವಾರಿ, ಇಂಟರ್‌ಪೋಲ್‌ನ ಮೋಸ್ಟ್ ವಾಂಟೆಡ್ ಟೆರರಿಸ್ಟ್ ದಾವೂದ್ ಇಬ್ರಾಹಿಂ, ಟೈಗರ್ ಮೆಮನ್ ಮುಂತಾದವರ ಪಟ್ಟಿಯನ್ನೇ ಪಾಕಿಸ್ತಾನಕ್ಕೆ ನೀಡಲಾಗಿದೆ. ಅದೆಲ್ಲಾ ಒತ್ತಟ್ಟಿಗಿಟ್ಟರೂ, ಮುಂಬೈ ಭಯೋತ್ಪಾದನಾ ದಾಳಿಯಾದಂದಿನಿಂದ ಪಾಕಿಸ್ತಾನದ ಮೇಲೆ ವಿಶ್ವ ಮಟ್ಟದಲ್ಲಿ ಕ್ರಮ ಕೈಗೊಳ್ಳುವಂತೆ ಮಾಡಿಸುವಲ್ಲಿ ಭಾರತದ ಬಳಿ, ಅಮೆರಿಕದ ಸಿಐಎ, ಬ್ರಿಟನ್ ತನಿಖಾ ಏಜೆನ್ಸಿಗಳು, ಭಾರತೀಯ ತನಿಖಾ ಸಂಸ್ಥೆಗಳ ವರದಿಗಳ ಸಹಿತ ಅದೆಷ್ಟು ಅವಕಾಶಗಳಿದ್ದವು! ಈಗಲೂ ಅದೆಷ್ಟೋ ಅವಕಾಶಗಳಿವೆ, ಆದರೆ ನಮ್ಮ ಸರಕಾರ, ನಮ್ಮ ಗೃಹ ಮಂತ್ರಿ, ನಮ್ಮ ವಿದೇಶಾಂಗ ಮಂತ್ರಿ, ನಮ್ಮ ಪ್ರಧಾನಮಂತ್ರಿಗಳು ಮಾತ್ರ ಯಾವ ದಿಸೆಯಲ್ಲಿ ಮುಂದುವರಿಯಬೇಕಿತ್ತು, ‘ಮಾತುಕತೆಯೊಂದೇ ಪರಿಹಾರ’ ಎನ್ನುತ್ತಾ ಏನೇನು ಮಾತನಾಡುತ್ತಿದ್ದಾರೆ ಎಂಬುದು ಓದುಗರಿಗೇ ಗೊತ್ತು!
[ವೆಬ್‌ದುನಿಯಾಕ್ಕಾಗಿ]
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು