Categories: Yakshagana

ರಂಗಸ್ಥಳದಿಂದ ನಿರ್ಗಮಿಸಿದ ಯಕ್ಷಗಾನದ ‘ಮಹಾಬಲ’

ಕರ್ನಾಟಕದ ಕರಾವಳಿಯ ಗಂಡುಕಲೆಯೆನಿಸಿದ ಯಕ್ಷಗಾನದ ಅಗ್ರಗಣ್ಯ ಸರ್ವೋತ್ಕೃಷ್ಟ ಕಲಾವಿದರಲ್ಲೊಬ್ಬರಾದ ಕೆರೆಮನೆ ಮಹಾಬಲ ಹೆಗಡೆ ಅವರ ನಿಧನದೊಂದಿಗೆ ಬಡಗುತಿಟ್ಟಿನ ಪರಂಪರೆಯ ಕೊಂಡಿಯೊಂದು ಕಳಚಿಬಿದ್ದಂತಾಗಿದೆ.

ಯಕ್ಷಗಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಕಲಾವಿದ ಅಳಿದರೂ ಕಲೆಗೆ ಅಳಿವಿಲ್ಲ ಎಂಬೊಂದು ಸತ್ಯವಾಕ್ಯದ ಹಿಂದೆ ಧಾವಿಸಿದರೆ ಧುತ್ತನೇ ಎದುರಾಗುವ ಹೆಸರು ಕೆರೆಮನೆ ಎಂಬ ಅಗ್ರಗಣ್ಯ ಯಕ್ಷಗಾನ ಕುಟುಂಬ. ಅಂಥ ಪರಂಪರೆಯ ಅನರ್ಘ್ಯ ಕೊಂಡಿಯಾಗಿದ್ದ, ಯಕ್ಷಗಾನ ಮಾತ್ರವಲ್ಲದೆ, ಸಂಗೀತ, ಭಜನೆ, ನಾಟಕ, ಭಜನೆ… ಹೀಗೆ ಜೀವನವನ್ನು ಬೆಳಗಬಲ್ಲ ಕಲೆಗಳ ಹೂರಣದಲ್ಲಿ ಮಿಂದೆದ್ದು ಅವುಗಳಲ್ಲಿಯೂ ಮಹಾಬಲರೆನ್ನಿಸಿಕೊಂಡ ಕೆರೆಮನೆ ಮಹಾಬಲ ಹೆಗಡೆ ಇಂದು ನಮ್ಮನ್ನಗಲಿದ್ದಾರೆ.

ಸಿನಿಮಾ, ಟಿವಿ ಮುಂತಾದ ಆಧುನಿಕ ದೃಶ್ಯಮಾಧ್ಯಮಗಳಂತೆ ಉತ್ತೇಜಕ ಪರಿಕರಗಳನ್ನು ಬಳಸುವ ಸ್ವಾತಂತ್ರ್ಯವೂ, ಔಚಿತ್ಯವೂ ಇಲ್ಲದಂತಹ ಯಕ್ಷಗಾನ ರಂಗದಲ್ಲಿ ಪ್ರೇಕ್ಷಕವರ್ಗದ ಚಿತ್ತೋಭಿವ್ಯಕ್ತಿಯಲ್ಲಿ ಶಾಶ್ವತ ಸ್ಥಾನ ಪಡೆಯಬೇಕಿದ್ದರೆ, ಕಲಾವಿದನಾದವನೊಬ್ಬ ತನ್ನೆಲ್ಲ ಸಾಮರ್ಥ್ಯವನ್ನು, ಕೌಶಲ್ಯವನ್ನು ಒರೆಗೆ ಹಚ್ಚಬೇಕಾಗುತ್ತದೆ. ಕೆರೆಮನೆ ಮಹಾಬಲರು ರಂಗದಲ್ಲಿ ಸಾಕ್ಷಾತ್ಕರಿಸುತ್ತಿದ್ದ ಪೌರಾಣಿಕ ಪಾತ್ರಗಳಾದ ಅಶ್ವತ್ಥಾಮ, ಭೀಷ್ಮ, ಬಲರಾಮ, ದ್ರೋಣ, ದಶರಥ, ರಾವಣ, ಕಂಸ, ಕೌರವ, ಅರ್ಜುನ, ಸುಧನ್ವಗಳ ಪಾತ್ರ ಪೋಷಣೆಯ ಸವಿಯುಂಡವರಂತೂ, ಮಹಾಬಲರಿಗೆ ಮಹಾಬಲರೇ ಸಾಕ್ಷಿ ಎಂದುಕೊಳ್ಳಬಹುದು. ಅಂಥ ಛಾಪು, ಛಾತಿ ಮೂಡಿಸಿದ್ದರು ಕೆರೆಮನೆ ಮಹಾಬಲ ಹೆಗಡೆ.

ಪಾತ್ರ ಯಾವುದೇ ಇರಲಿ, ಆ ಪಾತ್ರದ ವ್ಯಕ್ತಿತ್ವವನ್ನು ಅಲುಗಾಡಿಸದೆ, ಸಮಕಾಲೀನ ಸಂದರ್ಭಕ್ಕೆ ಅದನ್ನು ಬೆಸೆಯುತ್ತಾ, ಪ್ರೇಕ್ಷಕವರ್ಗದಲ್ಲಿ ಜಾಗೃತಿ ಮೂಡಿಸಿ ಚಿಂತನೆಗೆ ಹಚ್ಚುವಂತೆ ಮಾಡುತ್ತಿದ್ದ ವಾಕ್ಪಟುತ್ವ, ಭಾವಾಭಿನಯ ಮತ್ತು ನೃತ್ಯಾಭಿನಯ, ಅದಕ್ಕೆ ತಕ್ಕುದಾದ ಕಂಠದ ಹೊಂದಾಣಿಕೆ. ಅದಕ್ಕೂ ಹೆಚ್ಚಾಗಿ ಪಾತ್ರವೊಂದರ ಪೂರ್ವಾಧ್ಯಯನದಲ್ಲಿ ಅವರಿಗಿದ್ದ ಆಸಕ್ತಿ, ಪಾತ್ರವೊಂದನ್ನು ಕಲಾಭಿಮಾನಿಗಳಿಗೆ ಹೇಗೆ ಉಣಬಡಿಸಬಹುದೆಂಬ ಕುರಿತಾದ ಅವರ ಚಿರಂತನ ಚಿಂತನೆ… ಇವೆಲ್ಲವೂ ಅವರೊಳಗಿನ ಕಲಾವಿದನನ್ನು ಒರೆಗೆ ಹಚ್ಚಿ, ರಂಗದ ಉತ್ತುಂಗಕ್ಕೇರಿಸಿತ್ತು.

ಕಲಾವಿದ ಎಂದರೆ ಕಲೆಯ ಕುಲುಮೆಯಲ್ಲಿ ಬೆಂದು ಬರಬಲ್ಲ ಹೊನ್ನಿನ ಆಭರಣವಿದ್ದಂತೆ. ಲಯಬದ್ಧ ಕುಣಿತ, ಪಾತ್ರಕ್ಕೆ ತಕ್ಕುದಾದ ಕಂಠ ಶ್ರುತಿ, ಪಾತ್ರ ಚಿತ್ರಣಕ್ಕೆ ಸೂಕ್ತವಾದ ನಡೆ-ನುಡಿ, ಒಟ್ಟಿನಲ್ಲಿ ಕಲಾ ಪ್ರೇಕ್ಷಕರನ್ನು ಯಕ್ಷಲೋಕಕ್ಕೇ ಕರೆದೊಯ್ಯಬಲ್ಲ, ಅಥವಾ ಆ ರೀತಿಯಲ್ಲಿ ಸಮ್ಮೋಹಿನಿಗೆ ಒಳಪಡಿಸಬಲ್ಲಂತಹಾ ಪಾತ್ರಾಭಿವ್ಯಕ್ತಿಯ ಸಾಮರ್ಥ್ಯ ಮೂಡುವುದು ಕಲಿತು ಬೆಳೆಯಬೇಕೆಂಬ ತುಡಿತದಿಂದ ಮತ್ತು ಅನುಭವಗಳ ಮೂಸೆಯಿಂದ. ಹೀಗಾಗಿಯೇ ಕೆರೆಮನೆಯಂತಹಾ ಕಲಾತಪಸ್ವಿಗೆ ಈ ಸಾಮರ್ಥ್ಯ ಸಿದ್ಧಿಸಿತ್ತು. ಅದಕ್ಕೆ ಪೂರಕವಾಗಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅಧ್ಯಯನ ನಡೆಸಿದ್ದ ಅವರು, ಭಾಗವತರಾಗಿ, ಮದ್ದಳೆವಾದಕರಾಗಿ, ಪುರುಷ ವೇಷಗಳನ್ನಷ್ಟೇ ಅಲ್ಲದೇ ಸ್ತ್ರೀ ಹಾಗೂ ಹಾಸ್ಯವೇಷಗಳಲ್ಲೂ ತಮ್ಮ ಕಲಾಭಿಜ್ಞತೆ ಮೆರೆದವರು. ಒಟ್ಟಿನಲ್ಲಿ ಯಕ್ಷಗಾನ ರಂಗದ ಸವ್ಯಸಾಚಿ.

ಸತ್ವಯುತವಾದ ಪಾತ್ರಪೋಷಣೆಯೊಂದಿಗೆ ನಾಟ್ಯದಲ್ಲಿ ಹಾಗೂ ಅರ್ಥಗಾರಿಕೆಯಲ್ಲಿನ ಸಮನ್ವಯತೆಯೇ ಬಹುಶಃ ಮಹಾಬಲರ ಪಾತ್ರಗಳಿಗೆ ವಿಶೇಷವಾಗಿ ಜೀವ ತುಂಬಿದ್ದು. ಇದಕ್ಕೆ ಪೂರಕವಾಗುವುದು ಬೇರೇನಲ್ಲ, ಪೂರ್ವಾಧ್ಯಯನ ಮತ್ತು ಒಲಿಯದ್ದನ್ನು ಕಲಿಯಬೇಕೆಂಬ ತುಡಿತ, ಹಠ. ಕಲೆಯೆಂದರೆ ಒಣ ಸರಕಲ್ಲ, ಕಬ್ಬಿನ ಜಲ್ಲೆಯಿಂದಲೂ ರಸ ಹಿಂಡಬಹುದಾದ ಪರಿಶ್ರಮದಿಂದ ಕಲೆ ಬೆಳಗುತ್ತದೆ ಮತ್ತು ಅಲ್ಲೊಬ್ಬ ಕಲಾವಿದ ರೂಪುಗೊಳ್ಳುತ್ತಾನೆ ಎಂಬುದನ್ನು ಸಮರ್ಥವಾಗಿ ಅರಿತುಕೊಂು ತೋರಿಸಿಕೊಟ್ಟವರು ಮಹಾಬಲರು.

ಅವರು ಓದಿದ್ದು ನಾಲ್ಕನೇ ತರಗತಿವರೆಗೆ ಮಾತ್ರ. ಆದರೆ ಅವರಿಗಿದ್ದ ಪ್ರಪಂಚ ಜ್ಞಾನ, ಪೌರಾಣಿಕ ಜ್ಞಾನ ಅಗಾಧ. ಎಲ್ಲವನ್ನೂ ಓದಿಯೇ ಕರಗತ ಮಾಡಿಕೊಂಡವರು ಎಂದರೆ, ಯಕ್ಷಗಾನ ಕಲಾವಿದರು ಹೇಗಿರುತ್ತಾರೆ, ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿ ನಿಲ್ಲುತ್ತಾರವರು. ಯಕ್ಷಗಾನದಲ್ಲಿ ವೇಷ ಮಾಡುವುದೆಂದರೆ, ಒಂದಷ್ಟು ಗಟ್ಟಿ ಮಾತಿನಿಂದ, ಚರ್ವಿತ ಚರ್ವಣ ಸೇರಿಸಿ ಮಾತು ಹೆಣೆದು, ಶಬ್ದಾಲಂಕಾರ ಬಳಸಿ ಪ್ರೇಕ್ಷಕರನ್ನು ಮೋಡಿ ಮಾಡುವುದು ಎಂದು ತಿಳಿದವರೇ ಹೆಚ್ಚು. ಆದರೆ ಕೆರೆಮನೆಯವರ ಪಾತ್ರಾಭಿವ್ಯಕ್ತಿಗಳನ್ನೇ ಗಮನಿಸಿದಲ್ಲಿ, ಅವರು ಕಥೆಯ ಭಾವದ ಹಿಂದೆ ಹೋಗಿರುವುದು ವೇದ್ಯವಾಗುತ್ತದೆ. ಈ ಭಾವ ಸಿದ್ಧಿಸಬೇಕಿದ್ದರೆ, ಅದಕ್ಕೆ ತಕ್ಕುದಾದ ಅಧ್ಯಯನವೂ ಅಗತ್ಯ.

ಹೆಗಡೆಯವರಿಗೆ ಈ ಕಲೆಯ ಮೇಲಿನ ಹಿಡಿತ ನೇರವಾಗೇನೂ ಸಿದ್ಧಿಸಿದ್ದಲ್ಲ. ಈ ಕಲಾವಿದನ ರಂಗ ಪಯಣದ ಅನುಭವಜನ್ಯ ಪ್ರಯೋಗಗಳೇ ಎಲ್ಲದಕ್ಕೂ ಮೂಲ ಹೇತು. ಚಿತ್ರಾಪುರದ ಶ್ರೀಪಾದರಾಯರಿಂದ ಪ್ರಾರಂಭಿಕ ಸಂಗೀತಾಭ್ಯಾಸ, ನಂತರ ಧಾರಾವಾಡದ ನಾರಾಯಣ ಮುಜುಂದಾರರಿಂದ ಹೆಚ್ಚಿನ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಶಿಕ್ಷಣ ಪಡೆದರು. ಯಕ್ಷಗಾನದಲ್ಲಿ ಸಂಗೀತವನ್ನು ಪರಂಪರೆಗೆ ಭಂಗ ಬಾರದಂತೆ ಅಳವಡಿಸುವುದರ ಕುರಿತು ಸಾಕಷ್ಟು ಚಿಂತನೆ ಮಾಡಿರುವ ಅವರು, ಅತ್ಯುತ್ತಮ ವಿಮರ್ಶಕರೂ ಹೌದು. ತೂಕ ತಪ್ಪದ ಗತ್ತಿನ ಮಾತು, ಅದ್ಭುತ ರಸ ಸೃಷ್ಟಿಯ ರಂಗಾಭಿನಯ, ಪಾತ್ರೋಚಿತ ಮುಖವರ್ಣಿಕೆ, ಆಭರಣ ಮುಂತಾದವುಗಳ ಧಾರಣೆ ಬಗ್ಗೆ ಸೂಕ್ಷ್ಮಪ್ರಜ್ಞೆ, ರಂಗ ಪ್ರವೇಶ, ನಿಲುವು… ಈ ರೀತಿ ರಂಗಾಭಿವ್ಯಕ್ತಿಯ ಸಕಲ ಕ್ಷೇತ್ರಗಳಲ್ಲೂ ಅವರಿಗೆ ಅವರೇ ಸಾಟಿ.

ಕಲಾ ಕುಟುಂಬ: ಕೆರೆಮನೆ ಎಂದಾಕ್ಷಣ ಮನಸ್ಸಿಗೆ ಹೊಳೆಯುವುದು ಯಕ್ಷಗಾನ. ತೆಂಕು ತಿಟ್ಟು ಮಾತ್ರವೇ ಯಕ್ಷಗಾನ ಎಂದುಕೊಂಡಿದ್ದ ದಕ್ಷಿಣ ಕನ್ನಡಿಗರಿಗೆ ಬಡಗು ತಿಟ್ಟಿನ ಕಲಾವೈಭವವನ್ನು ಉಣಬಡಿಸಿದ್ದು ಈಗ ವಜ್ರಮಹೋತ್ಸವ (75ನೇ ವರ್ಷ) ಆಚರಿಸುತ್ತಿರುವ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ. ಇದನ್ನು ಸ್ಥಾಪಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಣವಂತೆ ಗ್ರಾಮದ ಕೆರೆಮನೆ ಕುಟುಂಬವೇ. ಕೆರೆಮನೆ ಶಿವರಾಮ ಹೆಗಡೆ ಸ್ಥಾಪಿಸಿದ್ದ ಈ ಮಂಡಳಿಯನ್ನು ಅವರ ಪುತ್ರ ಶಂಭು ಹೆಗಡೆ ಯಶಸ್ವಿಯಾಗಿ ನಿಭಾಯಿಸಿ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದ್ದರವರು (ಈಗ ಶಂಭು ಹೆಗಡೆ ಮಗ ಶಿವಾನಂದ ಹೆಗಡೆ ಅದನ್ನು ಮುಂದುವರಿಸುತ್ತಿದ್ದಾರೆ). ಅಂತಹಾ ತಂಡದಲ್ಲಿ ಮೆರೆದವರು ಮಹಾಬಲ.

1927ರಲ್ಲಿ ಜನಿಸಿದ ಇವರನ್ನು ಚಿಕ್ಕಪ್ಪ ಕೆರೆಮನೆ ಶಿವರಾಮ ಹೆಗಡೆಯವರೇ ಯಕ್ಷರಂಗಕ್ಕೆ ಎಳೆದು ತಂದವರು. ಇಡಗುಂಜಿ, ಸಾಲಿಗ್ರಾಮ, ಅಮೃತೇಶ್ವರಿ, ಕಮಲಶಿಲೆ, ಬಚ್ಚಗಾರು ಮುಂತಾದ ಮೇಳಗಳಲ್ಲಿ ತಿರುಗಾಟ ನಡೆಸಿದ್ದ ಅವರು, ನಾಟಕ ಕ್ಷೇತ್ರದಲ್ಲಿಯೂ ತಮ್ಮ ಸ್ತ್ರೀಪಾತ್ರಕ್ಕಾಗಿ ಪ್ರಸಿದ್ಧಿ ಗಳಿಸಿದ್ದರು.

ಕೇಂದ್ರ ಸಂಗೀತ ನಾಟಕ ಅಕಾಡೆಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಗಳು ಅವರ ಕಲಾಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದ್ದರೆ, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ.

ಯಕ್ಷ ರಾತ್ರಿಗಳ ಪರಮೋತ್ಕೃಷ್ಟ ವೈಭವದ ದಿನಗಳು ನೆನಪಾದರೆ ಕಣ್ಣೆದುರಲ್ಲಿ ಮಹಾಬಲ ಹೆಗಡೆಯವರ ಅಮೂರ್ತ ರೂಪ ಬಂದು ನಿಲ್ಲುತ್ತದೆ. ವರ್ತಮಾನದಿಂದ ಪೌರಾಣಿಕ ಲೋಕಕ್ಕೆ ಕರೆದೊಯ್ಯುವ, ಯಕ್ಷಲೋಕದಲ್ಲಿ ನಿಂತು ವರ್ತಮಾನ ಸ್ಥಿತಿಯ ಮೇಲೆ ಬೆಳಕು ಚೆಲ್ಲುವ ಅವರ ವಾಕ್ ಸಾಮರ್ಥ್ಯ, ಕಲಾಭಿಜ್ಞತೆ, ಚಿಕಿತ್ಸಕ ದೃಷ್ಟಿ ಎಲ್ಲವೂ ಸ್ಮರಣಾರ್ಹ.

ಇತ್ತೀಚೆಗಷ್ಟೇ ಕೆರೆಮನೆ ಕುಟುಂಬದ ಮತ್ತೊಂದು ಕಿರೀಟ ಕೆರೆಮನೆ ಶಂಭು ಹೆಗಡೆ ಬದುಕಿನ ವೇಷ ಕಳಚಿ, ಯಕ್ಷಗಾನ ಕ್ಷೇತ್ರಕ್ಕೆ ಅಗಾಧ ನಷ್ಟ ತಂದೊಡ್ಡಿದ್ದರು. ಇದೀಗ ಕೆರೆಮನೆಯ ಮತ್ತೊಂದು ಹಿರಿಯ ಕಿರೀಟ ಕಳಚಿಬಿದ್ದಿದೆ. ಯಕ್ಷಗಾನದ ವೈಭವಪೂರ್ಣ ಅಧ್ಯಾಯವೊಂದು ಕೊನೆಗೊಂಡಿದೆ. ಇಂತಹ ಮಹಾನ್ ಕಲಾವಿದನ ಬದುಕಿನ ಮತ್ತು ಕಲೆಯ ಆದರ್ಶಗಳು ಹೊಸ ಕಲಾವಿದರಿಗೆ ಸ್ಫೂರ್ತಿಯಾಗಲಿ, ಯಕ್ಷಗಾನದ ಸವ್ಯಸಾಚಿಯಾಗಿ ಮೆರೆದ ಮಹಾಬಲರ ಹೆಸರು ಚಿರಸ್ಥಾಯಿಯಾಗಲಿ.

ಯಕ್ಷಗಾನಂ ಗೆಲ್ಗೆ ||
(ವೆಬ್‌ದುನಿಯಾದಲ್ಲಿ ಪ್ರಕಟಿತ)

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

3 weeks ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

3 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

3 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

4 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

5 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

10 months ago